ಬೆಳಗಿನ ಮೊದಲ ಕಿರಣದ ಹನಿ ಮೊಗದ ಮೇಲೆ ಸಿಂಚನವಾದಂತಾಗಿ ತಟ್ಟನೆ ಎದ್ದು ಕುಳಿತವಳ ನನ್ನ ಮೊದಲ ಕೆಲಸ, ಮನೆಯ ಮುಂಬಾಗಿಲ ಮುಂದೆ ನೀರು ಚಿಮುಕಿಸಿ ಅಂಗಳ ಸಾರಿಸುವುದು. ರಂಗವಲ್ಲಿ ಬಿಡಿಸಿ ಒಳನಡೆದವಳು ಬಿಸಿಬಿಸಿ ಕಾಫಿ ಮಾಡಿ , ಯಜಮಾನರನ್ನೆಬ್ಬಿಸಿ ಕೊಟ್ಟು ನಾನೊಂದು ಲೋಟ ಹಿಡಿದು ವರಾಂಡಕ್ಕೆ ಬರುವ ವೇಳೆಗೆ ಸರಿಯಾಗಿ ಅಂಗಳದಲ್ಲಿ ಪೇಪರ್ ಬಿದ್ದ ಸದ್ದಾಗುತ್ತದೆ .
ಕಾಫಿ ಹೀರುತ್ತ ಮೊದಲ ಪುಟದ ಮೇಲೆ ಕಣ್ಣಾಡಿಸಿದರೆ ತಲೆ ಚಿಟ್ಟು ಹಿಡಿಸುವ ಬರೀ ರಾಜಕೀಯದ ಸುದ್ದಿ. ಎರಡನೆಯ ಪುಟದ ತುಂಬ ರಕ್ತದ ಓಕುಳಿಯೇ. ಕೊಲೆ -ಸುಲಿಗೆ, ಕಳ್ಳತನ, ಹಾದರ- ಆತ್ಮಹತ್ಯೆ, ಆಕ್ಸಿಡೆಂಟು…ತುಟಿ ಸುಡುತ್ತಿದ್ದ ಕಾಫಿ ಗಂಟಲನ್ನು ಸುಟ್ಟಿತು ಜೊತೆಗೆ ಎದೆಯನ್ನೂ…ನಗರದಲ್ಲಿ ರಾತ್ರಿ ದಾಟಿ ಬೆಳಗಾಗುವುದರೊಳಗೆ ಖಂಡುಗ ಖೂನಿ-ಅಪರಾಧಗಳ ಘಟನೆಗಳೇ? ಅವಕ್ಕೆ ಕಾರಣಗಳು ನೂರಿರಬಹುದು. ಆರಕ್ಕೆ ಮೇಲೇರದ ,ಮೂರಕ್ಕೆ ಕೆಳಗಿಳಿಯದ, ಮಸಾಲೆಗಳಿರದ ಸಪ್ಪೆ ಜೀವನದ ನಮ್ಮಂಥವರ ಪಾಲಿಗೆ ಈ ಎರಡನೇ ಪುಟ ಬೇಕಿಲ್ಲ. ಅದನ್ನು ಹಾರಿಸಿ ಓದಿದರೂ ನಷ್ಟವಿಲ್ಲ. ಅದಕ್ಕಿಂತ ಓದದಿದ್ದರೆ ಕ್ಷೇಮವೆನಿಸಿ, ಮುಖ ಸಿಂಡರಿಸಿ ಪೇಪರನ್ನು ಟೀಪಾಯಿಯ ಮೇಲೆಸೆದೆ.
