Image default
Short Stories

ಬದುಕು ಹೀಗೇಕೆ?

                ` ತನೂ…ಎಷ್ಟು ಸಲಾನೇ ನಿನ್ನ ಕೂಗೋದೂ…..ನಿನಗೇ ಹೇಳ್ತಿರೋದು ಊಟಕ್ಕೆ ಬರ್ತೀಯೋ ಇಲ್ಲವೋ…ಕೂತಲ್ಲೇ ಮೈ ಮರೆತು ಬಿಡತ್ತೆ ಹುಡುಗಿ’-ಅವಳ ತಾಯಿ ಶಾಂತಮ್ಮ ಗೊಣಗಿಕೊಂಡು ಒಳನಡೆದರು. ಅವರ ದೂರಿನಲ್ಲೂ ಒಂದು ಅರ್ಥವಿದೆ. ತನುಶ್ರೀ ಹಾಗೆಯೇ.ಅವಳಿಗೆ ಅಂಟಿದ ಒಂದು  ಅಭ್ಯಾಸ ಅಂದರೆ, ನಿಂತಲ್ಲೇ, ಕೂತಲ್ಲೇ ಕನಸು ಕಾಣುವುದು. ಮಹಾ ಭಾವುಕ ಹುಡುಗಿ. ಕಲ್ಪನೆಯೂ ಸ್ವಲ್ಪ ಹೆಚ್ಚೇ. ಸದಾ ಕಲ್ಪನಾಲೋಕದ ವಿಹಾರ. ಅವಳು ಸುಂದರಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಮೂಗು, ಕಣ್ಣು, ಬಾಯಿ ಎಲ್ಲಾ ತಿದ್ದಿದ ಹಾಗೆ. ಮುಖದಲ್ಲಿ ಒಂಥರಾ ಖಳೆ. ಚಿತ್ರದಲ್ಲಿ ಬಿಡಿಸಿಟ್ಟ ಹಾಗೆ ಮೆಟ್ಟಿಲು ಮೆಟ್ಟಿಲು ಕೂದಲು ಸೊಂಪಾಗಿ. ನಕ್ಕರೆ ಕೆನ್ನೆಯ ಮೇಲೆ ಆಳವಾದ ಗುಳಿ. ಲಂಗ-ದಾವಣಿಯಲ್ಲಿ ಮುದ್ದಾಗಿ ಕಾಣುವಳು- ಹಾಗಂತ ಅವಳ ಸುತ್ತ ಠಳಾಯಿಸೋ ಹುಡುಗರ ಅಭಿಪ್ರಾಯ. ನಿಜ ಹೇಳಬೇಕೂಂದ್ರೆ ಅವಳ ಕ್ಲಾಸ್‍ಮೆಟ್ಸು, ಮುಂದಿನ, ಹಿಂದಿನ ತರಗತಿ ಹುಡುಗರಲ್ಲದೆ ಅವಳನ್ನು ಆ ಕಾಲೇಜಿನ ಲೆಕ್ಚರರ್ಸೂ ಕೂಡ ಕದ್ದೂ ಕದ್ದು ನೋಡ್ತಿದ್ರೂ ಅಂತ ವಿದ್ಯಾರ್ಥಿಗಳ ಅಂಬೋಣ. ಪ್ರಿನ್ಸಿಪಾಲರೂ ಅವಳನ್ನು ಕಣ್ತುಂಬ ನೋಡೋ ಆಸೆಯಿಂದ ಅವಳನ್ನು ತಮ್ಮ ಛೇಂಬರ್ರಿಗೆ ಕರೆಸ್ಕೊಂಡು ಸುಮ್ ಸುಮ್ನೆ ಗದರೋರಂತೆ: `ಏನಮ್ಮ…ನೀನು ಓದೋದಕ್ಕೆ ಬರ್ತೀಯೋ ಇಲ್ವೋ ಗಂಡುಹುಡುಗರನ್ನ ಡಿಸ್ಟರ್ಬ್ ಮಾಡಕ್ಕೆ ಬರ್ತೀಯೋ?’ ಎಂದಾಗ ಅವಳು ಗಾಬರಿಯಿಂದ ಅವರ ಅರೋಪ ಅರ್ಥವಾಗದೆ, ರೆಪ್ಪೆ ಮಿಟುಕಿಸುತ್ತ ಮುಗ್ಧಳಾಗಿ  `ನಾನ್ಮೇಡ್ದೆ ಸಾರ್?’  ಎನ್ನುತ್ತಿದ್ದಳು ಗಲಿಬಿಲಿಯಿಂದ.

                  ಅಲಂಕಾರ ಪ್ರಿಯೆ ತನೂಗೆ ಕಾಲೇಜು ಲೈಫು ತುಂಬ ಹಿಗ್ಗು ತಂದಿತ್ತು. ಜೊತೆ ಹುಡುಗರು ಎಷ್ಟೇ ರೇಗಿಸಿದರೂ, ಲವ್ ಲೆಟರ್ಸ್ ಕೊಟ್ರೂ ಒಳಗೊಳಗೇ ಬೀಗ್ತಾ ಓದಿನತ್ತ ಮಾತ್ರ ತನ್ನ ಗಮನಾನ ಕೆಡಿಸ್ಕೊಳ್ದೆ ಬಿ.ಎ. ಪದವೀಧರೆಯಂತೂ ಆದಳು. ಮುಂದೆ ಓದೋದು ಯಾಕೆ, ಹೇಗಿದ್ರೂ ಮದುವೆ ಮಾಡಲೇಬೇಕು, ಇಂಥ ಚೆಂದುಳ್ಳಿ ಚೆಲುವೇನ ಕಾಯೋದು ಕಷ್ಟ, ಆದಷ್ಟೂ ಬೇಗ ಅವಳ ಜವಾಬ್ದಾರೀನ ಮುಗಿಸಿಕೊಂಡು ಬಿಡೋಣ ಅಂತ ಅವಳ ತಂದೆ ರಾಮಸ್ವಾಮಿಗಳ ಗುನುಗು ಹೆಂಡತಿ ಹತ್ರ. ಆಕೆಗೊಂಥರ ಬೀಗು-    `ನಮ್ಮ ತನೂಗೇನ್ರೀ ಮನೆ ಮುಂದೆ ಕ್ಯೂ ನಿಂತ್ಕೋತಾರೆ ಮದುವೆ ಮಾಡ್ಕೊಳಕ್ಕೆ….ನಾವ್ಯಾಕೆ ಒದ್ದಾಡಬೇಕು, ಸ್ವಲ್ಪ ಸುಮ್ನಿರಿ, ಆತುರ ಯಾಕೆ?’ ಅಂತ ಅನ್ನುವ ಅಮ್ಮನ ಮಾತು   ತನೂಗೆ ತನ್ನ ಬಗ್ಗೆ ಇನ್ನಷ್ಟು ಜಂಭ- ಅಮಲು ತರಿಸಿತ್ತು.

