ವೇದಿಕೆಯ ಮೇಲೆ ನರ್ತಿಸುತ್ತಿದ್ದ ಹದಿನಾಲ್ಕರ ಪುಟ್ಟಬಾಲೆ ಸಂಸ್ಕೃತಿ ಕೇಶವನ್ , ತನ್ನ ವಯಸ್ಸಿಗೆ ಮೀರಿದ ಭಾವನೆಗಳನ್ನು ಸಮರ್ಥವಾಗಿ ಸಾಕ್ಷಾತ್ಕರಿಸುತ್ತಿದ್ದುದು ನಿಜಕ್ಕೂ ಮುದತಂದಿತ್ತು. ಸುದೀರ್ಘ ನೃತ್ಯ ಬಂಧಗಳನ್ನು, ಕಠಿಣವಾದ ಜತಿಗಳಿಂದೊಡಗೂಡಿದ ಕೃತಿಗಳನ್ನು ಆರಿಸಿ ಅವಳಿಗೆ ಸೂಕ್ತ ತರಬೇತಿ ನೀಡಿ `ರಂಗಾಭಿವಂದನೆ’ಯನ್ನು ಯಶಸ್ವಿಗೊಳಿಸಿದ ಕೀರ್ತಿ ಅವಳ ನಾಟ್ಯಗುರುಗಳಾದ ಯುವಕ ಗುರುರಾಜ್ ಎನ್. ವಸಿಷ್ಠ ಅವರಿಗೆ ಸಲ್ಲಬೇಕು. ವಿದ್ವಾನ್ ಗುರುರಾಜ್ ಅವರಿಗೆ ಇದು ಪ್ರಪ್ರಥಮ ರಂಗಪ್ರವೇಶದ ನಿರ್ವಹಣೆ. ನೂತನಾನುಭವ. ಅದೂ ರಸಗಳ ಅನುಭವ, ಪರಿಕಲ್ಪನೆ ಹೊಂದಿರದ ಬಾಲೆಗೆ ಭಾರವಾಗಬಹುದೆನ್ನುವ ಕ್ಲಿಷ್ಟಕರ ಕೃತಿಗಳನ್ನು ಅರ್ಥಮಾಡಿಸಿ ಫಲಪ್ರದವಾಗಿ ಸಾಕಾರಗೊಳಿಸಿದ ಗುರುರಾಜ್ `ನಟುವಾಂಗ’ ದಲ್ಲಿ ಪಕ್ವತೆ ಪ್ರದರ್ಶಿಸಿದ್ದು ನೃತ್ಯ ಪ್ರಸ್ತುತಿಗೆ ಹೆಚ್ಚಿನ ಕಳೆಗಟ್ಟಿತು.
ಸರಸ್ವತಿ ರಾಗದ ಸಾಂಪ್ರದಾಯಕ `ಪುಷ್ಪಾಂಜಲಿ’ ಯಲ್ಲಿ ಸಂಸ್ಕೃತಿ, ನಾಟ್ಯಾಧಿಪತಿ ನಟರಾಜನಿಗೆ, ದೇವಾನುದೇವತೆಗಳಿಗೆ, ಗುರು-ಹಿರಿಯರು ಸಭಿಕರಿಗೆ ವಂದನೆ ಸಲ್ಲಿಸುವ ನೃತ್ತಾಭಿವ್ಯಕ್ತಿಯಲ್ಲಿ ಹಸನ್ಮುಖದಿಂದ ಆತ್ಮವಿಶ್ವಾಸ ವ್ಯಕ್ತಪಡಿಸಿದಳು. ಅನಂತರ ಶ್ರೀ ರಾಮಚಂದ್ರನನ್ನು ಕುರಿತು ಸ್ತುತಿಸಿ, ಚತುರಶ್ರ ಜಾತಿಯಲ್ಲಿ ಸಂಯೋಜನೆಗೊಂಡ ಆರಂಭಿಕ `ಅಲ್ಲರಿಪು’ ಪ್ರಸ್ತುತಿಯಲ್ಲಿ ಕಲಾವಿದೆ, ಚುರುಕಾದ ಅಡವುಗಳು, ಖಚಿತ ಹಸ್ತಚಲನೆ , ಮಂಡಿ ಅಡವು , ರಂಗಾಕ್ರಮಣದಲ್ಲಿ ಪಾದರಸದ ನಡೆಯಿಂದ ಆಕರ್ಷಿಸಿದಳು.
