Image default
Dancer Profile

ಅಚ್ಚ ಕೂಚಿಪುಡಿ ನೃತ್ಯಪ್ರತಿಭೆ ದೀಪಾ ನಾರಾಯಣನ್

ಮೂರು ದಶಕಗಳಿಂದ ಎಡೆಬಿಡದೆ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ಪರಿಶ್ರಮಿಸುತ್ತಿರುವ  ದೀಪಾ ನಾರಾಯಣನ್ ಅರ್ಥಾತ್ ದೀಪಾ ಶಶೀಂದ್ರನ್ ತಮ್ಮ ಅಸಂಖ್ಯ ನೃತ್ಯಪ್ರದರ್ಶನಗಳಿಂದ ಖ್ಯಾತರಾದವರು. ತಮ್ಮ `ಕೂಚಿಪುಡಿ ಪರಂಪರಾ ಫೌಂಡೆಶನ್ ‘ ಮೂಲಕ ವೇದಾಂತಂ ಲಕ್ಷ್ಮೀನಾರಾಯಣ ಶಾಸ್ತ್ರೀ-ವೆಂಪಟಿ ಚಿನ್ನ ಸತ್ಯಂ ಪರಂಪರೆಯ ನೃತ್ಯಾಭಿವ್ರುದ್ಧಿಯ ಸಾಧನೆಯಲ್ಲಿ ನಿರತರಾದ ದೀಪಾ, ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ ಸತತ  ಇಪ್ಪತ್ತೈದು ವರುಷಗಳು ನಾಟ್ಯಶಿಕ್ಷಣ ಪಡೆದು ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಅವರದು.

ಮೂಲತಃ ದೀಪಾ, ಕೇರಳದವರಾದರೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಬದುಕು ಕಟ್ಟಿಕೊಂಡವರು. ಬಿ.ಇ.ಎಲ್. ಅಧಿಕಾರಿ ನಾರಾಯಣನ್ ನಾಯರ್ ಮತ್ತು ಶ್ರೀದೇವಿಯವರ ಮಗಳು. ಐದನೇ ವಯಸ್ಸಿಗೇ ಕಲಾಮಂಡಲಂ ಉಷಾ ದಾತಾರ್ ಮತ್ತು ಡಾ. ಸಾವಿತ್ರಿ ರಾಮಯ್ಯ ಅವರಲ್ಲಿ ಭರತನಾಟ್ಯ ಕಲಿತು ಎಂಟನೆಯ ವರ್ಷಕ್ಕೆ ಕೂಚಿಪುಡಿ ನೃತ್ಯಕೋವಿದೆ ಮಂಜುಭಾರ್ಗವಿಯವರ `ಪದ್ಮಾವತಿ ಕಲಾನಿಕೇತನ’ ಸೇರಿ ಅವರ ಮೊದಲಶಿಷ್ಯೆ ಎನಿಸಿಕೊಂಡರು. ಯಾವುದಾದರೂ ಒಂದು ನೃತ್ಯಶೈಲಿಯನ್ನು ಅನುಸರಿಸು ಎಂಬ ಅವರ ಸಲಹೆಯಂತೆ ದೀಪಾ, ಕೂಚಿಪುಡಿಯನ್ನು ಆಯ್ದುಕೊಂಡರು. ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ಮಂಜುಭಾರ್ಗವಿಯವರೊಂದಿಗೆ ದೇಶಾದ್ಯಂತ ಸಂಚರಿಸಿ ನೂರಾರು ಪ್ರದರ್ಶನ ನೀಡಿದರು. ಗುರುಗಳ ಗರಡಿಯಲ್ಲಿ ಚೆನ್ನಾಗಿ ನುರಿತ ದೀಪಾ, ತಮ್ಮ ಹದಿನಾರನೆಯ ವಯಸ್ಸಿಗೇ, ಇಂದಿನ ಕೆಲವು ಕೂಚಿಪುಡಿ ಖ್ಯಾತ ಕಲಾವಿದೆಯರಿಗೆ,  ಹಲವು ವರ್ಷಗಳು ತಾವು ನಾಟ್ಯಶಿಕ್ಷಣ ನೀಡಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಇದುವರೆಗೂ ಒಬ್ಬರೇ ಗುರುಗಳಿಂದ ಶಿಕ್ಷಣ ಪಡೆದುದರಿಂದ ತಮ್ಮ ನೃತ್ಯಶೈಲಿ ಅಪ್ಪಟವಾಗಿ ಉಳಿದುಕೊಂಡು ಬಂದಿದೆ ಎನ್ನುವರು.

