Image default
Dance Reviews

ಪ್ರಕೃತಿಯ ಮನೋಜ್ಞ ಭಂಗಿಗಳ ಪ್ರಬುದ್ಧಾಭಿನಯದ ನರ್ತನ

ಮನಸ್ಸಿಗೆ ಮುದವೆರೆವ, ಶಾಂತತೆ ಪಸರಿಸುವ ಸಾತ್ವಿಕಾಭಿನಯದ ನೃತ್ಯ ನಮ್ಮರಿವಿಲ್ಲದೆ ಹೃದಯವನ್ನು ಸ್ಪರ್ಶಿಸುತ್ತದೆ. ಅಂಥ ಒಂದು ಆರ್ಭಟವಿಲ್ಲದ ಸೌಮ್ಯರೇಖೆಯ ಪರಿಧಿಯೊಳಗೆ ಚೆಲುವನ್ನು ಬೀರಿದ ನೃತ್ಯ ಪ್ರದರ್ಶನ ಇತ್ತೀಚಿಗೆ ಭಾರತೀಯ ವಿದ್ಯಾಭವನದಲ್ಲಿ ಪ್ರದರ್ಶಿತವಾಯಿತು.

 ಕೇಂದ್ರ ದೂರದರ್ಶನದ ‘ಎ’ ದರ್ಜೆಯ ಉತ್ತಮ ಕಲಾವಿದೆ, ಜರ್ಮನಿಯಲ್ಲಿ ಭಾರತೀಯ ನೃತ್ಯ ಪರಂಪರೆಯನ್ನು ಬೆಳೆಸುತ್ತಿರುವ ಕನ್ನಡನಾಡಿನ ಪ್ರತಿಭೆ ಶ್ರೀಮತಿ ಪ್ರಕೃತಿ ಶ್ರೀರಂಗರಾಜು ‘ಕಲಾಕ್ಷೇತ್ರ’ ಬಾನಿಯ ಭರತನಾಟ್ಯದ ಅಪ್ಪಟ ಕಲಾವಿದೆ. ಇವರು ಪ್ರಸ್ತುತಪಡಿಸಿದ ಅಂಗಶುದ್ಧಿಯ ಪ್ರಬುದ್ಧಾಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಐ.ಸಿ.ಸಿ.ಆರ್. ನ ತಜ್ಞಫಲಕದಲ್ಲಿ ಮಾನ್ಯತೆ ಪಡೆದ ನರ್ತಕಿಯಾದ ಪ್ರಕೃತಿ ಪ್ರತಿ ಶುಕ್ರವಾರದ ಕಾರ್ಯಕ್ರಮದಲ್ಲಿ ಯಶಸ್ವಿ ಕಲಾವಿದೆಯಾಗಿ ಹೊರಹೊಮ್ಮಿದಳು.

ಆರಭಿ ರಾಗದ ‘ಪುಷ್ಪಾಂಜಲಿ’ ಮೂಲಕ ಶುಭಾರಂಭ. ಅಂಗಶುದ್ಧದ ರಮ್ಯತೆ, ಖಚಿತ ಹಸ್ತಚಲನೆ-ಅಡವುಗಳ ಸೊಗಸು ಮನಸ್ಸನ್ನು ತಣಿಸಿತು. ಡಾ. ಬಾಲಮುರಳೀ ಕೃಷ್ಣರ ರಚನೆಯ ‘ಗಂ ಗಣಪತಿ’- ಮೊದಲವಂದಿತನ ಮಹಿಮೆಯನ್ನು ಸ್ತುತಿಸಿದ ಕಲಾವಿದೆ, ಸಾಕಾರಗೊಳಿಸಿದ ಗಜಮುಖನ ವೈವಿಧ್ಯಪೂರ್ಣ ಮನೋಜ್ಞ ಭಂಗಿಗಳು ಕಣ್ಣನ್ನು ತುಂಬಿತು. ಅಚ್ಚುಕಟ್ಟಾದ ನೃತ್ತಗಳಿಂದ ಕಂಗೊಳಿಸಿದ ನರ್ತನ ತೃಪ್ತಿದಾಯಕವಾಗಿತ್ತು.

