Image default
Dance Reviews

ಮುದಗೊಳಿಸಿದ ವಿಶ್ರುತಿ ಆಚಾರ್ಯಳ ಆಹ್ಲಾದಕರ ಕಥಕ್ ನೃತ್ಯ

ಅದೊಂದು ವಿಸ್ಮಯಕರ ತನ್ಮಯಗೊಳಿಸುವ ಭಕ್ತಿ-ಭಾವುಕ ವಾತಾವರಣ. ದೇವಾಲಯದ ವಿಶಾಲ ಪ್ರಾಂಗಣದ ಕಿಂಡಿಗಳಲ್ಲಿ ಮಿನುಗುವ ನೂರಾರು ಬೆಳಕಿನ ಹಣತೆಗಳು, ಕಿಣಿ ಕಿಣಿಸುವ ಕಿರುಗಂಟೆಗಳು. ನಟ್ಟ ನಡುವೆ ಕಣ್ಮನ ಸೂರೆಗೊಳ್ಳುವ ಕಡೆಗೋಲ ಕೃಷ್ಣನ ಮನಮೋಹಕ ಮೂರ್ತಿ. ಬಾಲಗೋಪಾಲನ  ದಿವ್ಯಸಾನಿಧ್ಯದಲ್ಲಿ ಭಕ್ತೆಯೊಬ್ಬಳು ಮೈಮರೆತು ನರ್ತಿಸುತ್ತಿದ್ದಾಳೆ. ಸುತ್ತಣ ಲೋಕದ ಪರಿವೆಯಿಲ್ಲದೆ ದೈವಾರಾಧನೆಯಲ್ಲಿ ಭಕ್ತಿಪರವಶಳಾಗಿ ಕುಣಿಯುತ್ತಿದ್ದ ಆ ಕಲಾವಿದೆಯೇ ವಿಶ್ರುತಿ ಕೆ.ಆಚಾರ್ಯ. ಇತ್ತೀಚೆಗೆ ಪ್ರೇಮಚಂದ್ರ ಸಾಗರ ಸಭಾಂಗಣದಲ್ಲಿ ನಡೆದ ಈಕೆಯ `ಸಾಧನೆ’ ಯ  ಸಾಕಾರದ ಪ್ರಸ್ತುತಿಯನ್ನು ವೀಕ್ಷಿಸುತ್ತಿದ್ದ  ಕಲಾರಸಿಕರು ಅವಳ ದೈವೀಕ ನರ್ತನವನ್ನು ನೋಡುತ್ತಾ  ಮಂತ್ರಮುಗ್ಧರಾಗಿದ್ದರು.

