Image default
Short Stories

ನಿನ್ನಂಥ ಅಪ್ಪಾ ಇಲ್ಲ!!

ಅಂಜಲಿಯ ಮನಸ್ಸು ವಿಚ್ಛಿದ್ರಗೊಂಡಿತ್ತು. ದುಖಃ ಹುಚ್ಚು ಹೊಳೆಯಾಗಿತ್ತು. ಹೊಟ್ಟೆ ಚುರುಗುಡುತ್ತಿದ್ದರೂ ಎದ್ದು ಊಟ ಬಡಿಸಿಕೊಳ್ಳಲು ಕೈ ಕಾಲುಗಳು ಸೋತುಹೋಗಿದ್ದವು. ಕಣ್ಣ ಕೆರೆ ಭರ್ತಿಯಾಗಿ,ಮನಸ್ಸು ಒಂದೇಸಮನೆ ರೋಧಿಸುತ್ತಿತ್ತು-ಇವನೇಕೆ ಹೀಗೆ ನಂಬಿಕೆ ದ್ರೋಹ ಮಾಡಿದ?ಇವನಿಗೇನು ನಾನು ಕಡಿಮೆ ಮಾಡಿದ್ದೆ?ಅವ್ಯಾಹತ ಪ್ರೀತಿಯ ಧಾರೆಯನ್ನೇ ಸುರಿಸಿದ್ದೆನಲ್ಲ? ಎಂದೂ ಮುಕ್ಕಾಗದ ನನ್ನ ಪ್ರೀತಿಯ ಭಂಡಾರದಲ್ಲೇನು ಅವನಿಗೆ ಅರೆ ಕೊರೆ ಕಂಡದ್ದು? ನನ್ನಂಥ ರೂಪಸಿ, ವಿದ್ಯಾವಂತೆ,ಸಿರಿವಂತ ಮನೆತನದ ವಾತ್ಸಲ್ಯಮಯಿ ಹೆಣ್ಣನ್ನು ಪಡೆಯಲು ಅವನು ಖಂಡಿತಾ ಪುಣ್ಯ ಮಾಡಿರಬೇಕು…ಹೀಗಿದ್ದೂ ಅವನ ಆಸಕ್ತಿ ಬೇರೆಡೆ ಹರಿದದ್ದು ಏಕೆಂದು ಯೋಚಿಸೀ ಯೋಚಿಸಿ ಅವಳ ತಲೆ ಜೇನುಗೂಡಾಗಿಹೋಯಿತು. ಮನಸ್ಸು ಕನಲತೊಡಗಿದಂತೆ ಕಣ್ಣಹನಿಗಳು ಕೆನ್ನೆಯ ಮೇಲೆ ಪಟಪಟನೆ ಉರುಳಿದವು.

                ಸಂಜೆಯವರೆಗೂ ಅಂಜಲಿ ಹಾಗೇ ಮರಗಟ್ಟಿ ಕುಳಿತಿದ್ದಳು. ಊಟವಿಲ್ಲದೆ ತಲೆ ತಿರುಗಿ ಬೀಳುವಂತಾಗಿತ್ತು.ಅಷ್ಟರಲ್ಲಿ ಮೇಜಿನ ಮೇಲಿದ್ದ ಮೊಬೈಲ್ ರಿಂಗುಣಿಸತೊಡಗಿತು. ಅವಳು ಕೂತ ಜಾಗದಿಂದ ಕದಲಲು ಪ್ರಯತ್ನಿಸಿದರೂ ಅವಳ ದೇಹ ಕೊಂಚವೂ ಮಿಸುಕಾಡಲಿಲ್ಲ. ಕೈ ಚಾಚಿದರೆ ನಿಲುಕುವಷ್ಟು ಸನಿಹದಲ್ಲಿದ್ದ ಮೊಬೈಲ್ಲನ್ನು ಎತ್ತಿಕೊಳ್ಳುವ ಚೈತನ್ಯದ ಕೊನೆ ಹನಿಯೂ ಅವಳಲ್ಲಿ ಬತ್ತಿಹೋಗಿತ್ತು. ಬಹಳ ಹೊತ್ತು ಕೂಗಿ ಕೂಗಿ ಸಾಕಾದ ಮೊಬೈಲ್ಲಿನ ದನಿ ಸತ್ತುಹೋಯಿತು. ಆದರೂ ಅವಳಲ್ಲಿ ಸಣ್ಣ ಮಿಸುಕಾಟವೂ ಕಾಣಲಿಲ್ಲ…..ಮತ್ತೆ ಎರಡೇ ನಿಮಿಷಗಳಲ್ಲಿ ಫೋನ್ ಮತ್ತೆ ಆರ್ತನಾದಗೈದಿತು. ಆದರೆ ಅಂಜಲಿ ಮಾತ್ರ ಪ್ರತಿಮೆಯಂತೆ ನಿಶ್ಚಲವಾಗಿ ಕುಳಿತಿದ್ದಳು.!!

                ಅವಳ ಮನಸ್ಸು ರಚ್ಚೆ ಹಿಡಿದಿತ್ತು. ಅವನದೇ ಕರೆಯೆಂಬ ಎಣಿಕೆಯಿಂದ ಉಸಿರು ಬಿಗಿಯಾಗಿ ಹಲ್ಲು ಕಚ್ಚಿಕೊಂಡು ಮತ್ತಷ್ಟು ಸೆಟೆದು ಕುಳಿತಳು. ಮನಸ್ಸು ಮುರಿದುಹಾಕಿ ಈಗ ಮತ್ತೇನೋ    ಹುನ್ನಾರ ಹೆಣೆದು,  ಸಮಾಧಾನ ಮಾಡುವ  ನಾಟಕವಾಡುತ್ತಿದ್ದಾನೆಂದೇ ಅವಳ ಊಹೆಯಾಗಿತ್ತು. ಉಹೂಂ….ಅವಳು ಅಷ್ಟೇ ಹಟಮಾರಿಯಾಗಿದ್ದಳು…..ಇವತ್ತೇನಾದರೂ ಈ ವಿಷಯದ ಬಗ್ಗೆ ಒಂದು ತೀರ್ಮಾನವಾಗಲೇಬೇಕು, ಅವನ ಹುಸಿಮಾತುಗಳಿಗೆ ತಾನು ಬಲಿಯಾಗಬಾರದೆಂದು ಅಂಜಲಿ ಅದಾಗಲೇ ನಿರ್ಧರಿಸಿಯಾಗಿತ್ತು. 

                ನಿಮಿಷಗಳು ಕುಪ್ಪಳಿಸಿ,ಗಂಟೆಗಳು ದಾಟಿದರೂ ಅವನತ್ತಣ ಕರೆಯಿಲ್ಲ, ಮನೆಯ ಮುಂದೆ ಕಾರು ನಿಂತ ಸಪ್ಪಳವಾಗಲಿ, ಗೇಟು,ಕಾಲಿಂಗ್ ಬೆಲ್ಲಿನ ದನಿಯಾಗಲಿ ಇಲ್ಲವೇ ಇಲ್ಲ. ಆ ದನಿಗಳು  ತನ್ನ ಕಿವಿಗೆ ಬೀಳಲೇಕೂಡದೆಂದು ಘರ್ಜರಿಸಿದ್ದ ಮನ, ಈಗ ಸುತ್ತ ಹರಡಿಕೊಂಡ ಅಸಹನೀಯ ಶೂನ್ಯತೆ-ದಟ್ಟ ಕತ್ತಲೆಗೆ ಬೆದರಿ, ಕಿವಿ ನಿರೀಕ್ಷಿತವಾಗಿ ನಿಮಿರಿತು. ಎದೆಬಡಿತ ತೀವ್ರವಾಗಿ ಏರತೊಡಗಿತು. ಅಯಾಚಿತವಾಗಿ ಕಣ್ಣು ಗೋಡೆ ಗಡಿಯಾರದತ್ತ ಹೊರಳಿ ಹೌಹಾರಿತು!….ಗಂಟೆ ಆಗಲೇ ಒಂಭತ್ತು ದಾಟಿತ್ತು. ಕೈ ಕಾಲು ಕುಸಿದ ಅನುಭವ…ಹೊಟ್ಟೆಯೆಲ್ಲಾ ಖಾಲಿ ಖಾಲಿ…ಅವಳನ್ನು ಉಪಚರಿಸಿ, ಮುದ್ದಿಸಿ ಉಣಿಸುವವರಾರೂ ಅಲ್ಲಿರಲಿಲ್ಲ…ಅದನ್ನು ಮನಗಂಡು ,ತಾನೇ ಸಮಾಧಾನಿಸಿಕೊಂಡು ಮೇಲೇಳಹೊರಟವಳು ಹಾಗೇ ಕುಸಿದಳು.

                ಅಷ್ಟರಲ್ಲಿ ಜೋರಾಗಿ ಕಾಲಿಂಗ್ ಬೆಲ್ ಸದ್ದಾಯಿತು. ಅದರ ಸದ್ದಿಗೆ ಮೈಯೆಲ್ಲ ಕಿವಿಯಾಗಿ ಕುಳಿತಿದ್ದ ಅಂಜಲಿಗೆ ಅದೆಲ್ಲಿಂದ ಕೋಪ ಸಿಡಿಯಿತೋ, ಮುಖ ರಕ್ತದುಂಡೆಯಾಯಿತು. ಗಂಡನ ಬಗ್ಗೆ ಹೇಸಿಗೆ ಕಾರಂಜಿಯಾಯಿತು. ಕಡೆಗೂ ಹಳೇ ಹೆಂಡತಿಯ ಸಂಗವೇ ಗತಿ ಅಂತ ಬಂದೆಯಾ ನಾಚಿಕೆಗೆಟ್ಟವನೇ…ಇಲ್ಲ ನಿನ್ನ ಪಾಲಿಗೆ ನನ್ನ ಮನದ ಬಾಗಿಲು ಮುಚ್ಚಿದೆ, ತೊಲಗಾಚೆ…ನೋ…ಗೆಟ್ ಔಟ್…..ಮನದ ಉಮ್ಮಳದ ಕಡೆಯ ಮಾತುಗಳು ಕೊಂಚ ಜೋರಾಗಿಯೇ ಹೊರನುಗ್ಗಿದವು.

