ರಂಗಮಂಚದ ಮೇಲೆ ಮಿಂಚಿನಬಳ್ಳಿಯೊಂದು ನರ್ತಿಸಿದಂತೆ ಲೀಲಾಜಾಲವಾಗಿ ಅಷ್ಟೇ ಮೋಹಕ ನರ್ತನ, ಪರಿಣತ ಅಭಿನಯದಿಂದ ಮನಸೆಳೆವ ಕಲಾವಿದೆ ರಾಜಶ್ರೀ ಹೊಳ್ಳ. ನೃತ್ಯಕ್ಕೆ ಹೇಳಿಮಾಡಿಸಿದ ಮೈಮಾಟ, ಸಮರ್ಥ ಭಾವಾಭಿವ್ಯಕ್ತಿಯ ಮುಖ. ಕೂಚಿಪುಡಿ ನೃತ್ಯಕ್ಷೇತ್ರದಲ್ಲಿ ಮೂರುದಶಕಗಳಿಗೂ ಮಿಕ್ಕಿದ ಅನುಭವ. ಕರ್ನಾಟಕ ಸರ್ಕಾರ ನಡೆಸುವ ಕೂಚಿಪುಡಿ ‘ವಿದ್ವತ್‘ ನೃತ್ಯಪರೀಕ್ಷೆಯಲ್ಲಿ ಯಶಸ್ವಿಯಾದ ಇಬ್ಬರಲ್ಲಿ ಇವರು ಒಬ್ಬರು ಎಂಬ ಅಗ್ಗಳಿಕೆ. ಪ್ರಸ್ತುತ ಕೂಚಿಪುಡಿ ವಿಲೇಜ್ ನ ಸಿದ್ಧೇಂದ್ರ ಕಲಾಪೀಠದಲ್ಲಿ ಎಂ.ಪಿ.ಎ. ಸ್ನಾತಕೋತ್ತರ ಪದವಿಯ ಅಭ್ಯಾಸದಲ್ಲಿ ತೊಡಗಿದ್ದಾರೆ.
ರಾಜಶ್ರೀಯ ತಂದೆ ಚಂದ್ರಶೇಖರ್ ರಾವ್ ನಾಟಕ ಮತ್ತು ಯಕ್ಷಗಾನ ಕಲಾವಿದರು. ತಾಯಿ ತುಳಸಿ ಕಲಾಭಿರುಚಿಯುಳ್ಳವರು. ತಂದೆ ಬ್ಯಾಂಕ್ ಉದ್ಯೋಗದ ನಿಮಿತ್ತ ಆಂಧ್ರಪ್ರದೇಶದಲ್ಲಿದ್ದಾಗ ರಾಜಶ್ರಿ ಸುಮಾರು ಐದುವರ್ಷದ ಬಾಲೆ, ನಾಟ್ಯಗುರು ವೇದಾಂತಂ ರಾಮಲಿಂಗಾಶಾಸ್ತ್ರಿಯವರಲ್ಲಿ ಶುದ್ಧ ಕೂಚಿಪುಡಿ ಶೈಲಿಯ ನೃತ್ಯ ಕಲಿಯಲಾರಂಭಿಸಿದಳು. ಅನಂತರ ವೇದಾಂತಂ ಪಾರ್ಥಸಾರಥಿ, ಪಶುಪರ್ತಿ ವೆಂಕಟೇಶ್ವರ ಶರ್ಮ, ಬೆಂಗಳೂರಿನ ರಾಜೇಶ್ವರಿಯವರಲ್ಲಿ ನೃತ್ಯ ಕಲಿತರು. ಇಂದಿಗೂ ನೃತ್ಯಕಲಿಕೆ ಮುಂದುವರಿದೇ ಇದೆ. ಪ್ರಸ್ತುತ, ನಾಟ್ಯಗುರುಗಳಾದ ಧರಣಿ ಕಶ್ಯಪ್ ಮತ್ತು ವೀಣಾಮೂರ್ತಿ ವಿಜಯ್ ಅವರಲ್ಲಿ ಕಲಿಯುತ್ತಿರುವರು.
