ಹನ್ನೆರಡನೆಯ ಶತಮಾನದಲ್ಲಿದ್ದ ಸಂತಕವಿ ಜಯದೇವ ಸಂಸ್ಕೃತದಲ್ಲಿ ಬರೆದ ಅಪೂರ್ವ ಪ್ರೇಮಕಾವ್ಯ `ಗೀತಗೋವಿಂದ’ ಕಾಲಾತೀತವಾಗಿ ಮನದುಂಬುವ ವಿಶಿಷ್ಟ ಕೃತಿ. ಅಮರವಾದ ದೈವೀಕ ಪ್ರೀತಿಗೆ ಶಾಶ್ವತ ರೂಪಕವಾಗಿರುವ ರಾಧಾ-ಕೃಷ್ಣರ ಪ್ರೇಮಲೋಕವನ್ನು ವಿವಿಧ ಉಪಮೆ, ರಸಾಲಂಕಾರಗಳಿಂದ ಅನಾವರಣಗೊಳಿಸುವ `ಗೀತಗೋವಿಂದ’ ನೃತ್ಯಪ್ರಪಂಚಕ್ಕೊಂದು ದೊಡ್ಡ ಕೊಡುಗೆ.
ಹನ್ನೆರಡು ಸರ್ಗಗಳನ್ನುಳ್ಳ `ಗೀತಗೋವಿಂದ ‘ ಅತೀ ಸುಂದರ ಆಲಂಕಾರಿಕ ಸಾಹಿತ್ಯವನ್ನು ಹೊಂದಿದ್ದು, ಅನುಪ್ರಾಸಗಳಿಂದ ಲಯಪೂರ್ಣವಾಗಿದ್ದು, ಸಂಗೀತ ಮತ್ತು ನೃತ್ಯ ಪ್ರಸ್ತುತಿಗೆ ಹೇಳಿಮಾಡಿಸಿದಂತಿದೆ. ಇಪ್ಪತ್ನಾಲ್ಕು ವಿಭಾಗಗಳಲ್ಲಿರುವ ಎಂಟುಸಾಲುಗಳ ಗೀತೆಯು `ಅಷ್ಟಪದಿ’ ಎಂದೇ ಪ್ರಸಿದ್ಧವಾಗಿದೆ. ರಾಧಾ-ಕೃಷ್ಣರ ಪ್ರೇಮ ಸಲ್ಲಾಪ, ವಿರಹ, ಅಗಲಿಕೆ. ಪುನರ್ಮಿಲನದ ವಿವಿಧ ಘಟ್ಟಗಳನ್ನು ರಸವತ್ತಾಗಿ ಬಣ್ಣಿಸುವ ಗೀತೆಗಳ ಸೌಂದರ್ಯವನ್ನು ಆಸ್ವಾದಿಸಿಯೇ ತಿಳಿಯಬೇಕು. ಭಾವತುಂಬಿ ಹಾಡಲು, ಮನದುಂಬಿ ನರ್ತಿಸಲು ಅನುರೂಪವಾಗಿರುವುದರಿಂದ `ಅಷ್ಟಪದಿಗಳು’ ನೃತ್ಯದ ರಸದೌತಣ !! ಎಷ್ಟು ಬಾರಿ ಪ್ರಸ್ತುತವಾದರೂ ಬೇಸರ, ಚರ್ವಿತ ಚರ್ವಣವೆನಿಸದೆ `ನವ ನವೋನ್ಮೇಷಶಾಲಿನಿ’ ಯಾಗಿ ಮನೋಲ್ಲಾಸ ನೀಡುತ್ತದೆ.