ಕಥಕ್ ನೃತ್ಯಲೋಕದ ತಾರಾ ದಂಪತಿಗಳೆಂದೇ ಪ್ರಸಿದ್ಧರಾದ ನಿರುಪಮಾ ರಾಜೇಂದ್ರ ಅವರ ಶಿಷ್ಯೆ ಈಕೆ. ಅಂದವಳು ನರ್ತಿಸಲು ಆರಿಸಿಕೊಂಡ ಕೃತಿಗಳು ಅವಳ ಪ್ರತಿಭೆಯ ಕಲಾನೈಪುಣ್ಯವನ್ನು ಎತ್ತಿ ಹಿಡಿದಿದ್ದವು. ದಾಸಶ್ರೇಷ್ಠ ಪುರಂದರದಾಸರ ಉಗಾಭೋಗಗಳನ್ನು ಕಥಕ್ ನೃತ್ಯಶೈಲಿಯಲ್ಲಿ ಸಾದರಪಡಿಸಿದ ಈ ಮೊತ್ತ ಮೊದಲಪ್ರಯೋಗ ವಿಶಿಷ್ಟವಾಗಿತ್ತು. ನಾಲ್ಕರಿಂದ ಹನ್ನೆರಡು ಸಾಲುಗಳವರೆಗೆ ಇರುವ ಇವುಗಳನ್ನು ಶ್ಲೋಕದಂತೆ ಹಾಡುವ ಅವಕಾಶವಿದೆ. ವಿಶ್ರುತಿ,  ಅಂದು, ಹರಿ ಸಮರ್ಪಣೆ ಮಾಡಿದ ಒಟ್ಟು ಆರು ಉಗಾಭೋಗಗಳು ಒಂದೊಂದೂ ಅರ್ಥಪೂರ್ಣವಾಗಿದ್ದವು. ಸುಲಭ ಸಾಧ್ಯವಾಗಿ ಒಲಿವ ಹರಿಯ ಮಹಿಮೆಯನ್ನು ವಿಶ್ರುತಿ ತನ್ನ ಸುಂದರ ಆಂಗಿಕದಿಂದ ಭಾವಪೂರ್ಣವಾಗಿ ಅಭಿನಯಿಸಿ ತೋರಿದಳು. ಪಾದಗಳ ಮಹತ್ವವನ್ನು ಮನಗಾಣಿಸುವ ಯತ್ನದಲ್ಲಿ ಕಲಾವಿದೆ ತೋರಿದ ಭಾವನಿಮಗ್ನತೆ ಯೊಡನೆ ಸಾಗಿ ಬಂದ ಚುರುಕಾದ ನೃತ್ತಗಳು ಮತ್ತು ಪಾದಭೇದದ ತತ್ಕಾರಗಳು ಪುಳಕ ತಂದವು. ವಾಮನನ ಪುಟ್ಟ ಪಾದಗಳ ವ್ಯಾಪ್ತಿಯನ್ನು ಆಕಾಶಚಾರಿಯಲ್ಲಿ ಅಗಾಧ ಪರಿಣಾಮ ಮೂಡಿಸಿದಳು. ದೇವಲೋಕದಲ್ಲಿ ಬ್ರಹ್ಮನು ಅವನ  ಪಾದವನ್ನು ಗಂಗೆಯಿಂದ ತೊಳೆದುದನ್ನು, ಆ ಗಂಗೆಯನ್ನು ಶಿವ ತನ್ನ ಜಟಾಜೂಟದಲ್ಲಿ ಬಂಧಿಸಿದ ರೂಪಕವನ್ನು ಕಲಾವಿದೆ ತನ್ನ ಸುಂದರ ಅಭಿನಯದಲ್ಲಿ ಕಟ್ಟಿಕೊಟ್ಟಳು. ಮೇಲು-ಕೀಳೆಂಬ ಭೇದಭಾವಗೈಯ್ಯದ ಪರಮಾತ್ಮನ ವಿಶಾಲ ಹೃದಯವನ್ನು, ಅತಿಥಿಗಳ ಪಾದತೊಳೆಯುವ ಔದಾರ್ಯವನ್ನು, ಲೌಕಿಕದ ನಾನಾ ಆಸೆ-ಆಮಿಷಗಳ ನಡುವೆ ಹರಿಪಾದದಲ್ಲಿ ಮನಸ್ಸನ್ನು ನಿಲ್ಲಿಸೆಂಬ ಪ್ರಾರ್ಥನೆ ಸಲ್ಲಿಕೆಯ ಭಾವವನ್ನು ಅನುಭವಗಮ್ಯವಾಗಿಸಿದಳು ವಿಶ್ರುತಿ.

ಕಾಳಿಂದಿ ಮಡುವಿನಲ್ಲಿ ಕಾಳಿಂಗನ ಫಣಿಯಲ್ಲಿ ನರ್ತನವಾಡಿದ ಕೃಷ್ಣನ ದಿವ್ಯರೂಪ ಕಣ್ಮನ ತುಂಬುವಂತೆ ಚಿತ್ರಣವನ್ನು ಕೆತ್ತಿ ನಿಲ್ಲಿಸಿದ ಭಾಗವಂತೂ ಅತ್ಯಾಕರ್ಷಕವಾಗಿತ್ತು. ಬಾಲಗೋಪಾಲ ತನ್ನ ಗೆಳೆಯರನ್ನೆಲ್ಲ ಉತ್ಸಾಹದಿಂದ ಕರೆಯುತ್ತ ಸಂಭ್ರಮದ ಹೆಜ್ಜೆಚಲನೆಯಲ್ಲಿ ಚೆಂಡಾಡುವ ಅಪೂರ್ವ ದೃಶ್ಯದಲ್ಲಿ ನೋಡುಗರ ಮನಸ್ಸನ್ನು ಅಪಹರಿಸಿಬಿಡುತ್ತಾನೆ. ಹುಡುಗಾಟದ ಅಭಿನಯವನ್ನು ಸಮರ್ಥವಾಗಿ ತೋರಿದ ವಿಶ್ರುತಿ ತತಕ್ಷಣವೇ,  ಆಧ್ಯಾತ್ಮದ ಹೊಳಹು ಸೂಸುವ ` ಹರಿಯ ಬೇಕು, ಹರಿಪದವ ಐದಲು’ ಎಂಬ ಭಕ್ತಿಭಾವ ತುಂದಿಲಳಾಗಿ ಸ್ಫುರಿಸಿದ ಭಾವಗಳು ಮನಮುಟ್ಟಿದವು.

