Image default
Dancer Profile

ಮನೋಜ್ಞ ಅಭಿನಯದ ನೃತ್ಯ ಕಲಾವಿದೆ ಧರಣಿ ಕಶ್ಯಪ್

ವೇದಿಕೆಯ ಮೇಲೆ `ಮಂಡೋದರಿ ಕಲ್ಯಾಣ’  ನೃತ್ಯರೂಪಕದಲ್ಲಿ ರಾವಣನ ವಿರೋಚಿತ ನಡೆ, ಹುರಿಗೊಳಿಸಿದ ಮೀಸೆಯನ್ನು ತೀಡುತ್ತ ಇಡುವ ಗಂಭೀರ ಹೆಜ್ಜೆಗಳ ಪೌರುಷ ಅಭಿವ್ಯಕ್ತಿಯಲ್ಲಿ `ಸೈ’ಎನಿಸಿಕೊಂಡ ಪರಿಣತ ನೃತ್ಯ ಕಲಾವಿದೆ ಧರಣಿ ಟಿ. ಕಶ್ಯಪ್. `ನವ ಜನಾರ್ಧನ ಪಾರಿಜಾತಂ’ ನ ಭಾಮಾಕಲಾಪದಲ್ಲಿ ಕೃಷ್ಣನ  ಮನಸೂರೆಗೊಂಡ ಅತಿಚೆಲುವೆ, ಸತ್ಯಭಾಮಳಾಗಿ ತಮ್ಮ ಲಾಸ್ಯಭರಿತ ಬಳುಕು ನಡೆಯಿಂದ, ಸುಳಿಮಿಂಚಿನ ಕಣ್ಣೋಟದಿಂದ ಮಂತ್ರಮುಗ್ಧವಾಗಿಸುವ ಅಭಿನಯ ಚತುರೆ. ಭರತನಾಟ್ಯ ಹಾಗೂ ಕುಚುಪುಡಿ, ಕಥಕ್ ನೃತ್ಯಶೈಲಿಗಳಲ್ಲಿ ಪರಿಣತಿ ಪಡೆದಿರುವ ಈಕೆ, ಪುರುಷ ಪಾತ್ರದ ಪರಾಕ್ರಮ ಮನಮುಟ್ಟುವಂತೆ ಅಭಿವ್ಯಕ್ತಿಸಿ ಮನಸೂರೆಗೊಳ್ಳುವಂತೆ, ಅಪ್ಪಟ ಹೆಣ್ಣಾಗಿ ತಮ್ಮ ಮನೋಹರ ವಯ್ಯಾರದಿಂದ ಶೃಂಗಾರ ಭಾವನೆಯನ್ನೂ ಚಿಮ್ಮಿಸಲೂ ಸಮರ್ಥರು. ನವರಸ ಭಾವಗಳ ಅರ್ಪಣೆಯಲ್ಲಿ ತಾವೊಬ್ಬ ಉತ್ತಮ ಅಭಿನೇತ್ರಿ ಹಾಗೂ ನೃತ್ಯ ಕಲಾವಿದೆ ಎಂಬುದನ್ನು ಸಾಬೀತುಪಡಿಸಬಲ್ಲ ಶಕ್ತ ನಾಟ್ಯಗುರು ಧರಣಿ ಕಶ್ಯಪ್.

ಬಾಲ್ಯದಿಂದಲೂ ನೃತ್ಯದ ಬಗ್ಗೆ ಅತೀವ ಅಭೀಪ್ಸೆ ತಳೆದ ಇವರು ಕಾಲಿಗೆ ಗೆಜ್ಜೆ ಕಟ್ಟಿದ್ದು ಎಂಟರ ಎಳವೆಯಲ್ಲೇ. ವಿಶೇಷವಾಗಿ ಕುಚುಪುಡಿ ನೃತ್ಯದ ಬಗ್ಗೆ ವಿಶೇಷ ಒಲವುಳ್ಳ ಧರಣಿ, ಮೊದಲು ಯು.ಕೆ. ಅರುಣ್ ಮತ್ತು ಸವಿತಾ ದಂಪತಿಗಳಲ್ಲಿ  ಭರತನಾಟ್ಯವನ್ನು, ನಂತರ ತೆಲಂಗಾಣದ ರಾಜೇಶ್ವರಿ ಹಾಗೂ ಸುನಂದಾದೇವಿಯವರಲ್ಲಿ ಕುಚುಪುಡಿ ನೃತ್ಯಶಿಕ್ಷಣ ಪಡೆದರು. ಮುಂದೆ ಕಥಕ್ ನೃತ್ಯಕ್ಷೇತ್ರದ ಪ್ರಖ್ಯಾತ ಗುರು ಮಾಯಾರಾವ್ ಅವರಲ್ಲಿ ಕಥಕ್ ನೃತ್ಯಾಭ್ಯಾಸ. ಕರ್ನಾಟಕ ಸರ್ಕಾರದ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳಲ್ಲಿ ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ,  1983 ರಲ್ಲಿ `ರಂಗಪ್ರವೇಶ’ ಮಾಡಿ ವಿದ್ಯುಕ್ತವಾಗಿ ನೃತ್ಯರಂಗಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಇಂದಿನವರೆಗೂ, ಸತತವಾಗಿ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಲೇ ಬಂದಿರುವುದು ಇವರ  ಹೆಗ್ಗಳಿಕೆ.

