ಖ್ಯಾತ ‘ನಾಟ್ಯಸಂಕುಲ ಸ್ಕೂಲ್ ಆಫ್ ಭರತನಾಟ್ಯಂ’- ಸಂಸ್ಥೆಯ ನೃತ್ಯಗುರು ಮತ್ತು ಅಭಿನಯ ಚತುರೆ ವಿದುಷಿ ಕೆ.ಆರ್.ನಾಗಶ್ರೀ ಅವರ ಶಿಷ್ಯೆ ಲೋಹಿತಾ ತಿರುಮಲಯ್ಯ ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ಸುಮನೋಹರವಾಗಿ ನರ್ತಿಸಿ ವಿದ್ಯುಕ್ತವಾಗಿ ರಂಗಪ್ರವೇಶ ನೆರವೇರಿಸಿಕೊಂಡಳು. ‘ಕಲಾಕ್ಷೇತ್ರ’ ಬಾನಿಯ ಶಾಸ್ತ್ರೀಯ ಚೌಕಟ್ಟಿನೊಳಗೆ ಲೋಹಿತಾ, ಗುರುಗಳನ್ನು ಹೇಳಿಕೊಟ್ಟಿದ್ದನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಸಮರ್ಪಿಸಿದಳು. ಮೊದಲಿನಿಂದ ಕಡೆಯವರೆಗೂ ಯಾವುದೇ ಗೊಂದಲವಿಲ್ಲದೆ ಅಂಗಶುದ್ಧಿಯ, ಸುಂದರಾಭಿನಯದ ಪ್ರಸ್ತುತಿಯಲ್ಲಿ ಪ್ರೇಕ್ಷಕರನ್ನು ಸೆರೆಹಿಡಿದಳು. ಆಡಂಬರವಿಲ್ಲದ ಆಹಾರ್ಯವೂ ವಿಶೇಷವಾಗಿದ್ದು, ಅಪರೂಪವಾಗುತ್ತಿರುವ ಮೊಗ್ಗಿನಜಡೆ ಮತ್ತು ಸೂರ್ಯ-ಚಂದ್ರರ ಬಿಲ್ಲೆಗಳ ಭೂಷಣಗಳು ಆಪ್ಯಾಯಮಾನವಾಗಿದ್ದವು.
ಸಾಂಪ್ರದಾಯಕ ಖಂಡಜಾತಿಯ ‘ಅಲ್ಲರಿಪು’ ವಿನಿಂದ ಶುಭಾರಂಭವಾಯಿತು ಪ್ರಸ್ತುತಿ. ದೃಷ್ಟಿ-ಗ್ರೀವಭೇದಗಳ ಸೊಗಸು, ಸರಳ ನೃತ್ತಗಳ ಖಾಚಿತ್ಯ ಆಕರ್ಷಿಸಿತು. ‘ಕಮಲಾ ಕುಚಚು ಚುಕ ಕುಂಕುಮ ..’-ಸುಪ್ರಭಾತ ಸ್ತುತಿಯಲ್ಲಿ ನಟರಾಜನನ್ನು ಆರಾಧಿಸಿದಳು. ರಾಗಮಾಲಿಕೆಯ ಶುದ್ಧ ನೃತ್ತಬಂಧವಾದ ‘ಜತಿಸ್ವರ’ವನ್ನು ಸುಂದರವಾಗಿ ನಿರೂಪಿಸಿದಳು.
‘ಸರಸಿಜಾಕ್ಷುಲು ಜಳಕ ಮಾಡೆ’-ಎನ್ನುವ ಸ್ವಾತಿ ತಿರುನಾಳ್ ರಚನೆಯ ‘ಶಬ್ದಂ’-ಕೃಷ್ಣನ ತುಂಟಾಟಗಳ ರಮ್ಯಚಿತ್ರಣವನ್ನು ಕಲಾವಿದೆ ತನ್ನ ದೃಶ್ಯಾತ್ಮಕ ಅಭಿನಯದಲ್ಲಿ ಕಟ್ಟಿಕೊಟ್ಟಳು. ಹೆಂಗೆಳೆಯರು ನೀರಿಗಿಳಿದು ಸ್ನಾನ ಮಾಡುವಾಗ ಅವರ ವಸ್ತ್ರಗಳನ್ನು ಕದ್ದೊಯ್ದು, ಮರದ ಮೇಲೆ ಕುಳಿತು ನೋಡುವ ನಿನ್ನ ಪರಿ ಸರಿಯೇನು ಎಂದು ನಾಯಿಕಾ ಕೃಷ್ಣನ ನಡವಳಿಕೆಯನ್ನು ಆಕ್ಷೇಪಿಸುತ್ತಿದ್ದಾಳೆ. ಗೋಪಿಕೆಯರ ಮಡಕೆಗಳಿಗೆ ಕಲ್ಲು ಹೊಡೆದು ಬೆಣ್ಣೆಯನ್ನು ಕದಿಯುವುದು, ಅಡ್ಡಗಟ್ಟಿ ಅವರನ್ನು ಕಾಡುವುದು ತರವೇ ಎಂದು ಅಣಕವಾಡುವ ಈ ‘ಶಬ್ದಂ’ ಮನೋಹರವಾಗಿ ಮೂಡಿಬಂತು.
