ನಾಟ್ಯರಂಗದ ಪ್ರಖ್ಯಾತ ಹೆಸರು ಕಿರಣ್ ಸುಬ್ರಹ್ಮಣ್ಯಂ. ದೇಶ-ವಿದೇಶಗಳಲ್ಲಿ ವಿಶಿಷ್ಟ ನೃತ್ಯಪಟುವಾಗಿ ತಮ್ಮ ಛಾಪು ಬೀರಿರುವ ಕಿರಣ್, ಭರತನಾಟ್ಯ ಸ್ವರೂಪದ ಬಗೆಗಿನ ಪ್ರಾವೀಣ್ಯತೆ-ಜ್ಞಾನಸಂಪತ್ತು ಮತ್ತು ಮಹತ್ವಾಕಾಂಕ್ಷೆಗೆ ಪರ್ಯಾಯ ಪುರುಷ. ಜೀವನದಲ್ಲಿ ಅವರು ಕ್ರಮಿಸಿಬಂದಿರುವ ಹಾದಿಯನ್ನು ಅವಲೋಕಿಸಿದರೆ ಕಲೆಯ ಬಗೆಗಿನ ಅವರ ಅತೀವ ಕಾಳಜಿ, ಕಲಾಸಿದ್ಧಿಯ ಮಜಲುಗಳ ಪರಿಚಯವಾಗುವುದು.

ಮೂಲತಃ ಮೈಸೂರಿನ ಚಾಮರಾಜನಗರದವರು. ತಂದೆ ಸುಬ್ರಹ್ಮಣ್ಯಂ ಸಂಸ್ಕೃತ ವಿದ್ವಾಂಸರು, ಉತ್ತಮ ಐ.ಪಿ.ಎಸ್. ಅಧಿಕಾರಿ, ತಾಯಿ ರತ್ನ ಸಂಗೀತಬಲ್ಲ ಸದ್ಗೃಹಿಣಿ, ಸಂಪ್ರದಾಯಸ್ಥ -ಸಂಸ್ಕಾರಯುತ ಮನೆತನ. ಮಗನ ಕಣ್ಣುಗಳಲ್ಲಿದ್ದ ತೇಜಸ್ಸು, ಪ್ರಕಾಶ ಕಂಡು ನೃತ್ಯದ ಬಗ್ಗೆ ಅವರಲ್ಲಿ ಸ್ಪೂರ್ತಿ ತುಂಬಿದವರು ತಂದೆ. ಪುರುಷನರ್ತಕರಿಗೆ ಪ್ರಾಧಾನ್ಯತೆ ಮತ್ತು ಬೇಡಿಕೆ ಇಲ್ಲದ ಕಾಲದಲ್ಲಿ ಕಿರಣರ ಮನಸ್ಸಿನಲ್ಲಿ ಚಿಗುರಿದ್ದು, ನಟ ಕಮಲಹಾಸನರ ಶಾಸ್ತ್ರೀಯ ನೃತ್ಯಗಳನ್ನು ನೋಡಿ ನರ್ತಿಸುವ ಬಯಕೆ. ಅದು ಆಕಾಂಕ್ಷೆಯಾಗಿ ಅಭೀಪ್ಸೆಯಾಗಿ ರೂಹುತಳೆದು ನಾಟ್ಯಗುರು ಪದ್ಮಿನಿ ರವಿ ಅವರಲ್ಲಿ ಭರತನಾಟ್ಯ ಕಲಿಯತೊಡಗಿದರು.

