Image default
Dancer Profile

ಸಂಗೀತ-ಸಾಹಿತ್ಯ-ನೃತ್ಯ ಸಂಗಮ ರಮ್ಯಾ ಸೂರಜ್

ಬಹುಮುಖ ಪ್ರತಿಭೆಯ ಪ್ರೊ. ರಮ್ಯಾ ಸೂರಜ್ ಉತ್ತಮ ನೃತ್ಯ ಕಲಾವಿದೆ, ಸಂಗೀತಗಾರ್ತಿ, ನಟುವನ್ನಾರ್ ಮತ್ತು ಸಾಹಿತ್ಯ ರಚನೆಕಾರ್ತಿ ಕೂಡ. ಇವರು ಯಾವ ಹಾಡುಗಳನ್ನೂ ಕೂತು ಬರೆದಿದ್ದಲ್ಲವಂತೆ. ದೈವಭಕ್ತರಾದ ಈಕೆ ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯುತ್ತ ಕೈ ಮುಗಿದು ನಿಂತ ಹೊತ್ತಿನಲ್ಲಿ ಅವರರಿವಿಲ್ಲದೆ, ಭಾವುಕತೆಯಿಂದ ಹಾಡತೊಡಗುತ್ತಾರಂತೆ, ಅದೂ ತಾಳಬದ್ಧವಾಗಿ ಸಂಗೀತ ಸಂಯೋಜನೆಯೊಂದಿಗೆ. ಹೀಗೆ ಅವರ ಹತ್ತನೆಯ ವಯಸ್ಸಿಗೇ ‘ವಾಸವಿ ಗೀತಾಂಜಲಿ’ಎಂಬ ಇಪ್ಪತೈದು ಭಕ್ತಿಗೀತೆಗಳ ಪುಸ್ತಕವನ್ನು ಪ್ರಕಟಿಸಿದ ವಿಶೇಷತೆ  ಅವರದು. ಕೇವಲ ಭಕ್ತಿಗೀತೆಗಳಲ್ಲದೆ, ಭಾವಗೀತೆ ಮತ್ತು ದೇಶಭಕ್ತಿಗೀತೆಗಳ ಸುಮಾರು ೫೦೦ ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ಹೆಮ್ಮೆ ಇವರದು. ನೃತ್ಯಕ್ಕಾಗಿಯೇ ಪುಷ್ಪಾಂಜಲಿ, ಜತಿಸ್ವರ, ವರ್ಣ ಜಾವಳಿ, ಕೃತಿ ಮತ್ತು ತಿಲ್ಲಾನಗಳನ್ನು ರಚಿಸಿದ್ದು ವಾಗ್ಗೇಯಕಾರ್ತಿ ಎನಿಸಿಕೊಂಡಿದ್ದಾರೆ.

ಮೂಲತಃ ಚೆನ್ನರಾಯಪಟ್ಟಣದವರು . ಬಾಲ್ಯದಿಂದಲೂ ನಾಟ್ಯದತ್ತ ಒಲವು. ಭರತನಾಟ್ಯದ ಮೊದಲಗುರುಗಳು, ವಾಣಿಶ್ರೀ ರಾವ್ ಮತ್ತು ಅಂಬಳೆ ರಾಜೇಶ್ವರಿ. ಹೆಚ್ಚಿನ ಕಲಿಕೆ ರವಿದಾತಾರ್ ಮತ್ತು ಉಷಾ ದಾತಾರ್ ಅವರಲ್ಲಿ ನಡೆದರೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ಗುರು ಭಾನುಮತಿ, ಶೀಲಾ ಚಂದ್ರಶೇಖರ್ ಮತ್ತು ವಸಂತ್ ಕಿರಣ್ ಅವರಲ್ಲಿ ನೃತ್ಯ ವಿದ್ಯಾರ್ಜನೆ ಮಾಡಿದರು. ಜೊತೆಗೆ ಕೆ.ಆರ್. ವೆಂಕಟೇಶ್, ರಾಮಚಂದ್ರ ಮತ್ತು ನಾಗವಲ್ಲಿ ನಾಗರಾಜ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು.

