Image default
Dancer Profile

ಮೋಹಕ ನೃತ್ಯ ಕಲಾವಿದೆ-ಅಭಿನೇತ್ರಿ ಶಮಾ ಕೃಷ್ಣ

ದಿನಂಪ್ರತಿ ಕಿರುತೆರೆಯ ಧಾರಾವಾಹಿಗಳ ಮೂಲಕ ನಾವು ನೋಡುವ ಮುದ್ದುಮುಖದ ಜನಪ್ರಿಯ ನಟಿ ಶಮಾ ಕೃಷ್ಣ ಯಾರಿಗೆ ತಾನೇ ಪರಿಚಯವಿಲ್ಲ?!…ಖ್ಯಾತ ನಿರ್ದೇಶಕರಾದ ಟಿ.ಎನ್.ಸೀತಾರಾಂ, ಬಿ.ಸುರೇಶ, ಸಿಹಿ ಕಹಿ ಚಂದ್ರು, ಶೇಷಾದ್ರಿ, ಸುನೀಲ್ ಪುರಾಣಿಕ್ ಮುಂತಾದವರ 30 ಕ್ಕೂ ಹೆಚ್ಚಿನ ಸೀರಿಯಲ್ ಗಳಲ್ಲಿ ನೂರಾರು ಎಪಿಸೋಡುಗಳಲ್ಲಿ ಪಾತ್ರ ನಿರ್ವಹಿಸಿರುವ ಈ ಚತುರೆ, ಉತ್ತಮ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯಕಲಾವಿದೆ. ಹಲವು ಪೌರಾಣಿಕ ಚಲನಚಿತ್ರಗಳಲ್ಲೂ ಅಭಿನಯಿಸಿರುವ ಹಿರಿಮೆ ಇವರದು.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಶಮಾ, ಶ್ರೀ ವೆಂಕಟಕೃಷ್ಣ ಮತ್ತು ಸವಿತಾ ದಂಪತಿಗಳ ಪುತ್ರಿ. ತಮ್ಮ ಕನಸುಗಳನ್ನೆಲ್ಲ ಮಗಳಲ್ಲಿ ಎರಕ ಹುಯ್ದು ಅವಳನ್ನು ನೃತ್ಯಕಲಾವಿದೆಯನ್ನಾಗಿ ಸಾಕಾರಗೊಳಿಸುವಲ್ಲಿ ಸವಿತಾರ ಪಾತ್ರ ಹಿರಿದು. ಜೊತೆಗೆ ಕುಟುಂಬದವರೆಲ್ಲರ ಒತ್ತಾಸೆಯಿಂದ ಶಮಾ, ತನ್ನ ಆರನೆಯ ವಯಸ್ಸಿಗೆ ಖ್ಯಾತ ನೃತ್ಯಗುರು ಉಷಾ ದಾತಾರ್ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿದರು. ಬದ್ಧತೆಯಿಂದ ನಾಟ್ಯಾಭ್ಯಾಸ ಮಾಡಿ ‘ವಿದ್ವತ್ ‘ ಪದವಿಯನ್ನು ಉನ್ನತಾಂಕಗಳಿಂದ ಗಳಿಸುವಲ್ಲಿ ಸಫಲರಾದರು. ಹಗಲಿರಳೂ ನೃತ್ಯವನ್ನೇ ಉಸಿರಾಡುತ್ತಿದ್ದ ಹುಡುಗಿ ಮೌಂಟ್ ಕಾರ್ಮಲ್ ಕಾಲೇಜಿನಿಂದ ‘ಬಿ.ಕಾಂ.’ ಪದವೀಧರೆಯಾದರು. ಶಾಲಾ- ಕಾಲೇಜಿನ ದಿನಗಳಿಂದಲೂ ನೃತ್ಯ ಪ್ರದರ್ಶನ-ಸ್ಪರ್ಧೆಗಳಲ್ಲಿ ಶಮಾಗೆ ಬಹುಮಾನಗಳು ಕಟ್ಟಿಟ್ಟ ಬುತ್ತಿ. ಅನೇಕ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರನ್ನು ಆಕರ್ಷಿಸಿದರು.