  ಹೀಗಾಗಿ ಕಲ್ಪನೆ ಕೊನರಿ, ಕನಸು ಕಸಿಗೊಂಡು ಆಸೆಯ ಹೂವುಗಳು ಅವಳ ಮನದ ತುಂಬ ಪ್ರಫುಲ್ಲವಾಗಿ ಅರಳಿದ್ದವು. ನೆಮ್ಮದಿಯಾಗಿ ನಿದ್ದೆ ಮಾಡಲೂ ಬಿಡದಂತೆ ಅವಳನ್ನು ನಿದ್ದೆಯಲ್ಲೂ ಕಾಡುವ ಚೆಂದದ ಹುಡುಗರು. ಸದಾ ಕಾದಂಬರಿ ಓದುತ್ತ ರಮ್ಯಲೋಕದಲ್ಲಿ ತೇಲುತ್ತಿದ್ದ ಅವಳಿಗೆ ಮೊದಲ ಕಚಗುಳಿಯಿಟ್ಟವನು ಅವಳ ಜೀವದ ಗೆಳತಿ ರಮ್ಯಳ ಅಣ್ಣ ಪ್ರಸಾದ್. ಸುರುಳಿಗೂದಲ ಚೆಲುವ. ಚಿಕ್ಕ ಕಣ್ಣುಗಳಾದರೂ ಚುರುಕು ನೋಟ. ಚಿಗುರು ಮೀಸೆಯ ಸರದಾರ. ಅವನ ನಯ-ವಿನಯದ ಮೃದುಮಾತುಗಳು ಅವಳನ್ನು ಸೆಳೆದಿದ್ದವು. ಅವನು ಇನ್‍ಸ್ಟಿಟ್ಯೂಟ್‍ನಲ್ಲಿ ಎಂಟೆಕ್.ಪಿ.ಎಚ್.ಡಿ ಮುಗಿಸಿ ವಿದೇಶಕ್ಕೆ ಮುಂದಿನ ವಿದ್ಯಾಭ್ಯಾಸಕ್ಕೆ ಇನ್ನೇನು ಹಾರಲಿದ್ದ ಕಾರಣ ತಂಗಿಯ ಮದುವೆಯನ್ನು ಆದಷ್ಟು ಬೇಗ ಮಾಡಿ ಮುಗಿಸುವ ತರಾತುರಿಯಲ್ಲಿದ್ದ. ಹೇಗೂ ಅವಳ ವಿದ್ಯಾಭ್ಯಾಸ ಮುಗಿದಿದ್ದು, ಅವಳೂ ಲಕ್ಷಣವಾಗಿದ್ದುದರಿಂದ ಒಳ್ಳೆಯ ವಿದ್ಯಾವಂತ ವರನೇ ರಮ್ಯಳಿಗೆ ದೊರೆತಿದ್ದ. ಮದುವೆ ಮನೆಯಲ್ಲಿ ಮೂರು  ದಿನವೂ ತನೂದೇ ಭಾರಿ ಓಡಾಟ. ಅವಳ ನಗು ಮುಖ,ಚೆಲುವು, ಚಟುವಟಿಕೆಯ ಓಡಾಟ ಎಲ್ಲರ ಗಮನ ಸೆಳೆದಿತ್ತು.

ರಮ್ಯಳ ಅತ್ತೆಯಂತೂ ಬಾಯ್ಬಿಟ್ಟೇ ಹೇಳಿಬಿಟ್ಟರು-` ನಿಮ್ಮ ಮಗನ್ನ ಒಂಟಿಯಾಗಿ ಫಾರಿನ್‍ಗೆ ಕಳಿಸ್ಬೇಡಿ, ಮದುವೆಯಿಲ್ಲದೆ ಕಳುಹಿಸಿದರೋ ಕೆಟ್ಟಿರಿ , ಬಿಳೀ ತೊಗಲಿನವಳೇ ನಿಮ್ಮ ಸೊಸೆ ಗ್ಯಾರಂಟಿ…. ಆದ್ದರಿಂದ ನಿಮ್ಮ ಕಣ್ಣೆದುರಿಗೇ ಇದ್ಯಲ್ಲ ಚಿನ್ನದಂಥ ಹುಡುಗಿ….ವಿಚಾರಿಸಿ, ಒಳ್ಳೆ ಅವಕಾಶ’ ಎಂದು ಬೀಗಿತ್ತಿಯ ಕಿವಿ ಊದಿದರು. ಈ ಮಾತು ಹುಡುಗ-ಹುಡುಗಿ ಇಬ್ಬರ ಕಿವಿಯೂ ತಲುಪಿ ಮುದಗೊಂಡರು. ಇಬ್ಬರ ಕಣ್ಣಲ್ಲೂ ಪರಸ್ಪರರ ಚಿತ್ರಗಳು ಅಚ್ಚೊತ್ತಿಕೊಂಡವು. ಪ್ರಸಾದನ ನೆಟ್ಟ ನೋಟವನ್ನೆದುರಿಸಲಾರದೆ ತನುಶ್ರೀ ಪುಳಕಿತಳಾಗಿ ಕೆಂಪಿನ ಕಡಲಾದಳು. ನಾಚಿಕೆಯಿಂದ ಅವನ ಕಣ್ತಪ್ಪಿಸಿ ಓಡಾಡಿದಳು. ಆದರೆ ಪ್ರಸಾದ್, ಸುತ್ತಲಿದ್ದವರು ಏನು ತಿಳಿದುಕೊಳ್ಳುತ್ತಾರೆಂಬುದನ್ನು ಲೆಕ್ಕಿಸದೆ ಅವಳ ಹಿಂದೆ ಮುಂದೆಯೇ ಸುಳಿದಾಡಲಾರಂಭಿಸಿದ. ಇಬ್ಬರಿಗೂ ವಿನೂತನ ಅನುಭವ, ಮದುವೆ ಮುಗಿಯುವವರೆಗೂ. ಆಮೇಲೆ ಇಬ್ಬರೂ ಬೇರೆ ಬೇರೆಯಾಗಲೇಬೇಕಾಗಿ, ಬೇರೆ ದಾರಿಯಿಲ್ಲದೆ ಅವರವರ ಮನೆಗೆ ಹೋದರು.

ಅಲ್ಲಿಂದ ಪ್ರಾರಂಭ…ಅದೆಂಥದೋ ವಿರಹವೇದನೆ…ಪ್ರಸಾದ್ ಅವಳನ್ನು ಬಿಟ್ಟೂ ಬಿಡದೆ ಕಾಡಿದ…..ತಾನೇ ಈ ವಿಷಯವನ್ನು ಮನೆಯಲ್ಲಿ ತಿಳಿಸಿಬಿಡಲೇ ಎಂಬ ತಳಮಳ ಅವಳಿಗೆ…ಗೆಳತಿಯನ್ನು ಕಾಣುವ ನೆಪದಲ್ಲಿ ಅವಳ ಮನೆಗೆ ಹೋಗಲೇ ಎಂದು ಮನಸ್ಸು ಕುಣಿದರೂ, ಅವಳು ಹನಿಮೂನಿಗೆ ಹೋಗಿರ್ತಾಳೇಂತ ಗೊತ್ತಿದ್ದೂ ಹೋಗೋದು ಹ್ಯಾಗೆ ಅನ್ನೋ ಸಂಕಟ….ಕ್ಷಣ ಯುಗವಾಗಿ ನಿದ್ದೆ, ಊಟ ಸೇರದೆ ವಿಲಿವಿಲಿ ಒದ್ದಾಡಿ ಪತರಗುಟ್ಟಿದಳು ತನು. ಅವಳ ಅದೃಷ್ಟಕ್ಕೆ ನೆಪ ಒಂದು ಸಿಕ್ಕಿತ್ತು. ಅವಳ ನೀಲಿ ರೇಷಿಮೆ ಸೀರೆ, ರಮ್ಯಳ ಮನೆಯಲ್ಲೇ  ಉಳಿದಿದ್ದು ನೆನಪಾಗಿ, ಹೋದ ಜೀವ ಬಂದಂತಾಗಿ ಒಂದೇ ಓಟದಲ್ಲಿ ಅವಳ ಮನೆಗೆ ಓಡಿದಳು. ಬಾಗಿಲಲ್ಲೇ ಎದುರಾದ ಪ್ರಸಾದ್!…ಅವನ ಕಣ್ಣಲ್ಲೂ ಸಾವಿರ ಮಿಂಚು…` ಬನ್ನಿ ಬನ್ನಿ…ನಿಮ್ಮನ್ನೇ ನೆನೆಸಿಕೊಳ್ತಿದ್ದೆ…ನೂರುವರ್ಷ ಆಯಸ್ಸು ನಿಮಗೆ’ ಎಂದವನ ತೀಕ್ಷ್ಣ ನೋಟ ಎದುರಿಸಲಾರದೆ,ಅವಳಿಗೆ ಭೂಮಿ ಬಾಯ್ಬಿರಿಯಬಾರದೇ, ಎನಿಸುವಷ್ಟು ಖಂಡುಗ ನಾಚಿಕೆ. ಮುಖ ಕೆಂಪಿನ ಓಕುಳಿ!!…` ನಾನು ಮುಂದಿನ ವಾರವೇ ಅಮೇರಿಕಾಗೆ ಹೊರಟಿದ್ದೀನಿ, ಟಿಕೆಟ್ ಆಗಿದೆ…ಅಲ್ಲಿ ಒಹಾಯೋವಿನ ಡೇಟನ್ನಲ್ಲಿ ಹೈಯರ್ ಸ್ಟಡೀಸ್ ಮಾಡ್ತಾ ಇದ್ದೀನಿ…ಮತ್ತೆ ಇಲ್ಲಿಗೆ ಬರೋದು ಎರಡು ವರ್ಷಗಳಾಗಬಹ್ದು…ನಂಗೋಸ್ಕರ ಕಾಯ್ತೀರಲ್ಲಾ?…ಫೋನೂ,ಮೈಲ್ ಮಾಡ್ತಾ ಇರ್ತೀನಿ, ನನ್ನ ನೀವು ಮರೆಯದ ಹಾಗೆ’- ಎಂದವನು ಅವಳಲ್ಲೇ ದಿಟ್ಟಿ ನೆಟ್ಟು ತನ್ಮಯನಾಗಿ ನೋಡಿದಾಗ ಅವಳಿಗೆ ಮಾತೇ ಆವಿಯಾಗಿಹೋಯಿತು. ಹೃದಯ ಢಮರುಗ!!.. ಪ್ರತಿಮೆಯಾಗಿ ನಿಂತುಬಿಟ್ಟಳು.!!!

