ಅರ್ವರ್ಣೀಯ ಅನುಭೂತಿ ಕಲ್ಪಿಸಿದ್ದ ಕಲಾತ್ಮಕ ಆವರಣದಲ್ಲಿ ದೇವ ವೆಂಕಟೇಶ್ವರನ ಸುಂದರ ಸನ್ನಿಧಾನ. ತೂಗಾಡುವ ದೀಪಮಾಲೆ-ಹೂಮಾಲೆಗಳು. ನವರಂಗದಲ್ಲಿ ಭಕ್ತಿ ರಸಾರ್ಚನೆಯಲ್ಲಿ ತಲ್ಲಿನಳಾದ ನೃತ್ಯ ಕಲಾವಿದೆ ಸಾಕ್ಷೀ ಶ್ರೀನಿವಾಸ್. ಅಂದವಳ ಪಾಲಿನ ಸುದಿನ. ನೆರೆದ ರಸಿಕವೃಂದದ ಸಮ್ಮುಖ ತನ್ನ ರಂಗಾರ್ಪಣೆ ಸಲ್ಲಿಸುವ ಸದವಕಾಶ. ರಂಗದ ಮೇಲಿನ ಪ್ರಥಮಹೆಜ್ಜೆಯಲ್ಲೇ, ತನುವಿನ ಬಾಗು-ಬಳುಕುಗಳ ಹಸ್ತಚಲನೆ, ಭಾವ-ಭಂಗಿಗಳ ಆಂಗಿಕಾಭಿನಯದಲ್ಲೇ ತಾನೊಬ್ಬ ಕಲಾಪ್ರವೀಣೆ ಎಂಬುದನ್ನು ಸಾಕ್ಷೀಕರಿಸಿದಳು.
ಬೆಂಗಳೂರಿನ ಪ್ರಸಿದ್ಧ ನೃತ್ಯಸಂಸ್ಥೆ `ಕಲಾ ಸಿಂಧು ಅಕಾಡೆಮಿ’ ಯ ನಾಟ್ಯಗುರು ಪೂರ್ಣಿಮಾ ಕೆ.ಗುರುರಾಜ್ ಅವರ ಸಮರ್ಥ ಗರಡಿಯಲ್ಲಿ ತಯಾರಾದ ಸಾಕ್ಷಿ ತನ್ನ ಗುರುಪರಂಪರೆಯ ಗೌರವವನ್ನು ಕಾಪಾಡಿದಳು. ಮೊದಲಿಗೆ ರಾಗಮಾಲಿಕೆ ಹಾಗೂ ತಾಳಮಾಲಿಕೆಯಲ್ಲಿ ರಚಿತವಾದ `ತೋಡಯ ಮಂಗಳಂ’- ಶ್ರೀರಾಮ ಮತ್ತು ವೆಂಕಟೇಶ್ವರರ ಮಂಗಳಸ್ತುತಿಗಳು ದೈವೀಕತೆಯನ್ನು ಪಸರಿಸಿದವು. `ಜಯ ಜಾನಕೀ ರಮಣ …’ ಅಪರೂಪದ ಶೊಲ್ಲುಕಟ್ಟು ಗಳೊಂದಿಗೆ ಗುರು ನರ್ಮದಾ ಸಂಯೋಜಿಸಿದ ನೃತ್ಯ ಶ್ರೀರಾಮನ ಸೌಮ್ಯ-ಸುಂದರ ಭಂಗಿಯ ಅಭಿನಯದೊಂದಿಗೆ ಸಾಗಿತು. ಪಂಕಜನಾಭನ ಮನೋಹರ ರೂಪವನ್ನು ಸಾಕ್ಷಿ, ತನ್ನ ಅರ್ಥಪೂರ್ಣ ಆಂಗಿಕಾಭಿನಯ ಮತ್ತು ಮನೋಜ್ಞ ಭಂಗಿಗಳಿಂದ ಕಟ್ಟಿಕೊಟ್ಟಳು. ನಡುನಡುವೆ ಮಿನುಗಿದ ವೈವಿಧ್ಯಪೂರ್ಣ ಚುರುಕು ನೃತ್ತಗಳು ಮುದನೀಡಿದವು. ಮನಮುಟ್ಟಿದ ಕೃತಿಯ ‘ ಜಯ ಮಂಗಳಂ ‘ ಸಾಲಿಗೆ ಕಲಾವಿದೆ ಅಭಿವ್ಯಕ್ತಿಸಿದ ಭಾವ ಹೊಸಮೆರುಗು ನೀಡಿತ್ತು.
