Image default
Dancer Profile

ಪ್ರತಿಭಾ ಸಂಪನ್ನೆ ಸಂಧ್ಯಾ ಕೇಶವ ರಾವ್

ಎಲೆಮರೆಯ ಕಾಯಂತೆ ತಮ್ಮ ಪಾಡಿಗೆ ತಾವು ನಾಟ್ಯರಂಗಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ಸಂಧ್ಯಾ ಕೇಶವರಾವ್ ಉತ್ತಮ ನಾಟ್ಯಗುರು, ಅಭಿನಯ ಕೌಶಲ್ಯಕ್ಕೆ ಹೆಸರಾದ ನೃತ್ಯಕಲಾವಿದೆ, ಶಕ್ತ ನಟುವನ್ನಾರ್, ನೃತ್ಯ ಕಾರ್ಯಕ್ರಮಗಳಿಗೆ ಭಾವಪೂರ್ಣವಾಗಿ ಹಾಡುವ ಪ್ರತಿಭಾವಂತ ಗಾಯಕಿ -ಒಟ್ಟಾರೆ ಪರಿಪೂರ್ಣ ಕಲಾಸಂಪನ್ನೆ.

ಮೂಲತಃ ಮಂಗಳೂರಿನವರಾದ ಸಂಧ್ಯಾ, ಅತ್ಯಂತ ಕಿರಿಯವಯಸ್ಸಿನಲ್ಲೇ `ರಂಗಪ್ರವೇಶ’ ಮಾಡಿದ ಬಾಲಪ್ರತಿಭೆ. ತಂದೆ ಹೆಸರಾಂತ ನಾಟ್ಯಾಚಾರ್ಯ-ಯು.ಎಸ್.ಕೃಷ್ಣ ರಾವ್. ಮನೆಯವರೆಲ್ಲ ನೃತ್ಯರಂಗದಲ್ಲಿ ಸಾಧನೆ ಮಾಡಿ, ಇಂದಿಗೂ ನಾಟ್ಯ ಕಲಿಸುತ್ತಿರುವ ಕಲಾಕುಟುಂಬ ಅವರದು. ತಂದೆ ತಾವು ಮಕ್ಕಳಿಗೆ ಭರತನಾಟ್ಯವನ್ನು ಹೇಳಿಕೊಡುವುದರ ಜೊತೆಗೆ, ವಿಶೇಷ ನೃತ್ಯತಜ್ಞರನ್ನೂ ಬೇರೆಡೆಗಳಿಂದ ಕರೆಸಿ, ಮನೆಯಲ್ಲೇ ಇಟ್ಟುಕೊಂಡು ಹಗಲಿರುಳೂ ನೃತ್ಯ ಕಲಿಯುವಂತೆ ಮಾಡಿದ ನೃತ್ಯನಿಷ್ಠರು. ಸಂಧ್ಯಾ, ಸುಮಾರು ನಾಲ್ಕುವರ್ಷಗಳಿಗೆ `ಥಕ ಥೈ ’ ಎಂದು ಅಡವುಗಳನ್ನು ಕಲಿಯತೊಡಗಿದವರು, ಆರುವರ್ಷಕ್ಕೇ ರಂಗಮಂಚವೇರಿ, ಪಂದನಲ್ಲೂರು ಶೈಲಿಯ ವಿದ್ವಾನ್. ರಾಜರತ್ನಂ ಪಿಳ್ಳೈ ಅವರ ನೇತೃತ್ವದಲ್ಲಿ  `ರಂಗಪ್ರವೇಶ’ ನೆರವೇರಿಸಿಕೊಂಡರು. ಮುಂದೆ ನೃತ್ಯಕೋವಿದ ವಿ.ಎಸ್.ಕೌಶಿಕ್ ಅವರಿಂದ ಹೆಚ್ಚಿನ ಶಿಕ್ಷಣ ಪಡೆದುಕೊಂಡರು. ಜೊತೆಜೊತೆಯಲ್ಲಿ ನೃತ್ಯಪ್ರದರ್ಶನಗಳನ್ನೂ ಕೊಡತೊಡಗಿದ್ದರು.

