Image default
Short Stories

ವಾನಪ್ರಸ್ಥ

‘ಹ..ಹ್ಹ..ಹ್ಹಾ..’-ಗೋವಿಂದಯ್ಯನ ಜೋರು ದನಿಯ ನಗೆ ಸೂರು ಹಾರಿ ಹೋಗುವಷ್ಟು ಜೋರಾಗಿ ತೂರಿ ಬಂದಿತ್ತು. ‘ಓಹೋ,ಮಾವಯ್ಯನಿಗೆ ಒಳ್ಳೆಯ ಲಹರಿ ಬಂದಿದೆ’ಎಂದರಿತ ಲಲಿತಳ ಮೊಗದ ಮೇಲೆ ಕಿರುನಗುವೊಂದು ಮೂಡಿ ‘ಈಗ ಒಂದರ್ಧ ಲೋಟ ಸ್ಟ್ರಾಂಗ್ ಕಾಫಿ ರೆಡಿಯಾಗಬೇಕು’ಅಂತ ಸ್ವಗತವಾಡಿಕೊಂಡು ಬೇಗಬೇಗನೆ ಕಾಫಿ ಬೆರೆಸಿದಳು.

                ಹಬೆಯಾಡುವ ಕಾಫೀಲೋಟದೊಡನೆ ರೂಮಿನಲ್ಲಿ ಪ್ರತ್ಯಕ್ಷವಾದ ಸೊಸೆಯನ್ನು ಕಂಡು ಗೋವಿಂದಯ್ಯನವರಿಗೆ ಹಿರಿಹಿರಿ ಹಿಗ್ಗು.’ಬಾ ತಾಯಿ,ಕೊಡಿಲ್ಲಿ…ಸಿಗ್ನಲ್ ಹೇಗೋ ಕಂಡು ಹಿಡಿದುಕೊಂಡು ಬಿಡ್ತೀಯಲ್ಲ..ಗುಡ್..ಗುಡ್’-ಎಂದು ಓದುತ್ತಿದ್ದ ಪುಸ್ತಕವನ್ನು ಮುಚ್ಚಿಟ್ಟು,ಕೈ ನೀಡಿದರು.ಅವರ ಮಗ್ಗುಲಲ್ಲಿ ಪವಡಿಸಿದ್ದ ಮೊಬೈಲ್ ಬಿಸಿಯೇರಿ ಇದೇತಾನೆ ದಣಿವಾರಿಸಿಕೊಳ್ಳುತ್ತಿತ್ತು.ಪುಸ್ತಕಪ್ರಿಯರು ಹಾಗೂ ಸ್ನೇಹಿತಪ್ರಿಯರೂ ಆದ ಅವರು ಭಾಳ ಹಚ್ಚಿಕೊಂಡಿದ್ದು ಅವುಗಳನ್ನೇ. ಇದೀಗ ತಾನೇ ಮೊಬೈಲಿನಲ್ಲಿ ಮಾತನಾಡಿದ ಗೆಳೆಯನ ಮಾತಿಗೆ ನಗು ಬೆರೆಸಿದ ವೈಖರಿ ಅದಾಗಿತ್ತು.

                ‘ಮಾವಯ್ಯ, ಹೇಗೂ ವಾಕಿಂಗ್ ಮುಗೀತು…ಎರಡನೇ ಡೋಸ್ ಕಾಫೀನೂ ಆಯ್ತು..ಮೇಲೇಳಿ…ನೀರು ಕಾದಿದೆ’-ಎಂದವಳು ಮತ್ತೆ ಅವರು ಮೊಬೈಲ್ ಕೈಗೆತ್ತಿಕೊಳ್ಳದಂತೆ  ವಾರ್ನಿಂಗ್ ಕೊಟ್ಟು ಅಲ್ಲಿಂದ ಹೊರನಡೆದಳು. ಸೊಸೆಯ ಮಮತೆಯ ಆರ್ಡರ್ ಕೇಳಿ ಖುಷಿಗೊಂಡ ಗೋವಿಂದಯ್ಯ ಟವೆಲ್ ಎತ್ತಿಕೊಂಡು ಮೇಲೇಳಲೇಬೇಕಾಯಿತು.

                ಸ್ನಾನ-ಪೂಜೆ ಮುಗಿಸಿ ಬರುವಷ್ಟರಲ್ಲಿ ಡೈನಿಂಗ್ ಟೇಬಲ್ ಮೇಲೆ ಅವರಿಗಿಷ್ಟವಾದ ತಿಂಡಿ ರವೆ ಇಡ್ಲಿ-ಸಾಗು ರೆಡಿ.ಮಗ್ಗುಲಿಗೆ ಬಂದು ಕೂತ ಮಗ ರಘು-‘ಅಪ್ಪಾ,ನಿನ್ನೆ ನೀವು ಹೇಳಿದ ಪುಸ್ತಕ ಸಿಕ್ತು,ತೊಗೊಳ್ಳಿ..’ಎಂದು ಅವರ ಕೈಗೆ ಪುಸ್ತಕ ಕೊಡುವಷ್ಟರಲ್ಲಿ ಲಲಿತಾ ಸಿಡಿಮಿಡಿಗೊಂಡಳು-‘ಈಗ್ಲೇ ಪುಸ್ತಕ ಕೊಡಕ್ಕೆ ಮುಹೂರ್ತಾನಾ? ಪಾಪ ನೆಮ್ಮದಿಯಾಗಿ ತಿಂಡಿ ತಿನ್ನೋಕೂ ಬಿಡಲ್ವಲ್ಲಪ್ಪಾ ನೀವು’ಎನ್ನುತ್ತ ಅದನ್ನು ಕಸಿದುಕೊಂಡು ಆ ಕಡೆಯಿರಿಸಿ ಮಾವನ ತಟ್ಟೆಗೆ ತುಪ್ಪ ಹಾಕಿದಳು. ‘ಗಂಡನ್ನೂ ಸ್ವಲ್ಪ ಗಮನಿಸಿಕೊಳ್ಳೇ ಲಲ್ಲೀ’-ರಘು  ಗುನುಗಿದಾಗ ಮಾವ,ಸೊಸೆ ಇಬ್ಬರಿಗೂ ಗೊಳ್ಳೆಂದು ನಗು. ‘ನನಗೊಳ್ಳೇ ಡಯಟ್ಟು’ ಎಂದು ಹುಸಿಗೋಪ ನಟಿಸುತ್ತ ಅವನು ಇನ್ನೊಂದು ಇಡ್ಲಿ ಹಾಕಿಕೊಂಡ.

                ತಿಂಡಿ ಮುಗಿಯುತ್ತಿದ್ದ ಹಾಗೆ,ಗೋವಿಂದಯ್ಯ ಮಗ ತಂದ ಪುಸ್ತಕ ಕೈಗೆತ್ತಿಕೊಂಡು ಓಪನ್ ವರಾಂಡದ ಈಸಿಛೇರಿನೊಳಗೆ ಜಾರಿ,ಲಗುಬಗೆಯಿಂದ ಪುಸ್ತಕದ ಹಾಳೆಗಳನ್ನು ತಿರುಗಿಸಿದರು.ಅಷ್ಟರಲ್ಲಿ ಅವರ ಕೊರಳ ಸುತ್ತ ಪುಟ್ಟ ಮೃದುವಾದ ಕೈಗಳ ಹಾರ ಬುಳಬುಳನೆ ಹರಿದಾಡಿ ಅವರು ಪಕ್ಕಕ್ಕೆ ತಿರುಗುವಷ್ಟರಲ್ಲಿ,ಕೆನ್ನೆಯ ಮೇಲೊಂದು ಮುತ್ತು!…’ತಾತಾ,ಸ್ಕೂಲಿಂದ ನಾ ಬಂದ್ಮೇಲೆ ಹೇಳಕ್ಕೇಂತ ಕಥೆ ಓದ್ತಾ ಇದ್ದೀಯ?’ ಸೇಬುಗೆನ್ನೆಗಳ ಐದು ವರ್ಷದ ದೀಪು ಮುದ್ದು ಮುದ್ದಾಗಿ ಕೇಳಿದಾಗ ಅವರು ಪುಸ್ತಕ ಬದಿಗಿಟ್ಟು ಅವನನ್ನು ತೊಡೆಗೆತ್ತಿಕೊಂಡು ಮುದ್ದಾಡತೊಡಗಿದರು.