`ಅರುಣ ಕಲಾವಿದರು’ ನೃತ್ಯ ತಂಡದಲ್ಲಿ ಸೇರ್ಪಡೆಗೊಂಡ ಇವರು, ಕೆಲವು ಕಾಲ ತಂಡದ ಹಲವಾರು ವಿವಿಧ ನೃತ್ಯರೂಪಕಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದರು. ನೃತ್ಯದ ಪಟ್ಟುಗಳೊಂದಿಗೆ ಅಭಿನಯದ ಅನುಭವವನ್ನೂ ಗಳಿಸಿಕೊಂಡ ನಂತರ ೧೯೯೦ ರಲ್ಲಿ ತಮ್ಮದೇ ಆದ `ನಾಟ್ಯ ನಿನಾದ ಅಕಾಡೆಮಿ ’ ಸಂಸ್ಥೆಯನ್ನು ಪ್ರಾರಂಭಿಸಿ ಮೂರೂವರೆ ದಶಕಗಳೇ ಸಂದಿವೆ. ಹೆಸರಿಗೆ ತಕ್ಕಂತೆ ಅನ್ವರ್ಥಕನಾಮರಾದ ಧರಣಿ, ಸಹನೆಗೆ, ಮಾತೃ ವಾತ್ಸಲ್ಯಕ್ಕೆ ಪ್ರತೀಕರಾಗಿ,ನೂರಾರು ಮಕ್ಕಳಿಗೆ ಶ್ರದ್ಧೆ-ಪ್ರೀತಿಗಳಿಂದ  ನೃತ್ಯ ಕಲಿಸುತ್ತ , ಆ ಮಕ್ಕಳ ಪ್ರತಿಭೆಗೆ ಸಾಕಷ್ಟು ವೇದಿಕೆಗಳನ್ನು ಕಲ್ಪಿಸುತ್ತ, ಜೊತೆಯಲ್ಲಿ ತಾವೂ ಅನೇಕ ನೃತ್ಯೋತ್ಸವಗಳಲ್ಲಿ ನೃತ್ಯ ಕಾರ್ಯಕ್ರಮ ನೀಡುತ್ತ ನಾಟ್ಯರಂಗಕ್ಕೆ ಜೀವನ ಅರ್ಪಿಸಿಕೊಂಡ ಅತ್ಯಂತ ಪ್ರಾಮಾಣಿಕ ನಿಲುವಿನ ಬದ್ಧತೆಯುಳ್ಳ ಶ್ರಮಜೀವಿ ಎಂಬುದು ಸ್ತುತ್ಯಾರ್ಹ ಸಂಗತಿ..

ಪ್ರತಿವರ್ಷ `ನಾಟ್ಯ ನಿನಾದ ಅಕಾಡೆಮಿ’ ಯಿಂದ  ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಹೊಸ ಹೊಸ  ಕೃತಿಗಳಿಗೆ ಅನುಪಮವಾಗಿ ನೃತ್ಯ ಸಂಯೋಜಿಸಿ ರಂಗಪ್ರಯೋಗ ನಡೆಸುವುದು ಇವರ ಪರಿಪಾಠ. ಇದರಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಹೊರಗಿನ ಇತರ ಎಲ್ಲ ನೃತ್ಯಕಲಾವಿದರಿಗೂ ಸಮಾನ ಅವಕಾಶ ನೀಡುತ್ತ ಬಂದಿರುವುದು ಇವರ ಅಗ್ಗಳಿಕೆ. ನೃತ್ಯ ಸ್ಪರ್ಧೆ ಏರ್ಪಡಿಸಿ ಅರ್ಹರನ್ನು ಪ್ರೋತ್ಸಾಹಿಸುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇವರ ಸಂಯೋಜನೆಯ ವಿಶೇಷ  ನೃತ್ಯರೂಪಕಗಳೆಂದರೆ, ಅಷ್ಟಲಕ್ಷ್ಮಿ ವೈಭವ, ತ್ರಿಶಕ್ತಿ, ಮಂಡೋದರಿ ಕಲ್ಯಾಣ, ಶ್ರೀ ಕೃಷ್ಣ ಪಾರಿಜಾತ, ದಶಾವತಾರ, ಮುಂತಾದವು ಹೆಸರು ಪಡೆದಿವೆ. ಅನ್ವೇಷಕ ಮನಸ್ಸಿನ ಧರಣಿ, ಸಾಕಷ್ಟು ಹೊಸ ಪ್ರಯೋಗಗಳಿಗೆ ಅನುವು ಮಾಡಿಕೊಟ್ಟು , ಹೊಸಪರಿಕಲ್ಪನೆಯ ಕಾರ್ಯಕ್ರಮಗಳನ್ನು ರೂಪಿಸಿ ಭಾರತೀಯ ಪರಂಪರೆಯನ್ನು ಹೊಸ ಆಲೋಚನೆಗಳೊಂದಿಗೆ ಬೆಸೆಯುವುದು ಅವರ ಮನೋಗತ.

