Image default
Short Stories

ಪಂಜ

  ಸಣ್ಣಗೆ ಹಾಡು ಗುನುಗಿಕೊಳ್ಳುತ್ತ, ಬಲಭುಜದಲ್ಲಿ ನೇತಾಡುತ್ತಿದ್ದ ವ್ಯಾನಿಟಿ ಬ್ಯಾಗನ್ನು ಎಡ ಭುಜಕ್ಕೆ ಬದಲಾಯಿಸಿಕೊಂಡು ಸಶಬ್ದವಾಗಿ ಗೇಟು ತೆರೆದು, ಮುಂಬಾಗಿಲ ಮುಂದಿದ್ದ ಎರಡು ಮೆಟ್ಟಿಲನ್ನು ಕುಪ್ಪಳಿಸಿ ಹತ್ತಿ , ಯಾವುದೋ ಗುಂಗಿನಲ್ಲಿ ಕರೆಗಂಟೆಯ ಮೇಲೆ ಜೋರಾಗಿ ಬೆರಳನ್ನೊತ್ತಿದಳು ಛಾಯಾ. ಗಂಟಲು ಕಟ್ಟಿದ್ದ ಬೆಲ್ಲಿನ ಕರ್ಕಶ ಶಬ್ದ ಅವಳ ಕಿವಿಗೇ ಅಪ್ಪಳಿಸಿತಾದರೂ ಯಾರೂ ಎದ್ದು ಬಂದು ಬಾಗಿಲು ತೆರೆಯಲಿಲ್ಲ. ತೆರೆಯುವ ಸೂಚನೆಯೂ ಕಾಣದಾದಾಗ, ಛಾಯಾ ಮತ್ತೊಮ್ಮೆ ಜೋರಾಗಿ ಬೆಲ್ ಒತ್ತಿ, ಕದವನ್ನು ಎರಡು ಸಲ ಬಡಿದಳು.

  ಬಾಗಿಲು ಕಿರುಗುಟ್ಟುತ್ತ ಮೆಲ್ಲಗೆ ಒಳಗೆ ತೆರೆದುಕೊಂಡಿತು.

 “ಓಹ್ ಚಿಲಕಾನೇ ಹಾಕಿಲ್ಲ…ಹೂಂ ನಾನೂ ಸರಿ..” ಎಂದು ತನ್ನಲ್ಲೇ ಕಿರುನಗೆ ನಕ್ಕೊಂಡು, ಮತ್ತೆ ರಾಗ ಗುನುಗುಟ್ಟಿಕೊಳ್ಳುತ್ತ ವರಾಂಡದ ಷೂ ರ್ಯಾಕಿನಲ್ಲಿ ಚಪ್ಪಲಿ ಬಿಟ್ಟವಳು ತಟ್ಟನೆ ಏನೋ ನೆನೆಸಿಕೊಂಡು-” ಅಲ್ಲಾ, ದಿನಬೆಳಗಾದರೆ ಪೇಪರಿನಲ್ಲಿ ಏನೇನೋ ಸುದ್ದಿಗಳು ಬರುತ್ತಲೇ ಇರುತ್ವೆ, ಬಾಗಿಲು ಹಾಕ್ಕೊಂಡೋರನ್ನ ಏನೋ ನೆಪಮಾಡಿ , ಬಾಗ್ಲು ತೆಗೆಸಿ ,ಬಾಯಿಗೆ ಬಟ್ಟೆ ತುರುಕಿ, ಕತ್ತಿಗೆ ಹಗ್ಗಬಿಗಿದು…ಛೇ ಛೇ..ಅಂಥದ್ದೆಲ್ಲ ನಡೀತಿರುವಾಗ ಹೀಗೆ ಚಿಲಕ ಹಾಕಿಕೊಳ್ಳದೆ,ಒಳಗೆಲ್ಲೋ ಸೇರಿಕೊಂಡಿದ್ರೆ   ಇನ್ನೇ ನಾಗಬೇಡ..ಛೇ…ಅತ್ತೇ…ಅತ್ತೇ…”- ಎಂದವಳು ತುಸು ಕೋಪದ ದನಿಯಲ್ಲಿ ಕೂಗುತ್ತ, ಹಾಲಿನ ಬಾಗಿಲಲ್ಲಿ ಅಡಿಯಿರಿಸಿದವಳು ಗಾಬರಿಯಿಂದ ಅಲ್ಲೇ ನಿಂತುಬಿಟ್ಟಳು!

          ಅವಳ ಊಹೆ ನಿಜವಾಗಿತ್ತು. ನಡುಮನೆಯಲ್ಲಿ ಎಲ್ಲ ಸಾಮಾನುಗಳೂ ಚೆಲ್ಲಾಪಿಲ್ಲಿಯಾಗಿದ್ದವು. ಊಟದ ಮನೆಯ ಬಾಗಿಲಲ್ಲಿ ತಟ್ಟೆ ,ಲೋಟ, ಚಮಚ, ಪಾತ್ರೆಗಳು !……. ಅರೆಕ್ಷಣ ಛಾಯಳ ಎದೆಬಡಿತ ನಿಂತಂತಾಯ್ತು !

          ಸೋಫದ ಮೇಲೆ ತಲೆ ಕೆದರಿಕೊಂಡು, ಮುಖದ ಮೇಲೆ ಭಯಮುದ್ರೆ ಹೊತ್ತು ಮುದುರಿ ಕುಳಿತಿದ್ದ ರಾಘವ.!

          “ಅರೇ, ರಾಘೂ…”- ಛಾಯಾ ಗಾಬರಿಯಿಂದ ಅವನತ್ತ ಧಾವಿಸಿ, ಅವನ ಹಣೆಯ ಮೇಲಿನ ಬೆವರ ಬಿಂದುಗಳನ್ನು ತನ್ನ ಕೈಲಿದ್ದ ಕರ್ಚೀಫಿನಿಂದ ಒತ್ತುತ್ತಾ-

          “ಏನಾಯ್ತು         ರಾಘೂ…ಇದ್ಯಾಕೆ ಹೀಗೆ ಮನೆಯ ಸಾಮಾನೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ…ಯಾರಾದ್ರೂ ಕಳ್ಳ ಕಾಕರು…”ಎಂದವಳ ದನಿ  ತನ್ನರಿವಿಲ್ಲದೆ ನಡುಗತೊಡಗಿ, ಇದ್ದಕ್ಕಿದ್ದ ಹಾಗೆ ನೆನಪಿಸಿಕೊಂಡು-” ಅಂದ್ಹಾಗೆ ಅತ್ತೆ ಎಲ್ರೀ?..”ಎನ್ನುತ್ತ ಅವನ ಪಕ್ಕದಲ್ಲಿ ಕುಸಿದು ಕುಳಿತಳು .

          ರಾಘವ ಏದುಸಿರುಬಿಡುತ್ತಿದ್ದವನು, ನಿಧಾನವಾಗಿ ಸುಧಾರಿಸಿಕೊಳ್ಳುತ್ತ, “ಒಂದ್ ಒಂದ್ ನಿಮಿಷ ಇರು, ಎಲ್ಲಾ ಹೇಳ್ತೀನಿ”-ಎಂದಾಗ ಛಾಯಾ ಮತ್ತಷ್ಟು ಆತಂಕಗೊಂಡಳು.

          ರಾಘವ ಮೆಲ್ಲನೆ ಸಾವರಿಸಿಕೊಂಡು ಮೇಲೆದ್ದು, ಸಿಂಕಿನ ಬಳಿ ನಡೆದು ಮುಖಕ್ಕೆ ಕೊಂಚ ತಣ್ಣೀರೆರಚಿಕೊಂಡು, ಟವೆಲ್ಲಿನಲ್ಲಿ ಒರೆಸಿಕೊಳ್ಳುತ್ತ ‘ಉಸ್ಸಪ್ಪಾ’ ಎಂದು ಅವಳ ಮಗ್ಗುಲಿಗೆ ಬಂದು ಕೂತ.

