Image default
Dance Reviews

ಆಹ್ಲಾದದ ಭಾವದುಂಬಿದ ಭರತನಾಟ್ಯದ ಮೆರುಗು

ನವರಸಗಳು ಮೇಳೈವಿಸಿದ ಒಂದು ಸುಂದರ ಅನುಭೂತಿಯ ನಾಟ್ಯ ಪ್ರದರ್ಶನ ನೀಡಿದವರು ಭರತನಾಟ್ಯ ಕಲಾವಿದೆ ಕಾವ್ಯ ದಿಲೀಪ್. ಇತ್ತೀಚಿಗೆ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನೃತ್ಯಗುರು ಅರ್ಚನಾ ಪುಣ್ಯೇಶ್ ಅವರ ಗರಡಿಯಲ್ಲಿ ತಯಾರಾದ ಈ ಉತ್ತಮ ಕಲಾವಿದೆಯ `ರಂಗಪ್ರವೇಶ’ ಕಾರ್ಯಕ್ರಮವು ಕಲಾಸಕ್ತರನ್ನು ತಣಿಸಿತು.

        ಅತೀವ ಕಾಳಜಿ, ಪರಿಶ್ರಮ,ಬದ್ಧತೆಗಳು ಆಕೆ ಪ್ರಸ್ತುತಪಡಿಸಿದ ಎಲ್ಲ ಕೃತಿಗಳಲ್ಲೂ ಎದ್ದುಕಾಣುತ್ತಿದ್ದವು. ಪ್ರಸ್ತುತಿಗೆ ಆರಿಸಿಕೊಂಡ ಕೃತಿಗಳೂ  ರಸಾನುಭವ ಸ್ಫುರಿಸಲು ಅಷ್ಟೇ ಸಮಂಜಸವಾಗಿದ್ದವು. ವಿದ್ವಾನ್ ಕಾರ್ತಿಕ್ ಹೆಬ್ಬಾರರ ಸುಶ್ರಾವ್ಯ ಕಂಠ ನರ್ತನಕ್ಕೆ ಜೀವದುಂಬಿತ್ತು.

        ನಾದಸ್ವರದಲ್ಲಿ ನುಡಿಸಿ ಅರ್ಚಿಸುವ ವಿಶಿಷ್ಟ ನೃತ್ಯ `ಮಲ್ಲಾರಿ’ ಗಂಭೀರ ನಾಟರಾಗದಲ್ಲಿ ಸುಂದರವಾಗಿ ಪ್ರಸ್ತುತಗೊಂಡಿತು. ಅನಂತರ  ಗಣೇಶಸ್ತುತಿಯನ್ನು ಕಾವ್ಯ, ಭಕ್ತಿರಸವನ್ನು ಹೊರಹೊಮ್ಮಿಸುತ್ತ , ತನ್ಮಯತೆಯಿಂದ ನರ್ತಿಸಿ ನಾಟ್ಯ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದಳು.

        ಅನಂತರ ಆಕರ್ಷಕ ಜತಿಗಳಿಂದ ಮೂಡಿಬಂದದ್ದು (ಗೌಳ ರಾಗ- ಆದಿತಾಳ) `ಮಯೂರ ಕೌತ್ವಮ್’. ವೇಲಾಯುಧನಾದ ಸುಬ್ರಹ್ಮಣ್ಯನನ್ನು ` ನೀಲಕಂಠ  ವಾಹನಂ’ ಮುಂತಾಗಿ ಅವನ ಅಂದ-ಅಲಂಕಾರಗಳನ್ನು ಬಗೆಬಗೆಯಾಗಿ ವರ್ಣಿಸುವ ಮೂಲಕ ನೃತ್ಯಗಾರ್ತಿ ಆಕರ್ಷಕ ಭಾವ ಭಂಗಿಗಳಲ್ಲಿ ಮನಸೂರೆಗೊಂಡಳು. ನವಿಲಿನಂತೆ ಕೊರಳನ್ನು ಬೆಡಗಿನಿಂದ ಕೊಂಕಿಸುತ್ತ, ರಂಗದ ತುಂಬ ಪಾದರಸದ ಹೆಜ್ಜೆಗಳಲ್ಲಿ ನರ್ತಿಸುತ್ತಾ ಮುದನೀಡಿದಳು.ಶುದ್ಧ ನೃತ್ಯದ ಸೊಬಗು ಕಂಗೊಳಿಸಿತು.

        ಕಲ್ಯಾಣಿ ರಾಗ-ಆದಿತಾಳದಲ್ಲಿ ದಂಡಾಯುಧಪಾಣಿ ಪಿಳ್ಳೈ ರಚಿಸಿದ `ಜತಿಸ್ವರ’ ವನ್ನು ಕಾವ್ಯ,  ಕೌಶಲ್ಯಪೂರ್ಣ ಜತಿಗಳಿಂದ ಕೂಡಿದ  ಸುಂದರ ನೃತ್ಯಬಂಧದಲ್ಲಿ ಪ್ರದರ್ಶಿಸಿದಳು. ಸಾಹಿತ್ಯದ ಪೋಷಣೆಯಿಲ್ಲದಿದ್ದರೂ, ನವರಸಗಳ ಅಭಿವ್ಯಕ್ತಿಯಿಲ್ಲದೆಯೂ, ಶುದ್ಧ ನೃತ್ತದ ಕಲಾ ಪ್ರತಿಭೆ ಆಸ್ವಾದನೆಗೆ ಅನುವಾಗುತ್ತದೆ ಎಂಬುದು ಸುವ್ಯಕ್ತವಾಯಿತು.

