ಕಲೆಯ ಬಗೆಗಿನ ಈಕೆಯ ಅಂತರಾತ್ಮದ ಅಭೀಪ್ಸೆ ಕಂಡಾಗ ಹೀಗೂ ಉಂಟೇ ಎಂಬ ಉದ್ಗಾರ ಹೊರಡುವುದು ಸಹಜ. ನೃತ್ಯವೇ ಈಕೆಯ ಜೀವದ ಉಸಿರು. ಸದಾ ನೃತ್ಯ ಧ್ಯಾನ. ಅದಕ್ಕೆಂದೇ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ದಂತವೈದ್ಯಕೀಯ ವೃತ್ತಿಯನ್ನು ಬದಿಗೆ ಸರಿಸಿ, ನೃತ್ಯ ಕಾಯಕವನ್ನು ಗಂಭೀರವಾಗಿ ಸ್ವೀಕರಿಸುವ ದೃಢ ನಿರ್ಧಾರ ಕೈಗೊಂಡದ್ದು. ಇವರೇ ಡಾ. ಲಕ್ಷ್ಮಿ ರೇಖಾ ಅರುಣ್.
ಬಾಲ್ಯದಿಂದಲೂ ಓದಿನಲ್ಲಿ ಜಾಣೆ ಎನಿಸಿಕೊಂಡ ಲಕ್ಷ್ಮೀ, ಬೆಂಗಳೂರಿನ ರಾಮಯ್ಯ ಡೆಂಟಲ್ ಕಾಲೇಜಿನಿಂದ ಬಿ.ಡಿ.ಎಸ್. ದಂತ ವೈದ್ಯಕೀಯ ಪದವಿಯಲ್ಲಿ ಸ್ವರ್ಣಪದಕವನ್ನು ಪಡೆದುಕೊಂದವರು. ವೃತ್ತಿಯಲ್ಲಿ ನಿಪುಣ ದಂತವೈದ್ಯರಾಗಿ, ಬೆಳಗಿನಿಂದ ಸಂಜೆಯವರೆಗೂ ದಂತೋಪಚಾರದ ನಿಸ್ಪೃಹ ಕಾರ್ಯದಲ್ಲಿ ತೊಡಗಿಕೊಂಡೂ, ಮನದಾಳದ ನೃತ್ಯದ ಸೆಳೆತದಿಂದ ತಪ್ಪಿಸಿಕೊಳ್ಳಲು ಆಕೆಗೆ ಸಾಧ್ಯವಾಗಲಿಲ್ಲ. ಮನಸ್ಸಿನಲ್ಲಿ ಅದೇ ಗುಂಗು. ನಾಟ್ಯಾದೇವತೆ ಅವರನ್ನು ಆವರಿಸಿದ್ದಳು. ಹೆಚ್ಚಿನ ಅಭ್ಯಾಸಕ್ಕಾಗಿ ವೃತ್ತಿಗೆ ತಾತ್ಕಾಲಿಕ ನಿಲುಗಡೆ.
ಮೂಲತಃ ಹಾಸನ ಜಿಲ್ಲೆಯವರಾದ ಲಕ್ಷ್ಮೀ, ಐದುವರ್ಷದ ಬಾಲಕಿಯಾಗಿದ್ದಾಗಲೇ ತುಮಕೂರಿನಲ್ಲಿ ರಾಮನ್ ಅವರ ಬಳಿ ಭರತನಾಟ್ಯ ಕಲಿಯಲು ಸೇರಿದರು. ಬೆಳೆದದ್ದೆಲ್ಲ ಚಿಕ್ಕಮ್ಮ-ಚಿಕ್ಕಪ್ಪನ ಬಳಿಯೇ ಆದ್ದರಿಂದ ಅವರಿಗೆ ವರ್ಗವಾದ ಊರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು. ಮೈಸೂರಿನಲ್ಲಿ ನೆಲೆಸಿದಾಗ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ವಿಜೇತೆ ಡಾ. ವಸುಂಧರಾ ದೊರೆಸ್ವಾಮಿ ಅವರ ಬಳಿ ನೃತ್ಯ ಕಲಿಕೆ ಮುಂದುವರಿಸಿದರು. ಪಂದನಲ್ಲೂರು ಶೈಲಿಯನ್ನು ಅಭಿವೃದ್ಧಿಗೊಳಿಸಿದ ‘ವಸುಂಧರಾ ಬಾನಿ’ ಯಲ್ಲಿ ವಿಶೇಷ ತರಬೇತಿ, ಜ್ಞಾನಾರ್ಜನೆ. ಗುರುವಿನ ಬಗ್ಗೆ ಮಹಾ ನಿಷ್ಠೆ , ನಿರ್ವಂಚನೆಯಿಂದ ವಿದ್ಯಾಧಾರೆಯೆರೆದ ಗುರು ಆಮ್ಮನ ಬಗ್ಗೆ ಅಪಾರ ವಾತ್ಸಲ್ಯ, ಕಲಿತಷ್ಟೂ ಮುಗಿಯದ ವಿದ್ಯಾವಾರಿಧಿಯ ಒಡನಾಟ, ಮೂವತ್ತು ವರುಷಗಳ ಬಿಡದ ಸಾಹಚರ್ಯ ಈ ಶಿಷ್ಯೆ ಲಕ್ಷ್ಮಿಯ ವೈಶಿಷ್ಟ್ಯವೂ ಹೌದು. ಕೇಂದ್ರೀಕೃತ ಮನಸ್ಸಿನಿಂದ ವಸುಂಧರಾ ಅವರ ಬಳಿ ಶಿಷ್ಯತ್ವ. ಲಕ್ಷ್ಮಿಯವರ ಬಾಳಿನ ಏಕೈಕ ಗುರುವೆಂದರೆ ವಸುಂಧರಾ ದೊರೆಸ್ವಾಮಿಯವರೇ. ಇಂದಿಗೂ ಗುರುಗಳ ಮಾರ್ಗದರ್ಶನವೇ ಇವರ ಬಾಳಹಾದಿಯ ಕೈದೀವಿಗೆ.
ವಸುಂಧರಾ ಅವರ ಸಮರ್ಥ ಗರಡಿಯಲ್ಲಿ ತಯಾರಾದ ಲಕ್ಷ್ಮೀ, ಕರ್ನಾಟಕ ಸೆಕೆಂಡರಿ ಶಿಷಣ ಮಂಡಳಿ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಉತ್ತಮಾಂಕಗಳನ್ನು ಪಡೆದು ತೇರ್ಗಡೆಯಾದುದಲ್ಲದೆ , ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ಹಾಗೂ ಮೈಸೂರಿಗೆ ಪ್ರಥಮ ಸ್ಥಾನ ಪಡೆದು ಜಯಶೀಲರಾದರು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಎಂಟನೆಯ ವಯಸ್ಸಿನಿಂದಲೇ ವಿದುಷಿ. ಟಿ.ವಿ.ಮಾಲಿನಿಯವರಿಂದ ಕಲಿಯುತ್ತ, ಅನಂತರ ಮೈಸೂರಿನ ಸರಸ್ವತಿ ಹಾಗೂ ಪ್ರಸ್ತುತ ವಿದ್ವಾನ್.ಚಿಂತನಪಲ್ಲಿ ರಮೇಶ್ ಅವರಿಂದ ಕಲಿಯುತ್ತಲೇ ಇದ್ದಾರೆ. ಪ್ರತಿಯೊಬ್ಬ ನೃತ್ಯ ವಿದ್ಯಾರ್ಥಿಯೂ ಸಂಗೀತ ಕಲಿತಾಗಲೇ ತಾಳ ಹಾಗೂ ಲಯಜ್ಞಾನ ಸಾಧಿಸಲು ಸಾಧ್ಯ ಎನ್ನುವ ಲಕ್ಷ್ಮೀ, ಅಂಗಶುದ್ಧಿಯೊಂದಿಗೆ ಬಹುನೆಲೆ ಅಭಿನಯ ನೈಪುಣ್ಯ ಕರಗತ ಮಾಡಿಕೊಂಡಾಗಲೇ ಪರಿಪೂರ್ಣತೆ ಸಾಧ್ಯವಾಗುವುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಬಗೆಯಲ್ಲಿ ಸಂಪೂರ್ಣ ಸಿದ್ಧತೆ ಪಡೆಯದ ಹೊರತು ರಂಗಪ್ರವೇಶ ಮಾಡುವುದು ತರವಲ್ಲ ಎನ್ನುವ ಲಕ್ಷ್ಮೀ ತಮ್ಮ ವಿದ್ಯಾರ್ಥಿಗಳಲ್ಲಿ ಈ ಹದ ಪಾಕಗೊಂಡಾಗ ಮಾತ್ರ ವಿದ್ಯುಕ್ತ ರಂಗಪ್ರವೇಶ ಮಾಡಿಸುವುದು, ಇದಕ್ಕೆ ಅವಸರ ತರವಲ್ಲ ಎಂಬ ಕಿವಿ ಮಾತು ಹೇಳುತ್ತಾರೆ.