                ‘ಅಪ್ಪಾ ಹೋಗಿ ಬರ್ತೀನಪ್ಪ,ಬೈ…’ಎಂದು ಹೊಸಿಲು ದಾಟಿದವನ ಹಿಂದೆಯೇ ಹತ್ತರ ಪೋರಿ ಅನಘಾ ಬೆನ್ನಿನ ಮೇಲೆ ಲಗೇಜ್ ಹೊತ್ತುಕೊಂಡು ‘ತಾತಾ,ಟಾ ಟಾ’ ಎಂದವರತ್ತ ಕೈ ಬೀಸಿದಳು. ಅವರನ್ನು ಬೀಳ್ಕೊಡಲು ಲಲಿತಾ ಬಾಗಿಲವರೆಗೂ ಬಂದಿದ್ದಳು. ಗೋವಿಂದಯ್ಯನವರ ಮನ ಸಂತಸದಿಂದ ಕುಪ್ಪಳಿಸುತ್ತಿತ್ತು. ಸುತ್ತ ವಾತಾವರಣದಲ್ಲಿ  ಏನೋ ಒಂದು ಬಗೆಯ ಅವ್ಯಕ್ತ ಪ್ರೀತಿ-ವಾತ್ಸಲ್ಯ ಹರಿದಾಡುತ್ತಿರುವಂತೆ ಅವರಿಗೆ ಭಾಸವಾಯಿತು. ‘ಸ್ವರ್ಗಕ್ಕೆ ಕಿಚ್ಚು ಹಚ್ಚು’ಎಂದ ಸರ್ವಜ್ಞನ ಮಾತು ಅವರ ಕಿವಿಯೊಳಗೆ ಅನರಣಿಸಿ ‘ನಾನೆಷ್ಟು ಧನ್ಯ,ಇಂಥ ಮಮತೆಯ ಮಕ್ಕಳನ್ನು ಪಡೆಯಲು…ನಮ್ಮ ಸಂಸಾರ ಆನಂದ ಸಾಗರ…’ ಎನ್ನುವ ಹಾಡು ಗುನುಗಿಕೊಳ್ಳುತ್ತಾ ಮನದಲ್ಲಿ,ಕಣ್ಣಂಚಿನ ಹನಿಯನ್ನು ಒತ್ತಿಕೊಂಡರು.

                ಅಪ್ರಯತ್ನವಾಗಿ ಅವರ ದೃಷ್ಟಿ, ಗೋಡೆಯ ಮೇಲೆ ನಗುವಿನ ನೋಟ ಚೆಲ್ಲುತ್ತ ತಮ್ಮನ್ನೇ ನಿರುಕಿಸುತ್ತಿದ್ದ ಚೌಕಟ್ಟಿನೊಳಗಿನ ಚೆಲುವೆ ಶಾರದೆಯತ್ತ ನೆಟ್ಟು ಪೇರುಸಿರು ಚೆಲ್ಲಿದರು. ‘ಇದನ್ನೆಲ್ಲ ಅನುಭವಿಸಲು ನಿನಗೆ ಅದೃಷ್ಟ ಇಲ್ಲವಾಯಿತೇ ಶಾರೀ?’…ಲಲಿತೆ ಅತ್ತೆಗೆ ಮುಡಿಸಿದ್ದ ಮೈಸೂರು ಮಲ್ಲಿಗೆಯ  ಪರಿಮಳ ಅವರ ಮೂಗನ್ನು ತುಂಬಿ ಅದನ್ನವರು ಆಘ್ರಾಣಿಸುತ್ತಾ ಧ್ಯಾನಸ್ಥರಾದರು.

                ಗೋವಿಂದಯ್ಯನವರದು ಸಂತೃಪ್ತ ಸುಖೀ ಕುಟುಂಬ. ಕೀರುತಿಗೆ ಮೂರು ಗಂಡು ಆರತಿಗೆ ಮೇಲೊಂದು ಹೆಣ್ಣು. ಅಮೇರಿಕದಲ್ಲಿರುವ ದೊಡ್ಡ ಮಗ ತಂದೆ ಮತ್ತು ಒಡಹುಟ್ಟಿದವರನ್ನು ಕಾಣಲು ತಪ್ಪದೆ ವರುಷಕ್ಕೊಮ್ಮೆ ಹುಟ್ಟೂರಿಗೆ ಬರುತ್ತಿದ್ದ. ಎರಡನೆಯವನು ಕಂಪೆನಿಯವರು ಕೊಟ್ಟ ದೊಡ್ಡ ಬಂಗಲೆಯಲ್ಲಿ ವಾಸವಾಗಿದ್ದರೂ ತಂದೆಯನ್ನು ಕಾಣಲು ಪ್ರತಿದಿನ ಬರುತ್ತಿದ್ದ. ಮೂರನೆಯವನೇ ರಘು. ಮಗಳೂ ಅಂಥ ದೂರವೇನಿರಲಿಲ್ಲ. ಮೂರು ಗಂಟೆಯ ಪ್ರಯಾಣ. ತಿಂಗಳಿಗೊಮ್ಮೆ ಅವಳು ಬಂದರೆ,ಮುಂದಿನ ತಿಂಗಳು ತಂದೆ ಹೋಗುತ್ತಿದ್ದರು. ಫೋನಿನಲ್ಲಂತೂ ಗಂಟೆಗಟ್ಟಲೆ ಸಂಭಾಷಣೆ. ಟೈಂ ಪಾಸ್ ಅವರಿಗೆ ತಲೆನೋವಾಗಿರಲಿಲ್ಲ. ವಾಸ್ತವವಾಗಿ ಅವರಿಗೆ ಟೈಮೇ ಸಾಕಾಗುತ್ತಿರಲಿಲ್ಲ.

                ಬೆಳಗ್ಗೆ ಪಾರ್ಕಿನಲ್ಲಿ ಗೆಳೆಯರ ಗುಂಪು ಸೇರುತ್ತಿತ್ತು. ಹೆಚ್ಚೂ ಕಡಮೆ ಎಲ್ಲಾ ಅವರ ವಯಸ್ಸಿನವರೇ.ಒಂದಿಬ್ಬರು ಚಿಕ್ಕವರಿದ್ದರು.ಇನ್ನೊಬ್ಬರು ಎಂಭತ್ತರ ವಯೋವೃದ್ಧರು.ಒಂದು ಗಂಟೆ ವಾಕ್ ಕಂ ಟಾಕಿಂಗ್. ಎಲ್ಲರದೂ ಒಂದೊಂದು ಬಗೆಯ ಕಥೆ,ಕಷ್ಟ-ಕಾರ್ಪಣ್ಯಗಳು.ತಮಗೆ ತೋಚಿದಂತೆ ಚರ್ಚೆ,ಪರಿಹಾರೋಪಾಯಗಳ ಸಲಹೆಗಳು,ಅನುಸಂಧಾನ ಇತ್ಯಾದಿಗಳು ಮಾಮೂಲಾಗಿತ್ತು. ಯಾರದಾದರೂ ಹುಟ್ಟಿದ ಹಬ್ಬ ಅಥವಾ ಇನ್ನೇನಾದರೂ ವಿಶೇಷವಿದ್ದರೆ ಎಲ್ಲರ ಪಯಣ ಸಮೀಪದ ಹೋಟೆಲಿನತ್ತ. ತಿಂಡಿ-ಕಾಫಿ ಮುಗಿಸಿ ನಗುತ್ತ ಮನೆಯ ದಾರಿ ಹಿಡಿಯುವುದು ದಿನಚರಿ.    ಗೋವಿಂದಯ್ಯ ಮಾತ್ರ ನಿತ್ಯಸಂತೋಷಿಯಾದ್ದರಿಂದ ಎಂದೂ ಸಪ್ಪೆ ಮೋರೆ ಹಾಕಿಕೊಂಡಿದ್ದಿಲ್ಲ.’ನಮ್ಮ ಗುಂಪಿನಲ್ಲಿ ಇವರೊಬ್ಬರು ಮಾತ್ರ ಭಾಳ ಲಕ್ಕಿ ನೋಡಿ…ಅದಕ್ಕೆ ಸ್ಪೆಷಲ್ ಟ್ರೀಟ್ ಕೊಡಿಸ್ಬೇಕು’ ಅಂತ ಗೆಳೆಯರು ಅವರನ್ನು ದುಂಬಾಲು ಬೀಳುತ್ತಿದ್ದರು. ಗೋವಿಂದಯ್ಯ ಅದಕ್ಕೆ ಎವರೆಡಿ ಖುಷಿಯಿಂದ. ಕೈ ತುಂಬ ಪೆನ್ಷನ್ ಹಣ ಬರತ್ತೆ ,ಸಾಲದ್ದಕ್ಕೆ ಮಕ್ಕಳೂ ಆ ಈ ನೆಪದಲ್ಲಿ ನೋಟಿನ ಕವರನ್ನು ಅವರ ಕೈಲಿಡುತ್ತಾರೆ. ಈಗ ಅವರು ವಾಸಿಸುವ ಸ್ವಂತ ಮನೆ ಬಿಟ್ಟು, ಬಡಾವಣೆಯಲ್ಲಿ ಇನ್ನೊಂದು ಮನೆಯನ್ನು ಬಾಡಿಗೆಗೆ ಕೊಟ್ಟಿರುವುದರಿಂದ ಅದರ ಬಾಡಿಗೆಯೂ ಅವರ ಕೈ ಸೇರುತ್ತಿತ್ತು. ಹಣದ ಕೊರತೆಯೂ ಇಲ್ಲ,ಪ್ರೀತಿ-ಆರೈಕೆಗಳ ಅರಕೆಯೂ ಇರಲಿಲ್ಲ. ಯಾವ ಯೋಚನೆಗಳೂ ಬಳಿ ಸುಳಿಯದ ಕಾರಣ ಆರೋಗ್ಯಭಾಗ್ಯವೂ ಒಲಿದಿತ್ತು. “ಮನೆಗೆ ಹೋಗಿ ದೃಷ್ಟಿ ತೆಗೆಸಿಕೊಳ್ಳಿ ರಾಯರೇ” ಎಂದು ಒಬ್ಬರು ಆಡಿಯೂ ಬಿಟ್ಟಿದ್ದರು. ಆಗ ಗೋವಿಂದಯ್ಯನವರದು ನಿಷ್ಕಲ್ಮಷ ನಗು.

