ಮಹಾದೇವನ ಸುಂದರನಾಮಗಳಲ್ಲಿ ಒಂದಾದ `ಪುಷ್ಕರ’ ನಿಗೆ ಸಮರ್ಪಿತ ಸುಂದರ ಕಥಕ್ ನೃತ್ಯ ಕಾರ್ಯಕ್ರಮ ಇತ್ತೀಚಿಗೆ ಕೆ.ಇ.ಎ.ಪ್ರಭಾತ ರಂಗಮಂದಿರದಲ್ಲಿ ಜನಮನ ಸೂರೆಗೊಂಡಿತು. ಪ್ರಖ್ಯಾತ ಕಥಕ್ ನೃತ್ಯಗುರು ನಿರುಪಮಾ ರಾಜೇಂದ್ರ ಅವರ ಶಿಷ್ಯೆ ದೀಪಾ ದೇವಸೇನಾ ಆ ಸುಂದರ ಸಂಜೆಯ ಆಹ್ಲಾದಕ್ಕೆ ಕಾರಣಳಾಗಿದ್ದಳು. `ಪುಷ್ಕರ’ದಲ್ಲಿ ಕಲಾರಸಿಕರ ಮನಸ್ಸಿಗೆ `ಪುಷ್ಕಳ’ ಮನರಂಜನೆಯನ್ನು ಉಣಬಡಿಸಿದ್ದಳು ದೀಪಾ.
ಕಲಾತ್ಮಕವಾದದ್ದು ಎಂದೂ ಆಕರ್ಷಕವೇ. ಮನಸ್ಸಿಗೆ ಸುಮ್ಮಾನ ನೀಡಿದ ವಿಶಿಷ್ಟ ರಂಗಸಜ್ಜಿಕೆ, ತಂಪೆರೆದ ಉಸ್ತಾದ್ ಫಯಾಜ್ ಖಾನ್ ಗಾಯನ, ವಿಕಾಸ್ ಮಿಶ್ರ (ಲಕ್ನೋ) ತಬಲಾ, ಶ್ರುತಿ ಕಾಮತ್ ಸಿತಾರ್, ಗುರುಮೂರ್ತಿ ವೈದ್ಯ ಮೃದಂಗ, ಪ್ರಕಾಶ್ ಹೆಗ್ಡೆ ಕೊಳಲು ಮತ್ತು ಸರ್ಫ್ರಾಜ್ ಖಾನ್ ಸಾರಂಗಿ, ದೀಪಳ ಚೇತೋಹಾರಿ ನೃತ್ಯಕ್ಕೆ ಸುಂದರ ಪರಿಸರ ಪ್ರಭಾವಳಿ ನಿರ್ಮಿಸಿದ್ದವು.
ಶುಭಾರಂಭಕ್ಕೆ, ಧಮಾರ್ ತಾಳದಲ್ಲಿ ಫಯಾಜ್ ಖಾನ್ ಸಂಗೀತ ಸಂಯೋಜಿಸಿದ ನಟರಾಜನ ನೃತ್ಯದ ಮಜಲುಗಳನ್ನು ದೀಪಾ ತನ್ನ ಮನಮೋಹಕ ನೃತ್ಯದ ಭಂಗಿಗಳಿಂದ, ಅಲೆಯಂತೆ ತೇಲುವ ಹಸ್ತಚಲನೆ-ಪದಚಲನೆಗಳಿಂದ ಸುಂದರವಾಗಿ ಅನಾವರಣಗೊಳಿಸಿದಳು. `ಜಯ ಜಯ ಶಿವ ಶಂಕರ ಮಹಾದೇವ…’ ಎಂದು ತಾದಾತ್ಮ್ಯದಿಂದ ನರ್ತಿಸಿದ ಕಲಾವಿದೆಯ ಸಾತ್ವಿಕಾಭಿನಯದಲ್ಲಿ ಭಕ್ತಿಭಾವ ಸ್ಫುರಿಸಿತ್ತು. ಢಮರು ಧ್ವನಿಗೆ ಶಕ್ತಿತುಂಬಿದ ನಿರುಪಮಾ ಅವರ `ಪಡಂತ್ ‘ (ನಟುವಾಂಗ’) ಸ್ಫುಟವಾಗಿತ್ತು.
