‘ಅಭಿವ್ಯಕ್ತಿ ಡಾನ್ಸ್ ಸೆಂಟರ್’ನ ಇತ್ತೀಚಿನ ಹೊಸಪ್ರಯೋಗ ‘ಸುಂದರಕಾಂಡ’ ನೃತ್ಯರೂಪಕ ‘ನಯನ’ ರಂಗಮಂದಿರದಲ್ಲಿ ಸುಂದರವಾಗಿ ಮೂಡಿಬಂತು. ಇದುವರೆಗೂ ರಾಮಾಯಣ ಕುರಿತ ಪ್ರಸಂಗಗಳ ಅನೇಕ ನೃತ್ಯರೂಪಕಗಳು ಪ್ರಯೋಗಗೊಂಡಿದ್ದರೂ ಖ್ಯಾತ ನೃತ್ಯಪಟು ಹಾಗು ನಾಟ್ಯಗುರು ಎಸ್. ರಘುನಂದನ್ ನೇತೃತ್ವದ ಹೊಸಪರಿಕಲ್ಪನೆಯ ‘ಸುಂದರಕಾಂಡ’ ಮನೋಜ್ಞ ನೃತ್ಯಸಂಯೋಜನೆ ಹಾಗೂ ಅನೇಕ ನಾಟಕೀಯ ಸನ್ನಿವೇಶಗಳಿಂದ ‘ಹನುಮಂತ’ನ ಉನ್ನತ ವ್ಯಕ್ತಿತ್ವವನ್ನು ವರ್ಣರಂಜಿತವಾಗಿ ಚಿತ್ರಿಸಲಾಯಿತು.
ಸಾಂಪ್ರದಾಯಕ ಶಾಸ್ತ್ರೀಯ ನೃತ್ಯನಾಟಕಗಳಲ್ಲಿರುವಂತೆ ಸೂತ್ರಧಾರನ ಪ್ರವೇಶದಿಂದ ಪ್ರಾರಂಭವಾಗಿ ಮಾರುತಿಯ ಪರಾಕ್ರಮಗಳ ಗುಣಗಾನಗಳ ಮಂಗಳಾಂತ್ತ್ಯದೊಂದಿಗೆ ಸಾಂಗವಾಗಿ ದೃಶ್ಯಾವಳಿಗಳು ಪ್ರಸ್ತುತಗೊಂಡವು.
ಒಟ್ಟು ಸುಂದರಕಾಂಡದಲ್ಲಿ ಏಳು ಅಂಕಗಳಿದ್ದವು. ಕರ್ನಾಟಕ ಶಾಸ್ತ್ರೀಯ ಸಂಗೀತ ( ಸಂಯೋಜನೆ ಮತ್ತು ಗಾಯನ ವಿನಯ ರಾಜಮಾನ್ಯ)ವನ್ನು ಬಳಸಿ, ಭರತನಾಟ್ಯದಲ್ಲಿ ಕಲಾವಿದರು ಕಥಾ ಓಟವನ್ನು ಬೆಳೆಸಿದರು. ಮೋಹನ ರಾಗದಲ್ಲಿ ವಿವಿಧ ರಸೋತ್ಪತ್ತಿಯ ಪ್ರಯತ್ನ ಶ್ಲಾಘನೀಯ. ಇಲ್ಲಿ ಭಕ್ತಿ ಮತ್ತು ಹಾಸ್ಯರಸಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು, ಭಕ್ತಿಯ ಮೂರ್ತಿಯಾದ ಆಂಜನೇಯನ ವಿವಿಧ ಮುಖಗಳು ಲೋಕಧರ್ಮಿಯಾಗಿ ಪರಿಣಾಮಕಾರಿಯಾಗಿ ಅನಾವರಣಗೊಂಡವು. ಪ್ರತಿದೃಶ್ಯದ ಪರಿಣಾಮವನ್ನು ಹೆಚ್ಚಿಸಲು ಹಿನ್ನಲೆಯ ಪರದೆಯ ಮೇಲೆ ಮೂಡಿಬರುತ್ತಿದ್ದ ಚಿತ್ರಗಳು ಘಟನೆಗಳ ನಿರೂಪಣೆಗೆ ಪೂರಕವಾದವು.