    ಮನೆಗೆ ಬರುವುದು ಒಂದು ಸ್ವಲ್ಪ ತಡವಾದರೂ ಲಲಿತಾ ಗೇಟಿನಲ್ಲೇ ಗೂಟ ಹೊಡೆದುಕೊಂಡು ಕಾದಿರುತ್ತಿದ್ದಳು. ಊರಿನಿಂದ ಬಂದ ಮಗಳು ಗದರುತ್ತಿದ್ದಳು:”ಅಪ್ಪಾ ನಿಮಗೆ ಕೊಂಚಾನೂ ಜವಾಬ್ದಾರೀನೇ ಬೇಡವೇನಪ್ಪ?…ವಯಸ್ಸಾದವರು ಎಲ್ಲಿ ಬಿದ್ದರೋ,ಏನಾಯ್ತೋ ಅಂತ ಗಾಬರಿ ಆಗಲ್ವೇನಪ್ಪಾ?” ಅದಕ್ಕೆ ಆತ ಮುಖ ಸಿಂಡರಿಸಿ-“ಏಯ್ ಏನಮ್ಮ ನೀನು ಹೇಳೋದು….ಎಪ್ಪತ್ತು ಒಂದು ವಯಸ್ಸೇ?….ನನಗಿನ್ನೂ ತಿನ್ನೋ,ಉಣ್ಣೋ ಆಸೆ-ಉತ್ಸಾಹ,ಕಸುವು ಎಲ್ಲಾ ಇದೆ…ನನ್ನ ಮುದುಕ ಅನ್ನಬೇಡಮ್ಮ…ನನ್ನ ಮೊಮ್ಮಕ್ಕಳ ಜೊತೆ ಕ್ರಿಕೇಟ್ ಆಡ್ತೀನಿ ಬೇಕಾದ್ರೆ…” ಎಂದಾಗ ಅತ್ತಿಗೆ-ನಾದಿನಿ ಕಿಸಿಕಿಸಿ ನಗುವರು.’ಸರಿ ಬಿಡೀಪ್ಪಾ…ಒಟ್ಟಿನಲ್ಲಿ ನೀವು ನಗುನಗುತ್ತಿದ್ರೆ ಅಷ್ಟೇ ಸಾಕು” ಮಗಳ ನುಡಿಗೆ ಅವರು ಅವಳ ಕಿವಿ ಹಿಂಡಿ”ದೊಡ್ಡ ಹಿರೀ ಮುತ್ತೈದೆ ಇವಳು, ದೊಡ್ಡದಾಗಿ ಉಪದೇಶ ಮಾಡ್ತಾಳೆ” ಎಂದು ಅವಳತ್ತ ಅಭಿಮಾನದ ನೋಟ ಬೀರುತ್ತಿದ್ದರು.

                ತಿಂಗಳ ಮೊದಲ ದಿನ.ಅವರು ಎಂದಿನಂತೆ ಬ್ಯಾಂಕಿಗೆ ಹೋಗಿ ಹಣ ಡ್ರಾ ಮಾಡಿಕೊಂಡು ಮನೆಯತ್ತ ಹೆಜ್ಜೆ ಹಾಕಿದ್ದರು. ಎದುರಿನಿಂದ ಬರುತ್ತಿದ್ದ ಆಕೆ ಇವರ ಕಣ್ಣೆದುರೇ ಕುಸಿದುಬಿದ್ದಾಗ ಅವರಿಗೆ ಶಾಕ್!…ಅವಳ ಕೈಲಿದ್ದ ತರಕಾರಿ ಚೀಲ ಕೆಳಗೆ ಬಿದ್ದು ಈರುಳ್ಳಿ,ಸೌತೇಕಾಯಿ, ಮೆಣಸಿನಕಾಯಿ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದವು. ‘ ಅರೇ,ಏನಾಯ್ತಮ್ಮ?’ ಎಂದಾಕೆಯನ್ನು ಮೇಲಕ್ಕೆಬ್ಬಿಸಿ ಫುಟ್‍ಪಾತಿನ ಮೇಲೆ ಕೂರಿಸಿ ಕೆಳಗೆ ಬಿದ್ದ ತರಕಾರಿಗಳನ್ನೆಲ್ಲ ಆಯ್ದು ಅವಳ ಚೀಲಕ್ಕೆ ತುಂಬಿಸಿದರು. ಆಕೆಯ ಮುಖದಲ್ಲಿ ದಣಿವು,ಹಣೆಯ ಮೇಲೆ ಬೆವರ ಮಣಿಗಳು ಕೋದುಕೊಂಡಿದ್ದವು. ಅವರಂದುಕೊಂಡಷ್ಟು ವಯಸ್ಸಾದವಳೇನಾಗಿರಲಿಲ್ಲ ಅವಳು. ಅಬ್ಬಬ್ಬಾ ಎಂದರೆ 50-52 ಇರಬಹುದಷ್ಟೇ. “ಸ್ವಲ್ಪ ತಲೆ ತಿರುಗಿದ ಹಾಗಾಯ್ತಷ್ಟೇ….ಪರವಾಗಿಲ್ಲ ಬಿಡಿ” ಎಂದವಳು ನಾಚಿಕೆಯಿಂದ ಸಾವರಿಸಿಕೊಂಡು, ಮೇಲೇಳಲು ಪ್ರಯತ್ನಿಸಿ ಮತ್ತೆ ಕುಸಿದು ಕುಳಿತಳು. “ನೀವು ಹೀಗೇ ಕೂತಿರಿ,ನಾನು ಆಟೋ ಕರಿತೀನಿ, ಯೋಚಿಸ್ಬೇಡಿ,ನಾ ನಿಮ್ಮನ್ನ ಮನೆಗೆ ಬಿಟ್ಟು ಬರ್ತೀನಿ” -ಎಂದು ಗೋವಿಂದಯ್ಯ ಅವಳ ಉತ್ತರಕ್ಕೂ ಕಾಯದೆ ಆಟೋವೊಂದನ್ನು ಕರೆದು ಅವಳ ಕೈಹಿಡಿದು ಮೇಲೆಬ್ಬಿಸಿ ಆಟೋದೊಳಗೆ ಕೂರಿಸಿ, ತರಕಾರಿ ಚೀಲವನ್ನು ಕೈಗೆತ್ತಿಕೊಂಡು ಅವಳ ಪಕ್ಕ ಕೂತು’ನಿಮ್ಮನೆ ಎಲ್ಲಿ ಹೇಳಿ ಡ್ರೈವರ್‍ಗೆ’ ಎನ್ನುತ್ತಾ ‘ಆರ್ ಯೂ ಆಲ್ ರೈಟ್’ ಎಂದು ವಿಚಾರಿಸಿಕೊಂಡರು. ಅವಳಿಗೆ ಮಾತನಾಡುವ ತ್ರಾಣವೂ ಇರಲಿಲ್ಲ. ಸುಮ್ಮನೆ ತಲೆಯಾಡಿಸಿದಳು.

                ಮನೆ ಬಂದಾಗ ಆತನೇ ಅವಳ ಕೈ ಹಿಡಿದು ಇಳಿಸಿ ಆಟೋದವನಿಗೆ ದುಡ್ಡು ಕೊಟ್ಟಾಗ ಅವಳು ‘ಇಲ್ಲ ನಾ ಕೊಡ್ತೀನಿ’ಎಂದರೂ ಅವರದನ್ನು ಕಿವಿಯ ಮೇಲೆ ಹಾಕಿಕೊಳ್ಳದೆ,ಬಾಗಿಲ ಬೆಲ್ ಒತ್ತಿದರು. ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆಯಿತು. ಸುಮಾರು ಆತನಿಗಿಂತ ಕೊಂಚ ವಯಸ್ಸಾದಾಕೆ ಸುಸ್ತಾದ ಮಗಳನ್ನು ಕಂಡು ಗಾಬರಿಯಿಂದ ‘ಯಾಕೆ ಏನಾಯ್ತೇ?’ಎಂದು ತೊದಲಿದರು.  ಗೋವಿಂದಯ್ಯನೇ ನಡೆದುದನ್ನು ವಿವರಿಸಿ-” ಹೊಟ್ಟೆಗೇನಾದ್ರೂ ಸ್ವಲ್ಪ ಕೊಡಿ…ಕೊಂಚ ರೆಸ್ಟ್ ತೊಗೊಂಡ್ರೆ ಸರೀಹೋಗತ್ತೆ,ಗಾಬರಿಯಾಗೋಂಥದ್ದೇನಿಲ್ಲ…ಸರಿ ನಾ ಬರ್ತೀನಮ್ಮ” ಎಂದು ಹೊರಟರು.

“ಉಂಟೇ?…ಕೂತ್ಕೊಳ್ಳಿ ಸ್ವಲ್ಪ ಕಾಫಿನಾದ್ರೂ ಕುಡಿದುಹೋಗುವಿರಂತೆ…” ಎನ್ನುತ್ತಾ ಕುಂಟಿಕೊಂಡು ಆಕೆ ಅಡುಗೆಮನೆಯತ್ತ ನಡೆದರು.’ಛೇ…ನಿಮಗೆ ವೃಥಾ ತೊಂದರೆ ಕೊಟ್ಟೆ’ ಎಂದರಾತ  ಸಂಕೋಚದಿಂದ.

