ಅಂದು ವೇದಿಕೆಯ ಮೇಲೆ ಪ್ರಭುದ್ಧಾಭಿನಯದಿಂದ ತನ್ಮಯಳಾಗಿ ನರ್ತಿಸುತ್ತಿದ್ದ ಅಮೇರಿಕಾದ ಕ್ಯಾಲಿಫೋರ್ನಿಯಾದ ಚೈತ್ರ ಸತ್ಯನಾರಾಯಣ ಅವರಿಗೆ ‘ರಂಗಪ್ರವೇಶ’ದ ಸಂಭ್ರಮ. ಅಲ್ಲಿನ ‘ವಿದ್ಯಾ ಡಾನ್ಸ್ ಅಕಾಡೆಮಿ’ಯ ಖ್ಯಾತ ನಾಟ್ಯಗುರು, ನೃತ್ಯ ಸಂಯೋಜಕಿ ಮತ್ತು ಭರತನಾಟ್ಯ ಕಲಾವಿದೆಯಾದ ವಿದ್ಯಾಲತಾ ಜೀರಿಗೆ ಅವರ ಸಮರ್ಥ ಗರಡಿಯಲ್ಲಿ ರೂಪುಗೊಂಡ ಚೈತ್ರ ಅಂದು ಪ್ರಸ್ತುತಪಡಿಸಿದ ಕೃತಿಗಳೆಲ್ಲ ಸುಂದರ ನಿರೂಪಣೆಯಿಂದ ಕಲಾರಸಿಕರ ಮನಸೂರೆಗೊಂಡವು
ಶುಭಾರಂಭದ ‘ಪುಷ್ಪಾಂಜಲಿ’ಯಲ್ಲಿ ದೇವಾನುದೇವತೆ, ಗುರು-ಹಿರಿಯರಿಗೆ ನಮನ ಸಲ್ಲಿಸಿ, ಪ್ರಥಮ ಪೂಜಿತ ಗಣಪನ ಅನೇಕ ರೂಪಗಳನ್ನು ವಿಭಿನ್ನಭಂಗಿಯಲ್ಲಿ ಸಾಕ್ಷಾತ್ಕರಿಸಿದಳು. ಸಂಚಾರಿಯಲ್ಲಿ ಮೂಡಿಬಂದ ಗಣಪತಿಯ ಜನನ ವೃತ್ತಾಂತದ ನಿರೂಪಣೆ, ಕಲಾವಿದೆಯ ಅಭಿನಯನೈಪುಣ್ಯಕ್ಕೆ ಕನ್ನಡಿ ಹಿಡಿಯಿತು. ಜತೆಗೆ ಕಲಾವಿದೆಯ ಆತ್ಮವಿಶ್ವಾಸದ ಭಾವ ಆಕೆ ಆನಂದಿಸುತ್ತಾ ನರ್ತಿಸುವಂತೆ ಸ್ಫೂರ್ತಿ ನೀಡಿತ್ತು. ‘ಭೂಮಾತೆ’ (ರಚನೆ :ಡಾ.ಸಂಜಯ್ ಶಾಂತಾರಾಂ)ಯ ವೈಶಿಷ್ಟ್ಯ-ಮಹತ್ವವನ್ನು ಹೃದಯಂಗಮವಾಗಿ ವರ್ಣಿಸುವ ‘ದೇವೀ’ ವಂದನೆಯ ಕೃತಿಯಲ್ಲಿ ಚೈತ್ರಾ, ವರ್ಚಸ್ವೀ ಜತಿಗಳೊಂದಿಗೆ ತನ್ನ ಸುಂದರಾಭಿನಯದಿಂದ ಕಣ್ಮನಕ್ಕೆ ತಂಪೆರೆದಳು. ತ್ರಿಕಾಲ ಜತಿಗಳ ಸೂಕ್ಷ್ಮತೆಯ ಯಶಸ್ವೀ ನಿರ್ವಹಣೆ, ಮೋಹಕ ನೃತ್ತಗಳೊಂದಿಗೆ ಆಕಾಶಚಾರಿಗಳು ಮೋಡಿ ಮಾಡಿದ್ದವು.
