Image default
Dance Reviews

ನಾಟ್ಯ-ಯೋಗ ಚತುರೆ ನವ್ಯಾ ದೇಸಾಯಿ

ಈಚಿನ ದಿನಗಳಲ್ಲಿ ನೃತ್ಯಕಲೆಗೆ ಅತ್ಯಂತ ಪ್ರೋತ್ಸಾಹ ಹಾಗೂ ವಿಪುಲ ವೇದಿಕೆಗಳಿವೆ. ನಾಟ್ಯ ವಿದ್ಯೆಯನ್ನು ಅಷ್ಟೇ ಶಾಸ್ತ್ರೋಕ್ತವಾಗಿ ನಿಷ್ಠೆಯಿಂದ ಕಲಿಸುವ ಅನೇಕ ನಾಟ್ಯಗುರುಗಳೂ ಇರುವುದು ಸಾಂಸ್ಕೃತಿಕ ಲೋಕದ ಬೆಳವಣಿಗೆಗೆ ಉತ್ತೇಜಕರವಾಗಿದೆ. ಈ ಸಾಲಿನಲ್ಲಿ `ಶಿವಪ್ರಿಯ ಸ್ಕೂಲ್ ಆಫ್ ಡ್ಯಾನ್ಸ್’  ಸಂಸ್ಥೆಯ ಹೆಸರು ವಿಖ್ಯಾತವಾಗಿದೆ. ನಾಟ್ಯಗುರು ಡಾ. ಸಂಜಯ್ ಶಾಂತಾರಾಂ ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ಪ್ರಕಾರಗಳಲ್ಲಿ ನೈಪುಣ್ಯ ಪಡೆದಿದ್ದು, ಅವರ ಶಿಷ್ಯೆ ಕು.ನವ್ಯಾ ನಡೆಸಿಕೊಟ್ಟ `ನೃತ್ಯಾರಾಧನೆ’ ಯಲ್ಲಿ ಅವಳು ಪ್ರದರ್ಶಿಸಿದ ಹಲವು ಸುಮನೋಹರ `ಯೋಗ ಭಂಗಿ’ಗಳು ವಿಶೇಷವಾಗಿ ಗಮನಸೆಳೆದವು. ಮೊದಲಿನಿಂದ ಕಡೆಯವರೆಗೂ ಅನಾಯಾಸವಾಗಿ ಅಷ್ಟೇ ವೈಶಿಷ್ಟ್ಯಪೂರ್ಣವಾಗಿ ನರ್ತಿಸಿದ ಕಾರಣವಾಗಿ ಅವಳ ಸೃಜನಾತ್ಮಕ ನೃತ್ಯಶೈಲಿ, ಲಯಜ್ಞಾನ, ಪಾದರಸದ ಚಲನೆ,ಹಸನ್ಮುಖದ ಪ್ರಸ್ತುತಿ ಪ್ರಮುಖವೆನಿಸುತ್ತದೆ.

