Image default
Dancer Profile

ಸೃಜನಶೀಲ ನೃತ್ಯಕಲಾವಿದೆ ಪೂರ್ಣಿಮಾ ರಜನಿ

ಪ್ರಯೋಗಶೀಲತೆ- ಅನ್ವೇಷಕ ಮನೋವೃತ್ತಿಯ ಭರತನಾಟ್ಯ ಕಲಾವಿದೆ ಪೂರ್ಣಿಮಾ ರಜನಿ ಚಿಕ್ಕಂದಿನಿಂದ ರೂಢಿಸಿಕೊಂಡು ಬಂದದ್ದು ಸ್ವಾವಲಂಬಿ ಮನೋಧರ್ಮ. ಅದಕ್ಕೆ ಸಾಕ್ಷಿಗೊಡುತ್ತದೆ ಅವರ ನೃತ್ಯಪಯಣದ  ಏರಿಳಿತದ ಹಾದಿ. ತಮ್ಮಲ್ಲಿದ್ದ ನೃತ್ಯಾಸಕ್ತಿಯನ್ನು ಗುರುತಿಸಿಕೊಂಡವರು ಸ್ವಯಂ ಅವರೇ. ನೆರೆಮನೆಯ ಸ್ನೇಹಿತೆ ನೃತ್ಯ ಕಲಿಯುತ್ತಿದ್ದುದನ್ನು ಕಂಡು ಆಸಕ್ತಳಾಗಿ ಅವಳ ನೃತ್ಯಶಾಲೆಗೆ ಹೋಗಿ ಸೇರಿಕೊಂಡಾಗ ಪೂರ್ಣಿಮಾಗೆ ಇನ್ನೂ ಏಳರ ಎಳವೆ. ಹಾಗೆ ಅವಳ ಪಾಲಿಗೆ ಗುರುಗಳಾಗಿ ಒದಗಿ ಬಂದವರು ಹಿರಿಯ ನಾಟ್ಯಗುರು ರಾಧಾ ಶ್ರೀಧರ್. ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ಪಂದನಲ್ಲೂರು ಶೈಲಿಯಲ್ಲಿ ಚುರುಕಾಗಿ ನೃತ್ಯದ ಮಜಲುಗಳನ್ನರಿತು ಸಾಧನೆಯ ಕನಸಿನ ಹಾದಿಯಲ್ಲಿ ಸಾಗಿದ ಪೂರ್ಣಿಮಾ, ಎರಡುದಶಕಗಳ ಕಾಲ ಅವಿರತ ಶ್ರಮಿಸಿದಳು. ವಿದ್ವತ್  ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್  ಪಡೆದವಳಿಗೆ ಚಿಕ್ಕವಯಸ್ಸಿನಲ್ಲೇ ಭಾರತ ಸರ್ಕಾರದ ಫೆಲೋಶಿಪ್ ದೊರೆತದ್ದು ಆಕೆಯ ಪ್ರತಿಭೆಗೆ ಸಾಕ್ಷಿ. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮತ್ತು ನಟುವನ್ನಾರ್ ನಲ್ಲೂ ತರಬೇತಿ ದೊರೆಯಿತು.

