ಗಾಜಿನಗೊಂಬೆಯಂಥ ಸಪೂರವಾದ ಮೈಕಟ್ಟು. ಒಡಿಸ್ಸೀ ನೃತ್ಯದ ತ್ರಿಭಂಗಿ, ನಯವಾದ ಹೆಜ್ಜೆ, ಬಾಗು-ಬಳುಕುಗಳು,ನಾಜೂಕುಚಲನೆಗಳಲ್ಲಿ ಪರಿಣತಿ ಪಡೆದ ಮಧುಲಿತಾ ಮಹಾಪಾತ್ರ ಒಡಿಸ್ಸೀ ನೃತ್ಯಶೈಲಿಯ ಪ್ರಸಿದ್ಧ ಯುವನರ್ತಕಿ. ವಿಶೇಷವಾಗಿ ಜಯದೇವನ ‘’ಗೀತಗೋವಿಂದ’’ ಕೃತಿಗಳ ಪ್ರಸ್ತುತಿಯಲ್ಲಿ ಅವರದು ಭಾವಪೂರ್ಣ ಅಭಿನಯ. ಸಣ್ಣವಯಸ್ಸಿಗೆ ಹಿರಿದನ್ನು ಸಾಧಿಸಿ ಜನಪ್ರಿಯತೆ ಪಡೆದ ಈ ಪ್ರತಿಭಾವಂತ ಕಲಾವಿದೆ, ಈಗ ಬೆಂಗಳೂರಿನಲ್ಲಿ ನೆಲೆಸಿ, `ನೃತ್ಯಾಂತರ’ ನಾಟ್ಯಶಾಲೆಯನ್ನು ಸ್ಥಾಪಿಸಿ ನೂರಾರು ಜನ ವಿದ್ಯಾರ್ಥಿಗಳಿಗೆ ಒಡಿಸ್ಸೀ ನೃತ್ಯ ತರಬೇತಿ ನೀಡುವುದರಲ್ಲಿ ನಿಷ್ಠೆಯಿಂದ ತೊಡಗಿಕೊಂಡಿದ್ದಾರೆ. ತಮ್ಮ ತನು-ಮನಗಳಲ್ಲಿ ಒಡಿಸ್ಸಿಯನ್ನು ಆವಾಹಿಸಿಕೊಂಡಿರುವ ಮಧುಲಿತಾ ಇಡೀ ತಮ್ಮ ಬದುಕನ್ನು ಈ ನೃತ್ಯಕಲೆಗಾಗಿಯೇ ಸಮರ್ಪಿಸಿಕೊಂಡಿರುವುದು ಅತಿಶಯವೇ ಸರಿ. ಮಕ್ಕಳಿಗೆ ಕಲಾಧಾರೆಯನ್ನು ಎರೆಯುವುದರ ಜೊತೆಗೆ ಒಡಿಸ್ಸೀ ನೃತ್ಯಪ್ರಕಾರವನ್ನು ಜನಪ್ರಿಯಗೊಳಿಸಿ ದಕ್ಷಿಣ ಭಾರತಾದ್ಯಂತ ಪ್ರಸಾರ ಮಾಡುವ ಸದಾಶಯ ಅವರದು.
