Image default
Dancer Profile

ಪ್ರತಿಭಾನ್ವಿತ ನಾಟ್ಯಚತುರ ಗುರುರಾಜ ವಸಿಷ್ಠ

ನೋಡಲು ಸುಂದರ, ಆಜಾನುಬಾಹು, ಭಾವಾಭಿವ್ಯಕ್ತಿಯ ಹೊಳಪಿನ ಕಂಗಳ ನೃತ್ಯಕಲಾವಿದ ವಿದ್ವಾನ್ ಗುರುರಾಜ ವಸಿಷ್ಠ ಪ್ರತಿಭಾವಂತ ಯುವಗುರು, ನಟುವನ್ನಾರ್ ಕೂಡ. ಅರಳುಹುರಿದಂತೆ ಸ್ಫುಟವಾಗಿ ಮಾತನಾಡುವ  ಲವಲವಿಕೆಯ ತರುಣ, ಈಗಾಗಲೇ ದೇಶಾದ್ಯಂತ ಅಸಂಖ್ಯಾತ ನೃತ್ಯಪ್ರದರ್ಶನಗಳನ್ನು ನೀಡಿರುವ ಭರವಸೆಯ ನೃತ್ಯಪಟು. ಕರ್ನಾಟಕ ಸರ್ಕಾರ ನಡೆಸುವ ‘ವಿದ್ವತ್’ ನೃತ್ಯಪರೀಕ್ಷೆಯಲ್ಲಿ ಇಡೀ ಕರ್ನಾಟಕಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದ ಅಗ್ಗಳಿಕೆ ಇವನದು. ಈ ಚಿಕ್ಕವಯಸ್ಸಿನಲ್ಲಿ ಗುರುರಾಜ್ ನೀಡಿರುವ ನೃತ್ಯ ಕಾರ್ಯಕ್ರಮಗಳ ಪಟ್ಟಿ , ಪಡೆದಿರುವ ಅನೇಕ ಪ್ರಶಸ್ತಿ-ಸನ್ಮಾನಗಳು ಹಾಗೂ ಮುನ್ನಡೆಯುತ್ತಿರುವ ಸಾಧನೆಯ ಪಥದ ದಾಪುಗಾಲು ಕಂಡರೆ ಬೆರಗು ಮೂಡುತ್ತದೆ !

ಮೂಲತಃ ಮೈಸೂರಿನವರಾದ ಕಲಾಪೋಷಕ ವಿ. ನಾಗೇಂದ್ರ ಹಾಗೂ ಸುಮಾ ನಾಗೇಂದ್ರ ಅವರದು ಸಂಗೀತ-ಕಲೆಗಳಿಗೆ ಆಗರವಾದ ಮನೆತನ. ಪುಟ್ಟಬಾಲಕ ಗುರುರಾಜನಲ್ಲಿದ್ದ ನೃತ್ಯಾಸಕ್ತಿಯನ್ನು ಗುರುತಿಸಿದ ಹೆತ್ತವರು ಭರತನಾಟ್ಯ ಕಲಿಯಲು ಅವನನ್ನು ಮೊದಲು ರಂಜಿನಿಯಲ್ಲಿ ಅನಂತರ ತನುಜಾರಾಜ್ ಬಳಿ ಸೇರಿಸಿದರು. ನಂತರ ಸೀತಾ ಗುರುಪ್ರಸಾದರಲ್ಲಿ ನಾಟ್ಯಶಿಕ್ಷಣ ಮುಂದುವರಿಸಿದರು. ನೃತ್ಯದ ಬಗ್ಗೆ ಅದಮ್ಯ ಒಲವಿದ್ದ ಇವನು,  ಬಹು ನಿಷ್ಠೆಯಿಂದ ಅಭ್ಯಾಸ ಮಾಡಿ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳಿಂದ ಜಯಶೀಲನಾದ. ನೃತ್ತಾಭಿನಯದಲ್ಲಿ ಪ್ರಾವೀಣ್ಯ ಸಾಧಿಸುವತ್ತ ದಾಪುಗಾಲಿಟ್ಟ ಗುರು, ಜೊತೆಜೊತೆಯಲ್ಲಿ ಅನೇಕ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿ ಕಲಾರಸಿಕರ ಹಾಗೂ ವಿಮರ್ಶಕರಿಂದ ಪ್ರಶಂಸೆ ಗಳಿಸಿದ. ಮುಂದೆ, ವಿದುಷಿ ಕೆ. ಬೃಂದಾ ಅವರಲ್ಲಿ ಹೆಚ್ಚಿನ ನಾಟ್ಯಾಭ್ಯಾಸ ನಡೆಯಿತು. ವಿದ್ವತ್ ಪೂರ್ವ ಮತ್ತು ವಿದ್ವತ್ ಪರೀಕ್ಷೆಯಲ್ಲೂ ಉತ್ತಮ ಯಶಸ್ಸು ಅವನದಾಯಿತು. ಸಂಗೀತವನ್ನೂ ಕಲಿತು ತಾಳ-ಲಯಜ್ಞಾನವನ್ನು ಪಡೆದುಕೊಂಡ.

