ಬೆಳಗ್ಗೆ ಸುಮಾರು ಆರುಗಂಟೆಯೂ ಇರಲಿಕ್ಕಿಲ್ಲ. ಹೊರಗೆ ಯಾರೋ ಏರುಕಂಠದಲ್ಲಿ ಮಾತನಾಡುವುದು ಕೇಳಿಸಿತು. ಒಂದೆರಡು ನಿಮಿಷಗಳ ನಂತರ ಮೆಲ್ಲಗೆ ಗೇಟು ತೆರೆದ ಸದ್ದಾಯಿತು. ಬೆಳಗಿನ ಜಾವದ ಸವಿನಿದ್ದೆಯ ಮತ್ತಿನಲ್ಲಿದ್ದ ಸುಂದರಮ್ಮ-`ಇಷ್ಟು ಹೊತ್ತಿನಲ್ಲಿ ಯಾರು?…ನಿಂಗಿ ಬರೋದಕ್ಕೆ ಇನ್ನೂ ಸ್ವಲ್ಪ ಹೊತ್ತು ಹೋಗ್ಬೇಕು…ಹಾಲಿನೋನೂ ಇರಲಾರ…ಮತ್ಯಾರು?!…’ ಎಂದುಕೊಳ್ತಾ ಕಣ್ರೆಪ್ಪೆಗಳನ್ನು ಬಲವಂತವಾಗಿ ಕೀಳುತ್ತ, `ಯಾರು.? ಎನ್ನುತ್ತ ಗರ್ಜಿಸಿಕೊಂಡೇ ಹೊರಬಂದರಾಕೆ. ನಿದ್ದೆಕೆಡಿಸಿದವರ ಮೇಲೆ ಉರಿಕಾರಲು ಸಿದ್ಧವಾಗಿ ಕೆರಳಿನಿಂತಿತ್ತು ಅವರ ಕೆಂಪುಗಣ್ಣುಗಳು.
ಬಾಗಿಲು ತೆರೆಯುವ ಮುನ್ನ ಕಟಕಟೆಯಿಂದ ಪರದೆ ಸರಿಸಿ ಬಗ್ಗಿನೋಡಿದರು. ಗೇಟು ಅರ್ಧತೆರೆದು ಹುಡುಗನೊಬ್ಬ ನಿಂತಿದ್ದಾನೆ. ಸುಮಾರು 10-11 ವರ್ಷವಿದ್ದರೆ ಹೆಚ್ಚು. ಕೆದರಿದ ಕೂದಲು, ಕಪ್ಪುಬಣ್ಣ, ಅರಳಿದ ಗೆಡ್ಡೆಕಣ್ಣುಗಳಲ್ಲಿ ಏನೋ ಒಂದು ಬಗೆಯ ದೈನ್ಯಭಾವ.
`ಇನ್ನೂ ಬೆಳಗಾಗಿಲ್ಲ, ಇವಾಗೆಂಥ ಭಿಕ್ಷುಕ ?!’…ಸುಂದರಮ್ಮನಿಗೆ ಅಚ್ಚರಿ ಜೊತೆ ಅತೀವ ಕೋಪವೂ ನುಗ್ಗಿಬಂತು. `ನಡಿಯೋ ಆಚೆ ಕತ್ತೆಭಡವಾ…’ ಎನ್ನಲು ತೆರೆದುಕೊಂಡ ಅವರ ತುಟಿಗಳು ಆಶ್ಚರ್ಯದ ಉದ್ಗಾರ ಹೊರಡಿಸಿತು.

