Image default
Dance Reviews

ನತಾನಿಯಾ ಮನೋಜ್ಞ ಭಂಗಿಗಳ ಅದ್ಭುತ ನರ್ತನ

ಒಂದು ರಂಗಪ್ರವೇಶದ ನೃತ್ಯಕಾರ್ಯಕ್ರಮವೆಂದರೆ ವೇದಿಕೆಯ ಮೇಲಣ ಕೇವಲ ನೃತ್ಯಪ್ರದರ್ಶನ ಮಾತ್ರ ಪರಿಣಾಮ ಬೀರುವುದಲ್ಲ. ನೃತ್ಯಕ್ಕೆ ಪ್ರಭಾವಳಿಯಾಗಿ ಮನಸ್ಪರ್ಶೀ ವಾದ್ಯಗೋಷ್ಠಿ, ರಂಗಸಜ್ಜಿಕೆಯ ಸುಂದರ ಆವರಣ, ಹಿನ್ನಲೆಯ ಬಳಕೆಯ ಪರಿಕರಗಳು, ಕೃತಿಗಳಿಗೆ ಅನುಗುಣವಾಗಿ ಬದಲಾಗುವ ಪ್ರತಿಮೆಗಳು, ಚಿತ್ರಗಳು ಮತ್ತು ನರ್ತಕಿಯ ಭಾವಗಳನ್ನು ಸಾಂದ್ರಗೊಳಿಸುವ ಪೂರಕ ಬೆಳಕಿನ ವಿನ್ಯಾಸದ ಪಾತ್ರ ಮಹತ್ತರವಾದುದು, ಇವೆಲ್ಲವುಗಳ ಸಹಕಾರ ಗಣನೀಯ. ಹೀಗಾಗಿ ಒಟ್ಟಾರೆಯಾಗಿ ಪ್ರಭಾವ ಬೀರುವ ಈ ಎಲ್ಲ ಅಂಶಗಳ ಒಡಲೊಳಗೆ ಮೂಡಿಬರುವ ನರ್ತನ ಹೆಚ್ಚಿನ ವರ್ಚಸ್ಸನ್ನು ಬೀರಲು ಸಾಧ್ಯವಾಗುತ್ತದೆ. ಇದು ಪ್ರತಿಯೊಂದು ನೃತ್ಯಪ್ರದರ್ಶನಕ್ಕೂ ಅನ್ವಯಿಸುತ್ತದೆ.

ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ಉನ್ನತ ನೃತ್ಯಕಲಾವಿದ-ನಾಟ್ಯಾಚಾರ್ಯ ಮಿಥುನ್ ಶ್ಯಾಂ ಶಿಷ್ಯೆ ನತಾನಿಯಾ ಲಾಜಿಯ ‘ರಂಗಪ್ರವೇಶ’ ಯಶಸ್ವಿಯಾಗಿ ನಡೆಯಿತು. ಕಲಾವಿದೆಯ ಸೂಕ್ಷ್ಮ ಕಲಾನೈಪುಣ್ಯದ ರಂಗು ಇಡೀ ನೃತ್ಯಾವಳಿಯನ್ನು ಆವರಿಸಿ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕೈಯಲ್ಲಿ ಪುಷ್ಪಹಿಡಿದು, ಬಳುಕು ನಡಿಗೆಗೆ ಲಾಸ್ಯದ ಮೆರುಗನ್ನು ತುಂಬಿ ನಗುಮೊಗದಲ್ಲಿ ರಂಗಸ್ಥಳದಲ್ಲಿ ಕಾಣಿಸಿಕೊಂಡ ನತಾನಿಯಾ, ಮೊದಲಿಗೆ ‘ಮಾರ್ಗಂ’ ಸಂಪ್ರದಾಯದಂತೆ ‘ಪುಷ್ಪಾಂಜಲಿ’ಯನ್ನು ಸಲ್ಲಿಸಿದಳು. ಅನಂತರ ‘ಅಲ್ಲರಿಪು’ ವನ್ನು ಅಂತರ್ಗತವಾಗಿ ಅಳವಡಿಸಿದ ‘ಗಣೇಶ ಶಬ್ದಂ’ವನ್ನು ಗಣಪತಿಯ ವೈಶಿಷ್ಟ್ಯವನ್ನು ಸಾರುವ ಸುಂದರ ಸಂಚಾರಿಯೊಂದಿಗೆ, ಪ್ರಸ್ತುತಪಡಿಸಿದ ಅಲ್ಲರಿಪು – ಅರೆಮಂಡಿ, ಆಕಾಶಚಾರಿಗಳಿಂದ ಕೂಡಿದ ನೃತ್ತಗಳಲ್ಲಿ ಹೊಸ ಮಿನುಗು ಕಂಡವು. ಕಲಾವಿದೆಯ ಆಂಗಿಕ ಶುದ್ಧತೆ, ನೃತ್ಯಸೌಂದರ್ಯವನ್ನು ಎತ್ತಿಹಿಡಿಯಿತು.