ಸಂತ ತುಳಸೀದಾಸರ ರಾಮಚರಿತ ಮಾನಸ ಕೃತಿಯಿಂದ ಆಯ್ಕೆ ಮಾಡಿಕೊಂಡ ಜನಪ್ರಿಯ `ರಾಮಚಂದ್ರ ಕೃಪಾಳು ಭಜಮನ…’ `ದೋಹಾ’ ವನ್ನು ದೀಪಾ, ಅನುಪಮವಾಗಿ ಅಭಿನಯಿಸಿದಳು. ಧನುಸ್ಸನ್ನು ಹೆದೆಯೇರಿಸುವ ಶ್ರೀರಾಮಚಂದ್ರನ ಧೀರೋದ್ದಾತ್ತ ನಿಲುವನ್ನು ತನ್ನ ಸುಂದರ ಆಂಗಿಕದಿಂದ, ಸ್ವಯಂವರದಲ್ಲಿ ಗೆದ್ದ ಅವನನ್ನು ವರಿಸುವ ಸೀತಳ ಲಜ್ಜಾನ್ವಿತ ಸ್ನಿಗ್ಧ ಭಾವನೆಗಳನ್ನು ಮುಖಾಭಿವ್ಯಕ್ತಿಯಿಂದ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಳು. ಮಧ್ಯೆ ಮಧ್ಯೆ ಶುದ್ಧ ನೃತ್ತಗಳ, ಪದವಿನ್ಯಾಸದ `ತತ್ಕಾರ’ಗಳು ಸೊಗಯಿಸಿದವು. ವೀರಾವೇಶದ ರಾವಣ ನೂರು ಬಾಣಗಳ ಮಳೆಯಿಂದ ರಣಾಂಗಣವನ್ನು ಧೂಳೆಬ್ಬಿಸಿದಾಗ ಅದರ ಮಧ್ಯೆ ಶ್ರೀರಾಮ ಸೂರ್ಯನಂತೆ ಕಂಗೊಳಿಸಿದ ದೃಶ್ಯ, ರಾಮನಿಗೆ ವಿಜಯತಿಲಕ ಇಡುವ ಸನ್ನಿವೇಶ ಚೆಂದವೆನಿಸಿದವು. ಅಲೆಯಂತೆ ಬಳುಕುವ ದೀಪಳ ನಡು,ಹುಸಿ ಅಡವುಗಳು ಲಾಸ್ಯದಿಂದ ಮಿಂಚಿದವು.
