ಅದೊಂದು ರಸಾನುಭವ ನೀಡಿದ ಪರಿಣತ ಅಭಿನಯದ ಸುಂದರ ರಂಗಪ್ರವೇಶ. ರಂಗದ ಮೇಲೆ ಆಕರ್ಷಕ ರೂಪಿನ ಬಾಲೆ ತನ್ಮಯಳಾಗಿ ನರ್ತಿಸುತ್ತಿದ್ದ ದೃಶ್ಯ ಕಣ್ಮನ ಸೂರೆಗೊಂಡಿತು. ಬಹು ಶ್ರದ್ಧೆಯಿಂದ ಅಭ್ಯಾಸ ಮಾಡಿ ಕಲಾರಸಿಕರ ಮುಂದೆ ತನ್ನ ಕಲಾಪ್ರದರ್ಶನ ಮಾಡಿದ ಭರತನಾಟ್ಯ ಕಲಾವಿದೆ ಮೃಣಾಲಿ ಸತೀಶ್ ಕುಮಾರ್, ಪ್ರಖ್ಯಾತ ‘ಶಿವಪ್ರಿಯ’ ನೃತ್ಯಸಂಸ್ಥೆಯ ನುರಿತ ನಾಟ್ಯಗುರು ಡಾ. ಸಂಜಯ್ ಶಾಂತಾರಾಂ ಶಿಷ್ಯೆ. ಸಂಜಯ್, ಭಾವಪೂರ್ಣವಾಗಿ ಹಾಡುತ್ತ, ಜೊತೆಜೊತೆಯಲ್ಲಿಯೇ ಶಕ್ತಿಶಾಲಿಯಾಗಿ ನಟುವಾಂಗ ನಿರ್ವಹಿಸುತ್ತಿದ್ದ ಪರಿ ಸ್ತುತ್ಯಾರ್ಹ.
ಆಕರ್ಷಕ ನೃತ್ತಾವಳಿಯೊಂದಿಗೆ ಮೃಣಾಲಿ, ತನ್ನ ಸಾಧನೆಗೆ ನೆರವಾದ ಸಕಲ ದೇವತಾಸ್ವರೂಪಿಗಳಿಗೆ ಕೃತಜ್ಞತಾಪೂರ್ವಕ ವಂದನೆಯನ್ನು ‘ಪುಷ್ಪಾಂಜಲಿ’ಯ ಮೂಲಕ ಸಲ್ಲಿಸಿದಳು. ಗುರು ಸಂಜಯ್ ವಿರಚಿತ ಸರಸ್ವತಿ ರಾಗದ ‘ಗಜವದನಂ ಸರಸೀರುಹ ಚರಣಂ’ ಎಂಬ ಗಣಪನ ಮಹಿಮೆಗಳನ್ನು ಬಣ್ಣಿಸುವ ಕಲಾವಿದೆಯ ರಮ್ಯ ಅಂಗಿಕಾಭಿನಯದಲ್ಲಿ ಬೆಡಗು ತುಂಬಿತ್ತು. ಶುದ್ಧ ನೃತ್ತಭಾಗದ ‘ಜತಿಸ್ವರ’ ವಿವಿಧ ವಿಶಿಷ್ಟ ಅಡವು, ತೀರ್ಮಾನಗಳಿಂದ ಗಮನ ಸೆಳೆಯಿತು. ಉಲ್ಲಾಸದ ಲಹರಿಯಲ್ಲಿ ಮೈಮರೆತು ಮೃಣಾಲಿ, ರಂಗದಲ್ಲಿ, ಚಲನೆಯ ಸುಂದರ ರಂಗವಲ್ಲಿ ಬಿಡಿಸುತ್ತಿದ್ದರೆ, ಕಲಾತ್ಮಕ ಬೆಳಕಿನ ಸಂಯೋಜನೆ ಮತ್ತು ಸುಮಧುರ ವಾದ್ಯಗೋಷ್ಠಿ ಅವಳ ನೃತ್ಯಕ್ಕೊಂದು ಮನೋಹರ ಪ್ರಭಾವಳಿಯನ್ನು ಸೃಷ್ಟಿಸಿತ್ತು. ಅವಳ ಖಚಿತ ಹಸ್ತಮುದ್ರೆ, ಅಂಗಶುದ್ಧಿ, ಮಿಂಚಿನ ಸಂಚಾರಗಳ ಆನಂದದ ನರ್ತನ ನೋಡಲು ಮುದತಂದಿತ್ತು.
