ಮಂತ್ರಮುಗ್ಧರನ್ನಾಗಿಸುವ ವೇಣುಗೋಪಾಲರ ಕೊಳಲ ಇನಿದನಿಗೆ, ತಮ್ಮ ಸುಶ್ರಾವ್ಯ ಕಂಠ ಕೂಡಿಸಿದ ಡಾ.ಸಂಜಯ್ ಶಾಂತಾರಾಂ ಅವರ ನಟುವಾಂಗದ ಜತಿಗಳಿಗೆ ಮನಮೋಹಕವಾಗಿ ಹೆಜ್ಜೆ ಜೋಡಿಸುತ್ತ, ವೇದಿಕೆಗೆ ಬಂದ ಕಲಾವಿದೆ ಸಂಜನಾ ಪೈ ಮಿಂಚಿನ ವೇಗದಲ್ಲಿ ನೃತ್ತ ಝೇಂಕಾರಗೈದಳು. ಅದು ಅವಳ ಪ್ರಥಮ ಹೆಜ್ಜೆಯ ‘ರಂಗಪ್ರವೇಶ’. ನಗರದ ಎ.ಡಿ.ಎ.ರಂಗಮಂದಿರದಲ್ಲಿ ತುಂಬಿದ ಸಭಾಗೃಹದ ರಸಿಕರಿಗೆ, ವಿನಮ್ರವಾಗಿ ನೃತ್ಯನಮನ ಸಲ್ಲಿಸಿದಳು.
ಇಂದಿನ ವಿಶೇಷ ಸಂದರ್ಭಕ್ಕಾಗಿಯೇ ಗುರು ಸಂಜಯ್ ರಚಿಸಿದ ‘ಪುಷ್ಪಾಂಜಲಿ’ಯ ಪ್ರಸ್ತುತಿಯಲ್ಲಿ ದೇವಗಣಗಳಿಗೆ ವಂದಿಸಿದನಂತರ ಪ್ರಥಮ ಪೂಜಿತ ಗಣಪತಿಗೆ ಅವಳ ಮೊದಲ ವಂದನೆ. ‘ಗಂ ಗಣಪತಿ ನಮೋಸ್ತುತೆ’ ಎನ್ನುತ್ತ ಗಣಪತಿಯ ನಾನಾ ರೂಪಗಳನ್ನು ತನ್ನ ಮೋಹಕ ಭಂಗಿ-ಅಂಗಚಲನೆಗಳ ಮೂಲಕ ಆತ್ಮವಿಶ್ವಾಸದ ನಗುಮೊಗದಿಂದ ಕಟ್ಟಿಕೊಡುತ್ತ ತನ್ನ ನೃತ್ಯಸೇವೆಯನ್ನು ಅರ್ಪಿಸಿದಳು.
ಮುಂದಿನ ನೃತ್ಯಪ್ರಸ್ತುತಿಗೆ ಸಿದ್ಧತಾ ರೂಪದಲ್ಲಿ ತಾನು ಕಲಿತ ಮೂಲಭೂತ ಅಡವು, ಹಸ್ತಮುದ್ರೆ, ತಾಂತ್ರಿಕ ನೈಪುಣ್ಯದ ಆಯಾಮಗಳನ್ನು ಪ್ರದರ್ಶಿಸಿದ್ದು ಪಂಚಮುಖಿ ‘ಅಲ್ಲರಿಪು’ ವಿನ ಮೂಲಕ. ಸುಂದರ ದೃಷ್ಟಿ-ಗ್ರೀವ ಭೇದಗಳ ಸೊಗಸನ್ನು ಬೀರುತ್ತ, ಬೆಡಗಿನಿಂದ ತುಂಬಿದ ವಿಶೇಷ ವಿನ್ಯಾಸಗಳ ನೃತ್ತಗಳನ್ನು ಅಂಗಶುದ್ಧಿಯ ನೆಲೆಯಲ್ಲಿ ಮಿಂಚಿನ ಬಳ್ಳಿಯಂತೆ ಲವಲವಿಕೆಯಿಂದ ನಿರೂಪಿಸಿ ಮನದುಂಬಿದಳು.
