Image default
Dancer Profile

ಅನುಪಮ ಒಡಿಸ್ಸಿ ನೃತ್ಯಕಲಾವಿದೆ ಸರಿತಾ ಮಿಶ್ರ

ನೃತ್ಯಕ್ಕೆ ಹೇಳಿಮಾಡಿಸಿದ ತೆಳುಕಟಿ ಮತ್ತು ನೀಳ ಮೈಮಾಟ-ಸುಂದರ ಮೊಗದ ಒಡಿಸ್ಸಿ ನೃತ್ಯಕಲಾವಿದೆ ಸರಿತಾ ಮಿಶ್ರ ಅವರ ನರ್ತನ ವೈಖರಿ ನೋಡುವುದೇ ಒಂದು ಉಲ್ಲಾಸಕರ ಅನುಭವ. ಅತ್ಯಂತ ನವಿರಾದ ಚಲನೆಗಳೊಂದಿಗೆ ಕೋಮಲ ನಡೆಗಳೊಂದಿಗೆ ಅಮೋಘ ಅಭಿನಯ ತೋರುವ ಸರಿತಾ ಒಡಿಸ್ಸಿ ನೃತ್ಯಶೈಲಿಯ ಪರಿಣತೆ. ಮನಮೋಹಕ ಪ್ರಸ್ತುತಿ ನೀಡುವಷ್ಟೇ, ಒಡಿಸ್ಸಿ ನೃತ್ಯ ವ್ಯಾಕರಣಗಳ ಬಗ್ಗೆ ಆಳವಾದ ಜ್ಞಾನವುಳ್ಳ ಈಕೆ, ವಿದ್ಯಾರ್ಥಿಗಳ ದೇಹಸಾಮರ್ಥ್ಯ, ಕಲಿಕೆಯ ಪರಿಧಿ ಅರಿತು ನಾಟ್ಯ ಕಲಿಸುವಲ್ಲಿ ಕುಶಲಮತಿ. ಸ್ವತಃ 1500 ಕ್ಕೂ ಹೆಚ್ಚಿನ ನೃತ್ಯಪ್ರದರ್ಶನಗಳನ್ನು ದೇಶ-ವಿದೇಶಗಳಲ್ಲಿ ನೀಡಿದ ಹೆಗ್ಗಳಿಕೆ ಅವರದು.

ಸರಿತಾ, ಮೂಲತಃ ಭುವನೇಶ್ವರ, ಜಗನ್ನಾಥನ ನಾಡಿನವರು. ಒರಿಯಾ ಮಾತೃಭಾಷೆ. ತಂದೆ ಪೂರ್ಣಚಂದ್ರ ಮಿಶ್ರ ಲೇಖಕ, ನಟ-ನಾಟಕಕಾರ ಮತ್ತು ಗಾಯಕರು. ತಾಯಿ ಶೈಲಾಬಾಳ ಕೂಡ ಕಲಾಸಕ್ತೆ, ಅಷ್ಟೇಕೆ ಇಡೀ ಕುಟುಂಬವೇ ಕಲಾಪ್ರಿಯರು. ಹೀಗಾಗಿ ಸರಿತಾ ನಾಲ್ಕುವರ್ಷದ ಮಗುವಾಗಿದ್ದಾಗಲೇ ಗುರು ನಿರಂಜನ್ ರಾವುತ್ ಮತ್ತು ಅನಂತರ ಪದ್ಮಚರಣ್ ದೇಹೂರಿ ಅವರ ಬಳಿ ಒಡಿಸ್ಸಿ ನೃತ್ಯ ಕಲಿಯಲು ಆರಂಭಿಸಿದರು. ಬಾಲಪ್ರತಿಭೆಯಾದ ಇವರು ಹಾಡುತ್ತಿದ್ದರೂ ಕೂಡ. ಶಾಲೆಯ ಓದಿನಲ್ಲೂ ಮುಂದೆ. ಮೆಟ್ರಿಕ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದು, ಮುಂದೆ ಸೋಷಿಯಾಲಜಿ ವಿಷಯದಲ್ಲಿ ಬಿ.ಎ.ಆನರ್ಸ್, ಬಿ.ಇಡಿ.ಮುಗಿಸಿ ಶಾಲಾ ಶಿಕ್ಷಕರಾಗಿಯೂ ಕೆಲಸ ಮಾಡಿದರು. ಕಂಪ್ಯೂಟರ್ ನಲ್ಲೂ ಡಿಪ್ಲೊಮಾ ಪಡೆದುಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಸಮಾನಾಂತರವಾಗಿ ನೃತ್ಯಕಲಿಕೆಯನ್ನು ಎಡೆಬಿಡದೆ ಮುಂದುವರಿಸಿದರು. ಪ್ರಾರಂಭಿಕ ಹಂತದ ನಾಲ್ಕುಪರೀಕ್ಷೆಗಳ ಜೊತೆ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ್ ನಡೆಸುವ ವಿಶಾರದ ಪರೀಕ್ಷೆಯಲ್ಲೂ ಉತ್ತಮಾಂಕಗಳೊಡನೆ ತೇರ್ಗಡೆಯಾಗಿ ಆಗಲೇ ತಮ್ಮ ನೃತ್ಯ ಪ್ರಸ್ತುತಿಗಳಿಂದ ಒಡಿಸ್ಸಿ ನೃತ್ಯಜಗತ್ತಿನ ಗಮನ ಸೆಳೆದಿದ್ದರು.

