ಮೊದಲನೋಟದಲ್ಲೇ ಆಕರ್ಷಿಸುವ ನಾಗಶ್ರೀಯ ಕ್ರಿಯಾಶೀಲ ಉತ್ಸಾಹೀ ವ್ಯಕ್ತಿತ್ವ, ಅವರ ಆಸಕ್ತಿಕರ ನೃತ್ಯ ಪಯಣವನ್ನು ಉಸುರುತ್ತದೆ. ಅವರ ಭಾವಪೂರ್ಣ ಮೊಗ, ಹೊಳಪಿನ ಕಣ್ಣುಗಳು ಅಭಿನಯಾಭಿವ್ಯಕ್ತಿಗೆ ಪೂರಕವಾಗಿವೆ. ನೃತ್ಯರಂಗ ಹಾಗೂ ರಂಗಭೂಮಿಯ ಮೂರು ದಶಕಗಳ ಅನುಭವ ಅವರ ಸಾಧನೆಗೆ ಅಡಿಗಲ್ಲಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಕನ್ನಡ ರಂಗಭೂಮಿಯ ನುರಿತ ನಟ ‘ ಶ್ರೀನಿವಾಸ ಮೇಷ್ಟ್ರು’ ಎಂದೇ ಹೆಸರಾದ ಶ್ರೀನಿವಾಸ ಮತ್ತು ಪದ್ಮಾವತಿ ದಂಪತಿಗಳ ಪುತ್ರಿಯಾದ ನಾಗಶ್ರೀ ಬಾಲ್ಯದಿಂದಲೇ ನೃತ್ಯದತ್ತ ಒಲವುಳ್ಳವರು. ತಂದೆ, ಮಗಳ ಆಸಕ್ತಿಯನ್ನು ಗುರುತಿಸಿ, ‘ಕಲಾಕ್ಷಿತಿ’ ಖ್ಯಾತಿಯ ಎಂ.ಆರ್.ಕೃಷ್ಣಮೂರ್ತಿ ಅವರ ಬಳಿ ಭರತನಾಟ್ಯ ಕಲಿಯಲು ಸೇರಿಸಿದರು. ಅವರ ಶಿಷ್ಯೆ ಸುಮನಾ ನಾಗೇಶ್ ಅವರಲ್ಲಿ ಸತತ ಇಪ್ಪತ್ತೈದು ವರುಷಗಳು ನಾಗಶ್ರೀ, ತಪಸ್ಸಿನಂತೆ ಪಂದನಲ್ಲೂರು ಶೈಲಿಯ (ಕಲಾಕ್ಷೇತ್ರ ಬಾನಿ) ಭರತನಾಟ್ಯವನ್ನು ಅಭ್ಯಸಿಸಿದರು. ಪ್ರತಿಭಾನ್ವಿತರಾದ ಈಕೆ, ವಿದ್ವತ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು ಅವರ ಹೆಗ್ಗಳಿಕೆ. ಹದಿನಾರನೆಯ ವರುಷಕ್ಕೆ ರಂಗಪ್ರವೇಶ ಮಾಡಿ ತಮ್ಮ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡ ನಾಗಶ್ರೀ, ತಾವು ಕಲಿಯುತ್ತಲೇ ಅಲ್ಲಿನ ಮಕ್ಕಳಿಗೆ ನಾಟ್ಯ ಕಲಿಸುತ್ತ ಗುರುವೂ ಆಗಿ ಅನುಭವ ಸಿದ್ಧಿಸಿಕೊಂಡರು. ಅನೇಕ ಏಕವ್ಯಕ್ತಿ ಪ್ರದರ್ಶನ ಮತ್ತು ಸಮೂಹ ನೃತ್ಯಗಳಲ್ಲಿ ಭಾಗವಹಿಸಿ ದೇಶಾದ್ಯಂತ ಸಂಚರಿಸಿದರು.