ಇತ್ತೀಚೆಗೆ ನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಹಿರಿಯ ನೃತ್ಯಗುರು ರಾಧಾ ಶ್ರೀಧರ್ ಅವರ `ವೆಂಕಟೇಶ ನಾಟ್ಯಮಂದಿರ’ದ ಶಿಷ್ಯರು ಪ್ರಸ್ತುತಪಡಿಸಿದ `ಗೀತ-ಗೋವಿಂದ’ ನೃತ್ಯರೂಪಕ ಅತ್ಯಂತ ವರ್ಣರಂಜಿತವಾಗಿ ಮೂಡಿಬಂದು ನೆರೆದ ಕಲಾರಸಿಕರಿಗೆ ರಸಾನಂದ ನೀಡುವಲ್ಲಿ ಯಶಸ್ವಿಯಾಯಿತು
ಶ್ರೀ ಕೃಷ್ಣ ಮತ್ತು ರಾಧೆಯರು ನಮ್ಮ ಭಾರತೀಯ ಕಾವ್ಯಗಳಲ್ಲಿ ಅಮರಪ್ರೇಮದ ಸಂಕೇತ. ದೈವೀಕ ಪ್ರೇಮದ, ಅನನ್ಯ ಬೆಸುಗೆಗೆ ಒಂದು ಸುಂದರ ರೂಪಕ. ಕಾಲಾಂತರದಿಂದ ಇವರ ಪ್ರೀತಿ-ಪ್ರಣಯಗಳ ಸುತ್ತ ಹೆಣೆದಿರುವ ಕಥೆ-ಕಾವ್ಯಗಳೆಷ್ಟೋ, ನೃತ್ಯ, ನಾಟಕಗಳೆಷ್ಟೋ. ಎಂದೂ ಮುಗಿಯದ, ಬತ್ತದ ಅನಂತ ಪ್ರೇಮಸಾಗರವದು. ನೋಡಿದಷ್ಟೂ ಹೊಸಹೊಸದೆನಿಸುವ ದೃಶ್ಯಕಾವ್ಯ `ಗೀತ-ಗೋವಿಂದ’ ಕೃತಿ ಎಂದೂ ಖುಷಿ ನೀಡುವಂಥದು. ಅಂಥ ನವ ನವೋನ್ಮೇಷಶಾಲಿನಿಯಾದ `ಗೀತ-ಗೋವಿಂದ’ ಆಧಾರಿತ ನೃತ್ಯನಾಟಕ, ಹಿರಿಯ ಗುರು, ಶ್ರೀಮತಿ ರಾಧಾ ಶ್ರೀಧರ್ ಅವರ ಸಮರ್ಥ ಕಲಾನಿರ್ದೇಶನದಲ್ಲಿ ರಂಜನೀಯವಾಗಿ ಮೂಡಿಬಂತು.
ಲತಾ ಮಂಟಪದ ಸುಂದರ ಉದ್ಯಾನವನದ ರಂಗಸಜ್ಜಿಕೆ ಮೊದಲನೋಟಕ್ಕೇ ಸೆಳೆಯುತ್ತದೆ. ಈ ಆಹ್ಲಾದಕರ ಪರಿಸರದಲ್ಲಿ ಸುಂದರಿಯರು ಆನಂದದಿಂದ ನರ್ತಿಸುತ್ತಿದ್ದಾರೆ. ಅವರ ನರ್ತನದ ಸೌಂದರ್ಯದಲ್ಲಿ ಮೀಯುತ್ತ ಶ್ರೀಕೃಷ್ಣ ತನ್ಮಯನಾಗಿದ್ದಾನೆ. ಮನಮೋಹಕವಾಗಿ ನರ್ತಿಸಿದ ಗೋಪಿಕೆಯರ ಸಾಂಗತ್ಯದಲ್ಲಿ ಅವನು ಕುಣಿಯುತ್ತ ಇಹಲೋಕವನ್ನೇ ಮರೆತಿದ್ದಾನೆ. ಈ ದೃಶ್ಯವನ್ನು ಕಂಡ ರಾಧೆ ಹೌಹಾರಿ ತಲ್ಲಣದಿಂದ ಅಲ್ಲಿಂದ ಸರಿಯುತ್ತಾಳೆ. ಕೃಷ್ಣನ ಬಗ್ಗೆ ಕೋಪ ಸಿಡಿಯುತ್ತದೆ. ಅವನೊಡನಾಟದ ರಸಗಳಿಗೆಗಳನ್ನು ನೆನೆಯುತ್ತ ನೋವಿನಿಂದ ದುಃಖಿಸುತ್ತಾಳೆ. ಆಪ್ತ ಸಖಿ ಎಷ್ಟೇ ಸಮಾಧಾನಿಸಿದರೂ ಅವಳ ಬೇಗುದಿ ಕಡಮೆಯಾಗದು. ಅವನ ಬಗ್ಗೆ ಕ್ರೋಧಗೊಳ್ಳುತ್ತಾಳೆ. ಕೃಷ್ಣ ಬಂದು ಕ್ಷಮೆ ಯಾಚಿಸಿದರೂ ಅವಳ ಕೋಪ ತಗ್ಗದು. ಇತ್ತ ಕೃಷ್ಣನಿಗೂ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪವಾಗಿದೆ. ಅವಳ ಅಗಲಿಕೆಯ ನೋವು ತಟ್ಟಿದೆ. ವಿರಹೋತ್ಖಂಡಿತ ರಾಧೆ ಕಾಮನಬಾಣಗಳಿಂದ ಘಾತಗೊಂಡು ಕೃಷ್ಣನ ಸಾನಿಧ್ಯಕ್ಕೆ ಹಾತೊರೆದಿದ್ದಾಳೆ. ಇಂಥ ಸಮಯದಲ್ಲಿ ಸಖಿ ಅವರಿಬ್ಬರನ್ನು ಒಂದುಗೂಡಿಸುವ, ಆ ಪ್ರೇಮಿಗಳ ನಲಿವಿನ ಕ್ಷಣಗಳನ್ನು ಶಾಶ್ವತವಾಗಿಸುವ ಜಾಣ್ಮೆ ತೋರಿ ಕೃತಾರ್ಥಳಾಗುತ್ತಾಳೆ.
ರಾಧಾ-ಕೃಷ್ಣರ ಈ ಸುಂದರ ಕಥಾನಕದ ಪ್ರೇಮದೆಳೆಗಳನ್ನು ಗುರು ರಾಧಾ ಅವರು ದೃಶ್ಯವತ್ತಾಗಿ ರಸಿಕರ ಕಣ್ಮುಂದೆ ಮನೋಹರವಾಗಿ ತರುವಲ್ಲಿ ಸಫಲರಾಗಿದ್ದಾರೆ. `ಲಲಿತ ಲವಂಗ ಲತಾ ಪರಿಶೀಲನ ಕೋಮಲ ಸಮೀರೆ’ ಎಂಬ ಮಧುರ ಸಾಲುಗಳೊಡನೆ ( ಶ್ರೀವತ್ಸ ಅವರ ಭಾವಪೂರ್ಣ ಗಾಯನ) ಪ್ರವೇಶಿಸುವ ಮುದ್ದುಮುಖದ ರಾಧೆ ತನ್ನ ಆನಂದವನ್ನು ಸುತ್ತಣ ಪರಿಸರದಲ್ಲಿ ಕಾಣುತ್ತ ಮೈಮರೆತು ನರ್ತಿಸುತ್ತಾಳೆ. ಕಲಾವಿದೆ ಐಶ್ವರ್ಯ ನಿತ್ಯಾನಂದ ರಾಧೆಯ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅಮರಪ್ರೇಮಿಯಾಗಿ ಮೈದುಂಬಿ ನರ್ತಿಸಿದ್ದು ಆಹ್ಲಾದಕರವಾಗಿತ್ತು. ಆಕೆಯ ನಯವಂತಿಕೆ, ಲಾಸ್ಯದ ನಡೆ, ಮನಮೋಹಕ ನೃತ್ತಾಭಿನಯ ಮನಸೂರೆಗೊಂಡಿತು. ಚೆನ್ನಿಗ ಕೃಷ್ಣನಾಗಿ ಎತ್ತರದ ನಿಲುವಿನ ಬಿಯಾಂಕ ರಾಧಾಕೃಷ್ಣ ತನ್ನ ಲವಲವಿಕೆಯ ಆಂಗಿಕಾಭಿನಯದಿಂದ, ತುಂಟ ಕಣ್ಣೋಟ, ಪ್ರೇಮದಾಟಗಳಿಂದ ನೋಡುಗರಲ್ಲಿ ಸಂಚಲನ ಉಂಟುಮಾಡಿದರು. ಹಿನ್ನಲೆಯಿಂದ ಮೂಡಿಬರುತ್ತಿದ್ದ ಸುಶ್ರಾವ್ಯ ವೇಣುಗಾನ( ಜಯರಾಂ ಕಿಕ್ಕೇರಿ), ಮೃದಂಗದ( ವಿ.ಅರ್.ಚಂದ್ರಶೇಖರ್) ಲಯ ಪ್ರೇಮದ ವಾತಾವರಣಕ್ಕೆ ಅನುರೂಪವಾಗಿತ್ತು.