ಮೈಸೂರು ಸದಾಶಿವರಾಯರು ರಚಿಸಿದ ಧನ್ಯಾಸಿ ರಾಗದ ‘ವರ್ಣಂ’-ನಾಯಿಕೆಯ ವಿರಹವೇದನೆಯನ್ನು ತೀವ್ರವಾಗಿ ಮುಟ್ಟಿಸುವ ಅರ್ಥಪೂರ್ಣ ಸಾಲುಗಳನ್ನು ಲೋಹಿತಾ ಹದವಾಗಿ ಅಭಿನಯಿಸಿದಳು. ಯಾವ ಹೆಂಗಸು ನಿನ್ನ ಮರುಳು ಮಾಡಿ ನನ್ನಿಂದ ನಿನ್ನನ್ನು ದೂರಮಾಡಿದ್ದಾಳೆ ಎಂದು ಶೋಕಿಸುವ ಅವಳ ವಿರಹದ ಬೇಗುದಿ ಮನನೀಯವಾಗಿತ್ತು. ವಿಷದ ಗಾಳಿ ಊದಿ ನಿನಗೆ ಮೋಡಿ ಮಾಡಿದ್ದಾಳೆ, ಮಾಟ-ಮಂತ್ರದ ಯಂತ್ರ ಕಟ್ಟಿ ನಿನ್ನನ್ನು ವಶೀಕರಿಸಿಕೊಂಡಿದ್ದಾಳೆ ಎಂದು ವ್ಯಾಕುಲತೆ ವ್ಯಕ್ತಪಡಿಸುತ್ತಾಳೆ. ನಾನು ಅಷ್ಟು ಆಸ್ಥೆಯಿಂದ ಕಟ್ಟಿದ ಹಾರವನ್ನೇಕೆ ಬಿಸುಟೆ, ನಾನು ಪೂಸಿದ ಸುಗಂಧವನ್ನೇಕೆ ನಿರಾಕರಿಸಿ ನನ್ನನ್ನು ನೋಯಿಸುತ್ತಿರುವೆ, ನಾನು ನಿನಗೆ ಬೇಡವಾದೆನೇ ಎಂದು ದುಃಖಿಸುತ್ತ, ನನ್ನ ಮೇಲೆ ಕನಿಕರಿಸಿ ಸ್ವೀಕರಿಸೆಂದು ಬೇಡುವ ನಾಯಿಕೆಯ ಹತಾಶೆಯ ಆರ್ದ್ರ ಭಾವನೆಗಳನ್ನು ಕಲಾವಿದೆ ಸಮರ್ಪಕವಾಗಿ ಅಭಿನಯಿಸಿದಳು. ನಡುನಡುವೆ ವಿಜ್ರುಂಭಿಸಿದ ನೃತ್ತವಿನ್ಯಾಸಗಳಲ್ಲಿ ಹೊಸತನದ ಬೆಡಗು ತುಂಬಿತ್ತು. ಗುರು ನಾಗಶ್ರೀ ಅವರ ಖಚಿತಸ್ವರದ ನಟುವಾಂಗದ ತಾಳಕ್ಕನ್ವಯ ಶಿಷ್ಯೆ ಸಮರ್ಥವಾಗಿ ಲಯವಿನ್ಯಾಸವನ್ನು ಪ್ರಕಟಪಡಿಸಿದ್ದು ಶ್ಲಾಘನೀಯ.
ರೇವತಿರಾಗದ ಶಿವಸ್ತುತಿ ‘ ಭೋ ಶಂಭೋ ಶಿವಶಂಭೋ ಸ್ವಯಂಭೋ’-ಢಮರುಗ ಹಿಡಿದು ರಂಗದ ತುಂಬಾ ಆವೇಶಿತನಾಗಿ ಕುಣಿದ ಶಿವನ ರೌದ್ರಾವೇಶವನ್ನು ಲೋಹಿತಾ ಚೈತನ್ಯಪೂರ್ಣ ನೃತ್ಯದಿಂದ ಸಾಕ್ಷಾತ್ಕರಿಸಿದಳು. ಶಿವನ ಅನೇಕ ಭಂಗಿಗಳು ಆಕರ್ಷಕವಾಗಿ ಪ್ರದರ್ಶಿವಾದವು. ಖಂಡಿತನಾಯಕಿಯ ಸಿಟ್ಟು-ಸೆಡವುಗಳನ್ನು ಪ್ರತಿಬಿಂಬಿಸಿದ ‘ಜಾವಳಿ’- ಪರಸ್ತ್ರೀಯರ ಸಹವಾಸದಲ್ಲಿ ಸುಖಕಾಣುವ ಕೃಷ್ಣ ಮತ್ತೆ ತನ್ನಲ್ಲಿ ಬರುವುದೇ ಬೇಡವೆಂದು ಕೋಪಿಸಿಕೊಳ್ಳುವ, ವಿರಹತಾಪದಿಂದ ನೋಯುವ ಆಕೆಯ ಸಮ್ಮಿಶ್ರಭಾವನೆಗಳಿಗೆ ಕನ್ನಡಿ ಹಿಡಿದಳು ಕಲಾವಿದೆ.
ಹಿರಿಕವಿ ಪುತಿನ ಅವರ ರಚನೆ-‘ ತೂಗಿರೇ ರಘುರಾಮನ’-ಭಕ್ತಿತಾದಾತ್ಮ್ಯದ ಅಭಿನಯದಲ್ಲಿ ಮನಮುಟ್ಟಿತು. ಚೇತೋಹಾರಿಯಾದ ಲೋಹಿತಳ ತನ್ಮಯತೆ ಮೆಚ್ಚಾಯಿತು. ಎತ್ತರದ ನಿಲುವಿನ, ಸಪೂರ ಶರೀರದ ಲೋಹಿತಾ ಪ್ರಸ್ತುತಪಡಿಸಿದ ‘’ತಿಲ್ಲಾನ’-ಚುರುಕುಗತಿಯ ನೃತ್ತ ಕಾರಂಜಿಯಲ್ಲಿ, ರಂಗಾಕ್ರಮಣದಲ್ಲಿ ಆಹ್ಲಾದಕಾರಿಯಾಗಿತ್ತು.