ನೃತ್ಯ ಪ್ರಸ್ತುತಿಯ ಹೃದಯಭಾಗ ಅತ್ಯಂತ ಹೃದ್ಯವಾಗಿತ್ತು. ತಂಜಾವೂರು ಸಹೋದರರಾದ ಪೊನ್ನಯನವರ ರಚನೆ- ’ಸಾಮಿ ನಿನ್ನೆ ಕೋರಿ ನಾನುರ ’ ಎಂದು ನಾಯಿಕೆ , ಬೃಹದೀಶ್ವರನಲ್ಲಿ ತನಗಿರುವ ಅನುರಾಗವನ್ನು ಮನ ಕರಗುವಂತೆ ತೋಡಿಕೊಳ್ಳುತ್ತಾಳೆ. ಅವನಿಲ್ಲದೆ ತನ್ನ ಅಸ್ತಿತ್ವವೇ ಇಲ್ಲವೆಂದು ಮರುಗುವ ಅವಳ ಭಾವನೆಗಳನ್ನು ಕಲಾವಿದೆ ಪ್ರಕೃತಿ, ತನ್ನ ನುರಿತ ಮುಖಾಭಿವ್ಯಕ್ತಿಯ ಪರಿಣಾಮಕಾರಿ ಅಭಿನಯದಿಂದ, ಒಳತಲ್ಲಣಗಳನ್ನು ಪಾತ್ರದ ಪರಕಾಯ ಪ್ರವೇಶದ ಮೂಲಕ ಸಹೃದಯರ ಅನುಭವಕ್ಕೆ ದಾಟಿಸಿದಳು. ಬೃಹತ್ ಶಿವಲಿಂಗ, ನಂದಿ, ಮಹೋನ್ನತ ದೇವಾಲಯದ ವಾಸ್ತುಶಿಲ್ಪವನ್ನು ಕಂಡ ಆನಂದವನ್ನು ತನ್ನ ಕಲಾನೈಪುಣ್ಯದ ಮನೋಹರ ನೃತ್ತಾವಳಿಗಳ ಮೂಲಕ ರಂಗದ ತುಂಬಾ ಸಂಭ್ರಮದ ಲಹರಿಯನ್ನು ಹರಡಿದಳು. ಮನ್ಮಥನ ಬಾಣದ ಹೊಡೆತವನ್ನು ತಾಳಲಾರದ ತೀವ್ರ ವಿರಹದ ಬೇಗುದಿಯನ್ನು ಸೊಗಸಾಗಿ ಅಭಿವ್ಯಕ್ತಿಸಿದಳು. ಕಲಾವಿದೆಯ ತಾಳ-ಲಯಜ್ಞಾನದ ಪರಿಪೂರ್ಣತೆ, ಶಕ್ತ ನೃತ್ತಗಳ, ಮೋಹಕ ಕರಣಗಳ  ಝೇಂಕಾರ, ಗುರು ಎ. ಲಕ್ಷ್ಮಣ್ ಅವರ ಸುಮನೋಹರ ನೃತ್ಯ ಸಂಯೋಜನೆಯಲ್ಲಿ ಒಡಮೂಡಿತ್ತು. ಅನನ್ಯ ಶರಣಾಗತಿಯ ತನ್ಮಯತೆಯ ಸಮರ್ಪಣಾ ಭಕ್ತಿಭಾವ ಪರಾಕಾಷ್ಟತೆ ಮುಟ್ಟಿತ್ತು. ಒಟ್ಟಾರೆ ಈ ಕೃತಿ ಪ್ರಕೃತಿಯ ಅನುಪಮ ಅಭಿನಯದಲ್ಲಿ ಪ್ರೇಮಕಾವ್ಯವಾಗಿ ಅರಳಿತ್ತು.

