ಶ್ರೀಕೃಷ್ಣನ ಬಗೆಗಿನ ಬೆಸುಗೆ-ಭಕ್ತಿರಸಧಾರೆಗೆ ರೂಪಕವಾಗಿ ನಿಲ್ಲುವ ವಾತ್ಸಲ್ಯನಿಧಿ ಯಶೋದೆ, ಒಲುಮೆಯ ಪುತ್ಥಳಿ ರುಕ್ಮಿಣಿ ಮತ್ತು ನೆಚ್ಚಿನಂಬಿದ ಸೋದರಿ ದ್ರೌಪದಿ, ಮೂವರೂ ಕೃಷ್ಣಾರಾಧನೆಯ ನಿಮಗ್ನತೆಯಲ್ಲಿ ಜೀವನದ ಸಾರ್ಥಕತೆ ಕಂಡುಕೊಂಡ ಚೈತನ್ಯಮೂರ್ತಿಗಳು. ಮಹಾಭಾರತದ ಈ ಮೂರೂ ಸ್ತ್ರೀಪಾತ್ರಗಳು, ಕೃಷ್ಣನ ಕುರಿತು ತೋರಿದ ಅವಿನಾಭಾವದ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಮನೋಜ್ಞ ನೃತ್ಯರೂಪಕ ‘’ಕೃಷ್ಣಾರ್ಪಣ’’. ವಿಭಿನ್ನನೋಟದ ಹೃದಯಸ್ಪರ್ಶಿ ರೂಪಕದ ಕರ್ತೃ ಡಾ.ಆರ್ ಗಣೇಶ್. ಸುಂದರ ಪರಿಕಲ್ಪನೆಯಲ್ಲಿ, ಮೂರು ಮಹತ್ವದ ಸ್ತ್ರೀ ಪಾತ್ರಗಳ ಬಗ್ಗೆ ಕ್ಷಕಿರಣ ಬೀರುವ, ಅವರ ಅಂತರಾಳದ ಭಾವಗಳಿಗೆ ಪಾತಾಳಗರಡಿಯಿಕ್ಕಿ ರಸಾನುಭವದ ಸನ್ನಿವೇಶಗಳನ್ನು ಹೆಕ್ಕಿತೆಗೆದ ಅವರ ಹೊಸಪ್ರಯೋಗ ಸ್ತುತ್ಯಾರ್ಹ.
ಖ್ಯಾತ ‘’ಸಾಧನ ಸಂಗಮ’’ ನೃತ್ಯಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಿಪಡಿಸಿದ ಈ ರೂಪಕಕ್ಕೆ ನೃತ್ಯ ಸಂಯೋಜಿಸಿದವರು ನಾಟ್ಯಗುರು ಜ್ಯೋತಿ ಪಟ್ಟಾಭಿರಾಮ್. ಮೊದಲಭಾಗದಲ್ಲಿ ಭಾಗವತದ ರಸಪ್ರಸಂಗಗಳನ್ನು ಒಳಗೊಂಡಂತೆ ತಾಯಿ ಯಶೋದೆಯ ಮಮತೆಯ ಪದರಗಳನ್ನು ಬಿಚ್ಚಿಡಲಾಯಿತು. ಕೃಷ್ಣ ದೇವರಾದರೂ ತಾಯಿಗೆ ಪುಟ್ಟಮಗುವೇ. ಬಾಲಕೃಷ್ಣನ ಬಾಲಲೀಲೆಗಳನ್ನು ಮನಸಾರೆ ಆಸ್ವಾದಿಸುತ್ತ, ಅವನು ತೋರಿದ ವಿಸ್ಮಯಗಳಿಗೆ ಕಣ್ಣಾಗುತ್ತ, ಅವನ ತುಂಟಾಟಗಳ ಅನುಪಮ ಕ್ಷಣಗಳಲ್ಲಿ ಕರಗಿಹೋಗುತ್ತ ಜೀವನದ ಧನ್ಯತೆ ಕಂಡುಕೊಂಡ ಪುಣ್ಯಜೀವಿ ಯಶೋದೆ. ಆರುಜನ ಕಲಾವಿದೆಯರು