ಗುರುಗಳು ಕಲಿಸಿದ್ದನ್ನು ಬಹುಬೇಗ ಕಲಿಯುತ್ತಿದ್ದ ಚುರುಕುಮತಿ ಗುರುರಾಜನಿಗೆ ಹಲವಾರು ನೃತ್ಯ ವೇದಿಕೆಗಳು ಒದಗಿದ್ದು ತಾನಾಗೇ ಒಲಿದುಬಂದದ್ದು ಅವನ ಅದೃಷ್ಟ. ಬಾಲಕನಾಗಿದ್ದಾಗಲೇ ‘ಚಿಗುರು’ ಮತ್ತು ‘ಯುವಸೌರಭ’ ಕಾರ್ಯಕ್ರಮ, ಚಿಣ್ಣರ ಹಬ್ಬ, ಅಖಿಲ ಭಾರತ ಮಕ್ಕಳಮನೆ ಮುಂಬೈ ಏರ್ಪಡಿಸಿದ್ದ ಕಲಾ ಪ್ರತಿಭೋತ್ಸವ,  ಬೆಂಗಳೂರು ಹಬ್ಬದಲ್ಲಿ ಭಾಗವಹಿಸುವ ಅವಕಾಶ ಲಭಿಸಿತು. ‘ಇಸ್ಕಾನ್ ಹೆರಿಟೇಜ್ ಫೆಸ್ಟ್’ನಲ್ಲಿ, ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ, ಸಪ್ತಗಿರಿ ಟ್ರಸ್ಟ್ ಮುಂತಾದ ಅನೇಕ ಸಂಸ್ಥೆಗಳು ನಡೆಸಿದ ಭರತನಾಟ್ಯ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳು ಇವನಿಗೇ ಕಟ್ಟಿಟ್ಟ ಬುತ್ತಿ. ಆಕಾಶವಾಣಿಯ ನಾಟಕಗಳಲ್ಲಿ ಪಾತ್ರ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯಿಂದ ಭರತನಾಟ್ಯದ ಶಿಷ್ಯವೇತನ ಹಾಗೂ ಭಾರತ ಸರ್ಕಾರದ ಸಿ.ಸಿ.ಆರ್.ಟಿ.ವತಿಯಿಂದ ‘ಯಂಗ್ ಆರ್ಟಿಸ್ಟ್ ಸ್ಕಾಲರ್ಷಿಪ್’ ಪಡೆಯುವ ಅದೃಷ್ಟ. ದೂರದರ್ಶನದ ‘’ಬಿ’’ ಗ್ರೇಡ್ ಆರ್ಟಿಸ್ಟ್ ಆಗಿರುವ ಗುರು, ಅನೇಕ ಟಿವಿ ವಾಹಿನಿಗಳು ಮತ್ತು ಚಂದನದಲ್ಲಿ ಅನೇಕ ನೃತ್ಯಕಾರ್ಯಕ್ರಮಗಳನ್ನು ನೀಡಿದ್ದಾನೆ. .