              ಅಂದು- ಮನೆಗೆ ಬಂದವಳು ಯಾರ ಜೊತೆಯೂ ಮಾತನಾಡಲಿಲ್ಲ. ಎದೆಯೆಲ್ಲ ಭಾರ…ಭಾರ…ಕಣ್ಣು ಮುಚ್ಚಿದರೂ ಬಿಟ್ಟರೂ ಅದೇ ಸುರುಳಿಗೂದಲ ಚೆಲುವನ ಮುಖ ಕಣ್ಣಪಾಪೆಯಲ್ಲಿ ಅಚ್ಚು….ಹೃದಯವೆಲ್ಲ ಖಾಲಿ ಖಾಲಿ…ಎಲ್ಲೋ ಮನಸು…ಎಲ್ಲೋ ಜ್ಞಾನ….ಮನೆಯವರಿಗೆಲ್ಲ ದೊಡ್ಡ ಒಗಟಾಗಿ ಬಿಟ್ಟಳು ತನು. ರಾಮಸ್ವಾಮಿಯವರು ಅವಳ ಜಾತಕವನ್ನು ನಕಲು ಮಾಡಿಸಲು ಹೊರಟಾಗ ಅವಳು ಖಡಾಖಂಡಿತವಾಗಿ ಹೇಳಿಬಿಟ್ಟಳು- `ನಂಗಿನ್ನೆರಡು ವರ್ಷ ಮದುವೆ ಬೇಡ ಅಪ್ಪಾ’ .

                 ಅವನ ಫೋನು ಅಪರೂಪವಾದರೂ, ಅವನಿಂದ `ಇ ಮೇಲ್’, ಮೆಸೇಜ್ ಬಂದ ದಿನವೆಲ್ಲ ಅವಳಿಗೆ ಹಬ್ಬ…..ವರ್ಷದ 365 ದಿನಗಳೂ ಅವನದೇ ಜಪ….ಮನೆಯಲ್ಲಿ ಕಾಲ ಕಳೆಯಲು ಬೇಜಾರೆಂದು ತಂದೆಯ ಬಳಿ ಹಟ ಮಾಡಿ ಎಂ. ಎ. ಕ್ಲಾಸಿಗೆ ಸೇರಿದ್ದಳು. ಜೊತೆಗೆ ಕಂಪ್ಯೂಟರ್ ಕ್ಲಾಸಿಗೂ. ಈಚೆಗೆ ಪ್ರಸಾದನ ಫೋನೂ ನಿಂತುಹೋಗಿದ್ದರಿಂದ ಮೊದಮೊದಲು ತಲೆಯ ಮೇಲೆ ಬಂಡೆ ಬಿದ್ದಂತೆ ಜರ್ಜರಿತಳಾಗಿ ಸಪ್ಪಗೆ ಕೂಡುತ್ತಿದ್ದ ತನು, ಕೆಲವೇ ದಿನಗಳಲ್ಲಿ ಸುಧಾರಿಸಿಕೊಂಡು, ಓದುವ ಕಡೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿದ್ದಳು. ಅರ್ಥವಾಗದ್ದನ್ನು ಸಹಪಾಠಿ ಹೇಮಂತನ ಹತ್ತಿರ ಹೇಳಿಸಿಕೊಳ್ಳುತ್ತಿದ್ದಳು. ಅವನು ತುಂಬಾ ವಾಚಾಳಿ, ಅಷ್ಟೇ ಸ್ಮಾರ್ಟಾದ ಹುಡುಗನಾಗಿದ್ದ. ಸದಾ ಟ್ರಿಮ್ಮಾಗಿ ಡ್ರೆಸ್ ಮಾಡುತ್ತಿದ್ದ. ವೈಟ್ ಅಂಡ್ ವೈಟ್.  ಕಾಲಿಗೂ ಕೊಕ್ಕರೆ ಬಿಳುಪಿನ ಚೂಪು ಮೂತಿಯ ಷೂಸ್…ಅವನು ಕ್ಲಾಸಿಗೆ ಬರುತ್ತಿದ್ದುದೂ ಬಿಳಿ ಬಣ್ಣದ ದೊಡ್ಡ ಕಾರಿನಲ್ಲಿ. ಸಿನಿಮಾ, ಹೋಟೆಲ್ಲು,  ಸ್ನೇಹಿತರೊಂದಿಗೇ ಟೈಂ ಪಾಸ್ ಮಾಡುವ ಜಾಲಿ ಮನೋಭಾವದವ. ಅವನೊಡನೆ ಮಾತಾಡುವಾಗ ಏನೋ ಲವಲವಿಕೆ, ಖುಷಿಯಾಗುತ್ತಿತ್ತವಳಿಗೆ, ಕಾಲ್ಗೇಟ್ ನಗು. ಬಹು ಬೇಗ ಅವನು ಇಡೀ ಕ್ಲಾಸಿನ ಡಾರ್ಲಿಂಗ್ ಆದ. ಹಾಗೆ ತನುಶ್ರೀಗೂ ಪೆಟ್ ಆದ. ಅವನು ನಿಧಾನವಾಗಿ ಅವಳ ಮನದೊಳಗಿಳಿಯ ತೊಡಗಿದ್ದ ಅವಳರಿವಿಲ್ಲದೆ. ಅವನ ಗೆಳೆತನದಲ್ಲಿ ಒಂದು ಬಗೆಯ ಹಿತವಿತ್ತು. ಬರುಬರುತ್ತಾ ಅವನೆಡೆ ಆಕರ್ಷಿತಳಾದ ಅವಳ ಹೃದಯ ಕಳೆದುಹೋಗಿತ್ತು. ಪ್ರಸಾದ್ ಆಗೀಗ ನೆನಪಾದರೂ ಅವನ ಜಾಗವನ್ನು ಹೇಮಂತ್ ತುಂಬತೊಡಗಿದ್ದ. ಮನೆಯ ಮುಂದೆ ಬಂದು ನಿಲ್ಲುವ ಬಿಳೀ ಕಾರಿನಿಂದಿಳಿವ ಆ ಮನ್ಮಥನ ಚಿತ್ರಣವೇ  ಮನದ ತುಂಬಾ…ಹಗಲಿರುಳೂ ಅವನದೇ ಧ್ಯಾನ. ಅಂಬೆಗಾಲಿಕ್ಕುತ್ತಿತ್ತು…ನಿದ್ದೆ ಕಳುವಾಗಿ ಕನಸಿನ ಖಜಾನೆ ಭರ್ತಿಯಾಗತೊಡಗಿತ್ತು.

