ದೇವ ಜಗನ್ನಾಥನ ನಾಡಿನಿಂದ ಉದಯಿಸಿದ ವಿಶ್ವದಾದ್ಯಂತ ಸಂಚರಿಸಿರುವ, ಭಾರತದ ಶಾಸ್ರೀಯ ನೃತ್ಯ ಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಚೌಕ ಮತ್ತು ತ್ರಿಭಂಗ ಒಡಿಸ್ಸಿ ನೃತ್ಯದ ಪ್ರಮುಖ ಆಕರ್ಷಣೆ ಹಾಗೂ ಸೊಬಗಿನ ಶೈಲಿ.
ಇಂಥ ಲಯ-ಲಾಸ್ಯಮಿಳಿತ `ಮಂಚ ಪ್ರವೇಶ’ ಇತ್ತೀಚಿಗೆ `ಸೇವಾಸದನ’ದಲ್ಲಿ ಕಿಕ್ಕಿರಿದ ಕಲಾಪ್ರೇಮಿಗಳ ಸಮ್ಮುಖ ನಡೆಯಿತು. ಕಲಾವಿದೆ ಭರತನಾಟ್ಯ ಹಾಗೂ ಒಡಿಸ್ಸಿಗಳಲ್ಲಿ ವಿದ್ವತ್ ಸಾಧಿಸಿದ ಸೋನಿಯಾ ಕೃಷ್ಣಮೂರ್ತಿ. ಇವಳಿಗೆ ವಿದ್ಯೆಯನ್ನು ಧಾರೆಯೆರೆದ ಪ್ರಸಿದ್ಧ ನೃತ್ಯ ಗುರು ಮಾನಸಿ ರಘುನಂದನ್ `ಅಭಿವ್ಯಕ್ತಿ ಡಾನ್ಸ್ ಸೆಂಟರ್ ’ನ ಅಧ್ಯಕ್ಷೆ, ಭರತನಾಟ್ಯ ಹಾಗೂ ಒಡಿಸ್ಸಿ ನೃತ್ಯಶೈಲಿಗಳಲ್ಲಿ ಪ್ರಾವೀಣ್ಯ ಸಾಧಿಸಿದವರು. ಹೀಗಾಗಿ ಸೋನಿಯಾ ನೃತ್ಯ ಪ್ರದರ್ಶನದಲ್ಲಿ ಪರಿಪಕ್ವತೆ ತುಂಬಿತ್ತು.
ಪ್ರಥಮದಲ್ಲಿ `ಮಂಗಳಾಚರಣ‘. ಪಂಚದೇವಿಯರಾದ ಪಾರ್ವತಿ, ದುರ್ಗೆ,ಕಾಳಿ, ಲಕ್ಷ್ಮಿ ಹಾಗೂ ಸರಸ್ವತೀ ದೇವಿಯರಿಗೆ ವಂದಿಸುತ್ತ, ಜಗನ್ನಾಥ, ಭೂಮಾತೆ, ಗುರು-ಹಿರಿಯರು, ಪ್ರೇಕ್ಷಕ ಗಡಣಕ್ಕೆ ನಮಿಸುವ ಈ ಪಹಾಡಿ ರಾಗದ ಕೃತಿಯಲ್ಲಿ ಕಲಾವಿದೆ, ಮಂದಗತಿಯ ಮೆಲುಹೆಜ್ಜೆಗಳನ್ನಿರಿಸುತ್ತ, ನಯನ ಮನೋಹರ ಭಂಗಿಗಳನ್ನು ಪ್ರದರ್ಶಿಸಿ ಸಂಪ್ರದಾಯ ರೀತ್ಯ ಸ್ವಾಗತ ಕೋರಿದಳು. ನವರಸಭಾವಗಳು ದೇವಿಯರ ಅಭಿನಯದಲ್ಲಿ ಝೇಂಕರಿಸಿದವು.