          ಅಷ್ಟರಲ್ಲವಳು ಭಯಮಿಶ್ರಿತ ಕುತೂಹಲದಿಂದ ಮೆಲ್ಲ ನಡೆದು ಅಡುಗೆಮನೆಯೊಳಗೆ ಬಗ್ಗಿ ನೋಡಿದವಳು , ಮುಖ ಕಿವುಚಿಕೊಂಡಳು.

          “ಇದ್ಯಾರ್ರೀ ಮನೆಯೆಲ್ಲ ಹೀಗೆ ರಂಪ-ರಾದ್ಧಾಂತ ಮಾಡಿದೋರು?..ಹಾಗೆ ನೋಡಿದರೆ ಸಣ್ಣ ಮಕ್ಳು-ಮರಿ ಅಂತ ಯಾರಿದ್ದಾರೆ ಈ ಮನೇಲಿ-ನೀವು, ನಾನು, ಅತ್ತೆ ಮೂರು ಜನಾನ ಬಿಟ್ರೇ?” ಅವಳ ದನಿಯಲ್ಲಿ ಅಚ್ಚರಿಯೊಡನೆ ಭಯ ಮಿಳಿತವಾಗಿತ್ತು.

          ರಾಘವನ ಮುಖ ವಿವರ್ಣವಾಗಿತ್ತು. ಮೆಲ್ಲಗುಸುರಿದ ಅತ್ತಿತ್ತ ನೋಡುತ್ತ- “ಅವತ್ತೂ ಒಂದು ದಿನ ಹೀಗೇ ಆಗಿತ್ತು..ನೀನೂ-ಅಮ್ಮ ಇಲ್ಲದಿರುವಾಗ”

          ಛಾಯಳ ಹುಬ್ಬುಗಳು ಬೆಸೆದುಕೊಂಡವು!!..

          “ನೀನು ಬೆಳಗ್ಗೆ ಆಫೀಸಿಗೆ ಹೋದ ಸ್ವಲ್ಪ ಹೊತ್ತಿನಲ್ಲೇ ಅಕ್ಕನಿಂದ ಫೋನ್ ಬಂತು . ಅಮ್ಮ ಒಂದೇ ಉಸಿರಿನಲ್ಲಿ ಮೈಸೂರಿಗೆ ಹೊರಟು ನಿಂತಳು. ಬಸ್ಸು ಹತ್ತಿಸಿ ಬಂದೆ…ಊಟ ಮಾಡಿ , ಸ್ವಲ್ಪ  ಹೊತ್ತು ರೆಸ್ಟು ತೊಗೊಂಡು, ರೂಮಿನಲ್ಲಿ ಕಂಪ್ಯೂಟರ್ ಮುಂದೆ ಕೂತಿದ್ದೆ. ಅಷ್ಟರಲ್ಲಿ ಅಡುಗೆ ಮನೇಲಿ ದಡಬಡ ಸದ್ದು…ಪಾತ್ರೆ ಪಗಡಿ- ಡಬ್ಬಗಳೆಲ್ಲ ದಬದಬನೆ ನೆಲಕ್ಕೆ ಬಿದ್ದ ಶಬ್ದ ಕೇಳಿ, ತತ ಕ್ಷಣ ಎದ್ದುಹೋಗಿ ನೋಡ್ತೀನಿ…ನೀನೀಗ ನೋಡಿದ್ಯಲ್ಲ ಹಾಗೆ ಬಿದ್ದಿವೆ..! ಇಲಿ-ಬೆಕ್ಕುಗಳ ಕೆಲ್ಸ ಇದಲ್ಲ. ಹಿಂಬಾಗಿಲು-ಮುಂಬಾಗಿಲು ಹಾಕಿದ್ಹಾಗೆ ಇದೆ. ಕಳ್ಳ ಕಾಕರಾದರೆ ಹೀಗೆ ಶಬ್ದ ಮಾಡ್ತಾರೇನು?..ನೋ..ಆದ್ರೆ ಇನ್ನೇನೋ ನೆನೆಸಿಕೊಂಡಾಗ ನನ್ನ ಗಂಡೆದೆ ಕೂಡ ಝಲ್ಲೆಂದು, ಬೆವರುಕಟ್ಟೆ ಒಡೀತು ಕಣೆ ಛಾಯಾ …ಹೋದ ಮಂಗಳವಾರಾನೂ ಹೀಗೇ ಆಗಿತ್ತು..ಆದ್ರೆ ಇಷ್ಟಿಲ್ಲ..ಅಡುಗೆಮನೇಲಿ ನಾಲ್ಕೈದು ಡಬ್ಬಗಳು ಮಾತ್ರ  ಬಿದ್ದಿದ್ವು..ಬೆಕ್ಕಿರಬಹ್ದು ಅಂತ ಸುಮ್ಮನಾಗಿ ಅವುಗಳನ್ನು ಎತ್ತಿಟ್ಟುಬಂದಿದ್ದೆ…ಆದರೆ ಇವತ್ತು…?!..”

          ರಾಘವ ನಿಜವಾಗಿ ಗಾಬರಿಗೊಂಡಿದ್ದ. ಅವನ ಕಣ್ಣುಗಳು ಭಯದಿಂದ ಅರಳಿಕೊಂಡಿದ್ದವು.

          ಗಂಡ ಹೇಳಿದ ಸಂಗತಿ ಕೇಳಿ ಛಾಯಳ ಮೈ ಸಣ್ಣಗೆ ಕಂಪಿಸಿ, ಹಣೆಯ ಮೇಲೆ ಬೆವರಮಣಿಗಳು ಕೋದುಕೊಂಡವು. ಭೀತಿಯಿಂದ  ಅವಳು ಗಂಡನತ್ತ ಇನ್ನಷ್ಟು ಸರಿದು ಅವನಿಗೆ ಅಂಟಿ ಕೂತಳು. ರಾಘವನೇ  ಧೈರ್ಯವನ್ನು ಬರಸೆಳೆದುಕೊಂಡು, ಪಕ್ಕದಲ್ಲಿ ಬೆದರಿ ಮುದ್ದೆಯಾಗಿ ಕುಳಿತವಳ ತಲೆ ನೇವರಿಸಿ, ಕಣ್ಣಲ್ಲೇ ಧೈರ್ಯ ಹೇಳುತ್ತ-    “ಮೊದಲೇ ನೀನು ತುಂಬಾ ಸೂಕ್ಷ್ಮ ಸ್ವಭಾವದವಳು…ನಿನ್ನಂಥವಳ ಮುಂದೆ ಈ ಸುದ್ದಿ ಹೇಳೀದ್ನಲ್ಲ, ನನ್ನ ಬುದ್ಧಿಗಿಷ್ಟು….ಆಗಿದ್ದಾಗ್ಹೋಯ್ತು…ಏನೂ ಹೆದರ್ಕೋಬೇಡ ಕಣೆ,  ನಾನಿದ್ದೀನಿ, ಧೈರ್ಯವಾಗಿ ಮೇಲೆದ್ದು ಹೋಗಿ ಮುಖ ತೊಳ್ಕೊಂಡು ರೆಡಿಯಾಗಿ ಬಾ, ಹೊರಗೆ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದ್ಕೊಂಡು, ಹಾಗೇ ಸ್ವಲ್ಪ ಹೊತ್ತು ಸುತ್ತಾಡಿಕೊಂಡು ಬರೋಣ ಬಾ”-ಎಂದು ಅವನು ಮಡದಿಯ ಕೆನ್ನೆ ತಟ್ಟಿ ಸಮಾಧಾನಿಸಿದ.