ಸತತವಾಗಿ ನೃತ್ಯಪ್ರದರ್ಶನಗಳನ್ನು ನೀಡುತ್ತಲೇ ದೀಪಾ, ಕಾನೂನು ಪದವೀಧರೆಯಾಗಿ, ಜೊತೆಗೆ ಪಿ.ಜಿ.ಡಿ ಮಾಡಿ ಸಾಫ್ಟ್ ವೇರ್ ಇಂಡಸ್ಟ್ರಿಯಲ್ಲಿ ಹೆಚ್.ಆರ್.ಡಿ.ತಜ್ಞರಾಗಿ ಅನೇಕ ಕಾರ್ಪೋರೆಟ್ ಕಂಪೆನಿಗಳಲ್ಲಿ ಉದ್ಯೋಗ ನಿರ್ವಹಿಸಿದ್ದಾರೆ. ಈಗಾಗಲೇ ಉದ್ಯೋಗರಂಗದಲ್ಲಿ ಇಪ್ಪತ್ತೈದು ವರುಷಗಳ ಅನುಭವ ಗಳಿಸಿ, ಕೈತುಂಬಾ ಸಂಪಾದನೆಯಿದ್ದರೂ ನೃತ್ಯದ ಒಲವಿನಿಂದ ಉದ್ಯೋಗವನ್ನು ತ್ಯಜಿಸಿ, ತಮ್ಮ ಭವಿಷ್ಯವನ್ನು ಸಂಪೂರ್ಣ ನೃತ್ಯಸೇವೆಗೆ ಮುಡಿಪಾಗಿಟ್ಟಿರುವ ವೈಶಿಷ್ಟ್ಯ ಅವರದು.

ಮದುವೆಯಾಗಿ ಮಕ್ಕಳಾದರೂ ದೀಪಾ, ನೃತ್ಯಕೈಂಕರ್ಯ ಬಿಡಲಿಲ್ಲ. ತಮ್ಮದೇ ಆದ `ಕೂಚಿಪುಡಿ ಪರಂಪರಾ ಫೌಂಡೆಶನ್ ‘ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಡುತ್ತ ಉತ್ತಮ ನಾಟ್ಯಗುರು ಎನಿಸಿಕೊಂಡಿದ್ದಾರೆ. ವೆಂಪಟಿ ರವಿಶಂಕರ್ ಅವರಲ್ಲಿ ನೃತ್ಯ ಸಂಯೋಜನೆಯ ಬಗ್ಗೆ ಹೆಚ್ಚಿನ ಜ್ಞಾನಪಡೆದು, ಅನೇಕ ವಿಶಿಷ್ಟ-ವಿಭಿನ್ನ ನೃತ್ಯರೂಪಕಗಳನ್ನು ನಿರ್ಮಿಸಿ ದೇಶಾದ್ಯಂತ ಪ್ರದರ್ಶನಗಳನ್ನು ನೀಡಿದ್ದಾರೆ. ಮೈಸೂರು ದಸರಾ,ಹಂಪಿ, ಪಟ್ಟದಕಲ್ಲು,  ರಸೋಲ್ಲಾಸ , ನೃತ್ಯಕುಂಜ್ ಮಹೋತ್ಸವಗಳು ಸೇರಿದಂತೆ ಅಸಂಖ್ಯಾತ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡಿರುವ ಅಗ್ಗಳಿಕೆ ಅವರದು.

          ಕೇರಳದಲ್ಲಿ ಕ್ಯಾಲಿಕಟ್ ಮತ್ತು ನೆಲಂಬೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಮೂರು ಶಾಖೆಗಳಲ್ಲಿ ನಾಟ್ಯಶಿಕ್ಷಣ ನೀಡುತ್ತಿರುವ ಇವರು, ಅಂತರರಾಷ್ಟ್ರೀಯ ಸಂಸ್ಥೆಯಾದ ಸ್ಪಿಕ್ ಮಾಕೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಂತರರಾಷ್ಟ್ರೀಯ ನೃತ್ಯೋತ್ಸವ ಸಮಿತಿಯಲ್ಲಿ ಮಾನ್ಯತೆ ಪಡೆದಿರುವ ಕಲಾವಿದೆ. ದೂರದರ್ಶನದ ಗ್ರೇಡೆಡ್ ಆರ್ಟಿಸ್ಟ್ ಆಗಿರುವ ದೀಪಾ, ಉತ್ತರ ಅಮೆರಿಕಾದ ಹ್ಯೂಸ್ಟನ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮೊದಲ ಕೂಚಿಪುಡಿ ಸಮ್ಮೇಳನದಲ್ಲಿ  ಭಾರತವನ್ನು ಪ್ರತಿನಿಧಿಸಿ, ಪ್ರಬಂಧ ಮಂಡಿಸಿ, ಏಕವ್ಯಕ್ತಿ ಪ್ರದರ್ಶನ ನೀಡಿರುವುದು ವಿಶೇಷ. ಅಮೇರಿಕಾ ಸೇರಿದಂತೆ,  ಅಬುದಾಬಿ, ಬೆಹರೆನ್,ದೋಹಾ ಮತ್ತು ದುಬಾಯ್ ಗಳಲ್ಲಿ ಅನೇಕ ಕಾರ್ಯಾಗಾರಗಳನ್ನು ನಡೆಸಿ ಪ್ರಾತ್ಯಕ್ಷಿಕಾ ಉಪನ್ಯಾಸಗಳನ್ನೂ ನೀಡಿದ್ದಾರೆ.