ಮುಂದೆ, ಚತುರಶ್ರದ `ಅಲರಿಪು’ ವಿವಿಧ ನೃತ್ತಗಳು, ಮುಂದಿನ ಸಂಕೀರ್ಣ ನೃತ್ತ-ನೃತ್ಯಗಳ ಪ್ರಸ್ತುತಿಗೆ ತಾಲೀಮೋಪಾದಿಯಲ್ಲಿ ಅಭಿವ್ಯಕ್ತಿಗೊಳ್ಳುತ್ತ, ಕಲಾವಿದೆಯ ಲವಲವಿಕೆ, ವರ್ಚಸ್ಸು ಮನಸೆಳೆಯಿತು. ವೇಗಗತಿಯ ಚಲನೆಗಳು , ಅರೆಮಂಡಿಯ ವಿಪುಲ ಅಡವುಗಳು ಕಲಾವಿದೆಯ ಪರಿಶ್ರಮಕ್ಕೆ ಕನ್ನಡಿ ಹಿಡಿಯಿತು ಮತ್ತು ತಂಜಾವೂರು ಪರಂಪರೆಯ ಛಾಪು ಎದ್ದು ಕಂಡಿತು. ಶುದ್ಧನೃತ್ತ ಭಾಗವಾದ ‘ಜತಿಸ್ವರ’ ( ರಾಗ-ಮೋಹನ) ವನ್ನೂ ಅಷ್ಟೇ ಸುಭಗವಾಗಿ ನಿರ್ವಹಿಸಿದಳು. ಎಲ್ಲೂ ಯಾಂತ್ರಿಕತೆ ಹಣಕಿಕ್ಕದೆ, ರಂಜನೀಯವಾಗಿ, ಆಸಕ್ತಿ ಬೆಳೆಸುತ್ತ ಸಾಗಿತು. ನೃತ್ತದ ಸೊಗಸು ಲಾವಣ್ಯ, ಲಾಸ್ಯದೊಂದಿಗೆ ಮಿನುಗಿದ್ದು ವಿಶೇಷ. ಈ ಮೂಲಕ ಗುರು ಪೂರ್ಣಿಮಾ ಅವರ ಶಿಕ್ಷಣವಿನ್ಯಾಸದ ನಾವಿನ್ಯತೆ ಮತ್ತು ಪ್ರಬುದ್ಧತೆ ಸುವ್ಯಕ್ತವಾದವು.