ಶ್ರೀ ಕೃಷ್ಣನ ಗುಣಗಾನ ಮಾಡುವ ರಾಗಮಾಲಿಕೆಯ `ಶಬ್ದಂ’ ನಲ್ಲಿ, ನೃತ್ತಗಳ ಸರಮಾಲೆಯೊಂದಿಗೆ ಅಭಿನಯವೂ ಸಮೀಕರಣಗೊಂಡು ಸಂಸ್ಕೃತಿಯ ಶುದ್ಧನೃತ್ತ-ನೃತ್ಯಗಳು ಸುಂದರವಾಗಿ ಕಂಗೊಳಿಸಿದವು.`ಮಾಧವ, ಮಧುಸೂದನ, ಯಶೋದ ನಂದನ..’ ಎಂಬ ಕರ್ಣಾನಂದಕರ ( ಗಾಯಕ ವಿನಯ್ ಅಂದಗಾರ್ ) ಗಾಯನದಲ್ಲಿ, ಕಲಾವಿದೆ, ಕೃಷ್ಣ-ಕುಚೇಲರ ಗಾಢ ಸಖ್ಯದ ಬೆಸುಗೆಯನ್ನು ಸಂಚಾರಿಯಲ್ಲಿ ತನ್ನ ಭಾವಪೂರ್ಣ ಅಭಿನಯದಿಂದ ಪ್ರದರ್ಶಿಸಿದಳು. ಹಾಗೆಯೇ ದ್ರೌಪದಿಗೆ ಕೃಷ್ಣ ಪರಮಾತ್ಮ ಅಕ್ಷಯವಸ್ತ್ರವನ್ನು ನೀಡುವ ಕಥಾನಕವನ್ನು ದೃಶ್ಯಾತ್ಮಕವಾಗಿ ಕಟ್ಟಿಕೊಟ್ಟಳು. ಕುಚೇಲನ ದೈನ್ಯತೆಯನ್ನು ಮತ್ತು ದ್ರೌಪದಿಯ ಅಸಹಾಯ ಆರ್ದ್ರತೆಯನ್ನು ಸಂಸ್ಕೃತಿ, ಅನುಭವಿಸಿ ಅಭಿನಯಿಸಿದ್ದು ಪರಿಣಾಮಕಾರಿಯಾಗಿತ್ತು.
ಅನಂತರ, ಸ್ವಾತಿ ತಿರುನಾಳ್ ಮಹಾರಾಜರು ರಚಿಸಿದ `ದೇವೀ ಜಗಜ್ಜನನಿ…’ ಎಂಬ ನವರಾತ್ರಿಯ ಮೊದಲ ದಿನ ಸ್ತುತಿಸುವ `ದೇವೀ ಸ್ತುತಿ’ ಯ ಪ್ರಸ್ತುತಿಯಲ್ಲಿ ಕಲಾವಿದೆಯ ನೃತ್ಯಾಸಕ್ತಿ, ಕಠಿಣ ಪರಿಶ್ರಮ ಸುವ್ಯಕ್ತವಾಗಿತ್ತು. ಸಂಕೀರ್ಣ ಜತಿಗಳನ್ನು ಹಾಗೂ ಸಮರ್ಪಣಾ ಭಾವದ ಅಭಿನಯವನ್ನು, ಸುಂದರಭಂಗಿಗಳ ಮೂಲಕ ಮನೋಜ್ಞವಾಗಿ ನರ್ತಿಸಿದಳು. ಶಿವನಲ್ಲಿ ಅನುರಕ್ತಳಾದ ವಿರಹೋತ್ಖಂಠಿತ ನಾಯಕಿ, ಅವನಿಲ್ಲದೆ ಎಲ್ಲ ಸುಖಗಳೂ ತನಗೆ ಅಪ್ರಿಯ ಎಂದು ಪ್ರಿಯಕರನ ಅಗಲಿಕೆಯ ಬೇಗೆಯನ್ನು ತಾಳಲಾರದೆ, ಅವನನ್ನು ಬೇಗ ಕರೆದು ತರಲು ತನ್ನ ಸಖಿಯನ್ನು ಕಳಿಸುವ ಹಾಗೂ ಅವನ ಅನುಪಸ್ಥಿತಿಯಲ್ಲಿ ವಿರಹವನ್ನು ಮರೆಯಲು ಅವನ ಗುಣಗಾನ ಮಾಡುವ ನಾಯಕಿಯ ಪರವಶತೆಯ ಕರುಣಾರ್ದ್ರ ಭಾವವನ್ನು ಸಾಂದ್ರೀಕರಿಸಲು ನೃತ್ಯಕಲಾವಿದೆ ಪ್ರಯತ್ನಿಸಿದ್ದು ಶ್ಲಾಘ್ಯಾರ್ಹ.