ದ್ರೌಪದಿಯ ಬಗ್ಗೆ ವಿಭಿನ್ನ ಆಯಾಮದಲ್ಲಿ `ಅಗ್ನಿ ಜ್ಯೋತ್ಸ್ನಾ’ ನೃತ್ಯರೂಪಕ ತಯಾರಿಸಿ ಹಲವಾರು ಪ್ರದರ್ಶನಗಳನ್ನು ನೀಡಿ ಪ್ರಶಂಸೆ ಪಡೆದಿದ್ದಾರೆ. ಹಾಗೇ ಇವರ `ಪಂಚನಾಯಿಕಾಸ್’ ಮತ್ತು `ನದಿ’ ಕೂಡ ಇವರ ನೃತ್ಯ ಸಂಯೋಜನೆಯ ಪರಿಣಾಮಕಾರಿಯಾದ ನೃತ್ಯರೂಪಕಗಳು. ಮುಖ್ಯಪಾತ್ರಗಳಲ್ಲಿ ಅಭಿನಯಿಸಿ,ತಮ್ಮ ನಟನಾ ಕೌಶಲ, ನೃತ್ಯ ಪ್ರತಿಭೆ ಮೆರೆಯುವ ದೀಪಾ, ಹೊಸ ಬಗೆಯ, ಪ್ರಯೋಗಗಳತ್ತ ಮುಖ ಮಾಡಿದವರು. ಪ್ರತಿಭೆಗೆ ತಕ್ಕ ಪುರಸ್ಕಾರ-ಗೌರವಗಳು ಇವರಿಗೆ ಸಾಕಷ್ಟು ಲಭಿಸಿವೆ. ಅವುಗಳಲ್ಲಿ ಮುಖ್ಯವಾದವು- ನೃತ್ಯ ಶಿರೋಮಣಿ, ನೃತ್ಯ ವಿಲಾಸಿನಿ, ಸತ್ಯಭಾಮ ಪ್ರಶಸ್ತಿ, ಯುವರಂಗದ ಅತ್ಯುತ್ತಮ ಕೂಚಿಪುಡಿ ಕಲಾವಿದೆ, ನಾಟ್ಯ ಕೌಸ್ತುಭ ಮುಂತಾದವು. ತಮ್ಮ ಕೂಚಿಪುಡಿ ಫೌಂಡೇಶನ್ ನಿಂದ ಕಳೆದ ಹಲವಾರು ವರ್ಷಗಳಿಂದ, ದೇಶದ ಪ್ರಸಿದ್ಧ ನೃತ್ಯಕಲಾವಿದರನ್ನು ಆಹ್ವಾನಿಸಿ `ನಾಟ್ಯ ಪರಂಪರ’ ನೃತ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸುತ್ತ ಬಂದಿರುವುದು ಇವರ ಗರಿಮೆ.

 ರೇಮಂಡ್ಸ್ ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿರುವ ಪತಿ ಶಶೀಂದ್ರನ್ ಕೇರಳದ ಚಂಡೆವಾದನದಲ್ಲಿ ಆರಂಗೇಟ್ರಂ ಮಾಡಿದ್ದಾರೆ. ಮಗ ಶರದ್ ಕರ್ನಾಟಕ ಸಂಗೀತ ಮತ್ತು ವಯೊಲಿನ್ ಕಲಿಯುತ್ತಿದ್ದು, ಮಗಳು ಸಂಜುಕ್ತ ಮೋಹಿನಿಯಾಟ್ಟಂ ಮತ್ತು ಕೂಚಿಪುಡಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ.

Related posts

ನೃತ್ಯ ಶಾಸ್ತ್ರಜ್ಞೆ-ಸಂಶೋಧಕಿ ಡಾ. ಕರುಣಾ ವಿಜಯೇಂದ್ರ

YK Sandhya Sharma

ಮನಾಕರ್ಷಿಸುವ ಕಥಕ್ ನೃತ್ಯಪ್ರತಿಭೆ ಶ್ರೇಯಾ.ಪಿ.ವತ್ಸ

YK Sandhya Sharma

ನೃತ್ಯಾಭಿನಯ ಚತುರೆ ವಿದ್ಯಾಲತಾ ಜೀರಗೆ

YK Sandhya Sharma

Leave a Comment

This site uses Akismet to reduce spam. Learn how your comment data is processed.