Image default
Dancer Profile

ಪರಿಪೂರ್ಣ ನೃತ್ಯ ಕಲಾವಿದ ಸತ್ಯನಾರಾಯಣ ರಾಜು

ಉತ್ತಮ ಕಲಾ ನೈಪುಣ್ಯ ಹೊಂದಿದ ಅಭಿನಯ ಚತುರ ಎಂದೇ ಹೆಸರಾದ ಸತ್ಯನಾರಾಯಣ ರಾಜು ಅತ್ಯುತ್ತಮ ಭರತನಾಟ್ಯ ಕಲಾವಿದ. ದೇಶ-ವಿದೇಶಗಳಲ್ಲಿ ಖ್ಯಾತನಾಮರು. ನೃತ್ಯಕ್ಕಾಗಿಯೇ ಹುಟ್ಟಿಬಂದಂತೆ ತನ್ಮಯತೆಯಿಂದ ನರ್ತಿಸುವ ಕಲೆ ಇವರಿಗೆ ದೈವದತ್ತ. ನೀಳವಾದ ಅಂಗಸೌಷ್ಟವ, ಭಾವಸ್ಫುರಣೆಗೆ ಹೇಳಿಮಾಡಿಸಿದಂಥ ಪ್ರಸನ್ನ ವದನ, ಅತ್ಯಂತ ಕಠಿಣಶ್ರಮ-ನಿಷ್ಠೆ-ಸತತ ಅಭ್ಯಾಸ, ಕಲೆಯ ಬಗೆಗಿನ ಅರ್ಪಣಾ ಮನೋಭಾವದಿಂದ ಸಿದ್ಧಿಸಿಕೊಂಡ ನರ್ತನಾ ಸಾಮರ್ಥ್ಯ ಇವರ ವೈಶಿಷ್ಟ್ಯ.

ಸ್ತ್ರೀ ಪ್ರಧಾನ ಈ ನೃತ್ಯ ಜಗತ್ತಿನಲ್ಲಿ ಪುರುಷ ಕಲಾವಿದರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸದ ಹೊರತು ಕಲಾರಸಿಕರ, ವಿಮರ್ಶಕರ ಗಮನ ಸೆಳೆಯುವುದು, ಮೆಚ್ಚುಗೆ ಗಳಿಸುವುದು ಸುಲಭದ ಮಾತೇನಲ್ಲ. ಹಾಗೆ ಸತ್ಯನಾರಾಯಣ ರಾಜು ತಮ್ಮ ಅಪರಿಮಿತ ನೃತ್ಯದ ಒಲವಿನಿಂದ, ವಿಶಿಷ್ಟ ಸಾಧನೆಯ ಛಲದಿಂದ ಯಶಸ್ಸಿನ ಹಾದಿಯಲ್ಲಿ ಕರಗತಮಾಡಿಕೊಂಡ ವಿದ್ಯೆ ಇದು. ಬಾಲ್ಯದಿಂದಲೂ ನಾಟ್ಯಪಟುವಾಗುವ ಹೆಬ್ಬಯಕೆ ಹೊಂದಿದ್ದ ಅವರಿಗೆ ಉತ್ತಮ ಗುರುಗಳು ದೊರೆತದ್ದು ಯೋಗಾಯೋಗ. ಪಂದನಲ್ಲೂರು ಶೈಲಿಯಲ್ಲಿ ಮೊದಲು ಅವರಿಗೆ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯವನ್ನು ಕಲಿಸಿಕೊಟ್ಟ ಶ್ರೇಯಸ್ಸು ವಿದುಷಿ ಸುಭದ್ರಾ ಪ್ರಭು ಅವರದು. ಅನಂತರ ಗುರು ನರ್ಮದಾ ಅವರಲ್ಲಿ ಭರತನಾಟ್ಯ , ಡಾ.ಮಾಯಾರಾವ್ ಮತ್ತು ಚಿತ್ರಾ  ವೇಣುಗೋಪಾಲ್ ಅವರ ಬಳಿ ಕಥಕ್ ನೃತ್ಯ ಶೈಲಿ ಹಾಗೂ ನೃತ್ಯ ಸಂಯೋಜನೆಯ ತರಬೇತಿ ಪಡೆದರು. ಜೊತೆಗೆ ಹೆಚ್ಚಿನ ತರಬೇತಿಯನ್ನು ಗುರು ಪದ್ಮಿನಿ ರವಿ, ಸಾವಿತ್ರಿ ಜಗಮತ್ ರಾಮ್ (ಚೆನ್ನೈ) ಹಾಗೂ ಭಾನುಮತಿ ಅವರಲ್ಲಿ ಪಡೆದುಕೊಂಡರು.