          ಛಾಯಾಗೆ ಮೇಲೆದ್ದು ಮುಂದೆ ಒಂದಡಿ ಇಡಲೂ ಭಯ.! ಗಂಡನ ತೋಳನ್ನು ಹಿಡಿದುಕೊಂಡೇ ನಿಂತಿದ್ದಳು. ರಾಘವ ತಾನೇ ಕೆಳಗೆ ಬಿದ್ದಿದ್ದ ತಟ್ಟೆ-ಲೋಟಗಳನ್ನು ಎತ್ತಿ ಅಡುಗೆಮನೆಯ ಸ್ಟ್ಯಾಂಡಿನೊಳಗೆ  ಸಿಕ್ಕಿಸಿದ.

          ಛಾಯಾ ಅಳುಕುತ್ತಲೇ ಕೆಳಗೆ ಬಿದ್ದಿದ್ದ ಪ್ಲಾಸ್ಟಿಕ್ ಡಬ್ಬಗಳನ್ನು ಎತ್ತಿ ಅಂತಸ್ತಿನಲ್ಲಿಡುವಾಗ , ಡಬ್ಬ ಸೀಳಿಹೋಯಿತೇ ಎಂದು ಬೇಸರದಿಂದ ಅದನ್ನು ಹಿಂದೆ ಮುಂದೆ ತಿರುಗಿಸಿ ನೋಡಿದಳು. ಸದ್ಯ ಯಾವ ಡಬ್ಬಗಳೂ ನೆಗ್ಗಿರಲಿಲ್ಲ. ಮುಚ್ಚಳ ಭದ್ರವಾಗಿದ್ದುದರಿಂದ ಪದಾರ್ಥಗಳು ಹೊರಗೆ ಚೆಲ್ಲಿರಲಿಲ್ಲ.

          “ಛಾಯಾ ರೆಡೀನಾ?”- ಹೊರಗೆ ರಾಘವ ಜೋರಾಗಿ ಕಾರಿನ ಹಾರನ್ ಮಾಡಿದ.

          ಛಾಯಾ ಬಾಹ್ಯಲೋಕಕ್ಕೆ ಬಂದವಳು, ತತ್ ಕ್ಷಣ ಗಡಬಡಿಸಿ ಕನ್ನಡಿಯ ಮುಂದೆ ನಿಂತ ಶಾಸ್ತ್ರ ಮಾಡಿ ಹೊರಗೋಡಿ ಬಂದಳು.

          ಹೋಟೆಲಿನಲ್ಲಿ ರಾಘವ ಅವಳಿಗಿಷ್ಟವಾದ ಮಸಾಲುದೋಸೆಯನ್ನು ತರಿಸಿದ್ದರೂ ಇಂದೇಕೋ ಅವಳ ಮನಸ್ಸು ಅಸ್ತವ್ಯಸ್ತವಾಗಿತ್ತು. ಯಾವುದೋ ಅವ್ಯಕ್ತ ಭೀತಿಯ ಗುಂಗು ಅವಳನ್ನು ಇಡುಗಿತ್ತಾದ್ದರಿಂದ, ದೋಸೆ ಅವಳ ನಾಲಗೆಗೆ ರುಚಿಸಲಿಲ್ಲ. ಆದರೆ ರಾಘವ ಮಾತ್ರ ಆರಾಮವಾಗಿ ದೋಸೆಯನ್ನು ಮುರಿಮುರಿದು ಬಾಯಲ್ಲಿಟ್ಟುಕೊಂಡು “ಒಳ್ಳೆ ಮಲ್ಲಿಗೆ ಥರ ಎಷ್ಟು ಮೃದುವಾಗಿದ್ಯಲ್ಲ ದೋಸೆ”-ಎಂದು ಅವಳತ್ತ ತಿರುಗಿದವನು, ಹೆಂಡತಿಯ ಮುಖವನ್ನಾವರಿಸಿದ್ದ ಗ್ರಹಣವನ್ನು ಗಮನಿಸಲಿಲ್ಲ.

          ಛಾಯಳ ಕಂಗಳಲ್ಲಿನ ಭಯ ಇನ್ನೂ ಕರಗಿರಲಿಲ್ಲ. ವಿಗ್ರಹದಂತೆ ಕುಳಿತಿದ್ದಳು.

          ರಾತ್ರಿ ಎಂಟಕ್ಕೆ ಅವರು ಮನೆಗೆ ಹಿಂತಿರುಗಿ, ರಾಘವ ಡೋರ್ ಲಾಕ್ ತೆಗೆದು ಮನೆಯೊಳಗೆ ಅಡಿಯಿರಿಸುವಾಗ , ಅದುವರೆಗೆ ಅವಳನ್ನು ಮೆತ್ತಿದ್ದ ಮೌನ, ದಿಗಿಲಾಗಿ, ಹೃದಯ ಜಾಗಟೆಯಾಯಿತು. ಅಂಜಿಕೆಯಿಂದಲೇ ಅತ್ತಿತ್ತ ಕಣ್ಣು ಹಾಯಿಸಿದಳು. ಮನೆ ಬಿಟ್ಟಾಗಿದ್ದಂತೆಯೇ ಎಲ್ಲ ಓರಣವಾಗಿತ್ತು, ಅಡುಗೆ ಮನೆಯ ಡಬ್ಬಿಗಳೂ ಗೂಡಿನಲ್ಲಿ ಸಾಲಾಗಿ.

          ಅಂದು ರಾತ್ರಿ ಹನ್ನೆರಡಾದರೂ ಛಾಯಳ ಕಣ್ರೆಪ್ಪೆಗಳು ಒಂದಕ್ಕೊಂದು ಕೂಡಲಿಲ್ಲ. ಅಂತರಂಗದೊಳಗೆ ಏನೋ ಧಿಮಿಕಿಟ.ಪಕ್ಕಕ್ಕೆ ಹೊರಳಿ ನೋಡಿದಳು, ರಾಘವ ಹಸುಮಗುವಿನಂತೆ ನಿರಮ್ಮಳವಾಗಿ ಮಲಗಿದ್ದ. ಮಲಗುವ ಮುನ್ನ ಅವನಂದ ಮಾತು: “ಮಂಗಳವಾರ ಅಷ್ಟ್ಯಾಕೋ ಒಳ್ಳೇದಲ್ಲ ಅಂತಾರಲ್ವಾ?…..ರಜನಿ…” ಮುಂದೆ ಅವನು ಮಾತನಾಡದಂತೆ ಛಾಯಾ, ತಟ್ಟನೆ ಅವನ ಬಾಯಿಯ ಮೇಲೆ ಕೈಯಿಟ್ಟಿದ್ದಳಷ್ಟೇ ಅಲ್ಲದೆ,ತನ್ನೆರಡೂ ಕೈಗಳಿಂದ ತನ್ನಕಿವಿಗಳನ್ನು ಮುಚ್ಚಿಕೊಂಡಿದ್ದಳು. ಅವನಾಡಬಹುದಿದ್ದ  ಮಾತು  ನೆನೆದು ಗಡಗಡನೆ ನಡುಗಿದಳು. ಅವನು ಹೆಸರಿಸಿದ ವ್ಯಕ್ತಿ ರೂಹು ತಳೆದು ಧುತ್ತೆಂದು ಎದುರಿಗೆ ನಿಂತಂತಾಯಿತು….ಹೃದಯ ಝಲ್ಲೆಂದಿತು –   ಧಡ್ ..ಧಡ್…

          ನಿದ್ದೆ ಹಾರಿ ಹೋಗಿತ್ತು.