ನಾಟ್ಯಶಾಸ್ತ್ರ,ಅಭಿನಯ ದರ್ಪಣ ಮತ್ತು ಅಭಿನಯ ಚಂದ್ರಿಕಗಳಿಂದ ಮೂಲಪ್ರೇರಣೆ ಪಡೆದ ‘’ ತನ್ಮಾತ್ರ ವಿನ್ಯಾಸ’’- ನೃತ್ಯ ಕಟ್ಟಡದ ಮೂಲ ವ್ಯಾಕರಣವನ್ನು ತಿಳಿಸುವಂಥ ವಿಶಿಷ್ಟಕೃತಿ. ಸೂಕ್ಷ್ಮ ಲಯವಿನ್ಯಾಸದ ಬಗೆಗಳನ್ನು ಇದು ಶುದ್ಧ ನೃತ್ತದಲ್ಲಿ ಪರಿಚಯಿಸುವುದಾದರೂ ನಯನ ಮನೋಹರ ಅಭಿನಯವನ್ನು ಸೋನಿಯಾ, ತನ್ನ ಮಾಟವಾದ ತೆಳುಸೊಂಟವನ್ನು ತ್ರಿಭಂಗಿಯಲ್ಲಿ ವಯ್ಯಾರವಾಗಿ ತಿರುಗಿಸುತ್ತಾ, ಭ್ರಮರಿಗಳನ್ನು ನಿರ್ವಹಿಸುತ್ತಾ, ಕಣ್ಣು-ಹುಬ್ಬುಗಳ ಬಳುಕಾಟದಲ್ಲಿ ಅಮೂರ್ತ ಭಾವನೆಗಳಿಗೆ ರೂಹು ನೀಡಿದಳು. ದೇವಾಲಯಗಳಲ್ಲಿ ಕಾಣಸಿಗುವ ಶಿಲಾಬಾಲಿಕೆಯರ ವೈವಿಧ್ಯ ಭಂಗಿಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಳು. ರಂಗಪ್ರವೇಶಕ್ಕಾಗಿಯೇ ಮಾನಸಿ ಈ ನೃತ್ಯವನ್ನು ಅತ್ಯದ್ಭುತವಾಗಿ ಸಂಯೋಜಿಸಿದ್ದರು.
ಆದಿಶಂಕರಾಚಾರ್ಯರು ರಚಿಸಿದ `ಕಾಲಭೈರವಾಷ್ಟಕ’ ದಿಂದ ಆಯ್ದ ಬಾಗೇಶ್ರೀ ರಾಗದ ಕಾಲಭೈರವ ಸ್ತುತಿ ನೋಡಲು ರೋಚಕವಾಗಿತ್ತು. ಕಾಶೀಪಾಲಕ ಶಿವನ ಪ್ರತಿರೂಪ, ಪ್ರಧಾನ ಎಂಟು ಭೈರವರನ್ನು ಸ್ತುತಿಸುವ ಕೃತಿಯಲ್ಲಿ ಅವನ ಗುಣ-ವರ್ಣನೆಗಳು ನರ್ತಕಿಯ ವಿವಿಧ ಭಾವ-ಭಂಗಿಗಳಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡವು. ತಾಂಡವ ಅಡವುಗಳು, ದ್ರವೀಕೃತ ಚಲನೆಗಳು ಸೌಂದರ್ಯದ ಬೆಡಗನ್ನು ಹೆಚ್ಚಿಸಿದವು.
ಮುಂದಿನ ಪ್ರಸ್ತುತಿ ಶಂಕರಾಭರಣದ `ಪಲ್ಲವಿ’ – ವಿವಿಧ ವಿನ್ಯಾಸದ ಹಸ್ತಚಲನೆ, ಸಶಕ್ತ ಪಾದಕ್ಷಮತೆ, ಶುದ್ಧ ನೃತ್ತದಲ್ಲಿ ಸೌಂದರ್ಯದ ಪರಿಭಾಷೆಯಲ್ಲಿ ಸೊಗಯಿಸಿತು. ಮಂದಗತಿಯ ನೃತ್ತಗಳು ಕ್ರಮೇಣ ವೇಗಗತಿಯಲ್ಲಿ ಪರಾಕಾಷ್ಟೆ ತಲುಪಿದ್ದು ಆನಂದದಾಯಕವಾಗಿತ್ತು.
