Image default
Dancer Profile

ನಾಟ್ಯ- ಯೋಗ ಕಲಾಸಾಧಕಿ ಜ್ಯೋತಿ ಪಟ್ಟಾಭಿರಾಮ್

ನಾಟ್ಯ ಕಲಾವಿಶಾರದೆ, ನಾಟ್ಯಾಚಾರ್ಯ ಶ್ರೀಮತಿ ಜ್ಯೋತಿ ಪಟ್ಟಾಭಿರಾಮ್ ಅವರದು ನೃತ್ಯಕ್ಷೇತ್ರದ ಸಾಧಕರ ಪಟ್ಟಿಯಲ್ಲಿ ಮಹತ್ವದ ಹೆಸರು.. ಸಾವಿರಾರು ವಿದ್ಯಾರ್ಥಿಗಳನ್ನು ನೃತ್ಯಪಟುಗಳನ್ನಾಗಿ ತಯಾರು ಮಾಡಿದ ಹೆಮ್ಮೆ-ಧನ್ಯತಾಭಾವ ವ್ಯಕ್ತಪಡಿಸುವ ಈಕೆ ಸರಳ ನಡೆ-ನುಡಿಯ ನಿಗರ್ವಿ. ಭರತನಾಟ್ಯ-ಯೋಗ ಹಾಗೂ ಆಧ್ಯಾತ್ಮಿಕತೆಗಳ ಸಾಂಗತ್ಯದ ಅಪರೂಪದ ಕಲಾವಿದೆಯಾದ ಇವರು ವೃತ್ತಿಯಲ್ಲಿ ಪ್ರಾಧ್ಯಾಪಕಿಯಾದರೆ , ಪ್ರವೃತ್ತಿಯಿಂದ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ ಹಾಗೂ ಆಧ್ಯಾತ್ಮಿಕ ತಳಹದಿಯ ಮೇಲೆ ಧ್ಯಾನ-ಯೋಗ-ಶ್ರೀವಿದ್ಯಾ ಸಾಧನೆಗಳ ಬೆಳಕಿನಲ್ಲಿ ನೃತ್ಯವನ್ನು ಆತ್ಮವಿದ್ಯೆಯಾಗಿ ಕಲಿಸುತ್ತಿರುವ ನೃತ್ಯಗುರು.

            ಮೂರೂವರೆ ದಶಕಗಳಿಗೂ ಮೀರಿ, ನೃತ್ಯಕ್ಷೇತ್ರದಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಂಡಿರುವ ಜ್ಯೋತಿಯವರು ಶಿವಮೊಗ್ಗದವರು. ಅಜ್ಜಿಯ ಒತ್ತಾಸೆಯಿಂದ ನಾಟ್ಯಗುರು ಭಾರತಿ-ಮಣಿಯವರಲ್ಲಿ ಹತ್ತುವರ್ಷಗಳಕಾಲ ಭರತನಾಟ್ಯವನ್ನು ಕಲಿತು ಅನಂತರ ಓಂಕಾರ್ ಅವರಲ್ಲಿ ಮುಂದುವರಿಸಿದರು. ಬಿ.ಎ. ಪದವಿಯನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ (ಇಂಗ್ಲಿಷ್) ಪದವಿ ಪಡೆದರು. ಜ್ಯೋತಿಯ ನೃತ್ಯ ಕಲಿಕೆಯ ಆಸೆ ಇನ್ನೂ ಇಂಗಿರಲಿಲ್ಲ. ಶಾಂತಲಾ ಪ್ರಶಸ್ತಿ ವಿಜೇತ ಮುರಳಿಧರರಾವ್ ಅವರ ಮುಂದಿನ ಗುರುವಾದರು. ಹಗಲಿರುಳೆನ್ನದೆ ನಾಲ್ಕೈದು ವರ್ಷಗಳು ವಿದ್ಯಾಸಾಧನೆಯಲ್ಲಿ ತೊಡಗಿಕೊಂಡರು. ನೃತ್ಯಶಾಸ್ತ್ರದ ಬಗ್ಗೆ ಅತೀವ ಆಸಕ್ತಿ ಇದ್ದುದರಿಂದ ಅದನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿದರು. ಅಷ್ಟರಲ್ಲಿ ಇಂಗ್ಲಿಷ್ ಅಧ್ಯಾಪನವೃತ್ತಿ ಕೈಬೀಸಿ ಕರೆಯಿತು. ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕಿಯಾಗಿ ಸರ್ಕಾರಿ ವೃತ್ತಿಗೆ ಸೇರ್ಪಡೆಯಾದರೂ ನೃತ್ಯದ ಸೆಳೆತ ಬಿಡಲಿಲ್ಲ. ಮನೆಯಲ್ಲೇ ಕೆಲವು ಮಕ್ಕಳಿಗೆ ನೃತ್ಯ ಕಲಿಸಲಾರಂಭಿಸಿದರು.  