ಪರಿಶ್ರಮ, ಅಭ್ಯಾಸ, ಸಾಧನೆಯ ಹಾದಿಯಲ್ಲಿ ನಾಗಶ್ರೀ ತಮ್ಮದೇ ಆದ ‘’ ನಾಟ್ಯ ಸಂಕುಲ ‘’ ಎಂಬ ನೃತ್ಯಸಂಸ್ಥೆ ಸ್ಥಾಪಿಸಿ, ನಿರ್ದೇಶಕಿಯಾಗಿ ಜವಾಬ್ದಾರಿ ವಹಿಸಿಕೊಂಡು ಇಂದು ನೂರಾರು ಮಕ್ಕಳಿಗೆ ಭರತನಾಟ್ಯವನ್ನು ನಿಷ್ಠೆಯಿಂದ ಕಲಿಸುತ್ತಿದ್ದಾರೆ. ಕನ್ನಡ ಎಂ.ಎ. ಪದವೀಧರೆಯಾದ ಇವರು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಅಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ‘ಕಲೈಕಾವೇರಿ’ ಕಾಲೇಜಿನಿಂದ ಭರತನಾಟ್ಯದಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಪದವಿಯನ್ನೂ ಪಡೆದಿದ್ದಾರೆ.
ಬಹುಮುಖ ಪ್ರತಿಭೆಯಾದ ನಾಗಶ್ರೀ ಉತ್ತಮ ರಂಗನಟಿಯೂ ಹೌದು. ಚಿಕ್ಕಂದಿನಿಂದ ನಾಟಕಗಳಲ್ಲಿ ಅಭಿನಯಿಸುವ ಅಭ್ಯಾಸ ಕೂಡ ಬೆಳೆದು ಬಂದಿತ್ತು. ಹದಿನೈದಕ್ಕೂ ಹೆಚ್ಚಿನ ನಾಟಕಗಳಲ್ಲಿ ಭಾಗವಹಿಸಿರುವ ಇವರು, ಪ್ರಖ್ಯಾತ ರಂಗ ನಿರ್ದೇಶಕರಾದ ಬಿ.ಜಯಶ್ರೀ, ಗಿರೀಶ್ ಕಾರ್ನಾಡ್, ಬಿ.ವಿ.ರಾಜಾರಾಂ ಮತ್ತು ಆರ್. ನಾಗೇಶ್ ಅವರ ನಿರ್ದೇಶನದಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಮಾಧವಿ’ ನಾಟಕಾಭಿನಯಕ್ಕೆ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿ ಮತ್ತು ‘ರಾವಿ ನದಿಯ ದಂಡೆಯ ಮೇಲೆ’ ನಾಟಕದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸದ್ಯ ‘ವಿಜಯನಗರ ಬಿಂಬ’ ರಂಗಶಾಲೆಯ ಡಿಪ್ಲೊಮಾ ಕೋರ್ಸಿಗೆ ಸಂಪನ್ಮೂಲ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೃತ್ಯ ಕ್ಷೇತ್ರದಲ್ಲೂ ಇವರ ಪ್ರತಿಭೆ ಸಾಕಷ್ಟು ಗುರುತಿಸಲ್ಪಟ್ಟಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಸತತ ಮೂರು ವರುಷಗಳು ‘ಅತ್ಯುತ್ತಮ ನೃತ್ಯ ಕಲಾವಿದೆ’ ಎಂಬುದಾಗಿ ಪದ್ಮಭೂಷಣ ಡಾ. ವೆಂಕಟಲಕ್ಷಮ್ಮನವರ ಪ್ರಶಸ್ತಿಯನ್ನು ಗಳಿಸಿರುವ ಹೆಮ್ಮೆ ನಾಗಶ್ರೀ ಅವರದು. ಐ.ಐ.ಎಂ.ಬಿ. ನಡೆಸಿದ ರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ನೃತ್ಯಸ್ಪರ್ಧೆಯಲ್ಲೂ ಇವರಿಗೆ ಪ್ರಥಮ ಸ್ಥಾನ. ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ರಾಜ್ಯಮಟ್ಟದ ಸ್ಕಾಲರ್ಷಿಪ್ ಗೆ ಕೂಡ ಭಾಜನರಾದದ್ದು ಇವರ ವೈಶಿಷ್ಟ್ಯ. ಹೀಗಾಗಿ ಅನೇಕ ಪ್ರಶಸ್ತಿ-ಗೌರವಗಳು ಸಹಜವಾಗಿ ಹಿಂಬಾಲಿಸಿ ಬಂದವು. ಮುಂಬೈನ ಸುರಸಿಂಗಾರ್ ಸಂಸದ್ ನೀಡಿದ ‘’ ಸಿಂಗಾರಮಣಿ’’, ಶ್ರೀ ರಾಘವೇಂದ್ರ ಸಂಗೀತ ಪ್ರತಿಷ್ಠಾನದ ‘’ ನಾಟ್ಯ ಸರಸ್ವತಿ’’ , ಅಜಿತ್ ಸ್ಮಾರಕ ಪ್ರತಿಷ್ಠಾನದ ‘’ ನಾಟ್ಯಶ್ರೀ’’ ಮುಂತಾದವು.
