Image default
Dancer Profile

‘’ ನಾಟ್ಯರಾಣಿ ಶಾಂತಲಾ’’ -ಡಾ.ವಸುಂಧರಾ ದೊರೆಸ್ವಾಮಿ

ನಾಟ್ಯರಂಗದ ವಿಶ್ವವಿಖ್ಯಾತ ಹೆಸರು ಡಾ. ವಸುಂಧರಾ ದೊರೆಸ್ವಾಮಿ. ಭರತನಾಟ್ಯ ನೃತ್ಯಕ್ಷೇತ್ರದಲ್ಲಿ ಅವರ ಅಸಾಧಾರಣ ಸೇವೆಗಾಗಿ ಕರ್ನಾಟಕ ಸರ್ಕಾರ  `ನಾಟ್ಯರಾಣಿ ಶಾಂತಲಾ’ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ನಡೆದು ಬಂದ ಹಾದಿಯನ್ನು ಗಮನಿಸಿದರೆ ಅವರ ಸಾಧನೆ-ಪರಿಶ್ರಮಗಳು ಸುವ್ಯಕ್ತವಾಗುತ್ತವೆ. ಇಂದಿಗೂ ಎಪ್ಪತ್ತೊಂದನೆಯ ವಯಸ್ಸಿನಲ್ಲೂ ಮೂರನೆಯ ಕಾಲದಲ್ಲಿ ಸಲೀಸಾಗಿ ಮಂಡಿ ಅಡವುಗಳನ್ನು ಹಾಕಬಲ್ಲ, ಗಂಟೆಗಳ ಕಾಲ ಚೇತೋಹಾರಿ, ಮನೋಜ್ಞ ನೃತ್ಯಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಉಳಿಸಿಕೊಂಡಿರುವುದು ಸಾಮಾನ್ಯದ ವಿಷಯವೇನಲ್ಲ. ಸತತ ಯೋಗಾಭ್ಯಾಸದಿಂದ  ಬಳ್ಳಿನಡು,ತೆಳುವಾದ ದೇಹಶ್ರೀ ಕಾಪಾಡಿಕೊಂಡಿರುವುದು , ಲವಲವಿಕೆಯ ಚಟುವಟಿಕೆಯ ಜೀವನ, ನಿರಂತರ ಶಿಷ್ಯರಿಗೆ ನಾಟ್ಯಶಿಕ್ಷಣ, ಜೊತೆಜೊತೆಗೆ ತಮ್ಮ ಏಕವ್ಯಕ್ತಿ ನಾಟ್ಯಪ್ರಸ್ತುತಿಗಳು ಅವರ ಗರಿಮೆ.

ಮೂಲತಃ ಮೂಡಬಿದರೆಯವರಾದ ವಸುಂಧರಾ ಅತ್ಯದ್ಭುತ ಬಾಲಪ್ರತಿಭೆ. ತಮ್ಮ ಐದನೆಯ ವಯಸ್ಸಿಗೇ ಮೈಸೂರು ದಸರಾ ಉತ್ಸವದಲ್ಲಿ ಚಿನ್ನದ ಪದಕ ಗಳಿಸಿದವರು. ಸುಮಾರು ನಾಲ್ಕುವರ್ಷದ ಹುಡುಗಿ ಮೊದಲು ಕಲಿತದ್ದು `ಕಥಕ್ಕಳಿ’. ಅದರಿಂದ ಇಂದಿಗೂ ‘ಅಭಿನಯ’ದಲ್ಲಿ ಮುಖದ ಸ್ನಾಯುಗಳ ಚಲನೆಗೆ ಬಹಳಷ್ಟು ಸಹಕಾರಿಯಾಗಿದೆ ಎನ್ನುತ್ತಾರವರು. ಅನಂತರದ ಒಲವು ಭರತನಾಟ್ಯದೆಡೆಗೆ. ಕಲಿಯಲು ಆರಂಭಿಸಿದ್ದು ಒಬ್ಹತ್ತನೆಯ ವಯಸ್ಸಿಗೆ. ಮೊದಲ ಗುರುಗಳು ಮುರಳೀಧರ ರಾವ್, ಅನಂತರ ಪಂದನಲ್ಲೂರು ಶೈಲಿಯ ರಾಜರತ್ನಂ ಪಿಳ್ಳೈಯವರು. ಅತೀವ ಶ್ರದ್ಧಾ-ಭಕ್ತಿಗಳಿಂದ ನೃತ್ಯ ಕಲಿತ ವಸುಂಧರಾ `ವಿದ್ವತ್ ‘ ಪರೀಕ್ಷೆಯಲ್ಲಿ ಮೊದಲಸ್ಥಾನ ಹಾಗೂ ಮೂರು ಚಿನ್ನದ ಪದಕಗಳನ್ನು ಗಳಿಸಿದ ಅಸಾಧಾರಣ ಪ್ರತಿಭಾವಂತೆ. 