        ಯಾವುದೇ ಭರತನಾಟ್ಯ ಕಾರ್ಯಕ್ರಮದ  ಹೃದಯಭಾಗ `ವರ್ಣಂ’. ಅದು  ಸಂಕೀರ್ಣ, ಜೊತೆಗೆ ಅಷ್ಟೇ ಆಕರ್ಷಕ ಭಾಗ ಕೂಡ.  `ವರ್ಣಂ’. ಸಾಮಾನ್ಯವಾಗಿ ನೃತ್ಯ ಕಲಾವಿದೆಯರ ಸ್ಮರಣಶಕ್ತಿಗೆ ಸವಾಲೆಸೆವ , ನೃತ್ತ ಮತ್ತು ಅಭಿನಯಗಳೆರಡರಲ್ಲೂ ಪರಿಣತಿ ಬೇಡುವ ಕ್ಲಿಷ್ಟ ನೃತ್ಯಬಂಧ.  ವಿದ್ವಾನ್ ಗುರುಮೂರ್ತಿ ಅವರ ಸುಂದರ ರಚನೆಯಲ್ಲಿ ಆದಿಶಕ್ತಿಯಾದ ದೇವಿಯನ್ನು  ಸುದೀರ್ಘವಾಗಿ ವರ್ಣಿಸುವ ಸಶಕ್ತ ಕೃತಿ. `ದೇವಿ ಸಪ್ತಮಾತೃಕ ರೂಪಿಣಿ , ಪಾಹಿ ನವರಸ ರಂಜಿನಿ’ (ರಾಗಮಾಲಿಕೆ) ಎಂದು ಸಪ್ತಮಾತೆಯರಾದ ಬ್ರಾಹ್ಮೀ, ವೈಷ್ಣವಿ, ಮಾಹೇಶ್ವರಿ, ಕಾಮಾರಿ, ವಾರಾಹಿ, ನಾರಸಿಂಹೀ, ಮತ್ತು ಚಾಮುಂಡಿಯರ ವೈಭವೋಪೇತ ವರ್ಣನೆಗಳನ್ನು ಅದ್ಭುತವಾಗಿ ತನ್ನ ಪರಿಣಾಮಕಾರೀ ಅಭಿನಯದಲ್ಲಿ ಸಾಕಾರಗೊಳಿಸಿದಳು ನೃತ್ಯ ಕಲಾವಿದೆ. ಸಂಚಾರಿ ಭಾಗದಲ್ಲಿ ಸುಂದರೇಶ್ವರ ಮತ್ತು ಮೀನಾಕ್ಷಿಯರ ವಿವಾಹದ ಸುಂದರ ಚಿತ್ರಣವನ್ನು ಕಾವ್ಯ, ಅನುಭವ ಜನ್ಯ ಅಭಿನಯಗಳಲ್ಲಿ ಕಟ್ಟಿಕೊಟ್ಟದ್ದು ವಿಶೇಷ. ಸಪ್ತ ಮಾತೃಕೆಯರ ಪ್ರಸನ್ನ, ಸೌಮ್ಯ, ಕರುಣ-ಕೋಮಲ ಭಾವಗಳನ್ನು ಕಲಾವಿದೆ,  ಎಷ್ಟು ಚೆನ್ನಾಗಿ ನಯವಾದ ಲಾಸ್ಯದ ಹೆಜ್ಜೆಗಳಲ್ಲಿ  ಹೊರಹೊಮ್ಮಿಸಿದಳೋ, ರೌದ್ರಭಾವವನ್ನು ಅಷ್ಟೇ ವ್ಯಗ್ರವಾಗಿ, ಭೀಷಣ-ರೋಷಭರಿತಳಾಗಿ ಮೈದುಂಬಿ ನರ್ತಿಸಿ ಮನಸೂರೆಗೊಂಡಳು. ಏಳು ವೈವಿಧ್ಯ ರೂಪಗಳನ್ನು ಭಿನ್ನವಾಗಿ ಅನಾವರಣಗೊಳಿಸಿ ಕಾವ್ಯ ನೆರೆದ ಕಲಾರಸಿಕರನ್ನು ರೋಮಾಂಚಗೊಳಿಸಿದಳು.

