Image default
Dancer Profile

ಮನೋಜ್ಞ ಕಥಕ್ ನೃತ್ಯ ಕಲಾವಿದೆ ಮಾನಸ ಜೋಶಿ

ಮೊದಲ ನೋಟದಲ್ಲೇ ನೃತ್ಯಕಲಾವಿದೆ ಎಂದು ಭಾಸವಾಗುವ ವರ್ಚಸ್ವೀ ಮುಖ, ಭಾವಪೂರ್ಣ ಕಂಗಳು ಮತ್ತು ನೃತ್ಯಕ್ಕೆ ಹೇಳಿ ಮಾಡಿಸಿದಂಥ ನೀಳ ನಿಲುವಿನ ಪ್ರಮಾಣಬದ್ಧ ಶರೀರ. ಇವರೇ ಭರತನಾಟ್ಯ ಹಾಗೂ ಕಥಕ್ ನೃತ್ಯಗಾರ್ತಿ ಮಾನಸ ಜೋಶಿ. ಇವರು ಉತ್ತಮ ಅಭಿನೇತ್ರಿಯೂ ಹೌದು. ಏಳುನೂರು ಕಂತುಗಳನ್ನು ದಾಟಿ ಪ್ರಸಾರವಾಗುತ್ತಿರುವ ‘ಮಹಾದೇವಿ’ ಜನಪ್ರಿಯ ಧಾರಾವಾಹಿಯಲ್ಲಿ ಮಹಾದೇವಿಯ ಪ್ರಮುಖ ಪಾತ್ರದಲ್ಲಿ ಎಲ್ಲರ ಮನಗೆದ್ದಿರುವ ಕಿರುತೆರೆಯ ಕಲಾವಿದೆ ಕೂಡ. ಹಲವು ಕನ್ನಡ ಮತ್ತು ಆಂಗ್ಲ ನಾಟಕಗಳಲ್ಲಿ ನಟಿಸಿದ ರಂಗಭೂಮಿ ನಟಿ ಮತ್ತು ಕೆಲವು ಚಲನಚಿತ್ರಗಳಲ್ಲಿ ಅಭಿನಯಿಸಿದ ಅನುಭವಗಳು ಇವರ ಬಹುಮುಖ ಪ್ರತಿಭೆಯನ್ನು ಪರಿಚಯಿಸುತ್ತವೆ.  

ದೂರದರ್ಶನ ಕೇಂದ್ರದ ಉಪಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಮಹೇಶ್ ಜೋಷಿ ಹಾಗೂ ಮಾಲತಿಯವರ ಪುತ್ರಿಯಾದ ಮಾನಸ ಬಾಲ್ಯದಿಂದಲೂ ಪ್ರತಿಭಾವಂತೆ. ನೃತ್ಯದ ಬಗ್ಗೆಯಂತೂ ಅಪಾರ ಒಲವು. ಜೊತೆಗೆ ತಾಯಿಯ ಒತ್ತಾಸೆ ಬೇರೆ. ಎಂಟುವರ್ಷದ ಹುಡುಗಿಯಾಗಿದ್ದಾಗ ವಿದುಷಿ ರೂಪಶ್ರೀ ಅವರಲ್ಲಿ ಭರತನಾಟ್ಯ ಕಲಿಯಲು ಸೇರ್ಪಡೆ. ಸತತ ಆರು ವರುಷಗಳ ಅಭ್ಯಾಸ. ಜ್ಯೂನಿಯರ್ ಪರೀಕ್ಷೆಯೂ ಆಯಿತು. ಅನೇಕ ಕಡೆ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆಯ ಮಾತುಗಳು ಬಂದವು. ಕಥಕ್ ನೃತ್ಯ ಕಲಿಯುವತ್ತ ಮನಸ್ಸಾಗಿ ಮಾನಸ, ತನ್ನ ಹದಿನಾಲ್ಕನೆಯ ವಯಸ್ಸಿಗೆ ಕಥಕ್ ನೃತ್ಯ ಗುರು ಟಿ.ಡಿ.ರಾಜೇಂದ್ರ ಮತ್ತು ನಿರುಪಮಾ ಅವರ ಬಳಿ ನಿಷ್ಠೆಯಿಂದ ಸುಮಾರು ಹನ್ನೆರಡು ವರುಷಗಳ ಕಾಲ `ಕಥಕ್ ‘ ಶೈಲಿಯ ನೃತ್ಯವನ್ನು ಏಕಾಗ್ರತೆಯಿಂದ ಕಲಿತರು. ಗುರುಗಳ ತಂಡದೊಂದಿಗೆ ಅನೇಕ ಕಡೆ ಕಾರ್ಯಕ್ರಮ ನೀಡಿದ್ದಲ್ಲದೆ, ಸ್ವತಂತ್ರವಾಗಿ ಅನೇಕ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಲಾರಂಭಿಸಿದಾಗ ಕಲಾರಸಿಕರ, ನೃತ್ಯಜ್ಞರ ಹಾಗೂ ವಿಮರ್ಶಕರ ಗಮನ ಸೆಳೆಯತೊಡಗಿದರು. ಕಲಾರಂಗದಲ್ಲಿ ಹೇಸು ಗಳಿಸತೊಡಗಿದ ಮಾನಸ, ಒದಗಿ ಬಂದ ಅವಕಾಶಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿ, ಸೋಲೋ ನೃತ್ಯಪ್ರದರ್ಶನಗಳನ್ನೂ ನೀಡುವುದರಲ್ಲಿ ನಿರತರಾದರು.

