ಸಂಕ್ರಾಂತಿಯ ಹಿಗ್ಗು ಹರಡಿದ ನಲುಮೆಯ ವಾತಾವರಣ. ಸಿಹಿಗಬ್ಬಿನ ಜಲ್ಲೆ ತೂಗಾಡುವ ತೋರಣಗಳು. ಬೆಳಕಿನ ಹಣತೆಯ ಸುಂದರ ರಂಗವಲ್ಲಿಗಳಿಂದ ಸಜ್ಜಿತವಾದ ಮನೋಹರ ರಂಗಸಜ್ಜಿಕೆಯ ಆವರಣದೊಳಗೆ ದೇವಕನ್ನಿಕೆಯಂತೆ ಶೋಭಿಸಿದ ನೃತ್ಯ ನತಾಷ ಆಶ್ರಿತಾ ಗಂಗಾಧರ್. ಅಂದವಳು ನೆರೆದ ಕಲಾರಸಿಕರೆಲ್ಲರ ಕಣ್ಗೂಸು.
ಅಂತರರಾಷ್ಟ್ರೀಯ ನೃತ್ಯ ಕಲಾವಿದ-ವಾಗ್ಗೇಯಕಾರ ಡಾ. ಸಂಜಯ್ ಶಾಂತಾರಾಂ ರೂಪಿಸಿದ ನೃತ್ಯಶಿಲ್ಪ ಆಶ್ರಿತಳ ಪಾಲಿಗಂದು ದಿವ್ಯದಿನ. ರಂಗ ಪದಾರ್ಪಣೆಯ ಚಿರಸ್ಮರಣೀಯ ಗಳಿಗೆ. ಮೊದಲಿಗೆ ಗುರು ಸಂಜಯ್ ‘ಹಿಂದೋಳ’ರಾಗದಲ್ಲಿ ರಚಿಸಿದ ‘ಪುಷ್ಪಾಂಜಲಿ’ ರೂಪದ ಭೂದೇವಿ ನಮನ. ತನ್ನ ಪದಾಘಾತವನ್ನು ಕ್ಷಮಿಸುವಂತೆ ಭೂದೇವಿಯನ್ನು ಪ್ರಾರ್ಥಿಸುತ್ತ ಅವಳ ಅಮೂಲ್ಯ ಪ್ರಕೃತಿ-ಗುಣಸಂಪತ್ತುಗಳ ಮನಸಾರೆ ಸ್ತುತಿಸುತ್ತ, ತನ್ನಡಿಗಳನ್ನು ವಿನಮ್ರಭಾವದಿಂದ ನೆಲದ ಮೇಲಿರಿಸಿದಳು. ಭಾವಪೂರ್ಣವಾಗಿ ಹಾಡಿದ ಸಂಜಯರ ಗೀತೆಗೆ ಆಶ್ರಿತಾ, ತನ್ನ ಕಲಾಕೌಶಲ್ಯದ ಮೋಹಕ ನೃತ್ತಗಳ ನಾಟ್ಯಾಭಿನಯಗಳಿಂದ ನೃತ್ಯನೂಪುರ ತೊಡಿಸಿದ ಕ್ಷಣಗಳು ಮನನೀಯವಾಗಿತ್ತು.