ಮುಂದೆ ಉನ್ನತ ತರಬೇತಿಗಾಗಿ ಹಿರಿಯ ನೃತ್ಯಗುರು ನರ್ಮದಾ, ಭಾನುಮತಿ ಅವರಲ್ಲಿ ಅಭ್ಯಾಸ ಮಾಡಿದರು. ದೂರದರ್ಶನದ ‘’ಎ’’ ಗ್ರೇಡ್ ಆರ್ಟಿಸ್ಟ್ ಮಾನ್ಯತೆ ಪಡೆದು ರಾಜ್ಯ ಮಾತ್ರವಲ್ಲ ರಾಷ್ಟ್ರೀಯ ಮಟ್ಟದಲ್ಲೂ ಟಿವಿ ಪ್ರದರ್ಶನಗಳನ್ನು ನೀಡಿದ ವೈಶಿಷ್ಟ್ಯ ಇವರದು. ತಂಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದಿಂದ ಖ್ಯಾತ ನೃತ್ಯಜ್ಞೆ ಡಾ. ಪದ್ಮಾ ಸುಬ್ರಮಣ್ಯಂ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಎಂ.ಎಫ್.ಎ. ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಕಾರ್ಯಕ್ರಮಗಳ ನಿರೂಪಣೆ ಇವರ ಇನ್ನೊಂದು ಹವ್ಯಾಸ. ಮುಂದೆ ‘ಕರಣ’ಗಳ ಬಗ್ಗೆ ವಿಶೇಷ ಅಧ್ಯಯನಕ್ಕಾಗಿ ನಾಟ್ಯಗುರು ಸುಂದರೀ ಸಂತಾನಂ ಅವರಲ್ಲಿ ತರಬೇತಿ ಪಡೆದು, ಡಾ. ಸಿ.ವಿ.ಚಂದ್ರಶೇಖರ್, ಬ್ರಗಾ ಬಸಿಲ್, ಸಾವಿತ್ರಿ ಜಗನ್ನಾಥರಂಥ ದಿಗ್ಗಜಗಳ ಗರಡಿಯ ಕಾರ್ಯಾಗಾರಗಳಿಂದ ವಿಶೇಷ ಜ್ಞಾನಾರ್ಜನೆ. ಇಷ್ಟಕ್ಕೇ ಶಮಾ ಅವರ ಉತ್ಸಾಹ ತಣಿಯಲಿಲ್ಲ. ಖ್ಯಾತ ಕೂಚಿಪುಡಿ ನೃತ್ಯಗುರು ಡಾ. ವೀಣಾಮೂರ್ತಿ ವಿಜಯ್ ಅವರಿಂದ ಕೂಚಿಪುಡಿ ನೃತ್ಯಶೈಲಿಯಲ್ಲಿ ನಾಟ್ಯಾಭ್ಯಾಸ. ಆಂಧ್ರಪ್ರದೇಶದ ಶುದ್ಧ ಕೂಚಿಪುಡಿ ನೃತ್ಯಪ್ರಕಾರವನ್ನು ಸಾಕ್ಷಾತ್ಕರಿಸುವ ಶಮಾರ ನೃತ್ಯಪ್ರದರ್ಶನ ಆಹ್ಲಾದಕಾರಿ. ಅಲ್ಲಿನ ಪ್ರಸಿದ್ಧ ‘’ ಭಾಮಾಕಲಾಪಂ’’ ಇವರ ಅಭಿನಯ-ಆಂಗಿಕಾಭಿನಯಗಳಲ್ಲಿ ಮನೋಹರವಾಗಿ ಸಾಕಾರವಾಗುವ ರಮ್ಯ ಕೃತಿ. ವಿಶ್ವಾದ್ಯಂತ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿ ಜನಪ್ರಿಯರಾಗಿರುವ ಇವರು ನೀಡಿರುವ ಪ್ರಮುಖ ಕಾರ್ಯಕ್ರಮಗಳೆಂದರೆ- ಮೈಸೂರು ದಸರಾ, ಹಂಪಿ ಉತ್ಸವ, ಚೆನ್ನೈ ನಾರದ ಗಾನಸಭಾ ಮಹೋತ್ಸವ, ಹೈದರಾಬಾದಿನ ರವೀಂದ್ರ ಭಾರತಿ, ಅಂಡಮಾನ್ ದ್ವೀಪೋತ್ಸವ, ತಿರುಪತಿ ನಾದ ನೀರಾಜನಂ, ನುಡಿಸಿರಿ, ಬೆಂಗಳೂರು ಹಬ್ಬ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ ಮುಂತಾದವು. ಜೊತೆಗೆ ಅಮೆರಿಕಾದ ಫೀನಿಕ್ಸ್, ನ್ಯುಜರ್ಸಿ, ಚಿಕಾಗೋ, ನಾರ್ತ್ ಕ್ಯಾಲಿಫೋರ್ನಿಯ, ವಾಷಿಂಗ್ಟನ್ ಮತ್ತು ಸ್ವಿಸ್ ಹಾಗೂ ಮಸ್ಕಾತ್ ನಲ್ಲಿ ಅನೇಕ ಬಾರಿ ನೃತ್ಯಪ್ರದರ್ಶನ ನೀಡಿದ ಗರಿಮೆ.

