Image default
Dancer Profile

ಕಲಾಪ್ರಪೂರ್ಣ ಅಭಿನಯ ಚತುರ ಎಸ್. ರಘುನಂದನ್

ಶಾಸ್ತ್ರೀಯ ನೃತ್ಯರಂಗದಲ್ಲಿ ಹೆಣ್ಣುಮಕ್ಕಳು ನೃತ್ಯಶಿಕ್ಷಣ ಪಡೆದು ಪ್ರದರ್ಶನ ನೀಡುತ್ತಿರುವವರ ಸಂಖ್ಯೆಗೆ ಹೋಲಿಸಿ ನೋಡುವುದಾದರೆ ಪುರುಷ ನೃತ್ಯಕಲಾವಿದರ ಸಂಖ್ಯೆ ಕಡಮೆ ಎಂದೇ ಹೇಳಬೇಕು. ಅದು ಹೆಣ್ಣುಮಕ್ಕಳ ಕಲೆ ಎನ್ನುವ ಮಾತು ಹಳತಾಯಿತು. ಇಂದು ಅನೇಕ ಹುಡುಗರು ಬಹು ನಿಷ್ಠೆಯಿಂದ ಭರತನಾಟ್ಯಾಭ್ಯಾಸ ಮಾಡಿ ಖ್ಯಾತರಾಗಿರುವವರ ಸಾಲಿನಲ್ಲಿ ರಘುನಂದನ್ ಅವರ ಹೆಸರು ಪ್ರಮುಖವಾದುದು. ಅವರು ಸ್ವತಃ ಉತ್ತಮ ಭರತನಾಟ್ಯ ಕಲಾವಿದರಾಗಿರುವುದರ ಜೊತೆಗೆ ಹೆಸರಾಂತ ಉತ್ತಮ ಗುರುಗಳೂ ಹೌದು. ಪ್ರಯೋಗಶೀಲತೆಗೆ ಇನ್ನೊಂದು ಹೆಸರಾದ ಇವರು, ಹೊಸ ಪರಿಕಲ್ಪನೆಯ ನೃತ್ಯರೂಪಕಗಳನ್ನು ಸೃಜಿಸಿ, ಅವುಗಳಿಗೆ ಸುಂದರ ನೃತ್ಯಸಂಯೋಜನೆಯನ್ನು ಮಾಡಿ  ಅವುಗಳನ್ನು ರಂಗದ ಮೇಲೆ ತರುವವರೆಗೂ ಆಸಕ್ತಿ ವಹಿಸಿ ದುಡಿವ ಬದ್ಧತೆಯುಳ್ಳ ಕ್ರಿಯಾಶೀಲ ವ್ಯಕ್ತಿ. ನೃತ್ಯಕ್ಷೇತ್ರದಲ್ಲಿ ಸಂಶೋಧನಾತ್ಮಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಕಲಾಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟವರು.

