Image default
Dance Reviews

ಚೈತನ್ಯಪೂರ್ಣ ನೃತ್ತಾಭಿನಯದ ಮನೋಜ್ಞ ನೃತ್ಯ

`ಕೇಶವ ನೃತ್ಯ ಶಾಲೆ’ಯ ಭರತನಾಟ್ಯಗುರು ಡಾ.ಬಿ.ಕೆ. ಶ್ಯಾಂಪ್ರಕಾಶ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ರೂಹುಗೊಂಡ ನೃತ್ಯಪಟು ಬಿ.ಆರ್. ನಂದಕಿಶೋರ್ ತನ್ನ `ರಂಗಪ್ರವೇಶ’ ದಲ್ಲಿ ಪ್ರಸ್ತುತಪಡಿಸಿದ ಮನಮೋಹಕ ನರ್ತನದಿಂದ ತಾನೊಬ್ಬ ಭರವಸೆಯ ಕಲಾವಿದ ಎಂಬುದನ್ನು ಸಾಬೀತುಗೊಳಿಸಿದರು. ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ಅವರು ತಮ್ಮ ನೃತ್ತಾಭಿನಯದ ವಿವಿಧ ಆಯಾಮಗಳನ್ನು ಕಲಾರಸಿಕರೆದುರು ಮನೋಜ್ಞವಾಗಿ ಅನಾವರಣಗೊಳಿಸಿದರು.

ವೇದಿಕೆಯ ಮೇಲೆ ಕಾಣಿಸಿಕೊಂಡ ಮೊದಲ ಹೆಜ್ಜೆಯ ಪುಷ್ಪಾಂಜಲಿಯಲ್ಲಿಯೇ ಕಲಾವಿದನ ಅಂಗಶುದ್ಧಿ, ಖಚಿತ ಹಸ್ತ-ಅಡವುಗಳ ಸೊಗಸು ಮನಸೆಳೆಯಿತು. ಗಣೇಶನ ವಿವಿಧ ರೂಪಗಳ ಅರ್ಥಪೂರ್ಣ ಆಂಗಿಕಾಭಿನಯ ಹಾಗೂ ಶ್ರೀರಾಮನ ವೀರೋಚಿತ ಸುಮನೋಹರ ಧೀಮಂತ ಭಂಗಿಗಳನ್ನು ಪ್ರದರ್ಶಿಸಿ, ದೇಹದ ಮೇಲಿನ ನಿಯಂತ್ರಣದ ದೃಢತೆಯನ್ನು ಪ್ರಕಟಪಡಿಸಿದರು. ಜತಿ ಮತ್ತು ಸ್ವರಗಳ ಹದವಾದ ಸಮ್ಮಿಲನದಲ್ಲಿ ವಿಶಿಷ್ಟ ವಿನ್ಯಾಸದ ನವನೃತ್ತಗಳ ಬೆಡಗಿನಲ್ಲಿ `ಜತಿಸ್ವರ’ ವನ್ನು ನಿರಾಯಾಸವಾಗಿ ನಿರೂಪಿಸಿದರು ನಂದಕಿಶೋರ್.

ಮುಂದಿನ ಶ್ರೀರಾಮನ ಕುರಿತ `ರಾಘವಂ ಜಾನಕಿಪ್ರಿಯ’ ಎಂಬ ಅಭಿನಯಪ್ರಧಾನ  ‘ಶಬ್ದಂ’ ನಲ್ಲಿ ಸೀತಾ ಸ್ವಯಂವರ ಮತ್ತು ರಾಮ-ರಾವಣರ ಯುದ್ಧದ ಸಂಚಾರಿಯಲ್ಲಿ ಕಲಾವಿದನ ಅಭಿನಯ ಪ್ರಾವಿಣ್ಯ ಸುವ್ಯಕ್ತವಾಯಿತು. ರಾಮಾಯಣದ ಕೆಲ ಘಟನೆಗಳೊಂದಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸಾತ್ವಿಕ ವ್ಯಕ್ತಿತ್ವದ ಸುಂದರಚಿತ್ರಣವನ್ನು ತಮ್ಮ ಸ್ಫುಟವಾದ ಆಂಗಿಕಾಭಿನಯ ಮತ್ತು ಭಾವಪೂರ್ಣ ಮುಖಾಭಿವ್ಯಕ್ತಿಯಿಂದ ಕಟ್ಟಿಕೊಟ್ಟರು.