`ಹರಿರಿಹ ಮೂರ್ಧವ…ಚಂದನ ಚರ್ಚಿತ…’ ಹಿನ್ನಲೆಯಲ್ಲಿ ಕೃಷ್ಣ ಇತರ ಗೋಪಿಯರ ನರ್ತನಸಂಭ್ರಮದಲ್ಲಿ ಕುಣಿಯುವ ಸುಂದರದೃಶ್ಯ, ಚೆಲುವೆಯರ ನೃತ್ತಗಳ ಲಾವಣ್ಯ, ಸ್ವರಗಳ ಲಯ ಮುದತಂದಿತ್ತು. ಅಲ್ಲಿಗೆ ಸಖಿಯೊಡನೆ ಬರುವ ರಾಧೆ, ಪರಸತಿಯರೊಡನೆ ತನ್ನಿನಿಯನನ್ನು ಕಂಡು ಈರ್ಷೆ-ನೋವುಗಳನ್ನು ಅಭಿವ್ಯಕ್ತಿಸುವ ಭಾವಾಭಿನಯ ಅತ್ಯಂತ ಪರಿಣಾಮಕಾರಿ ಹಾಗೂ ಮುಗ್ಧ ಪ್ರೇಮಿಯ ಹುಸಿಮುನಿಸಿನ, ಸಂಕಟದ ಭಾವನೆಗಳ ವರ್ತನೆ ಮನನೀಯ. ತನ್ನೊಡನೆ ರಾಸಲೀಲೆಯಾಡುತ್ತಿದ್ದ ಪ್ರೇಮಿ ಹೀಗೆ ಮೋಸ ಮಾಡಬಹುದೇ ಎಂದು ವಿಲಪಿಸುತ್ತಾಳೆ. ಅವನನ್ನು ಕರೆತರುವುದಾಗಿ ಹೇಳಿ ಭಾಷೆನೀಡಿ ನಿರ್ಗಮಿಸುವ ಸಖಿ (ಅಪರ್ಣಾ ಶಾಸ್ತ್ರೀ)ಯ ಅಭಿನಯವೂ ಅಷ್ಟೇ ಹೃದಯಸ್ಪರ್ಶಿಯಾಗಿತ್ತು. ಇತ್ತ ಪಶ್ಚಾತ್ತಾಪದಿಂದ ದಗ್ಧನಾದ ಕೃಷ್ಣ ಚಿಂತಾಕ್ರಾಂತನಾಗಿದ್ದಾನೆ. `ನಿಂದತಿ ಚಂದನ ಇಂದುಕಿರಣಂ’ ಎಂದು ಅವಳ ವಿರಹದ ಬೇಗುದಿಯನ್ನು ವರ್ಣಿಸಿದ ಸಖಿಯ ಮಾತುಗಳನ್ನು ಕೇಳಿ ಶೋಕತಪ್ತನಾದ ಕೃಷ್ಣ, ಅವಳನ್ನು ಒಲಿಸಿಕೊಳ್ಳುವ ದೃಶ್ಯ ಮನಕರಗಿಸುವಂತಿತ್ತು. ಕೃಷ್ಣನ ವಿಷಾದದ ಮುಖಾಭಿವ್ಯಕ್ತಿ, ಅಭಿನಯದಲ್ಲಿ ಪರಿಣತಿ ಎದ್ದುಕಾಣುತಿತ್ತು. ಅವನ ನಿರೀಕ್ಷೆಯಲ್ಲಿ ಯಮುನಾತೀರದಲ್ಲಿ ಕಾಯುತ್ತ ಕುಳಿತ ಅಭಿಸಾರಿಕೆ ರಾಧೆಯ ಸೂಕ್ಷ್ಮನಡವಳಿಕೆಯ ಮಿಶ್ರಭಾವಗಳ ಭಾವನಿಮಗ್ನತೆಯ ಅಭಿನಯ ಸೊಗಸಾಗಿ ಸಾಕಾರವಾಯಿತು. ರಾಧೆಯ ಅಭಿನಯದಲ್ಲಿ ಕಲಾವಿದೆ ತನ್ನ ಸಂಪೂರ್ಣ ನಟನಾಸಾಮರ್ಥ್ಯವನ್ನು, ನೃತ್ಯ ಪ್ರಾವೀಣ್ಯತೆಯನ್ನು ಮೆರೆದಿದ್ದಳು.