ಸಮಕಾಲೀನ ನೃತ್ಯದಲ್ಲೂ ತರಬೇತಿ ಪಡೆದುಕೊಂಡಿದ್ದ ಮಾನಸ, ಹೆಚ್ಚಿನ ಶಿಕ್ಷಣಕ್ಕಾಗಿ ಪ್ರಖ್ಯಾತ ಗುರು ಮಾಯಾರಾವ್ ಅವರ ಬಳಿ ‘ಗುರುಕುಲ’ ಮಾದರಿಯ, ಕಾಳಜಿಪರ ಬೋಧನೆಯನ್ನು ಪಡೆದು, ಬದ್ಧತೆಯಿಂದ ವಿದ್ಯಾರ್ಜಿಸಿ, ಅನೇಕ ವಿಶೇಷ ಕೃತಿಗಳನ್ನು ಅಭ್ಯಾಸ ಮಾಡಿದರು. ಇಲ್ಲಿಗೆ ಇವರ ಕಲಿಯುವ ದಾಹ ಇಂಗಲಿಲ್ಲ. ಕೆಲಕಾಲ ಗುರು ನಂದಿನಿ ಮೆಹ್ತಾ ಅವರಿಂದ ಕಲಿತ ತೃಪ್ತಿ ಇವರದು. ಜೊತೆಗೆ ದೆಹಲಿಯ ಪ್ರಖ್ಯಾತ ಕಥಕ್ ಗುರು ರಾಣಿ ಖಾನಂ ಅವರ ಮಾರ್ಗದರ್ಶನದಲ್ಲಿ ಇನ್ನೂ ಕಲಿಯುತ್ತಲೇ ಇದ್ದಾರೆ. ಖ್ಯಾತ ಗುರುಗಳಾದ ದುರ್ಗಾ ಆರ್ಯ ಮತ್ತು ಶಾಶ್ವತಿ ಸೇನ್ ಅವರ ತಜ್ಞ ಕಾರ್ಯಾಗಾರಗಳಲ್ಲಿ ಭಾಗವಹಿಸಿ ವಿಶೇಷಜ್ಞಾನವನ್ನು ಪಡೆದುಕೊಂಡಿದ್ದಾರೆ.

ಒಟ್ಟು ಹದಿನೈದು ವರುಷಗಳ ಕಥಕ್ ಶಿಕ್ಷಣದ ಅನುಭವ ಗಳಿಸಿರುವ ಮಾನಸ, ಈಗ ನುರಿತ ಕಲಾವಿದೆಯಾಗಿ ದೇಶದ ಒಅಲ ಹೊರಗಿನ ಸಂಸ್ಥೆಗಳಿಂದ ಆಹ್ವಾನಿತರಾಗಿ ವಿಪುಲ ಕಾರ್ಯಕ್ರಗಳನ್ನು ಪ್ರಸ್ತುತಿಪಡಿಸಿರುವ ಹಿರಿಮೆ ಇವರದು. ರಾಷ್ಟ್ರೀಯ ದೂರದರ್ಶನದ ‘ ಎ ‘ ಗ್ರೇಡ್ ಕಲಾವಿದೆಯಾಗಿ, ಕೇಂದ್ರ ಹಾಗೂ ಚಂದನವಾಹಿನಿಯಲ್ಲಿ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿರುವ ಹೆಮ್ಮೆ ಇವರದು. ಓದಿನಲ್ಲೂ ಮುಂದಿರುವ ಮಾನಸ, ವಿದ್ಯುನ್ಮಾನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದು, ಹಲವು ಕಾಲ ಪತ್ರಿಕೋದ್ಯಮಿಯಾಗಿ, ಕಲಾವಿಮರ್ಶಕರಾಗಿ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ.