ಮೊದಲಿನಿಂದಲೂ ಸ್ವಾಭಿಮಾನಿಯಾಗಿದ್ದ ಪೂರ್ಣಿಮಾ ತಂದೆ ಶೇಷಾದ್ರಿ ಮತ್ತು ತಾಯಿ ಪ್ರೇಮಾ ಅವರಿಗೆ ತನ್ನ ‘ರಂಗಪ್ರವೇಶ’ದ ಖರ್ಚನ್ನು ಹೊರೆಯಾಗಿಸುವ ಮನಸ್ಸಿಲ್ಲದೆ, ಹದಿನಾಲ್ಕು ವರ್ಷಕ್ಕೇ ಬಾಲಾಭ್ಯಾಸಿಗಳಿಗೆ  ನೃತ್ಯಪಾಠ ಹೇಳುತ್ತಾ ಹಣವನ್ನು ಒಗ್ಗೂಡಿಸಿಕೊಂಡು ರಂಗಪ್ರವೇಶವನ್ನು ಮಾಡಿದ್ದಲ್ಲದೆ, ಅನೇಕ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡತೊಡಗಿದ್ದು ಈಕೆಯ ವೈಶಿಷ್ಟ್ಯ. ಓದಿನಲ್ಲೂ ಬುದ್ಧಿವಂತೆಯಾಗಿದ್ದ ಈಕೆ ಮೈಕ್ರೋ ಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಜೊತೆಯಲ್ಲೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ.ಪದವಿಯನ್ನೂ ಪಡೆದುಕೊಂಡರು. ಎಲ್ಲದರಲ್ಲೂ ಹೋರಾಟ-ವಿಕ್ರಮ. ತರಗತಿಯಲ್ಲಿ ಮೊದಲಸ್ಥಾನ ಪಡೆದು ಫ್ರೀಶಿಪ್ ಕೂಡ ದಕ್ಕಿಸಿಕೊಂಡ ಹೆಮ್ಮೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಹೆತ್ತವರಿಗೆ ಹೊರೆಯಾಗದೆ, ಸ್ವಾವಲಂಬಿಯಾಗಿ ಮುನ್ನಡಿಯಿಟ್ಟದ್ದು ಪೂರ್ಣಿಮಾ ವಿಶೇಷ. ದೂರದರ್ಶನದಲ್ಲಿ ಗ್ರೇಡೆಡ್ ಕಲಾವಿದೆಯಾಗಿ, ಒಂದೇ ವರ್ಷದಲ್ಲಿ ಬೆಂಗಳೂರು ದೂರದರ್ಶನದಿಂದ ಐದು ಪ್ರಮುಖ ನೃತ್ಯೋತ್ಸವಗಳಲ್ಲಿ ನೃತ್ಯಪ್ರಸ್ತುತಿಪಡಿಸಲು ಆಹ್ವಾನ ಪಡೆದರು. ಕೇವಲ 23 ವರ್ಷದ ಯುವತಿ ಕರ್ನಾಟಕ ಸರ್ಕಾರ ನಡೆಸುವ ನೃತ್ಯಪರೀಕ್ಷೆಗಳಿಗೆ ಪರೀಕ್ಷಕರೂ ಆಗಿ ಕೆಲಸ ಮಾಡಿದ ಅಗ್ಗಳಿಕೆ .

ಮದುವೆಯಾಗಿ ಹೈದರಾಬಾದಿಗೆ ತೆರಳಿದನಂತರವೂ ನೃತ್ಯ ಚಟುವಟಿಕೆಗಳು ಸ್ಥಗಿತಗೊಳ್ಳಲಿಲ್ಲ. ಪದ್ಮಶ್ರೀ ಡಾ. ಆನಂದಶಂಕರ್ ಜಯಂತ್ ಗರಡಿಯಲ್ಲಿ ಕಲಾಕ್ಷೇತ್ರ ಬಾನಿಯ ತರಬೇತಿ ಮುಂದುವರಿಯಿತು. ಮದುವೆಗೆ ಮುನ್ನವೇ ಬೆಂಗಳೂರಿನಲ್ಲಿ ನೃತ್ಯಶಾಲೆ ತೆರೆದು ಅನೇಕರಿಗೆ ನಾಟ್ಯ ಹೇಳಿಕೊಡುತ್ತಿದ್ದ ಪೂರ್ಣಿಮಾ, ಹೈದರಾಬಾದಿನಲ್ಲೂ ನೃತ್ಯಶಿಕ್ಷಣ ಮುಂದುವರಿಸಿದರು. ಹೈದರಾಬಾದ್ ಆಕಾಶವಾಣಿಯಲ್ಲಿ ಭರತನಾಟ್ಯ ಮತ್ತು ಸಂಬಂಧಿತ ಕಲೆಗಳ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ. ಜೊತೆಗೆ ಅನೇಕ ಹೊಸ ನೃತ್ಯರೂಪಕಗಳನ್ನು ತಯಾರಿಸಿ, ಮೈಸೂರು ದಸರಾ, ನಟರಾಜೋತ್ಸವ, ತಿರುಪತಿ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ದೇಶಾದ್ಯಂತ ಪ್ರದರ್ಶನ ನೀಡಿದ ಅನುಭವ, ಹಲವು ಶಿಷ್ಯರ ರಂಗಪ್ರವೇಶವನ್ನೂ ನೆರವೇರಿಸಿದ್ದಾರೆ . ಅಮೇರಿಕಾ ಮತ್ತು ಯು.ಎ.ಇ. ಗಳಲ್ಲಿ ನೀಡಿದ ಪ್ರಮುಖ ನೃತ್ಯ ಕಾರ್ಯಕ್ರಮಗಳೆಂದರೆ- ಹ್ಯೂಸ್ಟನ್, ಟೆಕ್ಸಾಸ್ ನಲ್ಲಿ ವರ್ಲ್ಡ್ ಮಿಲೇನಿಯಂ ಕನ್ನಡ ಸಮ್ಮೇಳನ, ಲಾಸ್ ವೇಗಾಸ್ ನಲ್ಲಿ ವರ್ಲ್ಡ್ ಟೂರಿಸಂ ದಿನ, ಲಾಸ್ ಎಂ ಜಲಿಸ್ , ದುಬೈ, ಪೋರ್ಟ್ ಲ್ಯಾಂಡ್, ಓರಿಗನ್, ಪಿಟ್ಸ್ ಬರ್ಗ್, ಚಿಕಾಗೋ, ವಾಶಿಂಗ್ಟನ್, ವರ್ಜಿನಿಯಾ, ಸ್ಯಾನ್ ಜೋಸೆ ಮುಂತಾದೆಡೆ ನೃತ್ಯಪ್ರದರ್ಶನ ನೀಡಿರುವರು. ದೇಶ-ವಿದೇಶದ ಪತ್ರಿಕೆಗಳು ಅವರ ಅಂಗಶುದ್ಧವಾದ ನರ್ತನ ಮತ್ತು ಆಹ್ಲಾದತೆ ತುಂಬಿದ ಮನೋಜ್ಞಭಂಗಿಗಳನ್ನು ಕುರಿತು ಉತ್ತಮ ವಿಮರ್ಶೆ ನೀಡಿವೆ.