          ಒತ್ತಾಯವಾಗಿ ಬಿಗಿದುಕೊಂಡಿದ್ದ ಛಾಯಳ ಕಣ್ರೆಪ್ಪೆಗಳನ್ನು ಸೀಳಿ, ನೆಲದಿಂದ ತಾರಸಿಯವರೆಗೂ ರಕ್ಕಸಿಯಂತೆ ಮೈ ಸೆಟೆಸಿ, ಬೃಹದಾಕಾರವಾಗಿ ನಿಂತಿದ್ದಳು ರಜನಿ!

          ರ..ಜ..ನಿ…ಹೌದು..ಛಾಯಳಷ್ಟೇ ಮುದ್ದಾದ ಹೆಣ್ಣುಹುಡುಗಿ…ಹೆಚ್ಚೂ ಕಡಮೆ ಅವಳ ಓರಗೆಯೇ. ರಜನಿಯ ಚೆಲುವಾದ ಮೃದು ಮುಖದಲ್ಲಿ ಮಿನುಗುತ್ತಿದ್ದ ಮಂದಹಾಸದ ಜಾಗದಲ್ಲಿ ಇಂದು ಅವಡುಗಚ್ಚಿದ ಹೂಂಕಾರ..!..ರಕ್ತದುಂಡೆಯ ಕಣ್ಣುಗಳು..!

          “ಎರಡು ಕುತ್ತಿಗೆ ಒಂದು ಪ್ರಾಣ ಅನ್ನೋ ಹಾಗಿದ್ದ ನನ್ನ ಆಪ್ತ ಗೆಳತಿ ಛಾಯಾ, ಈ ದಿನ ನೀನು, ನನ್ನ ಗಂಡನನ್ನೂ ಹಂಚ್ಕೊಂಡು, ನಾವಿಬ್ರೂ ಬೇರೆ ಬೇರೆಯಲ್ಲ ಅಂತ, ಪ್ರೂವ್ ಮಾಡಕ್ಕೆ ನನ್ನ ಜಾಗ ಆಕ್ರಮಿಸಿಕೊಂಡಿದ್ದೀಯೇನೇ..ಮೋಸಗಾತಿ..?!

“-ಎಂದು ರಜನಿ ಅಬ್ಬರಿಸಿದಂತೆ ಭಾಸವಾಗಿ, ಛಾಯಾ ಬೆಚ್ಚಿಬಿದ್ದು , ನಖಶಿಖಾಂತ ಬೆವರಿದಳು.

                             ರ….ಜ…..ನಿ!!!

          ರಜನಿ-ಛಾಯಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಒಟ್ಟಿಗೇ ಓದಿದವರು. ಆಪ್ತ ಗೆಳತಿಯರು. ರಜನಿ-ರಾಘವರ ಮದುವೆಯಲ್ಲಿ ಛಾಯಳದೇ ಓಡಾಟ. ರಜನಿ ಹಾಯಾಗಿ ಗಂಡನ ಮನೆ ಸೇರಿ ಐದಾರು ವರ್ಷಗಳೇ ಕಳೆದಿದ್ದರೂ, ಛಾಯಾ ಮಾತ್ರ ಅವಿವಾಹಿತಳಾಗಿಯೇ ಉಳಿದ್ದಿದ್ದಳು. ತಂದೆ-ತಾಯಿಗಳಿಲ್ಲದ ಅವಳ ಭವಿಷ್ಯದ ಬಗ್ಗೆ ಅವಳ ಅಣ್ಣಂದಿರಿಗೆ ಅಂಥ ಆಸಕ್ತಿಯೇನೂ ಇರಲಿಲ್ಲ. ಛಾಯಾ ಕೂಡ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿ ತನ್ನ ಕಾಲ ಮೇಲೆ ತಾನು ನಿಲ್ಲಲು ಪ್ರಯತ್ನಿಸಿದ್ದಳು.

          ಈ ಮಧ್ಯೆ ಅವಳ ಜೀವನ ಅನಿರೀಕ್ಷಿತ ತಿರುವೊಂದನ್ನು ಪಡೆದುಕೊಂಡಿತ್ತು. ರಜನಿಯ ಮದುವೆಯ ನಂತರ ಆಗೊಂದು ಈಗೊಂದು ಪತ್ರ- ಟೆಲಿಫೋನ್ ಕರೆ ಬಿಟ್ಟರೆ ಗೆಳತಿಯರ ನಡುವೆ ಅಂಥ ಸಂಪರ್ಕವೇನಿರಲಿಲ್ಲ. ಅದೂ ಕೆಲವು ಸಮಯ ನಿಂತೇ ಹೋಗಿತ್ತು.

          ಆದರೆ ಆ ದಿನ ಬಜಾರಿನಲ್ಲಿ ಆಕಸ್ಮಿಕವಾಗಿ ಎದುರಿಗೆ ಸಿಕ್ಕ ರಾಘವ. ಅವನು ಹೇಳಿದ ವರ್ತಮಾನ ಕೇಳಿ ಛಾಯಳ ಎದೆ ಒಡೆದುಹೋಗಿತ್ತು….ಕ್ಯಾನ್ಸರ್ ಪೀಡಿತಳಾಗಿ ಮರಣಶಯ್ಯೆಯಲ್ಲಿದ್ದ ರಜನಿಯನ್ನು ಕಾಣಲು ಛಾಯಾ ಕಣ್ತುಂಬಿಕೊಂಡು ಒಡನೆಯೇ ಧಾವಿಸಿದ್ದಳು. ಅನಂತರ ಎರಡು ತಿಂಗಳ ನಿರಂತರ ಸಖ್ಯ ಆ ಇಬ್ಬರು ಗೆಳತಿಯರದಾಗಿತ್ತು. ಆಫೀಸಿಗೆ ರಜೆ ಹಾಕಿ ರಜನಿಯ ಶುಶ್ರೂಷೆಯನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದ್ದಳು ಛಾಯಾ…ಆ ಎರಡು ತಿಂಗಳ ಅವಧಿಯಲ್ಲಿ ರಜನಿಯ ಅತ್ತೆ-ಗಂಡ ಕೂಡ ಅವಳಿಗೆ ಬಹು ಹತ್ತಿರವಾಗಿದ್ದರು.

          ಹೆಂಡತಿಯ ಸಾವಿನಿಂದ ಹುಚ್ಚೇ ಹಿಡಿದಂತಾಡುತ್ತಿದ್ದ ರಾಘವನನ್ನು ಸಂತೈಸುವಲ್ಲಿ ಛಾಯಾ ತನ್ನ ಬುದ್ಧಿಯನ್ನೆಲ್ಲ ಖರ್ಚು ಮಾಡಿದ್ದಳು.

          ಮುಂದಿನದೆಲ್ಲ ಕನಸಿನ ದೃಶ್ಯಗಳಂತೆ ನಡೆದುಹೋಗಿದ್ದವು. ರಜನಿಯ ಅತ್ತೆಯ ಕಣ್ಣೀರಿಗೆ ಕರಗಿ ಛಾಯಾ, ರಾಘವನಿಗೆ ಹೊಸ ಬಾಳು ಕೊಡಲು ನಿರ್ಧರಿಸಿ, ಒಪ್ಪಿ ಅವನ ಬಾಳನ್ನು ಪ್ರವೇಶಿಸಿದ್ದಳು…ಹೀಗಾದರೂ ಗೆಳತಿಯ ಆತ್ಮಕ್ಕೆ ಶಾಂತಿ ನೀಡಬಹುದೆಂದು ಛಾಯಾ ಈ ಮದುವೆಗೆ ಸಮ್ಮತಿಸಿದ್ದಳು…