‘’ ಶಿವಪ್ರಿಯ’’ ನೃತ್ಯಸಂಸ್ಥೆಯ ಮೂಲಕ ಸಂಜಯ್ ನೆರವೇರಿಸಿದ 53 ನೆಯ ರಂಗಪ್ರವೇಶ ಇದಾಗಿದ್ದುದು ಇಂದಿನ ವಿಶೇಷ ಸಂಗತಿಯಾಗಿತ್ತು. ಸಂಜಯರೇ ರಚಿಸಿದ ಸುಮನೇಶರಂಜಿನಿ ರಾಗದ ‘ಪದವರ್ಣ’-ಶಿವ-ಶಿವೆಯರ ಅವಿನಾಭಾವವನ್ನು ಕಲಾವಿದೆ ದೈವೀಕವಾಗಿ ಸಾಕ್ಷೀಕರಿಸುವ ಹೃದಯಸ್ಪರ್ಶೀ ಸಂಚಾರಿಗಳು ಕಣ್ಣು ಮಿಟುಕಿಸದಂತೆ ನೋಡುವಂತೆ ಮಾಡಿದವು. ಮಾನಸ ಸರೋವರದಲ್ಲಿ ಮಿಂದ ಶಿವ, ಒದ್ದೆಯಾದ ತನ್ನ ಜಟಾಜೂಟವನ್ನೊದರಿ ನೆತ್ತಿಯ ಮೇಲೆ ಗಂಟಿಕ್ಕಿ, ಅದರ ಆಮೇಲೆ ಚಂದ್ರನ ಮುಡಿದು, ರುದ್ರಾಕ್ಷಿ ಮತ್ತು ಚರ್ಮಾಂಬರವನ್ನು ಧರಿಸಿ, ಹರಿದಾಡುತ್ತಿದ್ದ ಪನ್ನಗಗಳನ್ನು ನಾಗಾಭರಣವಾಗಿ ತೊಟ್ಟು, ನಂದಿಯೇರಿ ಕೈಲಾಸಕ್ಕೆ ಹೊರಟ ದೃಶ್ಯವನ್ನು ಕಲಾವಿದೆ ತನ್ನ ಸೊಗಸಾದ ಅಭಿನಯದಿಂದ ಕಟ್ಟಿಕೊಟ್ಟಳು. ಭಸ್ಮಧಾರಿ ಶಿವನ ‘ಸಂಧ್ಯಾ ತಾಂಡವ’’ವನ್ನು ಅನನ್ಯ ಭಂಗಿಗಳು ಮತ್ತು ಆಕಾಶಚಾರಿಗಳಿಂದ ಅಮೋಘವಾಗಿ ಪ್ರಸ್ತುತಪಡಿಸಿದಳು.
ಎರಡನೆಯ ಸಂಚಾರಿಯಲ್ಲಿ, ಇಂಥ ಶಿವನನ್ನು ಗಾಢವಾಗಿ ಆರಾಧಿಸುತ್ತಿದ್ದ ಪಾರ್ವತಿಯನ್ನು, ಶಿವ ವೃದ್ಧ ಬ್ರಾಹ್ಮಣ ವೇಷದಲ್ಲಿ ಬಂದು, ಶಿವನನ್ನು ಪರಿಪರಿಯಾಗಿ ನಿಂದಿಸಿ, ಹಾಸ್ಯಮಾಡಿ, ತನ್ನನ್ನು ಮದುವೆಯಾಗಲು ಕೋರುವ, ಕಡೆಗೆ ಅವಳಿಗೊಲಿವ ಸ್ವಾರಸ್ಯಕರ ಸನ್ನಿವೇಶವನ್ನು ಆಶ್ರಿತಾ ನಾಟಕೀಯ ಮುದವಾದ ಅಭಿನಯದಿಂದ ನಿರೂಪಿಸಿದಳು. ಆಕೆಯ ಭಂಗಿಗಳ ಲಾಸ್ಯ, ನೃತ್ತಗಳ ರಮ್ಯತೆ ಉತ್ಸಾಹದ ಚಿಮ್ಮುಗಳಾದದ್ದು ಅನನ್ಯ. ಮೂರನೆಯ ಕಥಾನಕದಲ್ಲಿ ಶಿವ, ಬ್ರಹ್ಮನೊಡನೆ ಕಾದು, ಬ್ರಹ್ಮಕಪಾಲ ಕರಕ್ಕೆ ಬೆಸೆದುಕೊಳ್ಳುವ ಶಾಪ ಪಡೆದು, ಅನಂತರ ವಿಷ್ಣುವಿನಿಂದ ವಿಶಾಪ ಪಡೆಯುವಂಥ ಭಕ್ತಿಯ ಪರಾಕಾಷ್ಟೆಯ ಘಟನೆಯಲ್ಲಿ ಹೃದಯದಲ್ಲಿ ದೈನ್ಯತೆ, ಮುಖದಲ್ಲಿ ಆರ್ದ್ರತೆ, ಕಣ್ಣಲ್ಲಿ ಭಾಷ್ಪಾಂಜಲಿ ಈ ಕನ್ನಡದ ವಿನೂತನ ಪದವರ್ಣದ ವೈಶಿಷ್ಟ್ಯ. ಎಲ್ಲೂ ಯಾಂತ್ರಿಕವೆನಿಸದ ನವವಿನ್ಯಾಸದ ಚಲನೆಗಳು, ನೃತ್ತೋಲ್ಲಾಸ ಕಂಗೊಳಿಸಿದವು.