ಕ್ಷೇತ್ರಯ್ಯನ `ಪದ’(ಮಿಶ್ರಛಾಪು ತಾಳ)- `ಚೂಡರೆ …’ ಎಂಬುದಾಗಿ, ನಾಯಕಿಯ ಕೃಷ್ಣನ ಬಗೆಗಿನ ಅನನ್ಯ ಒಲುಮೆಯನ್ನು ಕೇರಿಯ ಉಳಿದ ಹೆಂಗೆಳೆಯರು ಸಣ್ಣ ಬುದ್ಧಿಯ ನಡವಳಿಕೆಯಿಂದ ಆಡಿಕೊಳ್ಳುವ ಸಾಮಾಜಿಕ ಆಯಾಮ ಮೇಳೈವಿಸಿದ `ಪದ’ ಕೃತಿ,ಕಲಾವಿದೆಯ ಅಭಿನಯದಲ್ಲಿ ಸೊಗಸಾಗಿ ಮೂಡಿಬಂತು. ಮುಂದೆ ವೆಂಕಟಾದ್ರಿ ಶಾಮರಾವ್ ರಚಿತ `ಜಾವಳಿ’ ಯಲ್ಲಿ ನಾಯಿಕಾ ವಾಸಿಕಾಸಜ್ಜಾ. ನಾಯಕನ ನಿರೀಕ್ಷೆಯಲ್ಲಿದ್ದಾಳೆ. ಅವನಿಗಾಗಿ ಸಕಲ ಅಲಂಕಾರ, ಸಿದ್ಧತೆಗಳೂ ನಡೆದು ಅವನ ದಾರಿಗಾಣದೆ ದುಃಖಿತಳಾಗಿದ್ದಾಳೆ ಬೇಹಾಗ್ ರಾಗದ `ಇದೇನೇ ಸಖಿ ಕಾಂತನು ಮುನಿದಿರ್ಪ …’ ಎಂದು ಬೇಗುದಿಗೊಳ್ಳುವ ನಾಯಕಿಯ ಭಾವನೆಗಳನ್ನು ಅಭಿವ್ಯಕ್ತಿಸುತ್ತ, ಸೂಕ್ಷ್ಮ ವಿವರಗಳನ್ನೂ ಅಷ್ಟೇ ನವಿರಾಗಿ ಮನಮುಟ್ಟುವಂತೆ ಅಭಿನಯಿಸಿದಳು ಸಂಸ್ಕೃತಿ. ಅಂತಿಮ ಪ್ರಸ್ತುತಿ `ದೇಶ್’ ರಾಗದ `ತಿಲ್ಲಾನ’ದಲ್ಲಿ ಪ್ರಸ್ತುತಗೊಂಡ ಆಕರ್ಷಕ ನೃತ್ತ ವಿನ್ಯಾಸಗಳು, ತೀವ್ರಗತಿಯ ಜತಿಗಳು ಮನಸೆಳೆದವು. ಯಾಂತ್ರಿಕತೆಯಿಲ್ಲದ ನೃತ್ತಗಳು, ಸುಂದರ ನೃತ್ಯಸಂಯೋಜನೆ ಗಮನ ಸೆಳೆದವು. ಆದರೆ ಪುಟ್ಟವಯಸ್ಸಿನ ಹುಡುಗಿಗೆ ವಿರಹೋತ್ಖಂಠಿತ ನಾಯಕಿ, ವಾಸಿಕಾ ಸಜ್ಜಾ ನಾಯಕಿ, `ಪದಂ’ ನ ನಾಯಕಿಯ ಸ್ಥಿತಿ-ಗತಿ ಭಾವನೆಗಳನ್ನು ನಿರೂಪಿಸುವ ಅಭಿನಯ ಕೊಂಚ ಭಾರವಾಯ್ತೇನೋ ಅನಿಸಿತು. ಇದರ ಬಗ್ಗೆ ಗುರುಗಳು ಕೃತಿಗಳನ್ನು ಆಯ್ಕೆ ಮಾಡುವಾಗ ಸ್ವಲ್ಪ ಆಲೋಚಿಸುವುದು ಒಳಿತು.
ಯುವ ನಾಟ್ಯಗುರು ಗುರುರಾಜರ ಉತ್ಸಾಹಪೂರ್ಣ ಸುಸ್ಪಷ್ಟ `ನಟುವಾಂಗ’, ನವೀನ್ ಅಂದಗಾರರ ಸುಶ್ರಾವ್ಯ ಗಾಯನ, ಹಿರಿಯ ವಿದ್ವಾನ್ ವಿ.ಆರ್.ಚಂದ್ರಶೇಖರರ ಮೃದಂಗ, ವಯೊಲಿನ್ ಸಿ.ಮಧುಸೂದನ್ ಮತ್ತು ಕೊಳಲು ವಿವೇಕ ಕೃಷ್ಣರ ಹಿನ್ನಲೆಯ ಸಹಕಾರ ಅದ್ಭುತವಾಗಿತ್ತು.
2 comments
Very nice madam
Thank you very much dear Gururaj.