ಮತ್ತೆ ಬೆಲ್ ಕರ್ಕಶವಾಗಿ ಎರಡು ಬಾರಿ ಅರಚಿತು. ಉಹೂಂ…ಅಂಜಲಿ ಕಲ್ಲಾಗಿದ್ದಳು. ಕಿಟಕಿಯಿಂದ ತೂರಿಬಂದ ಗಾಬರಿಯ ದನಿ-“ಅಂಜೂ”…

 ಅಂಜಲಿ ಗಡಬಡಿಸಿ ನಡುಗಿದಳು…”ಅಂಜೂ ಮರಿ, ಬಾಗ್ಲು ತೆಗಿ ಪುಟ್ಟಾ…”-ಅಮ್ಮನ ಆತಂಕದ ದನಿ ಕೇಳಿ ಅಂಜಲಿಗದೆಲ್ಲಿಂದ ಶಕ್ತಿ ಬಂತೋ ಬುಡಕ್ಕನೆದ್ದು ಬಾಗಿಲು ತೆಗೆದು-” ಅಮ್ಮಾ” ಎಂದು ಒಂದೇ ದನಿ ತೆಗೆದು ಎಳೇಮಗುವಿನಂತೆ ಅಮ್ಮನ ತೆಕ್ಕೆಗೆ ಬಿದ್ದು ಬಿಕ್ಕಳಿಸಿ ಅಳತೊಡಗಿದಳು.

                ಶಾರದಮ್ಮನಿಗೆ ಎದೆ ಬಿರಿವ ಗಾಬರಿ!…ಮಗಳನ್ನು ಎದೆಗಪ್ಪಿಕೊಂಡೇ ಒಳಕರೆತಂದು ಸೋಫದ ಮೇಲೆ ಕುಳ್ಳರಿಸಿ, ತಲೆ ಸವರಿ ಸಂತೈಸುತ್ತಾ” ಏನಾಯ್ತೇ?…ಫೋನ್ ಮಾಡಿದರೆ ತೆಗೀಬಾರ್ದಾ?…ನಾವೆಷ್ಟು ಗಾಬರಿಯಾಗಬೇಡ ಹೇಳು?…ಏನಾಯ್ತೋ ಅಂತ ಹೆದರ್ಕೊಂಡು ನಿಮ್ಮಪ್ಪ ಒಂದೇ ಉಸಿರಿನಲ್ಲಿ ಮೈಸೂರಿನಿಂದ ಬೆಂಗಳೂರಿನವರೆಗೂ ಸ್ಪೀಡಾಗಿ  ಡ್ರೈವ್ ಮಾಡ್ಕೊಂಡು ಬಂದಿದ್ದಾರೆ ಗೊತ್ತಾ?…ಯಾಕೆ, ಏನಾಯ್ತು ಹೇಳೇ”-ಎಂದು ಕೆದರಿದ ಅವಳ ತಲೆಗೂದಲನ್ನು ಹಿಂದಕ್ಕೆ ತೀಡುತ್ತ ಕಕ್ಕುಲತೆಯಿಂದ ಕೇಳಿದರು. ಆಕೆಯ ಪಕ್ಕದಲ್ಲಿ ಅಷ್ಟೇ ವಿಚಲಿತರಾಗಿ ನಿಂತಿದ್ದ ಶಂಕರಪ್ಪನವರ ಮುಖದಲ್ಲೂ ವ್ಯಾಕುಲತೆ ತುಂಬಿತ್ತು.

                ಅಂಜಲಿಯ ಮೊಗ ಮ್ಲಾನವಾಯಿತು. ” ನಾಯಿ ಬಾಲ ಡೊಂಕು ಕಣಮ್ಮ …ನಾನವತ್ತೇ ಹೇಳಿದೆ…ಇದು ಸರಿ ಹೋಗಲ್ಲಮ್ಮ, ಬಿಟ್ಬಿಡೂಂತ…ನೀನು ಕೇಳಲಿಲ್ಲ…ಏನೋ ಸಬೂಬು ಹೇಳಿ ರಾಜಿ ಮಾಡಿಸಿದೆ…ಈಗ ನೋಡು, ಅದೇ ಹಳೆಯ ರಾಗ…ಹಳೇ ಚಾಳಿ…ಇನ್ನೂ ಅವಳ ಸಹವಾಸ ಬಿಟ್ಟಿಲ್ಲಮ್ಮ…”-ಮತ್ತೆ ಬಿಕ್ಕಳಿಸಿದಳು ಅಂಜಲಿ.

                ಶಾರದಮ್ಮನಿಗೆ ತಾವು ತಪ್ಪು ಮಾಡಿದೆವಾ ಎಂಬ ಅಳುಕು ಒಳಗೊಳಗೇ ಕುಟುಕಿತು. ಗಂಡನತ್ತ ಮೆಲ್ಲನೆ ನೋಟ ಸರಿಸಿದರು. ಶಂಕರಪ್ಪ ಭರವಸೆಯ ಕಣ್ಣುಗಳಿಂದ ಮಗಳತ್ತ ತಿರುಗಿ-“ಅಂಜೂ, ನೀನು ಓದಿದೋಳು, ಬೇರೆಯವರ ಮನಸ್ಸನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕಮ್ಮ…ಸಣ್ಣ ಸಣ್ಣ ವಿಷಯಗಳಿಗೂ ಹೀಗೆ ದುಡುಕಿ, ನೀನೂ ಕಂಗೆಟ್ಟು,ಇತರರನ್ನೂ ಸಂಕಟಕ್ಕೆ ಸಿಲುಕಿಸಬಾರದು…ಸ್ವಲ್ಪ ನಿಧಾನವಾಗಿ ಯೋಚಿಸಿ ನೋಡು, ಏನಂಥಾ ಪ್ರಮಾದ ಆಗಿದ್ದು…?” ಎಂದರು ಶಾಂತಚಿತ್ತರಾಗಿ.

                ಆದರವಳು ಅಶಾಂತಿಯಿಂದ ಅರಚಿದಳು: “ನೀವು ಗಂಡಸರಪ್ಪಾ, ನಿಮಗೆ ಹೇಗೆ ತಾನೆ ಹೆಂಗಸರ ಮನದ ನೋವು -ಭಾವನೆಗಳು ಅರ್ಥವಾಗಬೇಕು?…ಬಾಳಸಂಗಾತಿ ಅಂತ ನಾವು ಅವ್ಯಾಜ ಅಂತಃಕರಣದಿಂದ ಸ್ವೀಕರಿಸಿದವರ ಮನದಲ್ಲಿ ಬೇರೊಬ್ಬರು ಇದ್ದಾರೆ ಅಂತ ಗೊತ್ತಾದರೆ, ಎಷ್ಟು ಸಂಕಟವಾಗತ್ತೆ ಅಂತ ನಿಮಗ್ಹೇಗೆ ಗೊತ್ತಾಗತ್ತೆ ಬಿಡಿ…ಸುಮ್ಮನೆ ಉಪದೇಶ ಮಾಡಬೇಡಿ…ಅನುಭವಿಸಿದವರಿಗೇ ಗೊತ್ತು ಅಂಥ ಯಾತನೆ…” -ಅಂಜಲಿಯ ದನಿಯಲ್ಲಿ ನೋವು ಚಿಮ್ಮುತ್ತಿತ್ತು. 

ಶಂಕರಪ್ಪ ಮೌನವಾದರು!

                ಶಾರದಮ್ಮ ಗಂಡನತ್ತ ದೈನ್ಯವಾಗಿ ನೋಡಿದರು. ಮಗಳ ಸಮಸ್ಯೆ ಅವರಿಗೆ ಹೊಸದೇನಲ್ಲ. ಸುಮಂತ್ ಅನುರೂಪನಾದ ವರ ಎಂದೇ ಗಂಡ-ಹೆಂಡತಿ ತೀರ್ಮಾನಿಸಿ, ಅಂಜಲಿಯ ಒಪ್ಪಿಗೆ ಪಡೆದೇ ಅವರ ಮದುವೆ ನೆರವೇರಿಸಿದ್ದು. ಸುಮಂತ್ ನೋಡಲು ಲಕ್ಷಣವಾಗಿದ್ದ. ಮಲ್ಟೀ ನ್ಯಾಷನಲ್ ಕಂಪೆನಿಯಲ್ಲಿ ಒಳ್ಳೆಯ ಕೆಲಸ, ಸಾಫ್ಟ್‍ವೇರ್ ಎಂಜಿನಿಯರ್ -ಕೈತುಂಬ ಸಂಬಳ. ಮನೆತನದ ಹಿನ್ನಲೆಯೂ ಒಪ್ಪಿತವಾಗಿತ್ತು. ಅಂಜಲಿ ಕೂಡ ಅವನನ್ನು ಮೊದಲ ನೋಟದಲ್ಲೇ ಇಷ್ಟಪಟ್ಟಿದ್ದಳು. ಅವರಿಬ್ಬರ ಮದುವೆಗೆ ಯಾವುದೇ ಅಡ್ಡಿಯಿರಲಿಲ್ಲ. ಮದುವೆ ವೈಭವೋಪೇತವಾಗೇ ನಡೆದಿತ್ತು. ಶಂಕರಪ್ಪ ದಂಪತಿಗಳಿಗೆ ಅವಳೊಬ್ಬಳೇ ಮಗಳು,ಸಾಕಷ್ಟು ಆಸ್ತಿಯೂ ಇತ್ತವರಿಗೆ. ತಮ್ಮ ಮುದ್ದಿನ ಕಣ್ಮಣಿ ಸದಾ ಸುಖಿಯಾಗಿರಬೇಕೆಂಬುದೊಂದೇ ಹೆಬ್ಬಯಕೆ ಅವರದು. ಎಲ್ಲವೂ ಅವರಿಚ್ಛೆಯಂತೆಯೇ ನಡೆದಿತ್ತು.