                ‘ನನ್ನ ಹೆಸರು ರಾಧಾಂತ,ಅವರು ನಮ್ತಾಯಿ…ನಾವಿಬ್ರೇ ಮನೇಲಿ…ಮಗಳು ಮದುವೆಯಾಗಿ ಅಮೇರಿಕಾದಲ್ಲಿದ್ದಾಳೆ…ಯಜಮಾನರು, ಮಗಳು ಚಿಕ್ಕವಳಿರುವಾಗ್ಲೇ ಹೋಗಿಬಿಟ್ಟರು’ಎಂದವಳು  ತನ್ನ ಪ್ರವರ ಒಪ್ಪಿಸಿದಾಗ ಗೋವಿಂದಯ್ಯನ ಮನಸ್ಸಿಗೆ ಕಸಿವಿಸಿಯಾಯ್ತು. ಕಾಫಿ ತಂದಿತ್ತ ಆಕೆ-‘ನಿಮ್ಮಿಂದ ತುಂಬಾ ಉಪಕಾರವಾಯ್ತಪ್ಪ…ಏನ್ಮಾಡೋದು ಗಂಡು ದಿಕ್ಕಿಲ್ಲದ ಮ£.É..ಎಲ್ಲದಕ್ಕೂ ಇವಳೇ ಒದ್ದಾಡಬೇಕು.’ ಎಂದು ಅಲವತ್ತುಕೊಂಡಾಗ,ಆತನ ಮುಖದಲ್ಲಿ ನೋವಿನ ಹನಿ ಸಿಂಪಡಿಸಿತು. ಒಂದು ಕ್ಷಣ ಮೌನವಾದರು….ಮೇಲೇಳುತ್ತ, ‘ಹಾಗೇನೂ ನೊಂದುಕೋಬೇಡಿ ತಾಯಿ..ನನ್ನ ನಿಮ್ಮ ತಮ್ಮ ಅಂತ ತಿಳ್ಕೊಳ್ಳಿ…ಏನಾದ್ರೂ ಸಹಾಯ ಬೇಕಾದ್ರೆ ನಿಸ್ಸಂಕೋಚವಾಗಿ ತಿಳಿಸಿ…ತೊಗೊಳ್ಳಿ ನನ್ನ ಫೋನ್ ನಂಬರ್..’ ಎಂದವರು ಮೇಲೆದ್ದಾಗ, ರಾಧಾ ಬಾಗಿಲವರೆಗೂ ಬಂದಳು. ಅವರು ರೋಡಿನ ತಿರುವಿನಲ್ಲಿ ಕಣ್ಮರೆಯಾಗುವವರೆಗೂ ಅಲ್ಲೇ ನಿಂತುಕೊಂಡಿದ್ದಳು.

                ತಾವು ಲೇಟಾಗಿ ಮನೆಗೆ ಬಂದ ಕಾರಣವನ್ನು ಸೊಸೆ ಕೇಳುವ ಮೊದಲೇ ನಡೆದಿದ್ದನ್ನೆಲ್ಲ  ವರದಿ ಒಪ್ಪಿಸಿಬಿಟ್ಟರು ಗೋವಿಂದಯ್ಯ. ‘ಒಳ್ಳೆ ಕೆಲಸ ಮಾಡಿದಿರಿ..ಪಾಪಾ…ಆಕೆಗೇನೂ      ಪೆಟ್ಟಾಗಲಿಲ್ವಲ್ಲ?…ನೀವು ಮೊದಲೇ ಪರೋಪಕಾರದ ಪಾಪಣ್ಣ,ನಿಮಗೆ ಹೇಳಬೇಕೇ?…ಬನ್ನಿ ಊಟಕ್ಕೇಳಿ, ಸೂರ್ಯ ನೆತ್ತೀ ಮೇಲೆ ಬಂದ’ ಎನ್ನುತ್ತ ಲಲಿತಾ ಒಳಗೆ ನಡೆದಾಗ, ಇಂಥ ಸೊಸೆ ಪಡೆದಿದ್ದಕ್ಕೆ ಆತನಿಗೆ ಹೆಮ್ಮೆ ಎನಿಸಿತು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಬಗ್ಗೆ ಅವರಿಗೆ ಪರಮ ಪ್ರೀತಿ. ಮೂವರು ಬಡ ವಿದ್ಯಾರ್ಥಿಗಳಿಗೆ ಅವರು ಪ್ರತಿ ತಿಂಗಳು ತಪ್ಪದೆ ಅವರ ಫೀಸು ಕಟ್ಟುತ್ತಿದ್ದರು. ಜೊತೆಗೆ ಕೆಲಸದ ಶಿವಮ್ಮಳ ವಿಧವೆ ಮಗಳ ಟೈಲರಿಂಗ್ ಕ್ಲಾಸ್ ಫೀಸಿಗೂ ಹಣ ಕೊಡುತ್ತಿದ್ದರು. ಅವರ ಪೆನ್ಷನ್ನಿನ ಬಹಳಷ್ಟು ದುಡ್ಡು ಹೀಗೇ ಪರೋಪಕಾರಾರ್ಥವೇ ವ್ಯಯವಾಗುತ್ತಿತ್ತು. ಅವರ   ಮನೆಯವರ್ಯಾರೂ ಎಂದೂ ಈ ಬಗ್ಗೆ ಕೇಳುತ್ತಿರಲಿಲ್ಲ. ಈ ದೃಷ್ಟಿಯಲ್ಲಿ ಗೋವಿಂದಯ್ಯ ಸಂಪೂರ್ಣ ಸ್ವತಂತ್ರರು…ಗರಿ ಬಿಚ್ಚಿದ ಹಕ್ಕಿ….ಸಂತೃಪ್ತ ಜೀವ.

                ಆ ದಿನ ಬೆಳಬೆಳಗ್ಗೆಯೇ ಅವರ ಫೋನು ರಿಂಗಣಗುಣಿಸಿತು. ಅತ್ತಲಿಂದ ರಾಧೆಯ ಗಾಬರಿಯ ದನಿ!..’ಸಾರ್, ನಮ್ತಾಯಿ ಬಚ್ಚಲಲ್ಲಿ ಬಿದ್ಬಿಟ್ಟಿದ್ದಾರೆ…ದಿಕ್ಕೇ ತೋಚ್ತಿಲ್ಲ’ -ಜೊತೆಗೆ ಬಿಕ್ಕುವ ದನಿ. “ಹೆದರ್ಬೇಡಿ, ಹತ್ತು ನಿಮಿಷದಲ್ಲಿ ನಾನಲ್ಲಿರ್ತೇನೆ’-ಎಂದವರೇ ‘ರಘೂ’ಎಂದು ಕೂಗಿ ಅವನನ್ನು ಹೊರಡಿಸಿಕೊಂಡು ಕಾರಿನಲ್ಲಿ ಅವಳ ಮನೆ ತಲುಪಿ, ಮಗನ ಸಹಾಯದಿಂದ ಆಕೆಯನ್ನು ನರ್ಸಿಂಗ್ ಹೋಂಗೆ ಸೇರಿಸಿದರು. ಆಕೆಯ ಹಿಪ್ ಜಾಯಿಂಟ್ ಮುರಿದು, ಆಕೆ ಆಸ್ಪತ್ರೆಯಲ್ಲಿ ಒಂದು ವಾರವಿದ್ದು ಮನೆಗೆ ಬರುವವರೆಗೂ ಅವರಿಗೆ ನೆರವಾದರು. ಬೆಡ್ ರೆಸ್ಟ್…ಮಲಗಿದ್ದಲ್ಲೇ ಎಲ್ಲಾ…ರಾಧಳ ಹೆಗಲೆಣೆಯಾಗಿ ನಿಂತರು ಆತ. ಪ್ರತಿದಿನಾ ಅವರ ಮನೆಗೆ ಹೋಗಿ ಬರುತ್ತಾ ಅಗತ್ಯ ಸಹಾಯಗಳನ್ನು ಮಾಡತೊಡಗಿದರು. ಮೊದಲೇ ಹಾರ್ಟ್ ಪೇಷೆಂಟ್ ಆಗಿದ್ದ ಆಕೆ ಇನ್ನೂ ವೀಕ್ ಆದರು. ಮೊದಲೇ ಕಾಡುತ್ತಿದ್ದ ಆರ್ಥರೈಟೀಸ್ಸು,ಷುಗರ್ರು ಜೊತೆಗೆ. ರಾಧಾ, ತಾಯಿಯ ಪರಿಸ್ಥಿತಿ ಕಂಡು ಕಂಗಾಲಾಗಿದ್ದಳು. ಗೋವಿಂದಯ್ಯ ಅವಳಿಗೆ ಇಂಬಾಗಿ ನಿಂತು, ಧೈರ್ಯ ಹೇಳಿದ್ದರು.