ಇವರ ಪ್ರತಿಭೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಇವರನ್ನು ಹಿಂಬಾಲಿಸಿವೆ. ಪುಟ್ಟರಾಜ ಗವಾಯಿ ಯುವಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳನ್ನೂ ಪಡೆದಿರುವ ಮಾನಸ, ವಿಶ್ವವಿಖ್ಯಾತ ಮೈಸೂರು ದಸರಾ, ವಿಶ್ವ ಕನ್ನಡ ಸಮ್ಮೇಳನ, ದೆಹಲಿಯಲ್ಲಿ ನಡೆದ ‘ರವಾಂಡ ಹೈ ಕಮೀಷನ್ನಿನ’ ೬೦ ನೇ ವಾರ್ಷಿಕೋತ್ಸವ, ರಾಜಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ನರ್ತಿಸಿರುವುದಲ್ಲದೆ, ಅಮೆರಿಕಾದ ‘ಅಕ್ಕ ಸಮಾವೇಶ’ದಲ್ಲಿ ಎರಡುಬಾರಿ ನೃತ್ಯ ಪ್ರದರ್ಶನ ನೀಡಿರುವ ವಿಶೇಷತೆ ಇವರದು.

ಬಾಲ್ಯದಿಂದಲೂ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಮಾನಸಾಗೆ , ಶಾಲಾ-ಕಾಲೇಜು ದಿನಗಳಿಂದ ನಾಟಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಹವ್ಯಾಸ. ಪ್ರಖ್ಯಾತ ಹಿಂದೀ ನಟ ಅನುಪಮ್ ಖೇರ್ ನಡೆಸುವ ‘ ಆಕ್ಟರ್ ಪ್ರಿಪೆರ್ಸ್ ‘ ಎಂಬ ನಟನಾ ಶಿಕ್ಷಣ ಸಂಸ್ಥೆಯ ಅಭಿನಯ ವಿಭಾಗದಲ್ಲಿ ‘ಡಿಪ್ಲೊಮಾ’ ಪದವಿ ಪಡೆದಿರುವ ಮಾನಸ, ‘ಬಹು ಪರಾಕ್ ‘ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದರು.ಲಾಸ್ಟ್ ಬಸ್,ಕಿರಗೂರಿನ ಗಯ್ಯಾಳಿಗಳು, ಯಶೋಗಾಥ, ದೇವರನಾಡಲ್ಲಿ ಮುಂತಾದ ಚಲನಚಿತ್ರಗಳಲ್ಲಿ ಗಮನಾರ್ಹ ಪಾತ್ರ ಮಾಡಿದ್ದಾರೆ. ಇವರು ಅಭಿನಯಿಸಿದ ಹಜ್, ಕೌದಿ ಎಂಬ ಪ್ರಯೋಗಾತ್ಮಕ ಚಿತ್ರಗಳಿಗೆ ರಾಜ್ಯಪ್ರಶಸ್ತಿ ಲಭಿಸಿದೆ.

ಪ್ರತಿಭಾನ್ವಿತ ಕುಟುಂಬದ ಹಿನ್ನಲೆಯುಳ್ಳ ಇವರ ಸಹೋದರ ವಿಕ್ರಂ ಜೋಷಿ ಕೂಡ ಜಸ್ಟ್ ಪಾಸ್ ಚಲನಚಿತ್ರದ ನಾಯಕನಾಗಿ ಅಭಿನಯಿಸಿದ್ದಾನೆ. ಪತಿ ಸಂಕರ್ಷಣ ಇಂಜಿನಿಯರಾಗಿ ಉನ್ನತಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವರು.

Related posts

ನಾಟ್ಯ- ಯೋಗ ಕಲಾಸಾಧಕಿ ಜ್ಯೋತಿ ಪಟ್ಟಾಭಿರಾಮ್

YK Sandhya Sharma

ನೃತ್ಯಾಭಿನಯ ಚತುರೆ ವಿದ್ಯಾಲತಾ ಜೀರಗೆ

YK Sandhya Sharma

ಭರತನಾಟ್ಯ ಪ್ರವೀಣೆ ದೀಪಾ ಭಟ್

YK Sandhya Sharma

Leave a Comment

This site uses Akismet to reduce spam. Learn how your comment data is processed.