                ನವ ವಿವಾಹಿತರ ಜೀವನ ಮಧುರಮಯವಾಗಿಯೇ ಸಾಗಿತ್ತು ಮೊದಲ ಮೂರ್ನಾಲ್ಕು ತಿಂಗಳು.ಬೆಂಗಳೂರಿನಲ್ಲಿ ಸ್ವಂತ ಫ್ಲ್ಯಾಟ್, ಕಾರು, ಬೇಕಾದ್ದನ್ನು ಪಡೆಯಬಹುದಾದ ಅನುಕೂಲತೆ, ಹಣ..ಇತರ ಯಾವ ಜವಾಬ್ದಾರಿಗಳೂ ಇಲ್ಲ.ಸ್ವರ್ಗಕ್ಕೆರಡೇ ಗೇಣು ಅಂದುಕೊಂಡಿದ್ದಳು ಅಂಜಲಿ.ಆದರೆ ಅದ್ಯಾವ ಗುಂಗಿನಲ್ಲಿ ಸುಮಂತ್, ಹೆಂಡತಿಯ ಮುಂದೆ ತನ್ನ ಬಾಲ್ಯದ ಜೀವನ, ಗೆಳೆಯ-ಗೆಳತಿಯರು,ಸುತ್ತಾಡುತ್ತಿದ್ದ ಷಾಪಿಂಗ್ ಮಾಲ್ ಗಳು,ನೋಡುತ್ತಿದ್ದ ಸಿನಿಮಾ ಇತ್ಯಾದಿ ಖುಷಿಯ ದಿನಗಳ ಬಗ್ಗೆ ಬಿಚ್ಚಿಕೊಳ್ಳುವ ಗಡಿಬಿಡಿಯಲ್ಲಿ ಹಿಂದಿನ ತನ್ನ ಪ್ರೇಮ ಪ್ರಕರಣವೊಂದರ ಬಗ್ಗೆಯೂ ಬಾಯಿಬಿಟ್ಟುಬಿಟ್ಟಿದ್ದ,ತನ್ನರಿವಿಲ್ಲದೆ.ಅಂಜಲಿಗೆ ಷಾಕ್!…ಅವಳಲ್ಲಿ ಅಂಥಾ ರೋಚಕ ಕಥೆಗಳಿರಲಿಲ್ಲ…ಬಾಯಿ ಬೇಡ, ಅಂಥವಕ್ಕೆ ಕಿವಿಯೂ ಆಗಲಿಚ್ಛಿಸಿರಲಿಲ್ಲ ಅವಳು….ಅಂಥ ಮಡಿವಂತಳಾಗಿರದಿದ್ದರೂ,ಅವುಗಳನ್ನೆಲ್ಲಾ ಕೇಳಿ ಎಂಜಾಯ್ ಮಾಡುವ ಪ್ಲೇ ಗರ್ಲೂ ಆವಳಾಗಿರಲಿಲ್ಲ. ತುಂಬಾ ಸೂಕ್ಷ್ಮ ಮನೋಭಾವದ ಅಂಜಲಿ ಗಂಡ ಹೇಳಿದ್ದಕ್ಕೂ ಹೆಚ್ಚು ಕಲ್ಪಿಸಿಕೊಂಡು ಕೊರಗತೊಡಗಿದಳು. ಈಗಲೂ ಅವನ ಚಿತ್ತ ತನ್ನ  ಮಾಜಿ ಪ್ರೇಯಸಿಯಲ್ಲೇ ಲೀನವಾಗಿರಬಹುದೇ ?…ಅವಳ ಸಂಪರ್ಕ ಇನ್ನೂ ಇಟ್ಟುಕೊಂಡಿರಬಹುದೇ?…ಇವರಿಬ್ಬರೂ ಎಷ್ಟು ಕಾಲ, ಹೇಗ್ಹೇಗೆಲ್ಲ ಕಾಲ ಕಳೆದಿರಬಹುದು? ಅವರ ಸಲುಗೆ-ಸಂಬಂಧ ಎಲ್ಲಿಯವರೆಗೆ ಬೆಳೆದಿರಬಹುದು? ಇತ್ಯಾದಿಯೆಲ್ಲ ಯೋಚಿಸಿ ಅವಳ ತಲೆ ಹುತ್ತಗಟ್ಟಿತು. ಜೊತೆಗೆ ಅವನ ತಲೆಯನ್ನೂ ತಿಂದಳು ಎಡೆಬಿಡದೆ.

                “ನಿಜ ಹೇಳಿ ಸುಮಂತ್,ನಿಮ್ಮಿಬ್ಬರ ಸಂಬಂಧ ಎಷ್ಟು ಕಾಲ ನಡೆದುಕೊಂಡು ಬಂತು?…ಈ ಮಧ್ಯೆ ಎಡವಟ್ಟುಗಳು ಆಗಲಿಲ್ಲ ತಾನೇ?…ನನ್ನ ಜೊತೆ ಇರುವಾಗಲೂ ನಿಮ್ಮನ್ನು ಅವಳ ನೆನೆಪು ಕಾಡುವುದೇ?”

                “ತಲೆ ಕೆಟ್ಟಿದೆಯೇ ನಿನಗೆ?…ಸುಮ್ನೆ ಮಲಗಿಕೋ…ನನಗೆ ತುಂಬಾ ನಿದ್ದೆ ಬರ್ತಿದೆ”-ಸುಮಂತ ಗೋಡೆಗೆ ಮುಖ ಮಾಡಿ ಮಲಗಿದ.

                “ನೀವು ಗಂಡಸರೇ ಇಷ್ಟು, ನಿಜ ಹೇಳಬೇಕಾದ ಸಂದರ್ಭದಲ್ಲಿ ಏನೋ ಸಬೂಬು ಹೇಳಿ ಯಾಮಾರಿಸ್ತೀರಿ….ನೋ …ನನಗೆ ಇವತ್ತು ಸ್ಪಷ್ಟ ಉತ್ತರ ಬೇಕೇ ಬೇಕು” ಅವನ ಭುಜ ಕದಲಿಸಿದಳು ಅಂಜಲಿ. ಆಗಲೇ ಅತ್ತಣಿಂದ ಗೊರಕೆಯ ಸದ್ದು. ದಿಂಬು ಒದ್ದೆ ಮಾಡುವುದನ್ನು ಬಿಟ್ಟರೆ ಅವಳಿಗೆ ಗತ್ಯಂತರವಿರಲಿಲ್ಲ.

                “ಇದು ನನ್ನ ಕೆರಿಯರ್ ಮೇಲೆ ಎಫೆಕ್ಟ್ ಮಾಡತ್ತೆ ಅಂಜೂ,…ಪ್ಲೀಸ್ ಇಲ್ಲಸಲ್ಲದ ಪ್ರಶ್ನೆ ಕೇಳಿ ನನ್ನ ಗೋಳುಹೊಯ್ದುಕೊಳ್ಳಬೇಡ,….ಈ ಕಿರಿಕಿರಿ ನನ್ನ ಕೆಲಸದ ಸಾಮಥ್ರ್ಯಾನ ಹಾಳು ಮಾಡಿ ಕಡೆಗೆ ನನ್ನ ಕೆಲಸ ಹೋಗತ್ತೆ ತಿಳ್ಕೋ….ನೀನು ಇದನ್ನೇ ಮುಂದುವರಿಸಿದರೆ ನಿನ್ನ ತಂದೆ-ತಾಯಿಗೆ ತಿಳಿಸಬೇಕಾಗತ್ತೆ ಮತ್ತೆ” ಎಂದು ಧಮಕಿಯನ್ನೂ ಹಾಕಿದ ಸುಮಂತ.

                “ನೀವೇನು ತಿಳಿಸೋದು..ನಾನೇ ಫೋನ್ ಮಾಡಿ ಹೇಳ್ತೀನಿ,ಆಗ ನಿಮ್ಮ ಮರ್ಯಾದೇನೇ ಹೋಗತ್ತೆ….”

                ” ಸರಿ…ನಿನ್ನ ತಲೇ ಮೇಲೆ ನೀನೇ ಚಪ್ಪಡಿ ಎಳೆದುಕೊಳ್ತೀಯಾ…ನನ್ನ ನೀನು ಕಳೆದುಕೊಳ್ಳಬಹುದು”-ಎಂದ ನಿಷ್ಠೂರವಾಗಿ. ಅಂಜಲಿ ಅವನನ್ನು ಕೆಂಗಣ್ಣಿಂದ ಚಿವುಟಿದಳು.

                ಮತ್ತೊಮ್ಮೆ ಕದನವಾರಂಭವಾದಾಗ ಸುಮಂತ್ ರೇಗಿಯೇ ಬಿಟ್ಟ: “ಅಂಜೂ…ವಿನಾಕಾರಣ ನನ್ನ ತಲೆ ಕೆಡಿಸಬೇಡ, ಪರಿಣಾಮ ನೆಟ್ಟಗಾಗಲ್ಲ ನೋಡು”

                “ಹೆಂಗಸರನ್ನು ಯಾವ ಥರ ಹೆದರಿಸೋಕೂ ಸಿದ್ಧ ನೀವು ಗಂಡಸರು….ನಿಮ್ಮ ಅಸ್ತ್ರಗಳೆಲ್ಲ ಗೊತ್ತು ನನಗೆ”-ಎಂದವಳೇ ಅಂಜಲಿ ತಾನೇ ತಾಯಿ ಮನೆಗೆ ಫೋನ್ ಮಾಡಿ ಗೊಳೋ ಎಂದು ಅತ್ತುಬಿಟ್ಟಳು. ಗಾಬರಿಯಾದ ಅವಳ ಹೆತ್ತವರು ಧುಡುಮ್ಮನೆ ಅವಳ ಮನೆಗೆ ಬಂದಿಳಿದರು. ಅಂಜಲಿ ಬರೀ ಕಣ್ಣೀರಾದಳು.” ನಾನಿವರ ಜೊತೆ ಇನ್ನು ಬಾಳುವೆ ಮಾಡಲಾರೆ…ನನಗೆ ತುಂಬಾ ಮೋಸವಾಗಿದೆ”-ಎಂದು ಪಟ್ಟು ಹಿಡಿದಿದ್ದನ್ನು ಕಂಡು ಅವರು ಕಂಗಾಲಾದರು.