ರಘುನಂದನ್ ಅವರ ಈ ಅಪಾರ ಆಸಕ್ತಿ -ಅರ್ಪಣೆಗಳಿಗೆ ಒಂದು ಹಿನ್ನಲೆಯೇ ಇದೆ. ಪ್ರಖ್ಯಾತ ನೃತ್ಯ ಸಂಸ್ಥೆ  `ಅಭಿವ್ಯಕ್ತಿ ಡ್ಯಾನ್ಸ್ ಸೆಂಟರ್’ ನ ನಿರ್ದೇಶಕರಾದ , ಕಲಾಯೋಗಿ ಬಿರುದಾಂಕಿತರಾದ  ರಘುನಂದನ್, ನಾಟ್ಯಪರಂಪರೆಯ ಪ್ರಸಿದ್ಧ ಕುಟುಂಬದಿಂದ ಬಂದವರು. ಇವರ ತಾತ ನಾಟ್ಯಾಚಾರ್ಯ ಹೆಚ್.ಆರ್. ಕೇಶವಮೂರ್ತಿ `ಕೇಶವ ನೃತ್ಯ ಶಾಲೆ’ ಯ ಸ್ಥಾಪಕರಾಗಿ ನೃತ್ಯ ಗುರುಗಳಾಗಿ ಅಸಂಖ್ಯಾತ ಶಿಷ್ಯರನ್ನು ತಯಾರು ಮಾಡಿದವರು.  ತಂದೆ ಬಿ.ಕೆ.ಶ್ಯಾಮ್ ಪ್ರಕಾಶ್ ಕೂಡ ನೃತ್ಯಗುರುಗಳು. ತಾಯಿ ವೀಣಾ ವಿದುಷಿ ಗೀತಾ ಶ್ಯಾಮ್ ಪ್ರಕಾಶ್. ಸೋದರತ್ತೆ ಕೂಡ ನೃತ್ಯಗುರು ವಸಂತಲಕ್ಷ್ಮಿ. ಪತ್ನಿ ಮಾನಸೀ ಪಾಂಡ್ಯ ಒಡಿಸ್ಸಿ ನೃತ್ಯಗಾರ್ತಿ. ಹೀಗಾಗಿ ಮನೆಯ ತುಂಬ ಹೆಜ್ಜೆ-ಗೆಜ್ಜೆಗಳ ಲಯ, ಸಂಗೀತದ ಸುನಾದ. ಇವರ ಇಡೀ ಕುಟುಂಬವೇ ಕಲೆಗಾಗಿ ಮುಡಿಪಾದ ವೈಶಿಷ್ಟ್ಯ ನಿಜಕ್ಕೂ ಗಮನಾರ್ಹ.

ಬಾಲ್ಯದ ತಪ್ಪುಹೆಜ್ಜೆಗಳ ಏಳವೆಯಿಂದಲೇ ನರ್ತಿಸುವ ಬಯಕೆಯನ್ನು ಹೃದಯದಲ್ಲಿ ಹೊತ್ತು ಬೆಳೆದ ಇವರಿಗೆ ಕಲೆ ರಕ್ತಗತವಾಗಿ ಬಂದುದರಿಂದ ನೃತ್ಯ ಉಸಿರಾಗಿ ಹೊಮ್ಮಿದ್ದು ಅಚ್ಚರಿಯೇನಲ್ಲ. ಓದಿನ ಜೊತೆ ಜೊತೆ ನೃತ್ಯಕಲಿಕೆಯೂ ಇವರ ಬದುಕಿನ ಒಂದು ಭಾಗವಾಯಿತು. ಸಣ್ಣವಯಸ್ಸಿಗೇ ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯದ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಡಿಸ್ಟಿನ್ ಕ್ಷನ್ ಪಡೆದು ತೇರ್ಗಡೆಯಾದರಲ್ಲದೆ `ವಿದ್ವತ್ ‘ ಪರೀಕ್ಷೆಯಲ್ಲಿ ಚಿನ್ನದ ಪದಕ ಹಾಗೂ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ತಾವೊಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂಬುದನ್ನು ಸಾಬೀತುಪಡಿಸಿದರು. ದೂರದರ್ಶನದಲ್ಲಿ ಮಾನ್ಯತೆ ಪಡೆದ ಕಲಾವಿದರಾಗಿ ಅನೇಕ ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆ ಪಡೆದಿದ್ದಾರೆ.

ಇವೆಲ್ಲದರ ಜೊತೆ ರಘುನಂದನ್, ಮೃದಂಗವಾದನವನ್ನೂ ಕಲಿತು, ಅದರಲ್ಲೂ ವಿದ್ವತ್ ಪದವಿ ಪಡೆದರು. ಜೊತೆಗೆ `ನಟುವಾಂಗ’ ದಲ್ಲೂ ಶ್ರೇಷ್ಟಾಂಕ ಗಳಿಸಿ ಪರಿಣತ ವಿದ್ವಾಂಸರಾಗಿರುವುದು ಇವರ ಹೆಗ್ಗಳಿಕೆ. ನೃತ್ಯರಂಗದಲ್ಲಿ ಎರಡು ದಶಕಗಳ ಸುದೀರ್ಘ ಅನುಭವವುಳ್ಳ ರಘುನಂದನ್ ಓದಿನಲ್ಲೂ ಅಷ್ಟೇ ಜಾಣರು. ಟೆಲಿಕಮ್ಯೂನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಪದವೀಧರರು. ಸಾಫ್ಟ್ ವೇರ್ ವೃತ್ತಿ ಕ್ಷೇತ್ರದಲ್ಲಿ ಉದ್ಯೋಗ ಮಾಡಿದವರು, ನೃತ್ಯರಂಗದ ಸೆಳೆತದಿಂದ ಇತ್ತ  ಕಡೆಯೇ ಹೆಚ್ಚಿನ ಒಲವು ತೋರಿ, ಕಡೆಗೆ ಪೂರ್ಣಪ್ರಮಾಣದಲ್ಲಿ ನಾಟ್ಯರಂಗದ ಸೇವೆಗೇ ಭವಿಷ್ಯವನ್ನು ಮೀಸಲಾಗಿಟ್ಟವರು.