ತಮ್ಮ ಹನ್ನೆರಡನೆಯ ವಯಸ್ಸಿಗೆ ವಿಜಯವಾಡದಲ್ಲಿ ‘ರಂಗಪ್ರವೇಶ’ ಮಾಡಿದ ರಾಜಶ್ರೀ ಅಂದಿನಿಂದ ಇಂದಿನವರೆಗೂ ಅಸಂಖ್ಯಾತ ನೃತ್ಯಪ್ರದರ್ಶನಗಳನ್ನು ದೇಶ-ವಿದೇಶಗಳಲ್ಲಿ ನೀಡುತ್ತಲೇ ಬಂದಿರುವುದು ಅವರ ಅಗ್ಗಳಿಕೆ. ತನ್ನ ಹನ್ನೊಂದನೆಯ ವಯಸ್ಸಿಗೇ ಕೂಚಿಪುಡಿ ವಿಲೇಜ್ ನ ಉತ್ಸವದಲ್ಲಿ ನರ್ತಿಸಿದ್ದು ಅವಳ ಹೆಮ್ಮೆ. ಜೊತೆಗೆ ನಾಡಿನ ಪ್ರತಿಷ್ಟಿತ ನೃತ್ಯೋತ್ಸವಗಳಾದ ಬೇಲೂರು, ಪಟ್ಟದಕಲ್ಲು, ಬಾದಾಮಿ, ಹಂಪಿ, ಮೈಸೂರು ದಸರಾ, ಕದಂಬ, ಕಿಂಕಿಣಿ, ಟಿಟಿಡಿ ಕಲಾರ್ಣವ ಮತ್ತು ಅಂಕುರ ಉತ್ಸವಗಳಲ್ಲದೆ ರಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿದ್ದು ಈಕೆಯ ವಿಶೇಷ.
ಶಾಲಾ-ಕಾಲೇಜು ದಿನಗಳಿಂದಲೇ ಎಲ್ಲ ಪ್ರಮುಖ ನೃತ್ಯಸ್ಪರ್ಧೆಗಳಲ್ಲಿ ರಾಜಶ್ರೀಗೆ ಬಹುಮಾನ ಖಚಿತವಾಗಿತ್ತು. ಯುವಜನ ಸೇವಾ ಇಲಾಖೆಯ ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಯುವಜನೋತ್ಸವ ನೃತ್ಯಸ್ಪರ್ಧೆಯಲ್ಲಿ ಪ್ರಥಮಸ್ಥಾನ ಇವರಿಗೇ ದೊರಕಿತ್ತು. ವಿಶಾಖಪಟ್ಟಣದ ಜಯಂತಿ ನೃತ್ಯೋತ್ಸವಂ ನ ‘ನಾಟ್ಯಭಾರತಿ’ ಮತ್ತು ಸಂದೇಶ ಸಂಸ್ಥೆಯ ‘ದಸರಾ’ ಪ್ರಶಸ್ತಿಗಳನ್ನು ಗಳಿಸಿರುವ ರಾಜಶ್ರೀ ದೂರದರ್ಶನದ ‘ಬಿ’ ಗ್ರೇಡ್ ನೃತ್ಯಕಲಾವಿದೆಯಾಗಿ, ಚಂದನ ವಾಹಿನಿಯಲ್ಲಿ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿ ವೀಕ್ಷಕರ ಹಾಗೂ ವಿಮರ್ಶಕರ ಪ್ರಶಂಸೆ ಗಳಿಸಿದ್ದಾರೆ. ಆರ್ಟ್ ಆಫ್ ಲಿವಿಂಗ್ ಮತ್ತು ಶಂಕರ ಫೌಂಡೆಷನ್ ರಶ್ಮಿ ಹೆಗ್ಡೆ ಗೋಪಿ ಅವರ ನೃತ್ಯಸಂಯೋಜನೆಯ ಅನೇಕ ನೃತ್ಯರೂಪಕಗಳಲ್ಲಿ, ಭಾರತಾದ್ಯಂತವಲ್ಲದೆ, ಬಾಸ್ಟನ್, ನ್ಯೂಜರ್ಸಿ, ವಾಷಿಂಗ್ಟನ್, ಶಿಕಾಗೋ, ಹ್ಯೂಸ್ಟನ್, ಅಟ್ಲಾಂಟ ಮುಂತಾದ ಅಮೇರಿಕಾದ ಹತ್ತು ಮುಖ್ಯನಗರಗಳಲ್ಲಿ ಹಾಗೂ ಯೂರೋಪಿನ ಅನೇಕ ದೇಶಗಳಲ್ಲಿ ನೃತ್ಯಪ್ರದರ್ಶನ ನೀಡಿದ ಹಿರಿಮೆ ಇವರದು.