                ” ಹೆಣ್ಣು ಅತೀ ಭಾವನಾಜೀವಿ…ಕಲ್ಪನೆಗಳಲ್ಲೇ ವಿಹರಿಸುತ್ತ ಖುಷಿಯೂ ಪಡಬಹುದು,ಸಲ್ಲದ್ದು ಊಹಿಸಿಕೊಂಡು ಯಾತನೆಯನ್ನೂ ಅನುಭವಿಸಬಹುದು..ಇದರಿಂದ ನೋವು ಅನುಭವಿಸೋದೇ ಜಾಸ್ತಿ, ಇಲ್ಲದ ವಿಪರೀತ ಕಥೆ ಮನಸ್ನಲ್ಲೇ ಹೆಣೆದುಕೊಂಡು ವೃಥಾ ಕೊರಗೋದು ಬೇಡ ಪುಟ್ಟಾ….ನೀನು ಬುದ್ಧಿವಂತಳು ಕೊಂಚ ಯೋಚಿಸಿನೋಡು…ದುಡುಕಿ ನಿನ್ನ ಬಾಳನ್ನು ನೀನೇ ಹಾಳುಮಾಡಿಕೊಳ್ಳಬೇಡ ಮರಿ..” -ಶಾರದಮ್ಮ ಮಗಳಿಗೆ ತಮ್ಮ ಶಕ್ತಿ ಮೀರಿ  ಬುದ್ಧಿವಾದ ಹೇಳಿದರು. ಶಂಕರಪ್ಪನವರೂ-“ನಾನು ಕಂಡ ಹಾಗೆ ಸುಮಂತ ಮೆಚೂರ್ಡ್ ಮೈಂಡ್‍ನವನು ಕಣೆ ತಾಯಿ …ಪಾಪ ಎಲ್ಲಾ ಓಪನ್ನಾಗಿ ಹೇಳಿಕೊಂಡಿದ್ದಾನೆ…ಇದೆಲ್ಲಾ ವಯಸ್ನಲ್ಲಿ ಸಹಜ ಕಣಮ್ಮ…ಹಿಂದಿನದೆಲ್ಲ ಕೆದಕಬಾರದು. ಫರ್ಗೆಟ್ ಅಂಡ್ ಫರ್ಗೀವ್ ಹಿಮ್…ಈಗ ನಿನ್ನ ಕಂಡರೆ ಅವನಿಗೆ ಪ್ರಾಣಾ ತಾನೇ? ಈಗಿನದನ್ನು ಯೋಚಿಸು,ಇವತ್ತಿಗೆ ಪ್ರಾಮುಖ್ಯತೆ ಕೊಡು….ಸ್ವಲ್ಪ ವಿಶಾಲವಾಗಿ ಯೋಚಿಸಿನೋಡಿದರೆ ಎಲ್ಲ ಸರಿಹೋಗತ್ತೆ…ದೊಡ್ಡ ಮನಸ್ಸು ಬೆಳೆಸಿಕೋಮ್ಮ”

                ತಂದೆ ನೀಡಿದ ಉಪದೇಶ ಅಂಜಲಿಗೆ ಅಪಥ್ಯವೆನಿಸಿತು.

“ಉಪದೇಶ ಸುಲಭಾನಪ್ಪಾ…ಪರಿಸ್ಥಿತಿ ಎದುರಿಸೋದು ಕಷ್ಟ…ಶುಷ್ಕ ವೇದಾಂತ ಬೇಡ…”

ಮಗಳ ಹರಿತ ಉತ್ತರ ಕಂಡು ಶಂಕರಪ್ಪ ಸಪ್ಪಗಾದರು. ಅವರ ಮುಖಭಾವ ನೋಡಿ ಶಾರದಮ್ಮ ತಮ್ಮ ಮುಖವನ್ನು ನೋವಿನಿಂದ ಹಿಂಡಿಕೊಂಡರು.ಆದರೂ ಆಕೆ ಬಿಡಲಿಲ್ಲ. ಮಗಳನ್ನು ಒಬ್ಬಳೇ ಕೂರಿಸಿಕೊಂಡು ಅವಳ ಮನಸ್ಸನ್ನು ಕೊರೆಯುತ್ತಿದ್ದ ಕೀಟವನ್ನು ಕಿತ್ತೊಗೆಯಲು ಅನೇಕ ಉದಾಹರಣೆಗಳನ್ನಿತ್ತು ಪ್ರಯತ್ನಿಸಿದರು. ಸುಮಂತನೊಡನೆಯೂ ತುಂಬ ಹೊತ್ತು ಮಾತಾಡಿದನಂತರ ಫಲಪ್ರದವಾಯಿತು ಸಂಧಾನ. ಅಂತೂ ಕಡೆಗೂ ಅಂಜಲಿಗೆ ಮನದಟ್ಟು ಮಾಡಿ ಅವಳ ಮನಸ್ಸನ್ನು ತಿಳಿಗೊಳಿಸಿ ಗಂಡ ಹೆಂಡಿರ ನಡುವೆ ರಾಜಿ ಮಾಡಿಸಿದನಂತರವೇ ಅವರು ಊರಿಗೆ ಹೊರಟಿದ್ದು.

                ಇದಾದ ಏಳೆಂಟು ತಿಂಗಳ ನಂತರವೂ ಮತ್ತೊಮ್ಮೆ ಅವರು ಮಗಳ ಮನೆಗೆ ಬಂದು ಸಂಧಾನ ಮಾಡಿಸಿ ಗೆದ್ದಿದ್ದರು.

                ಇಷ್ಟರಲ್ಲಿ ಸಿಹಿ ಸುದ್ದಿ ಕೇಳಿ ಆ ಹಿರಿಯ ದಂಪತಿಗಳು ಹಿರಿ ಹಿರಿ ಹಿಗ್ಗಿಹೋಗಿದ್ದರು. ಇನ್ನು ಮುಂದೆ ಹಿಂದಿನ ಸಮಸ್ಯೆ ಮರುಕೊಳಿಸದೆಂಬ ನಂಬಿಕೆ ಅವರದಾಗಿತ್ತು….ಆ..ದ..ರೆ, ಈಗ ಪರಿಸ್ಥಿತಿ ಎಲ್ಲವೂ ತಲೆಕೆಳಗಾಗಿತ್ತು. ಅಂಜಲಿ ಹುಚ್ಚಿಯಂತಾಡುತ್ತಿದ್ದಳು. ಮೊಬೈಲ್‍ಗೆ ಫೋನ್ ಮಾಡಿದರೆ ಎತ್ತಲೇ ಇಲ್ಲ. ಮತ್ತೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿದೆ.!ಎದೆಯೊಡೆದು ಊರಿಂದೂರಿಗೆ ಓಡಿ ಬಂದಿದ್ದರು. ಫೋನ್ ಛಾರ್ಜ್ ಮಾಡದೆ ಬಿಸಾಕಿದ್ದಾಳೆ ಮಗಳು!… ವಿವರಣೆ ಕೇಳಿದರೆ ಮತ್ತದೇ ಪ್ರವರ!..ಏನು ಮಾಡುವುದೋ ಒಂದೂ ತೋಚದಾಯಿತು. ಬಸುರಿ ಹುಡುಗಿ ಬೆಳಗಿನಿಂದ ಉಪವಾಸ. ಶಾರದಮ್ಮನವರ ತಾಯಿ ಹೃದಯ ಚುರಕ್ಕೆಂದಿತು.

“ಮತ್ತೇನೆ ನಿನ್ನ ರಗಳೆ?”