ತನ್ನ ತಪ್ಪಿನ ಅರಿವಾಗಿ ಬಂದ ಕೃಷ್ಣನನ್ನು `ಯಾಹಿ ಮಾಧವ, ಯಾಹಿ ಕೇಶವ…’ ಎಂದು ರಾಧೆ ಮೊದಲು ನಿರಾಕರಿಸಿದರೂ, `ಪ್ರಿಯೆ ಚಾರುಶೀಲೆ’ ಎಂಬ ಅವನ ಅನನ್ಯ ಪ್ರೀತಿಗೆ ಕರಗಿ ಅವನೊಳಗೆ ಒಂದಾಗುವ ದೃಶ್ಯ ಹೃದಯಸ್ಪರ್ಶಿ. ಲತಾಕುಂಜದಲ್ಲಿ ಪ್ರೇಮಿಗಳ ಸಂಭರ್ಮದ ನರ್ತನ ಕಣ್ಣಿಗೆ ಹಬ್ಬ. ಕೊಳಲದನಿಯ ಅವರ ಸಂಭಾಷಣೆ, ಸ್ವರಗಳಲ್ಲಿ ಹೊಮ್ಮಿಸುವ ನೃತ್ತಗಳ ಲಾಸ್ಯ, ಕಣ್ಣುಗಳಲ್ಲಿ ಒಸರುವ ಪ್ರೇಮಧಾರೆಗಳಿಂದ `ಗೀತ-ಗೋವಿಂದ’ದ ಈ ಅಮರಪ್ರೇಮಿಗಳು ಚಿರಸ್ಮರಣೀಯರಾಗಿ ರಸಿಕರ ಮನದೊಳಗೆ ಜೀವಂತ ಚಿತ್ರವಾಗುತ್ತಾರೆ.
ನಟುವಾಂಗದಲ್ಲಿ ಪುಲಿಕೇಶಿ, ವಯೊಲಿನ್ ಸಹಕಾರ ನಟರಾಜಮೂರ್ತಿ, ಪರಿಣಾಮಕಾರಿ ಬೆಳಕು- ಅಶ್ವಿನಿ ಬೇಲೂರ್ ಅವರ ಸಹಕಾರವೂ ಗಮನಾರ್ಹವಾಗಿತ್ತು. ಗುರು ರಾಧ ಶ್ರೀಧರ್ , ಇಂಥ ಉತ್ಕೃಷ್ಟಮಟ್ಟದ ನೃತ್ಯನಾಟಕವನ್ನು ತಮ್ಮ ಸೃಜನಾತ್ಮಕ ಪ್ರತಿಭೆಯ ಪ್ರತೀಕವಾಗಿ, ಸುಮನೋಹರ ನೃತ್ಯಸಂಯೋಜನೆ ನಿರ್ದೇಶನಗಳಿಂದ ನೃತ್ಯರಂಗಕ್ಕೊಂದು ಅನುಪಮ ಕೊಡುಗೆ ಸಲ್ಲಿಸಿದ್ದಾರೆಂದರೆ ಅತಿಶಯೋಕ್ತಿಯಲ್ಲ.