ಪ್ರಾರಂಭಕ್ಕೆ ಸೂತ್ರಧಾರ ಮತ್ತು ನಟಿ ಹಾಗೂ ನರ್ತಕಿಯರು ನಾಟಕದ ಸಾರಾಂಶವನ್ನು ಪರಿಚಯ ಮಾಡುವ ರೀತಿಯಲ್ಲಿ ಶಾಸ್ತ್ರೀಯವಾಗಿ ನರ್ತಿಸುತ್ತ ಮುಂದಿನ ಅಂಕಗಳ ಬಗ್ಗೆ ಕುತೂಹಲ ಕೆರಳಿಸಿದರು. ಆಂಜನೇಯ (ರಘುನಂದನ್) ನ ಪ್ರವೇಶ, ಜೊತೆಯ ಎರಡು ಮರಿಕೋತಿಗಳ ಅಂಗಚೇಷ್ಟೆಗಳು ನಗು ಉಕ್ಕಿಸಿ, ಒರಟು ದಾಪುಗಾಲುಗಳ ನಡಿಗೆ ಅವನ ಶಕ್ತಿಯ ಪ್ರತೀಕವಾಗಿ, ಆಕಾಶದ ಮೋಡಗಳ ಮಧ್ಯೆ ಲಂಘಿಸುವ ದೃಶ್ಯ ಅದ್ಭುತವಾ ಗಿತ್ತು. ವೈಭವೋಪೇತ ಲಂಕೆಯನ್ನು ಕಂಡು ದಿಗ್ಭ್ರಮೆಗೊಳ್ಳುವ ರಘುನಂದನ್ ಅಭಿನಯ ನೋಡುಗರನ್ನು ಸೆರೆಹಿಡಿಯಿತು. ಲಂಕಿಣಿಯನ್ನು ಎದುರಿಸಿ ಗೆದ್ದು, ಸೂಕ್ಷ್ಮಶರೀರದಲ್ಲಿ ಲಂಕೆ ತುಂಬಾ ಓಡಾಡಿ, ಮಂಡೋದರಿಯನ್ನು ಸೀತೆಯೆಂದು ಭ್ರಮಿಸುವ, ಅಶೋಕವನದಲ್ಲಿ ರಕ್ಕಸಿಯರು ಸೀತೆಯನ್ನು ಕಾಡುವ ದೃಶ್ಯ, ರಾವಣ ಅಲ್ಲಿಗೆ ಅಟ್ಟಹಾಸಗೈಯುತ್ತ ಸೀತೆಯ ಓಲೈಕೆಗೆ ಆರ್ಭಟಿಸುವ ಅಂಕವನ್ನು, ಕಲಾವಿದರು ಸಮರ್ಥವಾಗಿ ನಿರೂಪಿಸಿದರು.
ಇಡೀ ನೃತ್ಯನಾಟಕದ ಕೇಂದ್ರಪಾತ್ರವಾದ ಆಂಜನೇಯನ ಮೇಲೆಯೇ ಹೆಚ್ಚಿನ ಒತ್ತನ್ನು ನೀಡಿದ್ದ ಕಾರಣ, ಸೀತೆ ( ಮಾನಸಿ ರಘುನಂದನ್)ಯನ್ನು ಕಂಡು ಚೂಡಾಮಣಿ ಪಡೆಯುವವರೆಗೂ ನಡೆದ ಘಟನೆಗಳು ನಾಟಕೀಯ ಸೆಳೆಮಿಂಚಿನಿಂದ ಕೂಡಿದ್ದವು. ಆಂಜನೇಯನ ಮಿಂಚಿನ ಸಂಚಾರದ ಚಲನೆಗಳು, ಆಂಗಿಕಾಭಿನಯ ಪಾತ್ರಕ್ಕೆ ಹೆಚ್ಚಿನ ಪುಷ್ಠಿ ನೀಡಿದವು. ರಾವಣನ ಮಗ ಇಂದ್ರಜಿತನ ಜೊತೆಗೆ ನಡೆಯುವ ಕಾಳಗ ಮತ್ತು ಬಾಲಕ್ಕೆ ಬೆಂಕಿ ಹಚ್ಚಿದ-ಲಂಕೆಯನ್ನು ಸುಡುವ ದೃಶ್ಯಗಳಲ್ಲಿ ಸಾಕಷ್ಟು ಹಾಸ್ಯದ ಲೇಪನವಿದ್ದು, ನೃತ್ಯದಲ್ಲಿ ಹಾಸ್ಯರಸವನ್ನೂ ಧಾರಾಳವಾಗಿ ಅಭಿವ್ಯಕ್ತಿಸುವ ಅವಕಾಶಗಳಿವೆ ಎಂಬುದಕ್ಕೆ ಕನ್ನಡಿ ಹಿಡಿದವು.
ರಂಗದ ತುಂಬಾ ತನ್ನ ವಾನರಲೀಲೆಯನ್ನು ರಂಗಾಕ್ರಮಣ ಹಾಗೂ ಕ್ಲಿಷ್ಟಕರವಾದ ಮಂಡಿ ಅಡವುಗಳಿಂದ ರಘುನಂದನ್ ತಮ್ಮಲ್ಲಿರುವ ನಟನಾ ಪ್ರತಿಭೆಯನ್ನು ಶಕ್ತಿಶಾಲಿಯಾಗಿ ಪ್ರದರ್ಶಿದರು. ಹಾಗೆಯೇ ರಾಮನನ್ನು ಮರಳಿ ಭೇಟಿಯಾಗಿ ಸೀತೆಯ ಯೋಗಕ್ಷೇಮದ ಸುದ್ದಿಯನ್ನು ಅರುಹುವ ಸಂದರ್ಭದಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತದೆ. ಉಳಿದೆಲ್ಲ ಕಲಾವಿದರೂ ಶಾಸ್ತ್ರೀಯ ಚೌಕಟ್ಟಿನೊಳಗಿನ ನರ್ತನಕ್ಕೆ ಭಂಗಬಾರದಂತೆ ಮನಮೋಹಕ ನೃತ್ಯ-ಆಂಗಿಕಾಭಿನಯಗಳಿಂದ ಗಮನ ಸೆಳೆದರು. ಹಿಮ್ಮೇಳದ ಸಹಕಾರದಲ್ಲಿ ವಯೊಲಿನ್-ಹೇಮಂತ್ ಕುಮಾರ್,ಕೊಳಲು-ಮಹೇಶ ಸ್ವಾಮಿ, ಮೃದಂಗ-ರಮೇಶ್, ರಿದಂ ಪ್ಯಾಡ್ ಅರುಣ್ ಕುಮಾರ್ ಮತ್ತು ನಟುವಾಂಗ ಬಿ.ಕೆ.ಶ್ಯಾಮ್ ಪ್ರಕಾಶ್ ನೃತ್ಯನಾಟಕದ ಪರಿಣಾಮ ವೃದ್ಧಿಸಿದರು.