        ಮುಂದಿನ ಪ್ರಸ್ತುತಿಯಲ್ಲಿ `ಏನ ಬೇಡಲಿ ಹನುಮ, ಬಕುತಿಯೊಂದನು  ಹೊರತು’ –(ರಾಗ-ಆಂದೋಳಕ, ತಾಳ-ಖಂಡಚಾಪು) ಎಂಬ  ದೇವರನಾಮದ ಸಾಕಾರದಲ್ಲಿ ಕಲಾವಿದೆಯ  ಭಕ್ತಿ ತಾದಾತ್ಮ್ಯತೆ ಕೆನೆಗಟ್ಟಿತು.

        ಕವಿ ಚಂದ್ರಶೇಖರ ಕಂಬಾರರ `ಕಾಂತನಿಲ್ಲದ ಮೇಲೆ ಏಕಾಂತವೇತಕೆ ‘- ವಾಸಂತಿ ರಾಗದ ಜಾವಳಿ ವಿರಹೋತ್ಖಂಠಿತ ನಾಯಕಿಯ ವಿರಹದ ದುಃಖವನ್ನು ಕಲಾವಿದೆ ಸಮರ್ಥವಾಗಿ ನಿರೂ ಪಿಸಿದಳು.ಕಾರ್ಯಕ್ರಮದ ಪರಾಕಾಷ್ಠೆಯ ಭಾಗವೆಂದರೆ `ತಿಲ್ಲಾನ’. ಜೊತೆಗೆ ರೋಮಾಂಚನ  ಮೂಡಿಸಿದ ಪ್ರಸ್ತುತಿಯೂ ಕೂಡ. ಡಾ.ಬಾಲಮುರಳೀಕೃಷ್ಣ ವಿರಚಿತ ಬೃಂದಾವನೀ ರಾಗದ ತಿಲ್ಲಾನ ಆದಿತಾಳಕ್ಕೆ ಬದ್ಧವಾದ ಕೃತಿ. ಏಳು ಹಿತ್ತಾಳೆಯ ಮಡಕೆಗಳ ಮೇಲ್ಭಾಗವೇ  ರಂಗಸ್ಥಳವಾಗಿ  ನೃತ್ಯ ಕಲಾವಿದೆ ತಾಳಬದ್ಧ ನಾಜೂಕಿನ ಹೆಜ್ಜೆಗಳಲ್ಲಿ ಅದರ ಮೇಲೆ ಚೆಂದದಿಂದ ನರ್ತಿಸಿದಳು. ಕಡೆಯಲ್ಲಿ ಅಂದು ಸ್ವಾತಂತ್ರೋತ್ಸವ ಸಂದರ್ಭವಾದ ಕಾರಣ `ವಂದೇಮಾತರಂ’ ಎಂಬ ಭಾವೈಕ್ಯತಾ ಮಂತ್ರದ ದೇಶಭಕ್ತಿಯನ್ನು ನೃತ್ಯದ ಮೂಲಕ ಪಸರಿಸಿದಳು. ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು.

        ಅಂದು ಕಾವ್ಯಳ `ರಂಗಪ್ರವೇಶ’ದ  ಸಂದರ್ಭಕ್ಕೆ ಇನ್ನೊದು ಮಹತ್ವ ಒದಗಿತ್ತು. ಆಕೆಯ ನೃತ್ಯ ಗುರು ಅರ್ಚನಾ ಅವರ ಹಿರಿಯ ನೃತ್ಯಗುರು ಭರತನಾಟ್ಯ ಮತ್ತು ಕೂಚಿಪುಡಿ ಉಭಯಶೈಲಿ ವಿಶಾರದೆ ಸುನಂದಾದೇವಿ, ಕೂಚಿಪುಡಿ ಗುರು ಧರಣಿ ಕಶ್ಯಪ್ ಮತ್ತು ಭರತನಾಟ್ಯ ಗುರು ಸುಪರ್ಣಾ ವೆಂಕಟೇಶ್ ಹಾಜರಿದ್ದು ಕಾವ್ಯಳಿಗೆ ಆಶೀರ್ವದಿಸಿದರು. ವಾದ್ಯ ಸಹಕಾರದಲ್ಲಿ ಗಾಯನ- ಕಾರ್ತಿಕ್ ಹೆಬ್ಬಾರ್, ಮೃದಂಗ-ಹರ್ಷ ಸಾಮಗ, ಕೊಳಲು- ವಿವೇಕ್, ವೀಣೆ-ಗೋಪಾಲ್, ರಿದಂ ಪ್ಯಾಡ್- ಕಾರ್ತಿಕ್ ದಾತಾರ್ .

Related posts

ನತಾನಿಯಾ ಮನೋಜ್ಞ ಭಂಗಿಗಳ ಅದ್ಭುತ ನರ್ತನ

YK Sandhya Sharma

ಅಚ್ಚುಕಟ್ಟಾಗಿ ಮೂಡಿಬಂದ ಸಿರಿಯ ನೃತ್ಯದೈಸಿರಿ

YK Sandhya Sharma

ನಿರಂತರೋತ್ಸವದಲ್ಲಿ ‘ಪ್ರತಿಭಾ’ ಪ್ರದರ್ಶನ

YK Sandhya Sharma

Leave a Comment

This site uses Akismet to reduce spam. Learn how your comment data is processed.