ಪ್ರತಿಭೆ ದೈವದತ್ತವಾಗಿದ್ದುದರಿಂದ ಬಹುಬೇಗ ವಿದ್ಯೆ ಕರಗತವಾಗುತ್ತ, ಹೆಚ್ಚಿನ ಸಾಧನೆಗೆ ಮನತುಡಿಯತೊಡಗಿತು. ಚೆನ್ನೈ ಕಲಾಕ್ಷೇತ್ರ ಖ್ಯಾತಿಯ `ಧನಂಜಯನ್ಸ್’ ಅವರಲ್ಲಿ ಹೆಚ್ಚಿನ ಶಿಕ್ಷಣಾಭ್ಯಾಸಕ್ಕಾಗಿ ಪ್ರತಿತಿಂಗಳೂ ಕಡೆಯ ಎರಡುವಾರಗಳು ಮದರಾಸಿನತ್ತ ಪಯಣ. ದಿನವಿಡೀ ನೃತ್ಯವ್ಯಾಸಂಗ, ಸತತ ಅಭ್ಯಾಸ. ತಪಸ್ಸಿನಂತೆ ಸಾಗಿದ ಆ ಶಿಕ್ಷಣಾರ್ಜನೆಯ ದಿನಗಳು ಅವರ ಬದುಕಿನ ಮರೆಯಲಾರದ ಅಧ್ಯಾಯ. ‘ದ್ವಿ ವ್ಯಕ್ತಿಗಳ ನೃತ್ಯಪ್ರಸ್ತುತಿ’ ಯ ವಿಶಿಷ್ಟ ತರಬೇತಿ, ಅದರ ಮೂಲವ್ಯಾಕರಣ, ತಂತ್ರಾಭ್ಯಾಸ, ಮನೋಧರ್ಮ, ನೃತ್ಯವೈಶಿಷ್ಟ್ಯಗಳಲ್ಲಿ ಪರಿಣತಿ ಸಾಧಿಸುವ ಉದ್ದೇಶಕ್ಕಾಗಿ ಧನಂಜಯರಲ್ಲಿ ಶಿಷ್ಯತ್ವ. ಅಷ್ಟುಹೊತ್ತಿಗೆ ಪದ್ಮಿನಿ ರವಿಯವರಲ್ಲಿ ನೃತ್ಯ ಕಲಿಯುತ್ತಿದ್ದ ಸಂಧ್ಯಾ ಅವರ ಉತ್ತಮ ಗೆಳೆತನದ ಸಾಂಗತ್ಯ. `ಜೋಡಿ ನೃತ್ಯ’ ದ ಸಮರಸತೆಯ ಬಗ್ಗೆ ಹೆಚ್ಚಿನ ಕಲಿಕೆಗಾಗಿ ಇಬ್ಬರೂ ಅರ್ಧತಿಂಗಳು ಚೆನ್ನೈಗೆ ಹೋಗಿಬರುತ್ತಿದ್ದರು. ಇನ್ನರ್ಧ ತಿಂಗಳ ಅವಧಿಯಲ್ಲಿ ಕಿರಣ್, ಬೆಂಗಳೂರಿನಲ್ಲಿ ಹಲವು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿ, ಬಂದ ಗಳಿಕೆಯ ಹಣದಿಂದ ಗುರುಗಳಿಗೆ ಶುಲ್ಕಸಲ್ಲಿಸಿ, ಪರಿಶ್ರಮದಿಂದ ಅರ್ಜಿಸಿದ `ವಿದ್ಯೆಯ ಮಹತ್ವ’ವನ್ನು ಅವರು ಇಂದೂ ನೆನೆಯುತ್ತಾರೆ.