ಮುಂದೆ  ಜ್ಯೋತಿ, `ಸಾಧನ ಸಂಗಮ’ ನಾಟ್ಯಸಂಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಶಿಷ್ಯರನ್ನು ತಯಾರು ಮಾಡಲು ಆರಂಭಿಸಿದ್ದು ಒಂದು ಆಸಕ್ತಿಕರ ಕಥೆ. ಅದು ಅವರ ಬದುಕಿನ ಒಂದು ದೊಡ್ಡ ತಿರುವೂ ಹೌದು!…ಯೋಗ ಕಲಿಯಲು ಹೋಗಿ ಅಂತರ ರಾಷ್ಟೀಯ ಖ್ಯಾತಿಯ, ಯೋಗಾಚಾರ್ಯ ಪಟ್ಟಾಭಿರಾಮ್ ಅವರ ಕೈ ಹಿಡಿದು ಅವರೊಂದಿಗೆ `ಸಾಧನಾ ಪಥ’ದಲ್ಲಿ ಸಾಗಿ ಸಾಧನೆ ಮಾಡಿದ್ದು ಇನ್ನೂ ಕುತೂಹಲಕರವಾದ ಘಟ್ಟ. ಈ `ಸಾಧನ ಸಂಗಮ’ ದಲ್ಲಿ ನೃತ್ಯ ಕೇಂದ್ರವನ್ನು ಸ್ಥಾಪಿಸಿ, ಬೆಂಗಳೂರಿನ ಬಸವೇಶ್ವರನಗರದ ಆಸಕ್ತರಿಗೆ, ಯೋಗ-ನೃತ್ಯ-ಸಂಗೀತ ಕಲೆ-ಆತ್ಮವಿದ್ಯೆಗಳ ಪ್ರಸಾರವನ್ನು, ಅತ್ಯಂತ ನಿಷ್ಠೆಯಿಂದ, ಶ್ರೀ ಪಟ್ಟಾಭಿರಾಮರ ಸಾಹಚರ್ಯದಲ್ಲಿ ಕೈಗೊಂಡರು.

ಕಳೆದ ಮೂರೂವರೆ ದಶಕಗಳಿಂದ ಜ್ಯೋತಿ, ತಮ್ಮದೇ ಆದ ಕೆಲವು ವಿಶಿಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಾ ನೃತ್ಯರಂಗಕ್ಕೆ ಸಲ್ಲಿಸುತ್ತಿರುವ ಸೇವೆ ಅಪಾರ. ತಮ್ಮಂಗಳದ `ರಂಗೋಪನಿಷತ್ ‘ ರಂಗಸ್ಥಳದಲ್ಲಿ `ನೃತ್ಯ ನಿರಂತರ’-ಎಂಬ ಕಾರ್ಯಕ್ರಮದ ಮೂಲಕ,ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿ ತಿಂಗಳೂ ಶಾಸ್ತ್ರೀಯ ನೃತ್ಯಪ್ರದರ್ಶನ ಏರ್ಪಡಿಸುತ್ತ ಬಂದಿದ್ದಾರೆ. `ಸಾಧನ ಸಂಗಮ’ದ ರಜತ ಮಹೋತ್ಸವದಲ್ಲಿ ೧೦೨ ವೇದಿಕೆ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮತ್ತು ೨೦೦೧ ರಿಂದ ನಿರಂತರವಾಗಿ ಶಾಸ್ತ್ರೀಯ ನೃತ್ಯೋತ್ಸವ `ಮುಕುಲ-ಯುಗಳ-ಬಹುಲ’ ನಡೆಸಿಕೊಂಡು ಬರುತ್ತಿರುವ ಸೇವೆ, ನೃತ್ಯರಂಗಕ್ಕೆ ಇವರಿತ್ತ ಬಹು ದೊಡ್ಡ ಕೊಡುಗೆ. ವೈಯಕ್ತಿಕವಾಗಿ ಜ್ಯೋತಿಯವರು ನೂರಾರು ಸೋಲೋ ನೃತ್ಯ ಪ್ರದರ್ಶನಗಳನ್ನು ದೇಶಾದ್ಯಂತ ಪ್ರಮುಖ ನೃತ್ಯೋತ್ಸವಗಳಲ್ಲಿ ನೀಡಿರುವರಲ್ಲದೆ, ಪ್ರತಿವರ್ಷ ಅಮೆರಿಕಾಗೆ ಭೇಟಿ ನೀಡುತ್ತ ಅಲ್ಲಿ, ಅನೇಕ ಉಪಯುಕ್ತ ನೃತ್ಯ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಉಪನ್ಯಾಸಗಳು ಮತ್ತು ಪ್ರದರ್ಶನಗಳನ್ನು ನೀಡುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ.  ಕೆನಡಾ ಮತ್ತು ಅಮೇರಿಕಾ ದೇಶದ ನ್ಯೂಜರ್ಸಿಯಲ್ಲಿ `ಸಾಧನ ಸಂಗಮ ಇಂಟರ್ನ್ಯಾಷನಲ್ ಸಂಸ್ಥೆ’ ಸ್ಥಾಪಿಸಿ, ವಿದೇಶಗಳಲ್ಲಿ ಯೋಗ-ನೃತ್ಯ ಮತ್ತು ಭಾರತೀಯ ಸಂಸ್ಕೃತಿಯ ಪ್ರಸಾರ ಕೈಗೊಂಡಿರುವುದು ನಿಜಕ್ಕೂ  ಶ್ಲಾಘ್ಯಾರ್ಹ ಮತ್ತು ಅಷ್ಟೇ ಮಹತ್ತರ ಕಾರ್ಯವೆನ್ನಬಹುದು.

