Image default
Dance Reviews

ತ್ರಿಷಾ ರೈ ಮಿಂಚಿನ ಸಂಚಾರದ ಮೋಹಕ ನೃತ್ಯ

ನೃತ್ಯಮಂದಿರದಲ್ಲಿ ಕುಳಿತಿದ್ದ ಕಲಾರಸಿಕರ ತದೇಕ ದೃಷ್ಟಿಯನ್ನು ಮಿಂಚಿನಬಳ್ಳಿಯಂತೆ ನರ್ತಿಸುತ್ತಿದ್ದ ಅಪೂರ್ವ ಕಲಾವಿದೆ ತ್ರಿಷಾ ರೈ ಅದ್ಭುತ ನರ್ತನ ಸೆರೆಹಿಡಿದಿತ್ತು. ಪಾದರಸದಂತೆ ಚಲಿಸುತ್ತಿದ್ದ ಆಕೆಯ ವೇಗದ ಚಲನೆಗಳ ಮೋಡಿಗೆ ಒಳಗಾಗಿದ್ದ  ನೋಡುಗರನ್ನು ಆಕೆ ತನ್ನ ಅಪೂರ್ವ ಚೈತನ್ಯದಿಂದ ಬೆರಗುಗೊಳಿಸಿದಳು.

ವಯಸ್ಸಿಗೂ ಮೀರಿದ ಅಭಿನಯ ಪ್ರತಿಭೆ ಈ ಹದಿಮೂರರ ಎಳೆಬಾಲೆ. ಇತ್ತೀಚಿಗೆ ಎ.ಡಿ.ಎ .ರಂಗಮಂದಿರದಲ್ಲಿ ಭರತನಾಟ್ಯದ `ರಂಗಪ್ರವೇಶ’ ಮಾಡಿದ ತಮ್ಮ ಶಿಷ್ಯೆಯಲ್ಲಿ ಅದಮ್ಯಚೇತನವನ್ನು  ತುಂಬಿ, ತಮ್ಮ ಸೃಜನಾತ್ಮಕ ನೃತ್ಯ ಸಂಯೋಜನೆಗಳಿಂದ ನೃತ್ಯ ಪ್ರದರ್ಶನವನ್ನು ಅತ್ಯಂತ ವರ್ಣರಂಜಿತಗೊಳಿಸಿದ ಕೀರ್ತಿ `ಶಿವಪ್ರಿಯ’ ನೃತ್ಯಶಾಲೆಯ ನಾಟ್ಯಗುರು ಡಾ. ಸಂಜಯ್ ಶಾಂತಾರಾಂ ಅವರಿಗೆ ಸಂಪೂರ್ಣ ಸಲ್ಲತಕ್ಕದ್ದು. ಸುಶ್ರಾವ್ಯ ಗಾಯನದೊಂದಿಗೆ, ಸಬಲ ನಟುವಾಂಗವನ್ನೂ ನಿರ್ವಹಿಸಿ, ವಾಗ್ಗೇಯಕಾರರಾಗಿ, ನೃತ್ಯ ಸಂಯೋಜಕರಾಗಿ, ತ್ರಿಷಾಳ ವೈವಿಧ್ಯಪೂರ್ಣ ನೃತ್ಯ ಪ್ರಸ್ತುತಿಗೆ ಅವರು ಕಸುವು ತುಂಬಿದ್ದರು.

`ನೃತ್ಯಾಂಜಲಿ’ಯೊಂದಿಗೆ ಪ್ರಸ್ತುತಿಯನ್ನು ಆರಂಭಿಸಿದ ತ್ರಿಷಾ, ಓಂಕಾರದ ಝೇಂಕಾರವನ್ನು ಹತ್ತು ಹಲವು ಬಗೆಯಲ್ಲಿ ಅನುರಣಿಸುತ್ತಾ, ಪ್ರಥಮ ಪದಾರ್ಪಣೆಯಲ್ಲೇ ತನ್ನ ನೃತ್ಯದ ಅಸ್ಮಿತೆಯನ್ನು ಗಮನೀಯವಾಗಿ ಪ್ರದರ್ಶಿಸಿದಳು. ಹಲವು ಸುಂದರ ದೈಹಿಕ ವಿನ್ಯಾಸಗಳಲ್ಲಿ ಗಜಮುಖನಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದಳು. ಸ್ಕಂಧನ ನಾನಾ ಬಗೆಯ ಸುಂದರ ಭಂಗಿಗಳನ್ನು ತೋರುತ್ತ, ಸಲೀಸಾಗಿ ಅರೆಮಂಡಿಯ ಅಡವುಗಳ, ನವೋಲ್ಲಾಸದ ನೃತ್ತಮಂಜರಿಯನ್ನು ಅಮೋಘವಾಗಿ ಪ್ರದರ್ಶಿಸಿದಳು. ಅತ್ಯಂತ ಆತ್ಮವಿಶ್ವಾಸದಿಂದ ನಿರಾಯಾಸವಾಗಿ ನಿರೂಪಿಸಿದ `ಅಲ್ಲರಿಪು’ ಮತ್ತು `ಜತಿಸ್ವರ’ ದ ಸಂಕೀರ್ಣ-ಪ್ರಯೋಗಾತ್ಮಕ ನೃತ್ತಗಳ ಪಲುಕಿನಿಂದ ರಸಿಕರ ಕಣ್ಣಿಗೆ ಹಬ್ಬವನ್ನುಂಟು ಮಾಡಿದಳು. ಅಂಗಶುದ್ಧಿ, ಅಷ್ಟೇ ಲಾಲಿತ್ಯಪೂರ್ಣ ಹಸ್ತಚಲನೆಗಳ ಸೌಂದರ್ಯದಿಂದ, ಕಣ್ಮನ ಸೆಳೆದ ಆಕಾಶಚಾರಿಗಳ ಚಮತ್ಕಾರದಿಂದ ನೃತ್ಯ ಆಕರ್ಷಕವಾಗಿ ಮೂಡಿಬಂತು. ದೃಷ್ಟಿ, ಶಿರೋಭೇದಗಳಲ್ಲಿ ರಮ್ಯತೆ ಒಡಮೂಡಿತ್ತು.  