ದಿನಾ ವಾಕ್ ಮಾಡುತ್ತಿದ್ದ ಪಾರ್ಕ್ ತಲುಪಿದಾಗ ಹತ್ತು ನಿಮಿಷ ಲೇಟೇ. ನಗೆಕೂಟದವರೆಲ್ಲ ಆಗಲೇ ಸೇರಿ ಕೈ ಕಾಲು ಅಲ್ಲಾಡಿಸುತ್ತ ವ್ಯಾಯಾಮ ಮಾಡುತ್ತಿದ್ದರು. ಹೋಗಿ ನಾನೂ ಕೈ-ಕಾಲು ಬಿಚ್ಚಿದೆ. ಅರ್ಧ ಗಂಟೆ ಬಾಯಿಗೆ ಬೀಗ. ಚಪ್ಪಾಳೆ..ನಗು..ಅಪ್ಪುಗೆಯ ನಂತರ ಹೆಂಗಸರೆಲ್ಲ ಪಾರ್ಕೊಳಗೆ ನಾಲ್ಕೈದು ರೌಂಡ್ ಹಾಕೋದು ವಾಡಿಕೆ. ಹಾಗೆ ಗುಂಪು ಗುಂಪಾಗಿ ನಡೆಯುತ್ತ, ಹಿಂದೆ ಬರುವವರಿಂದ ಬೈಸಿಕೊಳ್ಳುತ್ತ, ಚಿಕ್ಕ ಗುಂಪುಗಳಾದೆವು. ಮಾತು ಎಲ್ಲಿಂದೆಲ್ಲಿಗೋ ಹಾರಾಡುತ್ತಿತ್ತು. ಮನೆದೇವರಾದ ಕೆಲಸದವಳಿಂದ ಹಿಡಿದು ಊಟ,ತಿಂಡಿ, ಗಂಡ ಮಕ್ಕಳ ರಾಮಾಯಣ- ರೋಗ ರುಜಿನಗಳು, ರಾಜಕೀಯದ ಸುದ್ದಿ, ಟಿವಿ ಧಾರಾವಾಹಿ, ಅತ್ತೆ-ಸೊಸೆಯರ ಮೇಲಿನ ಚಾಡಿಯವರೆಗೂ ಮಾತಿನ ಜಾಲ ಲಂಗು ಲಗಾಮಿಲ್ಲದೆ ಹರಿದಾಡಿ ನಾಲಗೆಗಳು ಬಳುಕಾಡಿದವು.
ಅದೇ ತಾನೆ ಧಾವಿಸಿ ಬಂದ ಪದ್ಮಾ ಹೊಸ ಸುದ್ದಿಯನ್ನು ಹೇಳಲು ಬಾಯ್ತೆರೆದವಳು ಕೊಚ ಉದ್ವಿಗ್ನಳಾಗಿದ್ದಳು- ` ನಮ್ಮ ಗ್ರಹಚಾರ ನೋಡಿ, ನಮ್ಮನೆ ಕೆಲಸದವಳು ಎಂಥಾ ಕೆಲಸ ಮಾಡಿಬಿಟ್ಟಿದ್ದಾಳೇಂದ್ರೆ ತನ್ನ ಅಣ್ಣ- ತಮ್ಮಂದಿರ ಜೊತೆ ಸೇರಿ ತನ್ನ ಗಂಡನ್ನೇ ಕೊಲೆ ಮಾಡಿಸಿಬಿಟ್ಟಿದಾಳೆ!…ಪೋಲಿಸಿನವರು ಇವತ್ತು ನಮ್ಮನೆ ಹತ್ರ ಬಂದು ಅವಳ ಬಗ್ಗೆ ವಿಚಾರಿಸಿಕೊಂಡು ಹೋದರು….ಹೂಂ…ಇನ್ನು ನಮಗೆ ಬಂತು ಕಷ್ಟ, ಹೊಸ ಕೆಲಸದವಳನ್ನು ಹುಡುಕಬೇಕು’ – ಎಂದು ಪದ್ಮಾ ತಲೆಯ ಮೇಲೆ ಕೈ ಹೊತ್ತು ಕುಳಿತಳು.
` ಅಯ್ಯೋ ಬಿಡಿ ಈ ಕೆಲಸದವರದೆಲ್ಲ ಒಂದೇ ಕಥೆ….ಬೇರೆ ಯಾರದೋ ಸ್ನೇಹ ಮಾಡೋದು, ಗಂಡನ್ನ ಮುಗಿಸೋದು’ ಪಟಕ್ಕನೆ ಮಾತಾಡಿದಳು ಪಂಕಜಾ.
`ಆ ಥರ ಅಲ್ಲಪ್ಪ ನಮ್ಮನೆಯೋಳು, ಅವಳ ಗಂಡ ಅನ್ನಿಸಿಕೊಂಡ ಪ್ರಾಣಿಗೆ ಚೂರೂ ಜವಾಬ್ದಾರೀ ಅನ್ನೋದೇ ಇರಲಿಲ್ಲ…ಮನೆ ಖರ್ಚಿಗೆ ಒಂದು ಪೈಸಾನೂ ಕೊಡೋದಿರಲಿ, ದಿನಾ ಕುಡಿದುಕೊಂಡು ಬಂದು ಹೊಡೀತ್ತಿದ್ನಂತೆ, ಸಾಲದ್ದಕ್ಕೆ ಅವಳು ದುಡಿದಿದ್ದನ್ನೂ ಕಿತ್ಕೊಂಡ್ಹೋಗಿ ಹೊರಗೆ ಮಜಾ ಮಾಡ್ತಿದ್ನಂತೆ….ಪಾಪ, ಇವಳೂ ಎಷ್ಟು ದಿನಾಂತ ಸಹಿಸ್ತಾಳೆ ಹೇಳಿ….ಯಾರ ಬುದ್ಧಿ ಮಾತಿಗೂ ಬಗ್ಗುತ್ತಿರಲಿಲ್ಲ ಆಸಾಮಿ….ಹೂಂ….ಅದಕ್ಕೆ ಅವಳು ಈ ಕೆಲಸಕ್ಕೆ ಕೈ ಹಾಕಿರಬೇಕು’ ಪದ್ಮಾ ನಿಜಕ್ಕೂ ವ್ಯಾಕುಲಳಾಗಿದ್ದಳು.