ಮುತ್ತಯ್ಯ ಭಾಗವತರು ರಚಿಸಿದ ‘ ರಾಜ ರಾಜ ರಾಧಿತೆ ‘ ನಿರೋಷ್ಠಿ ರಾಗದಲ್ಲಿ ಸಂಯೋಜಿತವಾದ ಕೀರ್ತನೆ. ಸಾಮಾನ್ಯವಾಗಿ ಇಂಥ ರಚನೆಗಳು ರಾಜವಂಶಸ್ಥರಿಗೆ ಸಮರ್ಪಿತ. ದೇವಿ ಚಾಮುಂಡೇಶ್ವರಿಯ ದಸರಾ ಮೆರವಣಿಗೆಯ ಸೊಬಗನ್ನು ಬಿಂಬಿಸುವ ದೃಶ್ಯದಿಂದ ಸಾಕ್ಷಿ ತನ್ನ ನೃತ್ಯವನ್ನಾರಂಭಿಸಿದಳು. ನಂದಕುಮಾರರ ಭಾವಪೂರ್ಣ ಸಂಗೀತದ ಮಾಧುರ್ಯದೊಡಲಲ್ಲಿ ಕಲಾವಿದೆ ಸುಮನೋಹರವಾಗಿ ನರ್ತಿಸಿದಳು. ದೇವಿ ಶ್ರೀಲಲಿತೆಯ ಅಪೂರ್ವ ಭಂಗಿಗಳು ದೈವೀಕತೆಯನ್ನು ತುಂಬಿಕೊಟ್ಟವು. ‘ನಾದನುತೆ ಶಾರದೆ’ಯನ್ನು ವರ್ಣಿಸುತ್ತ ನಿರ್ಗಮಿಸಿದ ರೀತಿ ಪರಿಣಾಮಕಾರಿಯಾಗಿತ್ತು.
ಭರತನಾಟ್ಯದಲ್ಲಿ “ವರ್ಣ’’ ಅತ್ಯಂತ ವಿಸ್ತಾರವಾದ ಪ್ರಸ್ತುತಿ. ಅಭಿನಯ ಹಾಗೂ ನೃತ್ತಗಳಿಗೆ ಸಮಾನ ಪ್ರಾಶಸ್ತ್ಯ. ಸಂಗೀತಕ್ಕೂ ಇಲ್ಲಿ ಮಹತ್ವ. ಅನೇಕ ಆಯಾಮಗಳುಳ್ಳ ವರ್ಣ ಹೆಸರಿಗೆ ತಕ್ಕಂತೆ ವರ್ಣರಂಜಿತವಾಗಿದ್ದು ಜತಿಗಳು,ಸ್ವರಗಳು ಮತ್ತು ಸಾಹಿತ್ಯ ಹದವಾಗಿ ಬೆರೆತಿರುತ್ತವೆ. ಪ್ರಸ್ತುತ ವರ್ಣದಲ್ಲಿ ರಾಜನರ್ತಕಿ ತಾನು ಆರಾಧಿಸುವ ರಾಜನ ಹೃದಯದಲ್ಲಿ ಸ್ಥಾನ ಬೇಡುತ್ತಾ ಅವನ ಗುಣಾವಳಿಗಳನ್ನು ಕೊಂಡಾಡುತ್ತಿದ್ದಾಳೆ. ಮೋಹದ ಹಂತ ಮೀರಿದ ಇವಳ ಪ್ರೀತಿಯ ತಾದಾತ್ಮ್ಯ ಆತ್ಮೋನ್ನತಿಯ ಔನ್ನತ್ಯಕ್ಕೇರಿದೆ. ಕಲಾವಿದೆಯ ಭಾವಸ್ಫುರಣದ ಅಭಿನಯ , ನಾಟಕೀಯ ಮಿಂಚಿನ ಸಂಚಾರ, ಭಕ್ತಿಯ ಭರತದ ನೃತ್ತಗಳು ಮೋಡಿಮಾಡಿದವು. ಎಂಥವರಿಗೂ ಅರ್ಥವಾಗುವಂತಿದ್ದ ಸೂಕ್ಷ್ಮ ವಿವರಗಳ, ಕುಸುರಿಚಲನೆಯ ಅಭಿನಯ ಪಕ್ವತೆಯನ್ನು ಹೊರಸೂಸುತ್ತಿದ್ದವು. ದೃಷ್ಟಿ ಮತ್ತು ಗ್ರೀವಭೇದಗಳನ್ನು `ನೀವೇ ಪ್ರಾಣನಾಥನ್ ‘ ಎಂಬ ಅನುರಾಗದ ಉತ್ಕಟತೆಯ ತನ್ನ ಪ್ರಣಯ ನಿವೇದನೆಗೆ ಬಳಸಿಕೊಂಡಳು ಮನೋಜ್ಞ ಕಲಾವಿದೆ ಸಾಕ್ಷಿ. ಆಕೆಯ ಸರ್ವಾಂಗವೂ ಕಲಾತ್ಮಕ ಚಲನೆಯಲ್ಲಿ ಸಾಗಿ ಕಲಾಭಿಮಾನಿಗಳ ಹೃದಯಸ್ಪರ್ಶಿಸಿತು.