ಧರ್ಮಾವತಿ ರಾಗ- ಆದಿತಾಳದ ಭಕ್ತಿಪೂರ್ವಕವಾದ ‘’ವರ್ಣ’’ ನಟರಾಜನಿಗೆ ಅರ್ಪಣೆಯಾಯಿತು. ಶಿವನ ಆನಂದತಾಂಡವ ಪ್ರದರ್ಶನದಲ್ಲಿ ಕಲಾವಿದೆ, ತನುಮನಗಳಲ್ಲಿ ಆನಂದ ತುಂಬಿಕೊಂಡು ತನ್ಮಯತೆಯಿಂದ ಭಕ್ತಿಪರವಶಳಾಗಿ ಪೂರ್ಣರಂಗವನ್ನು ಬಳಸಿಕೊಂಡು ತನ್ನ ನೃತ್ತಗಳ ಬೀಸು, ಅಭಿನಯದ ರಸಾನುಭಾವದಿಂದ ರಸಿಕರನ್ನು ತನ್ನತ್ತ ಸೆಳೆದುಕೊಂಡಳು. ಎಲ್ಲಕ್ಕಿಂತ ಆಕರ್ಷಕವೆನಿಸಿದ್ದು- ನತಾನಿಯಾ ಶಿವನ ಊರ್ಧ್ವತಾಂಡವ ಪ್ರದರ್ಶನದಲ್ಲಿ, ತನ್ನ ಕಾಲನ್ನು ತಲೆಗಿಂತ ಎತ್ತರದಲ್ಲಿ ಮೇಲ್ಮುಖವಾಗಿ ದೃಢವಾಗಿ ನಿಲ್ಲಿಸಿ, ದೇಹನಿಯಂತ್ರಣದ ತನ್ನ  ಸಾಮರ್ಥ್ಯವನ್ನು ಅಮೋಘವಾಗಿ ಸಾಕ್ಷಾತ್ಕರಿಸಿದ್ದು ರೋಮಾಂಚಗೊಳಿಸಿತು. ‘ಆಡಿ ಆಡಿ ಮಹೇಂದರ್’-ಬಾಲಸುಬ್ರಹ್ಮಣ್ಯ ಶರ್ಮರ ತುಂಬುಕಂಠದ ಭಾವಪೂರ್ಣ ಗಾಯನ-ಭವಾನಿಶಂಕರರ ಮೃದಂಗದ ನುಡಿಸಾಣಿಕೆಯ ಒತ್ತಾಸೆಯಲ್ಲಿ ನರ್ತಕಿ, ಭಕ್ತಿದುಂಬಿ ನರ್ತಿಸಿದಳು. ಮಿಥುನ್ ಶ್ಯಾಮರ ಹುರಿಗಟ್ಟಿದ ನಟುವಾಂಗದ ದನಿ ಕುಣಿಸುವ ಲಯದಲ್ಲಿದ್ದು, ಕಲಾವಿದೆ ಅದರಿಂದ ಸ್ಫೂರ್ತಿಗೊಂಡು ಪಾದರಸದಂತೆ ಮನೋಹರವ ನೃತ್ತಗಳಿಂದ ಝೇಂಕರಿಸಿದಳು. ಮಾರ್ಕಂಡೇಯನ ಭಕ್ತಿಯ ಪರಾಕಾಷ್ಠೆ, ಯಮನ ಅಟ್ಟಹಾಸ-ದೌಷ್ಟ್ಯ, ಹಾರಾಟದ ಪ್ರಕರಣವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದಳು. ಶಿವನ ರೂಪ-ಆಭರಣಾಲಂಕಾರ  ವೈಶಿಷ್ಟ್ಯವನ್ನು ಮನೋಹರವಾಗಿ ನಿರೂಪಿಸಿದಳು. ಮೊದಲಿಂದ ಕಡೆಯವರೆಗೂ ಬತ್ತದ ಚೈತನ್ಯ, ನಿರಾಯಾಸ ನರ್ತನ ನತಾನಿಯಳ ನೃತ್ಯನೈಪುಣ್ಯವನ್ನು ಸಾಬೀತುಗೊಳಿಸಿತು. ಮುದನೀಡಿದ ಸಾತ್ವಿಕಾಭಿನಯದಲ್ಲಿ ‘ಭಕ್ತಿ’ಯ ಸ್ಥಾಯೀಭಾವ ಅಂತರ್ಗತವಾಗಿ ಸ್ರವಿಸುತ್ತಿದ್ದುದು ‘ವರ್ಣ’ದ ಘನತೆಯನ್ನು ಉನ್ನತೀಕರಿಸಿತು. ಶಿವನ ಒಂದೊಂದು ಮನೋಜ್ಞ ಭಂಗಿಗಳೂ ಕಣ್ಮನ ತುಂಬಿ ಆನಂದ ನೀಡಿದವು. ಗುರು ಮಿಥುನರ ಮೊಗದಲ್ಲಿ ‘ಶಿಷ್ಯಾದಿಚ್ಚೆತ್ ಪರಾಜಯಂ’- ಎಂಬ ನುಡಿಗಟ್ಟಿನ ಸಾರ್ಥಕಭಾವ ಸ್ಫುರಿಸಿತ್ತು.