ಸತತ ಪರಿಶ್ರಮದಿಂದ ಕಲಿತ ನವ್ಯಳ ನೃತ್ಯ ನಿಷ್ಠೆ ಇತ್ತೀಚಿಗೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆದ ವಿಶಿಷ್ಟ ನೃತ್ಯಾರ್ಪಣೆಯ ಸುಮನೋಹರ ಪ್ರಸ್ತುತಿಯಿಂದ ಸುವ್ಯಕ್ತವಾಯಿತು. `ಪುಷ್ಪಾಂಜಲಿ’ ಯ ಪ್ರಥಮ ಹೆಜ್ಜೆಯಲ್ಲಿಯೇ ನವ್ಯಾ ತನ್ನ ಖಚಿತ ಹಸ್ತಮುದ್ರಿಕೆ, ಸುಂದರ ಶುದ್ಧ ನೃತ್ತ-ನೃತ್ಯಗಳಿಂದ ಕಲಾರಸಿಕರನ್ನು ಆಕರ್ಷಿಸಿದಳು. ಪ್ರಥಮವಂದಿತ ಗಣೇಶನನ್ನು ಹಲವಾರು ನವೀನ ಭಂಗಿಗಳಲ್ಲಿ ಸಾಕಾರಗೊಳಿಸಿ ತನ್ನ ಪ್ರತಿಭಾ ಪ್ರದರ್ಶನಗೊಳಿ ಸಿದಳು. ಅನಂತರ `ಜತಿಸ್ವರ’ ದ ಪ್ರಸ್ತುತಿಯಲ್ಲಿ ಹೊಸ ವಿನ್ಯಾಸದ `ಜತಿಗಳು’ ಮಿಂಚಿದವು. ಅತಿವೇಗದ ಪದಗತಿ, ಪಾದರಸದ ಚಲನೆಗಳು ಗಮನ ಸೆಳೆಯುವಂತಿದ್ದವು. ದ್ರವೀಕೃತ ಆಂಗಿಕ ಚಲನೆ, ವೇಗಗತಿಯ ಸಂಕೀರ್ಣ ಅಡವುಗಳು, ನಯನ ಮನೋಹರ ನೃತ್ತ-ನೃತ್ಯಗಳ ಸಾಕಾರದೊಂದಿಗೆ ಒಡಮೂಡಿದ ಅವಳ ಭಾವಪ್ರದ ಅಭಿನಯ ಮನಮುಟ್ಟಿದವು. ಭಂಗಿಯಿಂದ ಭಂಗಿಗೆ ಸುಲಭವಾಗಿ ಹರಿಯುವ ಅವಳ ಅಂಗಿಕಾಭಿನಯ  ಪರಿಣಾಮಕಾರಿಯಾಗಿ ಸ್ರವಿಸಿದ್ದು ಅವಳ ಕಲಾಪ್ರೌಢಿಮೆಯ ವಿಶೇಷ.  ಭಾವವನ್ನು ಸಾಂದ್ರವಾಗಿ ಹಿಡಿದಿಡುವ ಸಾಮರ್ಥ್ಯವುಳ್ಳ ನವ್ಯಾ, ನವರಸಾಭಿನಯದಲ್ಲಿ ಒಂಭತ್ತು ಬಗೆಯ ರಸೋತ್ಪತ್ತಿಯನ್ನು ಉತ್ಕೃಷ್ಟ ನೆಲೆಯಲ್ಲಿ ಪ್ರದರ್ಶಿಸಿದಳು.

ಸಂಜಯ್ ಆವರ ಸೊಗಸಾದ ಗಾಯನ, ಉತ್ಸಾಹಪೂರ್ಣ ನಟುವಾಂಗಂ, ಕರ್ಣಾನಂದಕರ ಹಿನ್ನಲೆಯ ವಾದ್ಯಗಳ ಸಹಕಾರದಲ್ಲಿ ಕಲಾವಿದೆ ಸಂಭ್ರಮದಿಂದ ನರ್ತಿಸಿದಳು. ಸಂಜಯ್  ರಚಿಸಿದ ವಿಶೇಷ `ವರ್ಣಂ’ ಕೃತಿಯ ವರ್ಚಸ್ಸು, ನವ್ಯಳ ಅಪೂರ್ವ ಪ್ರತಿಭೆಗೆ  ಕನ್ನಡಿಯಾಯಿತು. ಪರಶಿವನ ನೂರೆಂಟು ಸ್ತೋತ್ರಗಳ ಗುಣಗಾನದಲ್ಲಿ ಪ್ರಾಸಂಗಿಕವಾಗಿ ಬರುವ ರಾವಣ ಆತ್ಮಲಿಂಗ ಪಡೆಯುವ ಪ್ರಕರಣ ಹಾಗೂ ಮಾರ್ಕಂಡೇಯ ಶಿವನ ಬಗೆಗಿನ ಅಪಾರ ಭಕ್ತಿಪಾರಮ್ಯದಿಂದ ಮೃತ್ಯುವನ್ನು ಜಯಿಸುವ ಘಟನೆಯಲ್ಲಿ ನಾಟಕೀಯತೆ ಮೇಳೈವಿಸಿ, ಸಂಚಾರಿಯಲ್ಲಿ ಹೊರಹೊಮ್ಮಿದ ಸಮ್ಮಿಶ್ರ ಭಾವಗಳನ್ನು ನವ್ಯಾ, ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದಳು.