ಮುಂದಿನ ಹಂತ ಆಸಕ್ತಿಕರವಾಗಿತ್ತು. ಕಲಾವಿದೆ ಧ್ವನಿವರ್ಧಕದ ಮುಂದೆ ನಿಂತು ಸಂಕೀರ್ಣ `ಬೋಲ್’ಗಳನ್ನು ನಿರೂಪಿಸುತ್ತಾಳೆ. ಅದಕ್ಕೆ ಪ್ರತ್ಯುತ್ತರವಾಗಿ ಪಕ್ವಾಜ್ (ತಬಲ) ವಾದಕ ತತಕ್ಷಣ ಅದನ್ನು ಪುನರಾವರ್ತಿಸುವನು. ಆ ತಾಳ-ಲಯಕ್ಕೆ ತಕ್ಕಂತೆ ಕಲಾವಿದೆ ತನ್ನ ಕಲಾಪ್ರೌಢಿಮೆಯನ್ನು ತತ್ಕಾರಗಳ ವಿವಿಧ ವಿನ್ಯಾಸದಿಂದ, ಚಕ್ಕರುಗಳಿಂದ, ಗಾಳಿಯಲ್ಲಿ ತೇಲಿದಂತೆ ಪಾದರಸದ ನಡೆಯಲ್ಲಿ ಮಂದಸ್ಮಿತಳಾಗಿ ಚಲಿಸುತ್ತ ವೇದಿಕೆಯ ಮೇಲೆ ಮುಗುಳು ಅರಳಿದಂತೆ ಮನೋಜ್ಞವಾಗಿ ನರ್ತಿಸಿದಳು. ಹಾಗೆಯೇ ಪಕ್ವಾಜದವರಿಂದ ಅವಳ ಪ್ರತಿಭೆಗೂ ಸ್ಥಳದಲ್ಲೇ ಪರೀಕ್ಷೆ ಅಥವಾ ಸವಾಲ್. ಈವರೆಗೆ ಅಭ್ಯಾಸ ಮಾಡಿರದ ಹೊಸ ಅಷ್ಟೇ ಸಂಕೀರ್ಣ(ಲಕಾವ್) `ಬೋಲ್’ ‘ಗಳ ನುಡಿಸಾಣಿಕೆಗೆ ಕಲಾವಿದೆ, ಕೂಡಲೇ ಅದರ ತಾಳ-ಲಯಗತಿಗಳಿಗೆ ಅನುಗುಣವಾಗಿ ನರ್ತಿಸಿ ಪ್ರೇಕ್ಷಕರಿಂದ ಶಹಭಾಷಗಿರಿ ಪಡೆಯುವ ರೂಮಾಂಚಕರ ಕ್ಷಣಗಳು. ಈ `ಜುಗಲ್ಬಂದಿ’ ಯಲ್ಲಿ ದೀಪಾ ಖಚಿತ ಅಡವುಗಳು, ತೀವ್ರ ಪದಗತಿಯಿಂದ ತನ್ನ ಅಪೂರ್ವ ಕಲಾನೈಪುಣ್ಯವನ್ನು ಮೆರೆದು ರಸಿಕರ ಕರತಾಡನ ಪಡೆದಳು.ಹಾಗೆಯೇ ಎರಡು ವಿಭಿನ್ನ `ಗತ್’ ‘ (ಮನಸ್ಥಿತಿ) ಗಳನ್ನು, ಮಾರ್ದವದ ಹಾಗೂ ಕದನದ ಕತ್ತಿವರಸೆಯ ವೀರಾವೇಶ (ತಲವಾರ್ ಗತ್ ) ಹಾಗೂ ತತ್ಕಾರದಲ್ಲಿ ಕುದುರೆ ಸವಾರಿಯ ಆಂಗಿಕಾಭಿನಯ ಪ್ರದರ್ಶಿಸಿದಳು.