ದಿನಗಳೆದಂತೆ ರಾಘವ ಅವಳನ್ನು ತುಂಬಾ ಹಚ್ಚಿಕೊಂಡಿದ್ದ. ಈ ಮದುವೆಯಿಂದ ಪಶ್ಚಾತ್ತಾಪಪಡುವಂಥದ್ದೇನೂ ಆಗಿರಲಿಲ್ಲವಾದ್ದರಿಂದ ಛಾಯಾ ಈಗ ತುಂಬು ಸುಖೀ ಎಂದೇ ಹೇಳಬೇಕು. ರಾಘವನೊಡನೆ ಅವನ ತಾಯಿಯೂ ಅವಳನ್ನು ತುಂಬಾ ಮುಚ್ಚಟೆಯಿಂದಲೇ ನೋಡಿಕೊಳ್ಳುತ್ತಿದ್ದರು….ಆದರೆ ಒಮ್ಮೊಮ್ಮೆ ರಾಘವನ ಪ್ರೀತಿಯ ಹಿಡಿತ ಹೆಚ್ಚಾಯಿತೆನ್ನುವಷ್ಟು ಅವನು ಸದಾ ಅವಳ ಹಿಂದೆ ಮುಂದೆಯೇ ತಿರುಗಾಡುತ್ತಿದ್ದ. ಪ್ರೀತಿಯ ಮಹಾಪೂರದಲ್ಲಿ ಅವಳು ತೇಲಿ ಹೋಗುವಷ್ಟು ಜತನವಾಗಿ ಅವಳನ್ನು ನೋಡಿಕೊಳ್ಳುತ್ತಿದ್ದ.  ಒಂದರೆ ಗಳಿಗೆಯೂ ಅವಳನ್ನು ಬಿಟ್ಟಿರಲಾರದವನಾಗಿದ್ದ .

          “ನಮಗೇ ಕೊಳ್ಳೆ ಹೋಗೋಷ್ಟು ಆಸ್ತಿ ಇರೋವಾಗ , ನನ್ನ ಬಿಸಿನೆಸ್ ಅಷ್ಟು ಚೆನ್ನಾಗಿ ನಡೀತಿರುವಾಗ, ನೀನ್ಯಾಕೆ ಚಿನ್ನ, ಬಿಸಿಲು-ಮಳೆ-ಗಾಳಿ ಅಂತ ಈ ಪ್ರೈವೇಟ್ ಜುಜುಬಿ ಕೆಲಸಕ್ಕೆ ಹೋಗಿ, ಬಾಡಿ ಬೆಂಡಾಗಿ , ಶ್ರಮಪಡಬೇಕು…ಬೇಡ ಡಾರ್ಲಿಂಗ್…ಉದ್ಯೋಗದ ಅವಶ್ಯಕತೆ ನಿನಗಿಲ್ಲ ಮರಿ” ಎಂದವಳನ್ನು ಹಲವು ರೀತಿ ಓಲೈಸಿದ್ದ, ಗೋಗರೆದಿದ್ದ ರಾಘವ .

          ಸ್ವತಂತ್ರ ಮನೋಭಾವದ  ಸ್ವಾಭಿಮಾನಿ ಛಾಯಾ ಅವನಾಸೆಗೆ ಸೊಪ್ಪು ಹಾಕಿರಲಿಲ್ಲ- “ನಿಮ್ಮ ಹಣ ಎಷ್ಟೇ ಇದ್ರೂ ನನ್ನದೂ ಅಂತ ನಾಲ್ಕು ಕಾಸು ಸಂಪಾದಿಸಿದರೇ  ನನಗೆ ಖುಷಿ ಕಣ್ರೀ…ಅದೂ ಅಲ್ಲದೆ ನಾವು ಮನೇಲಿರೋರು ಮೂರು ಜನ..ಮನೆಗೆಲಸವೂ ಜಾಸ್ತಿ ಇರಲ್ಲ…ನಾನು ಟೈಂ ಪಾಸ್ ಹೇಗೆ ಮಾಡ್ಬೇಕು ನೀವೇ ಹೇಳಿ”-ಎಂದವಳು ನಯವಾಗಿಯೇ ಪ್ರತ್ಯುತ್ತರ ನೀಡಿದಾಗ ರಾಘವ ಸಪ್ಪಗಾಗುತ್ತಿದ್ದ.

          “ಮನೇಲೇ ನನ್ನ ಬಿಸಿನೆಸ್ಸಿಗೆ ಸಹಾಯ ಮಾಡಿದರಾಗಲ್ವಾ?”

          ಛಾಯಾ ಮಾತ್ರ ಜಪ್ಪಯ್ಯ ಅನ್ನಲಿಲ್ಲ…ಅವಳು ಎಲ್ಲಾ ಜಾಣೆ-ತುಸು ಕೋಣೆ ಅನ್ನೋ ಹಾಗೆ, ಅವಳ ಈ ಹಟಮಾರಿ ಸ್ವಭಾವ ಮಾತ್ರ ಅವನಿಗೆ ಒಲ್ಲದ್ದು. ಸಾಲದ್ದಕ್ಕೆ ಅವಳು ಮನಸ್ಸು ಬಂದ ಹಾಗೆ ತನ್ನ ಅಕ್ಕ-ತಂಗಿಯರ  ಮನೆಗೆ ಹೊರಟುಬಿಡುತ್ತಿದ್ದಳು. ಒಂದು-ಎರಡು ದಿನಗಳಲ್ಲ,ವಾರಗಟ್ಟಲೇ. ಹೆಂಡತಿಯನ್ನು ಬಿಟ್ಟಿರಲಾರದೆ ಅವನು ಒಳಗೇ ಗೊಣಗುಟ್ಟಿಕೊಳ್ಳುತ್ತಿದ್ದ…ಆಗೆಲ್ಲ ಗಂಡನನ್ನು ಕಂಡು ಛಾಯಾಗೆ ನಗು ಮತ್ತು  ಹೆಮ್ಮೆ ಕೂಡ. ಅವನು ತನ್ನನ್ನು ಈ ಪರಿ ಹಚ್ಚಿಕೊಂಡಿರುವ ಬಗೆ  ಕಂಡು ಒಳಗೊಳಗೇ ಅವಳು ಖುಷಿಗೊಳ್ಳುತ್ತಿದ್ದಳು.

          ಆ…ದ…ರೆ..ತನ್ನನ್ನು ಇಷ್ಟು ಪ್ರೀತಿಸುವ ಗಂಡ ಹಾಗೂ ತನ್ನ ಮಧ್ಯೆ ಇದ್ದಕ್ಕಿದ್ದ ಹಾಗೆ ಅವತರಿಸಿದ ಸವತಿ ರಜನಿಯನ್ನು ನೆನೆದು ಅವಳೆದೆ  ಇಂದು ಗಡಗಡನೆ ನಡುಗಿತು.

          ತಟ್ಟನೆ ಗಂಡನತ್ತ ಸರಿದು ಅವನನ್ನು ಬಿಗಿಯಾಗಿ ಅಪ್ಪಿಕೊಂಡಳು ಭಯದಿಂದ.

          “ಮಂಗಳವಾರ-ಕೆಟ್ಟ ದಿನ, ಅಕಾಲ ಮೃತ್ಯುವಿಗೀಡಾದ ರಜನಿಯ ಮನಸ್ಸಿನಲ್ಲಿ ಅದೆಷ್ಟು ಆಸೆಗಳಿದ್ದವೋ …ಬದುಕಿ ಬಾಳುವ ಅದೆಷ್ಟು ವರ್ಣರಂಜಿತ ಕನಸುಗಳನ್ನು ಅವಳು ಹೆಣೆದುಕೊಂಡಿದ್ದಳೋ..ಪಾಪ…ಅದಕ್ಕೇ ಅವಳ ಅತೃಪ್ತ ಆತ್ಮ ಈ ನಡುವೆ ಪದೇ ಪದೇ, ಹೀಗೆ ತನ್ನ ಅಸ್ತಿತ್ವವನ್ನು ನೆನೆಪಿಸಲು  ಪ್ರಕಟಗೊಳ್ಳುತ್ತಿರಬಹುದೇ?”