ಹೊಸ ಮಿಂಚಿನ, ಆಹ್ಲಾದಕರವಿನ್ಯಾಸಗಳಿಂದ ಕಂಗೊಳಿಸಿದ `ಪಾಲಿಸೆಮ್ಮ ಮುದ್ದು ಶಾರದೆ’ ಎಂದು ಭಕ್ತಿತುಂದಿಲಳಾಗಿ ದೈವೀಕ ಅನುಭವ ಮೂಡಿಸಿದಳು. ಪರಶಿವನ ಕುರಿತ ವಿಶೇಷ `ವರ್ಣಂ’ ಕೃತಿಯ ವರ್ಚಸ್ಸು, ನವ್ಯಳ ಅಪೂರ್ವ ಪ್ರತಿಭೆಗೆ ಕನ್ನಡಿ. ಹೊಸ ಮಿಂಚಿನ, ಆಹ್ಲಾದಕರವಿನ್ಯಾಸಗಳಿಂದ ಕಂಗೊಳಿಸುವ ದೇವರನಾಮಗಳಿಗೆ ನರ್ತಿಸುವಾಗ ದೈವೀಕ ಅನುಭವ ಮೂಡಿಸುತ್ತಾಳೆ. ಪ್ರತಿ ಕೃತಿಯ ಅಂತ್ಯದಲ್ಲೂ ಕಲಾನೈಪುಣ್ಯದ ರಸಘಟ್ಟದಂತಿದ್ದ ಶಿಲಾಬಾಲಿಕೆಯ ಅನುಪಮ ಭಂಗಿಗಳನ್ನು ಕಣ್ಮುಂದೆ ತಂದುನಿಲ್ಲಿಸಿ,  ಸ್ಮರಣೀಯ ಅನುಭವವನ್ನು ಕಟ್ಟಿಕೊಡುವಂಥ ಸಮರ್ಥ ಕಲಾವಿದೆ ಈಕೆ .

`ಅಂತಃಪುರಗೀತೆ’ಯ `ಏನೀ ಮಹಾನಂದವೇ’ ಸಡಗರದ ನಡೆಗಳಿಂದ, ಒನಪು-ವಯ್ಯಾರದ ಸೂಕ್ಷ್ಮ ವಿವರಗಳಿಂದ, ಅನುಪಮ ಕಲಾಭಂಗಿಗಳನ್ನು ಕಡೆದಿಟ್ಟ ಶಿಲ್ಪದಂತೆ ಕಂಗೊಳಿಸಿದಳು. ಕಲಾವಿದೆ ತಾನೊಬ್ಬ ಉತ್ತಮ ಕಲಾವಿದೆ ಎಂಬುದನ್ನು ತನ್ನ ಹಸನ್ಮುಖದ ಬೆಡಗು ತುಂಬಿದ, ಮನಮೋಹಕ ನೃತ್ಯದಿಂದ ಮನದಟ್ಟು ಮಾಡಿದಳು. ಉಳಿದಂತೆ ಅನುಕ್ರಮವಾಗಿ  ಶಾಸ್ತ್ರೋಕ್ತ ಬಗೆಯಲ್ಲಾದರೂ, ಯಾಂತ್ರಿಕವಲ್ಲದ ತಿಲ್ಲಾನ ಮತ್ತು ಮಂಗಳಂವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದಳು.

Related posts

ಚೆಂದದ ಅಭಿನಯ- ಚೇತೋಹಾರಿ ನರ್ತನ ವಿಲಾಸ

YK Sandhya Sharma

ಅಂತರ್ಜಾಲದಲ್ಲಿ ತಾಯಿ-ಮಗಳ ಅನುರೂಪ ನೃತ್ಯ

YK Sandhya Sharma

ಮನೋಜ್ಞ ಭಂಗಿಗಳ ಮೇಘನಾ ನೃತ್ಯಝೇಂಕಾರ

YK Sandhya Sharma

Leave a Comment

This site uses Akismet to reduce spam. Learn how your comment data is processed.