ಸಂಧ್ಯಾ ಒಬ್ಬ ಪರಿಪೂರ್ಣ ಕಲಾವಿದೆ. ಕರ್ನಾಟಕ ಪ್ರೌಢ ಶಿಕ್ಷಣಮಂಡಳಿ ನಡೆಸುವ ಪರೀಕ್ಷೆಯಲ್ಲಿ `ವಿದ್ವತ್ ‘ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದ ಅಗ್ಗಳಿಕೆ. ಬಾಲ್ಯದಿಂದ ಸುಶ್ರಾವ್ಯವಾಗಿ ಹಾಡುತ್ತಿದ್ದ ಸಂಧ್ಯಾ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಪಾಂಡಿತ್ಯ ಗಳಿಸಿದರು. ತಂದೆಯಿಂದ ರಕ್ತಗತವಾಗಿ ಬಂದ ಕಲೆ ಅವರಿಗೆ ನೋಡುನೋಡುತ್ತ ನಟುವಾಂಗ ಮಾಡುವುದು ಸಿದ್ಧಿಸಿತು. ತಬಲಾ ನುಡಿಸುವುದನ್ನು ಐದುವರ್ಷಗಳ ಕಾಲ ಕಲಿತು , ವಯೊಲಿನ್ ವಾದನವನ್ನು ಎಂಟುವರ್ಷಗಳು ಕಲಿತು ಸೊಗಸಾಗಿ ನುಡಿಸುವ ಕೌಶಲ್ಯ ಕರಗತವಾಗಿತ್ತು. ಸುಮಾರು ಎಸ್.ಎಸ್.ಎಲ್.ಸಿ. ಕಲಿಯುವ ಹೊತ್ತಿಗೆ ನಾಟ್ಯಗಳಿಗೆ ಸರಾಗವಾಗಿ ನಟುವಾಂಗ, ಹಾಡುಗಾರಿಕೆ ಮತ್ತು ತಬಲಾ ನುಡಿಸಾಣಿಕೆಯ ವಾದ್ಯಸಹಕಾರವನ್ನು ನೀಡುವಷ್ಟು ಸಬಲೆಯಾಗಿದ್ದು ಅವರ ವೈಶಿಷ್ಟ್ಯ. ಜೊತೆಗೆ ಹೆಚ್.ಕೆ ನಾರಾಯಣ್ ಮತ್ತು ಎನ್.ಗೋಪಾಲಕೃಷ್ಣನ್ ಮತ್ತು ಶ್ರೀನಿವಾಸ ಉಡುಪರಿಂದ ಸುಗಮ ಸಂಗೀತವನ್ನೂ ಕಲಿತ ಹೆಚ್ಚುಗಾರಿಕೆ ಇವರದು. ಹೀಗಾಗಿ ನಾಲ್ಕುದಶಕಗಳ ಹಿಂದೆಯೇ ಮಂಗಳೂರಿನಲ್ಲಿ ಈ ಹದಿಹರೆಯದ ಹುಡುಗಿಯ ಹೆಸರು ಸಾಕಷ್ಟು ಪ್ರಚಲಿತವಾಗಿತ್ತು.

ಸತತ ನಾಟ್ಯಾಭ್ಯಾಸ ರೂಢಿಸಿಕೊಂಡ ಇವರು ‘ ಅಭಿನಯ ಪರಿಣತಿ ಪಡೆದ ಕಲಾವಿದೆ’ ಎಂದು ಹೆಸರಾದರು. ನಾಡಿನಾದ್ಯಂತ, ಚೆನ್ನೈ, ಮುಂಬೈ, ನವದೆಹಲಿ ಮುಂತಾಗಿ ನಾಡಿನಾದ್ಯಂತ ಹಂಪಿ, ಪಟ್ಟದಕಲ್ಲು,ಕೊಟಾರೋತ್ಸವ, ಮೈಸೂರು ದಸರಾ ಮುಂತಾದ ಅನೇಕ ಪ್ರಮುಖ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡ ಕೀರ್ತಿ ಇವರದು. ಸಿಂಗಾಪುರ್, ಕೌಲಾಲಂಪುರ್,ದೋಹಾಗಳಲ್ಲೂ ನಾಟ್ಯ ಕಾರ್ಯಕ್ರಮ ನೀಡಿದ್ದಾರೆ. ದೂರದರ್ಶನದಲ್ಲಿ ಭರತನಾಟ್ಯ ಹಾಗೂ ಆಕಾಶವಾಣಿಯಲ್ಲಿ ಸಂಗೀತ ಕಲಾವಿದೆಯಾಗಿ ಮಾನ್ಯತೆ ಪಡೆ ದಿರುವ ಸಂಧ್ಯಾ, ಎರಡೂ ಮಾಧ್ಯಮಗಳಲ್ಲಿ ಅನೇಕ ಯಶಸ್ವೀ  ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶಿಷ್ಯರ ರಂಗಪ್ರವೇಶ ಕಾರ್ಯಕ್ರಮಗಳಿಗೆ ಹಾಡುಗಾರಿಕೆಯನ್ನು ನಿಭಾಯಿಸುತ್ತಾ ಜೊತೆಗೆ ನಟುವಾಂಗವನ್ನೂ ಸರಾಗವಾಗಿ ನಿರ್ವಹಿಸುವ ಗರಿಮೆಯುಳ್ಳವರು. ದೂರದರ್ಶನದ ಚಂದನವಾಹಿನಿಯಲ್ಲಿ ರುಕ್ಮಿಣಿ ಸ್ವಯಂವರ, ಕಾಂತಾರೇಶ್ವರ ಮಹಿಮೆ, ಭಕ್ತ ಸುಧಾಮ, ನವಶಕ್ತಿ-ನವದುರ್ಗೆಶಿವಲೀಲಾ ಮಹಿಮೆ ಮುಂತಾದ ನೃತ್ಯರೂಪಕಗಳನ್ನು ಪ್ರದರ್ಶಿಸಿದ್ದಾರೆ.