ಮೂರೂವರೆ ದಶಕಗಳ ನೃತ್ಯಾನುಭಾವವುಳ್ಳ ಶಮಾ ತಮ್ಮದೇ ಆದ ‘’ಶ್ರದ್ಧಾ ಡಾನ್ಸ್ ಸೆಂಟರ್ ’’ ಭರತನಾಟ್ಯ ಶಾಲೆಯನ್ನು ಸ್ಥಾಪಿಸಿ, ನೃತ್ಯ ಕ್ಷೇತ್ರಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದ್ದಾರೆ. ನೃತ್ಯ ಸಂಯೋಜನೆಯಲ್ಲಿ ಪ್ರಾವೀಣ್ಯವುಳ್ಳ ಶಮಾ ಸಂಯೋಜಿಸಿರುವ ನೃತ್ಯಕೃತಿಗಳೆಂದರೆ, ಶೃಂಗಾರ ನಾಯಿಕಾ, ಸಪ್ತ, ರಂಗ್, ಶಂಕರಿ ನಾಯಿಕಾ, ಶಿವನವರಸ ಮುಂತಾದವು. ಸಮಕಾಲೀನ ಪರಿಕಲ್ಪನೆ ಮತ್ತು ಪ್ರಯೋಗಗಳಲ್ಲಿ ಒಲವುಳ್ಳ ಶಮಾ ಮಾರ್ಗ ಸಂಪ್ರದಾಯದ ಎಲ್ಲ ಕೃತಿಗಳಿಗೂ ತಮ್ಮದೇ ಆದ ಬಗೆಯಲ್ಲಿ ನೃತ್ಯ ಸಂಯೋಜನೆಗೊಳಿಸಿದ್ದಾರೆ.

ಕಾಲೇಜಿನ ದಿನಗಳಿಂದಲೂ ಅಭಿನಯದ ಬಗ್ಗೆ ಆಸಕ್ತರಾಗಿದ್ದ ಇವರು ಅಭಿನಯಿಸಿರುವ ಧಾರಾವಾಹಿಗಳ. (ಲಾಲಿ, ನಾಕು ತಂತಿ, ಮಾಯಾಮೃಗ ಮುಂತಾದವು) ಸಂಖ್ಯೆ ಐವತ್ತಕ್ಕೂ ಮೀರಿದೆ. ಶಿವಲೀಲೆ, ವರಲಕ್ಷ್ಮೀ ವ್ರತ ಮಹಾತ್ಮೆ ಮುಂತಾದವು ಅಭಿನಯಿಸಿರುವ ಚಲನಚಿತ್ರಗಳು. ನೃತ್ಯವೇ ತಮಗೆ ಸಕಲವೆನ್ನುವ ಶಮಾ , ಕಲಾಸಕ್ತ ಪತಿ ರಮೇಶ್ ಹಾಗೂ ಪುಟ್ಟ ಮಗ ಅಭಿರಾಮರೊಂದಿಗಿನ ಸುಖೀ ಕುಟುಂಬದ ಸಂತೃಪ್ತೆ.

Related posts

ಕೂಚಿಪುಡಿ ನೃತ್ಯ ಪ್ರವೀಣೆ ರೇಖಾ ಸತೀಶ್

YK Sandhya Sharma

ಬಹುಮುಖ ಪ್ರತಿಭೆಯ ನೃತ್ಯ ಕಲಾವಿದೆ ಕಲಾವತಿ

YK Sandhya Sharma

ಮೋಹಕ ಒಡಿಸ್ಸಿ ನರ್ತಕಿ ಕರಿಷ್ಮಾ ಅಹುಜಾ

YK Sandhya Sharma

Leave a Comment

This site uses Akismet to reduce spam. Learn how your comment data is processed.