                ಆದರೆ ಪರೀಕ್ಷೆ ಮುಗಿದು, ರಿಸಲ್ಟ್ ಬಂದು ಓದು ಮುಗಿಯುತ್ತಿದ್ದ ಹಾಗೇ ಅವನು ಎಲ್ಲಿ ಮಾಯವಾದನೋ, ಹೇಳದೆ ಕೇಳದೆ.!..ಗರಬಡಿದಂತಾ ಗಿದ್ದಳು. ಮತ್ತವನು ಭೇಟಿಯಾಗುತ್ತಾನೋ ಇಲ್ಲವೋ, ಮರಳಿ ಕಾಣಸಿಗುವನೇ ಎಂಬ ಆತಂಕ ಕಾಡಿದಾಗ ತಾನವನನ್ನು ತುಂಬಾನೇ ಹಚ್ಚಿಕೊಂಡುಬಿಟ್ಟಿದ್ದೇನೆ ಎಂದು ಭಾವಿಸಿದ ತನುಶ್ರೀ, ಅವನ ನೆನಪಲ್ಲಿ ಮನವನ್ನು ಸುಟ್ಟುಕೊಳ್ಳುತ್ತ ಮೌನದ ಕೋಟೆಯೊಳಗೆ ಬಂದಿಯಾಗಿ ಬಿಟ್ಟಳು. ಒಮ್ಮೊಮ್ಮೆ ಅವಳಿಗನಿಸುತ್ತದೆ, ಅವನೇ ತನ್ನ ಬಗ್ಗೆ ಚಿಂತಿಸದೆ, ಎಲ್ಲೋ ಹಾಯಾಗಿರುವಾಗ ತಾನೇಕೆ ವೃಥಾ ಕೊರಗಬೇಕು ಎಂಬ ಸಿಟ್ಟು ಸಿಡಿಯುತ್ತದೆ. ಆದರೂ ಒಂಟಿಯಾಗಿರುವಾಗ ಪ್ರಸಾದನ ನೆನಪು, ಹೇಮಂತನ ಆತ್ಮೀಯತೆ ಅವಳನ್ನು ಕಾಡುತ್ತ ಮೆತ್ತಗಾಗಿಸುತ್ತದೆ. ನಿದ್ದೆಯಲ್ಲಿ ಕಾಡುವ ಖಾಯಂ ಗಿರಾಕಿಗಳಾಗಿ ಬಿಟ್ಟಿದ್ದರವರು. ರಾತ್ರಿಯಿಡೀ ಹೊರಳಾಡುತ್ತಾ, ಚಡಪಡಿಸುತ್ತಿದ್ದ ಅವಳಿಗೆ ಆ ಕನಸಿನ ಹುಡುಗರ ಬಗ್ಗೆ ತನಗೆ ಎಷ್ಟು ಪ್ರಾಮಾಣಿಕ ಪ್ರೀತಿ ಇತ್ತೆಂಬುದು ಅವಳಿಗೇ ಸ್ಪಷ್ಟವಿರಲಿಲ್ಲ. ತನ್ನದು ಬಾಲಿಶ ಭಾವನೆಗಳೇ ಎಂದೂ ಶಂಕೆಯಾಗುತ್ತಿತು ಒಮ್ಮೊಮ್ಮೆ. ನಿಜ ಹೇಳಬೇಕೆಂದರೆ ಈ ಪಟ್ಟಿಯಲ್ಲಿ ಇನ್ನೂ ಒಂದಿಬ್ಬರು ಹುಡುಗರ ಬಗ್ಗೆ ಅವಳಿಗೆ ಒಲವಾಗಿತ್ತು. ಅಥವಾ ಹಾಗಂತ ಅವಳು ಅಂದುಕೊಂಡಿದ್ದಳು. ಮನೆಯಲ್ಲಿ ಏನೂ ಕೆಲಸವಿಲ್ಲದೆ ಬಿಡುವಾಗಿದ್ದುದರಿಂದ ಮನಸ್ಸಿಗೆ ಲಗ್ಗೆ ಹಾಕುವ ಕನಸುಗಳಿಗೇನೂ ಬರವಿರಲಿಲ್ಲ. ತನ್ನ ಡೈರಿಯ ತುಂಬ ಕಾಡುವ ಕನಸಿನ ಹುಡುಗರ ಬಗ್ಗೆ ಸಾಕಷ್ಟು ಟಿಪ್ಪಣಿ ಮಾಡಿಟ್ಟಿದ್ದಳು. ಅದರೂ ಅವಳಿಗೊಂದು ಬಿಡದ ಅನುಮಾನ. ತನಗೆ ಮಾತ್ರ ಈ ರೀತಿಯ ತಲ್ಲಣ-ಭಾವನೆಗಳು ಮೂಡುವುವೋ ಅಥವಾ ತನ್ನ ಹಾಗೆ ಇತರ ಜೌವ್ವನೆಯರನ್ನೂ ಈ ರೀತಿಯ ಭಾವಗಳು ಕಾಡುವವೋ ಎಂದು.

                ಮನೆಯಲ್ಲಿ ಮದುವೆ ಮಾತೂಕತೆ ನಡೆಯುತ್ತಿತ್ತು. ಈ ಮಧ್ಯೆ ಅವಳ ಅಣ್ಣನ ಗೆಳೆಯ ಕಂ ಜಿಮ್ ಟ್ರೇನರ್ ವಿಕ್ರಂ ಆಗಾಗ ಮನೆಗೆ ಬರಲಾರಂಭಿಸಿದ್ದ. ಆಜಾನುಬಾಹು, ಚೆನ್ನಾಗಿ ವ್ಯಾಯಾಮ ಮಾಡಿದ ದೃಢಕಾಯ. ಅರಳುಹುರಿದಂತೆ ಮಾತು. ಬಲು ಬೇಗ ತನುವನ್ನು ತನ್ನ ಸ್ವಾರಸ್ಯ ಮಾತೂಕತೆಗಳಿಂದ ಆಕರ್ಷಿಸಿಬಿಟ್ಟಿದ್ದ ವಿಕ್ರಂ. ಶಾಂತಮ್ಮ, ರಾಮಸ್ವಾಮಿಗಳಿಗೂ ಅವನ ಗೌರವಾದರದ ನಡತೆಗಳು ಹಿಡಿಸಿದ್ದವು. ಕೆಲವೇ ದಿನಗಳಲ್ಲಿ ಮನೆ ಹುಡುಗನಂತಾಗಿದ್ದ ವಿಕ್ರಂ. ತನೂಗೂ ಅವನೆಂದರೆ ಏನೋ ಆಪ್ತಭಾವ. ಪರೋಪಕಾರಿ ಸ್ವಭಾವದ ಅವನು, ಗುರುತು ಇರಲಿ ಬಿಡಲಿ ಎಲ್ಲರ ಸಹಾಯಕ್ಕೂ ಧಾವಿಸುತ್ತಿದ್ದ. ರಕ್ತದಾನದಲ್ಲೂ ಎತ್ತಿದ ಕೈ. ಕಡಮೆಯೆಂದರೂ ಅವನು 50-60 ಬಾರಿ ಬೇರೆಯವರಿಗೆ ರಕ್ತ ನೀಡಿದ್ದ. ಈ ಎಲ್ಲ ಗುಣಗಳೂ ಅವನನ್ನು ಅವಳು ಇಷ್ಟಪಡುವಂತೆ ಮಾಡಿದ್ದ ಕಾರಣ, ಕನಸುಗಳು ಅವಳನ್ನು ಆಳತೊಡಗಿದ್ದವು.