ಭರತನಾಟ್ಯ ಮತ್ತು ಸಂಗೀತವನ್ನು ಕಲಿಸುವ `ನೃತ್ಯ ವಿದ್ಯಾ ನಿಲಯ’ ಎಂಬ ನಾಟ್ಯಸಂಸ್ಥೆಯನ್ನು ಪ್ರಾರಂಭಿಸಿ ಮೂರುದಶಕಗಳಿಗೂ ಹೆಚ್ಚಾಗಿದೆ. ನಾಟ್ಯರಂಗದಲ್ಲಿ ಐದುದಶಕಗಳ ವಿಪುಲ ಅನುಭವವುಳ್ಳ, ವಿಶೇಷ ಅಭಿನಯ ಕೌಶಲ್ಯವನ್ನು ಹೊಂದಿರುವ  ಈ ನಿಷ್ಟಾವಂತ ಗುರುವನ್ನು ಅನೇಕ ಪ್ರಶಸ್ತಿ-ಪುರಸ್ಕಾರಗಳೂ ಹಿಂಬಾಲಿಸಿ ಬಂದಿವೆ. ಪೇಜಾವರ ಮಠದಿಂದ `ನೃತ್ಯ ಲಕ್ಷ್ಮಿ’, ಅದಮಾರುಮಠದಿಂದ `ನೃತ್ಯ ಕಲಾಕೋವಿದೆ’, ಶಿರಸಿ ನಾಗರಿಕ ವೇದಿಕೆಯಿಂದ `ಭರತನಾಟ್ಯ ಪ್ರವೀಣೆ’, ಕೃಷ್ಣಾಪುರಮಠದಿಂದ `ನೃತ್ಯ ಭಾರತಿ’ ಮತ್ತು ಚೆನ್ನೈನ ಕನ್ನಡ ಸಾಹಿತ್ಯ ಪರಿಷತ್ತಿನಿಂದ `ಅಭಿನಯ ಶಾರದೆ’ ಎಂಬ ಬಿರುದು ಸನ್ಮಾನಗಳು ದೊರಕಿವೆ.

ಸಂಧ್ಯಾ ನೃತ್ಯಸಂಯೋಜನೆ ಮಾಡಿರುವ ನೃತ್ಯರೂಪಕಗಳೆಂದರೆ, ಗಣೇಶ ಜನನ, ಸತಿ ದಾಕ್ಷಾಯಿಣಿ, ಜಗನ್ಮೋಹನ ಕೃಷ್ಣ, ಶ್ರೀನಿವಾಸ ಕಲ್ಯಾಣ, ಶ್ರೀಕೃಷ್ಣ ಸುಧಾಮ ಮತ್ತು ಮಹಿಷಾಸುರಮರ್ಧಿನಿ ಮುಂತಾದವು. ಪ್ರೌಢ ಅಭಿನಯದ ಈ ಸೃಜನಶೀಲ ಕಲಾವಿದೆಯ ನೃತ್ಯಪ್ರದರ್ಶನಗಳಿಗೆ ಪತ್ರಿಕೆಗಳಿಂದ ಮುಕ್ತಪ್ರಶಂಸೆಯ ವಿಮರ್ಶೆಗಳು ಹೊರಬಂದಿವೆ.ಕಲಾವಿದ ಕುಟುಂಬದಿಂದ ಬಂದಿರುವ ಸಂಧ್ಯಾ ಅವರ ಪತಿ ಕೇಶವರಾವ್ ಕೂಡ ಗಾಯಕರು, ಕೀಬೋರ್ಡ್ ವಾದಕರು, ಮಗ ಅನೀಶ್ ರಾವ್ ಭರತನಾಟ್ಯದಲ್ಲಿ ವಿದ್ವತ್ ಪಡೆದ ಉತ್ತಮ ನೃತ್ಯಕಲಾವಿದ ಮತ್ತು ಮೃದಂಗ ವಾದಕರು. ಸೊಸೆ ಪೂಜಾ ರಾವ್ ಅತ್ತೆಯಿಂದ ತರಬೇತಿ ಪಡೆದು ಉತ್ತಮ ಭರತನಾಟ್ಯ ಕಲಾವಿದೆ ಎನಿಸಿಕೊಂಡಿದ್ದಾರೆ.

Related posts

ಉದಯೋನ್ಮುಖ ಕಥಕ್ ನೃತ್ಯ ಕಲಾವಿದೆ ಶ್ರುತಿ ಗುಪ್ತ

YK Sandhya Sharma

ನೃತ್ಯ ನೈಪುಣ್ಯ ಸಾಧಕಿ-ರತ್ನಾ ಸುಪ್ರಿಯಾ ಶ್ರೀಧರನ್

YK Sandhya Sharma

ಸೃಜನಶೀಲ ನೃತ್ಯಕಲಾವಿದೆ ಪೂರ್ಣಿಮಾ ರಜನಿ

YK Sandhya Sharma

Leave a Comment

This site uses Akismet to reduce spam. Learn how your comment data is processed.