Image default
Dancer Profile

ನೃತ್ಯ ಸಾಧನೆಯ ಮಹತ್ವಾಕಾಂಕ್ಷಿ ಶ್ರೀ ರಂಜಿತಾ ನಾಗೇಶ್

ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಶ್ರೀರಂಜಿತಾ,  ಹುಟ್ಟಿದ್ದು, ಬೆಳೆದಿದ್ದು ಮತ್ತು ಬದುಕು ಕಟ್ಟಿಕೊಂಡು ‘’ನಾಟ್ಯ ಭಾರತಿ’’ ನೃತ್ಯ ಸಂಸ್ಥೆಯನ್ನು ಮುನ್ನಡೆಸುತ್ತ ಸಾಧನೆಯ ಪಥದಲ್ಲಿ ಕ್ರಮಿಸುತ್ತಿರುವುದು ಇಲ್ಲೇ. ನೃತ್ಯವನ್ನು ಅತೀವ ಪ್ರೀತಿಸುವ ಇವರ ಸಂಪೂರ್ಣ ಗಮನ, ಧ್ಯಾನ-ಬದ್ಧತೆ ಭರತನಾಟ್ಯದ ಆಳವಾದ ಅಭ್ಯಾಸದೆಡೆಗೆ. ಶಿಕ್ಷಕರಾಗಿದ್ದ ತಂದೆ ಚಂದ್ರಶೇಖರ ಮತ್ತು ತಾಯಿ ರತ್ನಾ ಮಗಳ ನಾಟ್ಯದ ಒಲವನ್ನು ಬಾಲ್ಯದಲ್ಲೇ ಗಮನಿಸಿ, ಅವಳಿಷ್ಟದಂತೆ ಗುರು ಹೆಚ್.ಆರ್. ಕೇಶವಮೂರ್ತಿ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಆಗ ರಂಜಿತಾ ವಯಸ್ಸು ಹತ್ತರ ಆಸುಪಾಸು. ಚೂಟಿಯಾಗಿದ್ದ ಹುಡುಗಿ ಭರತನಾಟ್ಯದ ಬಗ್ಗೆ ಅಪಾರ ಆಸಕ್ತಿ ತಳೆದು,  ಪರಿಶ್ರಮ-ಪ್ರಾಮಾಣಿಕ ಕಲಿಕೆಗಳಿಂದ ಜ್ಯೂನಿಯರ್ ಸೀನಿಯರ್ ಮತ್ತು ವಿದ್ವತ್  ಪರೀಕ್ಷೆಗಳಲ್ಲಿ ‘ಡಿಸ್ಟಿಂಕ್ಷನ್ ‘ ಪಡೆದು ಜೊತೆಗೆ ಕರ್ನಾಟಕ ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲೂ ಜಯಭೇರಿ ಗಳಿಸಿದಾಗ ಗುರುಗಳಿಗೆ ಅಪಾರ ಹೆಮ್ಮೆ. ತಮ್ಮ ‘ಕೇಶವ ನೃತ್ಯ ಶಾಲೆ’ಯ ಎಲ್ಲ ನೃತ್ಯರೂಪಕ, ನಾಟಕಗಳಲ್ಲೂ ಭಾಗವಹಿಸುವ ಅವಕಾಶ ನೀಡಿ ಅವಳ ಪ್ರತಿಭೆ ಮಿಂಚುವಂತೆ ಮಾಡಿದರು.