          ಛಾಯಳ ಮನದೊಳಗೆ ಭಯದ ದೊಡ್ಡ ಹುತ್ತ ನಿರ್ಮಾಣವಾಗತೊಡಗಿತ್ತು. ಅವಳು ಹೀಗೆ ಭಯಪಡುತ್ತಾಳೆಂದೇ ಅವನು ಅದೆಷ್ಟು ಸಲ ಇಂಥ ಪ್ರಕರಣಗಳನ್ನು ಮುಚ್ಚಿಟ್ಟಿದ್ದನೋ ರಾಘವ.

          ಆದರೂ ರಾಘವನ ತಾಯಿ -ಛಾಯಾ ಯಾರೂ ಮನೆಯಲ್ಲಿಲ್ಲದಾಗ, ರಾಘವನೊಬ್ಬನೇ ಇದ್ದ ಸಮಯಗಳಲ್ಲಿ ಮಾತ್ರ ಇಂಥ ವಿಚಿತ್ರಗಳು ಸಂಭವಿಸತೊಡಗಿದ್ದವು.

          ಮತ್ತೊಂದು ದಿನ-

ಛಾಯಳ ಡ್ರೆಸ್ಸಿಂಗ್ ರೂಮಿನಲ್ಲಿದ್ದ ಶೃಂಗಾರ ಸಾಮಗ್ರಿಗಳೆಲ್ಲ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇನ್ನೊಮ್ಮೆ ಅವಳ ವಾರ್ಡ್ ರೋಬಿನಲ್ಲಿದ್ದ ಸೀರೆಗಳೆಲ್ಲ ನೆಲದ ಮೇಲೆ ಉರುಳಿ ಬಿದ್ದಿದ್ದವು. ಈ ಬಗೆಯ ಘಟನೆಗಳು ಮತ್ತೆ ಮತ್ತೆ ಮರುಕೊಳಿಸತೊಡಗಿದಾಗ , ರಜನಿಗೆ ತನ್ನ ಮೇಲೆ ಮಾತ್ರ ಕೋಪವಿರುವ ಅಂಶ ಛಾಯಾಗೆ  ಸುವ್ಯಕ್ತವಾಗತೊಡಗಿತ್ತು. ರಜನಿಯ ಸೇಡು ನೆನೆದು ಛಾಯಾ , ಅಧೀರಳಾಗಿ ತಲ್ಲಣಿಸತೊಡಗಿದಳು. ‘ಸವತಿಯ ನೆರಳು’ ನಿಧಾನವಾಗಿ ಮನೆಯ ತುಂಬಾ  ವ್ಯಾಪಿಸತೊಡಗಿತ್ತು.!…ಜೊತೆಗೆ, ತಾನಾಗಲೀ, ಅತ್ತೆಯಾಗಲೀ ಮನೆಯಲ್ಲಿದ್ದಾಗ ಇಂಥ ಘಟನೆಗಳು ಸಂಭವಿಸದೇ ಇದ್ದುದನ್ನು ಗಮನಿಸಿದ ಛಾಯಳಿಗೆ, ರಜನಿಯ ಕ್ಷುಲ್ಲಕ ಹಾಗೂ ಹೇಡಿತನದ ಮನೋಭಾವ ನಿಚ್ಚಳವಾಗತೊಡಗಿತ್ತು.

          ಏನಾದರಾಗಲಿ, ರಜನಿಯನ್ನೆದುರಿಸದೆ ಬೇರೆ ವಿಧಿಯಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಳು ಛಾಯಾ . ಒಂದು ತಿಂಗಳು ಆಫೀಸಿಗೆ ರಜ ಹಾಕಿ ಮನೆಯಲ್ಲೇ ಪಟ್ಟಾಗಿ ಕುಳಿತುಬಿಟ್ಟಳು. ನಾದಿನಿಗೆ ಹುಷಾರಿಲ್ಲವೆಂದು ಊರಿಗೆ ಹೋಗಿದ್ದ ಅತ್ತೆ, ತಿಂಗಳಾದರೂ ಹಿಂತಿರುಗಿರಲಿಲ್ಲ. ಇಂಥ ಸಂದರ್ಭದಲ್ಲಿ ಗಂಡನನ್ನು ಒಂಟಿ ಬಿಟ್ಟಿರಲ್ಲೊಲ್ಲದ ಛಾಯಾ ಯಾವುದೇ ಕಾರಣಕ್ಕೂ ಮನೆಯಿಂದ ಆಚೆ ಕಾಲ್ತೆಗೆದಿರಲಿಲ್ಲ. ಆದರೆ, ರಜನಿ ಮಾತ್ರ ಛಾಯಳ ಮುಂದೆ  ಒಮ್ಮೆಯೂ ಕಾಣಿಸಿಕೊಳ್ಳುವ ಸಾಹಸ ಮಾಡಿರಲಿಲ್ಲ..ನಿಜಕ್ಕೂ ಅವಳು  ಆಶ್ಚರ್ಯಗೊಳ್ಳುವಂತೆ ರಜನಿ ಅದೃಶ್ಯಳಾಗಿದ್ದಳು!!… ಜೊತೆಗೆ ಹಿಂದಿನಂತೆ ಯಾವ ವಿಚಿತ್ರ ಘಟನೆಗಳೂ ನಡೆದಿರಲಿಲ್ಲವಾದ್ದರಿಂದ  ಛಾಯಳಿಗೆ ಈಗೀಗ ಕೊಂಚ ಧೈರ್ಯ ಬಂದಿತ್ತು. ರಜನಿಗೆ ತನ್ನ ಮುಂದೆ ಬಂದು ನಿಲ್ಲಲು ಮತ್ತು ತನ್ನಾಟವನ್ನು ತೋರಿಸಲು ಎಂಟೆದೆಯಿಲ್ಲವೆಂಬುದು ಛಾಯಳಿಗೆ ಖಚಿತವಾಗತೊಡಗಿತ್ತು.

          ರಾಘವನೂ ತಿಂಗಳಿಂದ ನಿರಾಳದ ನಿಟ್ಟುಸಿರುಬಿಟ್ಟಿದ್ದ…ರಜನಿ ಹಾವಳಿ ತಪ್ಪಿದ್ದಲ್ಲದೆ, ಹೆಂಡತಿಯ ಸಾನಿಧ್ಯದಿಂದ ಸುಪ್ರೀತನಾಗಿದ್ದ….ಆದರೆ, ಛಾಯಳ ರಜೆ ಮುಗಿದು ಅವಳು ಆಫೀಸಿಗೆ ಹೋಗುವ ದಿನ ಬಂದೇಬಿಟ್ಟಿತು . ನಗುತ್ತಲೇ ಅವಳು ಗಂಡನಿಗೆ  ಕೈ ಬೀಸಿ ಸ್ಕೂಟಿ ಏರಿ ಮರೆಯಾಗಿದ್ದಳು. ಆದರೆ, ಅವಳ ಆ ಸಂತಸ- ನೆಮ್ಮದಿ ಎಲ್ಲವೂ ಅವಳು, ಸಂಜೆ ಮನೆಗೆ ಹಿಂತಿರುಗಿದ ಮೇಲೆ ಮಾಯವಾಗಿದ್ದವು.!…

.ಗಾಬರಿಯಿಂದ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ ರಾಘವ..! ಯಥಾಪ್ರಕಾರ ರಜನಿ ತನ್ನ ಕೈವಾಡ ಮೆರೆದು ಸವತಿಯನ್ನು ಬೆಚ್ಚುಬೀಳಿಸಿದ್ದಳು!!… ಗಂಡನ ಕಂಗಾಲು ಸ್ಥಿತಿ ಕಂಡು ಛಾಯಳ ಸಿಟ್ಟು ಕಟ್ಟೆಯೊಡೆದಿತ್ತು….ಮನೆಯ ಸಾಮಾನೆಲ್ಲ ದಿಕ್ಕಿಗೊಂದು ತಿರುಗಿದ್ದವು. ಆಪ್ತ ಗೆಳತಿಯ ಉಪದ್ರವ ಕಂಡು ರೇಗಿಹೋಯ್ತು – “ಏಯ್ , ರಜನೀ…”  ಎಂದು ಅವಡುಗಚ್ಚಿ ಜೋರಾಗಿ ಅಬ್ಬರಿಸಿದಳು. ಮನೆಯೆಲ್ಲ ನೀರವ ಮೌನ!!..ರಾಘವ ವಿಗ್ರಹದಂತೆ ಗರಬಡಿದು ನಿಂತಿದ್ದ.