` ಅಬ್ಬಾ ಎಂಥ ಕ್ರೂರಿ ಅಲ್ವಾ ಅವಳು, ಕಟ್ಕೊಂಡ ಗಂಡನ್ನೇ ಖೂನಿ ಮಾಡಿಸೋದೂಂದ್ರೆ?!’-ಪಂಕಜಾ ಷರಾ ಬರೆದಳು.
` ಅಯ್ಯೋ ಅವರಿಗೆ ಇವೆಲ್ಲ ಮಾಮೂಲೂರೀ…ಆಸ್ತಿ, ಹಣದಾಸೆಗೆ ಅಣ್ಣ, ತಮ್ಮನ್ನ ಮುಗಿಸೋದು….ತಂದೇನೇ ಕೊಲ್ಲೋದು, ಸ್ಕೆಚ್ ಹಾಕಿ ಅಡ್ಡವಾದವರನ್ನೆಲ್ಲ ತೆಗೆಸಿಬಿಡೋದು, ಇಂಥವನ್ನೆಲ್ಲ ನಾವು ಎಷ್ಟು ಕೇಳಿಲ್ಲ…ಬಿಡಿ ಬಿಡಿ ಇಂಥ ಕೊಲೆಗಡುಕರಿಗೆಲ್ಲ ದಯೆ ತೋರಿಸಬಾರದು…ಗಲ್ಲಿಗೇರಿಸಬೇಕು’ ಎಂದು ಮತ್ತೊಬ್ಬರು ಫರಮಾನು ಹೊರಡಿಸಿದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ತಮ್ಮ ಅನುಭವ, ಕಂಡು ಕೇಳಿದ ಸುದ್ದಿಗಳನ್ನು ಉತ್ಸಾಹದಿಂದ ಬಡಬಡನೆ ಉಸುರುತ್ತಿದ್ದರೆ, ನಿರ್ಮಲಾ ಮಾತ್ರ ಇಂದೇಕೋ ಒಂದೂ ಮಾತಾಡದೆ ಮೌನವಾಗಿ ಕುಳಿತಿದ್ದಳು. ` ಏನಾಯ್ತ್ರೀ ನಿಮಗೆ ಇವತ್ತು…ಮುಖ ಸಪ್ಪಗಿದೆ?’- ಕೆಣಕಿದಳು ವನಜ.
ನಿರ್ಮಲಾ ಉತ್ತರಿಸಲಿಲ್ಲ.
`ಹೇಳ್ರೀ ಪರವಾಗಿಲ್ಲ, ಸ್ನೇಹಿತರ ಜೊತೆ ಹೇಳಿಕೊಳ್ಳದೆ ಬೇರಿನ್ಯಾರ ಹತ್ರ ಹೇಳ್ಕೊಳ್ತೀರಾ?…’ ಎಂಬ ಒಂದೇ ಒತ್ತಾಯ.
` ಹೂಂ…ಅರ್ಧ ಆಯಸ್ಸು ಮುಗೀತು, ಇನ್ನೂ ನಮ್ಮ ಜವಾಬ್ದಾರಿ ಮುಗಿದಿಲ್ಲ….ಅಕ್ಕಂದಿರೆಲ್ಲ ಟೂರಿಗೆ ಹೊರಟಿದ್ದಾರೆ….ನನಗಾ ಭಾಗ್ಯ ಹಣೇಲಿ ಬರೆದಿಲ್ಲ ಕಣ್ರೀ …ಗೊತ್ತಲ್ಲ ನಮ್ಮ ಯಜಮಾನರ ಅಕ್ಕ ಮದುವೆ ಮಾಡಿಕೊಳ್ದೆ ನಮ್ಮ ಜೊತೇಲೇ ಇರೋ ವಿಷ್ಯ…ಹೂಂ…ನಾನೆಲ್ಲೂ ಒಂದಿನಾನೂ ಹೊರಗೆ ಹೋಗೋ ಹಾಗಿಲ್ಲ…ಅವರಿಗೆ ಡಯಾಬಿಟೀಸ್ಸು, ಬಿ.ಪಿ, ತುಂಬಾ ವೀಕಾಗಿದ್ದಾರೆ…ಅವರನ್ನೆಲ್ಲಿ ಕರ್ಕೊಂಡ್ಹೋಗಲಿ, ಅಥ್ವಾ ಬಿಟ್ಟು ಹೋಗಲಿ ಹೇಳಿ…ಅದೂ ಅಲ್ಲದೆ ಅವರಿಗ್ಯಾಕೋ ತುಂಬ ಜ್ವರ….ಅವರ ಸ್ಥಿತಿ ನೋಡಿದ್ರೆ ತುಂಬ ದುಃಖವಾಗತ್ತೆ…ಪಾಪ ಒಳ್ಳೆ ಹೆಂಗಸು ‘- ನಿರ್ಮಲಳ ಕಣ್ಣಾಲಿಗಳು ತುಂಬಿ ಬಂದಿದ್ದವು.