ಜೀವನಕ್ಕೆ ಹೊಸದೊಂದು ಆಯಾಮವನ್ನು ಒದಗಿಸುವ ಸೃಜನಶೀಲ ಕಲೆ ನೃತ್ಯವನ್ನು ಕಲಿಯುವುದರಿಂದ ಮಕ್ಕಳ ಜೀವನದೃಷ್ಟಿ, ಮನೋಧರ್ಮ ಬದಲಾಗುವುದೆಂಬ ನಂಬಿಕೆಯುಳ್ಳ ರಘುನಂದನ್, ಕಳೆದ ಎರಡು ದಶಕಗಳಿಂದ ತಮ್ಮದೇ ಆದ `ಅಭಿವ್ಯಕ್ತಿ ಡ್ಯಾನ್ಸ್ ಸೆಂಟರ್’ ಮೂಲಕ ಸತತವಾಗಿ ನೂರಾರು ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಾರೆ. ಅನೇಕ ಮಕ್ಕಳಿಗೆ `ರಂಗಪ್ರವೇಶ’ ನೆರವೇರಿಸಿ, ಸಮಾಜಕ್ಕೆ ಉತ್ತಮ ನೃತ್ಯಕಲಾವಿದೆಯರನ್ನು ಕೊಡುಗೆಯಾಗಿ ನೀಡಿರುವ ಹೆಮ್ಮೆ ಇವರದು. ಸೃಜನಾತ್ಮಕ ಅಪೂರ್ವ ಕಲಾವಿನ್ಯಾಸದ ನೃತ್ಯ ಸಂಯೋಜನೆ ಮಾಡುವುದರಲ್ಲಿ ನಿಪುಣರಾದ ಇವರು ಕಲಾಯೋಗಿ, ಭರತಶ್ರೀ, ಗೋದಾವರಿ ಸಮ್ಮಾನ್, ಅತ್ಯುತ್ತಮ ಪುರುಷ        ನೃತ್ಯಪಟು  ಮುಂತಾದ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದು ನಾಡಿನ ಹೆಮ್ಮೆಯ ಕಲಾವಿದರೆನಿಸಿಕೊಂಡಿದ್ದಾರೆ. ರಾಜ್ಯದ ಪ್ರಮುಖ ನೃತ್ಯೋತ್ಸವಗಳಲ್ಲಿ ೪೦ ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುವರಲ್ಲದೆ, ಹೊರರಾಜ್ಯದ ನಳಂದ ನೃತ್ಯೋತ್ಸವ,ಕರೂರು, ಖ್ಯಾತ ನೃತ್ಯ ತಜ್ಞೆ ರುಕ್ಮಿಣಿ ಅರುಂಡೆಲ್ ಉತ್ಸವ,  ಕೋಲ್ಕತ್ತಾ, ಇಂದ್ರಧನುಶ್, ದೆಹಲಿ, ಚೆನ್ನೈ, ಹೊರದೇಶದ ಸಿಂಗಾಪುರ, ಮಲೇಶಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮುಂತಾದೆಡೆಗಳಲ್ಲಿ ಇವರ ಪ್ರತಿಭೆ ಪ್ರಸರಣವಾಗಿರುವುದು ಇವರ ಅಗ್ಗಳಿಕೆ.  