`ಕಹಿ ಗಲೆ ಮುರಲಿ ಫಂಕಾ ‘-ಭಕ್ತಕವಿ ಬನಮಾಲಿ ದಾಸ್ ರಚಿಸಿದ ಕೃತಿಗೆ ಸೋನಿಯಾ ಜೀವತುಂಬಿ ಅಭಿನಯಿಸಿದಳು. ಗೋಪಿಕೆಯರೊಡನೆ ಕೃಷ್ಣನ ಚೆಲ್ಲು-ತುಂಟ ನಡವಳಿಕೆಯಿಂದ ಬೇಸರಗೊಂಡರೂ ರಾಧೆ ಅವನ ಪ್ರಣಯಾರಾಧನೆಯ ನಿರೀಕ್ಷೆಯಲ್ಲಿ ಕನಸು ಕಾಣುತ್ತಾಳೆ. ಕೃಷ್ಣನ ಪಾತ್ರದಲ್ಲಿ ಕಲಾವಿದೆ, ಮನೋಹರ ತ್ರಿಭಂಗಿಯಲ್ಲಿ ನಿಂತು ಕೊಳಲು ನುಡಿಸುವ ಪರಿ ಶೃಂಗಾರದ ಮಿಂಚಿನಲ್ಲಿ ಮೋಡಿಮಾಡಿತು.
ಅಂತಿಮ ಘಟ್ಟದಲ್ಲಿ ಪ್ರದರ್ಶಿತವಾದುದು ಜಯದೇವನ `ಅಷ್ಟಪದಿ’ ಆಧಾರಿತ `ದಶಾವತಾರ’ ಸುಂದರ ರೂಪಕದಂತೆ `ಕಾಣ್ಕೆ’ ನೀಡಿತು. ಮಹಾವಿಷ್ಣುವು ದುಷ್ಟ ನಿಗ್ರಹ-ಶಿಷ್ಟ ರಕ್ಷಣೆಗಾಗಿ ತಳೆದ ಹತ್ತು ಅವತಾರಗಳನ್ನೂ ಕಲಾವಿದೆ, ತನ್ನ ವಿಶಿಷ್ಟ ಆಂಗಿಕಾಭಿನಯದಿಂದ ಕಣ್ಮುಂದೆ ತಂದು ನಿಲ್ಲಿಸಿದಳು. ಮತ್ಸ್ಯ, ಕೂರ್ಮ, ವರಾಹದಿಂದ ಹಿಡಿದು ಕಲ್ಕಿ, ಬುದ್ಧನವರೆಗೂ ಸವಿವರವಾಗಿ ಶಿಲ್ಪಗಳನ್ನು ಆವಿರ್ಭಾವಗೊಳಿಸಿ, ವಿಶಿಷ್ಟ ಚಲನೆಗಳಿಂದ ಮನಸೂರೆಗೊಂಡಳು. ನಂತರ ಮಂಗಳಕರವಾದ ಶಾಂತಿಶ್ಲೋಕದೊಂದಿಗೆ ಸಂಪನ್ನಗೊಳಿಸಿದಳು.
ನರ್ತನ ಕಾರ್ಯಕ್ರಮ ಕಳೆಗಟ್ಟಿದ್ದು ಹಿಮ್ಮೇಳದ ಸಶಕ್ತ ಪಾತ್ರಗೊಳ್ಳುವಿಕೆಯಿಂದ. ನಾಟ್ಯಗುರು ಮಾನಸಿ ನಟುವಾಂಗ (ಸಿಂಬಲ್ಸ್), ಭುವನೇಶ್ವರದ ಕಲಾವಿದರಾದ ರಾಜೇಶ್ ಕುಮಾರಲಂಕಾ- ಗಾಯನ, ಸೌಮ್ಯ ರಂಜಾನ್ ನಾಯಕ್- ಪಕ್ವಾಜ್ ಮತ್ತು ಸಿತಾರ್ ಶ್ರೀನಿವಾಸ ಶಾಸ್ತ್ರಿ, ಕೆ.ಎಸ್. ಜಯರಾಂ ಅವರ ಕೊಳಲುವಾದನ ಅಲೌಕಿಕ ಅನುಭವ ನೀಡಿತು.