ಮಂಗಳೂರಿನಲ್ಲಿ ಕಾಲೇಜು ಶಿಕ್ಷಣ-ಬಿ.ಎಸ್ಸಿ.ಪದವಿ, ಅನಂತರ ಜಾನಪದ ವಿಷಯದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ. `ಅಷ್ಟಾಂಗ ವಿನ್ಯಾಸ ಯೋಗ’ ದಲ್ಲಿ ಮೈಸೂರಿನ ಪಟ್ಟಾಭಿ ಜೋಯಿಸ್ ಅವರ ಪ್ರಮುಖ ಶಿಷ್ಯರಲ್ಲಿ ಇವರೂ ಒಬ್ಬರು. `ಯೋಗ ಮತ್ತು ಭರತನಾಟ್ಯಗಳ ಪರಸ್ಪರ ಸಂಬಂಧ’ ಕುರಿತು ಸಂಶೋಧನೆ, ಡಾಕ್ಟೊರೇಟ್ ಗಳಿಕೆ ಮತ್ತು “ನಾಟ್ಯಯೋಗ ದರ್ಶನ’’ ಎಂಬ ವಿದ್ವತ್ ಗ್ರಂಥ ಪ್ರಕಟಣೆ. ಇದರ ಮಧ್ಯೆ ಹೆಸರಾಂತ ನೃತ್ಯ ವಿಮರ್ಶಕರಾಗಿದ್ದ ಹೆಚ್.ಎಸ್.ದೊರೆಸ್ವಾಮಿಗಳೊಂದಿಗೆ ವಿವಾಹ. ಆವರ ಪ್ರೋತ್ಸಾಹದಿಂದ ಇನ್ನಷ್ಟು ಕಲಿಯುತ್ತ ಸಾಧನೆಯ ಪಥದಲ್ಲಿ ಹೆಜ್ಜೆಹಾಕಿದ್ದು ವಸುಂಧರಾ ವೈಶಿಷ್ಟ್ಯ.

ಕಲರಿಪಟ್ಟು ಮತ್ತು ಟ್ಯಾಂಗ್-ಟ ಮಾರ್ಷಿಯಲ್ ಆರ್ಟ್ ಪ್ರವೀಣೆಯಾದ ಈಕೆ ತಮ್ಮ ಸೃಜನಾತ್ಮಕ ಪ್ರಯೋಗ-ಪರಿಕಲ್ಪನೆಗಳಿಂದ `ವಸುಂಧರಾ ಶೈಲಿ’ ಎಂದೇ ಹೆಸರಾದ ತಮ್ಮ ವೈಯಕ್ತಿಕ ವೈಶಿಷ್ಟ್ಯದ ಶೈಲಿಯನ್ನು ರೂಢಿಸಿಕೊಂಡು ಉಳಿದವರಿಗೆ ಮಾರ್ಗದರ್ಶಕರಾಗಿ ಛಾಪನ್ನೊತ್ತಿದವರು. 