ಬೃಂದಾವನಿ ರಾಗದ ’ಕಲಿಯುಗ ವರದನ್…’ ಪಳನಿಯಲ್ಲಿ ದಂಡಾಯುಧಪಾಣಿ  ಮುರಗನ್ ನೆಲೆನಿಂತ ಸ್ಥಳಪುರಾಣವನ್ನು ಸಂಚಾರಿಯ ಕಥಾನಕದೊಂದಿಗೆ ಚಿತ್ರಿಸುವ ‘’ಪದಂ’’, ಮನೋಹರವಾಗಿ ನಿರೂಪಿತವಾಯಿತು. ಭಕ್ತಿ ಮಡುಗಟ್ಟಿದ ಕೃತಿಯನ್ನು ಕಲಾವಿದೆ ಮೈದುಂಬಿ ಅಭಿನಯಿಸಿದಳು. ಮುರುಗನಿಗೆ ಅನನ್ಯ ಭಕ್ತಿಯಿಂದ ಪೂಜೆಸಲ್ಲಿಸಿ, ಕಾವಡಿ ಹೊರುವ ಸೇವೆಯ ಸಮರ್ಪಣೆಯ ಮೂಲಕ ಷಣ್ಮುಗನ  ಮಹಿಮೆಯನ್ನು ಬಿಂಬಿಸುತ್ತಾಳೆ.

ಮುಂದೆ, ಸ್ವಾತಿ ತಿರುನಾಳ್ ಮಹಾರಾಜರು ರಚಿಸಿದ ‘’ ಜಲಜ ಬಂಧು…’’ ಕೀರ್ತನೆ, ಶೃಂಗಾರ ಲೇಪಿತವಾಗಿ ಕಂಡರೂ ಭಕ್ತಿ ಸ್ಥಾಯೀಭಾವವಾಗಿ ಮನವನ್ನಾವರಿಸಿತು. ಪದ್ಮನಾಭಸ್ವಾಮಿಯನ್ನು ಆರಾಧಿಸಿದ ನಾಯಿಕಾ ಅವನ ಬರವಿಗಾಗಿ ಕಾತರದಿಂದ ಕಾಯುತ್ತಿದ್ದಾಳೆ. ಸುತ್ತಣ ಸುಂದರ-ಹಿತವಾದ ವಾತಾವರಣ ಅವಳ ಪಾಲಿಗೆ ಕಹಿ-ಅಹಿತವಾಗಿದೆ. ತನ್ನ ಸ್ವಾಮಿಯ ಕಾಣದೆ ವಿರಹಾಗ್ನಿ ಅವಳನ್ನು ಸುಡುತ್ತಿದೆ. ಈ ಜೀವಾತ್ಮ ಆ ಪರಮಾತ್ಮನ ವಿಲೀನಕ್ಕಾಗಿ ಹಾತೊರೆಯುತ್ತಿರುವ ಭಾವ-ವಿಭಾವಗಳು ಆಧ್ಯಾತ್ಮಿಕತೆಯನ್ನು ಧ್ವನಿಸಿದವು. ಕಲಾವಿದೆಯ ಏಕಾಗ್ರತೆ, ಪಕ್ವಾಭಿನಯ, ಸೂಕ್ಷ್ಮ ಭಾವಾಭಿವ್ಯಕ್ತಿ ಅಭಿನಂದನೀಯ.

ಅಂತ್ಯದಲ್ಲಿ ಬಾಲಮುರಳೀಕೃಷ್ಣರ ಕದನಕುತೂಹಲ ರಾಗದ ‘ತಿಲ್ಲಾನ’ದ ಕುಣಿಸುವ ಲಯ ರಸಿಕರನ್ನು ಮಂತ್ರಮುಗ್ಧಗೊಳಿಸಿತು. ನತಾನಿಯ ತೋರಿದ ಪಾದಭೇದಗಳ ಸೊಗಸು ಕಣ್ತನಿಸಿತು. ಸಂದೇಶಾತ್ಮಕ ಅಕ್ಕನ ವಚನ ಮಂಗಳವನ್ನು ಕೋರಿತು. ವಿ.ಗೋಪಾಲ್ ನುಡಿಸಿದ ಶಂಕರಾಭರಣ ರಾಗದ ವೀಣಾನಿನಾದ ಗಂಧರ್ವಲೋಕಕ್ಕೊಯ್ದಿತು.

Related posts

ತಾಯಿ-ಮಗನ ಅಪರೂಪದ ರಂಗಪ್ರವೇಶ

YK Sandhya Sharma

ಆಪ್ಯಾಯಮಾನ ಮೋಹಿನಿಯಾಟ್ಟಂ -ಕಥಕ್ ಸಮ್ಮಿಲನ

YK Sandhya Sharma

ವೈಷ್ಣವಿ-ಶ್ರಾವಣಿಯರ ಪ್ರಬುದ್ಧಾಭಿನಯದ ರಮ್ಯನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.