ಮಧುಲಿತಾ ಮೂಲತಃ ಒರಿಸ್ಸಾದ ಪಶ್ಚಿಮಭಾಗದ ಭವಾನಿಪಟ್ಟಣದವರು. ತಂದೆ ಜದಬಾನಂದ ಮಹಾಪಾತ್ರ, ತಾಯಿ ಚಾರುಲತಾ. ಬಾಲ್ಯದಿಂದ ಮಧುಲಿತಾಗೆ ನೃತ್ಯವೆಂದರೆ ಪ್ರಾಣ. ಹೆತ್ತವರ ವಿರೋಧಗಳ ನಡುವೆಯೂ, ಅಲ್ಲಿ ಪ್ರಚಲಿತವಿದ್ದ ‘ಸಂಭಲ್ಪುರಿ’ ಜಾನಪದ ನೃತ್ಯವನ್ನು ಕಲಿತು ಪ್ರದರ್ಶನಗಳನ್ನು ನೀಡತೊಡಗಿದರು. ಆಕರ್ಷಕ ಒಡಿಸ್ಸಿನೃತ್ಯವನ್ನು ಟಿವಿಯಲ್ಲಿ ಕಂಡಾಗಿನಿಂದ ಒಡಿಸ್ಸಿ ನೃತ್ಯ ಕಲಿಯುವ ಕನಸು. ಅನಂತರ ಕೃಷ್ಣಚಂದ್ರ ಸಾಹು ಅವರ ಬಳಿ ಎರಡುವರ್ಷ ಒಡಿಸ್ಸಿನೃತ್ಯ ಕಲಿತರು. ಓದಿನಲ್ಲೂ ಜಾಣೆಯಾಗಿದ್ದ ಈಕೆ ಬಿಕಾಂ ಪದವಿಯಲ್ಲಿ ಅತ್ಯುಚ್ಚ ಅಂಕಗಳನ್ನು ಗಳಿಸಿ, ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಭುವನೇಶ್ವರದ ‘ಉತ್ಕಲ್ ವಿಶ್ವ ವಿದ್ಯಾಲಯ’ದಿಂದ, ಜೊತೆಗೆ ಎಂ.ಬಿ.ಎ. ಮಾಸ್ಟರ್ ಡಿಗ್ರಿಯನ್ನೂ ಪಡೆದುಕೊಂಡರು. ಇಷ್ಟಾದರೂ ಒಡಿಸ್ಸಿ ಅವರ ಅದಮ್ಯ ಬಯಕೆ. ಒಡಿಸ್ಸಿ ನೃತ್ಯ ಅಕಾಡೆಮಿಗೆ ಸೇರಿ, ನೃತ್ಯಗುರು ಗಂಗಾಧರ್ ಪ್ರಧಾನ್, ಅರುಣಾ ಮೊಹಂತಿ ಮತ್ತು ಪವಿತ್ರಕುಮಾರ್ ಪ್ರಧಾನ್ ಮುಂತಾದವರ ಗರಡಿಯಲ್ಲಿ ತರಬೇತಿ ಪಡೆದರು. ಅವರಲ್ಲಿ ಸುಮಾರು ಹತ್ತುವರ್ಷಗಳ ಕಾಲ ಅನನ್ಯ ಆಸಕ್ತಿಯಿಂದ ಒಡಿಸ್ಸಿ ನೃತ್ಯಾಭ್ಯಾಸ ಮಾಡಿ, `ನೃತ್ಯ ಆಚಾರ್ಯ’ ಪದವಿ, ಜೊತೆಯಲ್ಲಿಯೇ ಸಂಗೀತ ನಾಟಕ ಅಕಾಡೆಮಿಯಿಂದ `ನೃತ್ಯ ಶಾಸ್ತ್ರಿ’ ಪದವಿಯನ್ನೂ ಗಳಿಸಿದರು.
ಆನಂತರ, ಅಭಿಜಾತ ಕಲಾವಿದೆ ಮಧುಲಿತಾ ಅವರ ಪ್ರತಿಭಾವಿಕಾಸ ಮೇಲ್ಮುಖವಾಗಿ ಉನ್ನತಿ ಪಡೆಯುತ್ತಾ ಹೋಯಿತು. ದೇಶಾದ್ಯಂತವಲ್ಲದೆ, ವಿದೇಶಗಳಲ್ಲೂ ಅವರ ಕಲಾತ್ಮಕ ಏಕವ್ಯಕ್ತಿ ಪ್ರದರ್ಶನಗಳ ಖ್ಯಾತಿ ಬೆಳೆಯಿತು. ದೂರದರ್ಶನಲ್ಲಿ ಹಾಗೂ ಐ.ಸಿ.ಸಿ.