ಮುಂದಿನ ಪ್ರಸ್ತುತಿ ಸಂಕೀರ್ಣ ಜತಿಗಳ, ಅಭಿನಯ ಪ್ರಧಾನವಾದ ‘ವರ್ಣ’. ಇದು ಗುರು-ಶಿಷ್ಯರಿಬ್ಬರಿಗೂ ಸವಾಲು ನೀಡುವ ಪ್ರಮುಖ ಘಟ್ಟ. ಗುರುಗಳು ಸೃಜನಾತ್ಮಕವಾಗಿ ಹೆಣೆದ ಕಷ್ಟಕರ ಜತಿಗಳನ್ನು ಪರಿಪೂರ್ಣ ನೃತ್ತಗಳಾಗಿ ನಿರ್ವಹಿಸಬೇಕಾದ ಜವಾಬ್ದಾರಿ ಶಿಷ್ಯೆಯದು. ತಾಳ-ಲಯಜ್ಞಾನಗಳನ್ನು ಬೇಡುವ ನೃತ್ತಗಳು, ಪಕ್ವತೆ ನಿರೀಕ್ಷಿಸುವ ಪರಿಣಾಮಕಾರಿ ಅಭಿನಯ, ಸುದೀರ್ಘ ಬಂಧವಾದ ‘ವರ್ಣ’ವನ್ನು ನಿಭಾಯಿಸುವ ಅಗಾಧ ಚೈತನ್ಯ ಕಲಾವಿದೆಗಿದ್ದರೆ ಯಶಸ್ಸು ಖಚಿತ. ಇಂಥ ಪರೀಕ್ಷೆಯನ್ನು ಸಂಜನಾ ಸುಲಭವಾಗಿ ಗೆದ್ದುಬಂದದ್ದು ಅವಳ ಧನಾತ್ಮಕ ಸಾಮರ್ಥ್ಯ. ಕಿರಣ್ ಸುಬ್ರಹ್ಮಣ್ಯಂ ರಚಿಸಿದ ಜತಿಗಳಿಗೆ ಸಂಜನಾ ಲೀಲಾಜಾಲವಾಗಿ ನರ್ತಿಸಿ ನೃತ್ತಗಳ ನಿರೂಪಣೆಯಲ್ಲಿ ‘ಸೈ’ ಎನಿಸಿಕೊಂಡಳು. ‘ಸುಂದರ ಮೋಹನ ಮುರಳೀಧರ’ಎಂದು ತನ್ಮಯಳಾಗಿ ಕೃಷ್ಣನನ್ನು ಸ್ತುತಿಸುವ ಕೃತಿಯನ್ನು ಸಂಜನಾ ಮನಮೋಹಕ ಕೃಷ್ಣನ ಭಂಗಿಯಿಂದ ಆರಂಭಿಸಿದಳು. ಬಾಲಕೃಷ್ಣನ ಲೀಲೆಯಿಂದಾರಂಭಿಸಿ, ಕಂಸಸಂಹಾರ, ಗೋವರ್ಧನ ಗಿರಿಧಾರಿಯ ಸಾಹಸಗಳಿಂದ ಪಾರ್ಥಸಾರಥಿಯಾಗಿ ಗೀತೋಪದೇಶ, ಸ್ಥಿತಪ್ರಜ್ಞ ಕೃಷ್ಣನ ವಿಶ್ವರೂಪ ದರ್ಶನದವರೆಗಿನ ವಿವಿಧಾ ಘಟನಾವಳಿಗಳ ಹಿನ್ನಲೆಯಲ್ಲಿ ಕೃಷ್ಣನ ವ್ಯಕ್ತಿತ್ವದ ಭವ್ಯ ಚಿತ್ರಣವನ್ನು ಬಹು ಮನೋಜ್ಞವಾಗಿ ಕಟ್ಟಿಕೊಟ್ಟಳು. ರಂಗದ ತುಂಬಾ ನೃತ್ತಗಳ ರಂಗವಲ್ಲಿಯನ್ನು ಕಲಾನೈಪುಣ್ಯದಿಂದ ರಚಿಸುತ್ತ ಹೋದ ಬಗೆ ನೋಡಲೇ ಒಂದು ಸೊಗಸಾದ ಅನುಭವ. ಪ್ರತಿ ರಸವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಅವಳ ಮುಖಾಭಿವ್ಯಕ್ತಿ, ಕಣ್ತುಂಬುವ ಮುದವಾದ ಭಂಗಿಗಳು, ಚೈತನ್ಯ ಉಕ್ಕುವ ಜತಿಗಳ ಲೀಲಾಜಾಲ ರಾಸಲೀಲೆ ಸಂಜನಾ ವೈಶಿಷ್ಟ್ಯ. ಗುರು ಸಂಜಯರ ಸಶಕ್ತ ನಟುವಾಂಗ ಸಂಜನಳ ನೃತ್ತಗಳ ಝೇಂಕಾರಕ್ಕೆ ಸ್ಫೂರ್ತಿದಾಯಕವಾಗಿತ್ತು. ಭಾವಪೂರ್ಣ ಗಾಯನ ವರ್ಣದ ಆತ್ಮವಾಗಿತ್ತು.