ಕೆಲವು ಕ್ಷಣಗಳ ನಂತರ ಛಾಯಾ , ಕೊಂಚ ಸಮಾಧಾನ ಬರಸೆಳೆದುಕೊಂಡು, ಸ್ಟೀಲ್ ಡಬ್ಬಿಗಳನ್ನೆಲ್ಲ ಒಂದೊಂದಾಗಿ ಎತ್ತಿ ಅಲಮಾರಿನಲ್ಲಿಟ್ಟಳು.ಲೋಟ-ತಟ್ಟೆಗಳನ್ನೆತ್ತಿ ಸ್ಟ್ಯಾಂಡಿಗೆ ಸಿಕ್ಕಿಸಿದಳು. ಅಲ್ಲಿಂದ ಸೀದಾ ಬೆಡ್ ರೂಮಿಗೆ ಬಂದವಳ ಹುಬ್ಬುಗಳು ಮತ್ತೆ ಮೇಲೇರಿದವು!!..ಗೋಡೆ ಬದಿ ಬಿದ್ದಿದ್ದ ತನ್ನ ವ್ಯಾನಿಟಿ ಬ್ಯಾಗ್ ಗಳನ್ನು ,ನೈಟಿ, ರವಿಕೆಗಳನ್ನು ತೆಗೆದಿರಿಸಿದಳಾದರೂ,ರಾತ್ರಿಯಿಡೀ ಅವಳನ್ನು ಇದೇ ಚಿಂತೆ ಬಾಧಿಸಿತು…ಇದೇಕೆ ಹೀಗಾಗುತ್ತಿದೆ?….ನಾನು ರಾಘವನನ್ನು ಮದುವೆಯಾಗಿ ತಪ್ಪು ಮಾಡಿದೆನೇ..????

          ಮರುದಿನವೂ ಅವಳು ಮನೆಗೆ ಬಂದಾಗ ಇದೇ ದೃಶ್ಯದ ಪುನಾರಾವರ್ತನೆ !! 

          ಆ ರಾತ್ರಿ ರೆಪ್ಪೆ ಮುಚ್ಚಿದವಳ ಕಣ್ಣ ತುಂಬ ಅಚ್ಚರಿ-ವಿಚಿತ್ರ ಭಾವಗಳ ತುಯ್ತ..ನೆಮ್ಮದಿ ಹಾರಿಹೋಗಿತ್ತು. ತಾನಿಲ್ಲದಾಗಲೇ ತನ್ನ ಬಗ್ಗೆ ಸೇಡು ತೀರಿಸಿಕೊಳ್ಳುತ್ತಿರುವ ಈ   ರಜನಿಯ ವಿಚಿತ್ರ ಚರ್ಯೆಯ ಬಗ್ಗೆ ಮನಸ್ಸು ಅಲ್ಲೋಲ ಕಲ್ಲೋಲಗೊಂಡಿತ್ತು…ಈ ಸವತಿಯಿಂದ ತನ್ನ ಗಂಡನನ್ನು ರಕ್ಷಿಸಲು ತಾನು ಮನೆಯಲ್ಲೇ ಝಾಂಡ ಊರಿ ಕುಳಿತುಕೊಳ್ಳುವುದೊಂದೇ ಮದ್ದೇ?..ತನ್ನ ಉದ್ಯೋಗಕ್ಕೆ ರಾಜಿನಾಮೆ ಕೊಡುವುದೊಂದೇ ಪರಿಹಾರವೇ?…ಚಿಂತೆ ಅವಳನ್ನು ಕಿತ್ತು ತಿನ್ನಲಾರಂಭಿಸಿತ್ತು.

          ಛಾಯಳ ಒತ್ತಾಯಕ್ಕೆ ಮಣಿದು ರಾಘವ ಅವಳೊಂದಿಗೆ ಹಲವಾರು ದೇವಸ್ಥಾನಗಳಿಗೆ ಹೋಗಿ ಬಂದ…ಜ್ಯೋತಿಷ್ಯ ಕೇಳಿದ..ಮನೆಯಲ್ಲಿ ಹವನ-ಹೋಮದ ಏರ್ಪಾಟು ನಡೆದಿತ್ತು.

“ನಾವೀ ಮನೇನಾ ಆದಷ್ಟೂ ಬೇಗ ಖಾಲಿ ಮಾಡಿ ಬೇರೆ ಮನೆಗೆ ಹೋಗಿಬಿಡೋಣ ಛಾಯಾ”ಎಂದೂ ಅವನು ತನ್ನ ನಿರ್ಧಾರ ಅವಳಿಗೆ ತಿಳಿಸಿದ್ದ. ಆದರೆ ಛಾಯಳಿಗೆ ಅವನ ನಿರ್ಧಾರ ಹಿಡಿಸಲಿಲ್ಲ. ತನ್ನ ಆಫೀಸಿಗೆ ಹತ್ತಿರವಿರೋ ಈ  ಮನೆ ಬಿಟ್ಟು , ಇಪ್ಪತ್ತು ಕಿ.ಮಿ. ದೂರವಿರೋ ತಾವು ಹೊಸದಾಗಿ ಕಟ್ಟಿಸಿದ್ದ ಇನ್ನೊಂದು ಮನೆಗೆ ಹೋಗಲು ಅವಳ ಮನ ನಿರಾಕರಿಸಿತು. ಆದರೂ ರಜನಿಯ ನೆರಳಿನಿಂದ ಪಾರಾಗಲು ಮನ ತಹತಹಿಸುತ್ತಿತ್ತೇನೋ ನಿಜ. ತನ್ನ ಕೆಲಸಕ್ಕಿಂತ ಮನಸ್ಸಿನ ನೆಮ್ಮದಿಯೇ ಮುಖ್ಯವೆನಿಸಿತವಳಿಗೆ ಒಂದು ಕ್ಷಣ.

          ರಾಘವನ ಇಚ್ಛೆಯಂತೆ ಅವಳ ರಾಜಿನಾಮೆಯ ನಿರ್ಧಾರ ಗಟ್ಟಿಗೊಳ್ಳತೊಡಗಿತು. ಯೋಚನೆಗಳ ತಾಕಲಾಟದಲ್ಲಿ ತರ್ಕ-ವಿತರ್ಕ-ವಿಶ್ಲೇಷಣೆಗಳು ಮನದ ತುಂಬಾ.