ಮುಂದೆ ಅಂತಃಪುರ ಗೀತೆಯ ಮಾದರಿಯ ದಿ. ಗೋಟೂರಿ ರಚನೆಯ ಹೊಯ್ಸಳ ಚಕ್ರೇಶ್ವರಿ ಶಾಂತಲೆಯನ್ನು ಕುರಿತ ‘ಧೃತನಾದ ವೀಣೆ, ಶ್ರುತಿರಮ್ಯ ಗಾನೆ’ ಬೇಲೂರಿನ ಶಿಲಾಬಾಲಿಕೆ ನಾಟ್ಯವಾಡುವಂತೆ ಭಾಸವಾಯಿತು. ಸಿಂಗಾರಭರಿತ ಲಾಸ್ಯದ ಬೆಡಗು ತುಂಬಿದ ನಡೆ, ಸ್ಮಿತವದನ, ಚೆಂದದಭಂಗಿಗಳು ಕನಸಿನ ಕನ್ಯೆಯ ದರ್ಶನ ನೀಡಿದವು. ಅನಂತರದ ಶೃಂಗಾರಾತ್ಮಕ ‘ಜಾವಳಿ’ಯಲ್ಲಿ, ಸುಬ್ರಹ್ಮಣ್ಯಸ್ವಾಮಿಯ ಪತ್ನಿ ದೇವಯಾನಿ, ತನ್ನ ಸಖಿಯಲ್ಲಿ ಗಂಡನ ಪರಸ್ತ್ರೀ ವಲ್ಲಿಯ ಬಗೆಗಿನ ಮೋಹಪಾಶದ ಬಗ್ಗೆ ದುಗುಡ ತೋಡಿಕೊಳ್ಳುತ್ತ, ವಿಲಪಿಸುವ ದೃಶ್ಯವನ್ನು ಆಶ್ರಿತಾ ಪರಿಣಾಮಕಾರಿಯಾಗಿ ಅಭಿನಯಿಸಿದಳು. ಸವತಿಯತ್ತ ಆಕರ್ಷಿತನಾದ ಪತಿಯ ವರ್ತನೆ ಕಂಡು ಮ್ಲಾನವದನಳಾಗಿ ‘ನನ್ನ ಮರತೇ ಹೋದನಲ್ಲೇ ಸಖಿ’ ಎಂದು ದುಃಖಿಸುತ್ತಿದ್ದಾಳೆ, ಅವನ ನಿರೀಕ್ಷೆಯಲ್ಲೇ ವ್ಯಾಕುಲಳಾಗಿ ಕೋಪಗೊಂಡವಳು, ಮರಳಿ ಬಂದ ಗಂಡನ ಮೊಗ ಕಂಡಕೂಡಲೇ ಎಲ್ಲ ಮರೆತು ಅವನನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಆಪ್ತತೆಯನ್ನು ಜಿನುಗಿಸಿದ ಕಲಾವಿದೆಯ ಅಭಿನಯ ಮನೋಜ್ಞ. ಹುರುಪು-ಉತ್ಸಾಹಗಳ ಆಗರವಾಗಿದ್ದ ‘ತಿಲ್ಲಾನ’ದಲ್ಲಿ, ಆಶ್ರಿತಾ, ನಟುವಾಂಗದ ತಾಳಕ್ಕೆ ಹೆಜ್ಜೆಯಾಗುತ್ತ ತನ್ಮಯಗೊಳಿಸಿದಳು.
‘ಮಂಗಳ’ದಲ್ಲಿ ಗುರು-ಶಿಷ್ಯೆಯರಿಬ್ಬರೂ ಆನಂದದಿಂದ ನರ್ತಿಸುತ್ತ ಸಮರಸತೆ ತೋರಿ ಶಿವನಿಗೆ ಧನ್ಯತಾರ್ಪಣೆ ಮಾಡಿದ ನೋಟ ನೆನಪಿನಲ್ಲಿ ಉಳಿಯಿತು.