ಅವರ ತೀಕ್ಷ್ಣದೃಷ್ಟಿ ಕಚ್ಚಿಕೊಂಡಿದ್ದು ಅವನ ಸೊಂಟದ ಮೇಲಿದ್ದ ದಪ್ಪಗಾತ್ರದ ಮೊಟ್ಟೆ ತೆಂಗಿನಕಾಯಿಯ ಮೇಲೆ. ಅವರ ಎಕ್ಸರೇ ಕಣ್ಣುಗಳು ಆ ಕಾಯಿಯ ಮೇಲೆ ಸರಸರನೆ ಹರಿದಾಡಿತು. ಒಂದೇಕ್ಷಣದಲ್ಲಿ ಆ ಕಾಯಿ ತಮ್ಮ ಮನೆಯದೆಂದು ಆಕೆ ಊಹಿಸಿದ್ದೇನು,ಖಾತ್ರಿಯೇ ಆಗಿಬಿಟ್ಟಿತ್ತು. ಮೂವತ್ತು ವರ್ಷಗಳಿಂದ ನೀರುಹಾಕಿ ಅಕ್ಕರೆಯಿಂದ ಪೋಷಿಸಿದ ಮರ ಅಲ್ಲವೇನು…ಅದರ ಕಾಯಿಯ ರೂಪುರೇಷೆಗಳನ್ನು ನಿದ್ದೆಯಲ್ಲೂ ಗುರುತಿಸಿವಷ್ಟು ನಿಷ್ಣಾತರಾಗಿಬಿಟ್ಟಿದ್ದರಾಕೆ. ತಮ್ಮ ತೆಂಗಿನಮರದ ಎಲ್ಲ ಕಾಯಿಗಳ ರೂಪ-ಆಕಾರ-ಗಾತ್ರ-ಬಣ್ಣದ ಸುಪರಿಚಯವಿದ್ದಾಕೆ ಎಂಥ ಸಂತೆಯ ರಾಶಿಕಾಯಿಗಳ ಮಧ್ಯೆಯೂ ತಮ್ಮ ಮನೆಯ ಕಾಯಿಗಳನ್ನು ಸುಲಭವಾಗಿ ಪತ್ತೆಹಚ್ಚುವ ಚಾಕಚಕ್ಯತೆ ಅವರ ಪಿಳಿಚು ಕಣ್ಣುಗಳಿಗಿತ್ತು.
ಹುಡುಗ ಕಾಯಿಯನ್ನು ಅವರತ್ತ ಚಾಚಿನಿಂತಿದ್ದ. ತುಟಿಗಳು ಏನೋ ಉಸುರಲು ಚಡಪಡಿಸುತ್ತಿದ್ದವು. ಕಣ್ಣಾಲಿಗಳು ಅತ್ತಿಂದಿತ್ತ ಚಲಿಸುತ್ತ ಗಲಿಬಿಲಿಯಿಂದ ಹೊಯ್ದಾಡುತ್ತ ತದೇಕದೃಷ್ಟಿಯಿಂದ ಅವರನ್ನೇ ದಿಟ್ಟಿಸುತ್ತಿದ್ದವು.
ಗೋಡೆಯ ಮೊಳೆಗೆ ನೇತುಹಾಕಿದ್ದ ಬೀಗದಕೈಯನ್ನು ತೆಗೆದುಕೊಂಡವರೆ ಸರಸರ ಬಾಗಿಲು ತೆಗೆದು, ದುಡುದುಡು ಮೆಟ್ಟಿಲಿಳಿದು, ಪಟಕ್ಕನೆ ಅವನ ಕೈಯಿಂದ ಕಾಯಿಯನ್ನು ಕಸಿದುಕೊಂಡು ಅದನ್ನು ತಿರುಮುರುಗಿಸಿ ನೋಡಿ `ಇದು ನಮ್ಮನೆ ಕಾಯಲ್ವೇನೋ…ನಿನಗೆ ಹೇಗೆ ಸಿಕ್ತೋ?!- ಎಂದರು.
ಹುಡುಗ ತುಂಬ ಹೆದರಿದಂತೆ ಕಂಡ. ಅವನ ಬಾಯಿಂದ ಒಂದಕ್ಷರವೂ ಹೊರಡಲಿಲ್ಲ. ಮೂಕನಂತೆ ಮನೆಯ ಮುಂದಿನ ಮೋರಿಯತ್ತ ಬೆರಳುಮಾಡಿ ತೋರಿದ. ಕಾಂಪೌಂಡ್ ಹೊರಗೆ ಅಗಲವಾದ ಕಲ್ಲುಚಪ್ಪಡಿಯ ಮೋರಿ. ಸರಿಯಾಗಿ ಮೋರಿಯತ್ತ ವಾಲಿಕೊಂಡಿದೆ ಮರ. ಕಾಯಿಗಳೆಲ್ಲ ಚರಂಡಿಗೆ ಅಥವಾ ರಸ್ತೆಯ ಮೇಲೆ ಉರುಳಿ ಬೀದಿಹೋಕರ ಪಾಲೇ.
`ಈ ಗಿಡಕ್ಕೇನೋ ರೋಗ ಬಡಿದಿರಬೇಕು…ಹಾಗಂತ ಆ ಕಾಯಿ ಕೀಳೋ ರಂಗ ಹೇಳ್ತಿದ್ದ…ಅದಕ್ಕಾಗೇ ಪದೇಪದೇ ಕಾಯಿಗಳು ಯಾವ್ಯಾವ್ಯಾಗಲೋ ಬಿದ್ದುಹೋಗ್ತಿವೆ…’ ಎಂದು ಅಲವತ್ತುಕೊಂಡರು. ಆಕೆಗಂತೂ ಸರ್ಯಾಗಿ ನಿದ್ದೆಹತ್ತಿ ಯಾವ ಕಾಲವಾಯ್ತೋ ಈ ಯೋಚ್ನೇಲಿ…ಕಾಯಿ ಬೀಳಕ್ಕೆ ಹೊತ್ತೂ ಗೊತ್ತೂ ಇರಲಿಲ್ಲ. ಮಧ್ಯಾಹ್ನ ಒಂದುಗಳಿಗೆ ಚಾಪೆಗೆ ಮೈಕೊಡಲಿಕ್ಕಿಲ್ಲ, ಹೊರಗೆ ಧಬ್ ಅಂತ ಕಾಯಿಬಿದ್ದ ಸದ್ದು…ಅಷ್ಟರಲ್ಲಿ ಅವರ ಕೋಳಿನಿದ್ದೆ ಹಾರಿಹೋಗ್ತಿತ್ತು. ತಮ್ಮ ಧಢೂತಿ ಗಾತ್ರದ ಶರೀರಾನ ಹೊರಳಿಸಿ ಬುಡಕ್ಕನೆ ಮೇಲೆದ್ದು ಹೊರಬಂದು, ಗೇಟಾಚೆ ಈಚೆ ದುರ್ಬೀನುಗಣ್ಣು ಹಾಯಿಸಿ ಬಿದ್ದಕಾಯಿಯನ್ನು ಪತ್ತೆಮಾಡಿ ಹೆಕ್ಕಿಕೊಂಡು ಬಂದಾಗಲೇ ಸಮಾಧಾನ!…ಹೀಗೆ ಮರದಿಂದ ತಾನಾಗೇ ಕಾಯಿ ಬಿದ್ದುಹೋಗುವ ಕಾರಣ ತಿಳಿಯದೆ ರಂಗನ ಸಲಹೆಯಂತೆ ಮರದ ಬುಡಕ್ಕೆ ಟಾರು ಮೆತ್ತಿಸಿದ್ದರು. ಜೊತೆಗೆ ಗರಿಗಳ ಮೇಲೆ ಮತ್ತು ಮರದ ಬುಡಕ್ಕೂ ಔಷಧವನ್ನು ಹಾಕಿಸಿದ್ದರು. ಇಷ್ಟಾದರೂ ಕಾಯಿ ಬೀಳೋದು ನಿಂತಿರಲಿಲ್ಲ. ರಾತ್ರಿಯೆಲ್ಲ ಆಕೆಗೆ ಕಾಯಿ ಬೀಳೋದೇ ಚಿಂತೆ. ಕನಸಿನಲ್ಲೂ ಧಬ್ ಧಬ್ ಶಬ್ದ ಕೇಳಿದಂತಾಗಿ ಬೆಚ್ಚಿಬಿದ್ದು ಎದ್ದುಕೂಡುತ್ತಿದ್ದರು. ಈಕೆಯ ಕಾಯಿ ಮೇನಿಯಾ ಬಗ್ಗೆ, ಊರಿಂದಬಂದ ಮಗ ಹಾಸ್ಯಮಾಡುತ್ತ ಗಂಭೀರವಾಗಿಯೇ ಸಲಹೆನೀಡಿದ್ದ.
`ಅಮ್ಮನ್ನ ಯಾರಾದ್ರೂ ಸೈಕ್ರಿಯಾರ್ಟಿಸ್ಟ್ ಹತ್ರ ಕರ್ಕೊಂಡೋಗಪ್ಪಾ…ಆಮೇಲೆ ಇದೇ ಗೀಳು ಹಿಡಿದ್ರೆ ಕಷ್ಟ …ಷೀ ನೀಡ್ಸ್ ಕೌನ್ಸಲಿಂಗ್…ಅಥವಾ ಅವಳು ಕೆಲ ದಿನ ನಮ್ಮೂರಿಗೆ ಬಂದಿರಲಿ…ಷೀ ನೀಡ್ಸ್ ಎ ಛೇಂಜ್’ ಎಂದಾಗ ಸುಂದರಮ್ಮ ಮುಖಗಂಟಿಕ್ಕಿ-` ನಿನಗೇನು ಗೊತ್ತು ಈ ಮರದ ಅಟ್ಯಾಚ್‍ಮೆಂಟು….ನೀ ಹುಟ್ಟೋಕ್ಕೆ ಮುಂಚಿನಿಂದ್ಲೂ ನಾನಿದನ್ನು ಚೊಚ್ಚಿಲುಮಗನ ಥರಾನೇ ಬೆಳೆಸಿದ್ದೇನೆ’ ಎಂದು ಅವನ ಬಾಯಿ ಮುಚ್ಚಿಸಿದರು. ಹಾಗಿತ್ತು ತೆಂಗಿನಮರದೊಡನೆ ಆಕೆಯ ಬಾಂಧವ್ಯ.

ತಾಯಿಯ ಈ ವರಾತ-ಗೀಳು ಕಂಡು ರಜಕ್ಕೆ ಬಂದಿದ್ದ ಮಗಳೂ ಇರಲಾರದೆ ಒಂದು ಮಾತು ಅಂದು ದೊಡ್ಡ ಪ್ರಳಯವೇ ಸೃಷ್ಟಿಯಾಗಿತ್ತು. `ಎಲ್ಲ ಕಡೆ ಈ ತೆಂಗಿನಮರಗಳ ಕಾಯಿ-ಗರಿಗಳು ಬಿದ್ದು ಅನಾಹುತಗಳೇ ನಡೆದುಹೋಗ್ತಿವೆ…ಬೀದೀಲಿ ಹೋಗೋರ ತಲೆಮೇಲೆ ಬಿದ್ದು ಏನಾದ್ರೂ ಪ್ರಾಣಾಗೀಣ ಹೋಗಲಿ ಆಗ ಗೊತ್ತಾಗತ್ತೆ,ಅದರ ತಾಪತ್ರಯ. ಮೊನ್ನೆ ಪೇಪರ್ನಲ್ಲಿ ಓದಿದ್ದೆ, ಕಾಯಿ ಕೀಳೋನು ಮರದಿಂದ ಬಿದ್ದು, ಮನೆಯೋರು 2 ಲಕ್ಷ ರೂಪಾಯಿ ಕಾಂಪೆನ್ಸೇಷನ್ ಕೊಟ್ರಂತೆ…ಯಾಕ್‍ಬೇಕು ಗ್ರಾಚಾರ, ಸುಮ್ನೆ ಮರ ಕಡಿಸಿ ಹಾಕಿ, ನಿಶ್ಚಿಂತೆ…’ ಎಂದದ್ದೇ ತಡ ಸುಂದರಮ್ಮ ಆಕಾಶ-ಭೂಮಿ ಒಂದು ಮಾಡಿದ್ದರು.
ಯಾರೇನೇ ಶಂಖ ಊದಿದರೂ ಯಥಾಪ್ರಕಾರ ಸುಂದರಮ್ಮ ಬೆಳಗ್ಗೆದ್ದ ತತ್‍ಕ್ಷಣ ಮಾಡೋ ಮೊದಲ ಕೆಲಸವೆಂದರೆ ಗೇಟಾಚೆ ಬಂದು ಮೋರೀಲಿ ಬಗ್ಗಿ ನೋಡೋದು, ಮತ್ತೆ ಕಾಂಪೌಂಡಿನ ಉದ್ದಗಲಕ್ಕೂ ಕಣ್ಣುಹಾಸಿ ಕಾಯೇನಾದರೂ ರಾತ್ರಿ ತಮ್ಮ ಕಿವಿ-ಕಣ್ಣು ತಪ್ಪಿಸಿ ಬಿದ್ದಿರಬಹುದೇ ಎಂಬ ಹುಡುಕಾಟ ನಡೆಸುವುದು. ನಿಜವಾಗಿ ಒಂದು ದೊಡ್ಡ ತಲೆನೋವೇ ಆಗಿಹೋಗಿತ್ತು ಆಕೆಗೆ ಈ ಕಾಯಕ ಅಥವಾ ಈ ತನಿಖೆ. ಅರ್ಧರಾತ್ರೀಲಿ ಕಾಯಿಬಿದ್ದ ಶಬ್ದವಾದ್ರೆ ಆ ಅವೇಳೆಯಲ್ಲಿ ಎದ್ದು ಹೊರಗೆಬಂದ್ರೆ ಗಂಡ ಸುಮ್ಮನಿರುತ್ತಿರಲಿಲ್ಲ..ಜೊತೆಗೆ ಆಕೆಗೂ ದಿಗಿಲೇ…ಮನೆಯಲ್ಲಿ ಮುದುಕ-ಮುದುಕಿ ಇಬ್ಬರೇ. ಹೀಗಾಗಿ ಅರ್ಧರಾತ್ರೀಲಿ ಕಳ್ಕೊಂಡ ಕಾಯಿಗಳ ಬಗ್ಗೆ ಬರೀ ನಿಟ್ಟುಸಿರು ಬಿಡುವುದಷ್ಟೇ ಆಗಿತ್ತು.
ಒಂದುದಿನ ಮೂಲೆಮನೆ ಜಲಜಮ್ಮ-`ಅವತ್ತು, ದ್ವಾದಶಿ ಬೆಳಗ್ಗೆ 5 ಗಂಟೆಗೆ ನಮ್ಮತ್ತೆಯವರ ವೈದೀಕಾಂತ ನಾವು ಗಂಡ-ಹೆಂಡ್ತಿ ಇಬ್ಬರೂ ಮಠದ ಕಡೆಗೆ ಹೋಗ್ತಾ ಇದ್ವಿರೀ, ಆಗ ನಿಮ್ಮನೆ ಮುಂದೆ ಯಾರೋ ನಿಂತಿದ್ದಹಾಗಿತ್ತು. ಆ ವ್ಯಕ್ತಿ ನಿಮ್ಮನೆ ಮೋರೀಲಿ ಬಗ್ಗಿ ಅದರೊಳಗೆ ಬಿದ್ದಿದ್ದ ಎರಡು ಕಾಯಿಗಳನ್ನು ಎತ್ತಿ ತಮ್ಮ ಶಲ್ಯದೊಳಗೆ ಸುತ್ತಿಕೊಂಡು, ಧಡಧಡ ಮುಂದೆ ಹೋಯಿತು…ನೋಡಿದರೆ ಆತ ಗಿರಿಜಮ್ಮನ ಮನೆಯೊಳಗೆ ಸೀದಾ ನುಗ್ಗಿಬಿಡ್ತು, ಯಾರೂಂತೀರಿ ಆತ… ಗಿರಿಜಮ್ಮನ ತಂದೆ ಕಣ್ರೀ…ದಿನಾ ಆ ಪ್ರಾಣಿಗೆ ಇದೇ ಕೆಲಸ…ಬೆಳಗಿನ ಜಾವ ವಾಕಿಂಗು ಅನ್ನೋ ನೆಪದಲ್ಲಿ ಬೀದಿ ಬೀದಿಗಳೆಲ್ಲ ಸುತ್ತಿ, ಅಲ್ಲಿಲ್ಲಿ ಬಿದ್ದ ತೆಂಗಿನಕಾಯಿಗಳನ್ನೆಲ್ಲ ಕಲೆಕ್ಟ್ ಮಾಡತ್ತಂತ್ರೀ’ ಅಂತ ಹಲ್ಲು ಕಿರೀತ ಸುದ್ದಿ ಮುಟ್ಟಿಸಿದ್ದರು.

`ಏನ್ಮಾಡೋದ್ರೀ…ಕಾಯಿ ಕೀಳೋರೇ ಬರಲ್ಲ, ಬಂದ್ರೂ 200-300 ರೂಪಾಯಿ ಗಿಡಕ್ಕೆ, ಜೊತೆಗೊಂದು ಕಾಯಿ ಬೇರೆ. ಮರ ಬೀದೀಗೇ ವಾಲಿಕೊಂಡಿರೋದ್ರಿಂದ ನಮಗೆ ಕಾಯಿ ಸಿಗೋದು ಅಪರೂಪವೇ…ಕಾಯಿ ಬೆಲೆ ಬೇರೆ ತುಂಬ ತುಟ್ಟಿಯಾಗಿದೆ’ ಎಂದು ಸುಂದರಮ್ಮ ಹೀಗೆ, ದೊಡ್ಡ ಉಪನ್ಯಾಸವನ್ನೇ ಕೊಡಲಾರಂಭಿಸುತ್ತಾರೆ. ಅದವರ ಮನದಾಳದ ಅಳಲು.
ಇಂಥ ಪರಿಸ್ಥಿತಿಯಲ್ಲಿ ಈ ಹುಡುಗ ಮೋರೀಲಿ ಬಿದ್ದಿದ್ದ ಕಾಯಿತಂದು ತಮಗೆ ಒಪ್ಪಿಸುತ್ತಿದ್ದಾನೆ ಎಂದವರ ಕಂಠ ತುಂಬಿಬಂತು. `ಅಯ್ಯೋ ಮುಂಡೇದೇ ನಿನಗೆಂಥ ನಿಯತ್ತೋ?!..ಹೂಂ ಉಳೀದೋರು ಇದ್ದಾರೆ’ ಎಂದು, ಇದುವರೆಗೂ ತೆಂಗಿನಕಾಯಿ ಎತ್ತಿಕೊಂಡು ಹೋದೋರಿಗೆ ಶಾಪಹಾಕಿ ನೆಟಿಕೆಮುರಿದು, ಹುಡುಗನ ಪ್ರಾಮಾಣಿಕತೆಗೆ ಬೆರಗಾಗಿ ನಿಂತಿದ್ದರು!
`ಅಯ್ಯೋ ನನ್ನಪ್ಪ ನೂರ್ವರ್ಷ ಚೆನ್ನಾಗಿ ಬಾಳು…ಪರವಾಗಿಲ್ಲ ಈ ಸಣ್ಣವಯಸ್ಸಿನಲ್ಲೇ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡಿದ್ದೀಯಲ್ಲ, ತುಂಬ ಸಂತೋಷಾನಪ್ಪಾ’ ಎಂದಾಕೆ ಕೃತಜ್ಞತೆ ಹಾಗೂ ಮಿತಿಮೀರಿದ ಆನಂದದಿಂದ ಉದ್ಗರಿಸಿ, ಒಳಬಾಗಿಲತ್ತ ತಿರುಗಿ, `ಏನೂಂದ್ರೆ, ಸ್ವಲ್ಪ ಇಲ್ಲಿ ಬರ್ತೀರಾ…ಬಂದು ನೋಡಿ’ ಎಂದು ಒಳಗೆ ಮಲಗಿದ್ದ ಗಂಡನನ್ನು ಅವಸರವಸರವಾಗಿ ಕರೆದಾಗ ಆ ಹುಡುಗ ಪಿಳಿಪಿಳಿ ಕಣ್ಣುಬಿಡುತ್ತ ಮುಖದಲ್ಲಿ ಗೊಂದಲ ತುಳುಕಿಸಿದ.
ಕೆಲವೇ ನಿಮಿಷಗಳಲ್ಲಿ ಆಕೆಯ ಗಂಡ ಬಾಗಿಲಲ್ಲಿ ಕಾಣಿಸಿಕೊಂಡರು. `ನೋಡಿದರಾಂದ್ರೇ, ಇಷ್ಟು ಚಿಕ್ಕ ಹುಡುಗನಿಗೆ ಎಂಥಾ ನಿಯತ್ತು…ಮೋರಿಯಲ್ಲಿ ಬಿದ್ದಿದ್ದ ಕಾಯಿಯನ್ನು ತಂದು ಕೊಟ್ಟಿದ್ದಾನ್ರೀ’-ಸುಂದರಮ್ಮನ ಮುಖದಲ್ಲಿ ತುಳುಕುತ್ತಿದ್ದ ಕೃತಜ್ಞತೆ, ಆಕೆಯ ಗಂಡನ ಮೊಗದ ಮೇಲೂ ಮಿನುಗಿ `ಹೌದಾ…ಪಾಪ ಹುಡುಗನ್ನ ಒಳಗೆ ಕರೆದು ಏನಾದ್ರೂ ಕೊಡು ಮತ್ತೆ’ ಎಂದು ಒಳನಡೆದರು.

`ಇಂಥ ತುಟ್ಟಿಕಾಲದಲ್ಲಿ ಕಾಯಿ ಅಂದ್ರೆ ಚಿನ್ನ ಇದ್ದಹಾಗೆ….ಒಂದು ಕಾಯಿಗೆ ಆ ಶೆಟ್ಟಿ ಇಪ್ಪತ್ತು ರೂಪಾಯಿ ಹೇಳ್ತಾನಲ್ಲ…ಅಂಥದ್ರಲ್ಲಿ ಬಿಟ್ಟಿ ಸಿಕ್ರೆ ಯಾವೋನು ಬಿಡ್ತಾನೆ ಹೇಳಿ…ಪಾಪ ಒಳ್ಳೆ ಹುಡುಗ, ಎತ್ತಿಕೊಂಡು ಓಡಿಹೋಗದೆ ತಂದುಕೊಟ್ಟಿದೆ…’ ಎಂದು ಸ್ವಗತದಲ್ಲಿ ಖುಷಿಗೊಳ್ಳುತ್ತ ಆಕೆ ಆ ಹುಡುಗನನ್ನು ಕರೆತಂದು ಹಿಂದಿನ ಅಂಗಳದಲ್ಲಿ ಕೂರಿಸಿ ನಿಂಗಿಯ ಗಾಜಿನ ಲೋಟದಲ್ಲಿ ಬಿಸಿಬಿಸಿ ಕಾಫಿ ಸುರಿದು `ಕುಡಿಯಪ್ಪ ಕುಡಿ, ನಿನ್ನ ಹೊಟ್ಟೆ ತಣ್ಣಗಿರಲಿ ‘-ಎಂದು ಆ ಹುಡುಗನನ್ನು ಮನಸಾರೆ ಹರಸಿದರು. ಹುಡುಗ ಪೆದ್ದು ಕಳೆಯ ನೋಟದಲ್ಲಿ ಆಕೆಯನ್ನೇ ದಿಟ್ಟಿಸುತ್ತ ಕಾಫಿಯನ್ನು ಗಟಗಟ ಹೀರಿದ.
`ಸ್ವಲ್ಪ ಕೂತ್ಕೊಂಡಿರಪ್ಪ ಬಂದೆ’ ಎನ್ನುತ್ತ ಆಕೆ ಒಳಗೆಹೋಗಿ, ಒಲೆಯ ಮೇಲೆ ಹೆಂಚಿಟ್ಟು, ಬಿಸಿಬಿಸಿ ದೋಸೆ ಹುಯ್ದು, ನಾಲ್ಕು ದೋಸೆ ಹುಡುಗನ ಮುಂದಿಟ್ಟಾಗ ಆಕೆಯ ಮೊಗದಲ್ಲೇನೋ ಸಂತೃಪ್ತಿಯ ಸೊಬಗು. ಹಾಗೇ ಕಟ್ಟೆಯ ಮೂಲೆಯಲ್ಲಿಟ್ಟಿದ್ದ ರಾತ್ರಿಯ ಅನ್ನ-ಸಾರಿನ ಪಾತ್ರೆ ತೆಗೆದು ಅವನ ಮುಂದಿಟ್ಟು, ಒಂದು ಮುತ್ತಗದೆಲೆ ಹಾಕಿ `ಊಟ ಮಾಡಪ್ಪ’ ಎಂದಾಗ ಆ ಹುಡುಗನ ಮುಖದಲ್ಲಿ ಗಾಬರಿ-ಗಲಿಬಿಲಿ ಹೊಯ್ದಾಡಿತು. ದೋಸೆಯಿಂದ ಹೊಟ್ಟೆ ತುಂಬಿದ್ದರೂ ಆಕೆಯ ಬಲವಂತಕ್ಕೆ ಗಬಗಬನೆ ಹೊಟ್ಟೆ ಬಿರಿಯುವಷ್ಟು ಉಂಡು, ಹೊರಡಲು ಅವಸರವಸರವಾಗಿ ಮೇಲೆದ್ದು ನಿಂತ. ಸುಂದರಮ್ಮನ ಹೃದಯ ಕೃತಜ್ಞತೆಯ ಭಾರದಿಂದ ತುಂಬಿಬಂತು.

ಹುಡುಗ ಗೇಟಿನ ಬಳಿ ನಿಂತು `ಬರ್ತೀನಮ್ಮ’ ಎಂದ ಕ್ಷೀಣವಾಗಿ. ಸುಂದರಮ್ಮ ತಮ್ಮ ಕೈಲಿದ್ದ ಹಳೆಯ ಷರಟನ್ನು ಅವನ ಮಡಿಲಿಗೆ ಹಾಕಿ ಜೊತೆಗೆ ಒಂದು ರೂಪಾಯಿಯ ಬಿಲ್ಲೆಯನ್ನು ಅವನ ಕೈಲಿಟ್ಟು `ಇನ್ನೂ ಹೀಗೇ ಯಾವತ್ತಾದ್ರೂ ಕಾಯಿ ಬಿದ್ದಿದ್ರೆ ತಂದ್ಕೊಡಪ್ಪ ಜಾಣ’-ಎಂದು ತುಂಬು ಹೃದಯದಿಂದ ಅವನನ್ನು ಬೀಳ್ಕೊಟ್ಟು ಬಾಗಿಲಾಚೆ ಹೋಗುತ್ತಿದ್ದ ಅವನನ್ನೇ ತದೇಕ ದೃಷ್ಟಿಯಿಂದ ದಿಟ್ಟಿಸಿದರು.
ಹುಡುಗ ಅಂಗೈಯಲ್ಲಿ ಬಿಗಿಯಾಗಿ ಹಿಡಿದಿದ್ದ ನಾಣ್ಯವನ್ನೊಮ್ಮೆ, ಕಂಕುಳಲ್ಲಿದ್ದ ಷರಟನ್ನೊಮ್ಮೆ ವಿಷಾದವಾಗಿ ಸವರಿದ. ಹಿಂತಿರುಗಿ ನೋಡಬೇಕೆಂದು ಅವನಿಗೆ ತೀವ್ರವಾಗಿ ಅನಿಸುತ್ತಿದ್ದರೂ ಸುಂದರಮ್ಮನವರ ಅವ್ಯಾಜ ಅಂತಃಕರಣದ ನೋಟವನ್ನೆದುರಿಸಲಾರದೆ ಕಣ್ತಗ್ಗಿಸಿ ಬಲವಂತವಾಗಿ ಅಲ್ಲಿಂದ ಹೆಜ್ಜೆಕಿತ್ತ. ಜಲಜಮ್ಮನ ಮನೆಯತ್ತ ಮೆಲ್ಲಗೆ ತಪ್ಪಿತಸ್ಥ ಭಾವದಿಂದ ಕಳ್ಳನೋಟ ಹರಿಸಿದವನು ಹೆಜ್ಜೆಯನ್ನು ಚುರುಕುಗೊಳಿಸಿದ. ಜಲಜಮ್ಮನ ಗುಡುಗಿನ ಧ್ವನಿ ಅವನನ್ನು ಬೆದರಿಸಿ ಚೆಡ್ಡಿ ಒದ್ದೆ ಮಾಡಿಕೊಳ್ಳುವಂತೆ ಮಾಡಿತ್ತು.