                ಒಂದೆರಡು ತಿಂಗಳಲ್ಲಿ ಆತ ಅವಳ ಮನೆಯವರೇ ಎನ್ನುವ ಹಾಗಾಗಿದ್ದರು. ರಾಧಾ ಕೃತಜ್ಞತೆಯಿಂದ ಅವರಿಗೆ ಕೈ ಮುಗಿದಿದ್ದಳು. ಅವಳ ತಾಯಿ ಕೊಂಚ ಸುಧಾರಿಸಿಕೊಳ್ಳುತ್ತಿದ್ದಾರೆನ್ನುವಾಗಲೇ ಒಂದು ಬೆಳಗ್ಗೆ ಆಕೆ ತೀವ್ರ ಹೃದಯಾಘಾತದಿಂದ ಮರಣಿಸಿದ್ದರು. ಗೋವಿಂದಯ್ಯ ಬರುವ ವೇಳೆಗೆ ತಡವಾಗಿತ್ತು. ಅವರ ಮುಖ ಕಾಣುತ್ತಲೇ ರಾಧಾ,ಅನಿರೀಕ್ಷಿತ ಆಘಾತದಿಂದ ಭೋರೆಂದು ಅಳುತ್ತ ಅವರ ಭುಜದ ಮೇಲೊರಗಿ ಜೋರಾಗಿ ಬಿಕ್ಕಳಿಸತೊಡಗಿದ್ದಳು. ಆತನಿಗೂ ದಿಗ್ಭ್ರಮೆಯಾಗಿತ್ತು.! ಅವಳಿಗೆ ಹೇಗೋ ಸಮಾಧಾನ ಹೇಳಿ, ಮುಂದಿನ ಕಾರ್ಯಗಳನ್ನು ತಾವೇ ಮುಂದೆ ನಿಂತು ನೆರವೇರಿಸಿದ್ದರು. ರಾಧಾ ಅವರ ಮುಂದೆ ಕೈ ಮುಗಿದು ನಿಂತು ಕೃತಜ್ಞತೆಯಿಂದ ಕಣ್ಣೀರಾಗಿದ್ದಳು. ಅವಳ ಕಡೆಯ ನೆಂಟರು ಅಷ್ಟಾಗಿ ಯಾರೂ ಇರದ ಕಾರಣ,ಅವಳು ಅಕ್ಷರಶಃ ಒಬ್ಬಂಟಿಯೇ ಆಗಿಬಿಟ್ಟಿದ್ದಳು. ಅವಳ ಮಗಳು ಅಮೇರಿಕಾದಿಂದ ಫೋನ್ ಮಾಡಿ ತನಗೀಗ 3 ತಿಂಗಳಾದ್ದರಿಂದ,ಜೊತೆಗೆ ರಜ ಇಲ್ಲವೆಂದು ,ಬರೀ ಸಂತಾಪ ಮಾತ್ರ ತಿಳಿಸಿ ಮೌನವಾಗಿದ್ದಳು. ದಿಕ್ಕೆಟ್ಟ ರಾಧಳನ್ನು ಸಂತೈಸುತ್ತ ಆತ: ‘ಆದಷ್ಟೂ ನಾನು ದಿನಾ ಬಂದು ನೋಡ್ಕೊಂಡು ಹೋಗ್ತೀನಿ…ಸಮಾಧಾನ ಮಾಡ್ಕೊಳ್ಳಿ’ ಎಂದವಳ ಭುಜ ತಟ್ಟಿ ಹೊರಟರು. ಅವಳು ಕರುಣಾಜನಕ-ದೈನ್ಯ ನೋಟದಿಂದ ಅವರನ್ನೇ ದಿಟ್ಟಿಸಿ ನೋಡಿದಾಗ, ಅವರ ಕರುಳಲ್ಲಿ ಕುಡುಗೋಲು ಆಡಿಸಿದಂತಾಯ್ತು.

                ಮೂರು-ನಾಲ್ಕು ತಿಂಗಳುಗಳಲ್ಲಿ ರಾಧಾ, ಗೋವಿಂದಯ್ಯನನ್ನು ಭಾಳ ಹಚ್ಚಿಕೊಂಡುಬಿಟ್ಟಿದ್ದಳು. ಆತನಿಗೂ ಅದೇ ಭಾವ.  ಮೃದು ಮನಸ್ಸಿನ ಅವರಿಗೆ ಯಾರೇ ಸಂಕಷ್ಟದಲ್ಲಿದ್ದರೂ ಕರಗಿಹೋಗಿಬಿಡುವ ಸ್ವಭಾವ. ಅವಳತ್ತ ಅರಿಯದ ಒಂದು ಅನುಬಂಧದ ಬೆಸುಗೆಯ ಎಳೆ ನೇಯ್ದಿತ್ತು. ಅವಳನ್ನು ನಡು ನೀರಿನಲ್ಲಿ ಕೈ ಬಿಡಲು ಅವರಿಗೆ ಮನಸ್ಸಾಗಲಿಲ್ಲ. ರಾಧಾ ಅದೊಂದು ದಿನ ಅವರ ಎರಡೂ ಹಸ್ತಗಳನ್ನು ಹಿಡಿದು ‘ ನಾನು ಒಂಟಿಯಾಗಿ ಈ ಮನೆಯಲ್ಲಿ ಹೇಗಿರಲಿ?’ ಎಂದು ಕಣ್ದುಂಬಿ ಬೇಡಿಕೊಂಡಾಗ , ಅವರು ವಿಚಲಿತರಾದರು. ‘ಹೇಗೂ ನಿಮಗೆ ಹೆಂಡತಿ ಇಲ್ಲ…ನಾನೂ ವಿಧವೆ…ನನಗೊಂದು ಬಾಳು ಕೊಡಲಾರಿರಾ?’ಎಂದವಳು ದೈನ್ಯಳಾಗಿ ಕೇಳಿಕೊಂಡಾಗ, ಅನಿರೀಕ್ಷಿತ ಪ್ರಶ್ನೆಯಿಂದ ಅವರು ಗಲಿಬಿಲಿಗೊಂಡರು.  ಅದಕ್ಕೇನು ಉತ್ತರಿಸುವುದೆಂದೇ ಹೊಳೆಯಲಿಲ್ಲ. ಅವರ ಮನಸ್ಸಿನಲ್ಲಿ ಒಂದು ಹೊಸ ಯುದ್ಧವೇ ಆರಂಭವಾಯಿತು. ಕನಸು ಮನಸ್ಸಿನಲ್ಲೂ ಕಲ್ಪಿಸಿಕೊಂಡಿರದ  ಒಂದು ಹೊಸ ಆಲೋಚನೆ…ಪ್ರಶ್ನೆ. ಒಂದು ಕ್ಷಣ ಹಾಗೆ ಯೋಚಿಸಲೂ ಭಯವಾಯಿತು,ನಾಚಿಕೆಯೂ ಕೂಡ. ಛೇ…ಈ ವಯಸ್ಸಿನಲ್ಲಿ ಮರುಮದುವೆಯೇ?….ತನಗೆ ಅತ್ಯಂತ ಗೌರವದ ಸ್ಥಾನ ನೀಡಿರುವ ಮಕ್ಕಳ ದೃಷ್ಟಿಯಲ್ಲಿ ತಾನು ಕುಬ್ಜನಾಗೆನೇ? ಎಂಥ ಇಕ್ಕಟ್ಟಿನ ಪರಿಸ್ಥಿತಿ ತಮಗೊದಗಿತಲ್ಲ ಎಂದವರು ತುಮುಲದಿಂದ ಹೊಯ್ದಾಡಿದರು. ವಾರಗಟ್ಟಲೆ ದ್ವಂದ್ವ-ಸಂಘರ್ಷಗಳಿಂದ ಒದ್ದಾಡಿದರು. ಒಂದು ವಾರ ಅವಳ ಮನೆಯತ್ತ ತಲೆಯೇ ಹಾಕಲಿಲ್ಲ. ಅವಳ ಫೋನ್ ಕರೆಗಳಿಗುತ್ತರಿಸದೇ ಅವಳಿಂದ ತಪ್ಪಿಸಿಕೊಳ್ಳಲು ನೋಡಿದರಾದರೂ ಅವಳ ಅಸಹಾಯಕ ಪರಿಸ್ಥಿತಿ ನೆನೆದು ತಮ್ಮದು ಪಲಾಯನವಾದವಾಗಲಿಲ್ಲವೇ?…ಛೇ..ಎಂದು ತಮ್ಮ ವರ್ತನೆಗೆ ತಾವೇ ಹೇಸಿಕೊಂಡು ಅವಳ ಕರೆಯನ್ನೆತ್ತಿಕೊಂಡರು. ರಾಧಾ ತಿಂಗಳಲ್ಲಿ ಬಹಳ ಇಳಿದುಹೋಗಿದ್ದನ್ನು ಕಣ್ಣಾರೆ ಕಂಡ ಮೇಲೆ ಅವರು ತಮಗರಿವಿಲ್ಲದೆ ಮೃದುವಾದರು. ವಾರ ಅವಳನ್ನು                                             ಮೌನದಲ್ಲೇ ಕೊಳೆ ಹಾಕಿದ ನಂತರವೂ ಸುಮ್ಮನಾಗದೆ ‘ನನಗೆ ಏನಾದರೂ ಉತ್ತರ ನೀವು ಕೊಡಲೇಬೇಕು’ಎಂದವಳು ಪಟ್ಟು ಹಿಡಿದಳು.