                “ಮೊನ್ನೆ ಅವರ ಫ್ರೆಂಡ್ ರಾಹುಲನ ಹೆಂಡ್ತಿ ನನಗೇಂತ ಮಾವಿನಕಾಯಿ ಗೊಜ್ಜು ಕಳಿಸಿಕೊಟ್ಟಿದ್ರಂತೆ ದೊಡ್ಡ ಬಾಟಲ್ ತುಂಬಾ…ರಾತ್ರಿ ಇವರು ತಂದು ಕೊಟ್ಟಿದ್ದು ಅರ್ಧ ಬಾಟಲ್ ಮಾತ್ರ…ಎಲ್ಲಿ ಇನ್ನರ್ಧ ಅಂತ ಕೇಳಿದರೆ,ಇವರ ಕೊಲೀಗ್ ಮಾವಿನಕಾಯಿ ಗೊಜ್ಜು ನೋಡಿ ಆಸೆಪಟ್ರಂತೆ, ಅದಕ್ಕೆ ಅರ್ಧ ಆಕೆಗೆ ಕೊಟ್ಟುಬಿಡೋದೇ?!…ಪಾಪ ನಿನ್ನ ಹಾಗೆ ಬಸುರಿ ಹೆಂಗಸು ಆಕೆ ಅಂದು ನನ್ನ ಬಾಯಿ ಮುಚ್ಚಿಸಿದರು.ನಾನು ಸುಮ್ಮನಾದೆ..ನೆನ್ನೆ ಬೆಳಗ್ಗೆ ನಾನು ರಾಹುಲನ ಹೆಂಡತಿಗೆ ಥ್ಯಾಂಕ್ಸ್ ಹೇಳೋಣಾಂತ ಫೋನ್ ಮಾಡಿದಾಗ ಅವರೇನು ಹೇಳಿದರು ಗೊತ್ತಾ?…ಹೋದ ವಾರ ಕಳಿಸಿಕೊಟ್ಟಿದ್ನಲ್ಲ ಉಪ್ಪಿನಕಾಯಿ ಹೇಗಿತ್ತು ಅಂತ ಕೇಳಿದಾಗ ನನ್ನ ಗತಿ ಊಹಿಸ್ಕೋ…ಈ ಮಾರಾಯ ನನಗೆಂದು ಕೊಟ್ಟಿದ್ದ ಉಪ್ಪಿನಕಾಯನ್ನು ಪೂರ್ತಿ ಅವರ ಕೊಲೀಗ್ ಬಸುರಿ ಹೆಂಗಸಿಗೇ ಕೊಟ್ಟುಬಿಟ್ಟಿದ್ರು, ದಾನಶೂರ ಕರ್ಣ…ಅಂದರೆ ಅವರಿಗೆ ನನಗಿಂತ  ಅವಳ ಮೇಲೇನೇ ಪ್ರೀತಿ ಜಾಸ್ತಿ ಅನ್ನೋದು ಖಾತ್ರಿಯಾಯ್ತು…ನನಗೆ ಹೀಗೆ ಮೋಸ ಮಾಡಬಹುದೇನಮ್ಮಾ? ನನಗೆ ದುಃಖ ಆಗಲ್ವೇ? ನನಗೆ ಸಿಟ್ಟು ಬರೋದು ಸಹಜಾ ತಾನೇ? ನಾನು ಕೂಗಾಡಿದೆ…ಅದಕ್ಕವರು ಬಾಯಿಗೆ ಬಂದ ಹಾಗೆ ಮಾತಾಡಿದರು..ನನಗ್ಯಾಕೋ ಅವರ ಮೇಲೆ ಅನುಮಾನ ಬಂತು. ಅವಳ ಮೇಲೇಕೆ ಅಷ್ಟೊಂದು ಅಕ್ಕರೇಂತ?…ಅವರ ಹಳೇ ಗೆಳತಿ ಅವಳೇ ಇರಬಹುದಾಂತ , ಅಥವಾ ಹೊಸ ಪ್ರೇಯಸಿಯೋ, ಅವಳೂ ನನ್ನ ಹಾಗೇ ಬಸುರಿಯಂತೆ..ಅಂದ್ರೇನು ಅರ್ಥ?? ಇಬ್ಬರೂ ಅವರಿಗೆ ಸರಿಸಮಾನರಾದರೆ, ಅವಳು ನನ್ನ ಹಾಗೆ ಇವರ ಮಗುವಿಗೆ ತಾಯಿಯಾಗುತ್ತಿದ್ದಾಳಾ ಅಂತ ಮನಸ್ಸಿಗೆ ಬಂದು ನನಗೆ ಜೀವವೇ ಹಾರಿಹೋಯ್ತಮ್ಮ …ಬದುಕೇ ಬೇಡವೆನಿಸುತ್ತಿದೆ…ಈ ಯೋಚನೆಯೇ ಹುಚ್ಚು ಹಿಡಿಸುತ್ತಿದೆ…ಪ್ರಾಣ ಕಳ್ಕೋಳೋಣ ಅನ್ನಿಸ್ತಿದೆ, ನಾ ಸಾಯಬೇಕು”- ಎಂದು ಅಂಜಲಿ ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಶಾರದಮ್ಮನವರಿಗೆ ದಿಕ್ಕೇ ತೋಚದಂತಾಯಿತು. ಅವರ ಕಣ್ಣಲ್ಲೂ ನೀರು ಸುರಿಯತೊಡಗಿತು. ಅದನ್ನು ಕಂಡು ಶಂಕರಪ್ಪನವರು ” ಛೇ,ಇದೇನಿದು ನೀನೂ ಸಣ್ಣ ಹುಡುಗಿಯಂತೆ ವರ್ತಿಸೋದೇ?” ಎಂದು ರೇಗಿಕೊಂಡಾಗ,ಆಕೆ ಸುಧಾರಿಸಿಕೊಂಡು “ಅಂಜೂ,ನಿಂದ್ಯಾಕೋ ಅತಿ ಅತಿಯಾಯ್ತು…ಸಿನಿಮಾ ದೃಶ್ಯಗಳ ಥರ ಕಲ್ಪಿಸಿಕೊಂಡು ನಿನಗೆ ನೀನೇ ನೋವು ಮಾಡ್ಕೊಳ್ಳೋದು ಹುಚ್ಚುತನ…ವಾಸ್ತವಕ್ಕೆ ಬಾ…ನಾವು ಸುಮಂತನ್ನ ಹತ್ರ ಸರ್ಯಾಗಿ ಮಾತಾಡ್ತೀತೀವಿ, ನೀ     ಸುಮ್ನಿರು”ಎಂದು ನಾನಾ ಬಗೆಯ ಸಮಾಧಾನದ ನುಡಿಗಳನ್ನಾಡಿದರು. ಆದರೆ ಅಂಜಲಿಯ ಮನ ಹಟದಿಂದ ಜಡ್ಡುಗಟ್ಟಿತ್ತು.

                ತಂದೆ-ತಾಯಿ ಬಂದ ದಾರಿಗೆ ಸುಂಕವಿಲ್ಲವೆಂದು ನಿರಾಶೆಯಿಂದ ಊರಿಗೆ ಹೊರಟುನಿಂತಾಗ ಅಂಜಲಿಯೂ ಅವರೊಂದಿಗೆ ಹೊರಟುನಿಂತಳು. ಅದೂ ಸುಮಂತನಿಗೆ ಒಂದು ಮಾತೂ ತಿಳಿಸದೆ ತನ್ನ ಬಟ್ಟೆ-ಬರೆಗಳನ್ನು ಪ್ಯಾಕ್ ಮಾಡಿಕೊಂಡು ಸಿದ್ಧಳಾದಳು.

                ಚಿಕ್ಕವಯಸ್ಸಿನಿಂದಲೂ ಅವಳು ಹಾಗೇ. ಹಿಡಿದದ್ದೇ ಹಟ. ಅವಳು ಹೇಳಿದ ಮೇಲೆ  ಮುಗಿಯಿತು. ಜಪ್ಪಯ್ಯ ಅಂದರೂ ಜಗ್ಗುವ ಆಸಾಮಿಯಲ್ಲ. ಹೆತ್ತವರು ಅವಳ ಹಗ್ಗ ಜಗ್ಗಾಟದಲ್ಲಿ ಹೈರಾಣಾದರು. ಒಬ್ಬಳೇ ಮಗಳೆಂದು ಅವಳನ್ನು ಅತೀ ಮುದ್ದಿನಿಂದ ಸಾಕಿದ್ದು ತಪ್ಪಾಯಿತು. ಮಗಳ ಶಾರೀರ ತುಂಬಾ ಇಂಪಾಗಿದ್ದುದರಿಂದ ಅವಳು ಸಂಗೀತ ಕಲಿಯಲಿ ಎಂದು ಅವರು ಆಸೆಪಟ್ಟಿದ್ದು ನೆರವೇರಲಿಲ್ಲ.ನೃತ್ಯ ಕಲಿಯಲು ಸೇರಿದಳು. ಹೋಗಲಿ ಅದನ್ನಾದರೂ ನಿಷ್ಠೆಯಿಂದ ಸಾಧಿಸಿದಳೇ? ಅದನ್ನೂ ಅರ್ಧದಲ್ಲೇ ಬಿಟ್ಟಳು. ಹೇಳಿದ ಮಾತು ಕೇಳುವ ಜಾಯಮಾನ ಅವಳದಾಗಿರಲಿಲ್ಲ. ಆದರೆ ಓದಿನಲ್ಲಿ ಮಾತ್ರ ಮುಂದಿದ್ದದ್ದು ಅವರಿಗೆ ಸಮಾಧಾನದ ವಿಷಯವಾಗಿತ್ತು. ಉಳಿದಂತೆ ಅವಳ ಸ್ವಭಾವದಲ್ಲಿ ಯಾವ ಅರೆಕೊರೆಯೂ ಇರಲಿಲ್ಲ.

ಅಂಜಲಿ, ನಾಲ್ಕು ಜನರಲ್ಲಿ ಎದ್ದು ಕಾಣುವ ರೂಪವತಿ, ಪದವೀಧರೆ. ಅವಳಿಗಾಗಿ ಸಂಬಂಧ ಕೇಳಿಕೊಂಡು ಬರುವವರಿಗೇನೂ ಕಡಿಮೆಯಿರಲಿಲ್ಲ.ಶಂಕರಪ್ಪನವರ ಬಿಜಿನೆಸ್ ಕೂಡ ಚೆನ್ನಾಗಿ ನಡೆಯುತ್ತಿತ್ತು. ಅವರಿಗೆ ಅನರೂಪ ಸತಿ ಶಾರದಮ್ಮನವರು.   ಹೀಗಾಗಿ ಅಂಜಲಿಯ ಕೈ ಹಿಡಿಯಲು ನಾ ಮುಂದು ತಾ ಮುಂದು ಎಂಬ ಬೇಡಿಕೆ ಸೃಷ್ಟಿಯಾಗಿತ್ತು. ಆದರೆ ಅವಳ ಮದುವೆ ನಿರ್ಧಾರ ಕೈಗೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕಾರಣ ಅವಳ ಅತಿಯಾದ  ಸೂಕ್ಷ್ಮ ಸ್ವಭಾವ.ಜೊತೆಗೆ ತುಂಬ ಭಾವುಕಳೂ ಹೌದು. ತನ್ನ ಕೈ ಹಿಡಿಯುವ ಹುಡುಗ ತನ್ನನ್ನು ಮನಸಾರೆ ಪ್ರೀತಿಸಬೇಕು,ತನಗೆ ನಿಷ್ಠನಾಗಿರಬೇಕು ಮತ್ತು ಅವನಿಗೆ ಇತರ ಲೋಭಗಳು ಇರಬಾರದು-ಹೀಗೆ ಅವಳ ಆದರ್ಶಗಳ ದೊಡ್ಡ ಪಟ್ಟಿ ಬೆಳೆದಿತ್ತು.ಹಾಗೆ ನೋಡಿದರೆ ಅಂಜಲಿಯದು ಪ್ರೀತಿ ತುಂಬಿಕೊಂಡ ಹೃದಯ. ಶಂಕರಪ್ಪ-ಶಾರದಾ ದಂಪತಿಗಳು ಬಹಳ ಹುಷಾರಾಗಿಯೇ ಸುಮಂತನನ್ನು ಅವಳಿಗಾಗಿ ಆಯ್ಕೆ ಮಾಡಿದ್ದರು.ಅವಳು ಖುಷಿಯಾಗಿಯೇ ಅವನ ವರಿಸಿದ್ದಳು. ಇಷ್ಟಾದರೂ ಇದೇನಾಗಿ ಹೋಯ್ತೆಂದು ಈಗ ದಂಪತಿಗಳು ಚಿಂತಿತರಾಗಿ ಹೋಗಿದ್ದರು. ಅವರ ಸಂಧಾನ ಈ ಬಾರಿ ಮುರಿದುಬಿದ್ದಿತ್ತು.

