Image default
Dancer Profile

ನೃತ್ಯ ನೈಪುಣ್ಯ ಸಾಧಕಿ-ರತ್ನಾ ಸುಪ್ರಿಯಾ ಶ್ರೀಧರನ್

‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಗಾದೆಗೆ ಅನ್ವರ್ಥಕರಾಗಿದ್ದಾರೆ ಹಿರಿಯ ನೃತ್ಯಕಲಾವಿದೆ-ಗುರು ರತ್ನಾ  ಸುಪ್ರಿಯಾ ಶ್ರೀಧರನ್ . ಕಳೆದ ನಾಲ್ಕುದಶಕಗಳಿಂದ ಸದ್ದಿಲ್ಲದೆ, ಎಲೆಮರೆಯ ಕಾಯಂತೆ ನೂರಾರು ಉತ್ತಮ ನೃತ್ಯಕೋವಿದರನ್ನು ರೂಪಿಸಿ, ತಮ್ಮ ಗುರುಪರಂಪರೆಯನ್ನು ಉತ್ಕೃಷ್ಟವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ಇವರ ಗರಿಮೆ. ಉತ್ತಮ ಗುಣಮಟ್ಟದ ಶಿಕ್ಷಣ, ಭಾವಪೂರ್ಣ ಅಭಿವ್ಯಕ್ತಿಯ ಶುದ್ಧವಾದ ವಳವೂರು ಶೈಲಿಯ ಭರತನಾಟ್ಯ ಇವರದು.

ಬೆಂಗಳೂರಿನ ಕಲಾಸಕ್ತ ಕುಟುಂಬದಲ್ಲಿ ಜನನ. ತಂದೆ ಎಸ್.ರಾಮಮೋಹನ್ ಮತ್ತು ಕರಕುಶಲ ತಜ್ಞೆ ಅಮ್ಮಣ್ಣಿ  ತಾಯಿ. ಮಗಳಲ್ಲಿ ಹುದುಗಿದ್ದ ನೃತ್ಯಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಿದ ತಾಯಿ, ಉತ್ತಮ ಗುರುಗಳ ಅನ್ವೇಷಣೆಯಲ್ಲಿ ತೊಡಗಿದರು. ಕಾನ್ವೆಂಟಿನಲ್ಲಿ ಓದುತ್ತಿದ್ದ ಹದಿಮೂರರ ಬಾಲೆಗೆ ದೊರೆತವರು ಅಂದು ನೃತ್ಯಕ್ಷೇತ್ರದಲ್ಲಿ ಬಹು ದೊಡ್ಡಹೆಸರು ಮಾಡಿದ್ದ ನಾಟ್ಯಗುರು ಪದ್ಮಿನಿ ರಾಮಚಂದ್ರನ್. ಚುರುಕಾಗಿದ್ದ ರತ್ನಾ, ಸರಸರನೆ ಅಡವುಗಳೊಡನೆ ಆಂಗಿಕಾಭಿನಯವನ್ನೂ ಅಚ್ಚುಕಟ್ಟಾಗಿ ಕಲಿತು, ಮೂರುವರ್ಷದೊಳಗೆ ‘ಮಾರ್ಗಂ’ ಸಂಪ್ರದಾಯದ ಕೃತಿಗಳನ್ನು ಕಲಿತು, ‘’ರಂಗಪ್ರವೇಶ’’ವನ್ನೂ ಮಾಡಿ ಸೈ ಎನಿಸಿಕೊಂಡಿದ್ದು ಅವರ ಅಗ್ಗಳಿಕೆ. ಹಗಲೂ ರಾತ್ರಿ ಎಡೆಬಿಡದ ನೃತ್ಯಾಭ್ಯಾಸ. ಗುರುಗಳು ನೃತ್ಯಸಂಯೋಜಿಸಿದ ‘ದಿವ್ಯಸಂಗಮ’, ‘ಪುಷ್ಪ ವಿಲಾಸಂ’ ನೃತ್ಯರೂಪಕಗಳಲ್ಲಿ ಭಾಗವಹಿಸಿ, ದೆಹಲಿ, ಮುಂಬೈಗಳಲ್ಲಿ ‘ರಾಷ್ಟ್ರೀಯ ಯುವಜನೋತ್ಸವ’ದಲ್ಲಿ ನರ್ತಿಸಿ, ನೃತ್ಯಲೋಕದ ಗಮನ ಸೆಳೆದರು. ಜೊತೆಗೆ ದೇಶದಾದ್ಯಂತ ಏಕವ್ಯಕ್ತಿ ನೃತ್ಯಪ್ರದರ್ಶನಗಳನ್ನು ನೀಡತೊಡಗಿದರು.