ಆರ್. ನಲ್ಲೂ ಮಾನ್ಯತೆ ಪಡೆದ ಕಲಾವಿದೆಯಾಗಿರುವ ಇವರು, ನೀಡಿದ ಪ್ರತಿಷ್ಠಿತ ಕಾರ್ಯಕ್ರಮಗಳು ಅಸಂಖ್ಯಾತ. ಇಂಟರ್ ನ್ಯಾಷನಲ್ ಒಡಿಸ್ಸೀ ಡ್ಯಾನ್ಸ್ ಫೆಸ್ಟಿವಲ್, ಕೋನಾರ್ಕ್ ಸಂಗೀತ-ನೃತ್ಯೋತ್ಸವ, ಮುಕ್ತೇಶ್ವರ ನೃತ್ಯೋತ್ಸವ, ಒಡಿಸ್ಸೀ ಇಂಟರ್ ನ್ಯಾಷನಲ್, ರಂಗ ತರಂಗ್ ನ್ಯಾಷನಲ್ ಜಾಗ್ರಫಿ ಫೆಸ್ಟಿವಲ್, ಬೆಂಗಳೂರು ಇಂಟರ್ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್, ಮೈಸೂರು ದಸರಾಮಹೋತ್ಸವ, ಕಲಾನಾದಂ, ನಾದ ನೀರಾಜನಂ, ಕಿಂಕಿಣಿ ನೃತ್ಯೋತ್ಸವ, ಅಮೇರಿಕಾದ ಗೀವಾ ಹೆರಿಟೇಜ್ ಫೆಸ್ಟಿವಲ್ , ಲಂಡನ್ನಿನ ಸಮಾಗಮ್ ಉತ್ಸವ, ಮಲೇಶಿಯ ಮುಂತಾದ ಸ್ಥಳಗಳಲ್ಲಿ, ಅನೇಕ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹೆಸರು ಗಳಿಸಿದ್ದಾರೆ. ಜೊತೆಗೆ ಒರಿಸ್ಸಾದ ಸಂಭಾಲ್ಪುರಿ ಜಾನಪದ ನೃತ್ಯ ಪ್ರವೀಣೆ, ಅಭಿನಯ ಚತುರೆ ಕೂಡ.
ನೃತ್ಯವೇ ತಮ್ಮ ಬದುಕು ಎಂದು ನಿರ್ಧರಿಸಿದ ಮಧುಲಿತಾ ವಿದ್ಯಾಭ್ಯಾಸದ ನಂತರ ಮಾಡುತ್ತಿದ್ದ ಎನ್.ಜಿ.ಓ. ಉದ್ಯೋಗವನ್ನು ತ್ಯಜಿಸಿ, 2009 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ಬಹುಬೇಗ ಜನಪ್ರಿಯತೆ ಪಡೆದ ಇವರ ನೃತ್ಯಶಾಲೆ ಇಂದು ನಾಲ್ಕುಶಾಖೆಗಳಾಗಿ ನೂರಾರು ಮಕ್ಕಳಿಗೆ ಒಡಿಸ್ಸಿ ನೃತ್ಯ ತರಬೇತಿ ನೀಡುತ್ತಿವೆ. ಇದರೊಡನೆ ಕೆಲ ಸರಕಾರೀ ಶಾಲೆಗಳಲ್ಲೂ ಉಚಿತವಾಗಿ ನೃತ್ಯ ಕಲಿಸುವ ಇವರಿಗೆ ಸದಾ ನೃತ್ಯಸಾಧನೆಯೇ ಗುರಿ. ಪ್ರತಿ ವರ್ಷ `ನೃತ್ಯ ನಮನ’ ಎಂಬ ವಿಶಿಷ್ಟ ನೃತ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ದೇಶದ ನಾನಾ ಭಾಗಗಳಿಂದ ನೃತ್ಯ ವಿದ್ವಾಂಸರನ್ನು ಕರೆಸಿ ಅವರಿಂದ ವಿಶೇಷ ಉಪನ್ಯಾಸ, ವಿಚಾರಸಂಕಿರಣ ಮತ್ತು ಪ್ರಸಿದ್ಧ ನೃತ್ಯಪಟುಗಳಿಂದ ನೃತ್ಯಪ್ರದರ್ಶನ ಏರ್ಪಡಿಸುತ್ತ ಸಮರ್ಥ ಸಂಘಟಕಿಯೂ ಆಗಿದ್ದಾರೆ. ಇವರೆಲ್ಲ ನೃತ್ಯ ಚಟುವಟಿಕೆಗಳಿಗೆ ಆಸರೆಯಾಗಿರುವವರು ಇವರ ಎಂಜಿನಿಯರ್ ಪತಿ ಇಮ್ರಾನ್ .