                ದುಃಖ ತುಂಬಿದ ಮನದಿಂದ ಅವರು ಮಗಳೊಂದಿಗೆ ಮನೆಗೆ ಹಿಂತಿರುಗಿದ್ದರು. “ಅಂಜೂ, ಇನ್ನೊಂದ್ಸಲ ಯೋಚಿಸಿ ನೋಡು…ಸುಮಂತ ಅಂಥ ಕೆಟ್ಟ ಹುಡುಗನೇನಲ್ಲ,ಸಣ್ಣ ಪುಟ್ಟ ಅಪಾರ್ಥಗಳಿಂದ ಇಂಥ ದುಡುಕು ನಿರ್ಧಾರ ಬೇಡಮ್ಮ….ಕೈ ಮಿಂಚಿದ ಮೇಲೆ ನೀನೇ ಪಶ್ಚಾತ್ತಾಪಪಡುವೆ” -ತಾಯಿ, ಮಗಳು ಗಂಡನ ಮನೆಯ ಹೊಸಿಲು ದಾಟುವ ಮನ್ನವೂ ಕಡೆಯ ಎಚ್ಚರಿಕೆ ನೀಡುವುದು ಮರೆತಿರಲಿಲ್ಲ.

                “ಅಲ್ಲಮ್ಮ , ನನ್ನ ಹಿಂದೆ ಎಷ್ಟು ಹುಡುಗರು ಬಿದ್ದಿದ್ರು…ನಾನು ಯಾರನ್ನಾದರೂ ಕಣ್ಣೆತ್ತಿ ನೋಡಿದ್ನಾ?….ಕಾಲೇಜಿನಲ್ಲಿ ಯಾವುದಾದರೂ ಪ್ರೇಮಪ್ರಕರಣ ಮಾಡಿಕೊಂಡಿದ್ನಾ ಹೇಳಮ್ಮ…ಹಾಗೆ ಮೋಸ ಮಾಡೋ ಜಾಯಮಾನ ನನ್ನದಲ್ಲ..ಅದು ನನಗೆ ಹಿಡಿಸೋದೂ ಇಲ್ಲ…ಅಂಥದ್ರಲ್ಲಿ ಸುಮಂತ ಈ ರೀತಿ ಕಣ್ಣಾಮುಚ್ಚಾಲೆ ಆಡಬಹುದೇ?..ನಾನವರನ್ನ ಕ್ಷಮಿಸಲ್ಲ.”-ಹಟದಿಂದ ಸೆಟೆದಿತ್ತು ಅವಳ ಮುಖ.

                ಶಾರದಮ್ಮ ನಿರುತ್ತರರಾದರು. ಅವರ ಅಸಹಾಯಕತೆಯ ನೋಟ  ಗಂಡನತ್ತ ನೆಟ್ಟಿತು. ಶಂಕರಪ್ಪ ಉಗುಳು ನುಂಗಿಕೊಂಡರು.

                “ಸರಿಯಮ್ಮ ….ನಿನಗೆ ಜವಾಬು ಹೇಳೋಷ್ಟು ಶಕ್ತಿ ನಮಗಿಲ್ಲ…ಕಾಲ ಬಂದಾಗ ನಿನಗೇ ಅರಿವಾಗತ್ತೆ…ಕ್ಷುಲ್ಲಕ ವಿಚಾರ-ಕಾಲ್ಪನಿಕ ಸಂಗತಿಗಳ ಜೊತೆ ಗುದ್ದಾಡಬಾರದು “-ಎಂದು ಆತ ಅಲ್ಲಿಂದ ಕದಲಿದರು. ಅಂಜಲಿಯ ಎದೆಯೊಳಗಿನ್ನೂ ಕೋಪದ ಬೆಂಕಿ ಆರಿರಲಿಲ್ಲ..ಭುಸುಗುಟ್ಟುತ್ತ ತನ್ನ ಕೋಣೆ ಸೇರಿಕೊಂಡಳು.

                ಇನ್ನೂ ಬೆಳಕು ಕಣ್ಣು ಬಿಟ್ಟಿರಲಿಲ್ಲ,ಆಗಲೇ ಅವಳ ಮೊಬೈಲ್ ಮೊಳಗಿತು. ಅದರ ಸ್ಕ್ರೀನಿನ ಮೇಲೆ ಸುಮಂತನ ರೂಪ ಮೂಡುತ್ತಿದ್ದಂತೆ ಅವಳ ಕೋಪಕ್ಕೆ ಆಜ್ಯ ಸುರಿದಂತಾಗಿ ತಟ್ಟನೆ   ಫೋನ್ ಆಫ್ ಮಾಡಿದಳಾದರೂ ಅವಳ ಮನದ ಸ್ಕ್ರೀನಿನಿಂದ ಅವನ ರೂಪ ಮಾಯವಾಗಿರಲಿಲ್ಲ.ಆದರೂ ಅವನ ಜೊತೆ ಸಂಸಾರ ಸಾಧ್ಯವಿಲ್ಲ ಎಂದವಳು ತೀರ್ಮಾನಿಸಿಯಾಗಿತ್ತು.

                ಆ ದಿನ ಸಂಜೆಯೇ ಹೆಂಡತಿಯನ್ನು ಕಾಣಲು ಮೈಸೂರಿಗೆ ಹಾಜರಾಗಿದ್ದ ಸುಮಂತ. ಅದೊಂದು ವ್ಯರ್ಥ ಪ್ರಯತ್ನವಾಗಿತ್ತು. ಅಂಜಲಿ ಇನಿತೂ ಕರಗಲಿಲ್ಲ. ” ಈ ಹುಡುಗಿಗೆ ಯಾವಾಗ ಬುದ್ಧಿ ಬರತ್ತೋ ಆ ದೇವನೇ ಬಲ್ಲ ” -ಎಂದು ಶಾರದಮ್ಮ ನಿಟ್ಟುಸಿರಿಕ್ಕಿದರು. ಬಸುರಿ ಹುಡುಗಿ ಹೀಗೆ ಹಗಲೂ-ಇರುಳು ನವೆಯುತ್ತಾಳಲ್ಲ ಎಂಬುದೇ ಆಕೆಯ ಕೊರಗಾಗಿತ್ತು. ಈ ಮಧ್ಯೆ ಅವರು ನಿರೀಕ್ಷಿಸಿರದ ಘಟನೆ ಜರುಗಿ ಹೌಹಾರಿದ್ದರು. ಅಂಜಲಿಗೆ ಅಬಾರ್ಷನ್ ಆಗಿತ್ತು. ಇದರಿಂದ ಅವಳ ತಂದೆ-ತಾಯಿ ಷಾಕ್ ಆಗಿದ್ದರೆ,ಅವಳು ಮಾತ್ರ ನಿರ್ವಿಕಾರಳಾಗಿದ್ದಳು. ಅವಳ ಆಲೋಚನೆಯೇ ಬೇರೆಯಾಗಿತ್ತು. ಈ ವಿಷಯ ಅಳಿಯನಿಗೆ ತಿಳಿಸುವುದು ಹೇಗೆಂಬ ಚಿಂತೆ ಶಾರದಮ್ಮನವರನ್ನು ಕಾಡುತ್ತಿದ್ದರೆ, ಅಂಜಲಿ ಮಾತ್ರ ಬೇಗ ಸುಧಾರಿಸಿಕೊಂಡು ಯಾವುದಾದರೂ ಕೆಲಸಕ್ಕೆ ಸೇರುವ ಇರಾದೆಯಿಂದ ಬ್ಯಾಗು ಹೆಗಲಿಗೇರಿಸಿಕೊಂಡು ಹೊರಗೆ ಹೊರಟುಬಿಟ್ಟಳು. ಆದರೆ ಅವಳನ್ನು ದಾರಿಗೆ ತರುವ ಆಸೆಯನ್ನು ಬಿಟ್ಟುಬಿಟ್ಟಿದ್ದರು ಅವಳ ತಾಯ್ತಂದೆಯರು.

                ಮುಂದಿನವಾರ ಮೈಸೂರಿಗೆ ಬಂದಿಳಿದ ಸುಮಂತ ವಿಷಯ ತಿಳಿದು ಹೌಹಾರಿದ, ಕೂಗಾಡಿದ:” ನಿನ್ನ ಹಟದಲ್ಲಿ ಹೀಗೆ ಆರೋಗ್ಯಾನ ಕಡೆಗಣಿಸಿ ಅನ್ಯಾಯವಾಗಿ ನನ್ನ ಮಗೂನ ಕೊಂದುಬಿಟ್ಯಲ್ಲಾ ? ಎಂದು ನಿರಾಶೆಯಿಂದ ಬಂದಂತೆಯೇ ಮರಳಿದ. ಇಲ್ಲಿಗೆ ಅವನ ಸಂಬಂಧದ ಕೊಂಡಿ ಕಡಿದುಹೋಯಿತೇ? ಎಂದು ಅವಳ ಹೆತ್ತವರು ವ್ಯಾಕುಲಿತರಾದರು. ಅವರ ಚಿಂತೆ ಅವರಿಗೆ. ಅಂಜಲಿ ತಿಂಗಳೆರಡರಲ್ಲಿ ಕೆಲಕ್ಕೆ ಸೇರಿದಳು. ಆರಾಮವಾಗಿ ಬೆಳಗ್ಗೆ ಮನೆ ಬಿಟ್ಟರೆ ಸಂಜೆ ಮನೆಗೆ ಹಿಂತಿರುಗುತ್ತಿದ್ದಳು. ಗಂಡನ ಹೆಸರೆತ್ತಿದರೆ ಸಾಕು ಗಂಟುಮೋರೆ ಹಾಕುತ್ತಿದ್ದಳು. ಮನೆಯಲ್ಲಿ ಯಾರೂ ಅವಳ ತಂಟೆಗೇ ಹೋಗುತ್ತಿರಲಿಲ್ಲ. ಶಂಕರಪ್ಪ ಆದಷ್ಟೂ ಹೊರಗೇ ಕಾಲ ಕಳೆಯುತ್ತಿದ್ದರು. ಶಾರದಮ್ಮನವರಿಗೆ ಮನೆಯಲ್ಲೇ ಚಿಂತೆಯ ಹುತ್ತದಲ್ಲಿ  ಕೊಳೆತು ನವೆಯುವುದು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ಮೊದಲೇ ಆಕೆಯ ಆರೋಗ್ಯ ಅಷ್ಟಕಷ್ಟೇ. ಆದರೂ ಸಾಯುವಂಥ ಖಾಯಿಲೆ ಏನಿರದಿದ್ದರೂ ಆ ದಿನ ಯಾರೂ ಮನೆಯಲ್ಲಿಲ್ಲದಾಗ ಎದೆನೋವೆಂದು ಕುಸಿದುಬಿದ್ದವರು ಮೇಲೇಳಲೇ ಇಲ್ಲ.