‘ಲಾಸ್ಯ ಲಹರಿ’ – ನೃತ್ಯಶಾಲೆಯ ನಿರ್ದೇಶಕಿಯಾಗಿ ಅನೇಕ ಮಕ್ಕಳಿಗೆ ನಾಟ್ಯಶಿಕ್ಷಣ ನೀಡುತ್ತ, ಭಾರತೀಯ ಸನಾತನ ಪರಂಪರೆಯ ದ್ಯೋತಕವಾದ ಕೂಚಿಪುಡಿ ನೃತ್ಯಶೈಲಿಯನ್ನು ಮುಂದಿನ ಜನಾಂಗಕ್ಕೆ ಮೂಲದ ಶುದ್ಧರೂಪದಲ್ಲಿ ಮುಂದುವರಿಸುವುದು ತಮ್ಮ ಜವಾಬ್ದಾರಿಯೆಂದು ಭಾವಿಸಿದ್ದಾರೆ. ಮಕ್ಕಳಿಗೆ ಅತ್ಯಂತ ಆಸಕ್ತಿಯಿಂದ ಕಟ್ಟುನಿಟ್ಟಾಗಿ ಪಾಠ ಮಾಡುತ್ತ ಉತ್ತಮ ನೃತ್ಯಪಟುಗಳನ್ನು ತಯಾರು ಮಾಡುವತ್ತ ಗಮನವನ್ನು ಕೇಂದ್ರೀಕರಿಸಿರುವ ರಾಜಶ್ರೀ ತಮ್ಮ ಶಿಷ್ಯರ ತಂಡದ ಅನೇಕ ನೃತ್ಯ ಪ್ರದರ್ಶನಗಳನ್ನು ಆಯೋಜಿಸಿ, ಗುಣಮಟ್ಟದ ಕೆಲವು ನೃತ್ಯರೂಪಕಗಳನ್ನು ಸಾದರಪಡಿಸಿದ್ದಾರೆ. ಹಾಗೆಯೇ ‘ಕರ್ಣ’ ನೃತ್ಯರೂಪಕದಲ್ಲಿ ಇವರು ನಿರ್ವಹಿಸಿದ ‘ಕುಂತಿ’ ಪಾತ್ರದ ಅಭಿನಯ ಗಮನಾರ್ಹವಾಗಿದ್ದು ತಾವೊಬ್ಬ ಪರಿಣತ ಅಭಿನಯದ ಪ್ರಬುದ್ಧ ಕಲಾವಿದೆ ಎಂದು ಸಾಬೀತುಗೊಳಿಸಿದ್ದಾರೆ. ಬಿಕೆಸಿಎ ನಿರ್ಮಾಣದ ‘ಝೂಮಾತಾ ಭಾರತ್ ವೀಡಿಯೋ ಪ್ರೋಮೋ’ ನಲ್ಲಿ ಕರ್ನಾಟಕದ ‘ಅತ್ಯುತ್ತಮ ಕಲಾವಿದೆ’ಯಾಗಿ ಆಯ್ಕೆಗೊಂಡದ್ದು ಇವರ ವೈಶಿಷ್ಟ್ಯ.
ರಾಜಶ್ರೀ ಅವರ ನೃತ್ಯ ಚಟುವಟಿಕೆಗಳಿಗೆ ಅವರ ಮಾವ ಶಿಕ್ಷಣತಜ್ಞ ಪ್ರೊ.ಎಂ.ಆರ್ ಹೊಳ್ಳ ಮತ್ತು ಸಾಫ್ಟ್ ಎಂಜಿನಿಯರ್ ಆಗಿರುವ ಪತಿ ನಾಗರಾಜ ಹೊಳ್ಳ ಅವರ ಸಂಪೂರ್ಣ ಸಹಕಾರವಿದೆ. ಹೆಣ್ಣುಮಕ್ಕಳು ಲಾಸ್ಯ ಮತ್ತು ಶ್ರಾವ್ಯ ಇವರ ಬಳಿಯೇ ನೃತ್ಯಾಭ್ಯಾಸ ಮಾಡುತ್ತಾ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾರೆ.