Image default
Dancer Profile

ಬಹುಮುಖ ಪ್ರತಿಭೆಯ ನೃತ್ಯನಿಪುಣೆ ರೇಖಾ ದಿನೇಶ್ ಕುಮಾರ್

ಚಿಕ್ಕಂದಿನಿಂದ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಒಲವುಳ್ಳ ರೇಖಾ ದಿನೇಶ್ ಕುಮಾರ್ ಆಸಕ್ತಿ ಕ್ಷೇತ್ರ ವಿವಿಧ ಆಯಾಮಗಳುಳ್ಳದ್ದು. ಪ್ರೌಢಶಾಲೆಯಲ್ಲಿದ್ದಾಗಲೇ ತಾನೇ ನೃತ್ಯ ಸಂಯೋಜನೆ ಮಾಡಿ ನೃತ್ಯ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟ ವೈಶಿಷ್ಟ್ಯ ಅವಳದು. ಆಗಲೇ ಮೊಳೆತ ನಟನಾಸಕ್ತಿಯಿಂದ ಹಲವಾರು ಕನ್ನಡ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಟಿ. ಮೂರು ದಶಕಕ್ಕೂ ಮಿಕ್ಕಿದ ನೃತ್ಯಕ್ಷೇತ್ರದ ಅನುಭವದಿಂದ ದಕ್ಷ ನಾಟ್ಯಗುರು, ಉತ್ತಮ ನೃತ್ಯ ಕಲಾವಿದೆ, ಸೃಜನಾತ್ಮಕ ನೃತ್ಯ ಸಂಯೋಜಕಿಯಾಗಿ ‘ಬೆನಕ ನಾಟ್ಯ ಮಂದಿರ’ ದ ಕಲಾತ್ಮಕ ನಿರ್ದೇಶಕಿಯಾಗಿ ನೂರಾರು ಮಕ್ಕಳಿಗೆ ಮಾರ್ಗದರ್ಶಕರಾಗಿದ್ದಾರೆ. ಇದಲ್ಲದೆ, ಉತ್ತಮ ಆರೋಗ್ಯ, ದೇಹದೃಢತೆ ಸಾಧಿಸಿ ‘ಟ್ರೆಕ್ಕಿಂಗ್’ ಹವ್ಯಾಸ ಬೆಳೆಸಿಕೊಂಡಿದ್ದು, ಈಗಾಗಲೇ ಮೂರು ಬಾರಿ ಹಿಮಾಲಯ ಪರ್ವತಶ್ರೇಣಿಯಲ್ಲಿ ‘’ಚಾರಣ’’ಮಾಡಿರುವ ಹಿರಿಮೆ ಕೂಡ ಇವರದಾಗಿದೆ.

ರೇಖಾ ಮೂಲತಃ ಬೆಂಗಳೂರಿನವರು. ತಂದೆ ಸತ್ಯಮೂರ್ತಿ ಮತ್ತು ತಾಯಿ ಅನ್ನಪೂರ್ಣ ಮಗಳನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸಿದ್ದಾರೆ. ಕಿವಿಯ ಮೇಲೆ ಯಾವುದೇ ಹಾಡು ಬೀಳಲಿ, ನರ್ತಿಸತೊಡಗುತ್ತಿದ್ದ ಮಗಳ ಆಸಕ್ತಿಯನ್ನು ಕಂಡು ತಾಯಿ, ಅಂದಿನ ಸುಪ್ರಸಿದ್ಧ ನೃತ್ಯಗುರುಗಳಾಗಿದ್ದ ವಿದುಷಿ ಲಲಿತಾ ದೊರೈ ಅವರಲ್ಲಿ ನೃತ್ಯ ಕಲಿಸಲು ಸೇರಿಸಿದಾಗ ರೇಖಾಗೆ ಎಂಟುವರ್ಷ. ಅವರ ಬಳಿ ಬಹು ಆಸಕ್ತಿಯಿಂದ ನಾಟ್ಯ ಕಲಿತ ರೇಖಾ, ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳನ್ನು ಉನ್ನತಶ್ರೇಣಿಯಲ್ಲಿ ಪಾಸುಮಾಡಿ, `ವಿದ್ವತ್’ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದರು. ಇತ್ತೀಚಿಗೆ ಅಖಿಲ ಭಾರತೀಯ ಗಂಧರ್ವ ಮಹಾ ವಿಶ್ವವಿದ್ಯಾಲಯದಿಂದ ಭರತನಾಟ್ಯದ ‘’ ಅಲಂಕಾರ್’’ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು.

ನಾಡಿನ ಎಲ್ಲ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಪಾಲ್ಗೊಳ್ಳುತ್ತಲೇ ರೇಖಾ, ‘ಕೃಷಿ’ ವಿಷಯದಲ್ಲಿ ಪದವೀಧರೆಯೂ ಆದರು. ‘ಬೆನಕ ನಾಟ್ಯಮಂದಿರ’ ಸ್ಥಾಪಿಸಿ, ಅನೇಕ ನೃತ್ಯಾಕಾಂಕ್ಷಿಗಳಿಗೆ ನೃತ್ಯ ಕಲಿಸತೊಡಗಿದರು. ಜೊತೆಗೆ, ಅಗ್ರಿಕಲ್ಚರ್ ಕಾಲೇಜಿನಲ್ಲಿದ್ದಾಗ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಕಂಸಾಳೆ, ಬೊಂಬು ನೃತ್ಯ ಮುಂತಾದ ಜಾನಪದ ನೃತ್ಯಗಳೊಂದಿಗೆ, ಭರತನಾಟ್ಯದ ಯುವಜನೋತ್ಸವದಲ್ಲಿ ಪಾಲ್ಗೊಂಡು ಹೆಸರುವಾಸಿಯಾದರು. ಇಷ್ಟರಲ್ಲಿ ಮದುವೆಯಾಗಿ ಅಮೇರಿಕಾದ ಶಿಕಾಗೋ ಸೇರಿದರೂ ರೇಖಾ ಸುಮ್ಮನಿರಲಿಲ್ಲ. ಅಲ್ಲಿನ ‘ಕಲಾಪದ್ಮ’ ನೃತ್ಯಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ನಾಲ್ಕುವರ್ಷಗಳು ಕಾರ್ಯನಿರತರಾದರು. ಅಮೇರಿಕಾದ್ಯಂತ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದರು. ಅನಂತರ ವೃತ್ತಿಪರ ‘ಡಿಸೈನರ್’ ಆಗಿ ವಿಶೇಷ ವಲಯದಲ್ಲಿ ಅನುಭವ ಪಡೆದುಕೊಂಡರು.

ಮರಳಿ ಭಾರತಕ್ಕೆ ಬಂದೊಡನೆ ರೇಖಾ ಹೆಚ್ಚಿನ ಕಲಿಕೆಗಾಗಿ ಖ್ಯಾತ ನಾಟ್ಯಗುರು ಭಾನುಮತಿ ಅವರಲ್ಲಿ ನೃತ್ಯ ಕಲಿಯತೊಡ ಗಿದವರು ಇಂದಿಗೂ ಹನ್ನೆರಡು ವರ್ಷಗಳಿಂದ ಕಲಿಯುತ್ತಲೇ ಇರುವುದು ಅವರ ಕಲಿಕಾ ಬದ್ಧತೆಗೆ ಸಾಕ್ಷಿ. ನೂರಾರು ವಿದ್ಯಾರ್ಥಿಗಳನ್ನು ನೃತ್ಯರಂಗದಲ್ಲಿ ತರಪೇತುಗೊಳಿಸುತ್ತ, ಅನೇಕ ರಂಗಪ್ರವೇಶಗಳನ್ನು ನೆರವೇರಿಸಿದ್ದಾರೆ. ‘ಸಾತ್ವಿಕಂ ಶಿವಂ’-ಇವರ ನಿರ್ಮಾಣದ ವಿಶೇಷ ನೃತ್ಯರೂಪಕ.

ತಮಿಳುನಾಡಿನಾದ್ಯಂತ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿ,ತಿರುಪತಿಯಲ್ಲಿ ನಾದನೀರಾಜನಂ ಮುಂತಾದ ನೂರಾರು ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ ಹಿರಿಮೆ ಇವರದು. ‘ನೃತ್ಯ ಶಿರೋಮಣಿ ಮತ್ತು ನಾಟ್ಯಮಣಿ’ ಪ್ರಶಸ್ತಿಗಳನ್ನು ಪಡೆದಿರುವ ಇವರದು ಸುಖೀಕುಟುಂಬ. ಉನ್ನತಹುದ್ದೆಯಲ್ಲಿರುವ ಪತಿ ದಿನೇಶ್ ಕುಮಾರ್ ಸಾಫ್ಟ್ ವೇರ್ ಕಂಪೆನಿಯೊಂದರ ‘ಉಪಾಧ್ಯಕ್ಷರು’, ಹಿರಿಮಗ ಪ್ರಣವ್, ಇಂಜಿನಿಯರಿಂಗ್ ವಿದ್ಯಾರ್ಥಿ, ಕಿರಿಮಗ ಪ್ರತೀಕ್ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾನೆ.   

Related posts

ಅಚ್ಚ ಕೂಚಿಪುಡಿ ನೃತ್ಯಪ್ರತಿಭೆ ದೀಪಾ ನಾರಾಯಣನ್

YK Sandhya Sharma

ಪರಿಪೂರ್ಣ ನೃತ್ಯಗುರು ರಾಧಾ ಶ್ರೀಧರ್

YK Sandhya Sharma

ಬಹುಮುಖ ಪ್ರತಿಭೆಯ ನೃತ್ಯ ಕಲಾವಿದೆ ಕಲಾವತಿ

YK Sandhya Sharma

2 comments

Dr.RadhikaRanjini February 13, 2020 at 4:57 pm

ಸೂಪರ್ ಚೆನ್ನಾಗಿ ಚೆನ್ನಾಗಿ ಮೂಡಿ ಬಂದಿದೆ ಸಂಧ್ಯಾ ಮೇಡಂ

Reply
YK Sandhya Sharma February 13, 2020 at 8:16 pm

Thank you very much dear Radhika Ranjini. ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ. ಸಂಧ್ಯಾ ಪತ್ರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಲೇಖಕಿಯರಲ್ಲಿ ಹಂಚಿಕೊಳ್ಳಿ.

Reply

Leave a Comment

This site uses Akismet to reduce spam. Learn how your comment data is processed.