ಹರಿದಾಸ ಪರಂಪರೆಯ ವಾಗ್ಗೇಯಕಾರ ವಾದಿರಾಜರು ರಚಿಸಿದ ಸುಂದರ ಕೃತಿ ( ಕಮಾಚ್ ರಾಗ) `ಏನು ಸುಕೃತವ ಮಾಡಿದಳೋ ಯಶೋದೆ..’ ಎಂಬುದಾಗಿ ಸಾಕ್ಷಿ, ಮಗನ ಬಗ್ಗೆ ಯಶೋದೆ ತೋರಿದ ಮುಚ್ಚಟೆಯ ಪ್ರೀತಿಯನ್ನು ಅನುಪಮವಾಗಿ ಅಭಿವ್ಯಕ್ತಿಸಿದಳು. ಸರ್ವಗುಣ ಸಂಪನ್ನ, ಮಹಿಮಾನ್ವಿತ ದೇವ ಕೃಷ್ಣನನ್ನು ಪುಟ್ಟ ಮಗುವಂತೆ ಲಾಲಿಸುವ ಮುಗ್ಧವಾತ್ಸಲ್ಯದ ಮುಖವಷ್ಟೇ ಇಲ್ಲಿ ಅಭಿವ್ಯಕ್ತವಾಗುತ್ತದೆ. ಪ್ರೀತಿಯಿಂದ ಜಳಕ ಮಾಡಿಸುವ, ಗುಮ್ಮ ಬರುತ್ತಾನೆಂದು ಹೆದರಿಸುವ, ಹಾವು ಕಚ್ಚೀತೆಂಬ ಭಯಗೊಳ್ಳುವ ತಾಯಿಯ ಕಣ್ಣಿನಲ್ಲಿ ಅವನು ಪುಟ್ಟ ಕಂದನಷ್ಟೇ. ಸಂಚಾರಿಯ ಭಾಗದಲ್ಲಿ ಸಾಕ್ಷಿ, ಈ ಪ್ರತಿಯೊಂದು ಭಾವನೆಗೂ ವಿಪರ್ಯಾಸವೆಂಬ ಘಟನೆಗಳನ್ನು ವಿಸ್ಮಯ ಸ್ಥಾಯೀಭಾವದಲ್ಲಿ ಅಭಿನಯಿಸಿ ತೋರುತ್ತ, ಕವಿ ಚಿತ್ರಿಸಿರುವ ವಿಡಂಬನಾತ್ಮಕ ಸುಂದರ ಚರಣಗಳನ್ನು ಭಾವಪ್ರದವಾಗಿ ನಿರೂಪಿಸಿದಳು.