            ಗುರು ಜ್ಯೋತಿಯವರದು ಸದಾ ಕ್ರಿಯಾಶೀಲ ಮನಸ್ಸು. ಹೊಸ ಪರಿಕಲ್ಪನೆ, ರೂಹುಗಳಿಗೆ ತೆರೆದುಕೊಂಡ ವ್ಯಕ್ತಿತ್ವ. ಅವರ ಸಂವೇದನೆಯಲ್ಲಿ ನೂರುಬಗೆಯ ಹುಡುಕಾಟ- ಅನ್ವೇಷಣೆಯಿರುವ ಕಾರಣ, ಅನೇಕ ಹೊಸ ಬಗೆಯ ವಿಶಿಷ್ಟ ನೃತ್ಯರೂಪಕಗಳನ್ನು ಸಂಯೋಜಿಸಿದ್ದಾರೆ, ಬೆಂಗಳೂರು-ದೂರದರ್ಶನಕ್ಕಾಗಿ ನಾಗನಂದಿನಿ, ಮಣಿಪುರದ ಮಾನಿನಿ ಮುಂತಾದ ಅನೇಕ ನೃತ್ಯರೂಪಕಗಳನ್ನು ನಿರ್ದೇಶಿಸಿದ್ದಾರೆ. ಇವರ ನೃತ್ಯರೂಪಕಗಳೆಲ್ಲ ಕನ್ನಡ ಭಾಷೆಯಲ್ಲೇ ಇರುವುದು ಮಾತ್ರವಲ್ಲದೆ, ನಮ್ಮ ಭಾರತೀಯ ಸಂಸ್ಕ್ರುತಿ ಪರಂಪರೆ, ಆಧ್ಯಾತ್ಮ, ಪ್ರಚಲಿತ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವ ರೂಪಕಗಳಾಗಿವೆ. ಅವುಗಳಲ್ಲಿ ಪ್ರಮುಖವಾದವು-` ವಿಶ್ವಾಮಿತ್ರ- ಗಾಯತ್ರೀ’, ` ಪ್ರೇಕ್ಷಾಗೃಹ’, `ಸಂಸ್ಕಾರ ರಾಮಾಯಣ’, ` ನವರಸ ದೇವಿ’, ` ನಾದಾಮೋದ’, ` ಗುರುಕುಲದಲ್ಲಿ ಶ್ರೀ ಕೃಷ್ಣ’, ` ವೃತ್ತಿ ವಿಲಾಸ’, ` ವಚನ ವೈಭವ’,`ಅಭಿಜ್ಞಾನ’,`ವೃತ್ತಿವಿಲಾಸ’ಮತ್ತು `ಕೃಷ್ಣಾರ್ಪಣ’ ಮುತಾದವು.