                ಈ ಎಲ್ಲ ಮನಸ್ಸಿನ ವ್ಯಾಪಾರಗಳ ಮಧ್ಯೆ ಅವಳಿಗೆ ಇನ್ನೊಂದು ಶಾಕ್ !…ಅನಾಮತ್ತು ಒಂದು ದಿನ ಅವಳನ್ನು ಕೇಳುವ ಗೋಜಿಗೂ ಹೋಗದೆ ರಾಮಸ್ವಾಮಿಯವರು ಅವಳಿಗೆ ಮದುವೆ ಗೊತ್ತು ಮಾಡಿಕೊಂಡು ಬಂದಿದ್ದರು!!. ಅವರ ಬಾಲ್ಯಸ್ನೇಹಿತನ ಮಗನಂತೆ. ತನುಶ್ರೀ ಕಂಪಿಸಿ ಹೋಗಿದ್ದಳು!!.. ಕನಸಿನ ಹಡಗಲ್ಲಿ ಪಯಣಿಸುತ್ತಿದ್ದವಳು ಇನ್ನೂ ಯಾವ ನಿರ್ಧಾರದ ಹಂತಕ್ಕೂ ಬಂದಿರಲಿಲ್ಲ. ಇದುವರೆಗೂ `ಮದುವೆ’ ತನ್ನ ಆಯ್ಕೆ ಎಂದು ತಿಳಿದಿದ್ದವಳಿಗೆ, ಮಾತಾಡಲು ಅವಕಾಶವೇ ಕೊಡಲಿಲ್ಲ ರಾಮಸ್ವಾಮಿಯವರು.`ನಾನು ಮಾತು ಕೊಟ್ಟಿದ್ದೀನಿ ಅಂದ್ಮೇಲೆ ಮುಗೀತು…ನಿನಗೇನು ಅವಿದ್ಯಾವಂತನ್ನ, ಕುರೂಪೀನ ಕಟ್ತೀನೇನಮ್ಮಾ…ನಂಗೂ ನನ್ನ ಮಗಳು ಸುಖವಾಗಿರಬೇಕೂಂತ ಗೊತ್ತು…ಸುಮ್ನೆ ಬಾಯಿ ಮುಚ್ಕೊಂಡು ತಾಳಿ ಕಟ್ಟಿಸ್ಕೋ’-ಎಂದು ಜಬರ್ದಸ್ತಾಗಿ ಆರ್ಡರ್ ಮಾಡಿದರು. ಅವರ ಗರ್ಜನೆಗೆ  ತನು ಥಂಡಾ ಹೊಡೆದುಹೋಗಿದ್ದಳು…..ಅವರ ನಿರ್ಧಾರವನ್ನು ಪ್ರತಿಭಟಿಸಲಾಗದಿದ್ದರೂ ಮೂರು ದಿನ ಸ್ಟ್ರೈಕ್ ಮಾಡಿದಳು-ಊಟ -ಮಾತು ಬಿಟ್ಟು. ಅವಳ ಕನಸುಗಳು ತಬ್ಬಲಿಯಾಗಿಬಿಟ್ಟಿದ್ದವು!!!… ಧೈರ್ಯ  ಉಡುಗಿಹೋಗಿತ್ತು.

ಯೋಚಿಸಿಯೇ ಯೋಚಿಸಿದಳು…ವಾರಗಟ್ಟಲೆ…..ಹೌದು, ತಾನು ತನ್ನ ಆ ಕನಸಿನ ಹುಡುಗರ ಬೆನ್ನು ಹತ್ತಿದ್ದೇನೆಯೇ ವಿನಾ ಆ ಹುಡುಗರು ಯಾರೂ ತಮ್ಮ ಮನೆಗೆ ಬಂದು ತನುವನ್ನು ನಮಗೇ ಮದುವೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿರಲಿಲ್ಲ. ವಾಸ್ತವ ಅವಳ ಕಣ್ಣೆದುರು ರಾಚಿ ಬಿದ್ದಿತ್ತು.

                `ನಾವೇನು ನಿನಗೆ ಶತ್ರುಗಳೇನೇ?….ಚೆನ್ನಾಗಿ ಪರಿಶೀಲಿಸಿಯೇ ಈ ಹುಡುಗನ್ನ ಆರಿಸಿದ್ದೇವೆ’ -ತಾಯಿ ಸಮಜಾಯಿಷಿ ಹೇಳಿದರು.

                ತನುಶ್ರೀ ತಲೆಯ ಮೇಲೆ ಕೈಹೊತ್ತು ಕುಳಿತಳು. ಸುರುಳಿಗೂದಲ ಪ್ರಸಾದ, ಬೆಳದಿಂಗಳ ನಗು ಹೊದ್ದ ಹೇಮಂತ, ದೃಢಕಾಯ ಪ್ರೇಮಿ ವಿಕ್ರಂ ಎಲ್ಲರ ಚಿತ್ರಗಳೂ ಮಸುಕು ಮಸುಕಾಗತೊಡಗಿದವು…

                 ನೀರಿನಲ್ಲಿ ಕರ್ಪೂರದಂತೆ ಕರಗಿಹೋಗುತ್ತಿದ್ದ ತನ್ನ ಕನಸುಗಳ ಮಾರಣಾಂತಿಕ ಹೋಮವನ್ನು ಈಕ್ಷಿಸಲಾರದೆ ಅವಳುತನ್ನ ರೆಪ್ಪೆಗಳಿಗೆ ಅಗುಳಿ ಹಾಕಿ ಬಿಗಿಯಾಗಿ ಕಣ್ಣು ಮುಚ್ಚಿಕೊಂಡಿದ್ದಳು. ಉಸಿರು ಕಟ್ಟಿದಂತೆ….ಅವ್ಯಕ್ತ ಭಾವಗಳ ದಾಳಿ..

Indian wedding Details of traditional Indian wedding.

ರಾಜೇಶ ಅವಳ ಕೊರಳಿಗೆ ತಾಳಿಕಟ್ಟಿದ್ದ. ಗಂಡನನ್ನು ಕುತೂಹಲಕ್ಕೂ ಕಣ್ಣೆತ್ತಿಯೂ ನೋಡಲಿಲ್ಲ ತನುಶ್ರೀ. ಮೌನ ಪರ್ವತವಾದಳು…ಆದರೂ ರಾಜೇಶ ಸಹನೆಯ ಸಾಗರ . ಇನಿಮಾತುಗಳಿಂದ ಅವಳ ಬಳಿಸಾರಲೆತ್ನಿಸಿ ಸೋತರೂ ಮತ್ತೆ ಮತ್ತೆ ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದ.

                 ದಿನಗಳೆದಂತೆ ಅವನ ಧ್ವನಿ ಅಂಥ ಕೆಟ್ಟದೆನಿಸಲಿಲ್ಲ ಅವಳಿಗೆ, ಅವನ ಮೈ ಸ್ಪರ್ಶ ಚೇಳಿನಂತೇನೂ ಕುಟುಕಲಿಲ್ಲ. ಕಡೆಗೊಂದು ದಿನ ಅವನನ್ನು ಕಣ್ಬಿಟ್ಟು ನೋಡಿದಳು. ರಾಜೇಶನ ಆತ್ಮೀಯ ಕಣ್ಣೋಟ ಕೊಂಚ ಸಾಂತ್ವನ ಹೇಳುವಂತ್ತಿತ್ತು. ಮುಖದಲ್ಲಿ ಗಂಭೀರ ಕಳೆ…. ದಿನಗಳೆದಂತೆ ರಾಜೇಶನಿಗೆ ಅವಳ ಭಾವುಕ, ಅಷ್ಟೇ ಬಾಲಿಶ ಅಂತರಾಳದ ಗುಂಗು ತಿಳಿದು ಜೋರಾಗಿ ನಕ್ಕುಬಿಟ್ಟಿದ್ದಃ `ತನು ಇವೆಲ್ಲ ಇನ್ ಫ್ಯಾಚುಯೇಷನ್ಸ್…ಓಕೆ…ಇಷ್ಟುದಿನಗಳ ನಿನ್ನ ಹುಡುಗಾಟದ ದಿನಗಳನ್ನು ಎಂಜಾಯ್ ಮಾಡಿದ್ದಾಯ್ತು…ಸಾಕು, ಬಿಟ್ಟುಬಿಡು….ಸೀರಿಯಸ್ ಆದ ಜೀವನ ಈಗ ನಮ್ಮ ಮುಂದಿದೆ…ಬಿಹೇವ್ ಲೈಕ್ ಎ ಮೆಚೂರ್ಡ್ ಲೇಡಿ…ಮದುವೆ- ಮಕ್ಕಳು-ಸಂಸಾರ ಜವಾಬ್ದಾರಿಗಳ ಬಗ್ಗೆ ಸ್ವಲ್ಪ ಗಮನಕೊಡು’ ಎಂದವನು ಅವಳನ್ನು ಹತ್ತಿರ ಕೂರಿಸಿಕೊಂಡು ಪುಟ್ಟ ಮಗುವಿಗೆ ಬುದ್ಧಿ ಹೇಳುವಂತೆ ಉಪದೇಶ ನೀಡಿದಾಗ ನಿಜಕ್ಕೂ ಅವಳು ಅನುತ್ತರಳಾದಳು.

