ಕಲಾತ್ಮಕ ಮಂಟಪಗಳ ಮನಸೆಳೆವ ರಂಗಸಜ್ಜಿಕೆ, ಭಾವಗಳನ್ನು ಉದ್ದೀಪನಗೊಳಿಸುವ ರಾಗರಂಜಿತ ಬೆಳಕಿನ ವಿನ್ಯಾಸ, ತಲೆದೂಗುವಂತಿದ್ದ ಸುಶ್ರಾವ್ಯ ಹಿನ್ನಲೆಯ ವಾದ್ಯಮೇಳ-ಗಾಯನದ ಪ್ರಭಾವಳಿಯಲ್ಲಿ ತನ್ಮಯತೆ ಯಿಂದ ರಮಣೀಯವಾಗಿ ನರ್ತಿಸುತ್ತಿದ್ದ ಕಲಾವಿದೆ ಶ್ರೇಯಾ ಪಿ.ವತ್ಸ ಕಲಾರಾಧನೆಯಲ್ಲಿ ಮೈಮರೆತಿದ್ದಳು.
ಆ ಸುಂದರ ಸಂಜೆ ಶ್ರೇಯಾಳ ಭಕ್ತಿ “ಸಮರ್ಪಣೆ ‘’ ಗೆ ಮುಡಿಪಾಗಿದ್ದ ಪವಿತ್ರ ದಿನ. ಅವಳ ನೃತ್ಯಪಯಣದ ಕಲಿಕೆಯನ್ನು ಪ್ರೇಮಚಂದ್ರ ಆಡಿಟೋರಿಯಂನಲ್ಲಿ ಕಲಾರಸಿಕರ ಮುಂದೆ ಸಾಕ್ಷಾತ್ಕರಿಸುವ ಅಪೂರ್ವ ಸಂದರ್ಭ. ಅಂತರರಾಷ್ಟ್ರೀಯ ಕಥಕ್ ನೃತ್ಯಕಲಾವಿದ ದಂಪತಿಗಳೆಂದೇ ಖ್ಯಾತಿ ಪಡೆದ ನಿರುಪಮಾ ಮತ್ತು ರಾಜೇಂದ್ರ ಅವರ ಸಮರ್ಥ ಮಾರ್ಗದರ್ಶನದಲ್ಲಿ ಅರಳಿದ ಕಲಾಕುಸುಮ ಶ್ರೇಯಾ ಅಂದು ಸಾರ್ಥಕ ‘ನೃತ್ಯ ಗುರುಕಾಣಿಕೆ’ಯನ್ನು ಸಮರ್ಪಣೆ ಮಾಡಿ, ಗುರುಗಳ ಕೀರ್ತಿಗೆ ಗರಿ ಮೂಡಿಸಿದಳೆಂದರೆ ಅತಿಶಯೋಕ್ತಿಯಲ್ಲ. ಸತತ ಎರಡು ಗಂಟೆಗಳ ಕಾಲ ನಿರಾಯಾಸವಾಗಿ ಅಷ್ಟೇ ಮನೋಹರವಾಗಿ ನೃತ್ಯವನ್ನು ಪ್ರಸ್ತುತಪಡಿಸಿದ ಕಲಾವಿದೆ ತನ್ನ ಅಸ್ಮಿತೆಯನ್ನು ಪ್ರಕಾಶಗೊಳಿಸಿದ್ದಳು.