ಸಾಂಕೇತಿಕವಾಗಿ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತ, ಪಾತ್ರಗಳನ್ನು ಕಲಾತ್ಮಕವಾಗಿ ಪರಿಚಯಿಸಿದ ತಂತ್ರ ವಿನೂತನ. ಯಶೋದೆಯಾಗಿ ಸುಮನಾ ಭಟ್, ಓಡುವ ಕಂದನ ಬೆನ್ನಟ್ಟಿ ಹಿಡಿದು, ಮಜ್ಜನ ಮಾಡಿಸಿ ಅಲಂಕರಿಸಿ , ಮುದ್ದಿಸುವ ಪರಿ ರಮ್ಯವಾಗಿತ್ತು. ಸತಾಯಿಸುವ ಪುಟ್ಟಕೃಷ್ಣ, ಕಾಡುವ ಪರಿ, ಮಗುವಿನೊಡನೆ ಮಗುವಾಗಿಬಿಡುವ ವಿನೋದಗಳನ್ನು ಕಣ್ಣಿಗೆ ಕಟ್ಟುವಂತೆ, ಕಂದನ ಅರಳಿದ ಬಾಯೊಳಗೆ ಮೂಜಗವಲ್ಲದೆ ದಶಾವತಾರಗಳನ್ನೂ ಕಂಡ ಬೆರಗು-ಅದ್ಭುತವನ್ನು, ಪ್ರತಿಯೊಂದು ಸೂಕ್ಷ್ಮವಿವರಗಳನ್ನೂ ತನ್ನ ಮನೋಹರ ಅಭಿನಯದಿಂದ ಕಟ್ಟಿಕೊಟ್ಟಳು.
ಶ್ರೀಕೃಷ್ಣನಲ್ಲೇ ಜೀವವಿರಿಸಿಕೊಂಡು ಅವನ ಬರುವಿಗಾಗೇ ಕಾಯುತ್ತ ಕುಳಿತ ರುಕ್ಮಿಣಿಯ ತಪೋಧ್ಯಾನದ ಪ್ರಣಯಭಾವಗಳನ್ನು ಕಲಾವಿದೆ ಸಾಧನಶ್ರೀ ರಸಸಾಂದ್ರತೆಯಲ್ಲಿ ಸಾಕ್ಷಾತ್ಕರಿಸಿದಳು. ಅಣ್ಣ ರುಕ್ಮಿ, ಗೊತ್ತುಮಾಡಿದ ಶಿಶುಪಾಲನನ್ನು ಒಲ್ಲದೆ, ತನ್ನನ್ನು ಇಲ್ಲಿಂದ ಕರೆದೊಯ್ಯುವ ಕೃಷ್ಣನೊಲುಮೆಯ ಭರವಸೆಯಿಂದ ಕಾತುರಳಾಗಿದ್ದಾಳೆ, ನಿರೀಕ್ಷೆಯಲ್ಲಿ ಬೆಂದು, ಸಮ್ಮಿಶ್ರಭಾವದಲ್ಲಿ ವಿಲಪಿಸುವ ದೃಶ್ಯವನ್ನು ಕಲಾವಿದೆ ಸವಿವರವಾಗಿ, ತನ್ನ ಅಭಿನಯ ಗಾಢತೆಯಲ್ಲಿ ಅಭಿವ್ಯಕ್ತಿಸಿದಳು. ಇನಿಯ ಬರುವ ಆಸೆ ಕ್ಷೀಣಿಸುತ್ತ ಆತ್ಮಹತ್ಯೆಗೆ ಮುಂದಾಗುವವಳ ಕಿವಿಗೆ, ಹೊರಗಿನ ಖುರಪುಟಧ್ವನಿ ಜೀವಕಂಪನ ಎರೆದು, ಎದುರಿಗೆ ಬಂದು ನಿಂತ ಕೃಷ್ಣನ ದರ್ಶನದಿಂದ ಕಂಪಿತಳಾಗುವ ರುಕ್ಮಿಣಿಯ ಪಾತ್ರವನ್ನು ಪರಾಕಾಷ್ಟತೆಗೊಯ್ದ ಸಾಧನಾ, ತನ್ನ ತಾದಾತ್ಮ್ಯದಲ್ಲಿ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದು ರೋಮಾಂಚಕಾರಿಯಾಗಿತ್ತು.