                ತನುಶ್ರೀಗೆ ಈಗ ಇಬ್ಬರು ಬೆಳೆದ ಮಕ್ಕಳು. ಗಂಡನಿಗೆ ರಿಟೈರ್ ಆಗಿದೆ. ಅವಳು ಗುಂಡಗಾಗಿ ಹಿರಿಯ ಹೆಂಗಸಿನಂತೆ ನೋಡಲು ಕಂಡರೂ ಅವಳ ಮನದ ಮೂಲೆಯಲ್ಲೆಲ್ಲೋ ಇನ್ನೂ ಹಳೆಯ ಕನಸುಗಳು ಇಣುಕುತ್ತವೆ. ಅವಳಿಗೇ ನಗು, ಇನ್ನೂ ಮಾಸದ ತನ್ನ ನೆನಪುಗಳ ಬಗ್ಗೆ, ಚೆಲ್ಲು ಚೆಲ್ಲಾಗಿ ಆಡುವ ತನ್ನ ಯುವ ಮನೋಭಾವದ ಬಗ್ಗೆ, ಹೀಗಾದರೆ ಹೇಗೆ, ಹಾಗಾಗಿದ್ದರೆ ಹೇಗೆ…ಏನೇನೋ ಕೆಲಸಕ್ಕೆ ಬಾರದ ಬಾಲಿಶ ಯೋಚನೆಗಳನ್ನು ಮಾಡುವ ಚಂಚಲ ಮನಸ್ಸನ್ನು ಬಲವಂತವಾಗಿ ನಿಯಂತ್ರಿಸಿಕೊಳ್ಳಲೆತ್ನಿಸುವಳು.

                ಮುಂದೆಲ್ಲ ನಡೆದದ್ದು ಕಾಕತಾಳೀಯವೇನೋ ಅನಿಸಿತವಳಿಗೆ…ಆ ಸಂಜೆ ಮಾಲ್‍ನಲ್ಲಿ ಅವಳಿಗೆ ಅನಿರೀಕ್ಷಿತವಾಗಿ ಹಳೇ ಗೆಳತಿ ರಮ್ಯ ಭೇಟಿಯಾಗಿಬಿಡೋದೇ?!!…ಮನೆಗೆ ಬಾ ಎಂದವಳು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದಳು. ತನುಶ್ರೀ ಇಪ್ಪತ್ತೈದು ವರ್ಷಗಳ ಹಿಂದಕ್ಕೆ ಜಾರಿಹೋಗಿದ್ದಳು. ಎದೆಯೆಲ್ಲ ಢವಢವ…ಮುಖವೆಲ್ಲ ಕೆಂಪು ಕೆಂಪು…ಮೈಯಲ್ಲಿ ಸಣ್ಣ ಪುಳಕ…ಗಂಟಲು ಕಟ್ಟಿದಂತಾಗಿತ್ತು. ಏಕೋ ಈ ಭಾವ ?!…

ರಮ್ಯ ತನ್ನ ಗಂಡ-ಮಕ್ಕಳನ್ನು ಪರಿಚಯಿಸಿದಳು.` ನೀ ಹೇಗಿದ್ದೀ ತನು?’ ಎಂದವಳ ಕೆನ್ನೆ   ಹಿಂಡಿದಾಗ ಅದೇ ಹಳೆಯ ಸಲುಗೆ. ತನು-` ಮತ್ತೆ ಇನ್ನೇನೇ ರಮ್ಯ ವಿಶೇಷ?…ನಿಮ್ಮತಂದೆ-ತಾಯಿ ಎಲ್ಲ ಚೆನ್ನಾಗಿದ್ದಾರಾ?’- ಸುತ್ತಿ ಬಳಸಿ ರಮ್ಯಳನ್ನು  ಏನೇನೋ ಪ್ರಶ್ನೆ ಕೇಳಿದರೂ ಹೃದಯದ ಮಾತು ಬಾಯಿಗೆ ಬರಲು ಹಿಂದೇಟು.

`ನಮ್ಮ ತಂದೆ ತೀರಿಹೋಗಿ ಹತ್ತು ವರ್ಷವಾಯ್ತು, ತಾಯಿ ಹೋದ ವರ್ಷ ಹೋಗಿಬಿಟ್ರು…ಇನ್ನು ನನಗೆ ಉಳಿದಿರೋದು ಅಂದ್ರೆ ನಮ್ಮಣ್ಣ ಮಾತ್ರ, ಗೊತ್ತಲ್ಲ ನಮ್ಮ ಪ್ರಸಾದಿ’ ಎಂದು ಮಾತು ನಿಲ್ಲಿಸಿದಾಗ ತನುವಿನ ಉಸಿರಾಟ ತೀವ್ರವಾಯ್ತು. `ಅವರೆಲ್ಲಿ…?’ ಹೂತು ಹೋದ ದನಿ. ರಮ್ಯ ಇದ್ದಕ್ಕಿದ್ದ ಹಾಗೆ ಮ್ಲಾನವದನಳಾದಳು. ` ಅವನ ವಿಷ್ಯ ಏನು ಕೇಳ್ತೀ…ನಮ್ಮತಂದೆ-ತಾಯಿಗಳಿಗೆ ತುಂಬಾ ನಿರಾಶೆ -ನೋವು ಕೊಟ್ಟುಬಿಟ್ಟ ಕಣೆ…ಅಮೇರಿಕಾಗೆ ಹೋದವನು ನಾಲ್ಕುವರ್ಷ ಈ ಕಡೇಗೇ ತಲೆಹಾಕಲಿಲ್ಲ. ಬಂದವನು ಅಮ್ಮನ ಬಲವಂತಕ್ಕೆ ಮದುವೆಯಾಗಿ ಫಾರಿನ್‍ಗೆ ಕರೆಸ್ಕೋತೀನಿ ಅಂತ ಸುಳ್ಳೇ ದಿನ ತಳ್ತಾ ನಮ್ಮತ್ತಿಗೆಗೆ ಮೋಸ ಮಾಡ್ಬಿಟ್ಟ. ಅಲ್ಲೇ ಅವನಿಗೆ ಮದುವೆಯಾಗಿತ್ತಂತೆ, ಯಾರೋ ಹೇಳಿದರು…ಒಟ್ಟಿನಲ್ಲಿ ಎಲ್ಲರಿಗೂ ನಂಬಿಕೆ ದ್ರೋಹ ಮಾಡಿದ…ನಾವೂ ತುಂಬ ಒಳ್ಳೆಯವನು ಅಂತ ನಂಬಿದ್ವಿ …ಮನೆಗೂ ಏನೂ ಹಣ ಕಾಸು ಸಹಾಯ ಮಾಡಲಿಲ್ಲ. ಅದೇ ಕೊರಗಲ್ಲಿ ನಮ್ಮಪ್ಪ ಹೋಗಿಬಿಟ್ರು…ಆಮೇಲೆ ನಮ್ತಾಯಿ…’  -ಅವಳ ಮಾತು ಪೂರ್ಣಗೊಳ್ಳುವ ಮನ್ನವೇ ತನು ಉಗುಳು ನುಂಗುತ್ತ ಅಲ್ಲಿಂದೆದ್ದು ಹೊರ ನಡೆದಿದ್ದಳು…ಯಾಕೋ ಒಮ್ಮೆಲೆ ಅವಳನ್ನಾವರಿಸಿದ ನಿರಾಶೆ- ಹತಾಷೆಯ ದಗ್ಧ ಭಾವನೆಗಳು ಪುಂಖಾನುಪುಂಖವಾಗಿ ನಿಟ್ಟುಸಿರ ರೂಪದಲ್ಲಿ ಹೊರಗುಕ್ಕಿದವು.             