ರಂಗಮಂಚದ ನವರಂಗಗಳ ಮಧ್ಯೆ ಅಲೆಯ ಸುಳಿಯಂತೆ ನವಿರಾಗಿ ಸಾಗಿ ಬಂದ ಶ್ರೇಯಾ, ನಟರಾಜನ ವಿಶಿಷ್ಟ ಭಂಗಿಗಳಲ್ಲಿ ಪ್ರತ್ಯಕ್ಷಳಾದಳು. ಗುರು ನಿರುಪಮಾ ಅವರ ಸುಮಧುರ ನಿರೂಪಣೆ ಮತ್ತು ಸ್ಫುಟವಾದ ‘ಪಡಂತ್ ‘ ತಾಳಕ್ಕೆ ಅನುಗುಣವಾಗಿ ಗೆಜ್ಜೆನಾದ ಹೊಮ್ಮಿಸುತ್ತ ಪ್ರವೇಶಿಸಿದಳು ಕಲಾವಿದೆ. ಲಾಸ್ಯದ ಹಸ್ತಚಲನೆಗಳಲ್ಲಿ ಭರದಿಂದ ‘ಚಕ್ಕರ್’ ಗಳೊಡನೆ ಸಂಕೀರ್ಣ ನೃತ್ತಗಳ ಝೇಂಕಾರದಲ್ಲಿ ‘ ಫಾಲನೇತ್ರ ಧರ ಪಿನಾಕಿ’ (ಮಾಲ್ ಕೌನ್ಸ್ ರಾಗ) ಎಂಬ ಫಯಾಜ್ ಖಾನ್ ಅವರ ಸಿರಿಕಂಠದ ಗಾಯನದಲ್ಲಿ ಶಿವನ ವರ್ಣನೆಯನ್ನು ತನ್ನ ವರ್ಚಸ್ವೀ ಅಭಿನಯದಲ್ಲಿ ವ್ಯಕ್ತಪಡಿಸಿದಳು. ಪಾದಭೇದಗಳ ‘ತತ್ಕಾರ’ದಲ್ಲಿ ಮೃದಂಗದ ಲಯಕ್ಕೆ ಕುಣಿದ ಅವಳ ನರ್ತನಕ್ಕೆ ಆ ವಿಶಾಲವಾದ ವೇದಿಕೆ ಆಡುಂಬೊಲವಾಗಿತ್ತು.
ಮುಂದಿನ ಶುದ್ಧ ನೃತ್ತಭಾಗದ ‘ತೀನ್ ತಾಳ’ದಲ್ಲಿ ಪ್ರಸ್ತುತಪಡಿಸಿದ ಕೌಶಲ್ಯಪೂರ್ಣ ನೃತ್ತಗಳು ಆಕರ್ಷಕವಾಗಿದ್ದುವಲ್ಲದೆ ಕಲಾವಿದೆಗೆ ಸವಾಲನ್ನು ಒಡ್ಡುವಂತಿದ್ದವು.ಪದಗಳ ವಿವಿಧ ಭಾಗದ ಸೂಕ್ಷ್ಮ ಚಲನೆಗಳು, ವಿಲಂಬಿತಲಯದ ದ್ರವೀಕೃತ ನವಿರಾದ ಚಲನೆಗಳು ನದಿಯ ಬಳುಕಾಟವನ್ನು ನೆನಪಿಸಿದವು. ಮೊಗದಲ್ಲಿ ಮಾರ್ದವತೆ ಮಿನುಗುತ್ತಿದ್ದ ಅಭಿವ್ಯಕ್ತಿಯಲ್ಲಿ ಪಕ್ವತೆ ಮತ್ತು ತಾದಾತ್ಮ್ಯತೆ ಸೂಸಿತ್ತು. ಮಧ್ಯಮ ಲಯದ ನಾಜೂಕು ಚಲನೆಗಳು, ತನುವಿನ ಬಳುಕಾಟ, ಲಂಗದ ನೆರಿಗೆಯನ್ನು ಹಿಡಿದು, ತಲೆಯನ್ನು ಓರೆಯಾಗಿ ತುಳುಕಿಸುವ ನೋಟ ನಿಜಕ್ಕೂ ಸುಂದರ. ಕೃಷ್ಣನ ಬಗೆಗಿನ ಕವಿತೆಯ ಸೌಂದರ್ಯ, ಗತ್ ಭಾವ, ಹಗುರ ಎಗುರು ಹೆಜ್ಜೆಗಳು, ಕೃಷ್ಣ, ಗೋಪಿಕೆಯರ ವಸ್ತ್ರಗಳನ್ನು ಕದಿಯುವ ನಾಟಕೀಯ ಸನ್ನಿವೇಶ ಕಣ್ಣಿಗೆ ಕಟ್ಟುವಂತೆ ಗಾಢವಾಗಿ ಭಾವ ಬೆಸೆದು ಅಭಿನಯಿಸಿದ್ದಳು. ಕಡೆಯಲ್ಲಿ ಕೃಷ್ಣನಿಗೆ ಶರಣು ಹೋಗದ ಹೊರತು ಬೇರೆ ದಾರಿಯಿಲ್ಲ ಎಂಬ ಸಮರ್ಪಣಾ ಭಾವ ಮಡುಗಟ್ಟಿತ್ತು.