ತಮ್ಮದೇ ಆದ `ವಸುಂಧರಾ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್’ ನ ಸಂಸ್ಥಾಪಕಿ ಮತ್ತು ನಿರ್ದೇಶಕಿಯಾಗಿ ಸಾವಿರಾರು ಮಕ್ಕಳಿಗೆ ಕಳೆದ ನಾಲ್ಕೂವರೆ ದಶಕಗಳಿಂದ ಮೂರು ತಲೆಮಾರುಗಳ ಶಿಷ್ಯರಿಗೆ ನೃತ್ಯಬೋಧನೆ ಮಾಡುತ್ತಿರುವ ಉತ್ತಮ ನಾಟ್ಯಗುರು, ನೃತ್ಯ ಸಂಯೋಜಕಿ ಮತ್ತು ಸರ್ವೋತ್ಕೃಷ್ಟ ನೃತ್ಯ ಕಲಾವಿದೆಯೆಂದು ದೇಶ ವಿದೇಶಗಳಲ್ಲಿ ಖ್ಯಾತರಾಗಿದ್ದಾರೆ. ಅತೀ ಸಣ್ಣವಯಸ್ಸಿಗೇ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ “ಕರ್ನಾಟಕ ಕಲಾ ತಿಲಕ ‘’ ಎಂಬ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ವಸುಂಧರಾ, ದೂರದರ್ಶನದ  `ಎ’ ಗ್ರೇಡ್ ಕಲಾವಿದೆ ಹಾಗೂ ಅಲ್ಲಿನ ಆಡಿಶನ್ ಕಮಿಟಿ ಸದಸ್ಯೆ ಕೂಡ. ಜೊತೆಗೆ ಮೈಸೂರು ವಿಶ್ವವಿದ್ಯಾಲಯದ ನೃತ್ಯದ ಆಯ್ಕೆ ಸಮಿತಿ ಸದಸ್ಯೆಯೂ. ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಭರತನಾಟ್ಯ ತಜ್ಞಸಮಿತಿಯಲ್ಲಿ ಪ್ರಸ್ತುತ ವಿಚಾರತಜ್ಞೆಯಾಗಿದ್ದಾರೆ.

ಪ್ಯಾರಿಸ್ ನಲ್ಲಿ ` ವಿಶ್ವ ಶಾಂತಿ’ ಗಾಗಿ ನೆರೆದ ೧೩೭ ರಾಷ್ಟ್ರಗಳ ೨೫೦೦ ಪ್ರತಿನಿಧಿಗಳ ಸಮ್ಮುಖ ನರ್ತಿಸಲು ಭಾರತದಿಂದ ಆಹ್ವಾನಿತರಾದ ಏಕೈಕ ನೃತ್ಯ ಕಲಾವಿದೆಯೆಂಬುದು ಇವರ ಹೆಗ್ಗಳಿಕೆಯ ದ್ಯೋತಕ. ಉಡುಪಿಯ ಕೃಷ್ಣಮಠದ ಶ್ರೀ ಶ್ರೀ ವಿಶ್ವಪ್ರಿಯತೀರ್ಥರಿಂದ ` ಆಸ್ಥಾನ ನೃತ್ಯರತ್ನ ‘’ ಎಂಬ ಬಿರುದು ಪಡೆದ ಏಕೈಕ ನೃತ್ಯ ಕಲಾವಿದರೂ ಕೂಡ. ಕರ್ನಾಟಕದ ರಾಜ್ಯ್ಯೋತ್ಸವ ಪ್ರಶಸ್ತಿ, ಆಸ್ಟ್ರೇಲಿಯಾದ `ನಾಟ್ಯಜ್ಯೋತಿ’ ಮತ್ತು ಯು.ಎಸ್.ಎ.ದ ‘ಮಿಲೇನಿಯಂ’ ಪ್ರಶಸ್ತಿ ಪಡೆದ ಹೆಮ್ಮೆ ಇವರದು.

ಪ್ರತಿವರ್ಷ ೩-೪ ತಿಂಗಳು ಇವರು ಭರತನಾಟ್ಯ ಹಾಗೂ ಯೋಗದ ಬಗ್ಗೆ ಕಾರ್ಯಾಗಾರಗಳನ್ನು ವಿದೇಶಗಳಲ್ಲಿ ನಡೆಸಿಕೊಡುತ್ತಾ ಬಂದಿದ್ದಾರೆ. ಸಿಡ್ನಿಯ ೫೦ ನೇ ವರ್ಷದ ಸ್ವಾತಂತ್ರ್ಯ ಸಂಭ್ರಮೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ ವಸುಂಧರಾ, ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ತಮ್ಮ ನೃತ್ಯಶಾಲೆಯ ಶಾಖೆಯನ್ನು ನಡೆಸುತ್ತಿದ್ದು, ಯು.ಕೆ.ಯ ಭಾರತೀಯ ವಿದ್ಯಾಭವನ, ಪೋಲೆಂಡ್,ಫ್ರಾನ್ಸ್,ಜರ್ಮನಿ, ದಿ ಸೆಚ್ ರಿಪಬ್ಲಿಕ್ ಮತ್ತು ಆಸ್ಟ್ರಿಯಾಗಳಲ್ಲಿ ಐ.ಸಿ.ಸಿ.ಆರ್.ಪ್ರತಿನಿಧಿಯಾಗಿ ಬೇಸಿಗೆ ಶಿಬಿರಗಳನ್ನು ನಡೆಸುತ್ತಾರೆ. ವಿಶ್ವದಾದ್ಯಂತ ಯೋಗ ಶಿಬಿರಗಳನ್ನೂ ನಡೆಸಿಕೊಡುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ಪ್ರಾತ್ಯಕ್ಷಿಕೆ, ಉಪನ್ಯಾಸ ಮತ್ತು ನೃತ್ಯಪ್ರದರ್ಶನ ನೀಡಲು ಎಲ್ಲೆಡೆಯಿಂದ ಆಹ್ವಾನಿತರು.