                ಮನೆ ಮುಟ್ಟುವವರೆಗೂ ನಿಲ್ಲದ, ಒಂದೇ ಏದುಸಿರು……ನಿಡುಸುಯ್ಲು…ಎದೆಯಲ್ಲೇನೋ ಇರುಸು ಮುರುಸು…ಜೀವನದ ದಿಕ್ಕು-ದೆಸೆ,ವೈಚಿತ್ರ್ಯಗಳು ಅವಳನ್ನು ಘಾಸಿಗೊಳಿಸಿದ್ದವು. ಜೀವನ ಇಷ್ಟು ಸಂಕೀರ್ಣವೇ?… ಇಂಥ ನಿಗೂಢವೇ ಎಂಬ ಬೆರಗು!

                ಅಂದು ಆ ಮಟ ಮಟ ಮಧ್ಯಾಹ್ನದಲ್ಲಿ ಗೇಟು ಕಿರ್ರೆಂದಿತು. ಅದೇ ತಾನೆ ನಿದ್ದೆ ಹತ್ತಿತ್ತು. ಬಯ್ದುಕೊಳ್ಳುತ್ತ ತನು ಮೇಲೆದ್ದು `ಯಾರೂ?…’ಎಂದು ಕೋಪದಿಂದ ಘರ್ಜಿಸಿದಳು. ಉತ್ತರ ಬಾರಲಿಲ್ಲ. ವರಾಂಡದ ಕಟಕಟೆಯಿಂದ ಬಗ್ಗಿ ನೋಡಿದಳು. ಯಾರೋ ಜುಟ್ಟು ಪಿಳ್ಳೆಯ ಮುದುಕ. ಬಿಳೀಕಚ್ಚೆ ಪಂಚೆ-ಮಲ್ಲಿನ ಷರಟು-ಕೈಲೊಂದು ಬಟ್ಟೆ ಬ್ಯಾಗು….ಅವನ  ಹಿಂದೆ ಸೊಂಟದಲ್ಲಿ ಮಗುವನ್ನೆತ್ತಿಕೊಂಡ ಒಬ್ಬ ಯುವತಿ.

` ಯಾರ್ಬೇಕಿತ್ತು?’ ಕೇಳಿದಳು ತನು ಹುಬ್ಬು ಗಂಟಿಕ್ಕಿ. ` ನಾವು ಬಾಗಿಲೂರು ಮಠದಿಂದ ಬಂದಿದ್ದೇವೆ…ಮುಂದಿನ ತಿಂಗಳು ರಥೋತ್ಸವ…’ ಎಂದಾತ ಬ್ಯಾಗಿನಿಂದ ರಸೀತಿ ಪುಸ್ತಕವೊಂದನ್ನು ಹೊರತೆಗೆದು ಎದುರಿಗಿಟ್ಟವರು ಅವಳನ್ನೇ ದಿಟ್ಟಿಸಿ ನೋಡಿ ಪರಿಚಿತ ನಗೆ ಬೀರಿದರು. ಆತನದೇಕೋ ಉದ್ಧಟತನವೆನಿಸಿ, ಮುಖವನ್ನು ಸಡಿಲಿಸದೆ ಒಳಗೆ ಹೋಗಿ ನೂರು ರೂಪಾಯಿಯ ನೋಟೊಂದನ್ನು ತಂದು ಆತನ ಕೈಗಿಟ್ಟಳು.

`ನೀವು ತನುಶ್ರೀ ಅವರಲ್ಲವೇ?’ ಪರಿಚಿತ ದನಿಗೇಳಿ ಅವಳು ಆಶ್ಚರ್ಯದಿಂದ ಆತನನ್ನೇ ದೃಷ್ಟಿ ಕೀಲಿಸಿ ನೋಡಿದಳು. ಗುರುತು ಹತ್ತಲಿಲ್ಲ.

`ಓ…ನನ್ನ ಅವತಾರ ನೋಡಿ ನೀವು ಕನ್ ಫ್ಯೂಸ್ ಆಗಿರಬೇಕು…ನಾನು ಹೇಮಂತ ಕಣ್ರೀ…ಕಂಪ್ಯೂಟರ್ ಕ್ಲಾಸಿಗೆ ಬರ್ತಿದ್ನಲ್ಲ ಅದೇ ಹೇಮಂತ’ ಎಂದಾತ ಹಲ್ಲುಕಿರಿದಾಗ ಅವಳ ಹುಬ್ಬುಗಳು ಒಂದುಗೂಡಿದವು. ಕಣ್ಣು ಕಿರಿದು ಮಾಡಿ ನೋಡಿದಳು. ಪರಿಚಿತ ಚಹರೆ. ಅದೇ ಮಣಿ ಮಣಿಯಾದ ಹಲ್ಲು. ದಟ್ಟಗೂದಲಿನ ಕ್ರಾಪ್ ಕಟ್ ಹೋಗಿ ಗುಡಿ ಪೂಜಾರಿಯ ಪಿಳ್ಳೆ ಜುಟ್ಟು…. ನಗು ಬಂತು…`ಇದೇನು ಹೀಗಾಗಿದ್ದೀರಾ?’…ಮುಖದಲ್ಲಿ ಅಚ್ಚರಿಯ ಕೆನೆ!!..

ಆತ ನಗುತ್ತ ಉತ್ತರಿಸಿದರುಃ ` ಅದೊಂದು ಸ್ಟೇಜು…ಷೋಕಿ ವಯಸ್ಸು..ತಿಳುವಳಿಕೆ ಇಲ್ಲದ ಹುಡುಗು ಮನಸ್ಸು. ಮದುವೆಯಾದ್ಮೇಲೆ ನನ್ನ ಜೀವನದಲ್ಲಿ ಭಾರೀ ಛೇಂಜು….ನನ್ನ ಹೆಂಡ್ತಿ ಮಠದ ಸ್ವಾಮಿಗಳ ಫ್ಯಾಮಿಲಿಯವಳು…ಭಾರಿ ಮಡಿ, ಸಂಪ್ರದಾಯಸ್ಥೆ…ಕಟ್ಟು ನಿಟ್ಟು ಆಚಾರ-ವಿಚಾರ ಎಲ್ಲ…ಮೊದಲು ನಮ್ಮ ಮನೆಯಲ್ಲೂ ಇತ್ತು. ನಮ್ಮನೆಯವರೂ ಸಂಪ್ರದಾಯಸ್ಥರೇ . ನಾನದನ್ನ ಅಷ್ಟಾಗಿ ತಲೆಗೆ ಹಚ್ಚಿಕೊಂಡಿರಲಿಲ್ಲ…ಆದರೆ ನನ್ನವಳು ನನ್ನ ಫುಲ್ ಬದಲಾಯಿಸಿಬಿಟ್ಟಳು…ಏಕಾದಶಿ ಉಪವಾಸ…ಬೆಳಗ್ಗೆದ್ದು ಪೂಜೆ-ಪುನಸ್ಕಾರ ಯಾವುದೂ ತಪ್ಪಿಸೋ ಹಾಗೇ ಇಲ್ಲ…ಇವಳು ನನ್ನ ಮಗಳು, ಇದು ಮೊಮ್ಮಗು…ಇವತ್ತು ಸಂಕಷ್ಟವಾದ್ದರಿಂದ ಉಪವಾಸ, ನಮ್ಮ ಕೈಲಾಗೋ ಸೇವೆ ಅಂತ ಹೀಗೇ ಚಂದಾ ಕಲೆಕ್ಷನ್‍ಗೆ…’ ಮುಂದೆ ಆತನ ಮಾತುಗಳನ್ನು ಕೇಳಿಸಿಕೊಳ್ಳಲಾಗಲಿಲ್ಲ ಅವಳಿಗೆ. ನಿಷ್ಪಂದಳಾಗಿ ಬಂಡೆಯಂತೆ ಅಚಲಳಾಗಿ ಕುಳಿತುಬಿಟ್ಟಳು. ಆ ತಂದೆ- ಮಗಳು ಯಾವಾಗ ಜಾಗ ಖಾಲಿ ಮಾಡಿದರೋ ಅವಳರಿವಿಗೆ ಬರಲಿಲ್ಲ. ಮರಗಟ್ಟಿ ಕುಳಿತಿದ್ದಳು…ಅಂದಿನ ಸ್ಮಾರ್ಟ್ ಗೈ ಹೇಮಂತನನ್ನು ನೆನೆಸಿಕೊಂಡು ಅವಳ ಕಣ್ಣುಗುಡ್ಡೆಗಳು ಸ್ಥಿಮಿತವನ್ನೇ ಕಳೆದುಕೊಂಡಿದ್ದವು. ಮುಸ್ಸಂಜೆ ಹೊತ್ತಾದರೂ ಅವಳಿನ್ನೂ ಸುಧಾರಿಸಿಕೊಂಡಿರಲಿಲ್ಲ ತನಗಾದ ಹಟಾತ್ ಶಾಕಿನಿಂದ…ಪೇರುಸಿರು ಮಾಲೆ ಮಾಲೆಯಾಗಿ ಹೊರಗುಕ್ಕುತ್ತಿತ್ತು.