ಅನಂತರ ಪಾರ್ವತಿಯ ಬಳಿ ಗಣೇಶ ಮತ್ತು ಕಾರ್ತಿಕೇಯ ಪರಸ್ಪರ ದೂರು ನೀಡುತ್ತ ಹಾಸ್ಯ ಮಾಡುವ ಸನ್ನಿವೇಶವನ್ನು ಕಲಾವಿದೆ ಮನೋಜ್ಞವಾಗಿ ಅಭಿನಯಿಸಿದಳು. ಹಲವು ಸೂಕ್ಷ್ಮ ಸಂಗತಿಗಳನ್ನು ಗುರು ನಿರುಪಮಾ ಅತ್ಯಂತ ನೈಪುಣ್ಯದಿಂದ ಸಂಯೋಜಿಸಿದ್ದು ಶ್ಲಾಘನೀಯವಾಗಿತ್ತು. ಅನಂತರ, ಧೃತ ಲಯದ ಮನೋಹರ ‘ತಿಹಾಯ್’ ನಲ್ಲಿ ಒಡಮೂಡಿದ ತುಕಡಾಗಳು,ಲಡಿಗಳು ಮತ್ತು ಕಿವಿ ತುಂಬಿದ ಪಾದಭೇದದ ಸುಂದರ ತತ್ಕಾರಗಳ ಝಣತ್ಕಾರ, ಆಶುವಾಗಿ ನಿರೂಪಿತವಾದ ಪಡಂತ್ ಪರೀಕ್ಷೆಯಲ್ಲಿ ಯಶಸ್ವಿಯಾದ ಶ್ರೇಯಾಳ ಪ್ರತಿಭಾ ಸಾಮರ್ಥ್ಯಕ್ಕೆ ರಸಿಕರ ಚಪ್ಪಾಳೆಯ ಸುರಿಮಳೆಯಾಯಿತು.
ಮುಂದೆ ರಾಗಮಾಲಿಕೆಯ ‘ ಶ್ರೀರಾಮಚಂದ್ರ ಕೃಪಾಳು ಭಜಮನ’ -ತುಳಸಿದಾಸರ ಭಜನ್, ಪರವಶತೆಯ ಅಭಿನಯದ ದೈವೀಕ ಮೆರುಗು ರಸಾನುಭವ ನೀಡಿತು. ಕೃಷ್ಣನ ಬರವಿಗಾಗಿ ಕಾದ ವಾಸಿಕಸಜ್ಜಿಕಾ, ಅವನ ಪರಸ್ತ್ರೀ ಸಂಗದಿಂದ ಕುಪಿತಳಾಗಿ ಖಂಡಿತನಾಯಿಕ ಆಗುವುದನ್ನು ಪರಿಣಾಮಕಾರಿ ಅಭಿನಯಿಸಿದಳು ಶ್ರೇಯಾ. ಅಂತ್ಯದ ‘ತರಾನಾ’ ಕಲಾವಿದೆಯ ಮಿಂಚಿನ ಸಂಚಾರದ ನೃತ್ಯವೈಖರಿ ಕಣ್ಮನಕ್ಕೆ ಹಬ್ಬವಾಯಿತು.