ವನಜಾ ಅವಳಿಗೆ ಬಲು ಆಪ್ತಳಂತೆ ಮುಚ್ಚಟೆಯಿಂದ ಸಲಹೆ ಕೊಡಲುಪಕ್ರಮಿಸಿದಳು: `ನಾನೊಂದು ಮಾತು ಹೇಳಲಾ…ಹೇಗೂ ನೀವು ರಾಘವೇಂದ್ರಸ್ವಾಮಿಗಳ ಪರಮ ಭಕ್ತರು…ಆ ನಿಮ್ಮ ದೇವರನ್ನ ಕೇಳಿಕೊಳ್ಳಿ ಈಕೇನ ಆದಷ್ಟೂ ಬೇಗ ನಿನ್ನ ಪಾದಾರವಿಂದಗಳಿಗೆ ಸೇರಿಸಿಕೊಳ್ಳಪ್ಪಾಂತ’ -ಎಂದಾಗ ನಿರ್ಮಲಾ ಷಾಕ್ ಹೊಡೆಸಿಕೊಂಡವಳಂತೆ ತತ್ತರಿಸಿದಳು!!
ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದ ನನಗೂ ಷಾಕು!!…ಅರೇ…ವನಜಳಿಗೇನು ಮಾಡಿತ್ತು ಆ ಪಾಪದ ಹೆಂಗಸು…ನಿರ್ಮಲನ ಅತ್ತಿಗೆಯೇನಾದ್ರೂ ಇವಳ ತಲೆಯ ಮೇಲೆ ಕೂತಿದ್ದಾಳಾ ಎಂದು ಯೋಚಿಸಿದಾಗ ವನಜಳ ಪುಕ್ಕಟೆ, ಕ್ರೂರ ಸಲಹೆ ಬಗ್ಗೆ ಹೇಸಿಕೆಯೆನಿಸಿತು. ಅವಳ ಮಾತು ಕೇಳಿ ಮನಸ್ಸೇಕೋ ಮುರುಟಿಕೊಂಡಿತು.
ಮೆಲ್ಲಗೆ ಗುಂಪು ಬದಲಿಸಿದೆ. ಅಲ್ಲೂ ಅದೇ ರಾಗ. ವಾರದಿಂದ ಬರದಿದ್ದ ಜಯಮ್ಮನ ಸುತ್ತ ಹೆಂಗಸರು ಸುತ್ತಿಕೊಂಡಿದ್ದರು. ` ನಮ್ಮಾವ ಹತ್ತುವರ್ಷಗಳಿಂದ ಹಾಸಿಗೆ ಹಿಡಿದಿದ್ದವರು ನಮ್ಮ ಸುಖ-ಸಂತೋಷಾನೆಲ್ಲ ಹಾಳು ಮಾಡಿದರು…ಅವರನ್ನ ಯಾರಿಗಾದ್ರೂ ಗಂಟು ಹಾಕೋಣ ಅಂದ್ರೆ ನಮ್ಮತ್ತೆ ತೀರಿಕೊಂಡು ಆರು ವರ್ಷ ಆಯ್ತು, ಬೇರೆ ಯಾರೂ ನೋಡಿಕೊಳ್ಳೋರಿಲ್ಲ, ನಾವೊಬ್ರೇ ಮಗ ಅವರಿಗೆ…ಆಸ್ತಿ ಕೊಡ್ತಾರೆ ಅಂತ ಅವರ ಒಂದೂ-ಎರಡೂ ಎಲ್ಲ ಬಾಚಕ್ಕಾಗತ್ತಾ, ನೀವೇ ಹೇಳಿ?….ದಿನಾ ಆ ದೇವರನ್ನ ನಾ ಕೇಳಿಕೊಳ್ತಿದ್ದೆ, ಆದಷ್ಟೂ ಬೇಗ ಅವರಿಗೆ ಮುಕ್ತಿ ಕೊಡಪ್ಪಾಂತ…ಆದ್ರೆ…’ ಒಮ್ಮೆಲೆ ಬಿಕ್ಕಳಿಸತೊಡಗಿದರಾಕೆ. ಮೌನ ಕವಿಯಿತೊಂದು ಕ್ಷಣ. ಎಲ್ಲರೂ ಅವರ ಮುಖವನ್ನೇ ಕುತೂಹಲದಿಂದ ನೋಡುತ್ತಿದ್ದರು.
