Image default
Dance Reviews

ಹರ್ಷಿತಳ ಕಣ್ಮನ ತುಂಬಿದ ಆಹ್ಲಾದಕರ ‘ಕಥಕ್’ ವಿಲಾಸ

ಅಂತರರಾಷ್ಟ್ರೀಯ ಖ್ಯಾತಿಯ ‘ಅಭಿನವ ಡಾನ್ಸ್ ಕಂಪೆನಿ’ಯ ಕಥಕ್ ನೃತ್ಯ ಜೋಡಿ-ಗುರುಗಳಾದ ನಿರುಪಮಾ ಮತ್ತು ರಾಜೇಂದ್ರ ಅವರು ತಮ್ಮ ಶಿಷ್ಯರ ‘’ರಂಗಮಂಚ್’’ ಕಾರ್ಯಕ್ರಮವನ್ನು ಪ್ರತಿಬಾರಿಯೂ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ಅಂದಿನ  ನರ್ತನದ ಹೂರಣವನ್ನು ಎತ್ತಿ ಹಿಡಿಯುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಆಕರ್ಷಕ ರಂಗಸಜ್ಜಿಕೆ ನಿರ್ಮಾಣ ಇನ್ನೊಂದು ಮಹತ್ವದ ಅಂಶ. ಕಣ್ಮನ ಸೆಳೆವ ಈ ಆವರಣದೊಳಗೆ ತಮ್ಮ ಕಲಾನೈಪುಣ್ಯ ಮೆರೆಯುವ ಶಿಷ್ಯರ ಪ್ರಸ್ತುತಿಗೊಂದು ಮನೋಹರ ಪ್ರಭಾವಳಿ ನಿರ್ಮಿಸುತ್ತಾರೆ. ನೃತ್ಯದ ಮೆರುಗನ್ನು ಹೆಚ್ಚಿಸುವ ಮೇಳದವರು ಕುಳಿತುಕೊಳ್ಳುವ ಜಗುಲಿಗೂ ಒಂದು ವಿಶಿಷ್ಟ ಸ್ಪರ್ಶ, ಇದು ‘’ಅಭಿನವ ನೃತ್ಯಸಂಸ್ಥೆ’’ಯ ವಿಶೇಷ.

ಹರ್ಷಿತಾ ಲಕ್ಕೂರ್ ಅಂದು ತಾದಾತ್ಮ್ಯದಿಂದ  ನೃತ್ಯಸೇವೆ ಅರ್ಪಿಸಿದ್ದು ಬೃಹತ್ ಹೆಬ್ಬಾಗಿಲುಗಳನ್ನು ಹೊಂದಿದ್ದ  ಶ್ರೀ ವೆಂಕಟೇಶಸ್ವಾಮಿಯ ದೈವೀಕ ಸನ್ನಿಧಿಯಲ್ಲಿ. ಎರಡೂ ಪಾರ್ಶ್ವಗಳಲ್ಲಿ ದೊಡ್ಡ ಶಂಖ-ಚಕ್ರಗಳ ಅಲಂಕರಣ. ದೇಗುಲದ ನವರಂಗದ ವೇದಿಕೆಯ ಪವಿತ್ರ ತಾಣದ ಮೇಲ್ಭಾಗದಲ್ಲಿ ತೂಗಾಡುತ್ತಿದ್ದ ಗಂಟೆಗಳ ಸಾಲು. ಅದಕ್ಕೆಂದೇ ಅಂದಿನ ಕಾರ್ಯಕ್ರಮದ ಶೀರ್ಷಿಕೆ ‘’ಘಂಟಿಕಾ’’. ಇಂಥ ಹೊಸ ಪರಿಕಲ್ಪನೆಗಳಲ್ಲಿ ಕಲಾತ್ಮಕವಾಗಿ ರಂಗಪ್ರವೇಶವನ್ನು ರೂಪಿಸುವ ಗುರುದ್ವಯರಾದ ನಿರುಪಮಾ ಮತ್ತು ರಾಜೇಂದ್ರ ಅವರ ಸಮರ್ಥ ಗರಡಿಯಲ್ಲಿ ರೂಹುತಳೆದ ಕಲಾಶಿಲ್ಪ  ಹರ್ಷಿತಾ ಕೆ.ಆರ್.ಇತ್ತೀಚಿಗೆ ದಯಾನಂದಸಾಗರ ಕಾಲೇಜಿನ ಆಡಿಟೋರಿಯಂನಲ್ಲಿ ತನ್ನ ಕಥಕ್ ”ರಂಗಮಂಚ”ವನ್ನು ವಿದ್ಯುಕ್ತವಾಗಿ ನೆರವೇರಿಸಿಕೊಂಡಳು. ಗುರು ನಿರುಪಮಾ ಅವರ ಉತ್ಸಾಹಪೂರ್ಣ ಸೊಗಸಾದ ‘ಪಡಂತ್‘ -ನೃತ್ಯದ ಸ್ವಾರಸ್ಯ ಹೆಚ್ಚಿಸಿತು.