ಓದಿನಲ್ಲೂ ಮುಂದಿದ್ದ ಗುರು ಸಾಮಾನ್ಯಜ್ಞಾನ ಪರೀಕ್ಷೆಯಲ್ಲೂ ಕರ್ನಾಟಕ ಪ್ರತಿಭಾ ಅಕಾಡೆಮಿ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ‘ಡಿಸ್ಟಿಂಕ್ಷನ್ ‘ ಪಡೆದ ಹೆಮ್ಮೆ ಅವನದು. ಶಾಲಾ-ಕಾಲೇಜಿನ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾದುದಲ್ಲದೆ, ದಯಾನಂದ ಸಾಗರ್ ಕಾಲೇಜಿನಿಂದ ‘ಇನ್ಸ್ಟ್ರುಮೆಂಟೆಷನ್‘ನಲ್ಲಿ ಎಂಜಿನಿಯರಿಂಗ್ ಪದವಿ ಲಭ್ಯ. ಪ್ರಸ್ತುತ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗ. ಇಂಜಿನಿಯರಾದರೂ ಈ ಹುಡುಗನಿಗೆ ನೃತ್ಯದ ಸೆಳವು ಇನ್ನೂ ಹೆಚ್ಚಾಗುತ್ತಲೇ ಇದೆ. ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡ.  ಜೊತೆಗೆ ನಿತ್ಯ ನಿರಂತರ ನೃತ್ಯ ಪ್ರದರ್ಶನ ನಡೆದಿದೆ. ಐ.ಸಿ.ಸಿ.ಆರ್, ಮೈಸೂರು ದಸರಾ ಮಹೋತ್ಸವ, ನವರಾತ್ರಿ ಉತ್ಸವ, ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ, ಹಂಪಿ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ ಮುಂತಾದ ನೂರಾರು ಪ್ರತಿಷ್ಠಿತ ವೇದಿಕೆಗಳಲ್ಲದೆ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ  ನರ್ತಿಸುವ ಭಾಗ್ಯ ಇವನದಾಗಿದೆ.

ಯುವಸಾಧಕನ ಪ್ರತಿಭೆಗೆ ಸಂದ ಸನ್ಮಾನ-ಪ್ರಶಸ್ತಿಗಳು ಅನೇಕಾನೇಕ. ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಡಾ. ಗಂಗೂಬಾಯಿ ಹಾನಗಲ್ಲರಿಂದ ಕಲಾಕಣ್ಮಣಿ, ಬಾಲರತ್ನ, ನೆಹರೂ ಯುವಕೇಂದ್ರದಿಂದ ಸದ್ಭಾವನಾ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರುನಾಡ ಜ್ಯೋತಿ, ಕಲಾ ಪ್ರತಿಭಾಸಿರಿ,ರತ್ನ ಮುಂತಾಗಿ, ಪಟ್ಟಿ ಉದ್ದಕ್ಕೆ ಬೆಳೆಯುತ್ತ ಹೋಗುತ್ತದೆ. ಸುಮಾರು ಎರಡು ದಶಕಗಳ ನಾಟ್ಯಾನುಭಾವವುಳ್ಳ ಗುರುರಾಜ್, ತಮ್ಮದೇ ಆದ ‘ ಸುಧೀಂದ್ರ ನೃತ್ಯ ಕಲಾನಿಕೇತನ’ದಲ್ಲಿ ನೃತ್ಯಾಕಾಂಕ್ಷಿಗಳಿಗೆ ನಾಟ್ಯವನ್ನು ಕಲಿಸುತ್ತಿದ್ದಾರೆ.

Related posts

ಉತ್ತಮ ನೃತ್ಯಕಲಾವಿದೆ ವಿದುಷಿ ಸ್ಮಿತಾ ಪ್ರಕಾಶ್ ಸಿರ್ಸಿ

YK Sandhya Sharma

ಅನುಪಮ ಭರತನಾಟ್ಯ ಸಾಧಕಿ ರೂಪಾ ಶ್ಯಾಮಸುಂದರ

YK Sandhya Sharma

ಬಹುಮುಖ ಪ್ರತಿಭೆಯ ನೃತ್ಯನಿಪುಣೆ ರೇಖಾ ದಿನೇಶ್ ಕುಮಾರ್

YK Sandhya Sharma

Leave a Comment

This site uses Akismet to reduce spam. Learn how your comment data is processed.