ನೃತ್ಯಸಾಧನೆಯ ಗುರಿಯಿಂದಾಗಿ ಕಿರಣರ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಧ್ಯದಲ್ಲೇ ನಿಂತರೂ ಕಲಾಪಯಣ ನಿಲ್ಲಲಿಲ್ಲ. ನೃತ್ಯವನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಅವರ ನಿಲುವಿಗೆ ಸಾಕಷ್ಟು ವಿರೋಧಗಳು ಕಂಡು ಬಂದರೂ ಛಲ ಅವರನ್ನು ಗಟ್ಟಿಯಾಗಿಸಿತ್ತು. ನೃತ್ಯ ಕಲಿಸುತ್ತ, ತಾವೂ ಕಲಿಯುತ್ತ, ನೂರಾರು ಮಕ್ಕಳಿಗೆ ಮಾರ್ಗದರ್ಶಕ ನಾಟ್ಯಗುರುಗಳಾದರು. ಸಂಧ್ಯಾರೊಂದಿಗೆ ಮದುವೆಯನಂತರ `ಕಿರಣ್ಸ್’ನೃತ್ಯಶಾಲೆ ಆರಂಭ. ಸುಮಾರು ಮೂರುದಶಕಗಳಿಗೂ ಹೆಚ್ಚಿನ ನೃತ್ಯಸೇವೆ. ಮಗಳು `ರಸಿಕಾ’ ಆಗಮನಾನಂತರ ನೃತ್ಯಶಾಲೆಗೆ `ರಸಿಕಾ ಆರ್ಟ್ ಫೌಂಡೆಷನ್ ’ ಎಂಬ ಅಭಿನಾಮವಾಯಿತು. ಸಾವಿರಾರು ಜನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ವಿಪುಲ ಸಂಖ್ಯೆಯ ಉತ್ತಮ ನೃತ್ಯಕಲಾವಿದರನ್ನು ನಾಟ್ಯರಂಗಕ್ಕೆ ಅರ್ಪಿಸಿರುವ ಕಿರಣ್, ಅತ್ಯುತ್ತಮ ನಾಟ್ಯಕೋವಿದರು, ಸೃಜನಶೀಲ ನೃತ್ಯಸಂಯೋಜಕರು, ಸಮರ್ಥ ನಟುವನ್ನಾರ್, ಪ್ರಯೋಗಶೀಲರಾಗಿ ಸುವಿಖ್ಯಾತರಾಗಿದ್ದಾರೆ.
ಪ್ರಖ್ಯಾತ ಅಭಿನೇತ್ರಿ ಹೇಮಾಮಾಲಿನಿ ಅವರೊಂದಿಗೆ ಮುಖ್ಯಪಾತ್ರದಲ್ಲಿ, ದೇಶ-ವಿದೇಶಗಳಲ್ಲಿ ಅನೇಕ ನೃತ್ಯಪ್ರದರ್ಶನ ನೀಡಿರುವ ಹೆಗ್ಗಳಿಕೆ ಇವರದು. ಕೇಂದ್ರ ದೂರದರ್ಶನದ `ಗ್ರೇಡೆಡ್ ‘ ಕಲಾವಿದರಾಗಿ ಅನೇಕ ವಿಶೇಷ ನೃತ್ಯಪ್ರಸ್ತುತಿಗಳ ಮೂಲಕ ಕಲಾರಸಿಕರ ಗಮನ ಸೆಳೆದಿರುವ ಕಿರಣ್, ಐ.ಸಿ.ಸಿ.ಆರ್.ನ ಮಾನ್ಯತೆ ಪಡೆದ ಕಲಾವಿದರೂ ಕೂಡ. ಅನೇಕ ಕಾರ್ಪೋರೆಟ್ ಕಾರ್ಯಕ್ರಮಗಳು, ಪ್ರಾಡಕ್ಟ್ ಲಾಂಚ್ ಗಳಲ್ಲಿ ಭಾಗವಹಿಸಿರುವ `ರಸಿಕಾ’ತಂಡ, ನವದೆಹಲಿಯ ಸೆಹರ್ಸ್ `ಅನನ್ಯೋತ್ಸವ’, ಇಂಡಿಯನ್ ಡಾನ್ಸ್ ಅಲಿಯನ್ಸ್, ಸಾರ್ಕ್ ಮೀಟ್, ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ‘ಭರತನಾಟ್ಯೋತ್ಸವ’ ಮತ್ತು ಹಂಪಿ ಉತ್ಸವ ಮುಂತಾದ ಅನೇಕ ಪ್ರತಿಷ್ಠಿತ ಉತ್ಸವಗಳಲ್ಲಿ ನೃತ್ಯಪ್ರದರ್ಶನ ನೀಡಿದ ಅಗ್ಗಳಿಕೆ ಪಡೆದಿದೆ. ಜೊತೆಗೆ ಪಂಡಿತ್ ರವಿಶಂಕರ್ ಮ್ಯೂಸಿಕ್ ಥಿಯೇಟರಿನ `ಘನಶ್ಯಾಂ’ ನಿರ್ಮಾಣದಲ್ಲಿ ಪಾಲ್ಗೊಂಡಿರುವ ಹೆಮ್ಮೆಯೂ. ಪ್ರತಿವರ್ಷ ಅಮೆರಿಕ ದೇಶಕ್ಕೆ ಭೇಟಿನೀಡುವ ಕಿರಣ್, ಅಲ್ಲಿ ಹಲವಾರು ಪ್ರಾತ್ಯಕ್ಷಿಕೆ, ಕಾರ್ಯಾಗಾರ, ವೃತ್ತಿಪರ ತರಬೇತಿಗಳನ್ನು ನಡೆಸುತ್ತಾರೆ. ಜೊತೆಗೆ ವಿಚಾರಸಂಕಿರಣಗಳಲ್ಲಿ ವಿದ್ವತ್ಪೂರ್ಣ ಪ್ರಬಂಧಮಂಡನೆ-ಸೋದಾಹರಣ ಪ್ರದರ್ಶನಗಳನ್ನು ನೀಡುವ ಮೂಲಕ ವಿಶ್ವನೃತ್ಯಲೋಕದ ಗಮನ ಸೆಳೆದಿದ್ದಾರೆಂಬುದು ಅತಿಶಯೋಕ್ತಿಯ ಸಂಗತಿಯಲ್ಲ.

ಎಲ್ಲಕ್ಕಿಂತ ಮಹತ್ವದ ಸಂಗತಿಯೆಂದರೆ ಇವರು ‘’ವಿಶ್ವದ ರಾಷ್ಟ್ರೀಯ ಸಾಂಸ್ಕೃತಿಕ ರಾಯಭಾರಿ’’ಯಾಗಿದ್ದಾ ರೆಂಬುದು ಹೆಮ್ಮೆಯ ಸಂಗತಿ. ಇವರ ನಿರ್ಮಾಣದ ಕೆಲವು ನೃತ್ಯರೂಪಕಗಳೆಂದರೆ- ಭವ್ಯರಾಮಕಥಾ, ತಾಂಡವ, ಪ್ರೇರಣ, ರಂಗೋಲಿ, ಮಾನಿನಿ, ಪರಿವರ್ತನ್, ರಸಿಕಾರ್ಪಣಾ, ಮುರಳಿಗಾನ, ಶರವಣಭವ ಮುಂತಾದವು. ಇವರ ಪ್ರತಿಭಾಸಾಮರ್ಥ್ಯಕ್ಕೆ ಸಂದ ಪ್ರಶಸ್ತಿ-ಗೌರವಗಳು ಕಡಮೆಯೇನಲ್ಲ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಪ್ರತಿಷ್ಟಿತ ಪ್ರಶಸ್ತಿ “ಕರ್ನಾಟಕ ಕಲಾಶ್ರೀ’, `ನಾಟ್ಯಾಂಜಲಿ’, `ನೃತ್ಯ ನಿಪುಣ’, `ಭರತನಾಟ್ಯ ಪ್ರಪುರುಷ’, `ಕಲಾ ಆರತಿ ರತ್ನ’, ಬಿಗ್ ಕನ್ನಡಿಗ( ಬಿಗ್ ಎಫ್.ಎಂ.ರೇಡಿಯೋ) ಮತ್ತು ನೃತ್ಯರತ್ನ ಮುಂತಾದವು.

ಅನುರೂಪ ಸತಿ ಪ್ರಸಿದ್ಧ ನೃತ್ಯಕಲಾವಿದೆ ಸಂಧ್ಯಾಕಿರಣ್ ಮತ್ತು ಮಗಳು ಉದಯೋನ್ಮುಖ ನೃತ್ಯಕಲಾವಿದೆ ರಸಿಕಾರೊಂದಿಗಿನ ಸುಖೀಸಂಸಾರ ಇವರದು.