ಹುಟ್ಟಿನಿಂದಲೇ ತನ್ನ ಸಾರ್ವಭೌಮತ್ವ ಪ್ರಕಟಪಡಿಸಿದವನು ಶ್ರೀಕೃಷ್ಣನಾದರೆ, ಶ್ರೀರಾಮ ಸಾಮಾನ್ಯ ಮಾನವನಂತೆ ನಟಿಸಿದರೂ ಅವನ ಗುಣವಿಶೇಷಗಳು ನಿಜವಾದ ಸಾರ್ವಭೌಮ ಅವನೆಂದು ಸಾರುವ ವಿಶೇಷ ಕೃತಿ ಮಹಿಪತಿದಾಸರದು.ಶುದ್ಧಸಾರಂಗ ರಾಗದ `ಸ್ವಾಮಿ ನೀನೇ ಸಾರ್ವಭೌಮ’ ಎಂಬ ಸಾಲುಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟ ಕಲಾವಿದೆ, ಸಂಚಾರಿಯಲ್ಲಿ ತೋರಿದ ರಾಮನ ಪಿತೃವಾಕ್ಯ ಪರಿಪಾಲನೆ, ಶಬರಿಗೆ ಮೋಕ್ಷ ಕೃಪೆ, ಅಳಿಲು ಮುಂತಾದ ಪ್ರಾಣಿಪ್ರೀತಿ, ಜಟಾಯು ಬಗೆಗಿನ ದಯಾಭಾವ, ದೇವತೆಗಳನ್ನು ಇಂದ್ರಜಿತುವಿನ ಸೆರೆಯಿಂದ ಬಿಡಿಸಿದ ಕೃಪಾಳು, ಕಾರುಣ್ಯನಿಧಿಯಾದ ರಾಮನ ಧೀಮಂತತೆಯನ್ನು ಕೊಂಡಾಡುವ ಸಾಕ್ಷಿಯ ಅಭಿನಯ ಮನಸೂರೆಗೊಂಡಿತು. ಅಂತಿಮ ಪ್ರಸ್ತುತಿಯಾಗಿ `ಹಂಸಾನಂದಿ’ ರಾಗದ ತಿಲ್ಲಾನದಲ್ಲಿ ಪ್ರಸ್ತುತಪಡಿಸಿದ ಶುದ್ಧ ನೃತ್ತಗಳು ಸಮ್ಮೋಹಕವಾಗಿದ್ದು, ರಂಗಾಕ್ರಮಣ, ಲಯಾತ್ಮಕ ಕೊರಪುಗಳು ಆಕರ್ಷಕವಾಗಿದ್ದವು. ಬೃಹದೀಶ್ವರನಿಗೆ ಸಮರ್ಪಿತ ಇದರ ನೃತ್ಯ ಸಂಯೋಜನೆ ವಿಶಿಷ್ಟವಾಗಿತ್ತು. ಪ್ರಸನ್ನತೀರ್ಥರ `ಮಾರಜನಕ ಚತುರಾನನ ‘ ಎಂಬ ಮಂಗಳಂ ಕೂಡ ಅಷ್ಟೇ ಚೇತೋಹಾರಿಯಾಗಿತ್ತು.
ಗುರು ಪೂರ್ಣಿಮಾ ಅವರ ಆಯ್ಕೆಗಳು ಬಹುವಿಶಿಷ್ಟವಾಗಿದ್ದವು (ನಟುವಾಂಗ ಅವರದೇ) ಮಾತ್ರವಲ್ಲ ಅವುಗಳ ಹಿಂದಿನ ಸೌಂದರ್ಯಪ್ರಜ್ಞೆ, ಪರಿಶ್ರಮ-ಆಸಕ್ತಿಗಳು ನಿಜಕ್ಕೂ ಅನುಕರಣೀಯ. ಹಿಮ್ಮೇಳದಲ್ಲಿ ಲಿಂಗರಾಜು ಅವರ ಮೃದಂಗ, ಗಣೇಶ್ ಕುಮಾರ್ ಪಿಟೀಲು, ಸಾರ್ಥವಳ್ಳಿ ಕಾರ್ತೀಕ್ ಕೊಳಲು ನೃತ್ಯಸೊಬಗಿಗೊಂದು ಉತ್ತಮ ಪ್ರಭಾವಳಿಯನ್ನು ರಚಿಸಿದ್ದವು.
2 comments
A matured and well defined comemts. Good command over the language. Excellent performance by Sakshi.
Thank you very much M.G.Indira for your kind words.