ಅನಂತರ, ಶುದ್ಧ ನೃತ್ತಬಂಧವಾದ ‘ಜತಿಸ್ವರ’ದಲ್ಲಿ ಕಲಾವಿದೆಯ ಅಂಗಶುದ್ಧಿಯ ಸೌಂದರ್ಯ ಎದ್ದುಕಂಡಿತು. ಖಚಿತ ಹಸ್ತ-ಖಚಿತ ಅಡವುಗಳು, ಪಾದಭೇದಗಳು, ಲಯಬದ್ಧತೆಯಿಂದ ಚಿತ್ತಾಕರ್ಷಕವಾಗಿ ಮೂಡಿಬಂತು. ಗುರು ವಿದ್ಯಾಲತಾರ ಪ್ರಥಮ ರಂಗಪ್ರವೇಶದ ನಟುವಾಂಗ ಸಶಕ್ತವಾಗಿತ್ತು. ಚಿತ್ರಸಭೆಯಲ್ಲಿ ನಟರಾಜನ ಅನುಪಮ ನರ್ತನವನ್ನು ವರ್ಣಿಸುವ ‘ಶಿವಸ್ತುತಿ’ (ರಚನೆ-ಸ್ವಾತಿ ತಿರುನಾಳ್) ಯಲ್ಲಿ ಚೈತ್ರ, ಶಂಕರನ ರುದ್ರ-ರಮಣೀಯ ರೂಪವನ್ನು ಸೊಗಸಾದ ಆಂಗಿಕಾಭಿನಯದಲ್ಲಿ ಕಟ್ಟಿಕೊಟ್ಟಳು. ಭಕ್ತಿಯ ಸ್ರೋತದ ಕೃತಿಯ ಒಂದೊಂದು ಸಾಲಿಗೂ ಅದ್ಭುತ ಸಂಚಾರಿಗಳು ತೆರೆದುಕೊಂಡವು . ಹುಸಿ ಅಡವುಗಳ ಸೌಂದರ್ಯ, ಲಾಸ್ಯದ ಲೇಪನ, ಪಾದಭೇದಗಳ ಸೌಂದರ್ಯ ಮನರಂಜಿಸಿತು. ವೀರ-ಅಟ್ಟಹಾಸದ ಪೌರುಷ ನಡೆಯ ನೃತ್ತಗಳ ವಿವಿಧ ಆಯಾಮಗಳನ್ನು ವಿಶಿಷ್ಟವಾಗಿ ಪ್ರದರ್ಶಿಸಿದಳು. ನಟರಾಜನ ಅನನ್ಯ ಭಂಗಿಗಳು ಮುದನೀಡುವಂತಿದ್ದವು.