ಸಾಹಿತ್ಯ, ಸ್ವರಗಳು, ಬೋಲ್ ಗಳು ಮತ್ತು ತಾಳದಿಂದ ಕೂಡಿದ ಕಮಾಚ್ ರಾಗದ, ತೀನ್ ತಾಳದ  `ಚತುರಂಗ್’ (ನೃತ್ಯ ಸಂಯೋಜನೆ ಮಾಯಾರಾವ್) ಹದವಾಗಿ ಮೇಳೈವಿಸಿ ನಯನ ಮನೋಹರವೆನಿಸಿತು. ಶಿವ ಪಾರ್ವತಿಯರ ನೃತ್ಯವನ್ನು ವರ್ಣಿಸುವ ಈ ಕೃತಿಯಲ್ಲಿ ಮೂಡಿಬಂದ ಮಿಂಚಿನ ಸಂಚಾರದ ಮನೋಹರ ನೃತ್ತಗಳು, ಅಲೆಯಂತೆ ತೇಲುವ ಕಲಾವಿದೆಯ ಹಸ್ತಚಲನೆಯ ಸೊಗಸು, ರಂಗದ ತುಂಬ ಹಂಸದಂತೆ ಮೆಲುಹೆಜ್ಜೆಗಳಲ್ಲಿ ಚಲಿಸುತ್ತಿದ್ದ ಹರಿದಾಟ ಆಪ್ಯಾಯಮಾನವೆನಿಸಿತು. ಚೆಂದದ ತತ್ಕಾರಗಳ ಜೊತೆ ಕಲಾವಿದೆಯ ರಂಗಪ್ರವೇಶ  ಮತ್ತು ನಿಷ್ಕ್ರಮಣಗಳೂ ಅಷ್ಟೇ ಕಲಾಪೂರ್ಣವಾಗಿದ್ದವು.

ಮುಂದಿನ ಪ್ರಸ್ತುತಿಯಲ್ಲಿ ವಿಶ್ರುತಿ, ಸಾಹಿತ್ಯವಿಲ್ಲದ,  ಶುದ್ಧ ನೃತ್ತದ ಭಾಗವನ್ನು ಅತ್ಯುತ್ತಮವಾಗಿ ನಿರ್ವಹಿಸಿದಳು. ಮುಖ್ಯವಾಗಿ ನೋಡುಗರನ್ನು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದ್ದು ತೀವ್ರಗತಿಯಲ್ಲಿ ಅವಳು ಹಾಕಿದ ಮೂವತ್ಮೂರು ಚಕ್ಕರ್ ಗಳು. ವಿಳಂಬಿತ, ಮಧ್ಯಮ ವಿಳಂಬಿತ ಮತ್ತು ಧೃತ ಕಾಲದ ತತ್ಕಾರಗಳ ಲಯಾತ್ಮಕ ಪದಗತಿ ಒಂದೆಡೆ ಆಕರ್ಷಣೆ ಮೂಡಿಸಿದರೆ, ಧೃತಿಗೆಡದೆ ಕಲಾವಿದೆ, ತನ್ನ ದೇಹದ ಮೇಲಿರುವ ಸಮರ್ಥ ನಿಯಂತ್ರಣವನ್ನು ಸಾಬೀತು ಮಾಡುವ ನಿರಂತರ ಚಕ್ಕರ್ ಗಳು ವಿಸ್ಮಯ ಮೂಡಿಸಿದವು.