ದೂರದರ್ಶನದ `ಎ-ಟಾಪ್’ ‘ ಕಲಾವಿದರಾಗಿರುವ ಸತ್ಯ ಅವರ ಏಕ ಕಲಾವಿದ ಪ್ರಸ್ತುತಿಯ ಅತ್ಯುತ್ತಮ ಅಭಿನಯ-ಕಲಾ ನೈಪುಣ್ಯದ `ರಾಮ ಕಥಾ’ ಭಾರತದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅತ್ಯಂತ ಮೆಚ್ಚುಗೆ ಪಡೆದ, ಅವರಿಗೆ ಖ್ಯಾತಿಯನ್ನು ತಂದಿತ್ತ `ಮಾಸ್ಟರ್ ಪೀಸ್’ ಎಂದರೆ ಅತಿಶಯೋಕ್ತಿಯಲ್ಲ. `ರಾಮ ಕಥಾ’ ದಲ್ಲಿ ವಿವಿಧ ಪಾತ್ರಗಳಲ್ಲಿನ ಅವರ ಪರಿಣಾಮಕಾರಿ ಅಭಿನಯ, ಪರಕಾಯ ಪ್ರವೇಶ ಮಾಡಿ ಭಾವವೇ ಅವರಾಗಿ ನರ್ತಿಸುವ ತಾದಾತ್ಮ್ಯ ಪಾತ್ರ ವೈವಿಧ್ಯ, ನವರಸಗಳ ಮೂರ್ತಸ್ವರೂಪವಾಗಿ ಮನಕಲಕುವ ಅನುಭವ ಸೃಷ್ಟಿಗೆ , ಅವರಿಗೆ ಅವರೇ ಸಾಟಿ. ನೋಡುವ ಕಲಾರಸಿಕರಿಗೆ, ಹೃದಯಸ್ಪರ್ಶಿ ನೃತ್ಯಾಂಗಣ ಕಟ್ಟಿಕೊಡುವ ನಟನಾ ನೈಪುಣ್ಯ ಅವರದು.

ಅಪೂರ್ವ ನೃತ್ಯ ಕಲಾವಿದ, ಸಮರ್ಥ ನಾಟ್ಯಗುರು, ವಿಶಿಷ್ಟ ನೃತ್ಯ ಸಂಯೋಜಕರಾಗಿ ಸತ್ಯನಾರಾಯಣ ತಮ್ಮ ಬಹುಮುಖ ಪ್ರತಿಭೆಯಿಂದ ನೃತ್ಯ ಜಗತ್ತಿನಲ್ಲಿ ಮಹತ್ವದ ಸ್ಥಾನ ಗಳಿಸಿರುವುದು ಪ್ರಶಂಸನಾರ್ಹ ಸಂಗತಿ. ಭಾರತಾದ್ಯಂತ ಹಾಗೂ ಯು.ಕೆ,, ಯು.ಎಸ್.ಎ., ಕೆನಡಾ, ಸ್ವಿರ್ಜಲೆಂಡ್,ಫ್ರಾನ್ಸ್, ಮಾಲ್ಡೀವ್ಸ್ ಮತ್ತು ಸಿಂಗಾಪುರಗಳಲ್ಲಿ ತಮ್ಮ ನೃತ್ಯ ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಗಳಿಸಿದ್ದಾರೆ. `ಸಂಸ್ಕೃತಿ ದಿ  ಟೆಂಪಲ್ ಆಫ್ ಆರ್ಟ್ ‘ ಎಂಬ ತಮ್ಮ ನೃತ್ಯಸಂಸ್ಥೆಯ ಕಲಾತ್ಮಕ ನಿರ್ದೇಶಕರಾಗಿ, ನೂರಾರು ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರಲ್ಲಿ ನಿರತರಾಗಿದ್ದಾರೆ. ಇವರಿಂದ ಶಿಕ್ಷಣ ಪಡೆದ ಅನೇಕ ಶಿಷ್ಯರು ಸಮರ್ಥ ಗುರುಗಳಾಗಿ ಹೆಸರು ಮಾಡಿದ್ದರೂ ಇನ್ನೂ ಇವರಲ್ಲಿ ಕಲಿಯುತ್ತಲೇ ಇದ್ದಾರೆ. ಸತ್ಯ ಅವರ ಸಂಸ್ಥೆಯ ಹೆಮ್ಮೆಯ ಕಾಣಿಕೆಗಳಾದ ಸಂಸ್ಕೃತಿ ಮತ್ತು ಶಿವರಾತ್ರಿ ನೃತ್ಯೋತ್ಸವಗಳು ಅವರ ವಿಶಿಷ್ಟ ನೃತ್ಯ ಸಂಯೋಜನೆಯ ತಾಂತ್ರಿಕ ನೈಪುಣ್ಯತೆಗೆ ಹಿಡಿದ ಕನ್ನಡಿಗಳಾಗಿವೆ.