ಓದಿನಲ್ಲೂ ಜಾಣೆಯಾಗಿದ್ದ ಶ್ರೀರಂಜಿತಾ ಶೇಷಾದ್ರಿಪುರಂ ಕಾಲೇಜಿನಿಂದ ಬಿಕಾಂ ಪದವೀಧರೆಯಾದರು. ಶಾಲಾ-ಕಾಲೇಜಿನ          ನೃತ್ಯಸ್ಪರ್ಧೆಗಳಲ್ಲಿ ಇವಳಿಗೇ ಬಹುಮಾನಗಳು ಕಟ್ಟಿಟ್ಟಬುತ್ತಿ. ಜೊತೆಗೆ ಗುರು ಶ್ಯಾಂ ಪ್ರಕಾಶ್ ಮತ್ತು ಬಿ.ಕೆ.ವಸಂತಲಕ್ಷ್ಮೀ ಅವರಿಂದಲೂ ಉತ್ತಮ ಶಿಕ್ಷಣ ದೊರೆಯಿತು. ಅನೇಕ ಏಕವ್ಯಕ್ತಿ ಪ್ರದರ್ಶನ ನೀಡುವುದರ ಜೊತೆಗೆ, ನೃತ್ಯಶಾಲೆಯ ತಂಡದೊಂದಿಗೆ ಹಂಪಿ, ತಿರುವನಂತಪುರ, ಗೋವಾ ಮುಂಬೈಗಳಲ್ಲಿ ನಡೆದ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಪ್ರಮುಖ ಪಾತ್ರಗಳಲ್ಲಿ   ನರ್ತಿಸುವ ಅವಕಾಶ ಒದಗಿಬಂತು. ಅದರಲ್ಲೂ ಅತ್ಯಂತ ಖ್ಯಾತಿ ಪಡೆದ, ಅನೇಕ ಪ್ರದರ್ಶನಗಳನ್ನು ಕಂಡ ‘ಕಾವೇರಿ ವೈಭವ’ ದಲ್ಲಿ ಸುಮಾರು ಏಳೆಂಟು ಪಾತ್ರಗಳನ್ನು ಒಬ್ಬಳೇ ನಿರ್ವಹಿಸಿದ ಸಂದರ್ಭ, ಸ್ಮರಣೀಯ ಅನುಭವ.

ಮುಂದಿನ ಗುರಿ ಗುರುತಿಸಿಕೊಳ್ಳುವ ಮಧ್ಯಂತರ ಅವಧಿಯಲ್ಲಿ ಶ್ರೀರಂಜಿತಾ, ಕೆಲವರ್ಷಗಳು  ಶಾಲೆಯೊಂದರಲ್ಲಿ ಕನ್ನಡ ಮತ್ತು ಮುಕ್ತಶೈಲಿಯ ಹಾಗೂ ಜಾನಪದ ನೃತ್ಯಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾಯ್ತು. ಆದರೂ ಉನ್ನತ ಅಧ್ಯಯನಕ್ಕಾಗಿ ಮನ ತುಡಿಯುತ್ತಲೇ ಇತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಭರತನಾಟ್ಯದಲ್ಲಿ ಎಂ.ಎ.ಸ್ನಾತಕೋತ್ತರ ಪದವಿಗೆ ಅಭ್ಯಾಸ ನಡೆಸಿ ಅದರಲ್ಲೂ ಅತ್ಯುಚ್ಚ ಅಂಕಗಳಿಂದ ತೇರ್ಗಡೆಯಾದ ಹೆಮ್ಮೆ. ನೃತ್ಯವೇ ತನ್ನ ಬಾಳಿನಗುರಿ ಎಂದು ಶ್ರೀರಂಜಿತಾ, ತೀರ್ಮಾನಿಸಿದ್ದಕ್ಕೆ ಪೂರಕವಾಗಿ ಆಕೆಯ ಬಾಳ ಸಂಗಾತಿಯಾಗಿ ದೊರೆತವರು ಉತ್ತಮ ನೃತ್ಯ ಪಟು ನಾಗೇಶ್.  ಕೇಶವ ನೃತ್ಯಶಾಲೆಯಲ್ಲೇ ನಾಟ್ಯ ಕಲಿತು, ವಿದ್ವತ್ ಗಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದ ನೃತ್ಯ ಸಹಪಾಠಿಯೇ. ದೊಡ್ದವರೇ ನಿಂತು ನಡೆಸಿದ ಮದುವೆ. ಮಗಳು ನೃತ್ಯಶ್ರೀ ಕೂಡ ಭರತನಾಟ್ಯದಲ್ಲಿ ಸೀನಿಯರ್ ಪಾಸ್ ಮಾಡಿ ಪದವಿ ಶಿಕ್ಷಣ ನಡೆಸುತ್ತಿರುವ ಉದಯೋನ್ಮುಖ ನೃತ್ಯ ಕಲಾವಿದೆ. ಈ ಕಲಾಕುಟುಂಬ ಜೊತೆಯಾಗಿ ನೀಡಿದ ನೃತ್ಯ ಪ್ರದರ್ಶನಗಳು ಹಲವಾರು.

ಬಹಳ ಆಸಕ್ತಿದಾಯಕ ಸಂಗತಿಯೆಂದರೆ ಶ್ರೀರಂಜಿತಾ, ಮದುವೆಯಾಗಿ ಮಗಳು ಹುಟ್ಟಿದನಂತರ ತನ್ನ ‘ರಂಗಪ್ರವೇಶ’ ಮಾಡಿದ್ದು. ನೃತ್ಯವಿದ್ಯಾರ್ಥಿಯಾಗಿದ್ದಾಗ ನಾಗೇಶ್ ನಡೆಸುತ್ತಿರುವ ‘ ನಾಟ್ಯಭಾರತಿ’ ನೃತ್ಯಶಾಲೆಯಲ್ಲಿ ನೂರಾರು ಮಕ್ಕಳಿಗೆ ನಾಟ್ಯಶಿಕ್ಷಕಿಯಾಗಿದ್ದವರು, ವಿವಾಹಾನಂತರ ಶಾಲೆಯ ನೇತೃತ್ವ ವಹಿಸಿಕೊಂಡು ಉತ್ಸಾಹದಿಂದ ಮುನ್ನಡೆಸುತ್ತಿರುವುದರಲ್ಲಿ ಆಕೆಗೆ ಸಾಕಷ್ಟು ಹೆಮ್ಮೆ ಇದೆ.

ರಾಷ್ಟ್ರೀಯ ವಿದ್ಯಾಲಯದಲ್ಲಿ ಅನೇಕ ಕಿವುಡು ಮತ್ತು ಮೂಕ ಮಕ್ಕಳಿಗೆ ನೃತ್ಯ ಸಂಯೋಜಿಸಿ ನಾಟ್ಯವನ್ನು ಹೇಳಿಕೊಡುತ್ತಿದ್ದ ಹೆಮ್ಮೆಯೂ , ವಿಶಿಷ್ಟ ಅನುಭವ ತಮ್ಮದೆನ್ನುತ್ತಾರೆ ಶ್ರೀರಂಜಿತಾ. ಸುಮಾರು ನೂರು ಮಕ್ಕಳನ್ನು ಒಗ್ಗೂಡಿಸಿ ‘ಪ್ರಕೃತಿ ಪ್ರಗಾಥ ’ ಎಂಬ ನೃತ್ಯ ನಾಟಕವನ್ನು ಕಲಿಸಿ, ವಿಶ್ವ ಅಂಗವಿಕಲರ ದಿನಾಚರಣೆಯ ಸಂದರ್ಭ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ  ನಿಮಾನ್ಸ್ ನಲ್ಲಿ ಪ್ರದರ್ಶಿಸಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್ ಅವರಿಂದ ಗೌರವ ಪಡೆದ ಧನ್ಯತೆ ಇವರದು. ದೂರದರ್ಶನದಲ್ಲಿ ಬಿ-ಹೈ ಮಾನ್ಯತೆ ಪಡೆದ ಕಲಾವಿದೆಯಾದ ಇವರು ಚಂದನದಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹನ್ನೆರಡು ಶಿಷ್ಯರ ರಂಗಪ್ರವೇಶ ನೆರವೇರಿಸಿರುವ ಇವರು ಪತಿ ಮತ್ತು ಮಗಳೊಂದಿಗೆ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿರುವುದರಲ್ಲಿ ಕೆನಡಾದಲ್ಲಿ ನೀಡಿದ ನೃತ್ಯ ಪ್ರದರ್ಶನ ವಿಶೇಷ .

ಇವರಿಗೆ ಸಂದಿರುವ ಪ್ರಶಸ್ತಿಗಳೆಂದರೆ, ನಾಟ್ಯಪ್ರವೀಣೆ, ಉತ್ತಮ ಶಿಕ್ಷಕಿ, ಕಲಾಪೋಷಕಿ ಮುಂತಾದವು.

Related posts

ನಾಟ್ಯ-ಯೋಗ ಸಂಗಮ ಯಾಮಿನೀ ಮುತ್ತಣ್ಣ

YK Sandhya Sharma

ನಮ್ರತಾ-ಜಗತಿ ಭರವಸೆಯ ಕೂಚಿಪುಡಿ ನೃತ್ಯ ಕಲಾವಿದೆಯರು

YK Sandhya Sharma

ಪರಿಪೂರ್ಣ ನೃತ್ಯಗುರು ರಾಧಾ ಶ್ರೀಧರ್

YK Sandhya Sharma

Leave a Comment

This site uses Akismet to reduce spam. Learn how your comment data is processed.