ಕಳೆದ ಮೂರು ದಶಕಗಳಿಂದ ಒಡಿಸ್ಸಿ ನೃತ್ಯಾಭಿವೃದ್ಧಿಯಲ್ಲಿ ತೊಡಗಿರುವ ಸರಿತಾ ಬಹುಮುಖ ಪ್ರತಿಭೆ. ಬಾಲ್ಯದಿಂದಲೂ ನಾಟಕಾಭಿನಯದಲ್ಲಿ ಆಸಕ್ತಿ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಲವಲವಿಕೆಯ ನಿರೂಪಣೆ ಮಾಡಿರುವುದರೊಂದಿಗೆ, ಬಾಲನಟಿಯಾಗಿ ಅನೇಕ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಶಾಲೆಯಲ್ಲಿ ಹತ್ತನೆಯ ತರಗತಿಯವರೆಗೆ `ಜಿಮ್ನಾಸ್ಟಿಕ್ಸ್’ ಗಳಲ್ಲಿ ನಿಪುಣರಾಗಿದ್ದರಿಂದಲೇ ತಮ್ಮ ದೇಹ ದ್ರವೀಕೃತ ಚಲನೆಗಳಿಗೆ ಒಗ್ಗಿಕೊಂಡು ಒಡಿಸ್ಸಿಯ ತ್ರಿಭಂಗಿ ಅಭಿನಯಗಳಿಗೆ ಸಹಾಯಕವಾಗಿದೆ ಎಂಬುದವರ ಅನಿಸಿಕೆ.