ಪ್ರಸ್ತುತಿಯ ಹೃದಯಭಾಗ ರೀತಿಗೌಳ ರಾಗದ ‘ ಶ್ರೀಕೃಷ್ಣ ಕಮಲನಾಥೋ’ ಪಕ್ವ ಅಭಿನಯದಿಂದ ಹೃದ್ಯವಾಗಿ ಅಷ್ಟೇ ಅಚ್ಚುಕಟ್ಟಾಗಿ ನಿರೂಪಿತವಾಯಿತು. ವಿಭಿನ್ನ ವಿನ್ಯಾಸದ ನೃತ್ತಗಳು ಒಂದೆಡೆ ಆಕರ್ಷಿಸಿದರೆ, ಸುಂದರ ಸಂಚಾರಿಗಳ ಕಥಾನಕ ತಮ್ಮ ಸಂಕ್ಷಿಪ್ತ ಗುಣದಿಂದ ಮುದನೀಡಿತು. ಹಾಸ್ಯ ಕೆನೆಗಟ್ಟಿದ ಪೂತನಿಯ ಪ್ರಸಂಗ ಮತ್ತು ಇನ್ನಿತರ ಸನ್ನಿವೇಶಗಳ ಚಿತ್ರಣದಲ್ಲಿ ಮಿನುಗಿದ ನಾಟಕೀಯ ಸನ್ನಿವೇಶಗಳಲ್ಲಿ ಕಲಾವಿದೆಯ ಪಕ್ವ ಅಭಿನಯದ ಸಾಮರ್ಥ್ಯ ಅನಾವರಣಗೊಳ್ಳುತ್ತಾ ಹೋಯಿತು. ಇಡೀ ರಂಗವನ್ನು ಬಳಸಿಕೊಂಡು ಚೈತ್ರ ಸರಾಗವಾಗಿ ಸಂಕೀರ್ಣ ಜತಿಗಳನ್ನು ನಿರ್ವಹಿಸುತ್ತಾ ಭಾವಪೂರ್ಣ ಅಭಿನಯಕ್ಕೆ ತೆರೆದುಕೊಂಡಳು. ಕುಣಿಸುವ ಲಯದ ‘ಗೋಪಾ-ಗೋಪಿ…’ ಸಾಲಿನ ನೃತ್ತಗಳು ಮುದನೀಡಿದವು.
ಮುಂದೆ ಗೋಟೂರಿ ಸಾಹಿತ್ಯದ, ಪ್ರವೀಣ್ ಡಿ.ರಾವ್ ಸಂಯೋಜನೆಯ ‘ದ್ರುತನಾಗವೀಣೆ’ ಮೋಹಕವಾಗಿ ಪ್ರಸ್ತುತಗೊಂಡು, ಕಲಾವಿದೆ ಆಹ್ಲಾದಕರವಾಗಿ, ಲೀಲಾಜಾಲವಾಗಿ ನರ್ತಿಸಿದಳು. ‘ಅಂಬಾ ಜಗಜ್ಜನನಿ’ ದೇವೀ ಕೃತಿ ದೈವೀಕತೆಯಿಂದ ಭಕ್ತಿಭಾವ ಪುರಸ್ಸರವಾಗಿ ಮನದುಂಬಿತು. ಆಕೆಯ ಅಪೂರ್ವ ಭಂಗಿಗಳು ಮತ್ತೆ ಮತ್ತೆ ನೋಡುವಂತಿದ್ದವು. ವಿರಹೋತ್ಖಂಡಿತ ನಾಯಕಿಯ ವಿರಹವೇದನೆಯನ್ನು ಕಮಾಚ್ ರಾಗದ `ಜಾವಳಿ’ಯಲ್ಲಿ, ಕಲಾವಿದೆ ಹೃದಯಸ್ಪರ್ಶಿಯಾಗಿ ಅಭಿವ್ಯಕ್ತಿಸಿದಳು. ಮಿಂಚಿನ ವೇಗದ ನೃತ್ತಮೇಳಗಳಿಂದ, ಮನೋಹರ ಭಂಗಿಗಳ ಸಂಗಮದಿಂದ ಶುದ್ಧ ಧನ್ಯಾಸಿರಾಗದ ‘’ತಿಲ್ಲಾನ’’ ಮನಸ್ಸನ್ನು ಆವರಿಸಿಕೊಂಡಿತು. ಬಾಲಸುಬ್ರಮಣ್ಯ ಶರ್ಮರ ಸುಮಧುರ ಗಾಯನದೊಡಗೂಡಿದ ಇಂಪಾದ ವಾದ್ಯಗೋಷ್ಠಿ ನೃತ್ಯಕ್ಕೆ ವಿಶೇಷ ಪ್ರಭಾವಳಿಯನ್ನು ನೀಡಿತ್ತು.