                 ಗೋವಿಂದಯ್ಯ ಸಮಾಧಾನವಾಗಿ ನುಡಿದರು: ‘ನೋಡಿ ನೀವು ನನಗಿಂತ ತುಂಬಾ ಚಿಕ್ಕವರು…ಇದು ಸರಿಹೋಗಲ್ಲ…ನನಗೆ ನನ್ನದೇ ಆದ ದೊಡ್ಡ ಸಂಸಾರವಿದೆ’ ಎಂದು ಎಷ್ಟೇ ಸಮಜಾಯಿಷಿ ಹೇಳಿದರೂ ಅವಳು ಕೇಳಲೊಲ್ಲಳು. ‘ಸರಿ, ನನಗೆ ಒಂದು ವಾರ ಟೈಂ ಕೊಡಿ’ ಎಂದವರು ನೇರ ಸೊಸೆಯ ಮುಂದೆ ಹೋಗಿ ನಿಂತರು. ಯಾರೂ ಅವರ ಅಭಿಪ್ರಾಯವನ್ನು ವಿರೋಧಿಸಲಿಲ್ಲ.’ನಮಗೆಲ್ಲ ನಿಮ್ಮ ಸುಖ-ನೆಮ್ಮದಿ ಮುಖ್ಯ, ನೀವು ಯಾವ   ತೀರ್ಮಾನ ಕೈಗೊಂಡರೂ ನಮಗೆ ಸಮ್ಮತ’ಎಂದು ಒಪ್ಪಿಗೆಯ ಮುದ್ರೆಯೊತ್ತಿಬಿಟ್ಟರು. ಗೋವಿಂದಯ್ಯನವರಿಗೆ ಈಗ ಅಯೋಮಯವಾಯಿತು. ಆತನಿಗೆ ಯಾವ ನಿರ್ಧಾರ ಕೈಗೊಳ್ಳಲೂ ಇನ್ನೂ ಹಿಂಜರಿಕೆ-ಗೊಂದಲ. ಮತ್ತೊಂದು ತಿಂಗಳು ಹಾಗೇ ಮುಂದಕ್ಕೆ ತಳ್ಳಿದರು. ರಾಧಾಳ ಒತ್ತಡ ಹೆಚ್ಚಾಯ್ತು. ಕಡೆಗೊಂದು ದಿನ ಅವಳ ಕಣ್ಣೀರಿಗೆ ಸೋತು ಅವರು ದೇವಸ್ಥಾನದಲ್ಲಿ ಅವಳ ಕೊರಳಿಗೆ ತಾಳಿ ಕಟ್ಟಿದರಾದರೂ ‘ನಮಗಿಬ್ಬರಿಗೂ ವಯಸ್ಸಾಗಿದೆ…ನಾವು ಬರೀ ಜೀವನ ಸಂಗಾತಿಗಳಾಗಿ ಮಾತ್ರ ಬಾಳೋಣ’ಎಂದವರು ಅವಳಿಗೆ ಅಂದೇ ಸ್ಪಷ್ಟಪಡಿಸಿದ್ದರು.

                ಈಗವರ ಜೀವನದ ಎರಡನೇ ಅಧ್ಯಾಯ ಪ್ರಾರಂಭವಾಗಿತ್ತು. ಹೊಸ ಸಂಸಾರ…ಹೊಸ ಹೆಂಡತಿ….ಮನಸ್ಸಿನಲ್ಲಿ ಹೊಸ ಭಾವ…ಹಿಂದೆ ಸೊಸೆ ತಂದು ಕೊಡುತ್ತಿದ್ದ ಕಾಫಿ,ತಿಂಡಿಯನ್ನು ಈಗ ರಾಧಾ ತಂದು ಕೊಡಲಾರಂಭಿಸಿದ್ದಳು. ಊಟ-ಉಪಚಾರ ಎಲ್ಲವೂ ಅವಳದೇ.ಮನೆಗೆ ದಿನಸಿ,ಸಾಮಾನು ಸರಂಜಾಮು ತಂದು ಅಭ್ಯಾಸವಿರದ ಅವರು ಹೊಸ ಕೆಲಸಗಳಿಗೆ ಹೆಂಡತಿಯಿಂದ ತರಬೇತಿ ತೆಗೆದುಕೊಳ್ಳಲಾರಂಭಿಸಿದ್ದರು. ಬಾಡಿಗೆ ಮನೆ ಏಕೆಂದು, ತಮ್ಮ  ಇನ್ನೊಂದು ಸ್ವಂತ ಮನೆ ಖಾಲಿ ಮಾಡಿಸಿ, ಅಲ್ಲಿ ಹೊಸ ಸಂಸಾರ ಹೂಡಿದ್ದರು. ಇದು ಕನಸೇ..ನನಸೇ..ಎಂಬ ವಿಭ್ರಮೆ. ಹೊಸ ಅನುಭವದೊಳಗೆ ತೇಲಾಡಿದರು. ದಿನ…ವಾರ….ತಿಂಗಳುಗಳು ಉರುಳಿದ್ದೇ ಗೊತ್ತಾಗಲಿಲ್ಲ.

                ಅಷ್ಟರಲ್ಲಿ ಒಮ್ಮೆ ಮನೆಯವರೆಲ್ಲ ತಂದೆಯವರನ್ನು  ಹೊಸ ಜಾಗ, ಹೊಸ ಪಾತ್ರದಲ್ಲಿ ಕಾಣಲು ಕುತೂಹಲದಿಂದ ಒಟ್ಟಾಗಿ ಬಂದರು. ಆಗ ಗೋವಿಂದಯ್ಯನವರಿಗೆ ಅವರನ್ನೆಲ್ಲ ಉಪಚರಿಸಿ ಆತಿಥ್ಯ ನೀಡುವ ಹುಮ್ಮಸ್ಸೋ ಹುಮ್ಮಸ್ಸು. ರಾಧಾಳಿಗೆ ಹಬ್ಬದಡುಗೆ ಮಾಡಲು ಹೇಳಿ ಸಂಭ್ರಮದಿಂದ ಮನೆ ತುಂಬ ಓಡಾಡಿದರು. ಆದರೆ ಅವರ ಆ ಖುಷಿ ಅದೇ ಮೊದಲು ,ಅದೇ ಕಡೆಯಾಯಿತು. ರಾಧಾ ನೇರಾನೇರವಾಗಿ- ‘ಪದೇ ಪದೇ ಅವರೆಲ್ಲ ಗುಂಪು ಕಟ್ಟಿಕೊಂಟು ಹೀಗೆ ಬಂದರೆ,ನನ್ನ ಕೈಲಾಗಲ್ಲಪ್ಪ’ಎಂದು ಬುಡುಬುಡಿಕೆ ಆಡಿಸಿಬಿಟ್ಟಳು. ಅವಳ ಮಾತು ಕೇಳಿದೊಡನೆ ಅವರಿಗೆ ಶಾಕ್ ಆಯಿತು. ಮೊದಲು ದಂಗಾದರೂ, ಅನಂತರ ಪೆಚ್ಚಾಗಿ ಚಿಂತಾಕ್ರಾಂತರಾಗಿಬಿಟ್ಟರು. ಅವರ ಮನಸ್ಸನ್ನು ಹೊಸ ಕೀಟ ಕೊರೆಯಲಾರಂಭಿಸಿತು.

                ಮುಂದಿನ ದಿನಗಳಲ್ಲಿ ಅವರು ತಮಗೆ ಬೇಕೆನಿಸಿದಾಗಲೆಲ್ಲ ತಾವೇ ಆಗಾಗ ಹೋಗಿ ಮಕ್ಕಳನ್ನು ನೋಡಿಕೊಂಡು ಬರುತ್ತಿದ್ದರು. ತಿಂಗಳೆರಡರಲ್ಲೇ ಅವಳ ಸ್ವಭಾವವರಿತ ಅವರು ಅವಳನ್ನು ತಮ್ಮ ಸಂಗಡ ಬಾ ಎಂದು ಒತ್ತಾಯಪಡಿಸುತ್ತಿರಲಿಲ್ಲ. ಎಂದಿನಂತೆ ಬೆಳಗಿನ ವಾಕಿಂಗ್‍ಗೆ ಹಳೆಯ ಗೆಳೆಯರು ಸೇರುತ್ತಿದ್ದ ಪಾರ್ಕಿಗೇ ಹೋಗಲಾರಂಭಿಸಿದ್ದರು. ಅದು ಈ ಹೊಸ ಮನೆಯಿಂದ ಕೊಂಚ ದೂರವಾದ್ದರಿಂದ ಹೋಗಿಬರಲು ಹೆಚ್ಚು ಸಮಯ ಹಿಡಿಸುತ್ತಿತ್ತು. ಅಲ್ಲಿಂದ ಎಂದಾದರೂ ಹೋಟೆಲು-ರೆಸ್ಟೋರೆಂಟು ಎಂದು ಹೋಗಿ ಬಂದರಂತೂ ಗಂಟೆಗಟ್ಟಲೆ ತಡವಾಗಿ ರಾಧಾಳ ಸಿಡಿಮಿಡಿಗೆ ಗುರಿಯಾಗುತ್ತಿದ್ದರು. “ಮನೆ ಹತ್ರ ಇರೋ ಬೇರೆ ಪಾರ್ಕ್‍ನೋಡ್ಕೊಳ್ಳಿ”ಎಂದವಳು ಜೋರು ಮಾಡಿದಾಗ ಆತ ಕಿವುಡರಂತೆ ನಟಿಸುತ್ತಿದ್ದರು. ಅವರಿಗೆ ಗೆಳೆಯರ ಸಾಂಗತ್ಯದಲ್ಲಿ ಪರಮ ಖುಷಿ. ಆದರೆ ಗೆಳೆಯರನ್ನು ಮನೆಗೆ ಕರೆತರುವ ಧೈರ್ಯವಿರಲಿಲ್ಲ. ಬಂದಬಂದವರಿಗೆಲ್ಲ ಲಲಿತಾ ಧಂಡಿಯಾಗಿ ತಿಂಡಿ ತೀರ್ಥ ಸಪ್ಲೈ ಮಾಡುತ್ತಿದ್ದುದು ಈಗ ಬರೀ ನೆನಪಷ್ಟೇ. ಆರೆಂಟು ತಿಂಗಳಲ್ಲಿ       ಗೋವಿಂದಯ್ಯ ಬಹಳವೇ ಬದಲಾಗಿ ಹೋಗಿದ್ದರು. ಧಿಡೀರನೆ ಯಾರ ಸಹಾಯಕ್ಕಾದರೂ ಮುನ್ನುಗ್ಗುತ್ತಿದ್ದ ಮನುಷ್ಯ ,ಈಗ ಲೆಕ್ಕಾಚಾರ ಹಾಕುತ್ತ ಹಿಂದೇಟು ಹೊಡೆಯುತ್ತಿದ್ದರು. ತಿಂಗಳ ಫೀಸಿಗೆ ಬಂದ ವಿದ್ಯಾರ್ಥಿ ಮಕ್ಕಳನ್ನು ರಾಧಾ ಗದರಿಸಿ ಕಳುಹಿಸಿದಾಗ ಅವರ ಸಿಟ್ಟು ನೆತ್ತಿಗೇರಿತ್ತಾದರೂ ತುಟಿಗಳು ಮೆತ್ತಿಕೊಂಡಿದ್ದವು. ಅವರು ಅಸಹಾಯಕರಾಗಿ, ಆ ಮಕ್ಕಳ ಪೆಚ್ಚುಮುಖಗಳನ್ನು ಕಂಡು  ತಮ್ಮ ಕೈ ಹಿಸುಕಿಕೊಂಡರಷ್ಟೇ. ಕೋಣೆ ಬಾಗಿಲು ಹಾಕಿಕೊಂಡು ಕೂತು ‘ಅಯ್ಯೋ ದೇವರೇ, ಇದೇನಾಗಿ ಹೋಯ್ತಪ್ಪ’ ಎಂದು ಮಮ್ಮಲ ಮರುಗಿದರೂ ರಾಧಾಳನ್ನು ಎದುರಿಸುವ ಧೈರ್ಯವಾಗಲಿಲ್ಲ. ಒಮ್ಮೊಮ್ಮೆ ಅವರು ಯೋಚಿಸುವುದುಂಟು: ನಿಜವಾಗಿ ಇದು ನಾನೇನಾ?!…ವರ್ಷದಲ್ಲಿ ನನ್ನ ಅವತಾರ ಹೇಗಾಗಿ ಹೋಯ್ತು!!…ನನ್ನತನ ಎಲ್ಲಿ ಮಾಯವಾಯ್ತು?!..ಓ…ನಾನು ತಪ್ಪು ಮಾಡಿಬಿಟ್ಟೆನೇ?-ಎಂಬ ಪಶ್ಚಾತ್ತಾಪದ ಭಾವ ಅವರನ್ನು ಕುಕ್ಕಿ ಅಪ್ಪಳಿಸಿತು. ಗೋಡೆಯ ಕ್ಯಾಲೆಂಡರಿನತ್ತ ಅವರ ದಿಟ್ಟಿ ಹರಿಯಿತು. ಹೌದು, ಸರಿಯಾಗಿ ಹದಿನೆಂಟು ತಿಂಗಳಾಗಿಹೋಗಿವೆ ತಾವು ಗೆಳೆಯರು ಹಾಗೂ  ಮಕ್ಕಳೊಡನೆ ಮನಸಾರೆ ಸ್ವಚ್ಛಂದ ನಕ್ಕು. ಸದಾ ರಿಂಗಣಗುಣಿಯುವ ಅವರ ಮೊಬೈಲ್ ಆಗಾಗ  ಸ್ವಿಚ್ ಆಫ್ ಆಗುವ ಕರಾಮತ್ತು ಅವರಿಗೆ ತಿಳಿಯದ್ದೇನಲ್ಲ. ಅದನ್ನು ಕೆಣಕಿ ಅವಳ ವಿರೋಧ ಕಟ್ಟಿಕೊಳ್ಳುವ ಮನಸ್ಸಾಗಲಿ ಅಥವಾ ಗುಂಡಿಗೆಯಾಗಲಿ ಅವರಿಗಿರಲಿಲ್ಲ ಅಷ್ಟೇ. ಎಲ್ಲಕ್ಕಿಂತ ಮುಖ್ಯವಾಗಿ ‘ಹ ಹ್ಹ ಹ್ಹಾ’ ಎಂಬ ಅವರ ಸಿಗ್ನೇಚರ್ ನಗುವೇ ಮಂಗಮಾಯವಾಗಿಬಿಟ್ಟಿತ್ತು!!!…ಜೊತೆಗೆ ವಾರಕ್ಕೆರಡು ಪುಸ್ತಕಗಳನ್ನು ಓದಿ ಮುಗಿಸುತ್ತಿದ್ದ ಆಸಾಮಿಗೆ ಲೈಬ್ರರಿಯ ದಾರಿಯೇ ಮರೆತು ಹೋಗಿತ್ತು.

                ‘ರೀ, ಇವತ್ತಿಗೆ ನಮ್ಮ ಮದುವೆಯಾಗಿ ಎರಡು ವರ್ಷಗಳಾಯ್ತು’ ಎಂದವಳು ಖುಷಿಯಿಂದ ಬಂದು ರವೆ ಉಂಡೆ ಎದುರಿಗೆ ಹಿಡಿದಾಗ, ಅವರು “ಹೌದು, ನನಗೆ ಡಯಾಬಿಟಿಸ್ ಬಂದೂ ವರ್ಷ ಎರಡಾಗ್ತಾ ಬಂತಲ್ವೇ?” ಎಂದು ವಿಷಾದದ ದನಿಯಲ್ಲಿ ನುಡಿದಾಗ, ರಾಧಾ ಮುಖ ತಿರುವಿ ಒಳಗೆ ನಡೆದಿದ್ದಳು.

                ಕನ್ನಡಿಯ ಮುಂದೆ ನಿಂತು ಗೋವಿಂದಯ್ಯ , ತಮ್ಮ ಹಿಂದೆ ಮುಂದೆ ಪರೀಕ್ಷಾತ್ಮಕವಾಗಿ ತಿರುತಿರುಗಿ ಹುಡುಕಾಡಿ ನೋಡಿಕೊಂಡರು. ಉಹೂಂ..ಎಲ್ಲೂ ಕಾಣಲಿಲ್ಲ. ಗಾಬರಿಯಿಂದ ಅವರೆದೆ ಹೊಡೆದುಕೊಳ್ಳತೊಡಗಿತು. ಓಹ್!!.ಇಲ್ಲ..ಇಲ್ಲಾ…ಎಂದು ಅವರರಿವಿಲ್ಲದೆ ಗಾಬರಿಯಿಂದ ಚೀರಿದರು. ಅವರ ಮೈಗಂಟಿದ್ದ ಹರವಾದ ರೆಕ್ಕೆಗಳು ಮಾಯವಾಗಿದ್ದವು.! ಉಣ್ಣೆಯ ತುಪ್ಪುಳದ ದೊಡ್ಡ ರೆಕ್ಕೆಗಳು…ಬಣ್ಣ ಬಣ್ಣದ ಗರಿಗಳ ರೆಕ್ಕೆಗಳನ್ನು ಯಾರೋ ತರಿದುಹಾಕಿದ್ದರು!. ಅವರ ಕಂಗಳು ಭಯದ ಹೊಂಡಗಳಾಗಿ, ಗುಡ್ಡೆಗಳು ಗರಗರನೆ ತಿರುಗತೊಡಗಿದ್ದವು ರಕ್ತದ ಮಡುವಿನಲ್ಲಿ….ಅಯ್ಯೋ ನನ್ನ ಮುದ್ದಿನ ಆ ರೆಕ್ಕೆಗಳೆಲ್ಲಿ ಹೋದವು???..ನಾನಷ್ಟು ಪ್ರೀತಿಯಿಂದ ಸಾಕಿದ ತುಪ್ಪುಳಗಳು…ಬೆನ್ನಿನ ಇಕ್ಕೆಲದಲ್ಲೂ ಶ್ರೀರಕ್ಷೆಯಂತೆ ಅಗಲವಾಗಿ ಹರಡಿಕೊಂಡಿದ್ದ ಆ ಕವಚಗಳೆಲ್ಲಿ ಮರೆಯಾಗಿ ಹೋದವು??…ಯೋಚಿಸುತ್ತ ಯೋಚಿಸುತ್ತಾ ಅವರ ಕಾಲ ಕಸುವು ಬತ್ತಿದಂತಾಗಿ ಕುಸಿಯತೊಡಗಿದರು.

                ದೇವರನ್ನು ಅಷ್ಟಾಗಿ ನಂಬದಿದ್ದ ಅವರು ಇಂದು ರಾಘವೇಂದ್ರಸ್ವಾಮಿಗಳ ಫೋಟೋವಿನತ್ತ ತಿರುಗಿ ತಮ್ಮರಿವಿಲ್ಲದೆ ಕೈ ಜೋಡಿಸಿದರು.

                 ‘ಆ ಹಳೇ ಗೋವಿಂದಯ್ಯ ಎಲ್ಲಿ ಹೋದ ರಾಯರೇ?…. ಅವನು ಏನಾಗಿಹೋದ!?’-ಅವರ ಅಂತರಾತ್ಮ ಆರ್ತವಾಗಿ ಚೀರುತ್ತಿತ್ತು. ಅಷ್ಟೇ ಜೋರಾಗಿ ಅರಚುತ್ತಿತ್ತು ನಡುಮನೆಯ        ಟೆಲಿಫೋನೂ ಕೂಡ. ರಾಧಾ ಜೋರಾಗಿ ಮಾತನಾಡುತ್ತಿದ್ದಳು. ಹಾಗೆ ಅವಳು ಮಾತನಾಡುವುದು ಅವಳ ಮಗಳ ಜೊತೆ ಎಂಬುದನ್ನವರು ಬಲ್ಲರು. ಬಹಳ ಹೊತ್ತು ಅವಳು ಹಾಗೇ ಮಾತನಾಡುತ್ತಲೇ ಇದ್ದಳು. ಅದರ ಗೊಡವೆಗೆ ಹೋಗದ ಆತ ಮೌನವಾಗಿ ಮುಂಬಾಗಿಲ ಹೊಸಿಲು ದಾಟಿ, ಅಂಗಳದ ಕಲ್ಲುಬೆಂಚಿನ ಮೇಲೆ ಕುಳಿತರು. ಅವರ ಮನಸ್ಸು ಅಂತರ್ಮುಖಿಯಾಗಿತ್ತು. ಗೇಟಿನ ಮಗ್ಗುಲಿನ ಮರಕ್ಕೆ ಹಬ್ಬಿದ್ದ ಯಾವುದೋ ಕಾಡಬಳ್ಳಿ, ಮರವೇ ಕಾಣಿಸದಂತೆ ಅದನ್ನಾವರಿಸಿ ಹೆಬ್ಬುಲಿಯಂತೆ ತಬ್ಬಿ, ಆಶ್ರಯವಿತ್ತ ಮರವನ್ನೇ ನುಂಗಲಾರಂಭಿಸಿದಂತೆ ಭಾಸವಾಗಿ ಅವರು ಸಣ್ಣಗೆ ನಡುಗಿದರು.

                ಅಷ್ಟು ಹೊತ್ತಿಗೆ ಅಲ್ಲಿಗೆ ಧಾವಿಸಿ ಬಂದ ರಾಧಾ-‘ರೀ,ನಮ್ಮ ಅನೂ ಫೋನ್ ಮಾಡಿದ್ಳು…ಅಲ್ಲವಳಿಗೆ ಸಣ್ಣ ಮಗೂನೂ ಕಟ್ಕೊಂಡು ಆಫೀಸೂ,ಮನೇ ಎರಡೂ ಮ್ಯಾನೇಜ್ ಮಾಡೋದು ಭಾಳ ಕಷ್ಟವಾಗ್ತಿದೆಯಂತೆ, ಸಾಲದ್ದಕ್ಕೆ ಮತ್ತವಳು ಬಸುರಿಯಂತೆ ,ತತ್ ಕ್ಷಣ ನೀನು ಹೊರಟು ಬಾ..ಇಲ್ಲದಿದ್ರೆ ನನ್ನ ನಿನ್ನ ಸಂಬಂಧ ಇನ್ನು ಪರ್ಮನೆಂಟಾಗಿ ಕಟ್ ಆದ ಹಾಗೆ ಅಂತ ತಿಳ್ಕೋ…ಹಾಗೇ     ಹೀಗೇ, ಅಂತ ಏನೇನೋ ಕೂಗಾಡಿದಳು..ಏನ್ರೀ ಮಾಡೊದೂ?…ನಿಮ್ಮೊಬ್ಬರನ್ನೇ ಇಲ್ಲಿ ಬಿಟ್ಟುಹೋಗೋದು ಹ್ಯಾಗೆ ಅನ್ನೋದೇ ನನಗೊಂದು ದೊಡ್ಡ ಯೋಚ್ನೆ ಆಗ್ತಿದೆ’ ಎಂದವಳು ನುಡಿದಾಗ  ಗೋವಿಂದಯ್ಯನವರ  ಮೈ ಜುಮ್ಮೆಂದಿತು. ತಟ್ಟನೆ ಸನ್ನಿ ಬಿಟ್ಟವರಂತೆ ನೆಟ್ಟಗೆ ಚಿಮ್ಮಿ ಕುಳಿತರು.

                 ” ನೀನು ನನ್ನ ಚಿಂತೆ ಮಾಡಬೇಡ ರಾಧಾ…ಪಾಪಾ..ಅಲ್ಲಿ ನಿನ್ನ ಮಗಳು ಅಷ್ಟು ಕಷ್ಟಪಡುತ್ತಿರುವಾಗ ನಾವು ಸುಮ್ಮನೆ ಇರಕ್ಕಾಗತ್ತಾ..?ನೋ..ನೋ..ಈ ಕೂಡ್ಲೆ ನೀನು ಪ್ರಯಾಣಕ್ಕೆ ಸಿದ್ಧ ಮಾಡ್ಕೋ, ಹೇಗೂ ನಿನಗೆ ಪಾಸ್ ಪೋರ್ಟ್ ಇದೆ, ವೀಸಾಗೆ ನಮ್ಮ ರಘು ಹೆಲ್ಪ್ ಮಾಡ್ತಾನೆ” ಎಂದವರು ಅನುನಯದಿಂದೆಂಬಂತೆ ನುಡಿದು, ಕೂಡಲೇ ಮೈಕೊಡವಿ ಮೇಲೆದ್ದು, ಚಂಗನೆ ಒಳಗೆ ಹೋಗಿ ಮಗನಿಗೆ ರಿಂಗ್ ಮಾಡಿದರು.

                ಎಲ್ಲಾ ಕನಸಿನಂತೆ ನಡೆದು ಹೋಯ್ತು. ಕೆಲವೇ ದಿನಗಳಲ್ಲಿ ರಾಧಾಳ ವೀಸಾ ಬಂದು ಅವಳು ಹೊರಟುನಿಂತಾಗ ಗೋವಿಂದಯ್ಯ” ರಾಧಾ, ನೀನು ನನ್ನ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ…ನಿನ್ನ ಮಗಳ ಯೋಗಕ್ಷೇಮ ಮುಖ್ಯ….ಅವಳ ಮಕ್ಕಳು ದೊಡ್ಡೋರಾಗೋವರೆಗೂ ಅವಳಿಗೆ ತಾಯಿಯಾದ ನಿನ್ನ ಆಸರೆ ಬೇಕೇ ಬೇಕು…ನಿನ್ನ ವೀಸಾ ಎಕ್ಸ್‍ಟೆನ್ಷನ್ ಗೆ ರಘು ಹೆಲ್ಪ್ ಮಾಡ್ತಾನೆ ಡೋಂಟ್ ವರಿ”   ಎಂದವಳನ್ನು ಏರ್‍ಪೋರ್ಟ್‍ನಲ್ಲಿ ಬಿಟ್ಟು ‘ ಹ್ಯಾಪಿ ಜರ್ನಿ’ ಎಂದವಳಿಗೆ ನಗುಮೊಗದಿಂದ  ಕೈ ಬೀಸಿದರು.

                ಅಲ್ಲಿಂದ ಹೊರಬಂದ ಅವರು ಕೆಟ್ಟ ಕನಸೊಂದರಿಂದ ಎಚ್ಚೆತ್ತವರಂತೆ ನೀಳವಾದ ನಿಟ್ಟುಸಿರು ಹೊರಹಾಕಿದರು.

                ಗೋವಿಂದಯ್ಯನವರು  ಕುಳಿತಿದ್ದ ಟ್ಯಾಕ್ಸಿ ಏರ್‍ಪೋರ್ಟ್‍ನಿಂದ ಸೀದಾ ಅವರ ಮಗ ರಘು-ಲಲಿತೆಯ ಮನೆಯತ್ತ ಹೊರಳಿದಾಗ, ಅವರ ಮನ ಹಗುರಾಗಿ, ಮೊಗ ಹೂವಾಗಿ,   ಸಂತಸ ಮೇರೆವರಿದು ‘ಹ..ಹ್ಹ..ಹ್ಹಾ..’ ಎಂದು ಬಾನು ಬಿರಿಯುವಷ್ಟು ಜೋರಾಗಿ ಕೆನೆದು ನಕ್ಕರು.

Related posts

ಬದುಕು ಹೀಗೇಕೆ?

YK Sandhya Sharma

ಆಸ್ತಿಕರು

YK Sandhya Sharma

ಬೆತ್ತದ ತೊಟ್ಟಿಲು

YK Sandhya Sharma

Leave a Comment

This site uses Akismet to reduce spam. Learn how your comment data is processed.