ದಾಸವರೇಣ್ಯ ಪುರಂದರದಾಸರ ಒಂದು ಅಪರೂಪದ ಕೃತಿ ‘’’ಎಂಥ ಚೆಲುವಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮ’’ ಎಂಬ ವ್ಯಂಗ್ಯೋಕ್ತಿಯಲ್ಲಿ ಅಳಿಯ ಶಿವನ ವಿಚಿತ್ರ ವೇಷಭೂಷಣದ ಬಗ್ಗೆ ಜನ, ಗಿರಿರಾಜನಿಗೆ ತಲೆ ಕೆಟ್ಟಿರಬೇಕು ಎಂದು ಅಚ್ಚರಿ ವ್ಯಕ್ತಪಡಿಸುವ ಗೀತೆಯನ್ನು ಪ್ರಕೃತಿ ಮನನೀಯವಾಗಿ ಅಭಿನಯಿಸಿದಳು. ಗಜ ಚರ್ಮಾಂಬರ, ಸ್ಮಶಾನವಾಸಿ, ಐದುಮುಖ, ಮೂರುಕಣ್ಣಿನ, ತಲೆಬುರುಡೆಗಳ ರುಂಡ ಮಾಲೆ, ಬ್ರಹ್ಮಕಪಾಲಿ, ಭೂತ-ಪ್ರೇತ-ಪಿಶಾಚಿಗಳ ಪರಿವಾರ ಹೊಂದಿದ ವಿಚಿತ್ರ ಮನುಷ್ಯನಿಗೆ ಅದು ಹೇಗೆ ತಾನೇ ಮಗಳನ್ನು ಕೊಡುತ್ತಾನೆ ಎಂಬ ವಿಡಂಬನೆ ಸೊಗಸಾಗಿ ಮೂಡಿಬಂತು. ಕಡೆಯಲ್ಲಿ ಶಿವ ಮತ್ತು ವಿಟ್ಟಲ ಇಬ್ಬರೂ ಅಭೇಧ್ಯರು ಎಂಬ ಭಾವದಲ್ಲಿ ಭಕ್ತಿರಸ ಹೊಮ್ಮಿತು.

ಶ್ರೀ ಧರ್ಮಪುರಿ ಸುಬ್ಬರಾಮ ಅಯ್ಯರ್ ರಚಿಸಿದ ಪರಾಸ್ ರಾಗದ, ಆದಿತಾಳದ ಜಾವಳಿಯ ನಾಯಕಿ ಸ್ವಾಧೀನಪತಿಕಾ. ಸುರಸುಂದರಾಂಗ, ಕಲಾಭಿರುಚಿಯುಳ್ಳ ಸಿರಿವಂತ ಸಚಿವ ಸ್ಥಾನದಲ್ಲಿ ಗೌರವಾನ್ವಿತನಾಗಿರುವ ಪತಿಯ ‘ಸರ್ವಗುಣ ಸಂಪನ್ನತೆ’ಯ ಬಗ್ಗೆ ಹೆಂಡತಿ ಗೆಳತಿಯರೆದುರು ಹೆಮ್ಮೆಯಿಂದ ಬಡಾಯಿ ಕೊಚ್ಚಿಕೊಳ್ಳುವ ಜಾವಳಿ, ಕಲಾವಿದೆಯ ಅರ್ಥಪೂರ್ಣ ಅಭಿನಯದಲ್ಲಿ ಹರಿತವಾಗಿ ನಿರೂಪಿತವಾಯಿತು. ಅಂತ್ಯದಲ್ಲಿ, ತಿಲ್ಲಾಂಗ್ ರಾಗದ ಲಾಲ್ಗುಡಿ ಜಯರಾಮನ್ ಅವರ ‘’ತಿಲ್ಲಾನ’’ ದಲ್ಲಿ ಅಭಿವ್ಯಕ್ತಿಸಿದ ಸುಂದರ ಭಂಗಿಗಳು, ರಂಗಾಕ್ರಮಣದ ನೃತ್ತಗಳು, ಚೇತೋಹಾರಿ ನರ್ತನ ಆಹ್ಲಾದತೆಯನ್ನು ಪಸರಿಸಿತು.

Related posts

ಪ್ರಜ್ವಲಾಭಿನಯದ ದೈವೀಕ ಝೇಂಕಾರ

YK Sandhya Sharma

ಅಪೂರ್ವ ಭಂಗಿಗಳ ಚೇತೋಹಾರಿ ನೃತ್ತಾಭಿನಯ

YK Sandhya Sharma

ನಿರಂತರೋತ್ಸವದಲ್ಲಿ ‘ಪ್ರತಿಭಾ’ ಪ್ರದರ್ಶನ

YK Sandhya Sharma

Leave a Comment

This site uses Akismet to reduce spam. Learn how your comment data is processed.