ಬೆಂಗಳೂರಿನ ‘ಮೌಂಟ್ ಕಾರ್ಮಲ್ ‘ ಕಾಲೇಜಿನಿಂದ ವಿಜ್ಞಾನದಲ್ಲಿ ಪದವೀಧರೆಯಾದನಂತರ ನೃತ್ಯಕ್ಕೇ ತಮ್ಮನ್ನು ಸಮರ್ಪಿಸಿಕೊಂಡರು. ತಜ್ಞರಿಂದ ವಿಶೇಷ ತರಬೇತಿ ಹೊಂದಿದರು. ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಲ್ಲಿ ನಾಟ್ಯಶಾಸ್ತ್ರದ 108 ಕರಣಗಳು, ಮೈಸೂರು ವೆಂಕಟಲಕ್ಷ್ಮಮ್ಮ ,ಕನಕ ರಿಲೇ, ಕಲಾನಿಧಿ ನಾರಾಯಣ್ ಅವರಿಂದ ಅಭಿನಯ ಮತ್ತು ಮಹಾಲಿಂಗಂ ಪಿಳ್ಳೈ ಮತ್ತು ಕಲ್ಯಾಣ ಸುಂದರಂ ಪಿಳ್ಳೈ ಅವರಿಂದ ನೃತ್ತಗಳ ಪಾಂಡಿತ್ಯವನ್ನು ಕಾರ್ಯಾಗಾರಗಳ ಮೂಲಕ ಪಡೆದು ತಮ್ಮ ಜ್ಞಾನ ವೃದ್ಧಿಸಿಕೊಂಡರು.

ಅನಂತರ ಕಥಕ್ ಗುರು ಮಾಯಾರಾವ್ ಅವರಲ್ಲಿ ಕಥಕ್ ನೃತ್ಯಶೈಲಿಯಲ್ಲಿ ಶಿಕ್ಷಣ. ಜೊತೆಗೆ ನೃತ್ಯ ಸಂಯೋಜನೆಯನ್ನೂ ಕಲಿತು ಅವರೆಲ್ಲ ನೃತ್ಯರೂಪಕಗಳಲ್ಲಿ ಪಾಲ್ಗೊಳ್ಳುತ್ತ ಬಂದರು. ದೇಶದ ಅನೇಕ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಭಾಗವಹಿಸಿದ ಇವರು, ಹಲವೇ ಉತ್ತಮ ಕಾರ್ಯಕ್ರಮಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮೂರು-ನಾಲ್ಕು ದಶಕಗಳ ಹಿಂದೆ ಇದ್ದ ಕೆಲವೇ ಮಂದಿ ಉತ್ತಮ ನೃತ್ಯಕಲಾವಿದರಲ್ಲಿ ಇವರೂ  ಒಬ್ಬರಾಗಿದ್ದುದು ಇವರ ಅಗ್ಗಳಿಕೆ. ಚೆನ್ನೈನ ಹೆಸರಾಂತ ಪ್ರತಿಷ್ಟಿತ ಸಭಾಗಳಲ್ಲಿ ಆಗಾಗ ಕಾರ್ಯಕ್ರಮ ನೀಡುತ್ತಿದ್ದ ಇವರ ಕಾರ್ಯಕ್ಷೇತ್ರ ಕರ್ನಾಟಕ ಮತ್ತು ಚೆನ್ನೈ ಎರಡೂ ಕಡೆ ವಿಸ್ತೃತಗೊಂಡಿತ್ತು. ಅವರ ಪ್ರತಿಭೆಯನ್ನರಸಿ ಉತ್ತಮೋತ್ತಮ ಪ್ರಶಸ್ತಿ-ಬಿರುದುಗಳು ಹಿಂಬಾಲಿಸಿದವು. ಸುರ ಸಿಂಗಾರ್ ಸಂಸದ್ ವತಿಯಿಂದ ‘’ ಸಿಂಗಾರಮಣಿ’’ ಪ್ರಶಸ್ತಿಯ ಜೊತೆಗೆ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯಿಂದ ‘’ ಬೆಸ್ಟ್ ಡಾನ್ಸರ್ ಆಫ್ ಕರ್ನಾಟಕ’’ ಪ್ರಶಸ್ತಿ ಮತ್ತು ಖ್ಯಾತ ಪ್ರಭಾತ್ ಕಲಾವಿದರು ಸಂಸ್ಥೆಯ ಸ್ಥಾಪಕ ಶ್ರೀಗೋಪಿನಾಥ್ ದಾಸ್ ‘ಅತ್ಯುತ್ತಮ ನೃತ್ಯಗಾರ್ತಿ ‘ ಶೀಲ್ಡ್ ದೊರೆತದ್ದು ಇವರ ಕಲಾನೈಪುಣ್ಯಕ್ಕೆ ಸಾಕ್ಷಿ. ನಾಟ್ಯಗುರು ಸೇವೆಗೆ ಚೆನ್ನೈನ ‘ಕಲೈಮಗಳ್ ‘ ಸ್ವರ್ಣಪದಕ ದತ್ತವಾಯಿತು.