          ಸುತ್ತ ದಟ್ಟವಾದ ಮಂಜು ಕವಿದ ಕೈಲಾಸಪರ್ವತದ ಒಡಲಿನಲ್ಲಿ, ಗಂಧರ್ವರ ಸಂಗೀತದ ಅಲೆಗಳಿಗೆ ಅನುಗುಣವಾಗಿ ತನುವನ್ನು ಬಳುಕಿಸುತ್ತ, ಕಲಾವಿದೆ, ಭೈರಾಗಿ-ಭೈರವರಾಗದ ಶಿವಸ್ತುತಿಯಿಂದ ತನ್ನ ಪ್ರಸ್ತುತಿಯನ್ನು  ಆರಂಭಿಸಿದಳು. ತನ್ನ ವಿಶಿಷ್ಟ ಆಂಗಿಕ ಚಲನೆ, ನವಿರಾದ ಸುಮನೋಹರ ಅಭಿನಯದಿಂದ ಮನಸೆಳೆದಳು. ತತ್ಕಾರಗಳು-ಚಕ್ಕರುಗಳ  ಮಿಂಚಿನಸಂಚಾರದಿಂದ ಶಿವನಿಗೆ ನೃತ್ಯ ನೈವೇದ್ಯ ಅರ್ಪಿಸಿದಳು.

 ಮುಂದೆ- ‘ಶಾಂತಾಕಾರಂ ಭುಜಗಶಯನಂ…’ ಶ್ಲೋಕದ ಅಭಿನಯ ಸೊಗಡಿನಿಂದ ತೀನ್ ತಾಳದ ಶುದ್ಧ ನೃತ್ತದ ಕಲಾನೈಪುಣ್ಯವನ್ನು ನಗುಮೊಗದಿಂದ ಸೊಗಸಾಗಿ ಅಭಿವ್ಯಕ್ತಿಸಿದಳು. ವಿಲಂಬಿತ ಕಾಲದಿಂದ ಆರಂಭಿಸಿ, ಮಧ್ಯಮ ಕಾಲ, ಧ್ರುತಕಾಲದ ಲಯವಿನ್ಯಾಸಗಳನ್ನುಪುಟ್ಟ ಪುಟ್ಟ ಜೋಡಣೆಯ ನೃತ್ತ ಗೆಜ್ಜೆಗಳಲ್ಲಿ ಉಳಿದಳು. ಹರ್ಷಿತಳ ಲಯಜ್ಞಾನ, ತಾಳಗಳ ನೈಪುಣ್ಯ ಸುವ್ಯಕ್ತವಾಯಿತು. ಸೂಕ್ಷ್ಮ ಅಂಗಚಲನೆಗಳು ಮನಮೋಹಕವಾಗಿದ್ದವು. ರಂಗದಲ್ಲಿ ನಿಂತಲ್ಲೇ ಮತ್ತು ರಂಗಾಕ್ರಮಣದಲ್ಲಿ  ರಂಗದ ತುಂಬಾ ನಿರಂತರ ಹಾಕಿದ 27 ಚಕ್ಕರುಗಳಿಂದ, ಕಿವಿದುಂಬಿದ ತತ್ಕಾರಗಳಿಂದ ವಿವಿಧ ಅಂಗವಿನ್ಯಾಸಗಳ ಮೂಲಕ ತಾನೊಬ್ಬ ಭರವಸೆಯ ಕಲಾವಿದೆ ಎಂಬುದನ್ನು ಹರ್ಷಿತಾ ಅಂದು ಸಾಬೀತುಗೊಳಿಸಿದಳು. ತಾನೇ ‘ಬೋಲ್’ ಗಳನ್ನು ನಿರೂಪಿಸಿ ಅದನ್ನು ಸಮರ್ಥವಾಗಿ ಪ್ರಸ್ತುತಿಪಡಿಸಿದಳು. ಜೊತೆಗೆ ಸವಾಲ್-ಜವಾಬ್ ಜುಗಲ್ಬಂದಿಯಲ್ಲಿ ತನ್ನ ನೃತ್ತ ಸಾಮರ್ಥ್ಯವನ್ನು ಪ್ರದರ್ಶಿಸಿ ‘ಸೈ’ ಎನಿಸಿಕೊಂಡಳು. ಆಶುವಾಗಿ ದತ್ತವಾದ ಬೋಲ್ ಗಳನ್ವಯ ನೃತ್ತಗಳನ್ನು ನಿರೂಪಿಸಿ  ಮೆಚ್ಚುಗೆಯ ಕರತಾಡನ ಪಡೆದಳು. ನೃತ್ತಗಳಲ್ಲೇ ಕೃಷ್ಣ, ರಾಮ, ಮಹಾದೇವನ ಪಾತ್ರಚಿತ್ರಣಗಳನ್ನು ತುಕಡಾ, ಅಭಿನಯಗಳಲ್ಲಿ ಕಂಡರಿಸಿದಳು.

ಅನಂತರ- ಸಂತ ತುಳಸೀದಾಸರ ಕೃತಿಯಲ್ಲಿ ‘ ಟುಮಕ್ ಚಲತ್ ರಾಮಚಂದ್ರ..’ – ಎಂದು ತಾಯಿ ಕೌಸಲ್ಯ ವಾತ್ಸಲ್ಯಭಾವದಿಂದ ಮಗು ರಾಮನೊಡನೆ ಸಂಭಾಷಿಸುತ್ತ ಮೈಮರೆಯುತ್ತಾಳೆ. ಶ್ರೀರಾಮಚಂದ್ರನ ಕುರಿತ ಈ ತುಮರಿಯ ಭಾವಾಭಿನಯದಲ್ಲಿ ಹರ್ಷಿತಾ, ತನ್ನ ಪ್ರೌಢ ಅಭಿನಯವನ್ನು ಸಾಕ್ಷಾತ್ಕರಿಸಿದಳು. ಅಣ್ಣಮಾಚಾರ್ಯರ ‘ಅದಿವೋ ಅಲ್ಲದಿವೋ’-ತಿರುಪತಿ ವೆಂಕಟೇಶನ ಮಹಿಮೆಯನ್ನು ಸಾರುವ ಕೀರ್ತನೆಯನ್ನು ವಿವಿಧ ಸಂಚಾರಿಗಳ ಸಂಕ್ಷಿಪ್ತ ಅಭಿನಯದ ಸಿಂಚನದಿಂದ, ದೈವೀಕತೆ ಮೆರೆದು, ಭಕ್ತಿ ತಾದಾತ್ಮ್ಯತೆಯಿಂದ ನೆರೆದ ರಸಿಕರನ್ನು ಮಂತ್ರಮುಗ್ಧರನ್ನಾಗಿಸಿದಳು. ಅಂತ್ಯದ ಜನಸಮ್ಮೋಹಿನಿ ರಾಗದ  ‘ತರಾನ’ -ಸುಮನೋಹರ ಅಂಗವಿನ್ಯಾಸಗಳ ಚೇತೋಹಾರಿ ನೃತ್ತಗಳ ಸಂಭ್ರಮ ಚೆಲ್ಲುತ್ತ, ಕಲಾವಿದೆಯ ಮುದವಾದ ಅಭಿನಯ ಭಾವಪೂರ್ಣತೆಯೊಂದಿಗೆ ಸಂಪನ್ನಗೊಂಡಿತು.

Related posts

ತಾಯಿ-ಮಗನ ಅಪರೂಪದ ರಂಗಪ್ರವೇಶ

YK Sandhya Sharma

ಆಕರ್ಷಕ- ಅನ್ವೀ ಡಾಗ ಕಥಕ್ ನರ್ತನ

YK Sandhya Sharma

Leela Natya Kalavrinda – Navarasa Ramayana

YK Sandhya Sharma

Leave a Comment

This site uses Akismet to reduce spam. Learn how your comment data is processed.