ಅನಂತರ-ಮಧ್ಯಮಾವತಿ ರಾಗದ ಕೊಂಕಿಣಿ ಭಾಷೆಯ ಕೃತಿ ‘ನರ್ತನಪ್ರಿಯೆ ಓ ನಾರಾಯಣಿ’ಯನ್ನು ತನ್ನ ಲಾಲಿತ್ಯದ ನಡೆಗಳಲ್ಲಿ ನವಿರಾಗಿ ನಿರೂಪಿಸಿದಳು. ಕ್ಷೀರಸಾಗರ ಮಥನದ ಪ್ರಸಂಗದಲ್ಲಿ ಮೋಹಿನಿಯಾಗಿ, ಸುರಾಸುರ ಕದನ, ರಕ್ಕಸರ ಅಟ್ಟಹಾಸಗಳ ಅಭಿವ್ಯಕ್ತಿಯಲ್ಲಿ ತನ್ನ ನಟನಾ ಸಾಮರ್ಥ್ಯ ಪ್ರದರ್ಶಿಸಿದಳು. ದುಷ್ಟಸಂಹಾರಿಯಾಗಿ ರೌದ್ರ ಮೆರೆದು, ಲವಲವಿಕೆಯ ನರ್ತನದಲ್ಲಿ ಕಣ್ಮನ ತುಂಬಿದಳು.
ನಾಗೇಂದ್ರ ಯೋಗಿ ರಚಿಸಿದ ‘ಬಾ ಬಾ ಶಂಕರ’ ಭಕ್ತಿಪ್ರಧಾನ ‘ಶಿವ ಪದಂ’ ನಲ್ಲಿ ತೋರಿದ ನವರಸಾಭಿನಯ ಶ್ಲಾಘಾರ್ಹ್ಯ. ಭಂಗಿಗಳ ರಚನೆಯಲ್ಲಿ ಅವಳ ಶರೀರ ನಿಯಂತ್ರಣ ಶಕ್ತಿ, ಆಕಾಶಚಾರಿ, ಭ್ರಮರಿಗಳು, ಕರಣಗಳ ಸೌಂದರ್ಯ ಎದ್ದುಕಂಡಿತ್ತು. ಅಂತ್ಯದಲ್ಲಿ ಸ್ವಾತಿತಿರುನಾಳರ ಧನಶ್ರೀ ರಾಗದ ಜನಪ್ರಿಯ ‘ತಿಲ್ಲಾನ’ ಕುಣಿಸುವ ಲಯದಲ್ಲಿ ಕಲಾವಿದೆಯ ಅನುಪಮ ನೃತ್ತಗಾರುಡಿಯನ್ನು ಆನಂದದ ಸಂವರ್ಧನೆಯಲ್ಲಿ ಪರಾಕಾಷ್ಠತೆಗೇರಿಸಿತ್ತು.
ನೃತ್ಯದ ರಸಾನುಭವವನ್ನು ತಮ್ಮ ಗಾಯನ-ಮೇಳಗಳ ಸೌಷ್ಟವದಿಂದ ಪುಷ್ಟೀಕರಿಸಿದವರು- ಕೊಳಲು- ವೇಣುಗೋಪಾಲ್, ಮೃದಂಗ-ಹರ್ಷ ಸಾಮಗ, ವೀಣೆ-ವಿ.ಗೋಪಾಲ್, ರಿದಂ ಪ್ಯಾಡ್ -ಕಾರ್ತೀಕ್ ದಾತಾರ್ ಮತ್ತು ಗಾಯನ-ನಟುವಾಂಗವನ್ನು ಜೊತೆಜೊತೆಯಲ್ಲಿ ಸಮರ್ಥವಾಗಿ ನಿರ್ವಹಿಸಿದವರು ಡಾ.ಸಂಜಯ್ ಶಾಂತಾರಾಮ್. ಸಹ ನಟುವಾಂಗ ಮಾ. ಕೌಶಿಕ್.