ಸಾಮಾನ್ಯವಾಗಿ, ಸಂಕೀರ್ಣ ನೃತ್ತಗಳ ಮೇಳದೊಂದಿಗೆ ಕಣ್ಮನ ತಣಿಸುವ ಹೃದಯಸ್ಪರ್ಶಿ ಪ್ರೌಢ ಅಭಿನಯ ‘ವರ್ಣ’ ದ ವೈಶಿಷ್ಟ್ಯ. ಆರಂಭಿಕ ಪ್ರಸ್ತುತಿಗಳಿಂದ ಆತ್ಮವಿಶ್ವಾಸದ ಬಲ ಪಡೆದ ಕಲಾವಿದೆ, ನೋಡುಗರ ನಿರೀಕ್ಷೆಗಳನ್ನು ಮೀರಿದ ಉತೃಷ್ಟಮಟ್ಟದ ನಾಟ್ಯಾಭಿನಯವನ್ನು ಸಾಕಾರಗೊಳಿಸಿದಳು. ಗುರು ಸಂಜಯ್ ರಚಿಸಿದ ೨೫ನೇ ವರ್ಣ (ರಾಗ-ಆಭೋಗಿ)ಇದಾಗಿದ್ದು, ಇದರಲ್ಲಿ ಶಿವನ ಮಹಿಮಾಧಿಕ್ಯವನ್ನು ಚಿತ್ರಿಸುವ ಸಾರ್ಥಕ ಪ್ರಯತ್ನವಾಗಿತ್ತು. ಮೃಣಾಲಿ ತನ್ನ ಸೊಗಸಾದ ನರ್ತನದಿಂದ ಸೆರೆಹಿಡಿದಳು. ಸಂಚಾರಿಯ ಭಾಗದ ಕಥಾನಕ ನಿರೂಪಣೆಯಲ್ಲಿ ಜೀವತುಂಬಿ ಅಭಿನಯಿಸಿದಳು.
ದಕ್ಷಯಜ್ಞ ಸಮಯದಲ್ಲಿ ಪಾರ್ವತಿ, ಗಂಡನ ನಿಂದನೆ ಸಹಿಸಲಾರದೆ ಅಗ್ನಿಕುಂಡಕ್ಕೆ ಹಾರಿದ್ದು, ಮತ್ತೆ ಗಿರಿಜೆಯಾಗಿ ಹುಟ್ಟಿ, ವೃದ್ಧ ವೇಷದ ಶಿವನಿಂದ ಪರೀಕ್ಷಿತಳಾಗಿ ಅವನನ್ನು ಗೆಲ್ಲುವ ನಾಟಕೀಯ ಸನ್ನಿವೇಶವನ್ನು ಮೃಣಾಲಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಳು. ಅವಳ ಸಮ್ಮಿಶ್ರಭಾವದ ಮುಖಾಭಿವ್ಯಕ್ತಿ, ಸ್ಫುಟವಾದ ಅಂಗಿಕಾಭಿನಯ ಆಕೆಯೊಬ್ಬ ನುರಿತ ಅಭಿನೇತ್ರಿಯೆಂಬ ಭಾವ ಮೂಡಿಸಿದ್ದು ಸುಳ್ಳಲ್ಲ. ಶಿವಪ್ರಿಯೆಯ ನಾನಾ ರೂಪವರ್ಣನೆಗಳನ್ನು ಕಲಾವಿದೆ, ನವರಸಾಭಿನಯದಿಂದ ಕಂಡರಿಸಿ ರೋಮಾಂಚಗೊಳಿಸಿದಳು. ನಡುನಡುವೆ ಸಹಜವಾಗಿ ಬೆಸೆದುಕೊಂಡ ನೃತ್ತಗಳಲ್ಲಿ ನವಿರು-ಲಾಸ್ಯ, ಹೊಸತನಗಳ ಬೆಡಗು ಪ್ರತಿಫಲಿಸಿತ್ತು. ಜೊತೆಗೆ ತ್ರಿಕಾಲದ ಜತಿಗಳು, ಅರೆಮಂಡಿಯ ಅಡವುಗಳು, ಆಕಾಶಚಾರಿಗಳು, ಪಾದಭೇದಗಳ ಸೌಂದರ್ಯ ಅನಾವರಣಗೊಳ್ಳುತ್ತಾ, ಸಂಚಾರಿಗಳಿಗೆ ಹದವಾದ ವೇದಿಕೆ ನಿರ್ಮಾಣಗೊಂಡಿದ್ದು ವಿಶೇಷವಾಗಿತ್ತು.
ಮುಂದಿನ ‘ಮೀರಾ ಭಜನ್‘ ಮನೋಹರತೆಯಿಂದ ಕೂಡಿತ್ತು. ಮುಕುಲಾಭರಣಿ ರಾಗದ ‘ಗೋವರ್ಧನ ಗಿರಿಧಾರಿ…’ ಎಂದು ತನ್ಮಯತೆಯಿಂದ ಆನಂದತುಂದಿಲಳಾಗಿ ನರ್ತಿಸುವ ಕೃಷ್ಣಾನುರಕ್ತೆ ಮೀರಳ ಭಕ್ತಿಯ ಆಧಿಕ್ಯ, ಹೃದಯದಲ್ಲಿ ಅನುರಣಿಸಿತ್ತು. ಕೃಷ್ಣನ ಸುಮನೋಹರ ಭಂಗಿಗಳು ಕಣ್ತುಂಬಿದವು. ಭಾವಪೂರ್ಣ ಗಾಯನ ರಸದೌತಣವಾಗಿತ್ತು.ಸಂಚಾರಿಗಳ ಅಭಿನಯದಲ್ಲಿ ನಾಟಕೀಯ ಸೆಳೆಮಿಂಚುಗಳು ವಿಜ್ರುಂಭಿಸಿದವು. ಹೊಸ ಸಿಂಚನದ ನೃತ್ಯಸಂಯೋಜನೆ, ಕಲಾವಿದೆಯ ಭಾವಪ್ರದ ಮೊಗದ, ಹುಬ್ಬು-ಕಣ್ಣುಗಳ ಚಲನೆ ಸೊಗಯಿಸಿದವು. ತುಂಬಿದ ಸಭೆಯಲ್ಲಿ ದುಶ್ಶಾಸನ, ದ್ರೌಪದಿಯ ಮುಡಿಯೆಳೆದು ತರುವ ದೃಶ್ಯವನ್ನು ಕಲಾವಿದೆ ಹೃದಯ ಕಲಕುವಂತೆ ಅಮೋಘವಾಗಿ ನಿರೂಪಿಸಿದಳು. ಅಂತ್ಯದಲ್ಲಿ ಮೃಣಾಲಿಯ ಚುರುಕುಗತಿಯ ಹೆಜ್ಜೆಗಳ ಝೇಂಕಾರ, ಚೇತೋಹಾರಿ ರಂಗಾಕ್ರಮಣವಾಗಿ, ‘ತಿಲ್ಲಾನ’ ವರ್ಣರಂಜಕವಾಗಿ ಆವರಿಸಿಕೊಂಡಿತು.