          ಆ ದಿನ ತಾನು ಕಛೇರಿಯಿಂದ  ಮನೆಗೆ ಬರುವುದು ತಡವಾಗುತ್ತದೆ ಎಂದವನಿಗೆ ಅವಳು ಮೊದಲೇ ತಿಳಿಸಿದ ಕಾರಣ , ಸಂಜೆಗೆ ತಿಂಡಿಯನ್ನೂ ಮಾಡಿಟ್ಟು ಹೋಗಿದ್ದಳು…ಇಡೀ ದಿನ ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಮನದಲ್ಲಿ ಚಿಂತೆಯ ಮಥನ!!..ಕೆಲಸದಲ್ಲಿ ಮನ ತೊಡಗಿಕೊಳ್ಳಲಿಲ್ಲ. ಎಂದಿಗಿಂತ ಒಂದು ಗಂಟೆ ಮುಂಚಿತವಾಗಿಯೇ ಆಫೀಸ್ ಬಿಟ್ಟಳು. ಮನೆಯಿಂದ ಅನತಿ ದೂರದಲ್ಲಿ ತನ್ನ ಸ್ಕೂಟಿ ನಿಲ್ಲಿಸಿ, ಮೆಲ್ಲನೆ ಸದ್ದಾಗದಂತೆ ಮನೆಯ ಗೇಟು ತೆರೆದಳು. ಬಹು ನಿಶ್ಶಬ್ದವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಪೋಣಿಸುತ್ತ, ಮನೆಯ ಬಲ ಪಾರ್ಶ್ವದಿಂದ ಮನೆಯ ಹಿತ್ತಲಿಗೆ ನಡೆದು ಬಂದಳು. ಅಡುಗೆಮನೆಯ ಹಿಂಭಾಗಕ್ಕಿದ್ದ ಕಿಟಕಿಯತ್ತ ಮೆಲ್ಲನಡಿಯಿರಿಸಿ, ಕಿಟಕಿಯಲ್ಲಿ ಮುಖವಿರಿಸಿ ಉಸಿರು ಬಿಗಿಹಿಡಿದು ನಿಂತಳು.

ಬೆಳಗ್ಗೆ ತಾನು ಮನೆ ಬಿಟ್ಟಾಗ ಇದ್ದಂತೆಯೇ ಅಡುಗೆಮನೆ ಓರಣವಾಗಿದೆ…ಐದ್ಹತ್ತು ನಿಮಿಷ..ನೀರವ ಮೌನ…ರಾಘವ ಕಂಪ್ಯೂಟರ್ ಮುಂದೆ ಕೆಲಸದಲ್ಲಿ ನಿರತ ಎಂದವಳಿಗೆ ತಿಳಿದಿತ್ತು..ರಜನಿಯ ಹಾವಳಿಯನ್ನು ಕಣ್ಣಾರೆ ನೋಡಬಯಸಿದ್ದ ಅವಳಿಗೆ ಕೊಂಚ ನಿರಾಶೆಯಾಯ್ತು…ಅಷ್ಟರಲ್ಲಿ ಹಗುರವಾದ ಹೆಜ್ಜೆ  ಸಪ್ಪುಳ. ಅವಳೆದೆ ದುಡಿ ಏರತೊಡಗಿತು…ಢವ..ಢವ…ಅವಳ ನಿರೀಕ್ಷೆಯಂತೆ ರಾಘವ ಅಡುಗೆ ಮನೆಗೆ ಬಂದವನು, ಮೆಲ್ಲನೆ ಸ್ಟ್ಯಾಂಡಿನಲ್ಲಿದ್ದ ಲೋಟ-ತಟ್ಟೆಗಳನ್ನೆಲ್ಲ ಎತ್ತೆತ್ತಿ ನೆಲದ ಮೇಲೆ ಮಲಗಿಸಿದ. ಪ್ಲಾಸ್ಟಿಕ್ ಡಬ್ಬಗಳನ್ನು ನಾಜೂಕಾಗಿ ಎತ್ತಿ ನೆಲದ ಮೇಲೆಲ್ಲ ಚೆಲ್ಲಾಪಿಲ್ಲಿಯಾಗಿ ಉರುಳಿಸಿದವನೇ, ಸರ್ರನೆ ಅಲ್ಲಿಂದ ರೂಮಿನತ್ತ ಹೊರಳಿದ.

          ಛಾಯಾ ಕೂಡ ತತ್ ಕ್ಷಣ ಅಲ್ಲಿಂದ ಕದಲಿ, ತಮ್ಮ ಬೆಡ್ ರೂಮಿನ ದಿಕ್ಕಿನತ್ತ, ತರಾತುರಿಯಿಂದ ಹಿತ್ತಲ ಇನ್ನೊಂದು  ಭಾಗದ ಮೂಲಕ ಬಂದಳು. ಸದ್ದಾಗದಂತೆ  ಮೆಲ್ಲನೆ ಕಿಟಕಿಯಲ್ಲಿ ಇಣುಕಿದಳು.

          ಎಲ್ಲವೂ ಅವಳೆಣಿಸಿದಂತೆಯೇ ನಡೆಯುತ್ತಿತ್ತು….ರಾಘವ ಅವಳ ಬೀರು ತೆಗೆದು, ಅವಳ  ನಾಲ್ಕೈದು ಚೂಡಿದಾರ್ ಗಳನ್ನು ನೆಲದ ಮೇಲೆ ಹರಡಿದ, ಡ್ರೆಸ್ಸಿಂಗ್ ಟೇಬಲ್ ಮೇಲಿದ್ದ ಮೇಕಪ್ ಸಾಮಾನುಗಳನ್ನೂ…

          ಕಿಟಕಿಯ ಸರಳುಗಳಾಚೆ ನಿಂತು ಎದುರಿನ ನಾಟಕದ ಅಂಕವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಛಾಯಳ ಮೊಗದ ಮೇಲೊಂದು ತೆಳುನಗೆ ಮಿಂಚಿ ಮಾಯವಾಯಿತು ….. ಹೌದು..ಎಲ್ಲವೂ ಅವಳಂದುಕೊಂಡಂತೆಯೇ ನಡೆಯುತ್ತಿತ್ತು…ಅವಳ ಊಹೆ ನಿಜವಾಗಿತ್ತು. ರಾಘವನೇ ಈ ನಾಟಕದ ಸೂತ್ರಧಾರನೆಂಬುದು ಈಗ ಖಾತ್ರಿಯಾಗಿತ್ತು. ತುಟಿ ಅರಳಿತು.. ಅವಳ ಮೊಗದಲ್ಲಿ ತೆಳುನಗೆಯೊಂದಿಗೆ ಮುಖಭಾವ ಮೃದುವಾಯಿತು. ರಾಘವನತ್ತಣ ಒಲವು ದಟ್ವವಾಗತೊಡಗಿತು. ಅವನನ್ನೇ ನೆಟ್ಟ ನೋಟದಿಂದ ನೋಡಿದಳು. ನಗು ಒಸರಿತು.

ಸದಾಕಾಲ ತನ್ನನ್ನು ಜೊತೆಯಲ್ಲೇ ಉಳಿಸಿಕೊಳ್ಳ ಬಯಸಿದ್ದ ಗಂಡ ಹೂಡಿದ್ದ ಉಪಾಯ ಕಂಡು, ಅವಳಿಗೆ ಅವನ ಬಗ್ಗೆ ಸಿಟ್ಟು, ಆಕ್ರೋಶ ಉಕ್ಕುವ ಬದಲು, ಅವನು ತನ್ನನ್ನು ವಿಪರೀತ ಹಚ್ಚಿಕೊಂಡಿರುವ ಪರಿ  ಕಂಡು ಅನುರಾಗ ಉಕ್ಕಿ ಬಂತು-ಜೊತೆಗೆ ಹುಸಿಗೋಪವೂ.   

                                                                                      ********************************************                

Related posts

ಕೋರಿಕೆ

YK Sandhya Sharma

ಆಸ್ತಿಕರು

YK Sandhya Sharma

ಕಿರುಗುಟ್ಟುವ ದನಿಗಳು

YK Sandhya Sharma

Leave a Comment

This site uses Akismet to reduce spam. Learn how your comment data is processed.