ಮುಂದೆ ಭರತನಾಟ್ಯದ ಜಾವಳಿ, ಪದವರ್ಣದ ರೀತಿಯ ಸುಶ್ರಾವ್ಯವಾದ ಸಿಂಧುಭೈರವಿ ರಾಗದ ತುಮರಿಯನ್ನು ಅಭಿನಯಿಸಿದಳು ದೀಪಾ. ಕೃಷ್ಣನ ತುಂಟಾಟ ಸಹಿಸಲಾರದೆ ಗೋಪಿಕೆ, `ಹಾರಿ,ಮೈತೋ ಹಾರಿ ಗಿರಿಧಾರಿ’ – ಎಂದವನ ಸರಸದಾಟಗಳಿಗೆ ಮೇಲೆ ವಿರೋಧ ವ್ಯಕ್ತಪಡಿಸಿದರೂ, ಒಳಗೊಳಗೇ ಅದನ್ನವಳು ಇಷ್ಟಪಡುತ್ತ, ಕಡೆಯಲ್ಲಿ ಅವನಿಗೆ ಸೋತು ಶರಣಾಗುವ ಈ ಕೃತಿಯ ಕೇಂದ್ರಭಾವ ಶೃಂಗಾರರಸ. ಕವಿ ತನ್ನ ಪದ ಚಮತ್ಕಾರದಲ್ಲಿ `ಹಾರಿ’ ಸಾಕಾಯ್ತು – ಎನ್ನುವ ಅರ್ಥವನ್ನು `ಹರಿ (ನಿನಗೆ ಸೋತೆ) ಮೈ ಹಾರಿ ’ ಎಂಬರ್ಥ ಬರುವಂತೆ ಕಡೆಯಲ್ಲಿ ಗೋಪಿ, ಅವನ ಬಗ್ಗೆ ಹುಸಿಮುನಿಸು ತೋರಿದ ನಟನೆ ಕಳಚಿ ಅವನಿಗೆ ಸೋತೆನೆನ್ನುವ ಎನ್ನುವ ಭಾವ ವಿಶೇಷವಾಗಿದೆ. ತಲೆಯ ಮೇಲೆ ಮಣ್ಣಿನ ಕೊಡ ಹೊತ್ತು ಬಳುಕುವ ನಡೆ, ಕೃಷ್ಣ ಅವಳ ಕೈಬಳೆಗಳನ್ನು ಎಳೆದಾಟದಲ್ಲಿ ಒಡೆದಾಗ, ಅದನ್ನು ನೆಲದಿಂದ ಆರಿಸಿಕೊಳ್ಳುವ ಬಗೆ ಹಾಗೂ ನದಿಯಲ್ಲಿ ಕೊಡವನ್ನು ವಯ್ಯಾರದಿಂದ ಮುಳುಗಿಸಿ ನೀರನ್ನು ಸಂಗ್ರಹಿಸುವ ಸಣ್ಣ ಸಣ್ಣ ವಿವರಗಳನ್ನೂ ಬಹು ಸೂಕ್ಷ್ಮವಾಗಿ, ಆಕರ್ಷಣೀಯವಾಗಿ ಅಭಿನಯಿಸಿದಳು ದೀಪ. ಅವಳ ಮುಗುಳ್ನಗುಭರಿತ ಕೋಮಲ ಅಭಿನಯ ಮನಮುಟ್ಟಿತು.
ಕಡೆಯ ಪ್ರಸ್ತುತಿ `ತರಾನಾ’. ಶುದ್ಧ ನೃತ್ತಗಳ ಸೊಗಸಿನಿಂದೊಡಗೂಡಿದ, ಲಯಾತ್ಮಕ ಭಾಗಗಳು ಒಳನೇಯ್ಗೆಗೊಂಡಿದ್ದ ಗೀತಾತ್ಮಕ ನರ್ತನ. ಕಥಕ್ ನೃತ್ಯದ ಸ್ಫೂರ್ತಿ ಚೇತನವಾದ ಇದರಲ್ಲಿ ಪದವಿನ್ಯಾಸದ `ಲಡಿ’ (ದೀರ್ಘ ಜತಿಗಳು) ಅತ್ಯಂತ ಮನೋಜ್ಞವಾಗಿದ್ದವು. `ಪಡಂತ್’ ‘ಗೆ ತಕ್ಕಂತೆ ಹೆಜ್ಜೆಯ ಚಮತ್ಕಾರವನ್ನು ತೋರಿದ ಕಲಾವಿದೆಯ ಪದಗತಿಯ ಪ್ರಾವೀಣ್ಯ ಸುವ್ಯಕ್ತವಾಯಿತು. ಆಕೆಯ ಪರಿಶ್ರಮದ `ರಿಯಾಜ್’ (ತಾಲೀಮು) ಎದ್ದುಕಂಡಿತು. ಜೊತೆಗೆ ಸುಂದರ ಅಭಿನಯದ ಸಾಂಗತ್ಯವೂ ಕೂಡ.