ಸುಧಾರಿಸಿಕೊಳ್ಳುತ್ತ ಮುಂದುವರಿಸಿದರು ಜಯಮ್ಮ: ` ಅವರು ಚೆನ್ನಾಗೇ ಇದ್ದಾರೆ…ಆದ್ರೆ ಅಂಥ ಗಟ್ಟುಮುಟ್ಟಾಗಿದ್ದ ನಮ್ಮಪ್ಪ ಹೋಗಿಬಿಡೋದೇ?!!..’ ಮತ್ತೆ ಅವರ ದುಃಖ ಉಮ್ಮಳಿಸಿತು.
ನನ್ನ ಹೊಟ್ಟೆಯೊಳಗ್ಯಾಕೋ ಕಡೆಗೋಲಿಟ್ಟು ಕಡೆದಂಥ ಅನುಭವವಾಯ್ತು….ಮನಸ್ಸು ಮ್ಲಾನಗೊಂಡಿತು….ಬಿರಬಿರನೆ ಹೆಜ್ಜೆ ಬಿಸಾಕುತ್ತ ವಾಕ್ ಮೊಟಕುಗೊಳಿಸಿ ಮನೆ ಕಡೆಯತ್ತ ನಡೆದೆ.
ಇವತ್ಯಾವ ಮಗ್ಗುಲಿಗೆ ಎದ್ದಿದ್ದೆನೋ….ಎದುರಿಗೆ ಸಿಕ್ಕ ಯಜಮಾನರ ದೂರದ ನೆಂಟ ಶಂಕರಮೂರ್ತಿ ಮಾತಿಗೆ ನಿಲ್ಲಿಸಿಕೊಂಡರು.
`ಮನೆ ಕಡೆ ಎಲ್ಲ ಸೌಖ್ಯಾನಾ?…’ಎಂದು ಮಾತು ಆರಂಭಿಸಿದ ಆಸಾಮಿ- ` ಆಫೀಸಿಗೆ ಹೋಗ್ತಿದ್ದೀನಿ ಅರ್ಜೆಂಟಾಗಿ…’ ಎನ್ನುತ್ತಲೇ ಮುಂದೆ ಮಾತನಾಡಲು ಹೊರಟ ಅವರನ್ನು ನಾನು ` ಸರಿ, ಯಾವತ್ತಾದರೂ ಬಿಡುವಾಗಿ ಬನ್ನಿ ಒಂದಿನ ಮನೆಯವರ ಜೊತೆ’ ಎಂದು, ಅಲ್ಲಿಂದ ಪಾರಾದರೆ ಸಾಕು ಎಂದು ಮುಂದೋಡಲು ಪ್ರಯತ್ನಿಸಿದೆ…ಆದರೆ ಆತ ಮಾತನಾಡುವ ಮೂಡ್‍ನಲ್ಲಿದ್ದು ನೆಲಕ್ಕೆ ಗಮ್ ಹಾಕಿಕೊಂಡು ನಿಂತೇ ಇದ್ದರು.