ನಾಗಶ್ರೀ ನೀಡಿದ ಏಕವ್ಯಕ್ತಿ ಪ್ರದರ್ಶನಗಳು ಅನೇಕ. ಮೇಲುಕೋಟೆ ವೈರಮುಡಿ ಉತ್ಸವ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಯುವಚೇತನ, ಅಂಕುರ ಕಾರ್ಯಕ್ರಮಗಳು, ಐ.ಸಿ.ಸಿಆರ್. ಮತ್ತು ಮಲ್ಲೇಶ್ವರಂ ಸಂಗೀತ ಸಭಾ, ಶ್ರವಣ ಬೆಳಗೊಳದ ಮಹಾ ಮಸ್ತಕಾಭಿಷೇಕ, ನಾಟ್ಯಪಲ್ಲವ, ಕಿತ್ತೂರು ಉತ್ಸವ, ಮುಂಬೈನ ಕಲಾಕಾರ ಸಮ್ಮೇಳನ,ಚಿದಂಬರ ನಾಟ್ಯಾಂಜಲಿ, ಪೊನ್ನಯ್ಯ ನಾಟ್ಯೋತ್ಸವ , ಕಾರ್ಕಳದ ಪಂಚಕಲ್ಯಾಣ ಮಹೋತ್ಸವಂ, ದಸರಾ ಮತ್ತು ಜನ್ಮಾಷ್ಟಮಿ ವಿಶೇಷ ಉತ್ಸವಗಳು.
ಇವರ ಅನೇಕ ಶಿಷ್ಯರು ಕರ್ನಾಟಕ ಸರ್ಕಾರದ ಶಿಕ್ಷಣ ಮಂಡಳಿ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರುವರಲ್ಲದೆ, ಹಲವರು ರಂಗಪ್ರವೇಶವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡಿದ್ದಾರೆ. ಇವರ ಮುಖ್ಯ ನೃತ್ಯರೂಪಕಗಳೆಂದರೆ, ಸೀತಾ ಕಲ್ಯಾಣ, ಶ್ರೀ ರಂಗನಾಥ ವೈಭವ, ವಚನಗಳು ಮುಂತಾದವು . ಇವರು ನೃತ್ಯ ಸಂಯೋಜಿಸಿ ನಿರ್ಮಿಸಿದ ರಾಮಾಯಣ ಅರವತ್ತಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಕಂಡ ಗರಿಮೆ ಪಡೆದಿದೆ. ತಮ್ಮ ಇಡೀ ಜೀವನ ನಾಟ್ಯಕ್ಕೇ ಅರ್ಪಿತ ಎಂಬ ಸಮರ್ಪಣಾ ಭಾವದಿಂದ ನೃತ್ಯಾಭಿವೃದ್ಧಿಯ ಕಾಯಕ ಕೈಕೊಂಡಿರುವ ನಾಗಶ್ರೀ, ಎಂಜಿನಿಯರ್ ಪತಿ ರಾಘವೇಂದ್ರ ಅವರೊಡನೆ ಸುಖೀ ಸಂಸಾರಿ.