ನೃತ್ಯಪ್ರಸ್ತುತಿಯ ಹೃದಯಭಾಗ, ಹಾಗೇ ಹೃದ್ಯವಾಗಿಯೂ ಮೂಡಿಬಂದ `ವರ್ಣ’ ದ ನೃತ್ಯ ಸಂಯೋಜನೆ ರುಕ್ಮಿಣಿದೇವಿ ಅರುಂಡೆಲ್. ನಾಯಕ, ತನ್ನ ಆರಾಧ್ಯದೈವ ನಾಟ್ಯಾಧಿಪತಿ ಶಿವನನ್ನು ಕುರಿತು ಭಕ್ತಿಭಾವದಿಂದ ‘ಮಾರಕೋಟಿ ಸುಂದರ’ ಎಂದು ತನ್ಮಯನಾಗಿ ಸ್ತುತಿಸುವ ಈ ದೈವೀಕ ಕೃತಿಯಲ್ಲಿ, ದೇವನ ಕಾರುಣ್ಯ ಬಯಸಿ, ಭಕ್ತತುಂದಿಲನಾದ ಭಕ್ತ, ತ್ಯಾಗರಾಜಸ್ವಾಮಿಯ ಮಹಿಮೆಯನ್ನು ಕೊಂಡಾಡುತ್ತಾ, ಅವನ ದರ್ಶನಕ್ಕೆ ಹಾತೊರೆದು ಭಕ್ತಿಯ ಪರಾಕಾಷ್ಠತೆಗೇರುತ್ತಾನೆ. ಸ್ವಾಮಿಯ ಬಗೆಗಿನ ತೀವ್ರ ಅಭೀಪ್ಸೆ ಗರಿಗಟ್ಟಿ ನಿಲ್ಲುವ ಈ ದೈನ್ಯದ ನೆಲೆಯಲ್ಲಿ ಕಲಾವಿದನ ಅಭಿನಯ (ಸುಶ್ರಾವ್ಯ ಗಾಯನ ಅಂದಗಾರ್ ನವೀನ್ -ಮೃದಂಗ ಜನಾರ್ಧನ ರಾವ್) ಅತ್ಯಂತ ಪರಿಣಾಮಕಾರಿಯಾಗಿತ್ತು. ಜೊತೆಗೆ ಶ್ಯಾಮ್ ಪ್ರಕಾಶರ ಹರಿತವಾದ ಶೊಲ್ಲುಕಟ್ಟುಗಳಿಗೆ ತಕ್ಕುದಾದ, ಕ್ಲಿಷ್ಟವಾದ ನೃತ್ತಗಳ ಲೀಲಾಜಾಲ ದೃಢ ನಿರ್ವಹಣೆ, ಅಸೀಮ ಸೌಂದರ್ಯಲಹರಿಯನ್ನು ಪಸರಿಸಿತ್ತು.

ಒಟ್ಟಾರೆ ಕರ್ನಾಟಕ ಸಂಗೀತ ಮತ್ತು ಮೃದಂಗವಾದನ ಬಲ್ಲ ತಾಳ-ಲಯಜ್ಞಾನ ಹೊಂದಿದ್ದ ಕಲಾವಿದ ನಂದಕಿಶೋರ್, ಸಂಕೀರ್ಣ ನೃತ್ತಗಳ ನಿರ್ವಹಣೆ ಹಾಗೂ ಪಕ್ವಾಭಿನಯದಲ್ಲಿ ಗೆದ್ದಿದ್ದರು. ಮುಂದಿನ `ಏನ ಬೇಡಲಿ ಹನುಮ ?”-ದೇವರನಾಮದ ಅಭಿನಯವೂ ಸುಭಗ-ಸುಂದರವಾಗಿ ಮೂಡಿಬಂದು, ಬೇಲೂರು ಚೆನ್ನಕೇಶವನ ಪ್ರಾರ್ಥನೆಯ ‘ತಿಲ್ಲಾನ’ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.

Related posts

ಸಂಗೀತ ತ್ರಿವಳಿ ರತ್ನಗಳಿಗೆ ನೃತ್ಯನಮನ

YK Sandhya Sharma

ರಸಾನುಭವ ನೀಡಿದ ಮಧುಶ್ರೀ ನರ್ತನ

YK Sandhya Sharma

ಅದ್ಭುತ ರಸಾನುಭವದ ‘’ಏಕ’’ಮೇವಾದ್ವಿತೀಯ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.