ಬೆಂಗಳೂರು ವಿಶ್ವ ವಿದ್ಯಾಲಯದಿಂದ ನೃತ್ಯ ಸಂಯೋಜನೆಯಲ್ಲಿ ಬಿ.ಎ., ಭರತನಾಟ್ಯದಲ್ಲಿ ವಿದ್ವತ್ ಮತ್ತು ಜೈನ ವಿಶ್ವವಿದ್ಯಾಲಯದಿಂದ ಎಂ.ಎ.ಭರತನಾಟ್ಯ ಸ್ನಾತಕೋತ್ತರ ಪದವಿ ಪಡೆದುದಲ್ಲದೆ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಮತ್ತು ಎಂ.ಎ. ಪದವಿ ಪಡೆದ ಪ್ರತಿಭಾನ್ವಿತೆ ಈಕೆ. ಅನೇಕ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನಿತ್ತರೂ ಇವರ ಆಸಕ್ತಿ ವಾಲಿದ್ದು           ನೃತ್ಯಾಕಾಂಕ್ಷಿಗಳಿಗೆ ಶಿಕ್ಷಣ ನೀಡುವತ್ತ. ದೂರದರ್ಶನದಲ್ಲಿ ನೃತ್ಯದಲ್ಲಿ ‘ಬಿ’ಗ್ರೇಡ್ ನೃತ್ಯ ಕಲಾವಿದೆ ಹಾಗೂ ಆಕಾಶವಾಣಿಯಲ್ಲಿ  ಸಂಗೀತದಲ್ಲೂ ‘ಬಿ’ಗ್ರೇಡ್ ಕಲಾವಿದೆಯಾಗಿ ಮಾನ್ಯತೆ ಪಡೆದಿದ್ದಾರೆ. ಚೆನ್ನರಾಯ ಪಟ್ಟಣ ಮತ್ತು ಬೆಂಗಳೂರಿನಲ್ಲಿ ‘ಸುಪ್ರದಾ ಕಲಾನಿಕೇತನ’ ವೆಂಬ ನೃತ್ಯಶಾಲೆ ನಡೆಸುತ್ತ ನೂರಾರು ವಿಧ್ಯಾರ್ಥಿಗಳನ್ನು ನೃತ್ಯಕಲಾವಿದೆಯರನ್ನಾಗಿ ತಯಾರು ಮಾಡಿದ ಅಗ್ಗಳಿಕೆ ಇವರದು. ಸುಮಾರು ಎರಡು ದಶಕಗಳಿಂದಲೂ ಈಕೆ, ಭರತನಾಟ್ಯದೊಂದಿಗೆ, ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತವನ್ನೂ ಹೇಳಿಕೊಡುತ್ತಿದ್ದಾರೆ. ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಭರತನಾಟ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದ್ದು,  ಪ್ರಸ್ತುತ ರೇವಾ ವಿಶ್ವ ವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರಾಗಿದ್ದಾರೆ.    

ಇವರ ಪ್ರತಿಭೆಯ ಇನ್ನೊಂದು ಮುಖ, ಕಾರ್ಯಕ್ರಮಗಳಿಗೆ ಅಚ್ಚುಕಟ್ಟಾಗಿ ನಿರೂಪಣೆ ಮಾಡುವ ಹವ್ಯಾಸ. ರಾಜ್ಯಾದ್ಯಂತ ಅನೇಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಿರುವ ಇವರು, ರಾಜ್ಯಮಟ್ಟದ ವೇದಿಕೆಗಳಲ್ಲಿ ಸುಗಮ ಸಂಗ್ಗಿತ ಕಾರ್ಯಕ್ರಮ ಹಾಗೂ ಟಿ.ವಿ.ವಾಹಿನಿಗಳಲ್ಲೂ ಗೀತೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಇವರವೇ ಆದ ಅನೇಕ ಸಂಗೀತ ಧ್ವನಿ ಸುರಳಿಗಳೂ ಹೊರಬಂದಿವೆ. ಸಾಮಾನ್ಯವಾಗಿ ನೃತ್ಯ ಕಾರ್ಯಕ್ರಮಗಳಿಗೆ ಗುರುವಾಗಿ ನಟುವಾಂಗ ನಿರ್ವಹಿಸುತ್ತಾ ಜೊತೆಗೆ ಹಾಡುಗಾರಿಕೆಯನ್ನೂ ಮಾಡುವುದು ಸುಲಭದ ಮಾತಲ್ಲ. ಎರಡೂ ಜವಾಬ್ದಾರಿಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಚತುರೆ ಈಕೆ. ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಹಾಡುವ ಅಭ್ಯಾಸವಿರುವ ಇವರು, ಐ.ಸಿ.ಸಿ.ಆರ್. ವತಿಯಿಂದ ಆಯೋಜಿಸಲ್ಪಟ್ಟ ವಿದೇಶಿ ಕಾರ್ಯಕ್ರಮಗಳಲ್ಲೂ ಹಾಡುವುದರೊಂದಿಗೆ ನಟುವಾಂಗವನ್ನೂ ಮಾಡಿರುವ ವೈಶಿಷ್ಟ್ಯ ಇವರದು. ಅನೇಕ ನೃತ್ಯ ನಾಟಕಗಳಿಗೆ ಹಿನ್ನಲೆ ಧ್ವನಿಯನ್ನೂ ನೀಡಿರುವ ರಮ್ಯಾ, ನೃತ್ಯ ಸಂಯೋಜನೆಯಲ್ಲೂ ತಮ್ಮ ವಿಶೇಷತೆ ತೋರಿದ್ದಾರೆ. ಇವರು ಸಂಯೋಜಿಸಿರುವ ನೃತ್ಯ ರೂಪಕಗಳು- ರಾಮಾಯಣ ದರ್ಶನ, ದಾಸರು ಕಂಡ ಕೃಷ್ಣ, ದೇವಿ ದರ್ಶನ, ಶಿವ ಲೀಲಾಮೃತ, ವಚನ ವೈಭವ ಮಹಾವೀರ ಚರಿತ ಮುಂತಾದವು.