ಕಳೆದ ಇಪ್ಪತ್ತೈದು ವರುಷಗಳಿಂದ ಉದಯೋನ್ಮುಖ ಹಾಗೂ ಪ್ರತಿಭಾನ್ವಿತ ನೃತ್ಯಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ‘ ಪಲ್ಲವೋತ್ಸವ’, ‘ನಟರಾಜೋತ್ಸವ’, ’ಪಾರಂಗೋತೋತ್ಸವ’ ಮತ್ತು ‘ಚಿಗುರು ಸಂಜೆ ’  ಎಂಬ ನಾಲ್ಕು ಪ್ರತಿಷ್ಟಿತ ಉತ್ಸವಗಳನ್ನು ನಡೆಸಿಕೊಂಡು ಬರುತ್ತಿದ್ದು ಈಗಾಗಲೇ ಸುಮಾರು ಹತ್ತುಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕಲಾವಿದರಿಗೆ ಅವಕಾಶ ಹಾಗೂ ಗೌರವಾರ್ಪಣೆ ಸಲ್ಲಿಸುತ್ತಾ ಬಂದಿರುವುದು ಇವರ ಕಲಾಸೇವೆಯ ವೈಶಿಷ್ಟ್ಯ. ಉತ್ತಮ ಶಿಷ್ಯರಿಗೆ ಸ್ಕಾಲರ್ಷಿಪ್ ನೀಡುವ ಪದ್ಧತಿ ಪಾಲಿಸಿಕೊಂಡು ಬಂದಿದ್ದಾರೆ. ಯಕ್ಷಗಾನ ಸಂಗೀತವನ್ನು ಬಳಸಿಕೊಂಡು ಅವರು ನಿರ್ಮಿಸಿದ `ಪಾಂಚಾಲಿ’ ಯಲ್ಲದೆ ಮಹಿಳಾ ಪ್ರಧಾನವಸ್ತುವನ್ನಿಟ್ಟುಕೊಂಡು ಸಂಯೋಜಿಸಿದ ಸೌಂದರ್ಯಲಹರಿ,ಗಂಗಾಲಹರಿ,ಶಕುಂತಕುಂಜನ, ಅಂಬೆ, ದಾಕ್ಷಾಯಿಣಿ ಏಕವ್ಯಕ್ತಿ ನಿರ್ಮಾಣಗಳು ಮತ್ತು  ಮನ್ಮಥ ದಹನ, ರಾಮಾಯಣ, ವಸುಂಧರಾ ಕಂಡ ಕಾರಂತ,ಕೃಷ್ಣ ತುಲಾಭಾರ, ಹೊಯ್ಸಳ ವೈಭವ  ಮುಂತಾದ ಇಪ್ಪತ್ತಕ್ಕೂ ಹೆಚ್ಚು ಸಮೂಹ ನಿರ್ಮಾಣಗಳು ಎಲ್ಲರ ಮೆಚ್ಚುಗೆ ಗಳಿಸಿವೆ.    

Related posts

ಎಲೆಮರೆಯ ಪ್ರಾಂಜಲ ನೃತ್ಯ ಪ್ರತಿಭೆ ಎನ್. ಸಜಿನಿ

YK Sandhya Sharma

ನೃತ್ಯ ನೈಪುಣ್ಯ ಸಾಧಕಿ-ರತ್ನಾ ಸುಪ್ರಿಯಾ ಶ್ರೀಧರನ್

YK Sandhya Sharma

ಮೋಹಕ ಕೂಚಿಪುಡಿ ನೃತ್ಯಕಲಾವಿದೆ ರಾಜಶ್ರೀ ಹೊಳ್ಳ

YK Sandhya Sharma

Leave a Comment

This site uses Akismet to reduce spam. Learn how your comment data is processed.