-` ನಮ್ಮನೆ ಪರಿಸ್ಥಿತಿ ಗೊತ್ತಲ್ಲ ಇವರೇ….ಬೆಳಗೆದ್ರೆ ನಾನೂ ಇವಳೂ ಇಬ್ರೂ ಕೆಲಸಕ್ಕೆ ಓಡಬೇಕು…..ಅಮ್ಮ ಚೆನ್ನಾಗಿದ್ದಾಗ ದಿನ ಬೆಳಗಾದ್ರೆ ಮನೆಯ ಹೆಣ್ಣುಮಕ್ಕಳೆಲ್ಲ ನಮ್ಮನೇಲೇ ಝಾಂಡಾ ಹಾಕಿರ್ತಿದ್ದವರು ಈಗ ಅಮ್ಮ ಪೆರಾಲಿಸಿಸ್ ಆಗಿ ಬೆಡ್ ರಿಡನ್ ಆದ್ಮೇಲೆ ಒಬ್ರೂ ಪತ್ತೇನೇ ಇಲ್ಲ….ನಮಗೂ ನಮ್ ನಮ್ ಮನೆ ಜವಾಬ್ದಾರಿಗಳಿವೇಂತ ನುಣುಚಿಕೊಂಡುಬಿಟ್ರು ನನ್ನ ಅಕ್ಕ-ತಂಗೀರು…ನಾನೂ ಎಷ್ಟೂಂತ ಸೇವೆ ಮಾಡ್ಲಿ…ಖರ್ಚು ಮಾಡ್ಲಿ ಹೇಳಿ ?….ಅಲ್ಲದೆ ನಮ್ಮಿಬ್ರಿಗೂ ಟೈಮೂ ಇಲ್ಲ…ನಮ್ಮ ಕಷ್ಟ ಆ ದೇವರಿಗೇ ಪ್ರೀತಿ…ನಮ್ಮ ಹೆಣ್ಣುಮಕ್ಕಳೆಲ್ಲ ಗಂಡನ ಮನೆ ಸೇರಿಕೊಂಡ್ರು..ಮಗ ಅಮೇರಿಕಾದಲ್ಲಿ…ಇಲ್ಲಿ ನಾವಿಬ್ರೇ…ದಿನಾ ಇಂಜೆಕ್ಷನ್ ಕೊಡಕ್ಕೆ ನರ್ಸ್ ಬರ್ತಾಳೆ…ವಾರಕ್ಕೆರಡು ಸಲ ಡಾಕ್ಟರ್ ಬರ್ತಾರೆ..ಇಪ್ಪತ್ತು ಸಾವಿರ ಕೊಟ್ಟು ಒಬ್ಬ ಕೇರ್‍ಟೇಕರ್‍ನ ಇಟ್ಟಿದ್ದೀನಿ…ಇದಕ್ಕಿಂತ ಹೆಚ್ಗೆ ಇನ್ನೇನು ಮಾಡಕ್ಕಾಗತ್ತೆ ನನ್ಕೈಲಿ ನೀವೇ ಹೇಳಿ….ಪಾಪ ಅಮ್ಮನಿಗೆ ಎಂಭತ್ತಾಯ್ತು….ಎಲ್ಲ ಅವಯವಗಳೂ ಜರ್ಜರಿತವಾಗಿ ಹೋಗಿವೆ…ಇನ್ನೇನು ಇಂಪ್ರೂವ್ ಆಗೋ ಲಕ್ಷಣ ಇಲ್ಲ. ವೃಥಾ ಅವರಿಗೂ ನೋವು ನಮಗೂ ದುಃಖ…ನೋಡಕ್ಕಾಗ್ತಿಲ್ಲ ಅವರ ಸ್ಥಿತೀನ….ಹೂಂ….ಆ ದೇವರು ಯಾಕೋ ನಿಷ್ಕರುಣಿ…ಅವರಿಗೆ ಇನ್ನೂ ಬಿಡುಗಡೆ ಕೊಡ್ತಿಲ್ಲ’ ಎಂದು ಆತ ತಮ್ಮ ಗೋಳು ಉದ್ದಕ್ಕೆ ನಿರೂಪಿಸತೊಡಗಿದರು.
ಭಾರವಾದ ನನ್ನ ಮನಸ್ಸು ಎಲ್ಲೋ ಜಾರಿತ್ತು. ಹಾಲು ಬಿಳುಪಿನ, ಲಕ್ಷಣವಾದ ಮುಖದ ಕಾಸಿನಗಲ ಕುಂಕುಮದ, ಕಳೆಕಳೆಯ ಆ ಮುತ್ತೈದೆ ಸಾವಿತ್ರಮ್ಮ ನನ್ನ ಕಣ್ಣೆದುರಿಗೆ ತೇಲಿಬಂದರು. ನಮ್ಮ ಮದುವೆಯಾದ ಹೊಸದರಲ್ಲಿ ನಮ್ಮನ್ನು ಅವರ ಮನೆಗೆ ಊಟಕ್ಕೆ ಕರೆದಿದ್ದರು. ಬಾಯ್ತುಂಬ ನಗುತ್ತ ಆಕೆ ಉಪಚರಿಸುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣಿಗೆ ಹಾಗೇ ಕಟ್ಟಿದಂತಿದೆ. ಧಾರಾಳ ಸುಮನಸ್ಸಿನ ಹೆಂಗಸು ತಮ್ಮ ಮಕ್ಕಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಸಾಕಿ ಸಲಹಿದ್ದರು. ಅದರಲ್ಲೂ ಈ ಶಂಕರನಿಗಾಗಿ ಅವರು ಮಾಡಿದ ತ್ಯಾಗದ ಕಥೆಗಳನ್ನು ಎಷ್ಟೋ ಕೇಳಿದ್ದೆ. ಈಗ ಆಕೆಗೊದಗಿದ ದಯನೀಯ ಸ್ಥಿತಿ ನೆನೆದು ನಿಟ್ಟುಸಿರು ಹೊರಹೊಮ್ಮಿತು.