                ಸಂಜೆ ಕೆಲಸದಿಂದ ಮನೆಗೆ ಬಂದ ಅಂಜಲಿ ನಡುಮನೆಯಲ್ಲಿ ನೆಲದ ಮೇಲೆ ಬಿದ್ದಿದ್ದ ತಾಯಿಯನ್ನು ಕಂಡು ಗಾಬರಿಯಾಗಿ ತತ್ ಕ್ಷಣ ಡಾಕ್ಟರನ್ನು ಕರೆಸಿದರೂ ಪ್ರಯೋಜನವಾಗಲಿಲ್ಲ. ಶಂಕರಪ್ಪ ಗರಬಡಿದು ಕುಳಿತಿದ್ದರು. ತಾಯಿಯ ಸಾವಿನ ದುಃಖ ಭರಿಸಿಕೊಳ್ಳಲಾರದೆ ಅಂಜಲಿಯ ಹೃದಯ ಕಿತ್ತುಬಂದಿತ್ತು. ತಂದೆಯ ಎದೆಯಲ್ಲಿ ಮುಖವಿಟ್ಟು ಜೋರಾಗಿ ರೋಧಿಸಿದಳು. ಹೆಂಡತಿಯನ್ನು ಒಂದರೆಗಳಿಗೆಯೂ ಬಿಟ್ಟಿರದ ಶಂಕರಪ್ಪ ಅವಾಕ್ಕಾಗಿ ಹೋಗಿದ್ದರು. ಅಂಜಲಿಯೇ ಧೈರ್ಯ ತೆಗೆದುಕೊಂಡು ಮುಂದಿನ ಕೆಲಸಗಳಿಗೆ ಅನುವಾದಳು. ವಿಷಯ ತಿಳಿದ ಸುಮಂತ ಧಾವಿಸಿಬಂದ. ಮಾವನ ಜೊತೆ ಹೆಗಲೆಣೆಯಾಗಿ ನಿಂತು ನೆರವಾದ. ಅಂಜಲಿ ಮಾತ್ರ ಅವನೆಡೆ ಕಣ್ಣೆತ್ತಿಯೂ ನೋಡಲಿಲ್ಲ. ಅವಳು ತುಂಬಾ ಕೃಶಳಾಗಿದ್ದಾಳೆಂಬ ಸಂಗತಿ ಅವನರಿವಿಗೆ ಬಂದು ಕನಿಕರ ಮೂಡಿದರೂ ಅವಳನ್ನು ಊರಿಗೆ ಕರೆಯುವ ಸಾಹಸವನ್ನು ಅವನು ಮಾಡಲಿಲ್ಲ.

                ತಾಯಿಯನ್ನು ತುಂಬ ಹಚ್ಚಿಕೊಂಡಿದ್ದ ಅಂಜಲಿ ಮೌನಿಯಾಗಿದ್ದಳು. ತಂದೆಯ ಮುಖವನ್ನು ತಲೆಯೆತ್ತಿ ನೋಡುವ ಧೈರ್ಯವಾಗಲಿಲ್ಲ. ಎರಡು ಗಂಡುಮಕ್ಕಳು ಹೋಗಿ ಅನಂತರ ಹುಟ್ಟಿದ ಅವಳೇ ಅವರಿಗೆ ಗಂಡುಮಗನಂತ್ತಿದ್ದರೂ , ಅತ್ತೆಯ ಶ್ರಾದ್ಧ ಕಾರ್ಯಗಳನ್ನು ಸುಮಂತನೇ ನೆರವೇರಿಸಿದ್ದ. ವೈಕುಂಠ ಸಮಾರಾಧನೆ ಮುಗಿಯುತ್ತಿದ್ದಂತೆ ಸದ್ದಿಲ್ಲದೆ ಅಲ್ಲಿಂದ ನಿರ್ಗಮಿಸಿದ್ದ.

                ಕೋಣೆಯ ಏಕಾಂತದಲ್ಲೊಂದೆಡೆ ಅಂಜಲಿ ಮೌನದ ಮುದ್ದೆಯಾಗಿ  ಮುದುರಿ ಕುಳಿತಿದ್ದಳು. ಮನ ಶೂನ್ಯದ ಮಡುವಾಗಿತ್ತು. ಅಲ್ಲಿಗೆ ಮೆಲ್ಲನೆ ಹೆಜ್ಜೆಯಿರಿಸಿಕೊಂಡು ಬಂದ ಅವಳ ಸೋದರತ್ತೆ ವೆಂಕಮ್ಮ -” ಅಂಜಲಿ, ಇವತ್ತು ‘ಶುಭ’ದ ಕಾರ್ಯ ಮುಗಿದಿದೆ, ಈ ದಿನ ತೌರುಮನೆಯ ದೀಪಾನ ಹೆಣ್ಣುಮಕ್ಕಳು ನೋಡಬಾರದೂಂತ ಶಾಸ್ತ್ರ, ತಪ್ಪು ತಿಳೀಬೇಡಮ್ಮ…ದೀಪ ಹಚ್ಚೋಕ್ಕೆ ಮುಂಚೆ ಮನೆಯಿಂದ ಹೊರಗೆ ಹೋಗಿ, ಸ್ವಲ್ಪ ಹೊತ್ತು ದೇವಸ್ಥಾನದಲ್ಲಿ ಕೂತಿದ್ದು ಬರ್ತೀಯಾ ತಾಯಿ” ಎಂದು ಬಹು ಸಂಕೋಚದಿಂದಲೇ ಕೇಳಿದರು. ಅಂಜಲಿ ಮೌನವಾಗಿ ತಲೆಯಾಡಿಸಿದರೂ ಅವಳ ಮನಸ್ಸು ಹಿಸುಕಿ ನಾದಿದಂತಾಯಿತು.

                ಅಂಜಲಿ ಒಬ್ಬಳೇ ಕುಳಿತಿರುವ ಸಮಯ ನೋಡಿ ಮಗಳ ಬಳಿಗೆ ಬಂದ ಶಂಕರಪ್ಪ-” ತೊಗೋಮ್ಮ ಈ ಒಡವೆಗಳ ಪೆಟ್ಟಿಗೆ ನಿಮ್ಮಮ್ಮನದು….ಈ ಆಭರಣಗಳೆಲ್ಲ ನಿನಗೆ ಸೇರಬೇಕಾದ್ದು…”  ಎನ್ನುತ್ತಾ ಅವಳ ಮುಂದೆ ಹೆಂಡತಿಯ ಆಭರಣಗಳ ಪೆಟ್ಟಿಗೆಯನ್ನು ಹಿಡಿದರು.

 ಅಂಜಲಿ ಮುಖ ಬಾಡಿಸಿಕೊಂಡು ತಂದೆಯ ಮುಖವನ್ನು ದೈನ್ಯವಾಗಿ ದಿಟ್ಟಿಸಿದಳು.” ತಗೋಮ್ಮ” ಎಂದು ಅವರು ಬಲವಂತವಾಗಿ  ಅವಳ ಕೈಯಲ್ಲಿರಿಸಿದರು. ಅವಳ ಹೃದಯ ನೀರಾಗಿ ಹರಿದಿತ್ತು…ಕಣ್ಣಲ್ಲಿ ಬಳ ಬಳನೆ ನೀರು. ಆಭರಣಗಳ ಸಂಪುಟವನ್ನು ಬದಿಗಿರಿಸಿದಳು. ಆತನ ಕೈಯಲ್ಲಿ ಇನ್ನೂ ಒಂದು ಪುಟ್ಟ ಆಲಂಕಾರಿಕ ಗಂಧದ ಪೆಟ್ಟಿಗೆಯಿತ್ತು. ಅದನ್ನವರು ಅವಳ ಮುಂದೆ ಚಾಚಿ ” ಇದನ್ನು ನಿಮ್ಮ ತಾಯಿ ಬಹು ಜೋಪಾನವಾಗಿ ಇಟ್ಟುಕೊಂಡಿದ್ದಳಮ್ಮ . ತೊಗೋ..ತೆಗೆದು ನೋಡು..ನಿಜವಾಗಿ ನಿಮ್ಮಮ್ಮ ಎ ಗ್ರೇಟ್ ಲೇಡಿ, ನನ್ನನ್ನು ಮೂವತ್ತು ವರ್ಷಗಳ ಕಾಲ ಮಗುವಿನ ಹಾಗೆ ಬಹು ಪ್ರೀತಿಯಿಂದ ನೋಡಿಕೊಂಡು ಕಾಪಾಡಿದಳು” ಎಂದು ಮಾತು ಮುಗಿಸುವಷ್ಟರಲ್ಲಿ ಅವರ ಕಣ್ಣಿಂದ ಪಟಪಟನೆ ಹನಿಗಳುರುಳಿದವು.

ಕೆಲ ಕ್ಷಣ ಮೌನ ಆವರಿಸಿತು….. ಅಂಜಲಿ ಕುತೂಹಲದಿಂದ  ಆ ಗಂಧದ ಪೆಟ್ಟಿಗೆಯ ಮುಚ್ಚಳವನ್ನು ಮೆಲ್ಲನೆ ತೆರೆದು ನೋಡಿದಳು. ಅದರೊಳಗೆ ಒಪ್ಪವಾಗಿ ಮಡಿಸಿಟ್ಟ ನಾಲ್ಕೈದು ಪತ್ರಗಳ ಒಂದು ಸಣ್ಣ ಗುಚ್ಛ. ಬಹುಶಃ ಅಮ್ಮ , ಅವುಗಳನ್ನು ತನ್ನ ಮದುವೆಗೆ ಮುನ್ನ ಅಥವಾ ಮದುವೆಯಾದ ಹೊಸತರಲ್ಲಿ ಅಪ್ಪನಿಗೆ ಬರೆದ ಪತ್ರಗಳಾಗಿರಬಹುದೆಂದು ಊಹಿಸುತ್ತ, ಅವುಗಳನ್ನು ಓದಲು ಸಂಕೋಚವಾಗಿ, ಹಿಂಜರಿಯ ನೋಟದಿಂದ  ತಂದೆಯತ್ತ ನೋಡಿದಳು.