ನಿರುಪಮಾ ಅವರ ಸುಲಲಿತ `ಪಡಂತ್ ‘ ಗೆ ತಕ್ಕಂತೆ ನರ್ತಿಸಿದ ವಿಶ್ರುತಿಯ `ಖುಲ್ಲಾ ನಾಚ್ ‘ ಮೈನವಿರೇಳಿಸಿತು. ತಾನೇ ಬೋಲ್ ಗಳನ್ನು ನಿರರ್ಗಳವಾಗಿ ನಿರೂಪಿಸುತ್ತ ಅದನ್ನು ಚಾಚೂತಪ್ಪದೆ ನೃತ್ತಗಳಲ್ಲಿ ಸಾಕಾರಗೊಳಿಸಿದ್ದು ನಿಜವಾಗಿ ಅವಳಿಗೆ ಒಂದು ಸವಾಲಾಗಿದ್ದರೂ, ತಬಲಾವಾದಕರು ನುಡಿಸಿದ ಬೋಲ್ ಗಳಿಗೆ ಅನುಗುಣವಾಗಿ ಅವಳು ಹೆಜ್ಜೆ ಜೋಡಿಸಿದ್ದು  ಅವಳ ಮೇಧಾಶಕ್ತಿಗೆ ಕನ್ನಡಿಯಾಗಿತ್ತು. `ರುಸಲಿ ರಾಧಾ, ರುಸಲ ಮಾಧವ ‘- ಎಂಬ ಸುಂದರ ಕೃತಿಯಲ್ಲಿ , ಗೋಪಿಕೆಯರ ಸಹವಾಸ ಮಾಡಿದ ಕೃಷ್ಣನ ಬಗ್ಗೆ ರಾಧಾ ಕೋಪಗೊಂಡಿದ್ದರೆ, ಕೃಷ್ಣನೂ ಅವಳ ಬಗ್ಗೆ ಕೋಪಗೊಂಡಂತೆ ನಟಿಸುತ್ತಿದ್ದಾನೆ. ಪ್ರಣಯಿಗಳ ಈ ವಿಮುಖತೆಯಲ್ಲಿ ಇಡೀ ಪ್ರಕೃತಿಯ ಶಾಂತಿ ಭಂಗವಾಗಿ, ಎಲ್ಲ ಪ್ರಾಣಿ-ಪಕ್ಷಿಗಳೂ ಕೂಡ ತಮ್ಮ ಸಹಜ ಆನಂದವನ್ನು ತೊರೆದು ಮೌನವಾಗಿದೆ ಎಂಬ ವಿಪರ್ಯಾಸವನ್ನು ಕವಿ ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾನೆ. ಇದನ್ನು ವಿಶ್ರುತಿ ತನ್ನ ಮನೋಹರ ಭಾವದೋಕುಳಿಯ ರಾಗದಿಂದ, ಸುಕೋಮಲ ಅಭಿನಯ – ಮೃದುವಾದ ಆಂಗಿಕದಿಂದ ನಿರೂಪಿಸಿ ರಸಿಕರ ಮನವನ್ನು ತುಂಬಿಕೊಂಡಳು. ಅಂತ್ಯದಲ್ಲಿ ಗಾಯಕ ಫಯಾಜ್ ಖಾನ್ ರಚಿಸಿದ `ತರಾನಾ’ ತನ್ನ ಲಯಾತ್ಮಕ ಸೌಂದರ್ಯದಿಂದ ಕಲಾವಿದೆಯ ಪ್ರತಿಭೆಯ ಕಲಾನೈಪುಣ್ಯದಿಂದ ಉಲ್ಲಾಸವನ್ನು ಸಿಂಚನಗೈದಿತು. ವೇಗಗತಿಯ ತತ್ಕಾರದಲ್ಲಿ ಹೆಣೆದುಕೊಂಡ `ಲಡಿ’ ( ದೀರ್ಘ ಜತಿಗಳು) ಯ  ನಿರ್ವಹಣೆಯಲ್ಲಿ ವಿಶ್ರುತಿಯ ಆತ್ಮವಿಶ್ವಾಸ ಮತ್ತು ಸಾಮರ್ಥ್ಯ ಬೆಸೆದುಕೊಂಡಿತ್ತು. ಹಾಗೆಯೇ ಸುಶ್ರಾವ್ಯ ಹಿನ್ನಲೆಯ ಸಂಗೀತದ ಸಹಕಾರದಲ್ಲಿ  ಕಲಾವಿದೆಯ ಸುಮನೋಹರ ನೃತ್ಯ ಪ್ರಫುಲ್ಲವಾಗಿ ಅರಳಿತ್ತು.

Related posts

ಪ್ರಜ್ವಲಾಭಿನಯದ ದೈವೀಕ ಝೇಂಕಾರ

YK Sandhya Sharma

ಪುರಂದರ ಪಲ್ಲವಿಗಳ ವರ್ಣರಂಜಿತ ನೃತ್ಯಪ್ರಯೋಗ

YK Sandhya Sharma

Natanam Institute Of Dance- Naatyaarpanam

YK Sandhya Sharma

Leave a Comment

This site uses Akismet to reduce spam. Learn how your comment data is processed.