ಯಾಕೋ ಇಡೀದಿನ ನನ್ನ ಕೆಲಸವೆಲ್ಲ ಅಡ್ಡಾದಿಡ್ಡಿಯಾಗಿ ಸಾಗಿತು. ಮನಸ್ಸಿನ ತುಂಬ ಅವ್ಯಕ್ತ ನೋವಿನ ತಂತುಗಳು…ವ್ಯಾಕುಲತೆ. ಅಂತೂ ಕೆಲಸವೆಲ್ಲ ಹೇಗೋ ಮುಗಿದು ಊಟ, ಮಧ್ಯಾಹ್ನದ ಸಣ್ಣ ನಿದ್ದೆ ಮುಗಿಸಿ ಹೊರಗೆ ಬಂದಾಗ ಯಜಮಾನರು ಸಂಜೆ ವಾಕಿಂಗಿಗೆ ಹೊರಟುನಿಂತಿದ್ದರು. ಬೆಳಗಿನಿಂದ ಎದೆಯೊತ್ತುತ್ತಿದ್ದ ಭಾರವನ್ನೆಲ್ಲ ಅವರ ಮುಂದೆ ಇಳಿಸಲು ಹವಣಿಸುತ್ತಿದ್ದವಳಿಗೆ ನಿರಾಸೆಯಾಯಿತು. ಅವರು ಹೊರಟ ಮೇಲೆ ಬೇಸರ ಕಳೆಯಲು ಟಿವಿ ಹಾಕಿಕೊಂಡೆ. ಮನಸ್ಸೇಕೋ ಅದರಲ್ಲಿ ನಿಲ್ಲದಾಯಿತು. ಟಿವಿ ಆರಿಸಿ ಮನೆಗೆ ಬರುತ್ತಿದ್ದ ವಾರಪತ್ರಿಕೆಗಳನ್ನೆಲ್ಲ ತಿರುವಿ ಹಾಕಿದೆ. ಅಷ್ಟರಲ್ಲಿ ಅವರು ಪಾರ್ಕಿನಿಂದ ಹಿಂತಿರುಗಿ ಬಂದಿದ್ದರು.
` ರಾತ್ರಿಗೇನು ಮಾಡಲಿ ಅಡುಗೆ?’ ಎಂಬ ಮಾಮೂಲಿ ಪ್ರಶ್ನೆಯೊಂದಿಗೆ, ಅವರೊಡನೆ ಮಾತನಾಡುವ ಇರಾದೆಯಿಂದ, ಅವರ ಮುಂದಿದ್ದ ಕುರ್ಚಿಯನ್ನು ಎಳೆದುಕೊಂಡು ಕೂತೆ.
ದೊಡ್ಡ ನಿಟ್ಟುಸಿರು ಚೆಲ್ಲುತ್ತ ಅವರು – `ಸ್ವಲ್ಪ ಹೊತ್ತು ತಡಿಯೇ…ಆಮೇಲೆ ಹೇಳ್ತೀನಿ…ನಂಗೀಗ ಹಸಿವಿಲ್ಲ’ ಎಂದವರ ದನಿಯಲ್ಲಿ ಹತಾಶೆಯ ಸಿಂಚನ ಕಂಡಿತು. ಕೊಂಚ ಹೊತ್ತು ಮೌನ ಆಳಿತು…..ಅನಂತರ ಅವರೇ ಬಾಯ್ತೆರೆದರು:
` ನಾಳೆಯಿಂದ ಪಾರ್ಕಿಗೆ ಹೋಗಲ್ಲಪ್ಪ ನಾನು…ಸಂಜೆ ಹೊತ್ತು ಸ್ವಲ್ಪ ಹಾಯಾಗಿ ಕಾಲ ಕಳೆಯೋಣ ಅಂತ ಸ್ವಲ್ಪ ಹೊತ್ತು ಹೊರಗೆ ಹೋದ್ರೆ ಯಾರಿಗ್ಬೇಕು ಹಾಳು ಸಂಸಾರದ ತಾಪತ್ರಯಗಳು…..ಛೇ..ಛೇ..’ ಭಾರವಾದ ಅವರ ದನಿ ಗುರುತಿಸಿ, ಬೆಳಗಿನಿಂದ ಹೊಯ್ದಾಡುತ್ತಿದ್ದ ನನ್ನೊಳಗಿನ ಮಾತುಗಳು ಬಾಯದಡದಲ್ಲೇ ಉಳಿದವು. ಅವರೇ ಮಾತನಾಡಲಿಯೆಂಬಂತೆ ಅವರ ಮೊಗ ದಿಟ್ಟಿಸಿದೆ. ಅವರು ಮತ್ತೊಮ್ಮೆ ಪೇರುಸಿರು ಚೆಲ್ಲಿದರು.