            ಹಿಮಾಲಯದ ಮಹಾನ್ ಯೋಗಿ ಸ್ವಾಮಿರಾಮರಿಂದ, ಶ್ರೀವಿದ್ಯಾ ಸಾಧನಾ ದೀಕ್ಷೆ ಪಡೆದು, ಪ್ರಸ್ತುತ ಅಂತರ್ರಾಷ್ಟ್ರೀಯ ಖ್ಯಾತಿಯ ಸಂಗೀತಜ್ಞ, ನೃತ್ಯಪರಿಣತ, ಗುರು ಮೈಸೂರು ರಾ. ಸತ್ಯನಾರಾಯಣರವರಲ್ಲಿ ಶ್ರೀವಿದ್ಯಾ ಸಾಧನೆ ಮಾಡುತ್ತಿರುವ ಇವರಿಗೆ ಹಲವಾರು ಉನ್ನತ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ `ಕರ್ನಾಟಕ ಕಲಾಶ್ರೀ’ . `ನಾಟ್ಯ-ಯೋಗ ಸರಸ್ವತಿ”,` ಭರತ ಪ್ರಶಸ್ತಿ’. `ಆರ್ಯಭಟ’ ಇಂಟರ್ ನ್ಯಾಷನಲ್ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿ-ಗೌರವ, ಸನ್ಮಾನಗಳು ಸಂದಿವೆ. ಜೊತೆಗೆ ಜ್ಯೋತಿಯವರು ಕೈಗೊಂಡಿರುವ  ಇನ್ನೊಂದು ಮಹತ್ಕಾರ್ಯವೆಂದರೆ ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರದ ಬಳಿ, ಕಣ್ವ ಜಲಾಶಯದ ಸಮೀಪ “ಸಾಧನ ಧಾಮ’’ ಆಶ್ರಮ ಸ್ಥಾಪಿಸಿ, ವಿಸ್ತಾರ ಪ್ರದೇಶದಲ್ಲಿ `ಭಾರತೀಯ ಗುರು ಪರಂಪರೆ’ಯ ಒಂದು ವಿಶಿಷ್ಟ ಗುರುಕುಲವನ್ನು ನಡೆಸಿಕೊಡು ಬರುತ್ತಿದ್ದಾರೆ. ಸುತ್ತಮುತ್ತಲ ಹಳ್ಳಿಯ ಮಕ್ಕಳಿಗೆ ಇಲ್ಲಿ ಉಚಿತ ಸಾರಿಗೆ ಮತ್ತು ಊಟ ನೀಡಿ ಎಲ್.ಕೆ.ಜಿಯಿಂದ ಹಿಡಿದು ಹತ್ತನೆಯ ತರಗತಿಯವರೆಗೆ ವಿದ್ಯಾಭ್ಯಾಸವಲ್ಲದೆ, ಯೋಗ-ಧ್ಯಾನ-ಸಾಧನೆಗಳನ್ನು ಕಲಿಸಲಾಗುತ್ತಿದೆ. ಇದರ ಸದುಪಯೋಗವನ್ನು ನಮ್ಮ ದೇಶದವರು ಮಾತ್ರವಲ್ಲದೆ ವಿದೇಶದವರೂ ಸಾಕಷ್ಟು ಸಂಖ್ಯೆಯಲ್ಲಿ ಪಡೆದುಕೊಳ್ಳುತ್ತಿರುವುದು ವಿಶಿಷ್ಟ ಸಂಗತಿ. ಇವರೆಲ್ಲ ಚಟುವಟಿಕೆಗಳಿಗೆ ಬೆಂಬಲವಾಗಿರುವ ಇವರ  ಮಗಳು ಸಾಧನಶ್ರೀ ಕೂಡ ಯಶಸ್ವೀ ವೈದ್ಯಳಾಗಿದ್ದುಕೊಂಡು ಉತ್ತಮ ನೃತ್ಯಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ.

Related posts

ಪ್ರತಿಭಾ ಸಂಪನ್ನೆ ನೃತ್ಯಕಲಾವಿದೆ ಡಾ. ಸಿಂಧೂ ಪುರೋಹಿತ್

YK Sandhya Sharma

ಪ್ರಯೋಗಶೀಲ ಕಥಕ್ ನೃತ್ಯಗಾರ್ತಿ ವೀಣಾ ಭಟ್

YK Sandhya Sharma

ನೃತ್ಯಾತ್ಮ ಕಲಾವಿದೆ- ಲಕ್ಷ್ಮಿ ರೇಖಾ ಅರುಣ್

YK Sandhya Sharma

Leave a Comment

This site uses Akismet to reduce spam. Learn how your comment data is processed.