ರಾಜ್ಯಾದ್ಯಂತ ಮಾತ್ರವಲ್ಲದೆ, ವಿದೇಶಗಳಲ್ಲೂ ತಮ್ಮ ಪ್ರತಿಭೆಯನ್ನು ಪಸರಿಸಿ, ಸಾಕಷ್ಟು ಪ್ರಶಂಸನೀಯ ಕಾರ್ಯಕ್ರಮಗಳನ್ನಿತ್ತು, ಕಲಾರಸಿಕರು ಹಾಗೂ ವಿಮರ್ಶಕರ ಮೆಚ್ಚುಗೆ ಪಡೆದಿದ್ದಾರೆ. ಅವರು ನೀಡಿರುವ ಕಾರ್ಯಕ್ರಮಗಳಲ್ಲಿ ಮುಖ್ಯವಾದುವು, ಹಂಪಿ, ಪಟ್ಟದಕಲ್ಲು, ಕದಂಬ, ಕರಾವಳಿ, ನಾದನೀರಾಂಜನ ತಿರುಪತಿ,ಕೇರಳದ ಸೂರ್ಯ ಉತ್ಸವ , ಮೌಂಟ್ ಅಬು, ಹೈದರಾಬಾದ್ , ಬುಡೋಗಲಾ, ಶಾರ್ಜಾ ಮತ್ತು ಜರ್ಮನಿಯ ಅಂತರರಾಷ್ಟ್ರೀಯ ಉತ್ಸವಗಳು ಮುಂತಾದವು.

ನೃತ್ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕೆಗಾಗಿ ಅನೇಕ ಕಾರ್ಯಶಿಬಿರ, ಪ್ರಾತ್ಯಕ್ಷಿಕೆಗಳನ್ನು ನಡೆಸುವ ಧರಣಿ, ಕರ್ನಾಟಕ ಸರ್ಕಾರ ನಡೆಸುವ ನೃತ್ಯ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆ ರಚನೆ, ಮೌಲ್ಯಮಾಪನ ಮತ್ತು ಪರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವುದು ಅವರ ವಿದ್ಯಾ ಪ್ರೌಢಿಮೆಗೆ ಸಾಕ್ಷಿ. ಅವರ ಪ್ರತಿಭೆಗೆ ಹಲವಾರು ಮನ್ನಣೆಗಳೂ ದೊರಕಿವೆ. ನಾಟ್ಯ ಮಯೂರಿ, ಪರ್ಲ್ ಆಫ್ ಬ್ಯಾಂಗಳೂರ್, ಕರ್ನಾಟಕ ನಾಟ್ಯರತ್ನ, ನವರಸ ನಾಟ್ಯ ಶಿರೋಮಣಿ ಬಿರುದುಗಳೊಂದಿಗೆ ನಾಡಪ್ರಭು ಕೆಂಪೇಗೌಡ  ಪ್ರಶಸ್ತಿ ದೊರಕಿರುವುದು ಗಮನೀಯ.

Related posts

ಬದ್ಧತೆಯ ನಾಟ್ಯಗುರು-ಕಲಾವಿದೆ ಫಣಿಮಾಲಾ

YK Sandhya Sharma

ಅನುಪಮ ಒಡಿಸ್ಸಿ ನೃತ್ಯಕಲಾವಿದೆ ಸರಿತಾ ಮಿಶ್ರ

YK Sandhya Sharma

ಸರ್ವಕಲಾ ಸಂಪನ್ನೆ ನೃತ್ಯ ಕಲಾವಿದೆ ಮಾನಸ ಕಂಠಿ

YK Sandhya Sharma

Leave a Comment

This site uses Akismet to reduce spam. Learn how your comment data is processed.