ಬೆಳಗಿನ ಜಾವ ಅವನು ಎಂದಿನಂತೆ ಕೈಲ್ಲಿ ಪ್ಲಾಸ್ಟಿಕ್ ಚೀಲಹಿಡಿದು ಹರಕು ಮುರುಕುಸಾಮಾನು ಮತ್ತು ಬೀದಿಗೆಸೆದ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯವಸ್ತುಗಳನ್ನು ಆಯ್ದುಕೊಳ್ಳಲು ಬೀದಿಗುಂಟ ನಡೆದಿದ್ದ. ಅದೃಷ್ಟಕ್ಕೆ ಸುಂದರಮ್ಮನ ಮನೆಯ ಮೋರಿಯಲ್ಲಿ ಬಿದ್ದಿದ್ದ ದೊಡ್ಡ ತೆಂಗಿನಕಾಯಿ ನೋಡಿ ಅವನ ಸಂತಸ ಮೇರೆವರಿದಿತ್ತು. ಮನೆಮಂದಿಗೆಲ್ಲ ರಸಗವಳ ಎಂದು ಹಿಗ್ಗಿನಿಂದ ಮೆಲ್ಲಗೆ ಮೋರಿಗಿಳಿದು ಕಾಯಿ ಎತ್ತಿಕೊಂಡವನೆ ಇನ್ನೇನು ಓಟ ಕೀಳಬೇಕೆನ್ನುವಷ್ಟರಲ್ಲಿ ತಮ್ಮ ಮನೆಯಿಂದ ಹೊರಬಂದ ಜಲಜಮ್ಮನ ಹದ್ದಿನಕಣ್ಣು ಇದನ್ನು ಕಂಡುಬಿಟ್ಟಿತ್ತು.
`ಏಯ್ ಏನೋ ಅದು?…’-ಎಂದಾಕೆ ತಮ್ಮ ಮನೆಯ ಗೇಟಿನಿಂದಲೇ ಅಬ್ಬರಿಸಿದಾಗ ಹುಡುಗ ನಡುಗಿಹೋದ!…ಮೈಯೆಲ್ಲ ಬೆವರು ಕಿತ್ತುಕೊಂಡಿತ್ತು. ಬೆದರಿ `ಬೆ ಬೆ ಬ್ಬೆ’ ಎಂದು ತೊದಲುತ್ತ ಭಯದಿಂದ ಅವರಿಗೆ ಕಾಯಿ ಕೊಡಲುಹೋದ. `ಹೋಗು ಅವರ್ಮನೆ ಬಾಗಿಲು ತಟ್ಟಿ, ಕೊಟ್ಟುಬಿಟ್ಟು ಬಾ ಹೋಗು…ನಾನಿಲ್ಲೇ ನೋಡ್ತಿರ್ತೀನಿ’ ಎಂದು ಕಣ್ಣರಳಿಸಿ ಗುಟುರು ಹಾಕಿದಾಗ, ಹುಡುಗ ವಿಧೇಯವಾಗಿ ತಲೆಯಾಡಿಸಿ, ಆಕೆಯ ಹಿಡಿತದಿಂದ ತಪ್ಪಿಸಿಕೊಂಡರೆ ಸಾಕೆಂದು ತಟ್ಟನೆ ಅಲ್ಲಿಂದ ಜಾಗ ಖಾಲಿಮಾಡಿ ಓಡಿಹೋಗಿ ಸುಂದರಮ್ಮನವರ ಮನೆಯ ಗೇಟು ತೆರೆದಿದ್ದ.
ತಲೆಬಗ್ಗಿಸಿಕೊಂಡು ಮುಂದೆ ಸಾಗುತ್ತಿದ್ದ ಆ ಹುಡುಗನ ಎದೆಯನ್ನು ಅವ್ಯಕ್ತ ನಾಚಿಕೆ-ಸಂಕೋಚಗಳು ಗುದ್ದುತ್ತಿದ್ದವು.