ಸತ್ಯನಾರಾಯಣರ ಅಭಿನಯ ಕ್ಷಮತೆ, ರಂಗಭೂಮಿಯ ಸೇವೆಗೂ ಸಂದಿದ್ದು, ಖ್ಯಾತ ರಂಗ ನಿರ್ದೆಶಕರುಗಳಾದ ಎಂ.ಎಸ್. ಸತ್ಯು ಮತ್ತು ಬಿ.ಜಯಶ್ರೀ ಅವರ ಗರಡಿಯಲ್ಲೂ ಕೆಲಸ ಮಾಡಿರುವ ಹೆಮ್ಮೆ ಇವರದು. ವೇದಿಕೆಯ ಮೇಲೆ ಸುಮನೋಹರವಾಗಿ ನರ್ತಿಸುವ ಸತ್ಯ ಅವರ ಹೃದಯ ಗೆದ್ದ ಪ್ರಸ್ತುತಿ-ಪ್ರತಿಭೆಗೆ ಸಂದ ಪ್ರತಿಷ್ಠಿತ ಪ್ರಶಸ್ತಿಗಳು-ಗೌರವಗಳು ಒಂದೆರಡಲ್ಲ.  ಅವುಗಳಲ್ಲಿ ಪ್ರಮುಖವಾದುವು- ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ “ಕರ್ನಾಟಕ ಕಲಾಶ್ರೀ’’, ದೂರದರ್ಶನದ ಚಂದನ ಪ್ರಶಸ್ತಿ, ಚೆನ್ನೈನ ನಾಟ್ಯಾಂಜಲಿ ಟ್ರಸ್ಟ್ ನ “ನರ್ತಕ’’ ಪ್ರಶಸ್ತಿ, ಆಭೈನ “ನರ್ತಕ ನಿಪುಣ’’ ಪ್ರಶಸ್ತಿ, ಅನನ್ಯ ಪುರಸ್ಕಾರ, ಕರ್ನಾಟಕ ಸರ್ಕಾರದ “ಕೆಂಪೇಗೌಡ ಪ್ರಶಸ್ತಿ’’, ಕರ್ನಾಟಕ ನೃತ್ಯ ಕಲಾ ಪರಿಷತ್ತಿನ “ನೃತ್ಯ ನಿಪುಣ’’ , ಸನಾತನ ಕಲಾಕ್ಷೇತ್ರದ “ನಾಟ್ಯ ಕಲಾ ಕೌಶಲಿ’’ , ಅಮೆರಿಕಾದ ಫೀನಿಕ್ಸ್-ಆರಿಜೋನಾದ “ಕಲಾ ಆರತಿ ರತ್ನ’’,  ಶ್ರೀ ರಾಮ್ ಗೋಪಾಲ್ ಹೆಸರಿನ ಪ್ರಪ್ರಥಮ ಪ್ರಶಸ್ತಿ -ಅತ್ಯುತ್ತಮ ಪುರುಷ ನೃತ್ಯ ಕಲಾವಿದ ಪ್ರಶಸ್ತಿ ಇವೇ ಮುಂತಾದ ಅನೇಕಾನೇಕ ಪ್ರಮುಖ ಪ್ರಶಸ್ತಿಗಳು ಸತ್ಯನಾರಾಯಣ ರಾಜು ಅವರ ಕಲಾ ಮುಕುಟದ ಹೆಮ್ಮೆಯ ಗರಿಗಳು.   

Related posts

ಮೋಹಕ ನೃತ್ಯ ಕಲಾವಿದೆ-ಅಭಿನೇತ್ರಿ ಶಮಾ ಕೃಷ್ಣ

YK Sandhya Sharma

ನಾಟ್ಯ ಕಲಾತಪಸ್ವಿ ಕಿರಣ್ ಸುಬ್ರಹ್ಮಣ್ಯಂ

YK Sandhya Sharma

ಪ್ರತಿಭಾ ಸಂಪನ್ನೆ ನೃತ್ಯಕಲಾವಿದೆ ಡಾ. ಸಿಂಧೂ ಪುರೋಹಿತ್

YK Sandhya Sharma

Leave a Comment

This site uses Akismet to reduce spam. Learn how your comment data is processed.