` ಆ ರಾಮಯ್ಯ ಇಷ್ಟು ಕಟುಕ ಅಂದ್ಕೊಂಡಿರ್ಲಿಲ್ಲ ಕಣೆ…ನನ್ನ ಹೆಂಡತಿಯ ತಾಯಿಗೆ ತುಂಬಾ ಸಿರಿಯಸ್, ಅವರ ಊರಿಗೆ ಹೋಗಿ ಬಂದೆ ಅಂದಿದ್ದ ಅವತ್ತು…..ಇವತ್ತು, ಆಕೆಗೆ ಅರೆಬರೆ ಜ್ಞಾನ ಮೂಗಿನಿಂದ ಫನಲ್ ಮೂಲಕ ಆಹಾರ ಹಾಕ್ತಿದ್ದಾರೆ…ಬದುಕೋದೂ ಇಲ್ಲ ಸಾಯೋದೂ ಇಲ್ಲ…ವರ್ಷಾನುಗಟ್ಟಲೆಯಾಯ್ತು, ನೆಂಟರ ಮನೇಲೆ ವ್ಯವಸ್ಥೆ ಮಾಡಿ ಬಂದಿದ್ದೇವೆ…ನನ್ನ ಹೆಂಡತೀಗೂ ಸಾಕಾಗಿಹೋಗಿದೆ, ಮುದುಕಿ ಯಾವಾಗ ಗೊಟಕ್ ಅನ್ನತ್ತೋ ಅಂತ ಕಾದಿದ್ದೀವಿ ನಾವಿಬ್ರೂ … ಒಬ್ಬಳೇ ಮಗಳೂಂತ ನಮ್ಮಾವ ಇವಳ ಹೆಸರಿಗೇ ಬೇಕಾದಷ್ಟು ಆಸ್ತಿ ಮಾಡಿದ್ರೂ, ಅವಳಮ್ಮ ಸತ್ತ ನಂತರವೇ ಅದು ಇವಳ ಹೆಸರಿಗೆ ಬರೋದು….ಅಷ್ಟರಲ್ಲಿ ನಾವು ಮದುಕರಾಗಿರ್ತೀವಿ ಬಿಡಿ ಅಂತ ಇವಳು ಹಗಲೂ ರಾತ್ರಿ ಒಂದೇಸಮನೆ ಒದ್ದಾಡ್ತಾಳೆ….ಏನ್ಮಾಡೋದು…ಆ ಹೆಂಗಸಿನ ಆಯಸ್ಸು ಮಹಾ ಗಟ್ಟಿ ಅಂತ ಕಾಣತ್ತೆ….ಅದಕ್ಕೆ, ಆಕೆಗೆ ಆಹಾರ ಹಾಕೋದನ್ನೇ ನಿಲ್ಲಿಸಿಬಿಟ್ಟರೆ ಹೇಗೆ ಅಂತಲೂ ಯೋಚಿಸ್ತಿದ್ದೀವಿ ನಾವು ‘’ ಅಂತ ಅಂದುಬಿಡೋದೇ ಆ ಸ್ವಾರ್ಥಿ ರಾಮಯ್ಯ!!..’ ಎಂದು ನಮ್ಮವರು ಖಿನ್ನರಾಗಿ ಹೇಳಿ ಮುಗಿಸಿದಾಗ ನಾನು ಥರಗುಟ್ಟಿಹೋದೆ!!…ಮೈಯೆಲ್ಲಾ ಗಡಗಡ ಎಂದಿತು.
ಅಬ್ಬಾ ಎಂಥ ಕ್ರೂರ-ಕಟುಕ ಜನಗಳು ಇವರೆಲ್ಲ…!!…ಎದೆ ಕುಲುಮೆಯಾಗಿತ್ತು!…ತಮ್ಮ ಸ್ವಾರ್ಥಕ್ಕಾಗಿ, ಸ್ವಹಿತ-ಸುಖಕ್ಕಾಗಿ ಯಾರ್ಯಾರ ಸಾವನ್ನೋ ಬಯಸುವ ಈ ಕೊಲೆಗಡುಕ ಮನಸ್ಸುಗಳ ತಣ್ಣನೆಯ ಕ್ರೌರ್ಯಕ್ಕೆ ನಾನು ಬೆಚ್ಚಿ ಸಣ್ಣಗೆ ನಡುಗಿದೆ. ***