ಭಾರತ ಮತ್ತು ಹೊರ ದೇಶಗಳಲ್ಲಿ ಭಾರತೀಯ ಪುರಾಣಗಳನ್ನು ಕುರಿತ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಭರತನಾಟ್ಯ ಪ್ರದರ್ಶನವನ್ನು ಏಕವ್ಯಕ್ತಿ ಹಾಗೂ ತಮ್ಮ ತಂಡದೊಂದಿಗೆ ಮಹಾ ಮಸ್ತಕಾಭಿಷೇಕ, ದೆಹಲಿಯಲ್ಲಿ ನಡೆದ  ರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನ ಹಾಗೂ ಕಿಂಕಿಣಿ ಉತ್ಸವಗಳಲ್ಲಿ ನೀಡಿದ್ದಾರೆ. ಅವರೇ ರಚಿಸಿ, ರಾಗ ಸಂಯೋಜಿಸಿ, ನಿರ್ದೇಶಿಸಿದ ‘ ಅವತರಿಸಿದಳು ವಾಸವಿ’ ನೃತ್ಯರೂಪಕ ೫೦ ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ಅಗ್ಗಳಿಕೆ. ಪ್ರತಿಷ್ಟಿತ ಆರ್ಯಭಟ  ಪ್ರಶಸ್ತಿಯೊಂದಿಗೆ ಕರ್ನಾಟಕಭೂಷಣ, ನಾಟ್ಯಸರಸ್ವತಿ, ಗಾನಕೋಗಿಲೆ, ಕನ್ನಡ ಕೌಸ್ತುಭ ಮುಂತಾದ ಅನೇಕ ಪ್ರಶಸ್ತಿಗಳು ಇವರ ಮುಡಿಗೇರಿವೆ.

ರಮ್ಯಾ ಅವರ ವಿವಿಧ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುವ ಪತಿ ಇವರಲ್ಲಿಯೇ ನೃತ್ಯಾಭ್ಯಾಸ ಮಾಡಿ ಜ್ಯೂನಿಯರ್ ಪಾಸ್ ಮಾಡಿ ಸೀನಿಯರ್ ಪರೀಕ್ಷೆಗೆ  ತಯಾರಿ ನಡೆಸಿದ್ದಾರೆ. ಮಕ್ಕಳು ಸುಕೃತ್ ಮತ್ತು ಸುಯೋಗ್ ಇಬ್ಬರೂ ಸಂಗೀತ, ಮೃದಂಗ, ನಟನೆ ಮತ್ತು ಸಂಗೀತ ಕಲಿಯುತ್ತಿದ್ದು, ಮೂವರೂ ಇವರ ನೃತ್ಯರೂಪಕಗಳಲ್ಲಿ ಭಾಗವಹಿಸುತ್ತಾರೆ.

Related posts

ಚೈತನ್ಯದ ಚಿಲುಮೆ-ನೃತ್ಯ ಕಲಾವಿದೆ ಸ್ನೇಹಾ ಭಾಗವತ್

YK Sandhya Sharma

ಭರತನಾಟ್ಯ ಕಲಾಸಾಧಕಿ ‘ಕರ್ನಾಟಕ ಕಲಾಶ್ರೀ’ ವಿದ್ಯಾ ರವಿಶಂಕರ್

YK Sandhya Sharma

ಪ್ರತಿಭಾನ್ವಿತ ನಾಟ್ಯಚತುರ ಗುರುರಾಜ ವಸಿಷ್ಠ

YK Sandhya Sharma

2 comments

ಡಾ.ರಾಧಿಕಾರಂಜಿನಿ June 1, 2021 at 11:53 pm

ಅಭಿನಂದನೆಗಳು ರಮ್ಯಾ, ಸಂಧ್ಯಾ ಮೇಡಂ ಸೂಪರ್ ಪರಿಚಯ ನೀಡಿರುವಿರಿ.

Reply
YK Sandhya Sharma June 13, 2021 at 8:09 pm

ಅತ್ಯಂತ ಕೃತಜ್ಞತೆಗಳು ರಾಧಿಕಾ ನಿಮ್ಮ ಅಭಿಮಾನದ ಓದಿಗೆ, ಮೆಚ್ಚುಗೆಗೆ.

Reply

Leave a Comment

This site uses Akismet to reduce spam. Learn how your comment data is processed.