ಗುರು-ಹಿರಿಯರನ್ನು ಒಳಗೊಂಡ ರಾಜಸಭೆಯಲ್ಲಿ ತನ್ನ ಐವರು ಪತಿಗಳು ನಿವೀರ್ಯ ಷಂಡರಂತೆ ತಲೆಬಗ್ಗಿಸಿ ಕುಳಿತದ್ದನ್ನು ಮೂದಲಿಸುತ್ತ , ತನ್ನ ಮುಡಿಹಿಡಿದು ಎಳೆದಾಡಿದ ದುಶ್ಶಾಸನ ಮಿತಿಮೀರಿದ ನಡವಳಿಕೆಯನ್ನು ಪ್ರತಿಭಟಿಸುತ್ತ ರಣಚಂಡಿಯಂತೆ ಆರ್ಭಟಿಸಿದ ದ್ರೌಪದಿಯಾಗಿ ನವ್ಯಾ ಸುಬ್ರಹ್ಮಣ್ಯನ್ ಅತ್ಯುತ್ತಮ ಅಭಿನಯ ತೋರಿದಳು. ಇಡೀ ಸಭಾಸದನರನ್ನು ಹೃದಯ ಕಲಕುವಂತೆ ಪ್ರಶ್ನಿಸುತ್ತ, ಗತ್ಯಂತರವಿಲ್ಲದೆ, ಕಡೆಯ ಆಶಾಕಿರಣವಾಗಿ, ತಾನು ನಂಬಿದ ದೈವ ಶ್ರೀಕೃಷ್ಣನ ಮೊರೆಹೋಗುವ ದೃಶ್ಯವನ್ನು ಭಾವಪೂರ್ಣವಾಗಿ ಕಡೆದು ನಿಲ್ಲಿಸಿದ್ದು ಹೃದಯಸ್ಪರ್ಶಿಯಾಗಿತ್ತು.
ಇಡೀ ನೃತ್ಯರೂಪಕದಲ್ಲಿ ಏಕಪಾತ್ರಾಭಿನಯ ನೀಡಿದ ಈ ಮೂವರು ಪಾತ್ರಗಳನ್ನು ಬಿಟ್ಟರೆ, ಎದುರಿನ ಪಾತ್ರಧಾರಿಯಾದ ಶ್ರೀಕೃಷ್ಣ ಎಲ್ಲೂ ಕಾಣಿಸಿಕೊಳ್ಳುವುದೇ ಇರುವುದೇ ವಿಶೇಷ. ಅವನು ಕಣ್ಣೆದುರಿಗಿದ್ದಂತೆ ಭಾವುಕತೆಯಿಂದ ಅಭಿನಯಿಸಿದ ಕಲಾವಿದೆಯರ ಕಲ್ಪನಾಭರಿತ ಸಹಜಾಭಿನಯದಲ್ಲಿ ವಿಶೇಷ ವರ್ಚಸ್ಸಿತ್ತು. ರೂಪಕಾಂತ್ಯದಲ್ಲಿ ಕೃಷ್ಣನೊಡನಾಟದ ರಮ್ಯನರ್ತನ ಪರಿಪೂರ್ಣತೆ ತಂದಿತ್ತು. ನಡುವೆ ಪಾತ್ರಗಳ ಕಥಾಕೊಂಡಿಯಂತೆ ಔಚಿತ್ಯಪೂರ್ಣವಾಗಿ ನರ್ತಿಸಿದ ನರ್ತಕಿಯರ ( ರಂಜನಾ, ಡಾ.ಪೂರ್ಣಿಮಾ,ಪವಿತ್ರಪ್ರಿಯ, ಕೀರ್ತನಾ, ಸ್ಮೃತಿ, ಮಾಳವಿಕಾ) ನೃತ್ಯಸಾಮರ್ಥ್ಯ ಮೆಚ್ಚುವಂತಿತ್ತು. ‘ಸಾಧನ ಸಂಗಮ’ದ ಈ ಹೆಮ್ಮೆಯ ಕೊಡುಗೆ ನಿಜಕ್ಕೂ ಒಂದು ದೃಶ್ಯಕಾವ್ಯವಾಗಿ ನೆನಪಿನಪುಟದಲ್ಲಿ ನೆಲೆಯೂರಿತು.