Image default
Dance Reviews

‘ವೆಂಕಟೇಶ ನಾಟ್ಯಮಂದಿರ’ ದ ಸಾರ್ಥಕ ಸುವರ್ಣ ಸಂಭ್ರಮ

ಒಂದು ನಾಟ್ಯ ಸಂಸ್ಥೆ ಐವತ್ತು ವರ್ಷಗಳನ್ನು ಯಶಸ್ವಿಯಾಗಿ ಕ್ರಮಿಸುವುದು ಸಣ್ಣ ಸಾಧನೆಯೇನಲ್ಲ. ಈ ಕೀರ್ತಿ ಬೆಂಗಳೂರಿನ ಸುಪ್ರಸಿದ್ಧ ‘ವೆಂಕಟೇಶ ನಾಟ್ಯ ಮಂದಿರ’ಕ್ಕೆ ಸಲ್ಲಬೇಕು. ಅರ್ಧ ಶತಮಾನಗಳ ಹಿಂದೆ ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಗುರು, ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಪ್ರಶಸ್ತಿ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಾಧಾ ಶ್ರೀಧರ್ ತಮ್ಮ ಈ ನೃತ್ಯಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಪ್ರತಿಭಾನ್ವಿತ ನೃತ್ಯಕಲಾವಿದರನ್ನು ರೂಪಿಸಿರುವುದು ಅವರ ಅಗ್ಗಳಿಕೆ. ಇಂದು ವಿಶ್ವದಾದ್ಯಂತ ಇವರ ಬಾನಿಯಲ್ಲಿ ವಿಕಸಿತರಾದ ಶಿಷ್ಯರು ಪ್ರಖ್ಯಾತ ಕಲಾವಿದರಾಗಿ, ತಮ್ಮದೇ ಆದ ನೃತ್ಯಶಾಲೆಗಳ ಮೂಲಕ ನೂರಾರು ಕಲಾವಿದರನ್ನು ನೃತ್ಯಕ್ಷೇತ್ರಕ್ಕೆ ಸಮರ್ಪಿಸುತ್ತ, ಕಲಾಸೇವೆಯಲ್ಲಿ ತೊಡಗಿರುವ ಶ್ರೇಯಸ್ಸು ಗುರು ರಾಧಾ ಅವರಿಗೆ ಸಲ್ಲುತ್ತದೆ. ಕಳೆದ ಐವತ್ತುವರ್ಷಗಳಿಂದ ನಾಲ್ಕು ತಲೆಮಾರುಗಳಿಗೆ ವಿದ್ಯಾಧಾರೆಯೆರೆಯುತ್ತ, ಇಂದೂ ಚಟುವಟಿಕೆಯ ಚಿಲುಮೆಯಾಗಿ ಕ್ರಿಯಾಶೀಲರಾಗಿರುವುದು ಇವರ ವೈಶಿಷ್ಟ್ಯ.

ವಿಶ್ವಾದ್ಯಂತ ನೂರಾರು ನೃತ್ಯಪ್ರದರ್ಶನಗಳನ್ನು ಪ್ರಸ್ತುತಪಡಿಸಿ, ಕಲಾರಸಿಕರಲ್ಲದೆ, ಮಾಧ್ಯಮ ವರ್ಗದಿಂದಲೂ ಅಪಾರ ಪ್ರಶಂಸೆ ಪಡೆದಿರುವುದು ಇವರ ಹೆಮ್ಮೆ. ವಿಶ್ವದ ಗಮನ ಸೆಳೆದ ಇವರ ನೃತ್ಯಸಂಯೋಜನೆಯ ‘ದಿ ನೆಕ್ಟರ್ ಅಂಡ್ ದಿ ಸ್ಟೋನ್’ ಸಾಕ್ಷ್ಯಚಿತ್ರ ಯುಗೊಸ್ಲೋವಿಯಾದ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡದ್ದು  ನೃತ್ಯ ಇತಿಹಾಸದಲ್ಲಿ ದಾಖಲು. ಕಳೆದ ಇಪ್ಪತ್ತೈದು ವರ್ಷಗಳಿಂದ ನಿರಂತರ ದೇಶ-ವಿದೇಶದ ಉದಯೋನ್ಮುಖ ಮತ್ತು ಪ್ರತಿಷ್ಟಿತ ನೃತ್ಯಕಲಾವಿದರಿಗೆ ವೇದಿಕೆಯಿತ್ತು, ಅವರ ಪ್ರತಿಭಾ ಪ್ರಕಾಶಕ್ಕೆ ಉತ್ತೇಜನ ನೀಡುತ್ತ ಬಂದಿರುವ ಸಂಸ್ಥೆಯ  ‘’ರಸಸಂಜೆ’’ ಒಂದು ಪ್ರತಿಷ್ಟಿತ ನೃತ್ಯೋತ್ಸವವಾಗಿ ಗುರುತಿಸಲ್ಪಟ್ಟಿದೆ.