“ಓದು ಪರವಾಗಿಲ್ಲ “ಎನ್ನುವಂತ್ತಿತ್ತು ಅವರ ಕಣ್ಣೋಟ. ಆದರೂ ಮುಜುಗರದಿಂದ ಕಣ್ತಗ್ಗಿಸಿ, ಮಡಿಸಿಟ್ಟಿದ್ದ ಆ ಪತ್ರಗಳ ಮಡಿಕೆ ಬಿಚ್ಚಿ ಓದತೊಡಗಿದಳು.

ಓದಲು ಪ್ರಾರಂಭಿಸುತ್ತಿದ್ದಂತೆ ಪತ್ರದ ಅಕ್ಷರಗಳೆಲ್ಲ ಕಲಸಿಹೋದಂತಾಗಿ ಅವಳೆದೆ ಬಡಿತ ವೇಗವಾಯ್ತು. ತಾಯಿಯ ಮೊದಲ ಪ್ರಿಯಕರ, ತನ್ನ ಅಪಾರ ಪ್ರೀತಿ-ವಿರಹವೇದನೆಗಳನ್ನು ತೋಡಿಕೊಂಡು ಆಕೆಗೆ ಬರೆದ ಪ್ರೇಮಪತ್ರಗಳಾಗಿದ್ದವು ಅವು. ಜೋಪಾನವಾಗಿ ಮಡಿಸಿಟ್ಟ ಪತ್ರ ಗುಚ್ಛ .ಆ ಕಾಗದಗಳಿಗೆ ಪೂಸಿದ್ದ ಸೆಂಟ್ ಇನ್ನೂ ಘಮ್ಮೆನ್ನುತ್ತಿದ್ದವು. ಪತ್ರಗಳನ್ನು ಓದಿದ ಅವಳು ದಿಗ್ಭ್ರಮೆಗೊಂಡಳು.

‘ಅದು ಅವಳ ಹಳೇ ಲವರ್ ಬರೆದವು. ಕಾರಣಾಂತರದಿಂದ ದೂರಾದವ. ಇದರಲ್ಲಿ ನಿಮ್ಮಮ್ಮನ ತಪ್ಪಿಲ್ಲ..ವಯಸ್ಸು..ಅವನ ನೆನಪಲ್ಲೇ ಇಡೀ ಜೀವನವನ್ನು ಕಳೆಯುವ ಮೂರ್ಖತನ ಮಾಡಲಿಲ್ಲ ಅವಳು…. ನನಗೆ ಒಳ್ಳೇ ಸತಿಯಾದಳು, ಪಕ್ವ ಮನಸ್ಸು, ಜೀವನದ ಗಾಂಭೀರ್ಯ ಅರಿತವಳು’ ಎಂದು ನುಡಿದವರ ಕಣ್ಣಿಂದ ನೀರು ತೊಟ್ಟಿಕ್ಕಿತು.

ತಂದೆಯ ಹೃದಯ ವೈಶಾಲ್ಯ ಕಂಡು ಅಂಜಲಿ ಮೂಕಳಾದಳು !!!

ಅವಳ ಮೊಗದಲ್ಲಿ ವಿಸ್ಮಯ- ಉದ್ವಿಗ್ನತೆಗಳು ತುಂಬಿಕೊಂಡವು. ಗೊಂದಲದ ಮುಖಭಾವದಿಂದ ತಂದೆಯತ್ತ ಮೂಕವಿಸ್ಮಿತಳಾಗಿ ದಿಟ್ಟಿಸಿದಳು. ಶಂಕರಪ್ಪನವರ ಮೊಗದಲ್ಲಿ ಸ್ಥಿತಪ್ರಜ್ಞತೆ ನೆಲೆಸಿತ್ತು. ಅವರ ಶಾಂತ ಮುಖಮುದ್ರೆಯನ್ನು ಕಂಡು ಅವಳ ಎದೆಗಡಲಲ್ಲಿ ಜೋರು ತುಫಾನೆದ್ದಿತು…ಯಾರೋ ಅವಳೊಳಗನ್ನೆಲ್ಲ ಕಡೆದಂತಾಯಿತು.

 ‘ನಿನಗೇನು ಗೊತ್ತಪ್ಪ ಹೆಣ್ಣಿನ ಯಾತನೆ, ನಿನ್ನ ಉಪದೇಶ ಬರೀ ಶುಷ್ಕ ವೇದಾಂತ’ ಎಂದವರಿಗೆ ತಾನು ಹಿಂದೆ ಚುಚ್ಚಿ ಆಡಿದ್ದ  ಮಾತುಗಳು ನೆನಪಾಗಿ ಎದೆ ಚುಳ್ ಎಂದಿತು. ಅವರ ಕಾಳಜಿಯ ಮಾತುಗಳನ್ನು ತಾನಂದು ಎದೆಗಿಳಿಸಿಕೊಳ್ಳದೆ ಕಡೆಗಣಿಸಿದ್ದು ನೆನೆದು, ಅವ್ಯಕ್ತ ಅಪರಾಧೀ ಪ್ರಜ್ಞೆ ಅವಳನ್ನು ಇರಿಯತೊಡಗಿ ಪಶ್ಚಾತ್ತಾಪ ಸುಡತೊಡಗಿತು….ಎದುರಿಗೆ ನಿಂತಿದ್ದ ತಂದೆ ಅವಳ ಕಣ್ಣೆದುರು ಭೂಮ್ಯಾಕಾಶವನ್ನೆಲ್ಲಾ ವ್ಯಾಪಿಸಿ ಎತ್ತರವಾಗಿ ಬೆಳೆದುನಿಂತುಬಿಟ್ಟಿದ್ದರು. ಅವರ ಹೃದಯ ವೈಶಾಲ್ಯ ಸಾಗರದಷ್ಟು ಅಪರಿಮಿತವಾಗಿ ಹರಡಿನಿಂತಿತ್ತು. ಅವರ ಮುಂದೆ ತಾನು ತುಂಬಾ ಕುಬ್ಜೆಯೆನಿಸಿ  ನಾಚಿಕೆಯಾವರಿಸಿತವಳಿಗೆ.

 ‘ ಅಪ್ಪಾ, ರಿಯಲಿ  ಯೂ ಆರ್  ಗ್ರೇಟ್ ‘ ಎಂದು ಅವಳ ಮನ ಗದ್ಗದಿತವಾಗಿ ಚೀರಿತು. ಅವರ ಬಗ್ಗೆ ಅಂಜಲಿಗೆ ಅತೀವ ಗೌರವ ಭಾವನೆ ಆಕಾಶದುದ್ದ ಚಿಮ್ಮಿತು.

                ವಿಪ್ಲವಗೊಂಡ ಅವಳ ಮನದಲ್ಲಿ ಸಾವಿರ ತುಮುಲಗಳು…ತಟ್ಟನೆ ಮೇಲೆದ್ದ ಅಂಜಲಿ, ಕ್ಷಣವೂ ತಡಮಾಡದೆ ಸರಸರನೆ ತನ್ನ ಬಟ್ಟೆಗಳನ್ನು ಸೂಟ್‍ಕೇಸಿಗೆ  ತುಂಬಿಕೊಂಡವಳೇ “ಬರ್ತೀನಪ್ಪಾ” ಎನ್ನುತ್ತ ತಂದೆಯ ಕಾಲಿಗೆರಗಿ, ತಾಯಿಯ ಫೋಟೋವಿನತ್ತ ತಿರುಗಿ ಕಣ್ಣೊರೆಸಿಕೊಂಡು, ಆದಷ್ಟು ಬೇಗ ತನ್ನ ಸುಮಂತನನ್ನು ಸೇರಿಕೊಳ್ಳಲು ಅಲ್ಲಿಂದ ಬಿರಬಿರನೆ ಹೊರಟಳು.

                                                                                                                                                                **********************************     

Related posts

ಪಾತಾಳ ಗರಡಿ

YK Sandhya Sharma

ಆತ್ಮಸಾಕ್ಷಿ

YK Sandhya Sharma

ಕ್ರೌರ್ಯ

YK Sandhya Sharma

4 comments

Sriprakash February 25, 2020 at 10:05 pm

ಉತ್ತಮ ಕತೆ.ಸಣ್ಣಪುಟ್ಟ ಸಂಗತಿಗಳನ್ನೇ ದೊಡ್ಡದು ಮಾಡಿಕೊಂಡು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಹಾನಿಕರ! ಕಥಾನಾಯಕಿಗೆ ಕೊನೆಗೂ ಪ್ರೇಮವೆಂದರೇನೆಂದು ಯಾವ ಭಾಷಣವನ್ನೂ ಮಾಡದೆ ತಿಳಿಸಿದ ಪರಿ ಸೊಗಸಾಗಿದೆ.
ಅಭಿನಂದನೆಗಳು??

Reply
YK Sandhya Sharma February 26, 2020 at 2:15 pm

ನಿಮ್ಮ ಅಮೂಲ್ಯ ಅಭಿಪ್ರಾಯಕ್ಕೆ ಅನೇಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನಿರಂತರ ಹೀಗೆ ಇರಲಿ.

Reply
Narendra Kashyap April 27, 2020 at 9:58 am

Very nice story madam. Very good message. Thanks.

Reply
YK Sandhya Sharma April 27, 2020 at 12:21 pm

Thank you very much Narendra Kashyap for your appreciation. plz. read my other stories and give your opinion, it is valuable for me.

Reply

Leave a Comment

This site uses Akismet to reduce spam. Learn how your comment data is processed.