ಇಷ್ಟರಲ್ಲಿ ರತ್ನಾ ಸುಪ್ರಿಯಾ, ತಮ್ಮದೇ ಆದ ‘’ ನಿತ್ಯ ನರ್ತನಪ್ರಿಯ ಸ್ಕೂಲ್ ಆಫ್ ಭರತನಾಟ್ಯಂ’’ ನೃತ್ಯಶಾಲೆ ಸ್ಥಾಪಿಸಿ, ಅನೇಕ ಮಕ್ಕಳಿಗೆ ನೃತ್ಯ ಕಲಿಸತೊಡಗಿ ಮೂವತ್ತೈದು ವರುಷಗಳೇ ಕಳೆದಿವೆ. ಇಂದಿವರ ಶಿಷ್ಯರು ದೇಶಾದ್ಯಂತ ಪ್ರಖ್ಯಾತ ನೃತ್ಯಕಲಾವಿದರಾಗಿ, ನೃತ್ಯಗುರುಗಳಾಗಿ, ಇವರ ನೃತ್ಯಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಇವರ ಹೆಮ್ಮೆ.  ಇವರು ಸೃಜನಾತ್ಮಕವಾಗಿ ನೃತ್ಯ ಸಂಯೋಜಿಸಿದ  ಯಶಸ್ವೀ ನೃತ್ಯರೂಪಕಗಳೆಂದರೆ, ಅಮೃತಫಲ, ಕೃಷ್ಣಲೀಲಾ, ಮನಮೋಹಕ ಕೃಷ್ಣ, ಪರಮಪುರುಷ, ವರಲಕ್ಷ್ಮೀ ಮಹಿಮೆ, ಪದ್ಮಾವತಿ ಪರಿಣಯ ಮುಂತಾದವು. ಇವರ ಖ್ಯಾತಿ ವಿದೇಶಗಳನ್ನು ಮುಟ್ಟಿರುವುದಕ್ಕೆ ಸಾಕ್ಷಿ- ಹಾಲೆಂಡಿನ ಚಲನಚಿತ್ರವೊಂದರಲ್ಲಿ ರತ್ನಾಸುಪ್ರಿಯಾ , ಹಲವು ನೃತ್ಯ ಸನ್ನಿವೇಶಗಳನ್ನು ಸಂಯೋಜಿಸಿ, ನಿರ್ದೇಶಿಸಿ, ಅಭಿನಯಿಸಿರುವುದು.

          ಸದಾ ಕ್ರಿಯಾಶೀಲರಾಗಿರುವ ಇವರು,  ಪತಿ ಚಾರ್ಟೆಡ್ ಅಕೌಂಟೆಂಟ್ ಶ್ರೀಧರನ್ ಅವರ ‘ಶ್ರೀ ಅಂಡ್ ಶ್ರೀ ಅಸೋಸಿಯೇಟ್ಸ್ ’ ಆಡಿಟ್ ಸಂಸ್ಥೆಯ ಆಡಳಿತವನ್ನು ನಿರ್ವಹಿಸುತ್ತಾ, ಗೃಹಾಲಂಕಾರದ  ಒಳವಿನ್ಯಾಸ, ಕರಕುಶಲ ಕಲೆಯಲ್ಲೂ ತೊಡಗಿಕೊಂಡಿದ್ದಾರೆ. ಒಬ್ಬನೇ ಮಗ ಎಂ.ಎಸ್.ಬಾಲಾಜಿ, ಕಾಮರ್ಸ್ ಪದವೀಧರ, ತಂದೆಯ ಸಂಸ್ಥೆಯ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುತ್ತಿದ್ದಾನೆ.

Related posts

ಕಥಕ್ ನೃತ್ಯ ಸಾಧಕ ಹರಿ

YK Sandhya Sharma

ಮೋಹಕ ಕೂಚಿಪುಡಿ ನೃತ್ಯಕಲಾವಿದೆ ರಾಜಶ್ರೀ ಹೊಳ್ಳ

YK Sandhya Sharma

ಉದಯೋನ್ಮುಖ ನೃತ್ಯಗಾರ್ತಿ ಎಂ. ಅಮೃತಾ

YK Sandhya Sharma

Leave a Comment

This site uses Akismet to reduce spam. Learn how your comment data is processed.