                `ಏನಾಯ್ತೇ, ಹೀಗೆ ಕೂತಿದ್ದೀ, ಗರಬಡಿದವಳ್ಹಾಗೆ?’-ಎಂದು ಹೊರಗಿನಿಂದ ಬಂದ ರಾಜೇಶ ಕೇಳಿದರೆ ಅವಳು ಮೂಕಿ.

                ಈ ನಡುವೆ ತನುಶ್ರೀ ತುಂಬಾನೇ ಬದಲಾಗಿದ್ದಳು. ರಾಜೇಶನಿಗೇ ಆಶ್ಚರ್ಯ, ಅವಳು ಈ ವಾಸ್ತವ ಬದುಕಿಗೆ ಅಗಾಧವಾಗಿ ಹೊಂದಿಕೊಂಡ ಬಗ್ಗೆ…. ಇದಕ್ಕೆ ಇನ್ನೂ ಒಂದು ಘಟನೆ ಕಾರಣವಾಗಿತ್ತು. ಆ ಒಂದು ದಿನ ಅವಳು ಮಾರುಕಟ್ಟೆಯಲ್ಲಿ ಆಕಸ್ಮಿಕವಾಗಿ ಸಿಕ್ಸ್ ಪ್ಯಾಕ್ ವಿಕ್ರಮನನ್ನು ಭೇಟಿಯಾಗಿದ್ದಳು. ಆದರವನು ಅವಳನ್ನು ನೋಡಿದರೂ ನೋಡದ ಹಾಗೆ ಸರಸರನೆ ಮುಂದೆ ಸಾಗಿದ್ದ. ಅನೇಕ ವರ್ಷಗಳ ನಂತರ ಅವನ ಮುಖದರ್ಶನವಾದಾಗ ಅವಳು ನಿಜಕ್ಕೂ ಅವನನ್ನು ಮಾತನಾಡಿಸಲು ಕುತೂಹಲಿಯಾಗಿದ್ದಳು.

                `ರೀ…ವಿಕ್ರಂ…ನಾನ್ರೀ ತನು, ನಿಮ್ಮ ಓಲ್ಡ್ ಫ್ರೆಂಡ್ ತನು..’ಎಂದವನನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಳು. ಅವನ ಮುಖದಲ್ಲಿ ಒಮ್ಮೆಲೆ ಕಿಕ್ಕಿರಿದ ಗಾಬರಿ!!. ಅವನ ಮಗ್ಗುಲಲ್ಲಿದ್ದ ಹೆಂಡತಿಯತ್ತ ಕಳ್ಳನೋಟ ಬೀರಿ ಭಯಭೀತನಾಗಿ ಕಕ್ಕಾಬಿಕ್ಕಿಯಾಗಿ ನಿಂತುಕೊಂಡ. ಸೌಜನ್ಯಕ್ಕೂ ಅವನು ಒಂದರೆಗಳಿಗೆ ನಿಂತು ಮಾತನಾಡಿಸುವುದಿರಲಿ, `ಹಲೋ’ ಎನ್ನಲೂ ಇಲ್ಲ. ತಪ್ಪಿತಸ್ಥನಂತೆ ತಲೆ ತಗ್ಗಿಸಿ ನಿಂತಿದ್ದ. ಅವನ ಹೆಂಡತಿಯತ್ತ ತಿರುಗಿ ನೋಡಿದರೆ ಧಡೂತಿ ಹೆಂಗಸು.. ಘಟವಾಣಿಯೇನೋ…ತಲೆಗೂದಲು ಹಣ್ಣಾಗಿದ್ದರೂ ಅವನ ಅಂಜುಬುರುಕುತನ-ಅಳುಕು ಸ್ವಭಾವ ಕಂಡು ಅವನ ಅಸಹಾಯಕ ಪರಿಸ್ಥಿತಿ ನೆನೆದು ಕರುಣೆಯುಕ್ಕಿತು.

`ನೋ.. ನಿಮಗೆ ತೊಂದ್ರೆ ಕೊಡಲ್ಲ ವಿಕ್ಕಿ…ಐ ಪಿಟಿ ಯೂ…’ ಎಂದು ಸ್ವಗತದಲ್ಲಿ ಹೇಳಿಕೊಂಡು ಮುಂದುವರಿದಳು ತನು.. ಅವನ ಪೆಚ್ಚಾದ ಮುಖಭಾವ ಕಂಡು ಮನದಲ್ಲೇ ಮರುಗಿದರೂ `ಓ..ನೀನೇನಾ ಆ ರಣಧೀರ?!!’ ಎಂದು ಬೆಚ್ಚಿಬಿದ್ದಿದ್ದಳು, 

                ದಾರಿಯುದ್ದಕ್ಕೂ ಅದೇ ವಿಚಾರ ಅವಳ ಮನಸ್ಸನ್ನು ಕೊರೆಯಿತು. ಯೋಚಿಸುತ್ತ ಹೋದಂತೆ ಅವಳೊಳಗಿನ ಕಲರವಗಳೆಲ್ಲ ಸ್ತಬ್ಧವಾಗಿ ಮನಸ್ಸು ಈಗ ಪ್ರಶಾಂತವಾದ ನೆಲೆಯಲ್ಲಿ ತೇಲುತ್ತಿತ್ತು. 

ಮುಚ್ಚಿದ ಅವಳ ಕಣ್ಣೆವೆಯೊಳಗೆ ಇದುವರೆಗೆ ಅಡಗಿ ಕುಳಿತು ವ್ಯರ್ಥ ಕಾಡುತ್ತಿದ್ದ ಹಳೆಯ ಕನಸಿನ ಹುಡುಗರಿಗೆಲ್ಲ ಅವಳು ಗೇಟ್ ಪಾಸ್ ನೀಡಿ `ಟಾ ಟಾ…ಬೈ ಬೈ ‘ಎಂದು ಕೈ ಬೀಸಿ ವಿದಾಯ ಹೇಳಿದ್ದಳು.

Related posts

ಧರ್ಮ

YK Sandhya Sharma

ಪ್ರಾಮಾಣಿಕತೆ

YK Sandhya Sharma

ನಂಟು

YK Sandhya Sharma

Leave a Comment

This site uses Akismet to reduce spam. Learn how your comment data is processed.