ಒಡಿಸ್ಸಿ ನೃತ್ಯದ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿರುವ ಸರಿತಾ, ಪ್ರಾಮಾಣಿಕತೆ, ಬದ್ಧತೆಯೊಂದಿಗೆ ಪರಿಶ್ರಮ,ಶಿಸ್ತನ್ನು ತಮ್ಮ ಜೀವನಾದರ್ಶದ ತತ್ವಗಳಾಗಿ ರೂಢಿಸಿಕೊಂಡಿದ್ದಾರೆ. ಬೆಂಗಳೂರಿನ ಜೆಪಿ ನಗರ ಮತ್ತು ಕೋರಮಂಗಲದಲ್ಲಿ ಒಡಿಸ್ಸಿ ನಾಟ್ಯ ಕಲಿಸುವ ಅವರದೇ ಆದ “ಆದ್ಯಶ’ ನೃತ್ಯಶಾಲೆಯಿದೆ. ಗುರು ದೇವಪ್ರಸಾದ್ ಮತ್ತು ಕೇಳುಚರಣ್ ಮಹಾಪಾತ್ರ ನೃತ್ಯಶೈಲಿಯನ್ನು ಅನುಸರಿಸುವ ಸರಿತಾ, ದೂರದರ್ಶನದಲ್ಲಿ ಗ್ರೇಡೆಡ್ ಆರ್ಟಿಸ್ಟ್ ಮತ್ತು  ಐ.ಸಿ.ಸಿ.ಆರ್ ಹಾಗೂ ಸ್ಪಿಕ್ ಮಕೆಯ ಮಾನ್ಯತೆ ಪಡೆದ ಕಲಾವಿದೆ. ಕಲಿಯುವ ಹಂತದಲ್ಲಿ ಸತತ ಹತ್ತು ವರ್ಷಗಳು ಭಾರತಸರ್ಕಾರದ ಸ್ಕಾಲರ್ಷಿಪ್ ಗಳಿಸಿದ ಹೆಗ್ಗಳಿಕೆಯೂ ಅವರದು.