          ಮೂರುದಿನಗಳ ಕಾಲ ನಡೆಯುವ ‘’ರಸಸಂಜೆ’’ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುತ್ತದೆ. ಏಕವ್ಯಕ್ತಿ ನೃತ್ಯಪ್ರದರ್ಶನವಲ್ಲದೆ, ನೃತ್ಯರೂಪಕಗಳನ್ನೂ ಅನಾವರಣಗೊಳಿಸುವ ಈ ಕಾರ್ಯಕ್ರಮ ಇದುವರೆಗೂ ನೂರಾರು ಪ್ರತಿಭಾವಂತರ ಕಲಾಪ್ರದರ್ಶನವನ್ನು ಏರ್ಪಡಿಸಿದೆ. ವರ್ಷಕ್ಕೊಮ್ಮೆ ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಇವರ ಹಿರಿಯ ಶಿಷ್ಯರು ಬೆಂಗಳೂರಿನಲ್ಲಿ ಒಗ್ಗೂಡಿ, ಸುಂದರ ನೃತ್ಯರೂಪಕವನ್ನು ಪ್ರದರ್ಶಿಸುವುದು ವಾಡಿಕೆ. ಅದರಂತೆ ಈ ಬಾರಿ ಅವರ ಅತ್ಯಂತ ಹಿರಿಯ ಏಳುಜನ  ಶಿಷ್ಯರಾದ ಇಂದ್ರಾಣಿ ಪಾರ್ಥಸಾರಥಿ, ರೂಪಾ ಶ್ಯಾಂ ಸುಂದರ್, ಸುಮನಾ ನಾಗೇಶ್, ವಂದ್ಯಾ ಶ್ರೀನಾಥ್, ರಾಗಿಣಿ ಶ್ರೀಧರ್, ವೃಂದಾ ರವಿ ಮತ್ತು ಕುಸುಮಾ ರಾವ್  ರಾಮಾಯಣದ ರಸಾನಂದದ ಧಾರೆಯಲ್ಲಿ ಮೀಯಿಸಿದರು. ರಾಧಾ ಶ್ರೀಧರರ ಸಂಯೋಜನೆಯ ‘’ ರಾಮಾಭಿರಾಮ’’- ರಾಮಾಯಣ ದರ್ಶನ ಮಾಡಿಸುವ ಪ್ರಮುಖ ಹಲವು ಪ್ರಸಂಗಗಳನ್ನು ಆಯ್ದುಕೊಂಡು, ನೇರಸಂಗೀತದ ಸಹಕಾರದಲ್ಲಿ ಅತ್ಯಂತ  ಮನೋಹರವಾಗಿ ಸಮರ್ಪಿಸಿದರು. ನಾಟಕೀಯ ಸನ್ನಿವೇಶಗಳನ್ನು ರಸವತ್ತಾಗಿ ನಿರ್ಮಿಸುತ್ತಾ ತಮ್ಮ ಪ್ರಬುದ್ಧಾಭಿನಯದಿಂದ ಮಿಂಚಿದ ಈ ನೃತ್ಯರೂಪಕ ಹೃದಯಸ್ಪರ್ಶಿಯಾಗಿತ್ತು.  