ರಘುನಂದನ್ ಅವರ ಪಾಂಡಿತ್ಯಕ್ಕೆ ಮನ್ನಣೆ ದೊರಕಿದಂತೆ, ನಾಟ್ಯದ ಬಗ್ಗೆ ಅತಿಥಿ ವಿಶೇಷ  ಉಪನ್ಯಾಸಕರಾಗಿ, ವಿಶೇಷ ಕಾರ್ಯಕ್ರಮಗಳಲ್ಲಿ  `ನಟುವನ್ನಾರ್’ ಆಗಿ ಆಹ್ವಾನಿತರಾಗಿ ಸೇವೆ ಸಲ್ಲಿಸುತ್ತ  ಬಂದಿದ್ದಾರೆ. ಜೊತೆಗೆ ಇವರೇ ಅನೇಕ ಉಪಯುಕ್ತ ನಾಟ್ಯ ಕಾರ್ಯಾಗಾರ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಂಡು ಬಂದಿರುವ ಪರಿಪಾಠವೂ ಇದೆ.

ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ವತಃ ಅನೇಕ ಕೃತಿಗಳನ್ನು ರಚಿಸಿ ವಾಗ್ಗೇಯಕಾರ ಎನಿಸಿಕೊಂಡಿರುವ ಇವರು, ಆ ಕೃತಿಗಳಿಗೆ ಸುಂದರ ಸಂಯೋಜನೆ ಮಾಡಿ ವೇದಿಕೆಯ ಮೇಲೆ ಪ್ರಯೋಗಿಸಿ ಯಶಸ್ವಿಯೂ ಆಗಿರುವ ವಿಶೇಷತೆ ಇವರದು.

ಪರಿವರ್ತನೆ,ಪುರಂದರ ಪಲ್ಲವಿ, ರಾಮಾ-ಭರತ ಸಮಾಗಮ , ತ್ರಿಪತ್ತಿ , ನೃತ್ಯ ಭಕ್ತಿಸಾರ ಮುಂತಾದ ಸುಮಾರು ೩೭ ಮಹತ್ವದ ನೃತ್ಯನಾಟಕಗಳಲ್ಲಿ ಮುಖ್ಯಪಾತ್ರ ವಹಿಸಿ ವಿಮರ್ಶಕರ ಮೆಚ್ಚುಗೆ ಪಡೆದಿದ್ದಾರೆ. ಇವರು ಅಭಿನಯಿಸಿದ  `ಅರಣ್ಯಕಾಂಡ’- ವಿಶೇಷ ಸುಂದರ ರೂಪಕದಲ್ಲಿನ ಇವರ ಸುಮನೋಹರ ಅಭಿನಯ ಮನೋಜ್ಞವಾದುದು. ವೈವಿಧ್ಯಪೂರ್ಣ ವಿವಿಧ ಪಾತ್ರಗಳ ಗುಚ್ಛವಾಗಿದ್ದ ಏಕವ್ಯಕ್ತಿ ರೂಪಕವನ್ನು ಸಾದರಪಡಿಸುವಲ್ಲಿ ರಘುನಂದನ್ ಅವರಿಗಿದ್ದ ವ್ಯಾಪಕ ತರಬೇತಿ, ಆಳವಾದ ಅನುಭವ ಮತ್ತು ನೃತ್ಯಜ್ಞಾನ ಎದ್ದು ಕಾಣುತ್ತದೆ. `ನೃತ್ಯ’ ವನ್ನು ಜೀವನವಿಧಾನವಾಗಿ ಅಳವಡಿಸಿಕೊಂಡಿರುವ ರಘುನಂದನ್, ಇದು `ಆತ್ಮಾವಲೋಕನ’ ಕ್ಕೆ ಸಹಾಯಕವಾಗಬಲ್ಲ ಉನ್ನತ ದೈವೀಕ ಕಲೆ ಎಂದು ಅಚಲವಾಗಿ ನಂಬಿದವರು.  .

Related posts

ಭರವಸೆಯ ಕಥಕ್ ನರ್ತಕ ಅಶ್ವಿನ್ ಜೆ. ಪ್ರಭಾತ್

YK Sandhya Sharma

ನರ್ತನ ನಿಪುಣ ಮಿಥುನ್ ಶ್ಯಾಂ

YK Sandhya Sharma

ಅನುಪಮ ಕಥಕ್ ನೃತ್ಯಗಾರ್ತಿ ವಿಶ್ರುತಿ ಆಚಾರ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.