‘ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ‘ ಎಂಬ ನೃತ್ಯಶಾಲೆ ಸ್ಥಾಪಿಸಿ, ಅದರ ಪ್ರಿನ್ಸಿಪಾಲರಾಗಿ, ಆಸಕ್ತ ಮಿತಸಂಖ್ಯೆಯ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಲಕ್ಷ್ಮಿ ಭರತನಾಟ್ಯದ ವಿವಿಧ ಮಜಲುಗಳನ್ನು ನಿಧಾನವಾಗಿ ಅಷ್ಟೇ ಅಭ್ಯಾಸಪೂರ್ವಕವಾಗಿ ಮನನ ಮಾಡಿಸುವ ಪರಿ ಅನುಕರಣೀಯ. ದೂರದರ್ಶನದಲ್ಲಿ ಮಾನ್ಯತೆ ಪಡೆದ ಕಲಾವಿದೆಯಾಗಿದ್ದು, ಸದ್ಯ ಕಲೈ ಕಾವೇರಿ ಕಾಲೇಜಿನಲ್ಲಿ ಎಂ.ಎಫ್.ಎ. ಭರತನಾಟ್ಯದ ಪದವಿ ವಿದ್ಯಾಭ್ಯಾಸದಲ್ಲಿ ತೊಡಗಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಗುರು ವಸುಂಧರಾ ಅವರೊಡನೆ ದೇಶಾದ್ಯಂತ ಅನೇಕ ನೃತ್ಯರೂಪಕಗಳಲ್ಲಿ ಭಾಗವಹಿಸಿದ ವಿಪುಲ ಅನುಭವ ಇವರದಾಗಿದೆ. ಅವರ ನೃತ್ಯ ಸಂಯೋಜನೆಯ ಮುಖ್ಯ ನೃತ್ಯರೂಪಕಗಳು- ಕೃಷ್ಣ ತುಲಾಭಾರ, ಮಮತೆಯ ಸುಳಿ ಮಂಥರೆ, ವಿದ್ಯುನ್ಮದನಿಕಾ , ಶ್ರೀಕೃಷ್ಣ ನವವಿಧ ಭಕ್ತಿ ಮುಂತಾದವು.
ಶುದ್ಧ ಶಾಸ್ತ್ರೀಯ ಭರತನಾಟ್ಯವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವ, ಪರಿಣತ ಅಭಿನಯವನ್ನು ಸಾಕಾರಗೊಳಿಸಿಕೊಂಡಿದ್ದು, ಕಳೆದ ಮೂವತ್ತು ವರುಷಗಳ ಅನುಭವದಿಂದ ಕರೂರ್ ನಾಟ್ಯಾಂಜಲಿ-ಅಂತರರಾಷ್ಟ್ರೀಯ ಮಹಾಶಿವರಾತ್ರಿ ಉತ್ಸವ, ಮುಂಬೈ ನಾಟ್ಯಾಂಜಲಿ, ಆರುದ್ರ ನೃತ್ಯೋತ್ಸವ,ಬ್ರಹ್ಮೋತ್ಸವಂ, ನವರಾತ್ರಿ ಉತ್ಸವ ಮುಂತಾದ ನಾಡಿನ ಅನೇಕ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿರುವ ಅಗ್ಗಳಿಕೆ ಅವರದು. ದೇಶಾದ್ಯಂತ ಎಲ್ಲ ಪ್ರಮುಖ ದೇವಾಲಯಗಳಲ್ಲಿ ದೈವೀಕ ನೃತ್ಯ ಸೇವೆ ಮಾಡಿರುವುದು ಅವರ ವಿಶೇಷತೆ. ಸೇವೆಯ ಭಾಗವಾಗಿ ಲಕ್ಷ್ಮೀ, ವಿವಿಧ ಶಾಲೆಗಳಲ್ಲಿ ನಡೆಯುವ ಉಚಿತ ದಂತಪರೀಕ್ಷೆ, ಚಿಕಿತ್ಸೆಗಳಲ್ಲಿ ಭಾಗವಹಿಸುವ ವಿಶಿಷ್ಟ ಮನೋಧರ್ಮದವರಾಗಿದ್ದಾರೆ. ಒರಿಸ್ಸಾದ ಕಟಕ್ ನಲ್ಲಿ ಉತ್ಕಲ್ ಯುವ ಸಾಂಸ್ಕ್ರುತಿಕ ಸಂಘ ಇವರ ಕಲಾಪ್ರೌಢಿಮೆಗೆ `ನೃತ್ಯ ಶಿರೋಮಣಿ’ ಎಂಬ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಕಲಾ ಪ್ರೋತ್ಸಾಹಕ ಎಂಜಿನಿಯರ್ ಪತಿ ಅರುಣ್ ಮತ್ತು ಪುತ್ರರಾದ ಅನಿರುದ್ಧ ಹಾಗೂ ಅಭಿರಾಂ ಕೂಡಿದ ಸುಖಸಂಸಾರದಲ್ಲಿ ಲಕ್ಷ್ಮಿಯವರ ನೃತ್ಯಕಾಯಕ ನೆಮ್ಮದಿಯಾಗಿ ಸಾಗುತ್ತಿದೆ.
4 comments
ತುಂಬಾ ಚೆನ್ನಾಗಿದೆ.
ಅಪಾರ ಧನ್ಯವಾದಗಳು ಸರ್.
Beautiful.
Thank you very much sir.