ಬಹುಮುಖ ಪ್ರತಿಭೆಯ ರೇಖಾ ಸತೀಶ್ ಉತ್ಸಾಹದ ಚಿಲುಮೆ. ಕಲಿಕೆಯ ವಿಷಯ ಬಂದಾಗ ಎಂದೂ ಬತ್ತದ ಹುಮ್ಮಸ್ಸು. ನೃತ್ಯ ಕಲಾವಿದರಾದವರು ಎಂದೂ ತಮ್ಮ ದೇಹಾರೋಗ್ಯ, ಲೀಲಾಜಾಲವಾಗಿ ಹೇಗೆ ಬೇಕೆಂದರೆ ಹಾಗೆ ಬಾಗುವ ಮೈಕಟ್ಟು, ಶರೀರ ಸಡಿಲತೆಯ ಕಡೆ ಆದ್ಯ ಗಮನ ನೀಡಬೇಕೆಂಬುದು ಅವರ ಬಲವಾದ ನಂಬಿಕೆ. ಅದರಂತೆ ಅವರಿಗೆ ಬುದ್ಧಿ ಬಂದಾಗಿನಿಂದ ಆಕೆ ಯೋಗಾಭ್ಯಾಸವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಉತ್ತಮ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತ, ಪ್ರತಿದಿನ ತಪ್ಪದೆ ನೃತ್ಯಾಭ್ಯಾಸ ಮಾಡುತ್ತಾ ತಮ್ಮ ಮನಸ್ಸನ್ನು ತಾಜಾವಾಗಿರಿಸಿಕೊಂಡಿರುವ ತೃಪ್ತಿ ಅವರದು.
ಬೆಂಗಳೂರಿನ ಕೆಲವೇ ಕೆಲವು ಕೂಚಿಪುಡಿ ನೃತ್ಯಗಾರ್ತಿಯರ ಸಾಲಿನಲ್ಲಿ ಇವರು ಖ್ಯಾತನಾಮರು. ಈ ಹಿರಿಯ ನೃತ್ಯ ಕಲಾವಿದೆ ದೇಶ-ವಿದೇಶಗಳಲ್ಲಿ ಸದಾ ನೃತ್ಯ ಪ್ರದರ್ಶನ ನೀಡುವುದರಲ್ಲಿ ನಿರತರು. ನೃತ್ಯ ಕಲಿಸುವುದಕ್ಕಿಂಥ ನೃತ್ಯ ಪ್ರಸ್ತುತಿಪಡಿ ಸುವುದರಲ್ಲಿ, ತಮ್ಮ ಕಲಾಪ್ರತಿಭೆ ಮೆರೆದು ವಿಶಿಷ್ಟ ಸಾಧನೆ ಮಾಡುವ ಕನಸು ಅವರದು. ‘’ ನೃತ್ಯಾಂಕುರ ‘’ ಎಂಬ ತಮ್ಮದೇ ಆದ ನೃತ್ಯಶಾಲೆಯಲ್ಲಿ ನಿಜಾಂಕಾಂಕ್ಷಿಗಳಾದ ನೃತ್ಯ ವಿದ್ಯಾರ್ಥಿಗಳಿಗೆ ಕೂಚಿಪುಡಿ ನೃತ್ಯಶೈಲಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ನೃತ್ಯ ಪರೀಕ್ಷೆಗಳನ್ನು ಪಾಸು ಮಾಡುವುದಕ್ಕಿಂತ ಮಕ್ಕಳು ನಿಷ್ಠೆಯಿಂದ ನೃತ್ಯವನ್ನು ಮನವಿಟ್ಟು ಕಲಿಯುವ ಬದ್ಧತೆ ಮುಖ್ಯ ಎಂಬ ಅಭಿಪ್ರಾಯ ಅವರದು. ಆ ನಿಟ್ಟಿನಲ್ಲಿ ಅವರ ಪ್ರಯತ್ನ ಅನವರತ.
ಬೆಂಗಳೂರಿಗರಾದ ರೇಖಾ ನೃತ್ಯ ಕಲಿಯಲು ಪ್ರಾರಂಭಿಸಿದ್ದು ತಮ್ಮ ೫ ನೇ ವರ್ಷಕ್ಕೆ. ತಾಯಿ ಸುಶೀಲಾ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ. ತಾತಾ, ಸಂಗೀತ ಮತ್ತು ದೊಡ್ಡ ಹರಿಕಥಾವಿದ್ವಾಂಸರು. ಮನೆಯಲ್ಲಿ ಉತ್ತಮ ಸಂಸ್ಕಾರದ ಹಿನ್ನಲೆಯಿದ್ದುದರಿಂದ ರೇಖಾಗೆ ಸಂಗೀತ-ನೃತ್ಯದತ್ತ ಅಪಾರ ಒಲವು ಹುಟ್ಟಿನಿಂದಲೇ ಬಂದಿತ್ತು. ತಂದೆ ನಂಜುಂಡೆಶ್ವರ ಅವರಿಗೆ ಎಲ್.ಐ.ಸಿ ಯಲ್ಲಿ ಉದ್ಯೋಗವಾದ್ದರಿಂದ ಮೂರುವರ್ಷಕ್ಕೊಮ್ಮೆ ವರ್ಗವಾಗುವ ಕೆಲಸ. ಹೀಗಾಗಿ ರೇಖಾ ನೃತ್ಯಾಭ್ಯಾಸ ಬೇರೆ ಬೇ ಊರಿನಲ್ಲಿ ನಡೆಯಿತು. ಮೊದಲಗುರು ಪದ್ಮಿನಿ ರಾವ್ ಬಳಿ ಮೂರು ವರ್ಷಗಳು ಭರತನಾಟ್ಯ ಕಲಿಕೆ. ಅನಂತರ ಗುರು ಜಯ ಕಮಲಾ ಪಾಂಡ್ಯನ್ ಬಳಿ ಐದುವರ್ಷಗಳ ಕಾಲ ವಳವೂರು ಶೈಲಿಯಲ್ಲಿ ಭರತನಾಟ್ಯ ಶಿಕ್ಷಣ ಮುಂದುವರಿಸಿದರು. ನಂತರ ಕೂಚಿಪುಡಿ ಶೈಲಿ ರೇಖಾರನ್ನು ಆಕರ್ಷಿಸಿ, ಮುಂದೆ ಗುರು ಲಕ್ಷ್ಮಿ ರಾಜಾಮಣಿ ಬಳಿ ಕೂಚಿಪುಡಿ ನೃತ್ಯ ಕಲಿತು ‘ರಂಗಪ್ರವೇಶ’ ವನ್ನೂ ಮಾಡಿದರು. ಮುಂದೆ ಚೆನ್ನೈಗೆ ಹೋಗಿ ‘ಕೂಚಿಪುಡಿ ಆರ್ಟ್ ಅಕಾಡೆಮಿ’ಯ ಪ್ರಖ್ಯಾತ ನಾಟ್ಯಗುರು ವೆಂಪಟಿ ಚಿನ್ನಸತ್ಯಂ ಬಳಿ ಹೆಚ್ಚಿನ ಶಿಕ್ಷಣ ಪಡೆದರು. ಸಿ.ಸಿ.ಆರ್.ಟಿ. ಸ್ಕಾಲರ್ಷಿಪ್ ಕೂಡ ಪಡೆದರು. ಕಳೆದೊಂದು ದಶಕದಿಂದ ರೇಖಾ ಬೆಂಗಳೂರಿನಲ್ಲಿ ಪ್ರಖ್ಯಾತ ಕೂಚಿಪುಡಿ ಕಲಾವಿದೆ ಮಂಜುಭಾರ್ಗವಿ ಅವರಲ್ಲಿ ಕಲಿಯುತ್ತಿದ್ದಾರೆ. ಜೊತೆಗೆ ಆಕೆಯ ಹಿರಿಯ ವಿದ್ಯಾರ್ಥಿನಿಯಾಗಿ ಅವರ ನೃತ್ಯಶಾಲೆಯಲ್ಲಿ ಶಿಕ್ಷಕಿಯಾಗಿ ಅನೇಕರಿಗೆ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.
ಎಂ.ಎ. ಪದವೀಧರೆಯಾಗಿ, ಮಾನವ ಸಂಪನ್ಮೂಲ ವಿಷಯದಲ್ಲಿ ಡಿಪ್ಲೊಮಾ ಮಾಡಿ ಅನಂತರ ದೊಡ್ಡ ಸಾಫ್ಟ್ ವೇರ್ ಕಂಪೆನಿಗಳಲ್ಲಿ ಕೆಲವು ವರ್ಷಗಳ ಕಾಲ ಹೆಚ್.ಆರ್.ಆಗಿ ಉತ್ತಮ ಉದ್ಯೋಗ ಹೊಂದಿದ್ದರೂ, ನೃತ್ಯದ ಒಲುಮೆಯಿಂದ ರೇಖಾ ಉದ್ಯೋಗ ತ್ಯಜಿಸಿ, ಸಂಪೂರ್ಣ ನೃತ್ಯಕ್ಕಾಗಿ ತಮ್ಮ ಭವಿಷ್ಯವನ್ನು ಆರ್ಪಿಸಿಕೊಂಡಿದ್ದು ಸಣ್ಣ ವಿಷಯವೇನಲ್ಲ. ಜಾಹೀರಾತುಗಳಿಗೆ ಮಾಡೆಲ್ ಆಗಿಯೂ ಕೆಲಸ ಮಾಡುವುದು ಇವರ ಇನ್ನೊಂದು ಹವ್ಯಾಸ. ಜೊತೆಗೆ ಯೋಗ ಶಿಕ್ಷಣವನ್ನೂ ನೀಡುವ ಕೈಂಕರ್ಯ.
ಪ್ರಸಿದ್ಧ ನಾಟ್ಯಗುರುಗಳಿಂದ ಶಿಕ್ಷಣ ಪಡೆದ ರೇಖಾ ಇಂದು ಉತ್ತಮ ಕೂಚಿಪುಡಿ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಇದುವರೆಗೂ ಸಾವಿರದ ಐನೂರಕ್ಕೂ ಹೆಚ್ಚಿನ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತ ಸಾಧನೆಯ ಪಥದಲ್ಲಿ ಸಾಗುತ್ತಿದ್ದಾರೆ. ಬೆಂಗಳೂರು ದೂರದರ್ಶನದ ಮಾನ್ಯತೆ ಪಡೆದ ಕಲಾವಿದೆಯಾಗಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಜೊತೆಯೇ ದಕ್ಷಿಣ ಕೇಂದ್ರ ವಲಯದ ಸ್ಪರ್ಧೆಯಲ್ಲೂ ಬಹುಮಾನ ಲಭಿಸಿದ್ದು ಇವರ ಹೆಗ್ಗಳಿಕೆ.
ನೃತ್ಯಾಭ್ಯಾಸವನ್ನು ತಪಸ್ಸಿನಂತೆ ಮಾಡುತ್ತಿರುವ ರೇಖಾ, ಐ.ಸಿ.ಸಿ.ಆರ್ ಎಂಪ್ಯಾನೆಲ್ದ್ ಆರ್ಟಿಸ್ಟ್. ಖಜುರಹೋ,ತಂಜಾವೂರು, ಹಂಪಿ, ಮೈಸೂರು ದಸರಾ, ನವರಾತ್ರಿ ನೃತ್ಯೋತ್ಸವ, ಕೊಲ್ಕತ್ತಾ, ಭಿಲಾಯಿ, ಕಟಕ್, ಚೆನ್ನೈ ಮುಂತಾದ ಪ್ರತಿಷ್ಟಿತ ಉತ್ಸವಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ ವಿಶೇಷತೆ ಇವರದು. ಹಾಂಕಾಂಗ್, ಮಲೇಶಿಯಾ, ಸಿಂಗಾಪೂರ್ ಮುಂತಾದೆಡೆಯೂ ಪ್ರದರ್ಶನಗಳನ್ನಿತ್ತಿದ್ದಾರೆ. ‘ಸ್ಪಿಕ್ ಮೆಕೆ’ಯಲ್ಲಿ ಮಾನ್ಯರಾಗಿ ಹಲವೆಡೆ ಸೋದಾಹರಣ ಉಪನ್ಯಾಸ, ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ವಿದ್ವತ್ತಿಗೆ ತಕ್ಕಂತೆ ಅನೇಕ ಪ್ರಶಸ್ತಿಗಳೂ (ನೃತ್ಯ ಶಿರೋಮಣಿ ರಾಷ್ಟ್ರೀಯ ಪ್ರಶಸ್ತಿ,ಲಾಸ್ಯ ಭಾರತಿ, ರಂಗಶ್ರೀ ಪುರಸ್ಕಾರ,ನಾಟ್ಯ ಪ್ರಾಜ್ಞ ಮುಂತಾದ ಅನೇಕವು) ಲಭಿಸಿವೆ.
ಇವರೆಲ್ಲ ನೃತ್ಯಸಾಧನೆಗೆ ಇಂಬಾಗಿರುವ ಪತಿ ಸತೀಶ್ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರರು, ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಮಗಳು ಹದಿಮೂರರ ಸ್ನೇಹ ಸಂಗೀತ ಕಲಿಯುತ್ತಿದ್ದಾಳೆ.