ಪ್ರತಿವರ್ಷ ವಿದೇಶದಲ್ಲಿ ನಿರಂತರ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸಗಳೊಂದಿಗೆ ತಮ್ಮ ಮನೋಹರ ನೃತ್ಯ ಪ್ರದರ್ಶನಗಳನ್ನು ನೀಡುತ್ತ ಸರಿತಾ ಸಾಧನೆಯ ಪಥದಲ್ಲಿ ತಮ್ಮ ವಿಶಿಷ್ಟ ಛಾಪನ್ನೊತ್ತಿದ್ದಾರೆ. ಸುಮಾರು ಹದಿನೈದು ರಾಷ್ಟ್ರಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ್ದು, ಅಲ್ಲಿನ ರಸಿಕರ ಮನರಂಜಿಸಿ, ನೃತ್ಯಾಕಾಂಕ್ಷಿಗಳಿಗೆ ವಿಸ್ತೃತ ಜ್ಞಾನದಾಸೋಹವನ್ನು ನೀಡಿದ್ದಾರೆ. ಲ್ಯಾಟಿನ್ ಅಮೇರಿಕಾ, ಸ್ಟಾಕ್ಹೋಮ್, ಕ್ರೋಯಟಿಯ, ಪೋರ್ಚುಗಲ್,ಅರ್ಜೆಂಟಿನಾ, ಪೆರು,ಬ್ರೆಜಿಲ್ ಮುಂತಾದೆಡೆ ಭಾರತೀಯ ರಾಯಭಾರಿ ಕಛೇರಿಯ ಆಯೋಜನೆಯಲ್ಲಿ ನೃತ್ಯಪ್ರದರ್ಶನ ನೀಡಿದ್ದಾರೆ. ಜೊತೆಗೆ ಭಾರತದಲ್ಲಿ ಅನೇಕ ಪ್ರತಿಷ್ಟಿತ  ನೃತ್ಯೋತ್ಸವಗಳಲ್ಲಿ ಪಾಲ್ಗೊಂಡಿರುವ ಹೆಮ್ಮೆ ಅವರದು.ಗೋವಾದಲ್ಲಿ ನಡೆದ ನೃತ್ಯೋತ್ಸವ,ಕೊಚ್ಹಿನ್-ಕಾಲಡಿಯ ಶಂಕರೋತ್ಸವ,ತಂಜಾವೂರಿನ ನಾಟ್ಯಾಂಜಲಿ, ಶಾಂತಿನಿಕೇತನ,ಕಲಾರ್ಣವ, ಕೊನಾರ್ಕ್, ಇಸ್ಕಾನ್ ಬ್ರಹ್ಮೋತ್ಸವ, ಪುಣೆ ಹಾಗೂ ಆಳ್ವ ನುಡಿಸಿರಿ ಮುಂತಾದ ಅನೇಕ ನೃತ್ಯೋತ್ಸವಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ. ಅವರ ಅಪೂರ್ವ ಪ್ರತಿಭೆಗೆ ಸಾಕಷ್ಟು ಕಡೆ ಮನ್ನಣೆ ದೊರಕಿದೆ. ಅಮೇರಿಕಾದ ಒಹಾಯಿಯೋ,ಚಿಕಾಗೋ,ನಶ್ವಿಲ್ಲೇ ಮುಂತಾದೆಡೆ ಅತ್ಯುತ್ತಮ ನೃತ್ಯಪ್ರದರ್ಶನಕ್ಕೆ ಮೆಚ್ಚುಗೆಯ ಪ್ರಶಸ್ತಿಗಳು ಹಾಗೂ ಭುವನೇಶ್ವರದ ಒರಿಸ್ಸಾದಲ್ಲಿ ಪ್ರತಿಭಾ ಸಮ್ಮಾನ್,ನೃತ್ಯ ಕಲಿಕಾ, ನೃತ್ಯಶ್ರೀ,ಏಕಲವ್ಯ ಮತ್ತು ಲಾಸ್ಯಕಲಾ ಬಿರುದು, ಪ್ರಶಸ್ತಿಗಳು ಸಂದಿವೆ. ಐ.ಸಿ.ಸಿ.ಆರ್. ನಿಂದ ಕಲಾಯೋಗಿ ಪ್ರಶಸ್ತಿ, ಬೆಂಗಳೂರಿನ ನೃತ್ಯಾಂತರಂಗದಿಂದ ನೃತ್ಯ ಭಾರತಿ,ಯರ್ನಾಕುಲಂ ಸತ್ಯಾಂಜಲಿ ಕೂಚಿಪುಡಿ ಅಕಾಡೆಮಿಯಿಂದ ನಾಟ್ಯಕಲಾಪ್ರಜ್ಞಾ , ವಿಶಾಖಪಟ್ಟಣದ ನಟರಾಜ ಡಾನ್ಸ್ ಅಕಾಡೆಮಿಯಿಂದ ನಾಟ್ಯವೇದ ಮುಂತಾದ ಅಸಂಖ್ಯ ಬಿರುದು-ಪ್ರಶಸ್ತಿಗಳು ಸರಿತಾ ಅವರನ್ನು ಹಿಂಬಾಲಿಸಿವೆ. ಒಡಿಸ್ಸಿ ನೃತ್ಯಪಾರಂಗತೆ, ಉತ್ತಮ ನಾಟ್ಯಗುರುವೆಂದು ಹೆಸರು ಗಳಿಸಿರುವ ಸರಿತಾ ಬಹು ಸರಳ,ವಿನೀತ ಸ್ವಭಾವದ ಕಲಾವಿದೆ. ಎಂಜಿನಿಯರ್ ಪತಿ ಉತ್ತಮಕುಮಾರ್ ರತ್ ಹಾಗೂ ಒಡಿಸ್ಸಿ ಉದಯೋನ್ಮುಖ ಕಲಾವಿದೆ ಮಗಳು ರಿಯಾ ಜೊತೆಗಿನ  ಸಂತೃಪ್ತ ಕುಟುಂಬ ಅವರದು.

Related posts

ಆಕರ್ಷಕ ನೃತ್ಯ ಸಂಯೋಜಕಿ- ಕಲಾವಿದೆ ರಶ್ಮಿ ವಿಜಯ್

YK Sandhya Sharma

ಉತ್ತಮ ನೃತ್ಯಕಲಾವಿದೆ ವಿದುಷಿ ಸ್ಮಿತಾ ಪ್ರಕಾಶ್ ಸಿರ್ಸಿ

YK Sandhya Sharma

ಖ್ಯಾತ ಅಭಿನೇತ್ರಿ – ನೃತ್ಯ ಕಲಾವಿದೆ ಹೇಮಾ ಪ್ರಶಾಂತ್

YK Sandhya Sharma

Leave a Comment

This site uses Akismet to reduce spam. Learn how your comment data is processed.