ಬೆಂಗಳೂರಿನಲ್ಲಿ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಅಂಡ್ ಮ್ಯೂಸಿಕ್ ‘ ಸಂಸ್ಥಾಪಕ ನಿರ್ದೇಶಕಿಯಾಗಿ  ಆರು ಶಾಖೆಗಳಲ್ಲಿ ಶಿಕ್ಷಣ ನೀಡುತ್ತಿರುವ ಪೂರ್ಣಿಮಾ, ಐದುವರ್ಷಕ್ಕಿಂತ ಪುಟ್ಟಮಕ್ಕಳಿಗೆ ನರ್ಸರಿ, ಪ್ರೀ ನರ್ಸರಿ ಮಕ್ಕಳಿಗೆ ಭಾರತೀಯ ಪ್ರದರ್ಶನಕಲೆಗಳನ್ನು ಕಲಿಯುವ, ಪ್ರೇರೇಪಿಸುವ ಉಪಯುಕ್ತ ಪ್ರಯೋಗವೊಂದನ್ನು ನಡೆಸುತ್ತಿದ್ದಾರೆ. ಯೋಗ, ದೇಹಚಲನೆ, ಧ್ವನಿ ಏರಿಳಿತ, ಲಯವಿನ್ಯಾಸಗಳು ಮತ್ತು ಕೈಬೆರಳುಗಳಿಗೆ ವ್ಯಾಯಾಮ ನೀಡುವ ಕರಕುಶಲ ತರಗತಿಗಳನ್ನು ನಡೆಸುತ್ತಿದ್ದು ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇವರೆಲ್ಲ ಸೃಜನಶೀಲ ಕಾರ್ಯಚಟುವಟಿಕೆಗಳಿಗೆ ಪತಿ ರಜಿನಿ ಲೋಕನಾಥನ್ ಬೆಂಬಲವಿದೆ. ಮಗ ಪ್ರಣವ್ ಕರ್ನಾಟಕ ಮತ್ತು ಪಾಶ್ಚಾತ್ಯ ಸಂಗೀತಾಭ್ಯಾಸಿಯಾದರೆ ಮಗಳು ಪ್ರಣಿಕ ನೃತ್ಯಾಸಕ್ತೆ.

Related posts

ನಾಟ್ಯ-ಯೋಗ ಸಂಗಮ ಯಾಮಿನೀ ಮುತ್ತಣ್ಣ

YK Sandhya Sharma

ನೃತ್ಯಶಾಸ್ತ್ರ ಪಾರಂಗತೆ ಡಾ. ವಿದ್ಯಾ ರಾವ್

YK Sandhya Sharma

well known Kathak Exponent Veena Bhat

YK Sandhya Sharma

Leave a Comment

This site uses Akismet to reduce spam. Learn how your comment data is processed.