ಮುಂದಿನ `ಪದವರ್ಣ’ ಸಂಜಯ್ ಅವರ ರಚನೆ `ಗಿರಿಜಾ ರಮಣನೆ ‘ -ಶೃಂಗಾರ ಮಿಳಿತ ಭಕ್ತಿಭಾವದ ಪರಾಕಾಷ್ಠತೆಯನ್ನು ತ್ರಿಶಾ, ತನ್ನ ಪಕ್ವಾಭಿನಯದಿಂದ, ರಸಪೂರ್ಣ ಸಾಕ್ಷಾತ್ಕಾರದಿಂದ ರಸಿಕರನ್ನು ಆನಂದತುಂದಿಲಳನ್ನಾಗಿ ಮಾಡಿದಳು. ನವರಸಾಭಿವ್ಯಕ್ತಿಯಲ್ಲಿ ಕಲಾವಿದೆಯ ಪರಿಪೂರ್ಣ ಅಭಿನಯ ಸಾಮರ್ಥ್ಯ ವ್ಯಕ್ತವಾಗಿ, ತನ್ಮಯತೆಯ ಪ್ರತಿಮಾರೂಪವಾಗಿ, ತೋರಿದ ಆಹ್ಲಾದಕರ ಭಂಗಿಗಳು ಕಣ್ಮನ ಸೆಳೆದವು. ಭಾವಪೂರ್ಣ ಅಭಿನಯದೊಂದಿಗೆ, ಕಠಿಣ ಜತಿಗಳನ್ನು ಲೀಲಾಜಾಲವಾಗಿ ನಿರ್ವಹಿಸಿ, ಹಸ್ತ ಖಚಿತತೆಯ ಸೊಗಸನ್ನು ಬೀರುತ್ತ, ವೀರ-ಲಾಸ್ಯದಲ್ಲಿ ಕಲಾಪೂರ್ಣತೆಯಿಂದ ಅತ್ಯದ್ಭುತವಾಗಿ ನರ್ತಿಸಿದಳು. ಸಂಚಾರಿಗಳ ಕಥಾನಕ ಅಭಿನಯದಲ್ಲಿ ಕಲಾವಿದೆಯ ನಾಟಕೀಯ ಪ್ರಜ್ಞೆ ವಿಜ್ರುಂಭಿಸಿ, ಆಕೆಯ ಅಭಿನಯ ಚಾತುರ್ಯದ ಎಲ್ಲ ಮುಖಗಳೂ ಅನಾವರಣಗೊಂಡವು. ಶಿವಗಣದ ಸಂಭ್ರಮದ ಚಿತ್ರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಳು.  

ಮುಂದೆ, ಕಟೀಲ್ ದುರ್ಗಾಪರಮೇಶ್ವರಿಯನ್ನು ಕುರಿತ `ದೇವಿಸ್ತುತಿ’ಯನ್ನು ಚೈತನ್ಯಪೂರ್ಣ ವಾಗಿ ಅರ್ಪಿಸಿದಳು. ನೃತ್ಯಗುರು ಸಜಿನಿ ಕಲಾತ್ಮಕವಾಗಿ ನೃತ್ಯ ಸಂಯೋಜಿಸಿದ ಡಿವಿಜಿ ಅವರ ಪ್ರಸಿದ್ಧ `ಅಂತಃಪುರ ಗೀತೆ’ ಗಳಿಂದ ಆರಿಸಿಕೊಂಡ `ಏನೇ ಶುಕಭಾಷಿಣಿ ?’ ಮನಮೋಹಕವಾಗಿ ಮೂಡಿಬಂತು. ಅಂತ್ಯದಲ್ಲಿ ಸಂಭ್ರಮದ ಸಿಂಚನಗೈವ `ತಿಲ್ಲಾನ’ ವೇಗದ ಜತಿಗಳಿಂದ, ಆಕರ್ಷಕ ಚಲನೆಗಳಿಂದ ಸೊಗಯಿಸಿತು.

Related posts

ಪಕ್ವಾಭಿನಯದ ‘ರಮ್ಯ’ ನೃತ್ಯರಂಜನೆ

YK Sandhya Sharma

ಚೈತ್ರಳ ಮನೋಜ್ಞ ಅಭಿನಯದ ಮನೋಹರ ನೃತ್ಯ

YK Sandhya Sharma

ರೋಶಿನಿಯ ಪ್ರಬುದ್ಧ ಅಭಿನಯ- ಸಮ್ಮೋಹಕ ನಾಟ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.