ರಾಮು ಕಣಗಾಲ್ ನಿರ್ದೇಶನದ ‘’ ಮೋಹಿನಿ ಭಸ್ಮಾಸುರ’’ ವರ್ಣರಂಜಿತವಾಗಿ ಪ್ರದರ್ಶಿತವಾಯಿತು. ಲೋಕಕಂಟಕನಾಗಿದ್ದ ಭಸ್ಮಾಸುರ, ಶಿವನನ್ನು ಕುರಿತು ತಪಸ್ಸು ಮಾಡಿ, ತಾನು ಯಾರ ತಲೆಯ ಮೇಲೆ ಕೈಯಿಟ್ಟರೂ ಅವರು ಭಸ್ಮವಾಗುವಂಥ ವರ ಪಡೆದು ಅದನ್ನು ಶಿವನ ಮೇಲೆಯೇ ಪ್ರಯೋಗಿಸಲೆತ್ನಿಸಿದ. ಅನಂತರ ಹರಿಯ ರೂಪಾಂತರವಾದ ಮೋಹಿನಿಯ ಉಪಾಯದಿಂದ ತಾನೇ ಭಸ್ಮವಾಗುವ ಕುತೂಹಲಕರ ಕಥೆ. ರಾಮು ಭಸ್ಮಾಸುರನಾಗಿ ಪರಿಣಾಮಕಾರಿಯಾಗಿ ಸಂಗಡಿಗರೊಡನೆ ಅಭಿನಯಿಸಿದ ಸುಂದರ ನೃತ್ಯರೂಪಕ ಮನದುಂಬಿತು.

ಗುರು ರಾಧಾ ಶ್ರೀಧರರ ಇನ್ನೊಬ್ಬ ಹಿರಿಯ ಶಿಷ್ಯೆ ವಿದುಷಿ ಬಿಯಾಂಕ ರಾಧಾಕೃಷ್ಣ ಮೋಹಕ ನೃತ್ಯಕ್ಕೆ ಹೆಸರಾದವರು. ಪ್ರಖ್ಯಾತ ಸಂಗೀತ ವಿದುಷಿ ಮತ್ತು ವಾಗ್ಗೇಯಗಾರ್ತಿ ದ್ವಾರಕಿ ಕೃಷ್ಣಸ್ವಾಮಿ ರಚಿಸಿದ ಶ್ರೀರಂಜಿನಿ ರಾಗದ ‘ವರ್ಣ’ವನ್ನು ಮನೋಜ್ಞವಾಗಿ ಸಾಕ್ಷಾತ್ಕರಿಸಿದರು. ‘ಕಾಣುವೆನಾನೆಂತು ಸಖಿ ಮೋಹನ ಅಚ್ಯುತನ’ ಎಂದು ಕೃಷ್ಣನಿಗಾಗಿ ಹಂಬಲಿಸುವ ರುಕ್ಮಿಣಿಯ ಮಾನಸಿಕ ತುಮುಲವನ್ನು ತನ್ನ ಸಾತ್ವಿಕಾಭಿನಯದಿಂದ ಕಟ್ಟಿಕೊಟ್ಟಳು. ತನ್ನ ಮೋಹಕ ನೃತ್ತಗಳೊಡನೆ ಕಲಾವಿದೆ ಹೃದಯಾಪಹಾರಿ ಅಭಿನಯದಿಂದ ‘ರುಕ್ಮಿಣಿ ಕಲ್ಯಾಣ ಕಥಾನಕ’ವನ್ನು ಸುಮನೋಹರವಾಗಿ ನಿರೂಪಿಸಿದಳು.

Related posts

ವಿದ್ಯಳ ಹೃದಯಸ್ಪರ್ಶೀ ನರ್ತನ ನೈಪುಣ್ಯ

YK Sandhya Sharma

ತಾಯಿ-ಮಗನ ಅಪರೂಪದ ರಂಗಪ್ರವೇಶ

YK Sandhya Sharma

Venkatesha Natya Mandira-Rasasanje-2022

YK Sandhya Sharma

Leave a Comment

This site uses Akismet to reduce spam. Learn how your comment data is processed.